

ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳು ಒಂದು ರೀತಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯ ಐಕಾನ್ಗಳು. ಬಾನಿನಲ್ಲಿ ಅವುಗಳು ಹಾರಾಡುವುದನ್ನು ಕಂಡ ಮಾನವನಿಗೆ ತಾನೂ ಒಂದು ದಿನ ಅವುಗಳಂತೆ ಆಗಬೇಕೆಂಬ ಈರ್ಷೆ ಹುಟ್ಟಿ ಆ ನಿಟ್ಟಿನಲ್ಲಿ ಆತ ನಡೆಸಿದ ಸತತ ಪರಿಶ್ರಮಗಳ ಫಲವೇ ಈ ವಿಮಾನು, ಹೆಲಿಕಾಪ್ಟರ್, ರಾಕೆಟ್ಟುಗಳ ಆವಿಷ್ಕಾರ. ಇಂತಹುದೊಂದು ಕನಸನ್ನು ನಾವು ಸಹ ಬಾಲ್ಯದಿಂದಲೇ ಕಾಣುತ್ತ ಬಂದಿದ್ದೇವೆ. ಮಾನವನ ಗಗನಯಾನದ ಕನಸು ನನಸಾಗಿ ಹಲವಾರು ವರ್ಷಗಳು ಕಳೆದು ಹೋಗಿದ್ದರೂ ಇಂದಿಗೂ ಹಲವರ ಪಾಲಿಗೆ ಅದು ಗಗನಕುಸುಮ. ಆದರೇನಂತೆ ನಾವು ಕಾಣುವ ಕನಸಿಗೇನೂ ಮಿತಿಯಿಲ್ಲವಲ್ಲ. ಬಾಲ್ಯದ ನಮ್ಮ ಹಾರಾಟದ ಆ ಕನಸನ್ನು ತಕ್ಷಣಕ್ಕೆ ನನಸು ಮಾಡಿದ್ದು ಮಾತ್ರ ಕಾಗದದ ವಿಮಾನವೇ. ಸುಂಯ್ಯನೇ ಗಾಳಿಯಲ್ಲಿ ತೇಲಾಡುತ್ತ ಕೊನೆಗೊಮ್ಮೆ ಸುಸ್ತಾಗಿ ಧುಪ್ಪನೆ ನೆಲಕ್ಕೆ ಬೀಳುವ ಕಾಗದದ ವಿಮಾನದಾಟವು ಇಂದಿಗೂ ನಮ್ಮೆಲ್ಲರಲ್ಲಿನ ಬಾಲ್ಯವನ್ನು ಜಾಗ್ರತಗೊಳಿಸುತ್ತದೆ. ಅಸಲಿಗೆ ವಿಜ್ಞಾನದ ಸರಳ ಸೂತ್ರಗಳನ್ನು ಆಧರಿಸಿ ತಯಾರಿಸಲ್ಪಡುವ ಈ ಕಾಗದದ ವಿಮಾನಗಳೇ ಮುಂದೆ ಹಾರುವ ಮಷೀನ್ನುಗಳು ತಯಾರಾಗಲು ಸ್ಪೂರ್ತಿ ನೀಡಿದ್ದಂತೂ ಹೌದು.
