ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿದ ಹೋರಾಟಗಾರ ಸೋಮಪ್ಪ ರಾಯಪ್ಪ ಬೊಮ್ಮಾಯಿ

Deshapande
Published on
ಸೋಮಪ್ಪ ರಾಯಪ್ಪ ಬೊಮ್ಮಾಯಿ. ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ. ಬಡವರ ಪರ ನಿಲುವಿನಿಂದಾಗಿ ರಾಯಿಸ್ಟ್ ಎಂದೇ ಖ್ಯಾತರಾದವರು. ಕೇಂದ್ರ ಸರ್ಕಾರ ತನಗಾಗದ ರಾಜ್ಯ ಸರ್ಕಾರಗಳನ್ನು ಮನತೋಚಿದಂತೆ ಕಿತ್ತೆಸೆದು ರಾಷ್ಟ್ರಪತಿ ಆಡಳಿತ ಹೇರುವ ಪ್ರಜಾಪ್ರಭುತ್ವ ವಿರೋಧಿ ಕ್ರಮಕ್ಕೆ ಕಡಿವಾಣ ಹಾಕಿದ ಧೀಮಂತ ಅವರು. ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಬಜೆಟ್ ಅನುದಾನ ದುಪ್ಪಟ್ಟುಗೊಳಿಸುವ ಮೂಲಕ ಉನ್ನತ ಶಿಕ್ಷಣದ ಬೆಳವಣಿಗೆಗೆ ನಾಂದಿ ಹಾಡಿದ ದೂರಗಾಮಿ ಚಿಂತಕ ಕೂಡ.

ಇಂದಿನ ಯುವ ರಾಜಕಾರಣಿಗಳಿಗೆ ಪ್ರೇರಣಾದಾಯಕ ವ್ಯಕ್ತಿತ್ವ ಎಸ್.ಆರ್. ಬೊಮ್ಮಾಯಿ ಅವರದ್ದು. ಚದುರಿ ಹೋದ ಪಕ್ಷಗಳನ್ನು ಒಗ್ಗೂಡಿಸಿ ಬಲಾಢ್ಯ ಜನತಾ ಪರಿವಾರ ಸಂಘಟಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಬೆಳವಣಿಗೆ ಸಾಧಿಸುವಲ್ಲಿ ಅವರ ಕೊಡುಗೆ ಸ್ಮರಣೀಯ.

ಸಾಮೂಹಿಕ ನಾಯಕತ್ವದ ಪ್ರತಿಪಾದಕ, ದೂರದೃಷ್ಟಿಯುಳ್ಳ ನೀತಿಗಳ ನಿರೂಪಕ ಎಸ್.ಆರ್. ಬೊಮ್ಮಾಯಿ ಅವರ ವೈಚಾರಿಕ ಸಂಪತ್ತನ್ನು ಬಹಳ ಜನ ಗುರುತಿಸಿಲ್ಲ. ಬಹುಶಃ ಅವರ ಸರಳ ವ್ಯಕ್ತಿತ್ವವೇ ಇದಕ್ಕೆ ಕಾರಣ ಇದ್ದಿರಬಹುದು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಉತ್ತುಂಗ ಸ್ಥಾನಕ್ಕೇರಿದರೂ ಅವರು ಜನಸಾಮಾನ್ಯರಂತೆ ತಲರ್ಸ³ಯಾಗಿ ಬದುಕಿದರು.

ಬೊಮ್ಮಾಯಿ ಜನಿಸಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಾರಡಗಿಯಲ್ಲಿ 1924 ಜೂನ್ 6ರಂದು. ತಂದೆ ರಾಯಪ್ಪಗೌಡ, ತಾಯಿ ಶಿವಮ್ಮ ಶಿಗ್ಗಾಂವಿ ತಾಲ್ಲೂಕಿನ ಕಮಡೊಳ್ಳಿಯವರು. ಹುಬ್ಬಳ್ಳಿಯ ಸೋದರಮಾವನ ಮನೆಯಲ್ಲಿದ್ದು ಕಲಿತದ್ದು ಕಾನೂನು ಪದವಿ. ಸೋದರಮಾವ 1952ರಲ್ಲೇ ಶಿಗ್ಗಾಂವಿಯಿಂದ ಶಾಸಕರಾಗಿದ್ದರು. ಬೊಮ್ಮಾಯಿ ಸಾರ್ವಜನಿಕ ಜೀವನಕ್ಕೆ ಬರಲು ಇವರೇ ಪ್ರೇರಣೆ. ಮುಂದೆ ಹೆಣ್ಣು ಕೊಟ್ಟ ಮಾವ ಕೂಡ ಆದರು.

ಬೊಮ್ಮಾಯಿ ಮೊದಲ ಬಾರಿಗೆ ವಿಧಾನಸಭೆಗೆ ಪದಾರ್ಪಣೆ ಮಾಡಿದ್ದು 1967ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಿಂದ. 1972ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತರೂ, ನಂತರ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಆಗ ರಾಮಕೃಷ್ಣ ಹೆಗಡೆ ವಿರೋಧ ಪಕ್ಷದ ನಾಯಕರಾದರೆ, ಬೊಮ್ಮಾಯಿ ಉಪನಾಯಕ.

ಪ್ರಚಾರ ಮಾಡದೆಯೇ ಚುನಾವಣೆ ಗೆಲ್ಲಲು ಸಾಧ್ಯವೇ? ಇಂತಹ ಅಪರೂಪದ ಜಯ ಬೊಮ್ಮಾಯಿ ಅವರಿಗೆ ಲಭಿಸಿದ್ದು 1978ರ ವಿಧಾನಸಭೆ ಚುನಾವಣೆಯಲ್ಲಿ. ಜನತಾ ಪಕ್ಷದಿಂದ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ಅವರಿಗೆ ಲಘು ಹೃದಯಾಘಾತವಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಸೇರಿದರು. ಹೀಗಾಗಿ, ಮತಕ್ಷೇತ್ರಕ್ಕೆ ಕಾಲಿಡಲು ಆಗಲೇ ಇಲ್ಲ. ಆದರೂ ಬೊಮ್ಮಾಯಿ ಜಯ ಗಳಿಸಿ, ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾದರು.

ಪಕ್ಷದ ಶಿಸ್ತಿನ ಸಿಪಾಯಿ: ರಾಜ್ಯದ ರಾಜಕೀಯ ಇತಿಹಾಸದಲ್ಲೇ 1983ರ ವಿಧಾನಸಭೆ ಚುನಾವಣೆ ಮಹತ್ತರವಾದುದು. ಆಗ ಕ್ರಾಂತಿ ರಂಗ ಹಾಗೂ ಜನತಾಪಕ್ಷ ಒಂದೂಗೂಡಿದವು. ಈ ಒಗ್ಗಟ್ಟಿಗೆ ಕಾರಣೀಕರ್ತರು ಬೊಮ್ಮಾಯಿ.

ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ ಜನತಾರಂಗವು ಪಕ್ಷೇತರರು ಹಾಗೂ 18 ಸ್ಥಾನಗಳನ್ನು ಪಡೆದ ಬಿಜೆಪಿ ಬೆಂಬಲದೊಡನೆ ಸರ್ಕಾರ ರಚಿಸಿತು. ಆಗ ನಾನು ಹಳಿಯಾಳ ವಿಧಾನಸಭೆ ಕ್ಷೇತ್ರದಿಂದ ಮೊದಲ ಸಲ ಶಾಸಕನಾಗಿ ಆಯ್ಕೆಯಾಗಿದ್ದೆ. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರೇ ಮುಖ್ಯಮಂತ್ರಿಯಾಗಲು ಸೂಕ್ತವೆಂದು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿತ್ತು. ಬೊಮ್ಮಾಯಿ ಯಾವಾಗಲೂ ಪಕ್ಷದ ಶಿಸ್ತಿನ ಸಿಪಾಯಿ. ಹೀಗಾಗಿ, ಹೆಗಡೆ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟರು.

ಐಟಿ ಹರಿಕಾರ: ಹೆಗಡೆ ಸಂಪುಟದಲ್ಲಿ ಬೊಮ್ಮಾಯಿ ಕೈಗಾರಿಕಾ ಸಚಿವರಾಗಿದ್ದರು. ಪ್ರಾಯಶಃ ಈ ಅವಧಿಯಲ್ಲಿ ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ದೊರಕಿತೆಂದರೆ ತಪ್ಪಲ್ಲ. ಬೆಂಗಳೂರಿನ ಪೀಣ್ಯದ ಕೈಗಾರಿಕಾ ಅಭಿವೃಧಿ್ಧ ಪ್ರದೇಶದ ಎರಡು ಮತ್ತು ಮೂರನೆಯ ಹಂತ ಹಾಗೂ ಜಿಗಣಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಈ ಕಾಲದಲ್ಲಿ ನಡೆಯಿತು. ಇನ್ನು, ರಾಜ್ಯದಲ್ಲಿ ಮಾಹಿತಿ-ತಂತ್ರಜ್ಞಾನದ ಹರಿಕಾರರೆಂದರೆ, ಅದು ನಿಸ್ಸಂಶಯವಾಗಿ ಬೊಮ್ಮಾಯಿ ಅವರೇ. ರಾಜ್ಯಕ್ಕೆ ‘ಟೆಕ್ಸಾಸ್ ಇನ್​ಸ್ಟ್ರುಮೆಂಟ್ ಕಂಪನಿ’ ಬರುವಲ್ಲಿ ಅವರ ಪಾತ್ರ ಪ್ರಮುಖ. ಈ ಬೆಳವಣಿಯಿಂದಲೇ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಚಟುವಟಿಕೆಗಳು ಪ್ರಾರಂಭವಾದವು.

ರಾಯಿಸ್ಟ್ ಬೊಮ್ಮಾಯಿ: ಬೊಮ್ಮಾಯಿ ವಿದ್ಯಾರ್ಥಿ ದೆಸೆಯಿಂದಲೂ ಎಂ.ಎನ್. ರಾಯ್ ತತ್ತ್ವಗಳಿಗೆ ಮನಸೋತವರು. ‘ಬ್ರಿಟಷರ ವಿರುದ್ಧ ನಡೆಸಿದ್ದಕ್ಕಿಂತ ಹೆಚ್ಚಿನ ಹೋರಾಟವನ್ನು ಭಾರತದಲ್ಲಿರುವ ಬಡತನದ ವಿರುದ್ಧ ಮಾಡಬೇಕಾಗಿದೆ’ ಎಂಬ ರಾಯ್ ಮಾತುಗಳು ಬೊಮ್ಮಾಯಿ ಅವರ ಮೇಲೆ ಪ್ರಭಾವ ಬೀರಿದ್ದವು. ಇದು ಅವರ ಆಡಳಿತದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

