

ಕೋಟ್ಯಂತರ ಜನರನ್ನು ಕಡುಬಡತನದಿಂದ ಮೇಲಕ್ಕೆತ್ತುವುದರಿಂದ ಹಿಡಿದು ಭಾರತದ ಅಸ್ಮಿತೆಯನ್ನು ಜಾಗತಿಕವಾಗಿ ಪ್ರತಿಫಲನಗೊಳಿಸಿದ್ದು, ವಿದೇಶ ಬಂಡವಾಳ ಹರಿದು ಬಂದಿದ್ದು, ಔದ್ಯಮಿಕ ಕ್ಷೇತ್ರ ಮುನ್ನಡೆಸಿದ್ದು, ದೇಶದ ಗ್ರಾಮೀಣ ಭಾಗದ ಲಕ್ಷಾಂತರ ಜನತೆಗೆ ಆರ್ಥಿಕ ಒಳಗೊಳ್ಳುವಿಕೆಯ ಫಲ ದೊರೆತಿದ್ದು, ದೇಶದ ಭದ್ರತೆಯ ವಿಷಯದಲ್ಲಿನ ಕಟ್ಟುನಿಟ್ಟಾದ ನೀತಿ, ಜಗತ್ತೇ ಬೆರಗುಗೊಳ್ಳುವಂತೆ ಕೋವಿಡ್-19 ರ ಲಸಿಕಾ ಅಭಿಯಾನ ಕೈಗೊಂಡಿದ್ದು... ಇತ್ಯಾದಿ ಕ್ರಮಗಳು ಸಾಧನೆಗಳ ಪರ್ವ. ನರೇಂದ್ರ ಮೋದಿ ನೇತೃತ್ವದ ಟೀಂ ಇಂಡಿಯಾಕ್ಕೆ ದೊರಕಿದ ಇಂತಹ ಗೆಲುವು ಅಭೂತಪೂರ್ವ! ಇದು ಮೋದಿ ನಾಯಕತ್ವದ ಮೂಲಧ್ಯೇಯಗಳಾದ ಸೇವೆ, ಸುಗಮ ಆಡಳಿತ ಹಾಗೂ ಬಡವರ ಕಲ್ಯಾಣದ ಸ್ಪಷ್ಟ ಪ್ರತಿಫಲನವಾಗಿದೆ.
ಬ್ಯಾಂಕಿಂಗ್ ಜಾಲದ ಗೆಲುವು: ಈ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣವೇ ಪರಿಚಯಿಸಿದ ಪ್ರಧಾನಮಂತ್ರಿ ಜನಧನ್ ಯೋಜನೆ ಪರಿಣಾಮವಾಗಿ ಬ್ಯಾಂಕಿಂಗ್ ಕ್ಷೇತ್ರವು ದೇಶದ 45 ಕೋಟಿ ಜನರಿಗೆ (ಮೇ, 22-2022ರವರೆಗೆ )ತೆರೆದುಕೊಂಡಿದೆ. ಅಲ್ಲದೆ, 1,67,145 ಕೋಟಿ ರೂ. ಠೇವಣಿ ಬ್ಯಾಂಕುಗಳಲ್ಲಿ ಲಭ್ಯವಿದೆ. ದೇಶದ ಗ್ರಾಮೀಣ ಭಾಗದ ಜನತೆ ಬ್ಯಾಂಕ್ ವ್ಯವಹಾರ ಜಾಲದಲ್ಲಿ ದಾಖಲಾಗಿ, ಸರ್ಕಾರದ ನೇರ ಹಣ ವರ್ಗಾವಣೆಗಳಂತಹ ಪರಿಣಾಮಕಾರಿ ಫಲಾನುಭವಕ್ಕೆ ಸಾಕ್ಷಿಯಾದರು.
ಹೊಗೆರಹಿತ ಆರೋಗ್ಯ ಭಾಗ್ಯ: ದೇಶದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಕುಟುಂಬದ ಅಡುಗೆ ಕಾರ್ಯಕ್ಕೆ ಕಾಡುಕಟ್ಟಿಗೆ, ಪಶುಗಳ ಸಗಣಿ ಕುಳ್ಳುಗಳೇ ಪರಂಪರಾಗತ ಅನಿವಾರ್ಯ ಇಂಧನ ಸಾಧನಗಳಾಗಿದ್ದವು. ಇದು ಮಹಿಳೆಯರ ಆರೋಗ್ಯಕ್ಕೆ ಮಾರಕವಾಗಿತ್ತು. ದೇಶದ ಗೃಹಿಣಿಯರ, ವಿಶೇಷವಾಗಿ ಗ್ರಾಮೀಣ ಬಡ ಹೆಣ್ಣುಮಕ್ಕಳ ಕಾಳಜಿಯೇ ಪ್ರಧಾನಿ ಉಜ್ವಲ ಯೋಜನೆಯ ಕಲ್ಪನೆಯಾಗಿ ಮೂಡಿಬಂತು. ಇದುವರೆಗೆ ದೇಶದಲ್ಲಿ 8 ಕೋಟಿ ಹೊಸ ಅಡುಗೆ ಅನಿಲದ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಾಗಿ, 2016ರಲ್ಲಿದ್ದ ಅಡುಗೆ ಅನಿಲ ಬಳಕೆಯು ಶೇ. 62ರಿಂದ ಶೇ. 99.8ಕ್ಕೆ ಏರಿದೆ. 2022-23 ರ ಆಯವ್ಯಯದಲ್ಲಿ ಇನ್ನೂ 1 ಕೋಟಿ ಹೊಸ ಅಡುಗೆ ಅನಿಲದ ಸಂಪರ್ಕದ ಘೊಷಣೆ ಮಾಡಲಾಗಿದೆ. ಒಟ್ಟಾರೆ ಅಡುಗೆ ಮನೆಗಳನ್ನು ಹೊಗೆಮುಕ್ತವಾಗಿಸಿ ಗ್ರಾಮೀಣ ಮಹಿಳೆಯರನ್ನು ವಿಷಕಾರಿ ಹೊಗೆಯಿಂದ ಮುಕ್ತಗೊಳಿಸಲಾಗಿದೆ.
ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಯೋಜನೆಯ ಅನುಷ್ಠಾನದಿಂದ ದೇಶದ ಆರೋಗ್ಯ ಕ್ಷೇತ್ರ ವ್ಯಾಪಕವಾಗಿ ಜನತೆಯ ಮನೆ ಬಾಗಿಲಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯಗಳ ಜಂಟಿ ಅನುದಾನಗಳ ಆಧಾರಿತ ಈ ಯೋಜನೆ ದೇಶದ 10 ಕೋಟಿ ಬಡ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಗುರಿ ಇಟ್ಟುಕೊಂಡಿದೆ.
ರೈತ ದೇಶದ ಬೆನ್ನೆಲುಬು: ದೇಶದ ಅನ್ನದಾತ ರೈತರ ಬಾಳಿಗೆ ಹೊಸ ಬೆಳಕು ನೀಡುವ ಪ್ರಧಾನಿ ಮೋದಿಯವರ ಕಾಳಜಿಯು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ರೂಪ ತಳೆಯಲು ಕಾರಣವಾಯಿತು. ಕೇಂದ್ರ ಕೃಷಿ ಇಲಾಖೆಯ ಅಡಿಯಲ್ಲಿ ವಿವಿಧ ಅನುಷ್ಠಾನ ಘಟಕಗಳ ಮೂಲಕ ದೇಶದ ಎಲ್ಲ ರಾಜ್ಯಗಳ ರೈತರ ಜೀವನಕ್ಕೆ ಭದ್ರತೆ ಒದಗಿಸುವ ಬೃಹತ್ ಬೆಳೆ ವಿಮಾ ಯೋಜನೆ ಇದಾಗಿದೆ. ಅಲ್ಲದೆ, 30 ಕೋಟಿ ಸದಸ್ಯರುಗಳ ವಂತಿಕೆ ದಾಖಲಿಸಿದ ಹಾಗೂ 2016 ರಿಂದ 1,700 ಕೋಟಿ ರೂ. ವಂತಿಕೆಗೆ 95,000 ಕೋಟಿ ರೂ.ಗಳಿಗಿಂತಲೂ ಹೆಚ್ಚಿಗೆ ವಿಮಾ ಹಣ ನೀಡಿದ, ಜಾಗತಿಕವಾಗಿ ಮೂರನೇ ಅತಿ ದೊಡ್ಡ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 12 ಕೋಟಿ ರೈತರು ಕನಿಷ್ಠ ಆದಾಯದ ಬೆಂಬಲ ಪಡೆದು, ಒಟ್ಟಾರೆ ಮೋದಿ ಸರ್ಕಾರಕ್ಕೆ ರೈತ ಪ್ರಥಮಾದ್ಯತೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸಿದೆ.
ಪ್ರತಿಯೊಬ್ಬರಿಗೂ ಸೂರು: ದೇಶದ ಒಬ್ಬನೇ ಒಬ್ಬ ವ್ಯಕ್ತಿಯೂ ವಿಕಾಸದ ಮಾರ್ಗದಲ್ಲಿ ಹಿಂದೆ ಉಳಿಯಬಾರದೆಂಬ ಧ್ಯೇಯಸಾಧನೆಗೆ ನಿರಂತರ ಪ್ರಯತ್ನವೇ ಈ ಸರ್ಕಾರದ ಸಂಕಲ್ಪ. 31ರ ಮಾರ್ಚ್ ಅಂತ್ಯದವರೆಗೆ 2 ಕೋಟಿ ಗುಣಮಟ್ಟದ ಮನೆಗಳ ನಿರ್ಮಾಣ ಸರ್ಕಾರದ ಗುರಿ. 2015ರ ವಸತಿ ಯೋಜನೆಗಳನ್ವಯ ಈಗಾಗಲೇ 2.38 ಕೋಟಿ ಮನೆಗಳ ನಿರ್ಮಾಣ ಪ್ರಧಾಮಂತ್ರಿ ಆವಾಸ್ ಯೋಜನೆಯಡಿ ನಿರ್ವಣಗೊಂಡಿದೆ.
ಹರ್ ಘರ್ ನಲ್ ಜಲ್: ಗ್ರಾಮೀಣ ಜನತೆ ನೀರನ್ನು ದೂರದ ಮೂಲಗಳಿಂದ ಹೊತ್ತು ತರುತ್ತಿದ್ದ ದೃಶ್ಯಗಳನ್ನು ದಶಕಗಳಿಂದ ನಾವು ಕಾಣುತ್ತಿದ್ದೆವು. 2019ರ ಆಗಸ್ಟ್ 15 ರಂದು ಪ್ರಧಾನಿ ಮೋದಿ ಜಲಜೀವನ ಮಿಶನ್ ಯೋಜನೆ ಘೊಷಿಸುವ ಸಮಯದಲ್ಲಿ ದೇಶದ 19 ಕೋಟಿ ಮನೆಗಳಲ್ಲಿ ಕೇವಲ 3.29 ಕೋಟಿ ಮನೆಗಳಿಗೆ ನಲ್ಲಿಯ ನೀರಿನ ಸೌಲಭ್ಯವಿತ್ತು. 2024 ರ ಹೊತ್ತಿಗೆ ದೇಶದ ಪ್ರತಿ ಮನೆಗೆ ನಲ್ಲಿಯ ನೀರಿನ ಬೃಹತ್ ಯೋಜನೆಯ ಅನುಷ್ಠಾನದ ಭಾಗವಾಗಿ ಇಲ್ಲಿಯವರೆಗೆ 6.33 ಕೋಟಿ ಮನೆಗಳಿಗೆ ನಲ್ಲಿಯ ನೀರಿನ ಸಂಪರ್ಕ ಒದಗಿದ್ದು, ಒಟ್ಟು ಈ ಸೌಲಭ್ಯ 9.5 ಕೋಟಿ ಮನೆಗಳಿಗೆ ತಲುಪಿದೆ.
ರಾಷ್ಟ್ರೀಯ ಭದ್ರತೆಯಲ್ಲಿಲ್ಲ ರಾಜಿ: ರಾಷ್ಟ್ರದ ಭದ್ರತೆ ಪ್ರಥಮಾದ್ಯತೆ ಹಾಗೂ ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲವೆಂಬುದು ಈ ಸರ್ಕಾರದ ಭದ್ರತಾ ನೀತಿಯಾಗಿದೆ. ನಾವು ಯಾರನ್ನೂ ತಡವುವುದಿಲ್ಲ. ಆದರೆ, ತಡವಿದವರನ್ನು ಸುಮ್ಮನೆ ಬಿಡುವುದಿಲ್ಲವೆಂಬ ಪ್ರಧಾನಿ ಮೋದಿಯವರ ದಿಟ್ಟತನವನ್ನು, ಉರಿಯಲ್ಲಿ ನಡೆದ ಸರ್ಜಿಕಲ್ ಕಾರ್ಯಾಚರಣೆ, ಬಾಲಾಕೋಟ್ ಮೇಲಿನ ಕಾರ್ಯಾಚರಣೆ ದೇಶದ ಭದ್ರತೆ ಕೆಣಕಿದವರಿಗೆ ಸರಿಯಾಗಿ ಪಾಠ ಕಲಿಸಿದ್ದರ ಮೂಲಕ ಜಗತ್ತೇ ಕಂಡಿದೆ.
ಸ್ವಚ್ಛ ಭಾರತ ಅಭಿಯಾನ: ನಿರ್ಮಲ ಪರಿಸರದ ಕಲ್ಪನೆಯ ಸ್ವಚ್ಛ ಭಾರತ ಯೋಜನೆಯು ದೇಶದ ಒಂದು ಅಭೂತಪೂರ್ವ ಜನಾಂದೋಲನವಾಗಿ ಪರಿವರ್ತನೆಗೊಂಡ ಉದಾಹರಣೆ ಬೇರೊಂದಿಲ್ಲ. ಬಯಲು ಶೌಚಮುಕ್ತ ಭಾರತವನ್ನಾಗಿಸುವ ಈ ಅಭಿಯಾನದ ಮೂಲಕ ಈಗಾಗಲೇ 100 ಮಿಲಿಯನ್ ಶೌಚಾಲಯಗಳು ನಿರ್ವಣವಾಗಿದ್ದು, ಇದರಿಂದ ದೇಶವ್ಯಾಪಿ 6,30,000 ಗ್ರಾಮಗಳಲ್ಲಿ 5 ಮಿಲಿಯನ್ ಜನರಿಗೆ ಇದರ ಲಾಭ ತಲುಪಿದೆ.
ಭವಿಷ್ಯದ ಭದ್ರತೆ: ಮಾರ್ಚ್ 2022ರವರೆಗೆ ಸುಮಾರು 4 ಕೋಟಿ ಸಂಘಟಿತ ಕ್ಷೇತ್ರದ ಕಾರ್ವಿುಕರು ವಿಶೇಷವಾಗಿ ಬಡವರು ಅಟಲ್ ಪಿಂಚಣಿ ಯೋಜನೆಗೆ ಸದಸ್ಯತ್ವ ದಾಖಲಿಸಿದ್ದಾರೆ. 2015ರಲ್ಲಿ ತರಲಾದ ಈ ಯೋಜನೆಯಡಿ ಪ್ರತಿ ನೋಂದಾಯಿತ ಸದಸ್ಯನೂ 60 ವರ್ಷಗಳ ವಯೋಹಂತದ ನಂತರ ರೂ. 1 ಸಾವಿರದಿಂದ ರೂ. 5 ಸಾವಿರದ ವರೆಗೆ ಜೀವಮಾನದ ಪಿಂಚಣಿ ಪಡೆಯುವ ಅರ್ಹತೆ ಹೊಂದುತ್ತಾನೆ.
ಭಾರತದ ಜೋಡಣೆ: ಪ್ರತಿ ದಿನ 36 ಕಿ.ಮೀ. ಹೊಸ ಹೆದ್ದಾರಿ ನಿರ್ಮಾಣ ಯೋಜನೆಗಳನ್ನು ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಇಲಾಖೆ ಕಾರ್ಯಗತಗೊಳಿಸುತ್ತಿದೆ. ಹಿಂದಿನ ಸರ್ಕಾರದ ಪ್ರತಿ ದಿನದ ಸರಾಸರಿ 11 ಕಿ. ಮೀ. ಹೊಸ ಹೆದ್ದಾರಿ ನಿರ್ವಣದ ಹೋಲಿಕೆಯಲ್ಲಿ ಇದೊಂದು ದಾಖಲೆಯ ಸಾಧನೆಯಾಗಿದೆೆ. ಪ್ರಧಾನಿ ಗ್ರಾಮ ಸಡಕ್ ಯೋಜನೆ ಒಂದರಲ್ಲಿ 2014-15 ರಿಂದೀಚೆಗೆ 3.23 ಲಕ್ಷ ಕಿ. ಮೀ. ರಸ್ತೆ ನಿರ್ವಣದ ಸಾಧನೆ ಒಂದು ಹೆಗ್ಗುರುತಾಗಿದೆ. ಇದರಿಂದ ದೇಶದ ಉದ್ದಗಲಕ್ಕೂ ಆರ್ಥಿಕ ಚಟುವಟಿಕೆಗಳ ಹೊಸ ಪರ್ವದ ಆರಂಭಕ್ಕೆ ಕಾರಣೀಭೂತವಾಗಿದೆ.
ಪ್ರಧಾನಿ ಮೋದಿ ಇಂದು ಜಾಗತಿಕ ಮಟ್ಟದ ನಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ದೇಶದ ಜನತೆ ಈ ಸರ್ಕಾರದ ದೃಢವಾದ ಹಾಗೂ ರಚನಾತ್ಮಕವಾದ ವಿದೇಶಿ ನೀತಿಯಿಂದ ಉಂಟಾದ ಜಾಗತಿಕ ಸದ್ಭಾವನೆಯ ಲಾಭ ಪಡೆಯುತ್ತಿರುವುದು ನಿಚ್ಚಳವಾಗಿದೆ. ಜಪಾನ್ನೊಂದಿಗಿನ ಸ್ನೇಹವನ್ನು ಮೋದಿ ಮತ್ತಷ್ಟು ಗಟ್ಟಿಗೊಳಿಸಿದ್ದು, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳೊಂದಿಗಿನ ವಿಶ್ವಾಸಪೂರ್ವ ನಡೆಗಳು ವ್ಯೂಹಾತ್ಮಕ ವಿದೇಶಿ ನೀತಿಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಅರ್ಥಪೂರ್ಣ ಹಾಗೂ ವ್ಯಾವಹಾರಿಕ ಆಧಾರಿತ ವಿದೇಶಾಂಗ ನೀತಿಯು ಕಳೆದ 8 ವರ್ಷಗಳಲ್ಲಿ 500 ಬಿಲಿಯನ್ ಡಾಲರುಗಳ ವಿದೇಶಿ ನೇರ ಬಂಡವಾಳ ಹರಿದು ಬಂದಿದ್ದರಲ್ಲಿ ಪ್ರತಿಫಲನಗೊಂಡಿದ್ದಲ್ಲದೆ, 2021-22 ರ ಒಂದೇ ವರ್ಷದ ವಿದೇಶಿ ಬಂಡವಾಳ 83.57 ಬಿಲಿಯನ್ ಆಗಿದೆ. ಇದು ಯುಪಿಎ ಆಡಳಿತದ ಲೆಕ್ಕಕ್ಕೆ ಹೋಲಿಸಿದಲ್ಲಿ ಶೇ. 62ರಷ್ಟು ಹೆಚ್ಚಾಗಿರುವುದು ಮೋದಿ ಪ್ರಣೀತ ವಿದೇಶಾಂಗ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ.
ದಿಟ್ಟ ನಿರ್ಧಾರಗಳು: ರಾಷ್ಟ್ರೀಯ ಹಿತದಲ್ಲಿರುವ ಯಾವುದೇ ಕಠಿಣ ಹಾಗೂ ನಿಷ್ಠುರ ನಿರ್ಧಾರಗಳ ಸಂದರ್ಭದಲ್ಲಿ ಯಾವುದೇ ಹಿಂಜರಿತವಿಲ್ಲದೆ, ಕಾರ್ಯಗತಗೊಳಿಸುವುದೇ ಈ ಸರ್ಕಾರದ ವೈಶಿಷ್ಟ್ಯವಾಗಿದೆ. ತ್ರಿವಳಿ ತಲಾಖ್ ಹಾಗೂ ಸಂವಿಧಾನದ ಪರಿಚ್ಛೇದ 370 ರದ್ದತಿಯಂತಹ ಐತಿಹಾಸಿಕ ಕ್ರಮಗಳು ಭವಿಷ್ಯದಲ್ಲಿ ದೇಶದ ಜನತೆಗೆ ಹಿತ ತರಲಿವೆ.
ಭವಿಷ್ಯದತ್ತ ದೃಷ್ಟಿ: ಕ್ಷಿಪ್ರ ತಾಂತ್ರಿಕ ಮುನ್ನಡೆಯ ಸಾಧನೆಯಿಂದ 21ನೇ ಶತಮಾನ ಭಾರತದ್ದಾಗಲಿದೆ. ಈಗಾಗಲೇ 1.5 ಬಿಲಿಯನ್ ಮೊಬೈಲ್ಫೋನ್ ಬಳಕೆದಾರನ್ನು ಹೊಂದಿದ ಭಾರತ ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ 2ನೇ ಅತಿ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕೆ ದೇಶವಾಗಲಿದೆ. ಇದರಿಂದ ಜನರು ಕೇವಲ ಮೊಬೈಲ್ಫೋನ್ನ ಒಂದು ಸ್ಪರ್ಶದಿಂದ ಹಲವಾರು ಸೇವೆಗಳ ಉಪಯೋಗ ಪಡೆಯುವುದರಿಂದ ದೇಶದ ಪ್ರಗತಿಯ ಚಾಲನೆ ಮತ್ತಷ್ಟು ವೇಗ ಪಡೆಯಲಿದೆ. ಭಾರತದಲ್ಲಿ ಉತ್ತಮ ಡಿಜಿಟಲ್ ಪೇಮೆಂಟ್ ವಾತಾವರಣ ಸೃಷ್ಟಿಸುವಲ್ಲಿ ಹಲವಾರು ಯೋಜನೆಗಳನ್ನು ಈ ಸರ್ಕಾರ ಅನುಷ್ಠಾನಗೊಳಿಸುತ್ತಿದೆ.
ಪ್ರಗತಿಯ ಮಾರ್ಗದಲ್ಲಿ ಕೆಲವು ಹೋರಾಟಗಳ ಗೆಲುವಿನಲ್ಲಿ ಹಿನ್ನಡೆ ಉಂಟಾಗಿದ್ದರೂ ದೇಶದ ನಾಗರಿಕರ ಹಿತ ಸಾಧನೆಯಲ್ಲಿ ಯುದ್ಧೋಪಾದಿಯ ಗೆಲುವು ಅಷ್ಟೇ ಸತ್ಯವಾಗಿದೆ. ಈ ಗೆಲುವಿನಲ್ಲಿ ಟೋಕಿಯೋ ಒಲಿಂಪಿಕ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಹೊಸ ಎತ್ತರ, ಕೊವಿಡ್-19 ರ ಸಾಂಕ್ರಾಮಿಕ ತಡೆಗೆ ನಡೆದ ಜಾಗತಿಕ ಬೃಹತ್ ಲಸಿಕಾ ಅಭಿಯಾನ, ಮುದ್ರಾ ಯೋಜನೆಯಲ್ಲಿ ಕಾರ್ಪೇರೇಟ್ ವಲಯ ಹಾಗೂ ಕೃಷಿ ವಲಯದಲ್ಲಿ ಸಣ್ಣ ಹಾಗೂ ಅತಿ ಸಣ್ಣ ಔದ್ಯಮಿಕ ಚಟುವಟಿಕೆಗಳ ವಿಕಾಸಕ್ಕೆ ನೀಡಿದ 34 ಕೋಟಿ ಸಾಲ ಸೌಲಭ್ಯ ಹಾಗೂ ಇನ್ನೂ ಹಲವಾರು ಇಂತಹ ಕ್ರಮಗಳು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ಪುಟಿದೇಳುವಂತೆ ಮಾಡುವಲ್ಲಿ ಪ್ರಮುಖವಾಗಿವೆ. ಇದೆಲ್ಲಕ್ಕಿಂತ ಮಿಗಿಲಾಗಿರುವ ಯಶೋಗಾಥೆ ಎಂದರೆ, ನಾಗರಿಕರ ಉನ್ನತಿಗಾಗಿ ನಮ್ಮ ದೇಶವನ್ನು ಜಾಗತಿಕವಾಗಿ ಬೆಳೆಸುವ ನಮ್ಮ ಹಸಿವು ಹಾಗೂ ಉತ್ಸಾಹದ ಸೆಲೆ ನಿರಂತರವಾಗಿರುವುದು. ಈಗ ಈ ಪ್ರಗತಿಯ ಆಟದ ಆರಂಭ ಮಾತ್ರ; ಗುರಿ ಇನ್ನೂ ಮುಂದಿದೆ!
(ಲೇಖಕರು ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು, ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವರು)