

ನಾವು ಫೆಬ್ರವರಿಯಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಹೋಗುವಾಗ, ಕರೊನಾ ದಾಳಿಗೆ ಚೀನಾ ಕಂಗಾಲಾಗಿತ್ತು. ಪ್ರಪಂಚದ ಅತ್ಯಂತ ದೊಡ್ಡ ಏರ್ಪೋರ್ಟ್ಗಳಲ್ಲಿ ಒಂದಾದ ಲಂಡನ್ನ ಹಿಥ್ರೂ ಏರ್ಪೋರ್ಟ್ನಲ್ಲಿ, ಮಾಸ್ಕ್ ಹಾಕಿಕೊಂಡು ಓಡಾಡುವ ಪ್ರಯಾಣಿಕರು ಅಲ್ಲಲ್ಲಿ ಕಾಣಿಸಿಕೊಂಡಿದ್ದರು.
ಯುಕೆಯ ಸರ್ಕಾರಿ ಆರೋಗ್ಯ ವ್ಯವಸ್ಥೆ, ವಿಶ್ವದ ಮೂರನೇ ಅತೀ ದೊಡ್ಡ ಉದ್ಯೋಗದಾತ National Health Service (NHS), ಸಮರೋಪಾದಿಯಲ್ಲಿ ತನ್ನ ವೈದ್ಯರು, ದಾದಿಗಳು, ಲ್ಯಾಬ್ ಟೆಕ್ನಿಷಿಯನ್ಗಳಿಗೆ ವಿಶೇಷ ತರಬೇತಿ ಕೊಟ್ಟು ಈ ಮಹಾಮಾರಿಯನ್ನು ಎದುರಿಸಲು ಸನ್ನದ್ಧವಾಗಿ ನಿಂತಿತ್ತು. ಆದರೆ ಈ ರಕ್ತ ಬೀಜಾಸುರನ ಆಟಾಟೋಪ ಯಾವ ಮಟ್ಟಕ್ಕೆ ಮುಟ್ಟಬಹುದು ಎಂಬ ಅಂದಾಜು ಯಾರಿಗೂ ಆ ವೇಳೆ ಇರಲಿಲ್ಲ.
ಕರೊನಾ ಸೋಂಕು ತಗುಲಿ ತೀವ್ರ ನಿಗಾ ವಿಭಾಗಕ್ಕೆ ಭರ್ತಿಯಾಗುತ್ತಿರುವವರ, ಸೋಂಕು ಶ್ವಾಸಕೋಶಕ್ಕೆ ತಲುಪಿ, ಉಸಿರಾಟದ ವೈಫಲ್ಯದಿಂದ ಅಸುನೀಗುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಹೋಯಿತು. ಕರೊನಾ ಸೋಂಕಿನ ರೋಗಲಕ್ಷಣಗಳು ತಮ್ಮಲ್ಲಿ ಅಥವಾ ಕುಟುಂಬದವರಲ್ಲಿ ಕಂಡುಬಂದು, ತಮ್ಮಿಂದ ರೋಗ ಇನ್ನೊಬ್ಬರಿಗೆ ಹರಡಬಾರದೆಂದು ಮನೆಯಲ್ಲಿ elf-isolate ಮಾಡಿಕೊಳ್ಳುವ ವೈದ್ಯರು ಹಾಗೂ ದಾದಿಯರ ಸಂಖ್ಯೆಯೂ ಹೆಚ್ಚಾಗುತ್ತ ಹೋಯಿತು. ತಕ್ಷಣ ಕಾರ್ಯತತ್ಪರವಾದ ಸರ್ಕಾರ, ‘ಈ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಸಹಾಯ ಬೇಕು’ ಎಂದು ನಿವೃತ್ತ ವೈದ್ಯರು, ನರ್ಸಿಂಗ್ ವಿದ್ಯಾರ್ಥಿಗಳು, ಇನ್ನಿತರ ಸ್ವಯಂಸೇವಕರಿಗೆ ಮನವಿ ಮಾಡಿತು. ಸೋಂಕಿನ ಭೀತಿ ಇಡೀ ಯುಕೆಯನ್ನೇ ಕಾಮೋಡದಂತೆ ಆವರಿಸತೊಡಗಿತು.