1985ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಬೊಮ್ಮಾಯಿ ಕಂದಾಯ ಸಚಿವರಾದರು. ಸ್ವಲ್ಪ ದಿನ ಹಣಕಾಸು ಹಾಗೂ ಯೋಜನಾ ಸಚಿವರೂ ಆದರು. ಆಗ ನಾನು ಸಣ್ಣ ಕೈಗಾರಿಕಾ ಸಚಿವನಾಗಿ ಬೊಮ್ಮಾಯಿ ಕಾರ್ಯಶೀಲತೆಯನ್ನು ನೋಡುತ್ತಿದ್ದೆ. ಅವರು ಕಂದಾಯ ಸಚಿವರಾಗಿದ್ದಾಗ ಕರ್ನಾಟಕ ತೀವ್ರ ಬರಗಾಲ ಎದುರಿಸಿತ್ತು. ಸಂಪನ್ಮೂಲದ ಕೊರತೆ ಇತ್ತು. ಗ್ರಾಮೀಣ ಜನತೆಗೆ ಉದ್ಯೋಗವಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ಕೂಲಿಕಾರ್ವಿುಕರು ಗುಳೆ ಹೊರಟರು. ಈ ಸಂದರ್ಭದಲ್ಲಿ ಬೊಮ್ಮಾಯಿ ರಾಜ್ಯ ನೆನಪಿಸಿಕೊಳ್ಳುವಂಥ ಕಾರ್ಯಗಳನ್ನು ಮಾಡಿದರು. ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿದರು. ಜಲಾನಯನ ಅಭಿವೃದ್ಧಿ ಯೋಜನೆ ಜಾರಿಗೊಳಿಸಿದರು. ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದರು. ಆಶ್ಚರ್ಯಕರ ರೀತಿಯಲ್ಲಿ ಬರಗಾಲ ನಿರ್ವಹಣೆಗೆ ರಾಜ್ಯ ಸರ್ಕಾರ ಸಂಪನ್ಮೂಲ ಸಂಗ್ರಹಿಸಿತು. ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಕರ್ನಾಟಕಕ್ಕೆ ಭೇಟಿ ನೀಡಿ, ಬರಗಾಲ ನಿರ್ವಹಣೆಗೆ ಮಾಡಿದ್ದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಒಲಿದ ಮುಖ್ಯಮಂತ್ರಿ ಸ್ಥಾನ: ಈ ಮಧ್ಯೆ ಮುಖ್ಯಮಂತ್ರಿ ಹೆಗಡೆ ಕದ್ದಾಲಿಕೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ಆಗ, ಬೊಮ್ಮಾಯಿ ರಾಜ್ಯದ ಹನ್ನೊಂದನೆಯ ಮುಖ್ಯಮಂತ್ರಿಗಳಾದರು. ಮುಖ್ಯಮಂತ್ರಿ ಸ್ಥಾನಕ್ಕೆ ನಾಲ್ಕೈದು ಹೆಸರುಗಳಿದ್ದರೂ ನಾವೆಲ್ಲ ಶಾಸಕರು ಗಟ್ಟಿಯಾಗಿ ಬೊಮ್ಮಾಯಿ ಪರ ನಿಂತೆವು. ಅವರಿಗೆ ನನ್ನನ್ನು ಕಂಡರೆ ವಿಶೇಷ ಪ್ರೀತಿ ಮತ್ತು ವಿಶ್ವಾಸ. ಅವರು ಮುಖ್ಯಮಂತ್ರಿಯಾಗಿದ್ದಾಗ ಯುವ ಶಾಸಕನಾಗಿದ್ದ ನನಗೆ ವಸತಿ ಮತ್ತು ನಗರಾಭಿವೃದ್ಧಿ ಖಾತೆಯನ್ನು ನೀಡಿ ನನ್ನ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿದರು. ಅವರ ಸಂಪುಟದಲ್ಲಿ ದೇವೇಗೌಡ, ಜೆ.ಎಚ್.ಪಟೇಲ್, ಎಂ.ಚಂದ್ರಶೇಖರ, ಸಿದ್ದರಾಮಯ್ಯ, ಸಿಂಧ್ಯಾ, ಪ್ರಕಾಶ, ಜಾಲಪ್ಪ ಮೊದಲಾದ ಕ್ರಿಯಾಶೀಲ ಸಚಿವರಿದ್ದರು.

ನಂತರದ ದಿನಗಳಲ್ಲಿ ವಿ.ಪಿ.ಸಿಂಗ್, ದೇವಿಲಾಲ್, ಲಾಲು ಪ್ರಸಾದ್ ಯಾದವ್, ಬಿಜು ಪಟ್ನಾಯಕ್ ಸೇರಿ ಜನತಾದಳ ಮಾಡಲು ತೀರ್ಮಾನ ಮಾಡಿದರು. 1989ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರಿ ಜನಸಮೂಹದ ಎದುರು ಬೊಮ್ಮಾಯಿ ನೇತೃತ್ವದಲ್ಲಿ ಜನತಾದಳದ ಉದಯವಾಯಿತು. ಆದರೆ, ದೇವೇಗೌಡರು 23 ಶಾಸಕರೊಡನೆ ಜನತಾ ಪಕ್ಷದಲ್ಲೇ ಉಳಿದರು.

ಐತಿಹಾಸಿಕ ತೀರ್ಪ: ಬದಲಾದ ಈ ರಾಜಕೀಯ ಪರಿಸ್ಥಿತಿಯಲ್ಲಿ, ನಮ್ಮ ಕೆಲವು ಶಾಸಕರು ವಿರೋಧಿ ಪಕ್ಷದ ಗುಂಪಿನೊಂದಿಗೆ ಕೈಜೋಡಿಸಿ, ಮುಖ್ಯಮಂತ್ರಿಯವರಲ್ಲಿ ತಮಗೆ ವಿಶ್ವಾಸವಿಲ್ಲ ಎಂದರು. ಆ ದಿನ ರಾತ್ರಿ ನಾನು ಬೊಮ್ಮಾಯಿ ಅವರ ಅಧಿಕೃತ ನಿವಾಸ ಬಾಲೂಬ್ರೂಯಿಯಲ್ಲಿ ಅವರ ಜೊತೆಗಿದ್ದೆ.

‘ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುತ್ತೇನೆ’ ಎಂದು ಬೊಮ್ಮಾಯಿ ಲಿಖಿತ ಮನವಿ ಸಲ್ಲಿಸಿದರೂ ರಾಜ್ಯಪಾಲರು ಪಕ್ಷಪಾತಿಯಾಗಿ ವರ್ತಿಸಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದರು. ರಾಜ್ಯದ ಜನತಾದಳ ನೇತೃತ್ವದ ಸರ್ಕಾರವನ್ನು 1989ರ ಏಪ್ರಿಲ್ 21ರಂದು ವಜಾಗೊಳಿಸಿದರು. ಬೊಮ್ಮಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರು. 1994 ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತು. ‘ಯಾವುದೆೇ ಚುನಾಯಿತ ಸರ್ಕಾರದ ಹಣೆಬರಹವನ್ನು ಅಲ್ಲಿನ ಶಾಸನಸಭೆ ಮಾತ್ರ ನಿರ್ಣಯಿಸಬೇಕು. ಒಂದೊಮ್ಮೆ ರಾಜ್ಯಪಾಲರು ರಾಜ್ಯ ಸರ್ಕಾರವನ್ನು ವಜಾಗೊಳಿಸಿದರೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಡಿಸಿ ಇದಕ್ಕೆ ಅನುಮೋದನೆ ಪಡೆಯಬೇಕು’ ಎಂದು ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನಪೀಠ ಮಹತ್ವಪೂರ್ಣ ತೀರ್ಪು ಕೊಟ್ಟಿತು.

ಆದರೆ, ಕಾಲ ಮಿಂಚಿದ್ದರಿಂದ ಈ ತೀರ್ಪು ಆಧರಿಸಿ ಬೊಮ್ಮಾಯಿ ಅವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ. ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಈ ತೀರ್ಪು ಅಮೂಲ್ಯವಾದ ಕಾಣಿಕೆ ನೀಡಿತು. ಸಂವಿಧಾನ ನಿರ್ವಪಕರ ಆಶಯವನ್ನು ಎತ್ತಿ ಹಿಡಿಯಿತು. ಇಂತಹ ಮಹತ್ವದ ತೀರ್ಪು ಬರಲು ಐದು ವರ್ಷಗಳ ಕಾಲ ಹೋರಾಟ ಮಾಡಿದ ಬೊಮ್ಮಾಯಿ ಅವರನ್ನು ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲ ನಾಯಕರುಗಳು ಒಂದಲ್ಲ ಒಂದು ಸಮಯದಲ್ಲಿ ಜ್ಞಾಪಿಸಿಕೊಳ್ಳುತ್ತಾರೆ. ಈ ಐತಿಹಾಸಿಕ ತೀರ್ಪಿನಿಂದಾಗಿ ಶಾಸನಸಭೆಗಳಿಗೆ ಹಿಂದೆಂದೂ ಇಲ್ಲದ ಪ್ರಾಮುಖ್ಯ ಹಾಗೂ ರಾಜ್ಯ ಸರ್ಕಾರಗಳಿಗೆ ಸ್ಥಿರತೆ ದೊರೆಯಿತು. ರಾಜ್ಯಪಾಲರನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ಮನತೋಚಿದಂತೆ ಕಿತ್ತೆಸೆಯುವ ಕೆಟ್ಟ ಸಂಪ್ರದಾಯಕ್ಕೆ ತೆರೆ ಎಳೆಯಿತು.

ಶಿಕ್ಷಣಕ್ಕೆ ದುಪ್ಪಟ್ಟು ಬಜೆಟ್ಟು: ಮುಖ್ಯಮಂತ್ರಿಯಾಗಿದ್ದ ದೇವೇಗೌಡ 1996ರಲ್ಲಿ ಅನಿರೀಕ್ಷಿತವಾಗಿ ದೇಶದ ಪ್ರಧಾನ ಮಂತ್ರಿಗಳಾದರು. ಅವರ ಸಚಿವ ಸಂಪುಟದಲ್ಲಿ ಬೊಮ್ಮಾಯಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವರಾದರು. ಕೇಂದ್ರ ಸರ್ಕಾರ ತನ್ನ ಬಜೆಟ್​ನಲ್ಲಿ ಸಾಮಾನ್ಯವಾಗಿ ಶಿಕ್ಷಣ ವಲಯಕ್ಕೆ ಶೇ3ರಷ್ಟು ಸಂಪನ್ಮೂಲವನ್ನು ಒದಗಿಸುತ್ತಿತ್ತು. ಆದರೆ, ಬೊಮ್ಮಾಯಿ ಇದನ್ನು ಶೇ.6ಕ್ಕೆ ಹೆಚ್ಚಿಸಿದರು. 1990ರಿಂದ 1996ರವರೆಗೆ ಬೊಮ್ಮಾಯಿ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಕಾಲಾನಂತರದಲ್ಲಿ ಮತ್ತೆ ಜನತಾದಳ ತನ್ನ ವಿಭಜನೆಯ ಪರಂಪರೆ ಮುಂದುವರಿಸಿತು. ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳ ಎಂದು ಕವಲು ಒಡೆಯಿತು. ಈ ನಡುವೆ ಜೆ.ಎಚ್.ಪಟೇಲ್ ಹಾಗೂ ರಾಮಕೃಷ್ಣ ಹೆಗಡೆ ನಿಧನರಾದರು.

ಬೊಮ್ಮಾಯಿ ಅವರ ಧರ್ಮಪತ್ನಿ ಗಂಗಮ್ಮ ಅನಾರೋಗ್ಯದಿಂದ 2002ರಲ್ಲಿ ಇಹಲೋಕ ತ್ಯಜಿಸಿದರು. ಬೊಮ್ಮಾಯಿ ಅವರ ಇಬ್ಬರು ಹೆಣ್ಣುಮಕ್ಕಳು ಗಂಡಂದಿರ ಜೊತೆ ನೆಮ್ಮದಿಯಿಂದಿದ್ದಾರೆ. ಇಬ್ಬರು ಗಂಡುಮಕ್ಕಳಲ್ಲಿ ಒಬ್ಬರು ಕೈಗಾರಿಕೋದ್ಯಮಿ, ಮತ್ತೊಬ್ಬರು ಇಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ. ಗಂಗಮ್ಮ ಬೊಮ್ಮಾಯಿ ಅವರ ಸೋದರಮಾವನ ಮಗಳಾದರೂ, ಧರ್ಮಪತ್ನಿಯಾಗಿ ಪತಿಯ ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದರು. ಗ್ರಾಮೀಣ ಪ್ರದೇಶದಿಂದ ಬಂದಿದ್ದರೂ ಬೊಮ್ಮಾಯಿಯವರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೊಮ್ಮಾಯಿ ದಂಪತಿ ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಬೊಮ್ಮಾಯಿ ತಮ್ಮ ತಾಯಿ ಶಿವಮ್ಮ ಅವರನ್ನು ನೆನೆದು ಭಾವುಕರಾದ ಹಲವು ಪ್ರಸಂಗಗಳು ನನ್ನ ನೆನಪಿನಲ್ಲಿದೆ.

ಆತ್ಮೀಯರೆಲ್ಲ ತೊರೆದು ಹೋದ ಮೇಲೆ ಬೊಮ್ಮಾಯಿ ಏಕಾಂಗಿಯಾದರು. ಮನೆಯಲ್ಲಿ ಬಿದ್ದು ಮೂಳೆ ಮುರಿದಿತ್ತು. ಅನೇಕ ಸಲ ಅವರನ್ನು ಈ ಸಂದರ್ಭದಲ್ಲಿ ನಾನು ಹೋಗಿ ನೋಡಿದ್ದೇನೆ. ಎಂದೂ ತಮ್ಮ ನೋವನ್ನು ಕುರಿತು ಮಾತನಾಡಿದವರಲ್ಲ. ದೇಶದ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದರು. 2007 ಅಕ್ಟೋಬರ್ 10ರಂದು ಬೊಮ್ಮಾಯಿ ಇಹಲೋಕ ತ್ಯಜಿಸಿದರು.

(ಲೇಖಕರು ಮಾಜಿ ಸಚಿವರು ಹಾಗೂ ಶಾಸಕರು)

(ಮಾಹಿತಿ: ಚಂದ್ರಶೇಖರ ಬೆಳಗೆರೆ ಅವರ ಕೃತಿ ‘ರಾಯಿಸ್ಟ್ ಬೊಮ್ಮಾಯಿ’)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net