

ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಪೊಲೀಸರಾಗಬೇಕು ಎಂಬ ಆಸೆ ಇರುತ್ತದೆ. ಆದರೆ ವಯಸ್ಕರಾಗುತ್ತ ಬಂದ ಹಾಗೆ ಅದು ಕಷ್ಟದ ಕೆಲಸ, ರಾತ್ರಿ-ಹಗಲೆನ್ನದೆ ದುಡಿಯಬೇಕು. ಯಾವಾಗ ಡ್ಯೂಟಿ, ಯಾವಾಗ ರಜೆ ಒಂದೂ ಗೊತ್ತಾಗಲ್ಲ. ಭಾನುವಾರವೂ ಕೆಲಸ ಇರುತ್ತೆ. ಅದರ ಬದಲು ಬೇರೆ ಯಾವುದಾದರೂ ಆರಾಮ ಇರುವ ಕೆಲಸ ಸಾಕು ಎಂಬ ಭಾವನೆ ಹೊಂದುವವರೇ ಹೆಚ್ಚು. ಪೊಲೀಸ್ ತರಬೇತಿ ಸಂದರ್ಭ ಕಠಿಣ ತರಬೇತಿಯಿಂದ ಓಡಿ ಹೋಗುವವರಿದ್ದಾರೆ. ಆದರೆ ಮಂಗಳೂರಿನಲ್ಲಿ ನಡೆದ ಪೊಲೀಸ್ ಆಯ್ಕೆ ತರಬೇತಿಯಲ್ಲಿ ಎಲ್ಲರೂ ಪರಿಶ್ರಮ ಪಟ್ಟು ತರಬೇತಿ ಮುಗಿಸಿದ್ದಾರೆ ಎಂದು ಕೇಳ್ಪಟ್ಟೆ. ಇದು ಅವರ ಮೊದಲನೇ ಗೆಲುವು. ಋಣ ಎನ್ನುವುದಿದೆ. ನಾವು ಜನಿಸುವಾಗಲೇ ಋಣ ಹೊತ್ತುಕೊಂಡು ಹುಟ್ಟುತ್ತೇವೆ. ಜನ್ಮದಾತೆ-ತಾಯಿಯ ಋಣದಿಂದ ಹಿಡಿದು ಭೂಮಿತಾಯಿ, ಗುರುಗಳು, ಸಮಾಜ, ದೇವರ ಋಣ- ಹೀಗೆ ಋಣವನ್ನು ಹೊಂದುತ್ತಲೇ ಇರುತ್ತೇವೆ. ಬದುಕಿನಲ್ಲಿ ಯಾವ ಋಣ ಬೇಕಾದರೂ ತೀರಿಸಬಹುದಂತೆ. ಆದರೆ ಹೆತ್ತತಾಯಿ ಮತ್ತು ಹೊತ್ತ ಅಂದರೆ ಭೂಮಿತಾಯಿ ಋಣ ತೀರಿಸಲು ಸಾಧ್ಯವಿಲ್ಲ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದು ಸತ್ಯವೂ ಹೌದು. ತಾಯಿ ನಮ್ಮನ್ನು ಹೆತ್ತು, ಹೊತ್ತು ಸಾಕಿ ಬೆಳೆಸಿದ್ದಾಳೆ. ಅವಳ ಋಣವನ್ನು ಯಾವ ರೀತಿಯಿಂದಲೂ ತೀರಿಸುವುದು ಕಷ್ಟವೇ.
ಸಮಾಜದಲ್ಲೂ ಅಷ್ಟೇ. ನಾವು ಏನನ್ನು ಪಡೆಯುತ್ತೇವೆ ಎಂಬುದರ ಬದಲು ಏನನ್ನು ಸಮಾಜಕ್ಕೆ ನೀಡುತ್ತೇವೆ ಎಂಬುದು ಮುಖ್ಯ. ಸಮಾಜಕ್ಕೆ ಹಿಂದೆ ನೀಡುವುದೆಂದರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ದಾನ ಮಾಡುವುದಲ್ಲ, ಬದಲಾಗಿ ಸಮಾಜಕ್ಕೆ ನಮ್ಮಿಂದಾಗುವ ಅಲ್ಪ-ಸ್ವಲ್ಪ ಸೇವೆಗಳನ್ನು ಮಾಡುವುದು. ಉದಾಹರಣೆಗೆ ಸ್ವಚ್ಛತೆಯನ್ನು ಕಾಪಾಡುವುದು, ನೀತಿನಿಯಮಗಳನ್ನು ಪಾಲಿಸಿ ಸಹಕಾರ ನೀಡುವುದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರುವುದು- ಹೀಗೆ ಸಮಾಜಕ್ಕೆ ಪ್ರತಿಯೊಬ್ಬರೂ ತಮ್ಮ ಕೊಡುಗೆ ಸಲ್ಲಿಸಬಹುದು. ಇದರ ಬದಲು ಬಸ್ನಿಲ್ದಾಣದಲ್ಲಿ, ಬೀದಿಯಲ್ಲಿ ಕಂಡ-ಕಂಡಲ್ಲಿ ಉಗುಳುವುದು, ರಸ್ತೆನಿಯಮ ಪಾಲಿಸದೆ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಇವು ಸಭ್ಯ ನಾಗರಿಕರ ಲಕ್ಷಣವಲ್ಲ. ಇದರಿಂದಾಗಿ ಸಮಾಜ ಹಾಗೂ ವ್ಯವಸ್ಥೆ ಹಾಳಾಗುತ್ತದೆ. ಹಾಗೂ ಒಬ್ಬರಿಂದಾಗಿ ಸಾಕಷ್ಟು ಜನರಿಗೆ ತೊಂದರೆಗಳಾಗುತ್ತವೆ ಎಂಬುದು ನೆನಪಿನಲ್ಲಿಡಬೇಕಾದ ಅಂಶ. ಹೀಗೆ ನಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತುಕೊಂಡು ಒಳ್ಳೆಯ ಸಮಾಜವನ್ನು ರಚನೆ ಮಾಡಿದರೆ ನಮಗೂ, ನಮ್ಮ ಕುಟುಂಬಕ್ಕೂ, ಸಮಾಜಕ್ಕೂ ನೆಮ್ಮದಿ ಇರುತ್ತದೆ. ಬದುಕಿನಲ್ಲಿ ಕಷ್ಟ ಬಂದಾಗ ರಕ್ಷಣೆ ಮಾಡೆಂದು ಭಗವಂತನನ್ನು ಬೇಡಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ಸುವ್ಯವಸ್ಥಿತ ಸಮಾಜದಲ್ಲಿ ರಕ್ಷಣಾತ್ಮಕವಾಗಿ ಬದುಕಲು ಇಚ್ಛಿಸುತ್ತಾರೆ.
ಧರ್ಮವು ಮಿಳಿತಗೊಂಡಿರುವ ಸಮಾಜ ಹಳಿ ತಪ್ಪಲಾರದು. ಧಮೋ ರಕ್ಷತಿ ರಕ್ಷಿತಃ ಎಂಬಂತೆ ಭಗವಂತನ ಅನುಗ್ರಹ, ಗುರು-ಹಿರಿಯ ಮಾರ್ಗದರ್ಶನದ ಮೂಲಕ ಎಲ್ಲ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಬದುಕು ನಡೆಸುವುದು ನಮ್ಮ ಉದ್ದೇಶವಾಗಬೇಕು. ಧರ್ಮವನ್ನು ಯಾಕೆ ಆಚರಣೆ ಮಾಡುತ್ತಿದ್ದೇವೆ ಎಂದರೆ ನಾವು ಸಮಾನರು, ಎಲ್ಲ ಧರ್ಮಗಳೂ ಸಮಾನವೇ. ಎಲ್ಲ ಧರ್ಮಗಳಲ್ಲಿ ಹೇಳಿರುವುದೇನೆಂದರೆ ಸತ್ಯವನ್ನು ಪಾಲಿಸು, ಹಿಂಸೆಯನ್ನು ಮಾಡಬೇಡ, ಆಸ್ಥೇಯ ಅಂದರೆ ಕಳ್ಳತನ ಮಾಡಬೇಡ, ಇನ್ನೊಬ್ಬರ ಅವಕಾಶ ಕಸಿದುಕೊಳ್ಳಬೇಡ, ಬ್ರಹ್ಮಚರ್ಯವನ್ನು ಪಾಲಿಸು, ಅಂದರೆ ಏಕಪತ್ನಿವ್ರತಸ್ಥನಾಗಿ ಎಲ್ಲ ಮಹಿಳೆಯರನ್ನು ಅಕ್ಕ-ತಂಗಿ, ತಾಯಂದಿರನ್ನಾಗಿ ನೋಡು, ಗೌರವ ಕೊಡು ಮತ್ತು ಅಪರಿಗ್ರಹ ಪಾಲಿಸು. ಅಪರಿಗ್ರಹ ಎಂದರೆ ‘ನನಗೆ ಬೇಕಾದದ್ದನ್ನು, ಅವಶ್ಯಕತೆ ಇದ್ದದ್ದನ್ನು ಮಾತ್ರ ನಾನು ಇಟ್ಟುಕೊಳ್ಳುತ್ತೇನೆ. ಅಧಿಕವಾದುದ್ದನ್ನು ನಾನು ಬಯಸುವುದಿಲ್ಲ. ಇನ್ನೊಬ್ಬರಿಗೆ, ಸಮಾಜಕ್ಕೆ ವಂಚನೆ ಮಾಡಿ ಏನನ್ನೂ ಪಡೆಯುವುದಿಲ್ಲ’ ಎಂಬ ಭಾವನೆ ಒಡಮೂಡಬೇಕು.
ಹಿಂದೆ ರಾಜರ ಆಳ್ವಿಕೆ ಇತ್ತು. ಆತ ತನ್ನ ಮಂತ್ರಿ, ಸೇನಾಧಿಪತಿ ಮುಂತಾದ ಆಡಳಿತಗಾರರೊಂದಿಗೆ ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದ. ಇಂದು ಸರ್ಕಾರವು ಜನತೆಯ ಪ್ರತಿನಿಧಿಯಾಗಿ ಆಡಳಿತದ ಕಾರ್ಯನಿರ್ವಹಿಸುತ್ತ ಪ್ರಜಾಪಾಲನೆ ಮಾಡುತ್ತಿದೆ. ಜನರ ಬೇಕು-ಬೇಡಗಳನ್ನು ಈಡೇರಿಸುವುದಲ್ಲದೆ, ನೀತಿ, ನಿಯಮಗಳನ್ನು ರೂಪಿಸಿ ಉತ್ತಮ ಸಮಾಜ ನಿರ್ವಣದ ಗುರಿಯನ್ನು ಹೊಂದಿದೆ. ಅದಕ್ಕಾಗಿ ಸರ್ಕಾರ ಅನೇಕ ಕಾನೂನು ಮಾಡುತ್ತದೆ. ಉದಾಹರಣೆಗೆ, ನಮ್ಮ ದೇಶದ ರಸ್ತೆ ನಿಯಮದಲ್ಲಿ ಎಡಗಡೆಯೇ ಚಲಿಸಬೇಕು ಎಂಬ ನಿಯಮವಿದೆ. ಎಡಗಡೆಯೇ ಯಾಕೆ ಚಲಿಸಬೇಕು ಎಂದರೆ ಅಪಘಾತವಾಗಬಾರದು ಎಂಬ ಉದ್ದೇಶದಿಂದ ಎದುರು ಬದುರು ಹಾದು ಹೋಗುವ ವಾಹನಗಳಿಗೆ ಪ್ರತ್ಯೇಕವಾಗಿ ಎಡ ಮತ್ತು ಬಲ ಬದಿ ಚಲಿಸಲು ಅನುವು ಮಾಡಿಕೊಡಲಾಗಿದೆ. ಇಂತಹ ಕಾನೂನು ಜಾರಿಗೆ ತರುವ ಸರ್ಕಾರವು ಜನರು ಅದನ್ನು ಶಿಸ್ತಿನಿಂದ ಪಾಲಿಸುವಂತೆ ತಿಳಿಸುತ್ತದೆ. ಈ ಶಿಸ್ತೆಂಬುದು ಕಾನೂನು ಮಾಡಿದ ತಕ್ಷಣ ಬರುವಂತಹದ್ದಲ್ಲ. ಅದನ್ನು ನಾವು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು. ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದಲ್ಲೇ ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳ ಅರಿವು ಮೂಡಿಸುವುದು ಅಗತ್ಯ. ಶಿಸ್ತು ಪಾಲಿಸಬೇಕಾದವರೇ ಕೆಲವೊಮ್ಮೆ ಸ್ವಾರ್ಥ ಸಾಧನೆಗಾಗಿ ಕಾನೂನು ಚೌಕಟ್ಟನ್ನು ಮೀರಿ ಅಶಿಸ್ತಿನ ವರ್ತನೆ ಮಾಡುವುದುಂಟು.
ಗಂಡ-ಹೆಂಡತಿ ಮಾರುಕಟ್ಟೆಗೆ ಹೋಗುತ್ತಿದ್ದಾಗ ಯಾವುದೋ ಅಂಗಡಿಗೆ ಅಗತ್ಯವಾಗಿ ಹೋಗಬೇಕಾದ ಕಾರಣ ರಸ್ತೆಯಲ್ಲೇ ಕಾರು ನಿಲ್ಲಿಸಿ ಒಂದೆರಡು ನಿಮಿಷದಲ್ಲೇ ಬರುತ್ತೇನೆ ಎಂದು ತೆರಳುತ್ತಾರೆ. ಕೆಲವು ಕ್ಷಣ ಬಿಟ್ಟು ಅವರು ಹಿಂದಿರುಗಿ ಬಂದಾಗ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು. ಕಾರಣವಿಷ್ಟೇ, ವಾಹನ ಪಾರ್ಕ್ ಮಾಡಬೇಕಾದ ಸ್ಥಳದಲ್ಲಿ ಮಾಡದೆ ರಸ್ತೆಯ ಬಳಿಯೇ ನಿಲ್ಲಿಸಿದ್ದರಿಂದ ಇತರರಿಗೆ ತೊಂದರೆಯಾಗಿ ಅವ್ಯವಸ್ಥೆಯಾಗಿತ್ತು. ಅಲ್ಲೇ ಇದ್ದ ಅಂಗಡಿಯವ ‘ಇಲ್ಲಿ ಗಾಡಿ ನಿಲ್ಲಿಸಿದರೆ ರಸ್ತೆ ಬ್ಲಾಕ್ ಆಗುತ್ತದೆ’ ಎಂದರೂ ‘ಆಗ್ಲಿ ಬಿಡಿ ಬೇಗ ಬರುತ್ತೇನೆ’ ಎನ್ನುತ್ತಾನೆ. ಇದರ ಅರ್ಥ ಏನೆಂದರೆ ಸ್ವಾರ್ಥಕ್ಕಾಗಿ ಬೇರೆಯವರಿಗೆ ತೊಂದರೆಯಾದರೆ ಪರಿಗಣಿಸುವುದಿಲ್ಲ ಎಂಬ ಭಾವನೆ. ಹೀಗೆ ನಾನಾ ರಿತಿಯಲ್ಲಿ ಸ್ವಾರ್ಥಕ್ಕಾಗಿ ಕಾನೂನು ಉಲ್ಲಂಘಿಸಿ ತೊಂದರೆ, ಅವ್ಯವಸ್ಥೆಗಳಿಗೆ ಕಾರಣಕರ್ತರಾಗುತ್ತಾರೆ.
ಧರ್ಮ, ಗುರುಗಳು ಮತ್ತು ಸರ್ಕಾರ ಕಾಯ್ದೆಗಳನ್ನು ತಂದ ಮೇಲೆ ಪಾಲಿಸುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಇದು ಮುಖ್ಯವಾದ ಪ್ರಶ್ನೆ. ಪಾಲಿಸದಿದ್ದರೆ ಏನಾಗುತ್ತದೆ? ನನ್ನಿಷ್ಟದಂತೆ ನಡೆದರೆ ಏನಾಗುತ್ತದೆ? ಇದು ಬಹಳ ಮುಖ್ಯವಾದ ಪ್ರಶ್ನೆ. ಆವಾಗ ಈ ಖಾಕಿಯ, ಕಾನೂನಿನ ಪ್ರವೇಶ ಆಗುತ್ತದೆ. ನಾನು ಮತ್ತು ನನ್ನ ಪ್ರಜೆಗಳು ಧರ್ಮದ ಶಿಸ್ತು, ಗುರುಗಳ ಶಿಸ್ತು, ಸರ್ಕಾರದ ಶಿಸ್ತನ್ನು ಮುರಿದರೆ ದಂಡಾಧಿಕಾರಿಗಳು ನೋಡಿಕೊಳ್ಳಬೇಕು. ದಂಡಾಧಿಕಾರಿಗಳು ಯಾರು ಎಂದರೆ ಪೊಲೀಸರು. ಇವರು ಕಾನೂನನ್ನು ನೋಡಿಕೊಳ್ಳಬೇಕಾಗುತ್ತದೆ.
