

ಭಾರತದ ರಾಷ್ಟ್ರಪತಿಯಾಗಿ ದ್ರೌಪದಿ ಮುಮು ಅವರು ಚುನಾಯಿತರಾಗಿರುವುದು ದೇಶದ ಪ್ರಜಾಪ್ರಭುತ್ವದಲ್ಲಿ ಐತಿಹಾಸಿಕ ಘಟನೆ. ಒಡಿಶಾದ ಅತ್ಯಂತ ಬಡ ಬುಡಕಟ್ಟು ಹಿನ್ನೆಲೆಯಿಂದ, ಅದೂ ಅತ್ಯಂತ ಹಿಂದುಳಿದ ಸಂತಾಲಿ ಸಮುದಾಯದಿಂದ, ಅತ್ಯುನ್ನತ ಸಾಂವಿಧಾನಿಕ ಹುದ್ದೆಯವರೆಗಿನ ಪಯಣವು ಅವರ ಹೋರಾಟಗಳು, ದಿಟ್ಟತನ ಮತ್ತು ದೃಢನಿಶ್ಚಯದ ಪ್ರತೀಕವಾಗಿದೆ. ಅವರನ್ನು ‘ಪ್ರಥಮ ಪ್ರಜೆ’ಯಾಗಿ ಉನ್ನತ ಸ್ಥಾನಕ್ಕೇರಿಸಿರುವುದು, ಇಡೀ ದೇಶಕ್ಕೆ ಅತೀವ ಸಂತಸದ ಮತ್ತು ಸಂತೃಪ್ತಿಯ ವಿಷಯವಾಗಿದೆ, ಅದಕ್ಕಿಂತ ಹೆಚ್ಚಾಗಿ ಬುಡಕಟ್ಟು ಸಮುದಾಯಕ್ಕೆ. ಬುಡಕಟ್ಟು ಮಹಿಳೆಯೊಬ್ಬರು ಈ ನೆಲದ ಅತ್ಯುನ್ನತ ಸ್ಥಾನಕ್ಕೇರುವುದನ್ನು ನೋಡಲು ರಾಷ್ಟ್ರವು 70 ವರ್ಷಗಳ ಕಾಲ ಕಾಯಬೇಕಾಯಿತು. ಇದು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮತ್ತೊಂದು ಗೆಲುವನ್ನು ಸೂಚಿಸುತ್ತದೆ.
ಭಾರತದ ಬುಡಕಟ್ಟು ಜನಸಂಖ್ಯೆಯು ನಮ್ಮ ಒಟ್ಟು ಜನಸಂಖ್ಯೆಯ ಶೇ.9 ರಷ್ಟಿದೆ. ನಮ್ಮ ಸ್ವಾತಂತ್ರ್ಯ ಆಂದೋಲನದಲ್ಲಿ ಅವರ ಹೋರಾಟ, ತ್ಯಾಗಗಳು ಅಮೂಲ್ಯ ಮತ್ತು ಅವಿಸ್ಮರಣೀಯ. ಆದರೆ ದುಃಖದ ಸಂಗತಿಯೆಂದರೆ, ಸ್ವಾತಂತ್ರಾ್ಯನಂತರ ಯಾವುದೇ ಸರ್ಕಾರಗಳು ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಮತ್ತು ಉನ್ನತಿಗಾಗಿ ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಖಾತ್ರಿಪಡಿಸುವ ಮೂಲಕ ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ, ಹಾಗಾಗಿ ಅವರು ಸೂಕ್ತ ರಾಜಕೀಯ ಪ್ರಾತಿನಿಧ್ಯವಿಲ್ಲದೆಯೇ ವಂಚಿತರಾದರು.
ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮೊದಲ ಬಾರಿಗೆ ಆದಿವಾಸಿ ಸಮುದಾಯದ ಆಶೋತ್ತರಗಳನ್ನು ಈಡೇರಿಸಲು ಗಂಭೀರ ಕ್ರಮಗಳನ್ನು ಕೈಗೊಳ್ಳಲಾಯಿತು. 1999ರಲ್ಲಿ ಅಟಲ್ಜಿ, ಬುಡಕಟ್ಟು ಸಮಾಜದ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಿದರು. ಆನಂತರ 2003ರಲ್ಲಿ 89ನೇ ಸಂವಿಧಾನ ತಿದ್ದುಪಡಿಯ ಮೂಲಕ ಪರಿಶಿಷ್ಟ ಆದಿವಾಸಿಗಳ ರಾಷ್ಟ್ರೀಯ ಆಯೋಗವನ್ನು ರಚಿಸಲಾಯಿತು. ವಾಜಪೇಯಿ ಅವರಿಂದ ಆರಂಭವಾದ ಬುಡಕಟ್ಟು ಸಮುದಾಯಗಳ ಪರಿವರ್ತನೆ ಕಾರ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದುವರಿಸಿಕೊಂಡು ಬರುತ್ತಿದ್ದಾರೆ.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್’ ಎಂಬ ಪ್ರತಿಜ್ಞೆಯ ಮಾರ್ಗದರ್ಶನದ ಮೂಲಕ ನರೇಂದ್ರ ಮೋದಿ ಸರ್ಕಾರವು ಬುಡಕಟ್ಟು ಜನರ ಆಶೋತ್ತರ ಮತ್ತು ಭರವಸೆಗಳನ್ನು ಈಡೇರಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಕಳೆದ ಎಂಟು ವರ್ಷಗಳಲ್ಲಿ, ಬುಡಕಟ್ಟು ಸಮುದಾಯಗಳ ಕಲ್ಯಾಣ ಮತ್ತು ಪ್ರಗತಿಗೆ ಸಂಬಂಧಿಸಿದ ಯೋಜನೆಗಳಿಗೆ ಬಜೆಟ್ ಹಂಚಿಕೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ. 2021-22ರಲ್ಲಿ ಬುಡಕಟ್ಟು ಉಪ ಯೋಜನೆಯ ಬಜೆಟನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ, ಅಂದರೆ 21,000 ಕೋಟಿ ರೂ.ಗಳಿಂದ 86,000 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ಇಂದು 1.28 ಕೋಟಿ ಆದಿವಾಸಿಗಳ ಮನೆಗಳಿಗೆ ಕೊಳಾಯಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 38 ಲಕ್ಷ ಮನೆಗಳು ಮತ್ತು 1.45 ಕೋಟಿ ಶೌಚಗೃಹಗಳನ್ನು ನಿರ್ವಿುಸಲಾಗಿದೆ ಮತ್ತು 82 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ಗಳನ್ನು ಬುಡಕಟ್ಟು ಜನರಿಗೆ ವಿತರಿಸಲಾಗಿದೆ. ಅಂತೆಯೇ, ಆದಿವಾಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಏಕಲವ್ಯ ಮಾದರಿ ಶಾಲೆಗಳ ಬಜೆಟ್ ಅನ್ನು 278 ಕೋಟಿ ರೂ.ಗಳಿಂದ 1,418 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದ್ದು, ಆದಿವಾಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ನಿಧಿಯ ಹಂಚಿಕೆಯನ್ನು 978 ಕೋಟಿ ರೂ.ಗಳಿಂದ 2,546 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಉದ್ಯಮಶೀಲತೆ ಅಭಿವೃದ್ಧಿ ಉಪಕ್ರಮದ ಭಾಗವಾಗಿ, 327 ಕೋಟಿ ರೂಪಾಯಿ ವೆಚ್ಚದಲ್ಲಿ 3,110 ವನ ಧನ ವಿಕಾಸ ಕೇಂದ್ರಗಳು ಮತ್ತು 53,000 ವನ ಧನ ಸ್ವ-ಸಹಾಯ ಗುಂಪುಗಳನ್ನು ಸ್ಥಾಪಿಸಲಾಗಿದೆ.
ಆದಿವಾಸಿಗಳು ನೆಲೆಸಿರುವ ಪ್ರದೇಶಗಳು ಗಣಿಗಾರಿಕೆ ಚಟುವಟಿಕೆಗಳಿಂದ ಹೆಚ್ಚು ಬಾಧಿತವಾಗಿವೆ. ಆದರೆ ಗಣಿಗಾರಿಕೆ ಚಟುವಟಿಕೆಗಳಿಂದ ಬರುವ ಆರ್ಥಿಕ ಲಾಭವನ್ನು ಆದಿವಾಸಿ ಜನರೊಂದಿಗೆ ಎಂದಿಗೂ ಹಂಚಿಕೊಂಡಿರಲಿಲ್ಲ. ಈ ಕೊರತೆ ನೀಗಿಸಲು, ಮೋದಿ ಸರ್ಕಾರವು ಜಿಲ್ಲಾ ಖನಿಜ ನಿಧಿಯನ್ನು ಸ್ಥಾಪಿಸಿತು, ಇದರಿಂದಾಗಿ ಗಣಿಗಾರಿಕೆ ಚಟುವಟಿಕೆಗಳಿಂದ ಬರುವ ಶೇ.30ರಷ್ಟು ಆದಾಯವನ್ನು ಆದಿವಾಸಿಗಳು ನೆಲೆಸಿರುವ ಪ್ರದೇಶಗಳ ಅಭಿವೃದ್ಧಿಗೆ ವಿನಿಯೋಗಿಸಬಹುದು. ಈವರೆಗೆ 57,000 ಕೋಟಿ ರೂಪಾಯಿ ನಿಧಿ ಸಂಗ್ರಹವಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಬುಡಕಟ್ಟು ಸಮುದಾಯಗಳು ತಯಾರಿಸಿದ ಉತ್ಪನ್ನಗಳ ಮಾರುಕಟ್ಟೆ ಮತ್ತು ಮಾರಾಟವನ್ನು ನೋಡಿಕೊಳ್ಳುವ ಟ್ರೖೆಫೆಡ್ (TRIFED) ನಿಂದ ಆರಂಭಿಸಿರುವ ಟ್ರೖೆಬ್ಸ್ ಇಂಡಿಯಾ ಮಳಿಗೆಗಳ ಸಂಖ್ಯೆಯನ್ನು 29 ರಿಂದ 116 ಕ್ಕೆ ಹೆಚ್ಚಳ ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ಶ್ರೀಮಂತ ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯನ್ನು ರಾಷ್ಟ್ರಮಟ್ಟದಲ್ಲಿ ಮುಖ್ಯವಾಹಿನಿಗೆ ತಂದಿದ್ದಾರೆ. ಆದಿವಾಸಿಗಳ ಕಲೆಗಳು, ಸಾಹಿತ್ಯ, ಸಾಂಪ್ರದಾಯಿಕ ಜ್ಞಾನ ಮತ್ತು ಕೌಶಲಗಳನ್ನು ವಿವಿಧ ಪಠ್ಯಕ್ರಮಗಳಲ್ಲಿ ಸೇರಿಸಲಾಗಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಶ್ರೇಷ್ಠ ಆದಿವಾಸಿ ನಾಯಕರ ಕೊಡುಗೆಗಳನ್ನು ಪ್ರಮುಖವಾಗಿ ವೈಭವೀಕರಿಸಲು ರಾಷ್ಟ್ರವ್ಯಾಪಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ದೇಶವು ಇದೀಗ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15ನ್ನು ‘ಜನಜಾತಿಯ ಗೌರವ ದಿನ’ವನ್ನಾಗಿ ಆಚರಿಸುತ್ತದೆ. ಮೋದಿ ಸರ್ಕಾರವು ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಾದ್ಯಂತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮೋದಿ ತಮ್ಮ ಭಾಷಣಗಳಲ್ಲಿ ನಮ್ಮ ಶ್ರೇಷ್ಠ ಬುಡಕಟ್ಟು ನಾಯಕರನ್ನು ಸ್ಮರಿಸಿಕೊಳ್ಳುತ್ತಾರೆ ಮತ್ತು ಇಂದಿನ ಪೀಳಿಗೆಗೆ ಸ್ಪೂರ್ತಿ ನೀಡಲು ಅವರ ಕೊಡುಗೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾರೆ. ಇದೆಲ್ಲವೂ ಬುಡಕಟ್ಟು ಸಮಾಜದ ಗೌರವ ಮತ್ತು ಸಬಲೀಕರಣಕ್ಕಾಗಿ ಮೋದಿ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ ಎಂಬುದನ್ನು ಒತ್ತಿಹೇಳುತ್ತದೆ.
ಕಾಶ್ಮೀರದಿಂದ ಈಶಾನ್ಯ ಭಾಗದವರೆಗೆ, ಬುಡಕಟ್ಟು ಜನಸಂಖ್ಯೆಯ ಬಹು ದೊಡ್ಡ ಭಾಗವು ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್ಗಢ, ಒಡಿಶಾ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಸ್ವಾತಂತ್ರಾ್ಯನಂತರ ಕಾಂಗ್ರೆಸ್ ಪಕ್ಷವು ಅವರನ್ನು ತನ್ನ ಮತಬ್ಯಾಂಕ್ನಂತೆ ಬಳಸಿಕೊಂಡಿತು ಮತ್ತು ಆದಿವಾಸಿ ಸಮುದಾಯದ ಪ್ರಾಬಲ್ಯವಿರುವ ಈಶಾನ್ಯ ಭಾಗವನ್ನು ಕಡೆಗಣಿಸಿತು. ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಬುಡಕಟ್ಟು ಪ್ರದೇಶಗಳ ಪರಿವರ್ತನೆ ಕಾರ್ಯವನ್ನು ಶ್ರದ್ಧೆಯಿಂದ ಆರಂಭಿಸಿದರು. ಬುಡಕಟ್ಟು ಪ್ರಾಬಲ್ಯದ ಈಶಾನ್ಯ ಭಾಗದ ವಿಕಾಸ ಮತ್ತು ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲು ಅವರು ಪೂರ್ವ ಕಾರ್ಯ ನೀತಿ (ಆಕ್ಟ್ ಈಸ್ಟ್ ನೀತಿ)ಯನ್ನು ರೂಪಿಸಿದರು. ಕಳೆದ ಎಂಟು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳು, ದೇಶದ ಬೆಳವಣಿಗೆ ಮತ್ತು ಪ್ರಗತಿಯಲ್ಲಿ ಪಾಲುದಾರರಾಗಲು ರಾಷ್ಟ್ರೀಯ ಮುಖ್ಯವಾಹಿನಿಯೊಂದಿಗೆ ಯಶಸ್ವಿಯಾಗಿ ಸಂಯೋಜನೆಗೊಂಡಿವೆ.
ದಶಕಗಳಿಂದ ಬಡತನ ಮತ್ತು ಸಾಮಾಜಿಕ ಅಭದ್ರತೆ ಬುಡಕಟ್ಟು ಸಮುದಾಯಗಳಿಗೆ ದೊಡ್ಡ ಸವಾಲಾಗಿದೆ. ಈ ಭಯ ಮತ್ತು ಅನಿಶ್ಚಿತತೆಯನ್ನು ಕೆಲವು ರಾಜ್ಯಗಳಲ್ಲಿ ಎಡಪಂಥೀಯ ಬಂಡುಕೋರರು ಬಳಕೆ ಮಾಡಿಕೊಂಡರು, ಅದು ಬುಡಕಟ್ಟು ಯುವಕರು ಮೂಲಭೂತವಾದಿಗಳಾಗಲು ಕಾರಣವಾಯಿತು. ಇದು ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಡ್ಡಿಯುಂಟುಮಾಡಿತು. ಭಯೋತ್ಪಾದನೆಯ ಕುರಿತಂತೆ ನರೇಂದ್ರ ಮೋದಿ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯು ನಕ್ಸಲಿಸಂನ ಸಂಪೂರ್ಣ ನಿಮೂಲನೆಗೆ ಕಾರಣವಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿ ಹಿಂಸಾಚಾರ ಮತ್ತು ಅಶಾಂತಿ ಬದಲಿಗೆ ಇಂದು ಅಭಿವೃದ್ಧಿ ಮತ್ತು ಶಾಂತಿಯ ಬದಲಾವಣೆ ಕಾಣುತ್ತಿದ್ದೇವೆ.
ನಮ್ಮ ಬುಡಕಟ್ಟು ಸಮಾಜದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಸಬಲೀಕರಣ ಹಾಗೂ ಅವರ ರಾಜಕೀಯ ಪ್ರಾತಿನಿಧ್ಯವು ಸದಾ ಬಿಜೆಪಿ ತತ್ವದ ಅವಿಭಾಜ್ಯ ಅಂಗವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಭಾರತವು ತನ್ನ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯನ್ನಾಗಿ ದ್ರೌಪದಿ ಮುಮು ಅವರನ್ನು ಆಯ್ಕೆ ಮಾಡಿದೆ. ಇದು ನಮ್ಮ ಆದಿವಾಸಿ ಸಮಾಜದ ಸಬಲೀಕರಣದ ನಿಟ್ಟಿನಲ್ಲಿ ಮೋದಿ ಅವರ ದೃಢಬದ್ಧತೆಗೆ ಉಜ್ವಲ ಉದಾಹರಣೆಯಾಗಿದೆ.
(ಲೇಖಕರು ಕೇಂದ್ರ ಗೃಹ ಸಚಿವರು)