ಅಂಕಣ, ಸಕಾಲಿಕ; ಅಂಬಿಕಾತನಯದತ್ತರ ಔದುಂಬರ ಗಾಥೆ

BENDRE
Published on
ಡಾ.ಎಸ್.ಎಲ್.ಭೈರಪ್ಪ ಅವರಿಗೆ ಈ ವರ್ಷದ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭ ಇಂದು (ಜ.31) ಧಾರವಾಡದಲ್ಲಿ ಜರುಗಲಿದೆ. ಬೇಂದ್ರೆ ಜನ್ಮದಿನವನ್ನು ಕವಿ ದಿನವಾಗಿ ಆಚರಿಸಬೇಕೆಂಬ ಒತ್ತಾಸೆ ಜಾರಿಗೊಳಿಸಲು ಇದು ಸಕಾಲವೂ ಆಗಿದೆ. ಈ ಆಶಯದೊಂದಿಗೆ ಜ್ಞಾನಪೀಠ ಪುರಸ್ಕೃತ ಕವಿಯ ಸಮಗ್ರ ಕಾವ್ಯ ಔದುಂಬರ ಗಾಥೆಯ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಬಾರೊ ಸಾಧನಕೇರಿಗೆ

ಮರಳಿ ನನ್ನೀ ಊರಿಗೆ

ಹಸಿರು ಎರೆಯುವ ಏರಿಗೆ

ನಂದನದ ತುಣುಕೊಂದುಬಿದ್ದಿದೆ

ನೋಟ ಸೇರದು ಯಾರಿಗೆ

ಎಂದು ಹಾಡಿದ ವರಕವಿ ದ.ರಾ. ಬೇಂದ್ರೆಯವರ 125ನೇಯ ಜನ್ಮದಿನದ ಸಂಭ್ರಮದಲ್ಲಿ ನಾವಿದ್ದೇವೆ. ಧಾರವಾಡದ ಸಾಧನಕೇರಿಯ ಅಂಬಿಕಾತನಯದತ್ತ ನಿವಾಸದಲ್ಲಿ ಭಾರತೀಯ ಸಾಹಿತ್ಯದ ಅನನ್ಯ ಲೇಖಕ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಈ ವರ್ಷದ ಅಂಬಿಕಾತನಯ ದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ವರಕವಿಯ ಜನ್ಮದಿನವನ್ನು ‘ಕವಿ ದಿನ’ವಾಗಿ ಕರ್ನಾಟಕ ಸರ್ಕಾರ ಆಚರಿಸಬೇಕೆಂಬ ಕನ್ನಡಿಗರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲು ಇದು ಸಕಾಲವಾಗಿದೆ. ಕುವೆಂಪು ಜನ್ಮದಿನವನ್ನು ‘ವಿಶ್ವಮಾನವ ದಿನ’ವಾಗಿ ಆಚರಿಸುವ ರೀತಿಯಲ್ಲಿ ಬೇಂದ್ರೆ ಜನ್ಮದಿನವನ್ನು ಕವಿ ದಿನವಾಗಿ ಆಚರಿಸುವುದು ಅವಶ್ಯಕ. ‘ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದ’ ಎಂದು ಹಾಡಿದ ವರಕವಿ ಬೇಂದ್ರೆ ಭಾರತೀಯ ಸಾಹಿತ್ಯದಲ್ಲಿ ಕನ್ನಡದ ಪ್ರತಿಷ್ಠೆಯನ್ನು ಹೆಚ್ಚಿಸಿದ ಕವಿ.

ಅಂಬಿಕಾತನಯದತ್ತರ ಸಮಗ್ರ ಕಾವ್ಯ ‘ಔದುಂಬರ ಗಾಥೆ’ ಇದೀಗ ಮತ್ತೆ ಪ್ರಕಟವಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಿರಿಯ ಕವಿಗಳ ಸಮಗ್ರಕಾವ್ಯದ ಪ್ರಕಟಣೆಯು ಇಪ್ಪತನೆಯ ಶತಮಾನದ ಸಾಹಿತ್ಯ ಸಾಧನೆಯಾಗಿದೆ. ಅಂಬಿಕಾತನಯದತ್ತರು ಶ್ರಾವಣ ಪ್ರತಿಭೆಯ ಕವಿ. ಅವರು ಎಂಬತೆôದು ವರ್ಷಗಳ ಕಾಲ ಬಾಳಿ ಕನ್ನಡ ನವೋದಯ ಕಾವ್ಯದ ನವಮನ್ವಂತರಕ್ಕೆ ಕಾರಣರಾದವರು.