ಧರ್ಮಸ್ಥಳದ ದೇವಸ್ಥಾನದಲ್ಲಿ ಗರ್ಭಗುಡಿ ಇದೆ. ಮುಂಭಾಗದಲ್ಲಿ ಇಬ್ಬರು ದ್ವಾರಪಾಲಕರ ಮೂರ್ತಿ ಇದೆ. ನಮ್ಮ ಶಿಲ್ಪಿ ಧರ್ಮಸ್ಥಳದ ದೇವಸ್ಥಾನ ಮೂರ್ತಿ ಚೆನ್ನಾಗಿರಬೇಕು, ಸುಂದರವಾಗಿರಬೇಕು ಎಂದು ಇಬ್ಬರೂ ದ್ವಾರಪಾಲಕರನ್ನು ನಗುಮೊಗದಿಂದ ಮಾಡಿದ್ದರು. ಜೋಯಿಸರು ಬಂದು ಹೇಳಿದರು- ‘ನೋಡಿ ಈ ದ್ವಾರಪಾಲಕರು ಇರುವುದು ಯಾಕೆ ಎಂದರೆ ಬಂದವರಿಗೆ ಶಿಸ್ತಿನ ಪಾಠ ಹೇಳಿಕೊಡುವುದಕ್ಕಾಗಿ. ಇವನನ್ನು ಸುಂದರ ಮಾಡಬೇಡಿ, ಕಣ್ಣನ್ನು ಸ್ವಲ್ಪ ದೊಡ್ಡದು ಮಾಡಿ, ಒಂದು ದೊಣ್ಣೆಯನ್ನು ಕೈಗೆ ಕೊಡಿ. ದೇವಸ್ಥಾನಕ್ಕೆ ಬರುವವರಿಗೆ ಶಿಸ್ತು ಕಲಿಸುವಂತೆ ಮೂರ್ತಿಯನ್ನು ಮಾಡಿ. ಒಂದುವೇಳೆ ಕಳ್ಳತನ ಮಾಡುವ ಉದ್ದೇಶದಿಂದ ದೇವಸ್ಥಾನಕ್ಕೆ ಬಂದಿದ್ದರೂ ದ್ವಾರಪಾಲಕರನ್ನು ನೋಡಿ ಭಯಗೊಂಡು ಮನಸ್ಸು ಬದಲಾಗುವಂತಿರಬೇಕು’. ದ್ವಾರಪಾಲಕರು ದಂಡಾಧಿಕಾರಿಗಳಂತೆ ಇರಬೇಕು. ಶಕ್ತಿ ತುಂಬಬೇಕು, ಗತ್ತು ಗಾಂಭೀರ್ಯ ಇರಬೇಕು. ಶ್ರೀಕ್ಷೇತ್ರದಲ್ಲಿ ಖಾಕಿ ವಸ್ತ್ರದಲ್ಲಿ ಓಡಾಡುವವರನ್ನು ಕಂಡರೆ ಸಾಕು ಜನರಲ್ಲಿ ಶಿಸ್ತು ತನ್ನಷ್ಟಕ್ಕೆ ಬರುತ್ತದೆ. ಹಾಗಾಗಿ ದಂಡಾಧಿಕಾರಿಗಳು ಶಿಸ್ತಿನ ಸಿಪಾಯಿಗಳಾಗಿರಬೇಕು. ಮತ್ತು ಬಲಿಷ್ಠವಾಗಿರಬೇಕು.
ಒಮ್ಮೆ ಶ್ರೀನಗರದ ಒಂದು ಮ್ಯೂಸಿಯಂಗೆ ಹೋಗಿದ್ದೆವು. ಮ್ಯೂಸಿಯಂನ ಹೊರಗಡೆ ಪೊಲೀಸ್ ಒಬ್ಬ ಕೂತಿದ್ದ. ‘ಹೇಗಿದ್ದೀಯಪ್ಪ ನೀನು?’ ಎಂದು ಆತನಲ್ಲಿ ಕೇಳಿದೆ. ‘ಇಷ್ಟರವರೆಗೆ ಚೆನ್ನಾಗಿದ್ದೇನೆ, ತೊಂದರೆ ಇಲ್ಲ ಸರ್’ ಎಂದು ಮೂರು ಸಲ ಆಚೀಚೆ ತಿರುಗಿದ. ‘ಯಾವ ಹೊತ್ತಿಗೆ ನಮ್ಮ ಮೇಲೆ ಗುಂಡು ಬೀಳುತ್ತದೆ, ಯಾವಾಗ ನಾವು ಸಾಯುತ್ತೇವೆ ಎಂದು ಗೊತ್ತಿಲ್ಲ. ಕ್ಷಣ ಕ್ಷಣಕ್ಕೂ ಜಾಗ್ರತೆ ಇರಬೇಕು’ ಎಂದ. ಇಂತಹ ಅಪಾಯ ಇರುವಾಗಲೂ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಾರೆ, ಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ ಎಂಬುದಕ್ಕೆ ಇದು ನಿದರ್ಶನ. ಹೀಗೆ ಜಮ್ಮು ಮತ್ತು ಕಾಶ್ಮಿರದ ವಿಷಮ ಪರಿಸ್ಥಿತಿಯಲ್ಲಿ, ನಕ್ಸಲ್ ನಿಗ್ರಹ ದಳ ಸೇರಿ ಅನೇಕ ವಿಭಾಗಗಳಲ್ಲಿ ರಾತ್ರಿ ಹಗಲೆನ್ನದೆ, ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ವಿಗ್ನ ಪರಿಸ್ಥಿತಿಯಲ್ಲೂ ರಾಷ್ಟ್ರರಕ್ಷಣೆಯ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಕೆಲಸ ಪುಣ್ಯದ ಕೆಲಸ. ಸಮಾಜ ದಾರಿ ತಪ್ಪದಂತೆ ಎಲ್ಲರ ರಕ್ಷಣೆಗೆ ಶ್ರಮಿಸುತ್ತ, ತನ್ನವರಿಗಾಗಿ ಕಾರ್ಯನಿರ್ವಹಿಸುವ ಕೆಲಸ ಇದು. ಬಹುತೇಕರು ಇದು ಬಹಳ ಕಷ್ಟದ ಕೆಲಸ ಎಂದು ಪೊಲೀಸ್ ಇಲಾಖೆಯ ಕೆಲಸಕ್ಕೆ ಸೇರಲು ಹಿಂಜರಿಯುತ್ತಾರೆ. ಆದರೆ ಇದೊಂದು ಉತ್ತಮ ಸೇವಾಕಾರ್ಯವಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರನ್ನು ಬಹಳ ಕೆಟ್ಟ ದೃಷ್ಟಿ್ಟುಂದ ನೋಡುವುದುಂಟು. ಮುಖ್ಯವಾಗಿ ಕೆಲವು ಚಲನಚಿತ್ರಗಳಲ್ಲಿ ಪೊಲೀಸರನ್ನು ಹಾಸ್ಯಮಯವಾಗಿ ತೋರಿಸಲಾಗುತ್ತಿರುವುದು ದುಃಖದ ವಿಚಾರ. ಈ ರೀತಿ ಪೊಲೀಸರನ್ನು ಲಘುವಾಗಿ ಬಿಂಬಿಸಿದರೆ ಅದರಿಂದ ಸಮಾಜಕ್ಕೆ ನಷ್ಟ. ಇದನ್ನು ನಿಲ್ಲಿಸಿ, ಒಳ್ಳೆಯ ರೀತಿಯ ಸಂದೇಶ, ಅಭಿಪ್ರಾಯ ವ್ಯಕ್ತವಾಗುವಂತೆ ಆಗಬೇಕಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುವ ಪೊಲೀಸರನ್ನು ನಾವೆಲ್ಲ ಶ್ಲಾಘಿಸಬೇಕು. ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)