ಏರೋಗಾಮಿ ಎಂದು ಕರೆಯಲ್ಪಡುವ ಈ ಕಾಗದದ ವಿಮಾನವನ್ನು ತಯಾರಿಸುವ ಕಲೆ ಹುಟ್ಟಿದ್ದು ಚೀನಾದಲ್ಲಾದರೂ ವಿಕಸನಗೊಂಡಿದ್ದು ಜಪಾನಿನಲ್ಲಿ. ವಿನ್ಯಾಸವೇನೇ ಇದ್ದರೂ ಮೂಲ ವಿಜ್ಞಾನದ ಸೂತ್ರವು ಒಂದೇ. ಕಾಗದವನ್ನು ನಿರ್ದಿಷ್ಟ ಆಕಾರದಲ್ಲಿ ಮಡಚಿ ಎಸೆದಾಗ ನಾವು ನೀಡುವ ಬಲವು ಆ ವಿಮಾನವನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುವಂತೆ ಮಾಡುತ್ತದೆ. ಈ ಸಮಯದಲ್ಲಿ ವಿಮಾನದ ರೆಕ್ಕೆಯ ಮೇಲೆ ಮತ್ತು ಕೆಳಗೆ ಹಾದು ಹೋಗುವ ಗಾಳಿಯು ಅದನ್ನು ಮೇಲಕ್ಕೆತ್ತಿ ಹಾರಿಸುತ್ತದೆ. ಇಂತಹ ಸನ್ನಿವೇಶದಲ್ಲಿ ವಿಮಾನದ ಮುಂದಿನಿಂದ ಬೀಸುವ ಗಾಳಿ ಅದರ ವೇಗಕ್ಕೆ ತಡೆಯೊಡ್ಡಿದರೆ ಗುರುತ್ವಾಕರ್ಷಣ ಶಕ್ತಿಯು ಅದನ್ನು ಕೆಳಕ್ಕೆಳೆಯುತ್ತದೆ. ಹೀಗಾಗಿ ಕಾಗದದ ವಿಮಾನವು ಏರುವ ಎತ್ತರ, ಹಾರುವ ಸಮಯವು ಅದರ ವಿನ್ಯಾಸ, ಅಲ್ಲಿ ಬೀಸುತ್ತಿರುವ ಗಾಳಿ, ಕಾಗದದ ತೂಕ ಹೀಗೆ ಹಲವು ವಿಷಯಗಳ ಮೇಲೆ ಅವಲಂಬಿತವಾಗಿದೆ. ದೃಢತೆಯನ್ನು ಕಳೆದುಕೊಳ್ಳದಂತೆ ಹಗುರವಾಗಿರುವ ಕಾಗದದ ತೂಕ, ವಿರುದ್ಧವಾಗಿ ಬೀಸುವ ಗಾಳಿಗೆ ಅತ್ಯಂತ ಕಡಿಮೆ ತಡೆಯೊಡ್ಡುವಂತಿರುವ ವಿನ್ಯಾಸದ ಜೊತೆಗೆ ಹಾರಿಸುವ ಸ್ಥಳದಲ್ಲಿ ಬೀಸುತ್ತಿರುವ ಗಾಳಿಯ ಚಲನೆಯನ್ನು ಗಮನಿಸಿ ಸ್ವಲ್ಪ ಮಾರ್ಪಾಡುಗಳನ್ನು ಮಾಡಿಕೊಂಡು ವಿಮಾನವನ್ನು ಹಾರಿಸಿದಲ್ಲಿ ಅದು ಹೆಚ್ಚಿನ ಸಮಯ ಮತ್ತು ದೂರ ಗಾಳಿಯಲ್ಲಿ ಪಯಣಿಸಬಲ್ಲದು.
ವಿಪರ್ಯಾಸವೆಂದರೆ ‘ನೋಡಿ ಕಲಿ ಮಾಡಿ ತಿಳಿ’ ಎಂಬತ್ತಿದ್ದು ಆಟದ ಜೊತೆಗೆ ವಿಮಾನ ವಿನ್ಯಾಸದ ಕುರಿತು ನಮ್ಮ ಪುಟ್ಟ ಮನದಲ್ಲಿ ಹಲವಾರು ಯೋಜನೆಗಳನ್ನು ಮೂಡಿಸಿ ನಮ್ಮನ್ನೂ ವೈಜ್ಞಾನಿಕವಾಗಿ ಯೋಚಿಸಲು ಪ್ರೇರೇಪಿಸುತ್ತಿದ್ದ ಈ ಆಟವು ರಿಮೋಟ್ ಆಟಿಕೆ, ಮೊಬೈಲ್ ಗೇಮ್ಳ ಭರಾಟೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ನಮ್ಮ ಬಾಲ್ಯದ ಸವಿನೆನಪುಗಳ ಸರಣಿಯಲ್ಲೊಂದು ಅತಿಮುಖ್ಯ ಕೊಂಡಿಯಾಗಿರುವ ಈ ಆಟವನ್ನು ಜೀವಂತವಾಗಿ ಇರಿಸುವ ಪ್ರಯತ್ನ ಅಲ್ಲಲ್ಲಿ ನಡೆಯುತ್ತಿದೆ. ಅಮೆರಿಕವು ಮೇ 26ನ್ನು ‘ರಾಷ್ಟ್ರೀಯ ಕಾಗದದ ವಿಮಾನದ ದಿನ’ವೆಂದು ಘೊಷಿಸಿದ್ದು ಅಂದು ಎಲ್ಲೆಡೆ ವಿಮಾನಗಳ ತಯಾರಿಕಾ ಶಿಬಿರಗಳು ಮತ್ತು ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತದೆ. ಅಂದಹಾಗೆ ‘ರೆಡ್ ಬುಲ್’ ಎಂಬ ಕಂಪನಿಯೊಂದು ಪ್ರತಿವರ್ಷ ಅಂತಾರಾಷ್ಟ್ರೀಯ ಕಾಗದದ ವಿಮಾನದ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ದೂರ, ಸಮಯ ಮತ್ತು ಗಾಳಿಯಲ್ಲಿನ ತೇಲಾಟ ಹೀಗೆ ಮೂರು ವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಗೆ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಿ ಅಲ್ಲಿ ಆಯ್ಕೆಯಾದ ಆಟಗಾರರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳು ಪಾಲ್ಗೊಳ್ಳುತ್ತವೆ. ಅಂತಿಮ ಸುತ್ತಿನ ಪಂದ್ಯಗಳು ಈ ವರ್ಷ ಆಸ್ಟ್ರಿಯಾದ ಸಾಲ್ಝ್ ಬರ್ಗ್ನಲ್ಲಿ ಮೇ 13 ಆರಂಭಗೊಂಡಿದ್ದು, 14ರಂದು ಮುಕ್ತಾಯಗೊಳ್ಳಲಿವೆ.
ಕಾಗದವನ್ನು ಮಡಚಿ ಮೇಲಕ್ಕೆಸೆದು ಮಜ ನೋಡುವ ಈ ವಿಮಾನಗಳು ಒಂದೆಡೆಯಾದರೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಕಾಶಬುಟ್ಟಿ ವಿನ್ಯಾಸದ ಗೂಡುಗಳನ್ನು ತಯಾರಿಸಿ ಅದರೊಳಗೊಂದು ದೀಪವನ್ನೋ, ಚಿಮಣಿಯನ್ನೋ ಇಟ್ಟು ಅದರ ಶಾಖದಿಂದ ಬುಟ್ಟಿಯೊಳಗಿನ ಗಾಳಿಯನ್ನು ಕಾಯಿಸಿ ಅದು ಹಗುರವಾದಂತೇ ಪೂರ್ತಿ ಬುಟ್ಟಿಯನ್ನೇ ಮೇಲೆತ್ತಿಕೊಂಡು ಹೋಗುವ ವಿನ್ಯಾಸವನ್ನು ಆವಿಷ್ಕರಿಸಿದರು. ಬಾಲ್ಯದ ಆಟಕ್ಕೆಂದು ಆರಂಭವಾದ ಈ ಬುಟ್ಟಿಯ ಮೂಲ ಆಧಾರದ ಮೇಲೆ ವಿನ್ಯಾಸಗೊಂಡ ಬಿಸಿಗಾಳಿಯ ಬಲೂನು ಇದರ ಮುಂದುವರಿದ ಅವತರಣಿಕೆ.
ಕಾಗದದ ವಿಮಾನವೇ ಆಗಲಿ, ಬಿಸಿಗಾಳಿಯ ಆಕಾಶಬುಟ್ಟಿಯೇ ಇರಲಿ ಇವುಗಳ ಯಶಸ್ಸಿನಿಂದ ಪ್ರೇರೇಪಿತರಾಗಿ ದೊಡ್ಡ ಮಾಡೆಲ್ಲುಗಳನ್ನು ನಿರ್ವಿುಸಿದ ನಿದರ್ಶನಗಳಿಗೇನೂ ಬರವಿಲ್ಲ. ಅಂಥವುದಕ್ಕೊಂದು ಉದಾಹರಣೆಯೆಂದರೆ, ಅರಿಝೆೊನಾದಲ್ಲಿ ನಡೆದ ಘಟನೆ. ಅಲ್ಲಿನ ಕಾಗದದ ವಿಮಾನದ ಪಂದ್ಯಾವಳಿಯೊಂದರಲ್ಲಿ ವಿಜೇತನಾದ ಅರ್ಟುರೋ ವಲ್ದೆನೆಗ್ರೋ ಎಂಬ 12 ವರ್ಷದ ಶಾಲಾ ಬಾಲಕನೊಬ್ಬ ಅದೇ ಗುಂಗಿನಲ್ಲಿ ತನ್ನ ಗೆಳೆಯರನ್ನು ಸೇರಿಸಿಕೊಂಡು ಕನ್ವಾನ್ ಬಟ್ಟೆ ಮತ್ತು ಕಾಗದವನ್ನು ಸೇರಿಸಿ ದೊಡ್ಡ ವಿಮಾನವನ್ನು ವಿನ್ಯಾಸಗೊಳಿಸಿದ. ಜಾಗತಿಕವಾಗಿ ಅತಿದೊಡ್ಡ ಕಾಗದದ ವಿಮಾನವೆಂಬ ಖ್ಯಾತಿ ಹೊಂದಿದ ಅದು 45 ಅಡಿ ಉದ್ದ ಹಾಗೂ 24 ಅಡಿ ಅಗಲದ ರೆಕ್ಕೆಗಳನ್ನು ಹೊಂದಿತ್ತು. ಈ ಭಾರಿ ವಿಮಾನವನ್ನು ಹೆಲಿಕಾಪ್ಟರ್ ಮೂಲಕ 4 ಸಾವಿರ ಅಡಿ ಮೇಲೆ ಎತ್ತಿ ಅಲ್ಲಿಂದ ಬಿಡಲಾಯಿತು. ಕೆಲಕಾಲ ಗಾಳಿಯಲ್ಲಿ ತೇಲಿ 100 ಮೈಲಿಯವರೆಗೆ ವೇಗವನ್ನು ಗಳಿಸಿದ ಈ ವಿಮಾನ ಕೊನೆಗೆ ಗಾಳಿಯ ಒತ್ತಡ ತಡೆಯಲಾರದೆ ಮೇಲಿಂದ ಕುಸಿದು ಬಿತ್ತು. ಕಾಗದದ ಆ ವಿಮಾನದ ಅಂತ್ಯವೇನೂ ಅನಿರೀಕ್ಷಿತವಲ್ಲದಿದ್ದರೂ ಅರ್ಟುರೋ ಮತ್ತವನ ತಂಡದ ದಿಟ್ಟತನಕ್ಕೆ ಎಲ್ಲೆಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಯಿತು. ಅರ್ಟುರೋನ ಮರುಭೂಮಿಯ ಹದ್ದು ಎಂದೇ ಖ್ಯಾತವಾದ ಈ ವಿಮಾನವು ಮಕ್ಕಳಲ್ಲಿ ಹಾರುವ ಲೋಹದ ಹಕ್ಕಿಗಳ ಕುರಿತು ಇರುವ ಆಸಕ್ತಿಯ ದ್ಯೋತಕವೆಂದೇ ಹೇಳಲಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)