ಅವರೇ ತಮ್ಮ ಕಾವ್ಯೋದ್ಯೋಗದಲ್ಲಿ ಹೇಳಿದಂತೆ ತಮ್ಮ ಬಾಳನ್ನು ಕಾವ್ಯದ ಉತ್​ಯೊಗದಲ್ಲಿ ತೊಡಗಿಸಿಕೊಂಡವರು. ಅವರು ಬರೆದ 34 ಕವನ ಸಂಕಲನಗಳ 1,427 ಕವಿತೆಗಳನ್ನು ಡಾ. ವಾಮನ ಬೇಂದ್ರೆ ಆರು ಸಂಪುಟಗಳಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ. ಹುಬ್ಬಳ್ಳಿಯ ‘ವರಕವಿ ಡಾ. ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆ’ ‘ಔದುಂಬರ ಗಾಥೆ’ಯನ್ನು ಪ್ರಕಟಿಸಿದೆ. ಎರಡು ಸಾವಿರ ಪುಟಗಳ ಔದುಂಬರ ಗಾಥೆಯು ಕನ್ನಡಿಗರ ಬಹುದಿನದ ಬೇಂದ್ರೆ ಸಮಗ್ರಕಾವ್ಯ ಪ್ರಕಟಣೆಯ ಬೇಡಿಕೆಯನ್ನು ಸಾಕಾರಗೊಳಿಸಿದೆ. ಅಂಬಿಕಾತನಯದತ್ತರ ಸಮಗ್ರ

ಕಾವ್ಯ ಔದುಂಬರ ಗಾಥೆ ಉಳಿದ ಕವಿಗಳ ಸಮಗ್ರಕಾವ್ಯಕ್ಕಿಂತ ಭಿನ್ನ. ಕವನ ಸಂಕಲನಗಳ ರಚನಾಕ್ರಮದ ರೀತಿಯಲ್ಲಿ ಕನ್ನಡದ ಕವಿಗಳ ಸಮಗ್ರ ಕಾವ್ಯ ಪ್ರಕಟವಾದರೆ, ಬೇಂದ್ರೆ ಕವಿತೆಗಳನ್ನು ವಸ್ತುವನ್ನಾಧರಿಸಿ ವಿಭಜಿಸಿ ಆರು ಸಂಪುಟಗಳ ಸಮಗ್ರಕಾವ್ಯ ಸಿದ್ಧಪಡಿಸಲಾಗಿದೆ.

ಬೇಂದ್ರೆ ಮುಂಬೈ ಆಸ್ಪತ್ರೆಯಲ್ಲಿರುವಾಗ ಅಂತಿಮವಾಗಿ ಡಾ. ವಾಮನ ಬೇಂದ್ರೆಯವರಿಗೆ, ‘ನನ್ನ ಜೀವನ ಮತ್ತು ಕಾವ್ಯ ಔದುಂಬರ ಗಾಥೆ’ ಎಂದು ಹೇಳಿದರಂತೆ. ಔದುಂಬರ ಅಂದರೆ ಅತ್ತಿಯ ಮರವು ಹೂವಿಲ್ಲದೆ ಹಣ್ಣನ್ನು ಬಿಡುವ ವಿಶಿಷ್ಟ ವೃಕ್ಷ. ದತ್ತಾತ್ರಯನ ವಾಸಸ್ಥಳವು ಔದುಂಬರ ವೃಕ್ಷದಲ್ಲಿ ಎಂಬುದು ಭಾರತೀಯರ ನಂಬಿಕೆ. ಬೇಂದ್ರೆ ದತ್ತತತ್ತ್ವದ ಉಪಾಸಕರು. ಅವರ ನಿವಾಸದ ತೋಟದಲ್ಲಿ ಔದುಂಬರ ವೃಕ್ಷವು ತಾನಾಗಿ ಹುಟ್ಟಿ ಬೆಳೆದಿದೆ. ಔದುಂಬರ ಎಂಬುದು ಅಮೃತ ಮತ್ತು ಮೃತ್ಯುಗಳೆರಡಕ್ಕೂ ಸಮಾನ ಸಂಕೇತ.