ಈ ಕಾಯಿಲೆ ಎಲ್ಲೆಲ್ಲೋ ಹರಡಿ, ಎಲ್ಲಿ ತಮಗೆ ಬೇಕಾದ ಅತ್ಯಗತ್ಯ ವಸ್ತುಗಳು ಸಿಗದೇ ಹೋಗುವುದೋ ಎಂಬ ಭಯದಿಂದ ಜನರು ಅಂಗಡಿಗಳಿಗೆ ಮುಗಿಬಿದ್ದರು. ಸೂಪರ್ ಮಾರ್ಕೆಟ್ಗಳಲ್ಲಿ ಹಿಂದೆಂದೂ ಕಾಣದಂತಹ ದೀರ್ಘ ಕ್ಯೂಗಳು, ಗಂಟೆಗಟ್ಟಲೇ ಸಾಲಿನಲ್ಲಿ ನಿಂತು ಒಳಗೆ ಹೋದರೆ ಅಲ್ಲಿ ಕಂಡುಬರುವ ಖಾಲಿ ಶೆಲ್ಪ್ಗಳು, ದಿನನಿತ್ಯದ ಅಗತ್ಯ ವಸ್ತುಗಳ ಕೊರತೆ ಇವು ಜನಜೀವನದ ದೈನಂದಿನ ಭಾಗಗಳಾದುವು. ಒಟ್ಟಿನಲ್ಲಿ ಇಡೀ ದೇಶವೇ ಈ ಕೊಳ್ಳುಬಾಕತನವೆಂಬ ಸಮೂಹ ಸನ್ನಿಗೆ ಬಲಿಯಾಯಿತು. ಭಾರತೀಯ ಅಂಗಡಿಗಳಿಗೆ ಹೋದರೆ ಅಲ್ಲಿಯೂ ಇದೇ ಕಥೆ. ಸಮಸ್ಯೆಯ ಗಂಭೀರತೆ ಮನಗಂಡ ಸರ್ಕಾರ ಪ್ರತಿಯೊಬ್ಬರೂ ಎಷ್ಟು ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದು ಎಂಬುದರ ಮೇಲೆ ಕಡ್ಡಾಯ ಮಿತಿಯನ್ನು ಹೇರಿತು. ಒಟ್ಟಿನಲ್ಲಿ, ಎರಡನೇ ವಿಶ್ವಯುದ್ಧದ ಸಂದರ್ಭ ಇಲ್ಲಿ ಇದ್ದ ಪರಿಸ್ಥಿತಿಯೇ ಈಗ ಮರುಕಳಿಸುತ್ತಿದೆ ಎಂದು ಬಹಳಷ್ಟು ಹಿರಿಯರು ಅಭಿಪ್ರಾಯಪಟ್ಟರು.
ಕರೊನಾ ವೈರಸ್ ಹೇಗೆ ಹರಡುತ್ತದೆ, ಅದರ ರೋಗ ಲಕ್ಷಣಗಳೇನು, ಅವು ಕಾಣಿಸಿಕೊಂಡರೆ ಏನು ಮಾಡಬೇಕು ಮುಂತಾದ ಮಾಹಿತಿಗಳನ್ನು ಸರ್ಕಾರ ಪ್ರತಿನಿತ್ಯವೂ ಕೊಡಲಾರಂಭಿಸಿತು. ಜತೆಗೆ "Prevention is better than cure', ಈ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ನಮಗೆ ಸದ್ಯಕ್ಕೆ ಇರುವ ಅತ್ಯುತ್ತಮ ಮಾರ್ಗ ಎಂದು ಪದೇಪದೆ ಘೊಷಿಸಲಾಯಿತು. ಅಗತ್ಯವಿದ್ದರಷ್ಟೇ ಮನೆಯಿಂದ ಹೊರಬನ್ನಿ, ಹೊರಗೆ ಹೋದಾಗಲೂ ನಿಮ್ಮ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಎರಡು ಅಡಿ ಅಂತರವಿರಲಿ, ರೋಗಲಕ್ಷಣಗಳು ಕಂಡುಬಂದರೆ, ಕಡ್ಡಾಯವಾಗಿ ಮನೆಯಲ್ಲಿರಿ, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಿ ಮುಂತಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಟಿವಿ, ಸರ್ಕಾರಿ ಜಾಲತಾಣಗಳು, ಸೋಷಿಯಲ್ ಮೀಡಿಯಾ ಹಾಗೂ ವೃತ್ತಪತ್ರಿಕೆಗಳ ಮೂಲಕ ಮತ್ತೆ ಮತ್ತೆ ಸಾರಲಾಯಿತು. ಆದರೆ ಸೋಂಕು ಬಾಧಿತರ ಸಂಖ್ಯೆ ದಿನೇದಿನೆ ಉಲ್ಬಣಿಸುತ್ತ ಹೋದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಯಿತು. ಮೊದಲಿಗೆ ಪಬ್, ರೆಸ್ಟೋರೆಂಟ್ ಹಾಗೂ ಸಿನಿಮಾಗಳನ್ನು ಮುಚ್ಚಿ, ‘ದಯವಿಟ್ಟು ಎಲ್ಲರೂ ಮನೆಯೊಳಗೇ ಇರಿ’ ಎಂದು ಪ್ರಧಾನಿ ಹಲವಾರು ಬಾರಿ ವಿನಂತಿಸಿಕೊಂಡರು. ಆದರೆ ಬಹಳಷ್ಟು ಜನರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾದಂತಿರಲಿಲ್ಲ. ಬೇಜವಾಬ್ದಾರಿತನವನ್ನು ಮುಂದುವರಿಸಿದ ಪರಿಣಾಮ, ರೋಗ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಲೇ ಹೋಯಿತು. ಬೇರೆ ವಿಧಿಯಿಲ್ಲದೆ, ಸ್ವಲ್ಪ ತಡವಾಗಿಯಾದರೂ ಇಡೀ ದೇಶ ಲಾಕ್ಡೌನ್ಗೆ ಹೋಗಬೇಕೆಂದು ಪ್ರಧಾನಿ ಆದೇಶ ಹೊರಡಿಸಿದರು. ಹಾಗಾಗಿ ಕಳೆದ ಎಂಟು ದಿನಗಳಿಂದ ಸೂಪರ್ ಮಾರ್ಕೆಟ್ಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳನ್ನು ಬಿಟ್ಟರೆ ಯಾವುದೇ ಅಂಗಡಿಗಳು ತೆರೆದಿಲ್ಲ. ಶಾಲಾ-ಕಾಲೇಜುಗಳಿಗೆ ರಜೆ. ಒಟ್ಟಿನಲ್ಲಿ ಇಡೀ ದೇಶದಲ್ಲಿ ಗ್ರಹಣ ಕವಿದಂತಹ ವಾತಾವರಣ.
ಹೀಗೆ ಕರೊನಾ ವೈರಸ್ ಎಂಬ ಸೂಕ್ಷಾ್ಮತಿಸೂಕ್ಷ್ಮ ಜೀವಿಯೊಂದಿಗಿನ ಸಮರದಲ್ಲಿ ಬ್ರಿಟನ್ ಮಾತ್ರವಲ್ಲ ಇಡೀ ಮನುಕುಲವೇ ತತ್ತರಿಸಿಹೋದ ಸುದ್ದಿಗಳು ಪ್ರತಿನಿತ್ಯ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುತ್ತಿವೆ. ಪ್ರಪಂಚದ ಅತ್ಯಂತ ವಿಕಸಿತ ಜೀವಿ ಮಾನವ, ಆತ ಕಂಡುಹಿಡಿದ ವೈದ್ಯ ವಿಜ್ಞಾನ ಎಲ್ಲವೂ ಸದ್ಯದ ಮಟ್ಟಿಗೆ ಅಸಹಾಯಕವಾಗಿವೆ. ಯಾವುದಾದರೂ ಪವಾಡ ನಡೆದು ಈ ಮಹಾಮಾರಿಯಿಂದ ಜಗತ್ತು ಮುಕ್ತವಾಗಲಿ ಎಂದು ಎಲ್ಲರೂ ಪ್ರಾರ್ಥಿಸುವಂತಾಗಿದೆ.