ಔದುಂಬರ ಗಾಥೆ ಸಮಗ್ರ ಸಂಪುಟದಲ್ಲಿ ‘ನಮನ’ ಎಂಬ ಮೊದಲ ಸಂಪುಟದಲ್ಲಿ ಶ್ರುತಿನಮನ, ದೇವನಮನ, ಗುರುನಮನ, ಕವಿನಮನ ಎಂಬ ನಾಲ್ಕು ಭಾಗಗಳಲ್ಲಿ 358 ಕವಿತೆಗಳಿವೆ. ಬೇಂದ್ರೆ ಗೌರವಿಸುವವರೆಲ್ಲರೂ ಇಲ್ಲಿ ವರ್ಣಿತರಾಗಿದ್ದಾರೆ. ಸಮಗ್ರಕಾವ್ಯದ ಎರಡನೆಯ ಸಂಪುಟ ‘ದರ್ಶನ’ ಶೀರ್ಷಿಕೆಯಲ್ಲಿ 217 ಕವಿತೆಗಳಿವೆ. ಕಾವ್ಯದರ್ಶನ, ವಿಶ್ವದರ್ಶನ, ಭಾರತದರ್ಶನ, ಕರ್ನಾಟಕದರ್ಶನ, ಧಾರವಾಡದರ್ಶನ ಎಂಬ ಪಂಚಮುಖ ದರ್ಶನದ ಕವಿತೆಗಳು ಬೇಂದ್ರೆ ದಾರ್ಶನಿಕ ಮಹೋನ್ನತಿಯನ್ನು ಸಾರುತ್ತವೆ.

ಔದುಂಬರಗಾಥೆಯ ಮೂರನೆಯ ಸಂಪುಟ ‘ವಿಕಾಸ’ ಎಂಬುದಾಗಿದ್ದು, ಇದರಲ್ಲಿ ಬೇಂದ್ರೆ ಜೀವನಗಾಥೆ ಸಖೀಗೀತ, ಕವಿಜೀವನದ ಏರಿಳಿತಗಳು ಹೃದಯರ್ಸ³ಯಾಗಿ ಬಂದಿವೆ. ‘ಇದು ಜೀವನ ಪವನದಂತೆ ಪಾವನ’ ಎಂದ ಗಾರುಡಿಗ ಬೇಂದ್ರೆ ಬಡತನ, ನೋವು, ಸಾವು, ಸಂಕಟಗಳನ್ನು ಎದುರಿಸಿ ‘ಒಲವೆ ನಮ್ಮ ಬದುಕು’ ಎಂಬ ಜೀವನ ನಡೆಸಿದ ಬಗೆಯನ್ನು ತಿಳಿಸುತ್ತವೆ. 210 ಕವಿತೆಗಳು ಈ ಸಂಪುಟದಲ್ಲಿವೆ.

ವಿನ್ಯಾಸ ಶೀರ್ಷಿಕೆಯ ನಾಲ್ಕನೆಯ ಸಂಪುಟದಲ್ಲಿ 254 ಕವಿತೆಗಳಿದ್ದು ಇದರಲ್ಲಿ ಪಂಚ ಮಹಾಭೂತಗಳು, ಚತುಮುಖ ಪುರುಷಾರ್ಥ, ಆರು ಋತುಗಳು, ಸಪ್ತಕಲೆಗಳ ಬಗೆಗಿನ ಜಿಜ್ಞಾಸೆ ಅಂತಸ್ಥವಾಗಿದೆ. ಔದುಂಬರ ಗಾಥೆಯಲ್ಲಿ ತತ್ತ್ವ ಶೀರ್ಷಿಕೆಯ 235 ಕವಿತೆಗಳಿವೆ. ಅಂಬಿಕಾತನಯದತ್ತರು ಭಾರತೀಯ ದರ್ಶನಶಾಸ್ತ್ರ, ರಸಸಂಪ್ರದಾಯಗಳ ಕುರಿತು ನಡೆಸಿದ ತತ್ತ್ವ ಮೀಮಾಂಸೆ ತುಂಬ ಮಾರ್ವಿುಕವಾಗಿದೆ.

ಔದುಂಬರ ಗಾಥೆಯ ಕೊನೆಯ ಸಂಪುಟ ‘ಸಿದ್ಧಾಂತ’ ಎಂಬುದಾಗಿದ್ದು, ಇದರಲ್ಲಿ 153 ಕವಿತೆಗಳಿವೆ. ಬೇಂದ್ರೆಯವರ ಚತುಮುಖ ಸೌಂದರ್ಯ ಸಿದ್ಧಾಂತ, ಪಂಚಮುಖ ಮೂರ್ತಿ ಸಿದ್ಧಾಂತ, ಬಾಲಬೋಧೆ, ಸಂಖ್ಯಾಸಿದ್ಧಾಂತ, ಹೃದಯವಿವೇಕ ಸಿದ್ಧಾಂತ, ಕೊನೆಯದಾಗಿ ನವಮಾನವ ಆವಿರ್ಭಾವ ಸಿದ್ಧಾಂತ ಎಂಬ ಐದು ಮುಖಗಳಿವೆ.

ಔದುಂಬರ ಗಾಥೆ ಸಮಗ್ರ ಕಾವ್ಯದ ಕೊನೆಯ ಸಂಪುಟದಲ್ಲಿ ಬೇಂದ್ರೆ ಮುನ್ನುಡಿಗಳು, ಕಾವ್ಯಾಧ್ಯಯನದ ಸಹಸ್ಪಂದನ ಉಪಯುಕ್ತ ಕೃತಿ ಲೇಖನ ಸೂಚಿ ಇದೆ. ಈ ಎಲ್ಲ ಆರು ಸಂಪುಟಗಳ 1427 ಕವಿತೆಗಳಿಗೆ ಡಾ. ವಾಮನ ಬೇಂದ್ರೆ ಭಾವಸಂದರ್ಭಸೂಚಿ ಟಿಪ್ಪಣಿ ಬರೆದಿದ್ದಾರೆ. ಖ್ಯಾತ ಕಲಾವಿದ ಸುರೇಶ ಕುಲಕರ್ಣಿ ಬೇಂದ್ರೆ ಕವಿತೆಗಳಿಗೆ ಭಾವರೇಖೆಗಳನ್ನು ಬರೆದಿದ್ದಾರೆ. ಕೆ.ಎಸ್.ಶರ್ವ ಸಹಚಿಂತನವೂ ಸೇರಿದೆ. ಬೇಂದ್ರೆ ಭಾವಗೀತೆಗಳನ್ನು ಜತನದಿಂದ ಕಾಪಾಡಿಕೊಂಡು ಅವುಗಳನ್ನು ವ್ಯವಸ್ಥಿತವಾಗಿ ಪ್ರಕಟಿಸುವ ಮಹತ್ವದ ಕಾರ್ಯ ಮಾಡಿದ ಡಾ. ವಾಮನ ಬೇಂದ್ರೆಯವರಿಗೆ ಕನ್ನಡಿಗರು ಕೃತಜ್ಞರಾಗಿದ್ದಾರೆ.

ನೋವು ಮತ್ತು ಕಾವ್ಯಾಭಿವ್ಯಕ್ತಿ

ಅರವತ್ತು ವರ್ಷಗಳಷ್ಟು ಕಾಲ ಸಾಹಿತ್ಯಸುಧೆಯನ್ನು ಉಣಬಡಿಸಿದ ವರಕವಿ, 9 ಮಕ್ಕಳಲ್ಲಿ 6 ಮಕ್ಕಳ ಸಾವನ್ನು ಕಣ್ಣೆದುರೇ ಕಂಡರು. ಒಮ್ಮೆಯಂತೂ ಒಂದೇ ವಾರದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಹತಭಾಗ್ಯರು ಬೇಂದ್ರೆ. ಅದಕ್ಕೆಲ್ಲ ಕಾವ್ಯದ ಸ್ವರೂಪದಲ್ಲಿ ನುಡಿದು-ಮಿಡಿದು ಬೆಂದು ಬೇಂದ್ರೆಯಾದ ಈ ಮಹನೀಯ ಕವಿಗೆ ಇಂಥ ಹಲವು ತಾಪ-ಸಂತಾಪಗಳ ಮಧ್ಯೆಯೇ ಬದುಕಿನ ರುಚಿಯನ್ನು ಅನುಭವಿಸುವ ಇರಾದೆಯಿರುವುದು ಮನನೀಯ.

‘ಬೇಂದ್ರೆನ ಗೋಳು ಅದು ಹೋಳು ಹೋಳು

ಪಡುವುದಷ್ಟು ಪಾಡು ಆಗಲಿಲ್ಲ

ಹಸಿರಿನಲೆ ಒಣಗಿದ್ದು ಕೊಳಕಾಗಿ ಗೊಣಗಿದ್ದು

ತಿಂಡಿಯಲಿ ತೀರಿದ್ದು, ಒಗರುಹುಳಿ

ಕಸವು ಕೂಡಾ ರಸವು‘- (ನಾಲ್ಕುತಂತಿ)

ಮೊದಲ ಮಗ ಕ್ಷೇಮೇಂದ್ರ ಸತ್ತಾಗ ಕವಿ ‘ಮೊದಲಿನ ಫಲವೊಂದು ಮೀಸಲು ಮಣ್ಣಿಗೆ’ ಎಂದರೆ, 20 ವರ್ಷದ ಮಗ ರಾಮ ಮರಣಿಸಿದಾಗ ‘ಸತ್ತ ದಶರಥ ಇದ್ದ ರಾಮನಿಗಾಗಿ ಅತ್ತನು ಅಂದಿಗೆ, ಸತ್ತರಾಮಗೆ ಅತ್ತೇ ಅಳುವನು ಇರುವ ದತ್ತನು ಇಂದಿಗೆ’ ಎಂದು ವಿಲಾಪಿಸುತ್ತಾರೆ.

ಮೂರನೇ ಮಗ ಭಾಸ್ಕರನೂ ತೀರಿದಾಗ ಕವಿ ‘ಭೆಟ್ಟಿಗೆ ಬಂದನು ಹೊಸದೊಬ್ಬ ಕಂದನು ಆತಿಥಿಯೋ ಎಂಬಂತೆ’ ಎಂದಂದು ನೊಂದರು. ಲಲಿತೆಯೂ ಸತ್ತಾಗ ಕವಿ ‘ಆ ಕೂಸ ಕಳ್ಕೊಂಡು ನೀನೆಂತೋ ಉಳ್ಕೊಂಡು ಲಾಲಿತ್ಯವಿಲ್ಲದ ಶ್ಯೆಲಿಯೊಳು’ ಎನ್ನುತ್ತಾರೆ (ಇದೇ ಮುಂದೆ ‘ನೀ ಹಿಂಗ ನೋಡಬ್ಯಾಡ ನನ್ನ’ ಕವನದ ವಸ್ತುವಾಯಿತು). ಪ್ರೇಮಾ, ಅನಂದ ಈರ್ವರೂ ಮಸಣವನ್ನು ಬೇಗ ಸೇರಿದರು.

ಸಾಮಾಜಿಕ ಬದ್ಧತೆಯ ಕವಿ: ನವೋದಯದ ಪ್ರಧಾನ ಕವಿಗಳಲ್ಲಿ ಒಬ್ಬರಾದ ಬೇಂದ್ರೆ ಆ ಸಾಹಿತ್ಯಪಂಥದ ಆಶಯಗಳಲ್ಲೊಂದಾದ ಮಾನವತಾವಾದ-ಸಾಮಾಜಿಕ ಚಿಂತನೆಗಳನ್ನು ಕಾವ್ಯದಲ್ಲಿ ಆಳವಾಗಿ ಒಡಮೂಡಿಸಿದವರು. ಎಷ್ಟೇ ಸಾವು ನೋವಿನ ಖಾಸಗಿ ದುಮ್ಮಾನವಿದ್ದರೂ ಸಮಾಜದ ಕುರಿತಾದ ಅವರ ಒಲವು-ನಿಲುವುಗಳು ಮನುಷ್ಯನನ್ನು ಬೊಟ್ಟುಮಾಡಿ ತೋರಿಸುತ್ತದೆಯೇ ಹೊರತು ಭೂಮಿಯನ್ನಲ್ಲ.

ವ್ಯವಸ್ಥೆಯನ್ನು ಹದಗೆಡಿಸುವ ಮನುಷ್ಯಜನಾಂಗ ಕುರಿತು ಅವರದು ಸಾತ್ವಿಕ ಕ್ರೋಧಾವೇಶವಷ್ಟೇ. ಭೂಮಿಪರವಾದ ನಿಲುವು-ಒಲವುಗಳು ಎಂದೆಂದಿಗೂ ಕವಿಗೆ ಸದಾ ಆಪ್ಯಾಯಮಾನ ಮತ್ತು ಆಪಾತಮಧುರ. ‘ಮನುವಿನ ಮಕ್ಕಳು’ ಎನ್ನುವ ಕವನಕ್ಕೆ ಕವಿಯೇ ನೀಡಿರುವ ಭಾವಸಂದರ್ಭದಲ್ಲಿ ಇದು ಮತ್ತಷ್ಟು ಸುಸ್ಪಷ್ಟವಾಗಿದೆ. ಮನುಷ್ಯನ ಸುಖಕ್ಕೆ ಮನುಷ್ಯರೇ ಅಡ್ಡಾಗಿ ಬರುವಷ್ಟು ನಿಸರ್ಗ ಬರುವುದಿಲ್ಲ. ಆದರೆ, ಸಾಮಾಜಿಕ ಕ್ರೌರ್ಯ, ಅಸಮಾನತೆಗಳನ್ನು ಕಂಡಾಗ ಕವಿ ಭುಗಿಲೆದ್ದು ಕನಲುತ್ತಾರೆ. ‘ತುತ್ತಿನ ಚೀಲ’ ಕವಿತೆ ಇವರ ಅಂತಃಸ್ಪೋಟದ ಉರಿಹೊಗೆಯನ್ನು ಹೊರಚಾಚುತ್ತದೆ.

(ಲೇಖಕರು ವಿಮರ್ಶಕರು) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net