ಇತರ ಐರೋಪ್ಯ ರಾಷ್ಟ್ರಗಳಾದ ಇಟಲಿ, ಸ್ಪೇನ್, ಜರ್ಮನಿಗಳಂತೆಯೇ ಯುಕೆಯಲ್ಲಿ ಕರೊನಾದ ಕಬಂಧಬಾಹುಗಳು ಎಲ್ಲೆಲ್ಲೂ ಚಾಚಿವೆ. ಬುಧವಾರ 563 ಜನ ಕಾಯಿಲೆಯಿಂದ ಅಸುನೀಗಿದ್ದಾರೆ. ಸತ್ತವರ ಒಟ್ಟು ಸಂಖ್ಯೆ 2352ಕ್ಕೆ ತಲುಪಿದೆ. ಇನ್ನೂ 2-3 ವಾರಗಳಲ್ಲಿ ಸೋಂಕಿನ ಪ್ರಮಾಣ ಪರಮಾವಧಿ ಮುಟ್ಟಲಿದೆ. ಇದಕ್ಕೆ ಬಲಿಯಾಗುವವರ ಸಂಖ್ಯೆ 20ರಿಂದ 50 ಸಾವಿರದಷ್ಟಾಗಬಹುದು ಎಂದು ಈಗಿನ ಅಂಕಿ-ಅಂಶಗಳ ಅಂದಾಜು. ಈ ತುರ್ತು ಪರಿಸ್ಥಿತಿಯನ್ನು ಎದುರಿಸಲು ವೈದ್ಯರು ಹಾಗೂ ನರ್ಸ್ಗಳ ಪಡೆ ಸಜ್ಜಾಗುತ್ತಿದೆ. ದೇಶದ ಮೂರು ದೊಡ್ಡ ನಗರಗಳಲ್ಲಿ ಒಂದು ಬಾರಿಗೆ ಎರಡರಿಂದ ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ಕೊಡಬಲ್ಲ ಬೃಹತ್ ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆಂದೇ ತೆರೆಯಲಾಗುತ್ತಿದೆ. ವೈದ್ಯರು ತಮ್ಮ ಪರಿಣತಿಯ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಎಲ್ಲೆಲ್ಲಿ ವೈದ್ಯರ ಅಗತ್ಯವಿದೆಯೋ ಅಲ್ಲಿ ಹೋಗಿ ಈ ಕರೊನಾ ವಿರುದ್ಧ ಸಮರದಲ್ಲಿ ಭಾಗಿಗಳಾಗಬೇಕಿದೆ.
ಇಂತಹ ಮಾರಕ ಸೋಂಕು ತಗುಲಿರುವ ರೋಗಿಗಳಿಗೆ ಮತ್ತು ಸೋಂಕು ತಗುಲಿರಬಹುದೆಂಬ ಶಂಕೆ ಇರುವವರಿಗೆ ಚಿಕಿತ್ಸೆ ನೀಡುವಾಗ ಧರಿಸಬೇಕಾದ ಸುರಕ್ಷಾ ಕವಚಗಳ ಕೊರತೆ ಹಾಗೂ ರೋಗಲಕ್ಷಣಗಳಿರುವ ವೈದ್ಯರು, ನರ್ಸ್ಗಳಿಗೆ ಕರೊನಾ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಬೇಕಾಗುವ ಟೆಸ್ಟಿಂಗ್ ಕಿಟ್ ಕೊರತೆಯಂತಹ ಸಂಗತಿಗಳು ವೈದ್ಯರು ಹಾಗೂ ನರ್ಸ್ಗಳಲ್ಲಿ ಸ್ವಲ್ಪ ಮಟ್ಟಿನ ಭಯ ಉಂಟು ಮಾಡಿವೆ. ಆದರೂ ವೃತ್ತಿಧರ್ಮಕ್ಕಿಂತ ಮಿಗಿಲಾದ ಧರ್ಮವಿಲ್ಲವೆಂದು ಬಲ್ಲ ಇವರೆಲ್ಲರೂ ಕರೊನಾ ವಿರುದ್ಧದ ಸಮರದಲ್ಲಿ ಹೋರಾಡಲು ಕಟಿಬದ್ಧರಾಗಿದ್ದಾರೆ.
ಇಂತಹ ಆತಂಕಕಾರಿ ಸ್ಥಿತಿಯಲ್ಲಿಯೂ ಜನರು ಕರುಣೆ, ಮಾನವೀಯತೆ ಮೆರೆವ ಹಲವು ಉದಾಹರಣೆಗಳನ್ನು ನೋಡಿ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕ ಅನುಭವವಾಗುತ್ತದೆ. ತಮ್ಮ ಅಕ್ಕಪಕ್ಕದ ಮನೆಗಳಲ್ಲಿರುವ ಹಿರಿಯರಿಗೆ, ಬೇರೆ ಕಾಯಿಲೆಗಳಿಂದ ಅಶಕ್ತರಾದವರಿಗೆ ಜನರು ದೈನಂದಿನ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು, ವೈದ್ಯರು-ನರ್ಸ್ಗಳು, ಆಂಬುಲೆನ್ಸ್ ಕಾರ್ಯಕರ್ತರನ್ನು ಕಂಡರೆ ಅವರಿಗೆ ಗೌರವ ಸಲ್ಲಿಸುವುದು, ‘ನಿಮ್ಮ ಇವತ್ತಿನ ಸಾಮಗ್ರಿಗಳಿಗೆ ನಾವು ದುಡ್ಡು ಕೊಡುತ್ತೇವೆ’ ಎಂದು ಹಲವರು ಮುಂದೆ ಬರುವುದು, ಮನೆ-ಮಠಗಳಿಲ್ಲದ ನಿರ್ಗತಿಕರಿಗೆ ಆಹಾರದ ಪಾರ್ಸಲ್ಗಳನ್ನು ಕಳಿಸುವುದು ಮುಂತಾದ ಉದಾತ್ತ ಉದಾಹರಣೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಒಟ್ಟಿನಲ್ಲಿ ಹಲವು ತಲೆಮಾರುಗಳಲ್ಲಿ ಯಾರೂ ಕಂಡು ಕೇಳರಿಯದಿದ್ದ ಭಯಾನಕ ಸಮಸ್ಯೆಯೊಂದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಬಂದ ವಿಪತ್ತನ್ನು ಧೈರ್ಯದಿಂದ ಎದುರಿಸಿ, ಸ್ವಲ್ಪಮಟ್ಟಿನ ಆತ್ಮವಿಮರ್ಶೆ ಮಾಡಿಕೊಂಡು ಇಂತಹ ವೈಪರೀತ್ಯ ಮುಂದೆಂದೂ ಸಂಭವಿಸದಂತೆ ಎಲ್ಲ ಪ್ರಯತ್ನಗಳನ್ನೂ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಮಾತ್ರವಲ್ಲ ಸರ್ಕಾರ ಕೈಗೊಂಡ ಸುರಕ್ಷತಾ ಕ್ರಮಗಳನ್ನು ಟೀಕಿಸುವುದನ್ನೇ ಕಸುಬಾಗಿಸಿಕೊಳ್ಳದೆ, ನಮ್ಮ ನಾಗರಿಕ ಕರ್ತವ್ಯಗಳನ್ನು ಎಚ್ಚರದಿಂದ ಪಾಲಿಸಬೇಕಾಗಿರುವುದು ಈಗ ನಮ್ಮ ಮೇಲಿರುವ ಅತೀ ದೊಡ್ಡ ಜವಾಬ್ದಾರಿ. ಸಿದ್ಧಾಂತಗಳಿಗೆ ಕಟ್ಟು ಬಿದ್ದು, ರಾಜಕೀಯ ಮಾತನಾಡುತ್ತ ಕುಳಿತುಕೊಳ್ಳುವ ಸಮಯ ಇದಲ್ಲ. ಕರೊನಾ ವಿರುದ್ಧದ ಈ ಮಹಾಯುದ್ಧದಲ್ಲಿ ನಾವೆಲ್ಲ ಆತ್ಮಸ್ಥೈರ್ಯದಿಂದ, ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ವಿಜಯ ನಮ್ಮದಾದೀತು. ರೋಗಮುಕ್ತ, ಸ್ವಸ್ಥ ಸಮಾಜದಲ್ಲಿ ನೆಮ್ಮದಿಯಿಂದ ಬದುಕುವ ಅವಕಾಶ ನಮ್ಮ ಮಕ್ಕಳಿಗೆ ಇನ್ನೊಮ್ಮೆ ಸಿಕ್ಕೀತು.
(ಲೇಖಕರು ಬ್ರಿಟನಿನ ಮ್ಯಾಂಚೆಸ್ಟರ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರು)