ಬಣ್ಣಗಳ ಸಂವೇದನೆ... ಸಾಯಿ ಪಲ್ಲವಿ ಎಂಬ ಸಹಜ ಅಭಿನೇತ್ರಿ

Sai Pallavi
Published on
ಉದ್ದುದ್ದ ಡೈಲಾಗ್ ಹೇಳುವುದಿರಲಿ, ಸಂಭಾಷಣೆಯೇ ಇಲ್ಲದೆ ಕೇವಲ ಕಣ್ಣಿನಲ್ಲಿ, ಮುಖಭಾವದಲ್ಲಿ, ಮೌನದಲ್ಲಿ, ಶೋಕದಲ್ಲಿ, ಮಂದಹಾಸದಲ್ಲಿ ನೋಡುಗರನ್ನು ಹಿಡಿದಿಡುವ ಅದ್ಭುತ ಶಕ್ತಿ, ಛಾತಿ ಸಾಯಿ ಪಲ್ಲವಿ ಅವರಲ್ಲಿದೆ. ಯಾವ ಭಾಷೆಯ ಚಿತ್ರ ಮಾಡಿದರೂ, ಆ ಭಾಷೆಯ ಸೊಗಡು ಅರಿತುಕೊಂಡು ತಾನೇ ಡಬ್ಬಿಂಗ್ ಮಾಡಬೇಕೆನ್ನುವ ಹಟ ಅವರ ಪಾತ್ರಗಳ ತೂಕ ಹೆಚ್ಚಿಸಿದೆ.

ಜಾಸ್ತಿ ಹಣ್ಣು ತಿಂದರೆ ಬೆಳ್ಳಗಾಗುತ್ತಿ...

ತಂಗಿಗೆ ಹಣ್ಣು ತಿನ್ನಿಸಲು ಆ ಹುಡುಗಿ ಸುಳ್ಳು ಹೇಳಿದ್ದಳು. ಅಕ್ಕ ಹೇಳಿದ ಮೇಲೆ ನಿಜ ಎಂದು ನಂಬಿಕೊಂಡು, ಬೇಗ ಬೆಳ್ಳಗಾಗಬೇಕೆಂದು ಕೊಟ್ಟ ಹಣ್ಣೆಲ್ಲವನ್ನೂ ತಿನ್ನುತ್ತಿದ್ದ ತಂಗಿಯ ಮುಗ್ಧತೆ ಕಂಡು ಆ ಹುಡುಗಿಗೆ ನಿಜಕ್ಕೂ ಬೇಸರವಾಗಿತ್ತು. ಛೇ, ಒಡಹುಟ್ಟಿದ ತಂಗಿಗೆ ಸುಳ್ಳು ಹೇಳಿಬಿಟ್ಟೆನಲ್ಲ ಎಂದು ಕೊರಗಿದ್ದ ಆ ಹುಡುಗಿ ಅಂದಿನಿಂದಲೇ ಬಣ್ಣದ ವಿಚಾರದಲ್ಲಿ ಸೂಕ್ಷ್ಮತೆಯನ್ನು ಬೆಳೆಸಿಕೊಂಡಳು. ಮುಂದೊಂದು ದಿನ ಜನಪ್ರಿಯತೆಯ ಉತ್ತುಂಗದಲ್ಲಿರುವಾಗ ಬಹುರಾಷ್ಟ್ರೀಯ ಕಂಪನಿಯೊಂದು ಫೇರ್​ನೆಸ್ ಕ್ರೀಮ್ ಜಾಹೀರಾತಿನಲ್ಲಿ ನಟಿಸಲು 2 ಕೋಟಿ ರೂ. ಸಂಭಾವನೆಯ ದೊಡ್ಡ ಆಫರ್ ಮುಂದಿಟ್ಟಾಗ ಆಕೆ ಹಿಂದೆ ಮುಂದೆ ಯೋಚಿಸದೆ ಥಟ್ಟನೆ ನಿರಾಕರಿಸಿಬಿಟ್ಟರು.

‘ಗೋಧಿ ಮೈಬಣ್ಣ ಭಾರತದ ಬಣ್ಣ. ನಾವೇಕೆ ಕೀಳರಿಮೆ ಹೊಂದಬೇಕು? ಬೆಳ್ಳಗಾಗಬೇಕೆಂಬ ಭ್ರಮೆಗಳಿಗೆ ಸಿಲುಕಬೇಕು? ನಾವು ಯಾವತ್ತೂ ವಿದೇಶೀಯರ ಬಳಿ ಹೋಗಿ, ನಿಮ್ಮ ಬಿಳಿ ಬಣ್ಣದ ರಹಸ್ಯವೇನು? ಬೆಳ್ಳಗಿದ್ದವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂಬ ಸಂಗತಿ ನಿಮಗೆ ಗೊತ್ತೇ? ಎಂದು ಪ್ರಶ್ನಿಸುವುದಿಲ್ಲ. ನಾವೇಕೆ ಅವರಂತೆ ಆಗಬೇಕು? ಅವರ ಬಣ್ಣ ಅವರದು, ನಮ್ಮ ಬಣ್ಣ ನಮ್ಮದು...’ ಎಂದು 2 ಕೋಟಿ ರೂ.ಗಳ ದೊಡ್ಡ ಆಫರ್ ತಿರಸ್ಕರಿಸಿದ್ದಕ್ಕೆ ಆಕೆ ಕಾರಣ ನೀಡಿದ್ದರು.

ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಇಷ್ಟವಾಗುವುದು ಇಂಥ ಕಾರಣಗಳಿಗೆ. ದಕ್ಷಿಣ ಚಿತ್ರರಂಗ ಕಂಡ ಅತ್ಯಂತ ಸಹಜ ಸುಂದರಿ ಆಕೆ. ಮೊಡವೆ ಮುಖದ ಅಂದಗೆಡಿಸಿತು ಎಂದು ಅನೇಕ ಹುಡುಗಿಯರು ಪೇಚಾಡುತ್ತಿರುತ್ತಾರೆ. ಆದರೆ, ಸಾಯಿ ಪಲ್ಲವಿ ಯಾವತ್ತೂ ಮೇಕಪ್​ನಿಂದ ಮೊಡವೆ ಮುಚ್ಚಿಕೊಳ್ಳುವುದಿಲ್ಲ. ಮೇಕಪ್ ಮಾಡದೇ ಇದ್ದಾಗಲೂ ಹೀರೊಯಿನ್ ಹಾಗೆಯೇ ಕಾಣುವ ಕೆಲವೇ ನಟಿಯರ ಪೈಕಿ ಪಲ್ಲವಿ ಕೂಡ ಒಬ್ಬರು. ‘ನೀನು ಕಪ್ಪಗಿದ್ದಿ. ಈ ಕ್ರೀಮ್ ಹಚ್ಚಿದರೆ ಬೆಳ್ಳಗಾಗುತ್ತಿ ಎಂದು ಜನರಿಗೆ ಸುಳ್ಳು ಹೇಳಿ ಸಂಪಾದಿಸುವ ಹಣ ಇಟ್ಟುಕೊಂಡು ನಾನೇನು ಮಾಡಲಿ? ಅಷ್ಟಕ್ಕೂ ನನ್ನದು ಸರಳ ಬಾಳು. ನನಗೆ ದೊಡ್ಡ ಅವಶ್ಯಕತೆಗಳೇನೂ ಇಲ್ಲ’ ಎಂದು ಪಲ್ಲವಿ ಸರಳವಾಗಿ ಹೇಳಿಬಿಡುತ್ತಾರೆ. ಕೇವಲ ಆರು ವರ್ಷಗಳಲ್ಲಿ ದಕ್ಷಿಣದ ಮೂರು ಭಾಷೆಗಳಲ್ಲಿ ನಟಿಸಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸಾಯಿ ಪಲ್ಲವಿ ಬಹಳ ಸಿಂಪಲ್ ನಟಿ.

ಆದರೂ ಬಣ್ಣ ಎನ್ನುವುದು ಭಾರತೀಯ ಮನೋಸ್ಥಿತಿಯ ಆಳದೊಳಕ್ಕೆ ಇಳಿದುಬಿಟ್ಟಿರುವ ಸಂಗತಿ. ಬಣ್ಣದಿಂದ ಸೌಂದರ್ಯ ಅಳೆಯುವುದು ಸಂಸ್ಕಾರ ಅಲ್ಲವಾದರೂ, ಜನರಿಗೆ ಅದೇ ರೂಢಿ. ಬಣ್ಣ ಸ್ವಲ್ಪ ಕಪು್ಪ ಎಂದು ಬಂದ ಸಂಬಂಧಗಳನ್ನು ತಿರಸ್ಕರಿಸಿ ಕೊನೆಗೆ ಮದುವೆಯೇ ಆಗದೇ ಉಳಿದುಕೊಂಡ ಅದೆಷ್ಟೋ ಹುಡುಗರಿದ್ದಾರೆ. ಮದುವೆ ಮನೆಗಳಲ್ಲಿ ಗಂಡಿನ ಯೋಗ್ಯತೆಗಿಂತ ಬಣ್ಣ ಸ್ವಲ್ಪ ಕಪು್ಪ ಎಂದು ವರಸಾಮ್ಯದ ಬಗ್ಗೆ ಟೀಕಿಸುವವರಿದ್ದಾರೆ. ಉದ್ಯೋಗಸ್ಥಳಗಳಲ್ಲಿ ಯುವತಿಯರ ಸರ್ಟಿಫಿಕೇಟ್, ಮಾರ್ಕ್ಸ್​ಕಾರ್ಡ್​ಗಳಿಗಿಂತ ನೋಡಲು ಚೆನ್ನಾಗಿಲ್ಲ ಎಂದು ಇಂಟರ್​ವ್ಯೂಗಳಲ್ಲಿ ತಿರಸ್ಕಾರಕ್ಕೊಳಗಾಗುವವರ ಸಂಖ್ಯೆಯೂ ಅಸಂಖ್ಯಾತ. ಅಂದರೆ, ನಮ್ಮ ಸಮಾಜದಲ್ಲಿ ಮುಖ ನೋಡಿ ಮಣೆ ಹಾಕುವ ಸಂಪ್ರದಾಯ ಬಲವಾಗಿ ಬೇರೂರಿಬಿಟ್ಟಿದೆ. ಇಂಥ ಮನೋಸ್ಥಿತಿಯಿಂದ ಹೊರಬರುವುದಾದರೂ ಹೇಗೆ?

ಸಾಯಿ ಪಲ್ಲವಿ ವೃತ್ತಿಜೀವನದಲ್ಲೂ ಬಣ್ಣದ ವಿಚಾರ ಬಹಳ ಪ್ರಮುಖ ಸ್ಥಾನ ಪಡೆಯುವುದು ಇದೇ ಕಾರಣಕ್ಕೆ. ಪಲ್ಲವಿ ಚಿಕ್ಕವಯಸ್ಸಿನಲ್ಲೇ ತಂಗಿಯ ಕಾರಣದಿಂದ ಬಣ್ಣದ ಸೂಕ್ಷ್ಮತೆ ಬೆಳೆಸಿ ಕೊಂಡಿದ್ದರೂ, ಬದಲಾಗಿದ್ದು ಆಕೆಯ ಆಲೋಚನೆಗಳು ಮಾತ್ರವೇ ಆಗಿತ್ತು. ಆದರೆ, ಜೀವನವೆನ್ನುವುದೇ ವಿಚಿತ್ರ. ಯಾವ ಕ್ಷಣದಲ್ಲಿ ಯಾವ ತಿರುವು ಬರುವುದೋ ದೇವರೇ ಬಲ್ಲ. ತಮಿಳುನಾಡಿನ ಕೊಟಗಿರಿಯಲ್ಲಿ ಜನಿಸಿ, ಕೊಯಮತ್ತೂರಿನಲ್ಲಿ ಬೆಳೆದ ಪಲ್ಲವಿ, ಪಿಯುಸಿ ಬಳಿಕ ಫ್ಯಾಷನ್ ಟೆಕ್ನಾಲಜಿ ಕೋರ್ಸ್ ಮಾಡುವ ಕನಸು ಕಂಡಿದ್ದರು. ಆದರೆ, ಸೆಂಟ್ರಲ್ ಎಕ್ಸೆ ೖಸ್​ನಲ್ಲಿ

ಅಧಿಕಾರಿಯಾಗಿರುವ ತಂದೆ ಸೆಂತಮಾರ ಕಣ್ಣನ್ ಮತ್ತು ಅಮ್ಮ ರಾಧಾ ಅವರ ಆಲೋಚನೆಯೇ ಬೇರೆಯಾಗಿತ್ತು. ತಮಿಳು ಹಾಗೂ ತೆಲುಗು ಚಾನೆಲ್​ಗಳಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ಪಲ್ಲವಿಗೆ ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಕೊಯಮತ್ತೂರಿನಲ್ಲೇ ಇದ್ದರೆ ಸಿನಿಮಾ ಹುಚ್ಚಿಗೆ ಬಿದ್ದು ವ್ಯಾಸಂಗ ಹಳ್ಳ ತಪು್ಪತ್ತದೆ ಎಂಬ ಕಾರಣಕ್ಕೆ ಮಗಳನ್ನು ಅಮೆರಿಕಕ್ಕೆ ಕಳಿಸಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಸಂಬಂಧಿಯೊಬ್ಬಳಿಗೆ ಅಮೆರಿಕದ ಜಾರ್ಜಿಯಾದಲ್ಲಿ ವೈದ್ಯಕೋರ್ಸ್​ಗೆ ಪ್ರವೇಶ ದೊರೆತಿತ್ತು. ಹಾಗಾಗಿ ಅಮ್ಮ ರಾಧಾ ಬಲವಂತ ಮಾಡಿ ಪಲ್ಲವಿ ಮನಸ್ಸನ್ನೂ ಅಮೆರಿಕದ ಕಡೆ ತಿರುಗಿಸಿದರು. ‘ನಿನ್ನ ಓರಗೆಯವರೆಲ್ಲ ಅಮೆರಿಕಕ್ಕೆ ಹೋಗಿ ಬೆಳ್ಳಗಾಗುತ್ತಾರೆ. ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯ ಸಂಬಂಧಗಳು ಬರುತ್ತವೆ, ನೀನಿಲ್ಲೇ ಇದ್ದರೆ ಭವಿಷ್ಯ ಇರುವುದಿಲ್ಲ’ ಎನ್ನುವುದು ಅಮ್ಮನ ಹಟವಾಗಿತ್ತು. ಪರಿಣಾಮ ಜಾರ್ಜಿಯಾದ ಟಿಬಿಸಿಲಿ ರಾಜ್ಯ ವೈದ್ಯ ವಿಶ್ವವಿದ್ಯಾಲಯದಲ್ಲಿ ಆಕೆಗೂ ಸೀಟು ದೊರಕಿತ್ತು. ಆದರೆ, ಎಲ್ಲಿಂದ ಎಲ್ಲಿಗೆ ಹೋದರೂ, ಹಣೆಬರಹವೇನೂ ಬದಲಾಗುವುದಿಲ್ಲ. ಜಾರ್ಜಿಯಾದಲ್ಲಿರುವಾಗಲೇ ಮಲಯಾಳಿ ಚಿತ್ರದ ಅವಕಾಶ ಹಿಂಬಾಲಿಸಿತು. ಒಂದು ಮೆಚ್ಚಬೇಕಾದ ಸಂಗತಿಯೆಂದರೆ, ಹಿಡಿದ ಕೆಲಸವನ್ನು ಅರ್ಧಕ್ಕೆ ಕೈಬಿಡುವ ಜಾಯಮಾನ ಪಲ್ಲವಿಯದಲ್ಲವೇ ಅಲ್ಲ. ಯಶಸ್ಸಿನ ಉತ್ತುಂಗಕ್ಕೇರಿದಾಗಲೂ ಪಲ್ಲವಿ ವ್ಯಾಸಂಗವನ್ನು ಮರೆಯಲಿಲ್ಲ. ಸಿನಿಮಾ-ವ್ಯಾಸಂಗ ಎರಡನ್ನೂ ಬ್ಯಾಲೆನ್ಸ್ ಮಾಡಿದ ಪಲ್ಲವಿ ಸದ್ಯ ವೃತ್ತಿಯಿಂದ ವೈದ್ಯೆ. ಬಣ್ಣದ ಬದುಕೆನ್ನುವುದು ಕ್ಷಣಿಕ ಎನ್ನುವುದನ್ನು ಚೆನ್ನಾಗಿ ಅರಿತಿರುವ ಪಲ್ಲವಿ ಇನ್ನೊಂದು ಐದು ವರ್ಷಗಳಲ್ಲಿ ಹೃದ್ರೋಗ ತಜ್ಞೆಯಾಗಿ ವೈದ್ಯವೃತ್ತಿ ಮುಂದುವರಿಸುವ ಹಂಬಲದಲ್ಲಿದ್ದಾರೆ. ಸದ್ಯ ಪಲ್ಲವಿಗೀಗ 30 ವರ್ಷ.

ಪಲ್ಲವಿ ಹೈಸ್ಕೂಲ್​ನಲ್ಲಿರುವಾಗಲೇ 2008ರಲ್ಲಿ ತೆರೆಕಂಡ ‘ಧಾಮ್ ಧೂಮ್ ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು. ವಿಶೇಷವೆಂದರೆ, ಈ ಚಿತ್ರ ಬಾಲಿವುಡ್ ಬೆಡಗಿ ಕಂಗನಾ ರಣಾವತ್​ರ ಮೊದಲ ತಮಿಳು ಚಿತ್ರವಾಗಿತ್ತು. ಅದಾದ ಬಳಿಕ ತಮಿಳಿನ ವಿಜಯ್ ಟಿವಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಪಲ್ಲವಿ ಪ್ರಶಸ್ತಿ ಗೆಲ್ಲದಿದ್ದರೂ, ಪ್ರೇಕ್ಷಕರು ಹಾಗೂ ತೀರ್ಪಗಾರರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿ ಮನಗೆದ್ದಿದ್ದರು. ಈ ಸ್ಪರ್ಧೆ ನೋಡಿಯೇ ಮಲಯಾಳಂ ನಿರ್ದೇಶಕ ಅಲ್ಪೋನ್ಸೊ ಪುತುರೆನ್ ತಮ್ಮ ಚಿತ್ರದಲ್ಲಿ ನಾಯಕಿಯಾಗುವಂತೆ ಬೆನ್ನುಬಿದ್ದಿದ್ದರು. ಆರಂಭದಲ್ಲಿ ಅಲ್ಪೋನ್ಸೊ ಬಗ್ಗೆ ತಮ್ಮನ್ನು ಹಿಂಬಾಲಿಸುತ್ತಿರುವ ರೋಮಿಯೋ ಎಂದು ತಪ್ಪಾಗಿ ಭಾವಿಸಿದ್ದ ಪಲ್ಲವಿ, ಸುಮಾರು ದಿನ ಮೆಸೇಜ್​ಗೆ ಪ್ರತಿಕ್ರಿಯಿಸಿರಲಿಲ್ಲವಂತೆ. ಕೊನೆಗೂ, ಆಕೆ ‘ಪ್ರೇಮಮ್ ಚಿತ್ರ ಒಪ್ಪಿಕೊಂಡ ಮೇಲೆ ನಡೆದಿದ್ದು ಇತಿಹಾಸ.

ಗುಳಿ ಕೆನ್ನೆಯ ಹುಡುಗಿ ಎಂದು ಕೆಲವು ನಟಿಯರು ಇಷ್ಟವಾಗುತ್ತಿರುತ್ತಾರೆ. ಹೀಗಿರುವಾಗ ಮೊಡವೆಗಳೂ ಮುಖಕ್ಕೆ ಅಲಂಕಾರವಾಗಲು ಸಾಧ್ಯವೇ? ಮೊಡವೆ ಅಂದಗೆಡಿಸಿತು ಎಂದು ಪಲ್ಲವಿ ಕೂಡ ಕುಗ್ಗಿದ ದಿನಗಳಿದ್ದವು. ಆದರೆ, ಅಲ್ಪೋನ್ಸೊ, ‘ಪ್ರೇಮಮ್ ಚಿತ್ರದ ಮಲಾರ್ ಟೀಚರ್ ಪಾತ್ರಕ್ಕೆ ಮೊಡವೆಗಳು ಕಾಣುವ ಸಹಜ ಮುಖವೇ ಬೇಕು, ಮೇಕಪ್ ಬೇಡ ಎಂದು ಪಲ್ಲವಿಯ ಮನವೊಲಿಸಿದರು. ಸಹಜ ಸಂವೇದನೆ ಬಿಂಬಿಸುವ ಮಲಾರ್ ಟೀಚರ್ ಆಗಿ ಪಲ್ಲವಿ ಅದ್ಭುತವಾಗಿ ನಟಿಸಿದರು. ಚಿತ್ರ ಸೂಪರ್​ಹಿಟ್ ಆಗಿದ್ದು ಮಾತ್ರವಲ್ಲ, ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇದು ಆಕೆಯ ಆತ್ಮವಿಶ್ವಾಸ ಹೆಚ್ಚಿಸಿತು. ಮುಂದೆ ‘ಕಾಲಿ’ ಚಿತ್ರದಲ್ಲೂ ಅಷ್ಟೇ. ಮುಂಗೋಪಿ ಗಂಡನ ಸಿಟ್ಟುಸೆಡವುಗಳನ್ನು ನಿಭಾಯಿಸುವ ಭಾವಸೂಕ್ಷ್ಮಗಳ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು.

‘ನನಗೆ ನಟನೆಯ ಬಗ್ಗೆ ಏನೇನೂ ಗೊತ್ತಿರಲಿಲ್ಲ. ನನ್ನ ಬಗ್ಗೆಯೇ ಸಾವಿರ ಗೊಂದಲಗಳಿದ್ದವು. ಆದರೆ, ಜನ ಒಪ್ಪಿಕೊಂಡಿದ್ದು ಆತ್ಮವಿಶ್ವಾಸ ಹೆಚ್ಚಿಸಿತು. ಜನ ನಾನು ನಿರ್ವಹಿಸಿದ ಪಾತ್ರಗಳ ಮೂಲಕ ಗುರುತಿಸುತ್ತಿದ್ದಾರೆ. ಇದು ಅತ್ಯಂತ ಖುಷಿ ಕೊಡುವ ವಿಚಾರ’ ಎಂದು ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಪ್ರೇಮಮ್, ‘ಕಾಲಿ’ ಬಳಿಕ ತೆಲುಗು ಚಿತ್ರ ‘ಫಿದಾ’, ತಮಿಳು ಚಿತ್ರ ‘ಮಾರಿ 2’, ‘ಅಥಿರನ್’, ‘ಎನ್​ಜಿಕೆ’ ಮೊದಲಾದ ಚಿತ್ರಗಳು ಅವರ ಅಭಿಮಾನಿ ವಲಯವನ್ನು ವಿಸ್ತಾರಗೊಳಿಸಿದವು.

ತಮಿಳು ಸೂಪರ್​ಸ್ಟಾರ್ ಧನುಷ್ ಜತೆ ಪಲ್ಲವಿ ನಟಿಸಿದ ‘ಮಾರಿ-2’ ಚಿತ್ರದ ‘ರೌಡಿ ಬೇಬಿ’ ಹಾಡು ಹೊಸದೊಂದು ಜಾಗತಿಕ ದಾಖಲೆ ನಿರ್ವಿುಸಿರುವುದು ವಿಶೇಷ. ಯುವನ್ ಶಂಕರ್ ರಾಜಾ ಸಂಗೀತದಲ್ಲಿ ಧನುಷ್ ಸ್ವತಃ ಗೀತೆ ರಚಿಸಿ, ಹಾಡಿರುವ ರೌಡಿ ಬೇಬಿಯಲ್ಲಿ ಪಲ್ಲವಿಯ ಅದ್ಭುತ ಡ್ಯಾನ್ಸ್ ಭಾರೀ ಜನಪ್ರಿಯವಾಗಿದೆ. ಯೂ ಟ್ಯೂಬ್​ನಲ್ಲಿ ‘ರೌಡಿ ಬೇಬಿ’ ಹಾಡು 1.1 ಶತಕೋಟಿ ವೀಕ್ಷಣೆ ಹಾಗೂ 50 ಲಕ್ಷ ಲೈಕ್​ಗಳ ವಿನೂತನ ದಾಖಲೆ ಬರೆದಿದೆ. ಭಾರತೀಯ ಚಿತ್ರರಂಗದ ಮಟ್ಟಿಗೆ ಇದೊಂದು ದೊಡ್ಡ ದಾಖಲೆ. ಸದ್ಯ ನಾಗಚೈತನ್ಯ ಜತೆ ನಟಿಸಿರುವ ‘ಲವ್ ಸ್ಟೋರಿ’, ರಾಣಾ ದಗ್ಗುಬಾಟಿ ಜತೆಗಿನ ‘ವಿರಾಟ ಪರ್ವಂ’ ಮತ್ತು ನಾನಿ ಜತೆ ‘ಶ್ಯಾಮ ಸಿಂಘಾ ರಾಯ್’ ಬಿಡುಗಡೆಗೆ ಸಜ್ಜಾಗಿರುವ ಪಲ್ಲವಿ ಚಿತ್ರಗಳು.

‘ಛತ್ರಪತಿ’ ತೆಲುಗು ಚಿತ್ರದ ಬಾಲಿವುಡ್ ಅವತರಣಿಕೆಯಲ್ಲಿ ನಟಿಸಲು ಸಜ್ಜಾಗುತ್ತಿರುವ ಪಲ್ಲವಿ, ಕನ್ನಡದಲ್ಲೂ ನಟಿಸುತ್ತಾರೆಂಬ ವದಂತಿಗಳಿವೆ. ಆದರೆ, ಒಂದಂತೂ ನಿಜ. ಬಂದ ಅವಕಾಶಗಳನ್ನೆಲ್ಲ ಆಕೆ ಒಪ್ಪಿಕೊಳ್ಳುವುದಿಲ್ಲ. ಎಲ್ಲ ಪ್ರಮುಖ ಹೀರೋಗಳ ಜತೆ ನಟಿಸಿಬಿಡಬೇಕು ಎಂಬ ಹಪಾಹಪಿಯಾಗಲೀ, ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಧಾವಂತವಾಗಲೀ ಅವರಿಗಿಲ್ಲ. ಆದರೆ, ನಟಿಸಿದ ಚಿತ್ರಗಳಲ್ಲಿ, ಪಾತ್ರಗಳಲ್ಲಿ ಪಲ್ಲವಿಯ ಛಾಪು ಇರಲೇಬೇಕು. ಉದ್ದುದ್ದ ಡೈಲಾಗ್ ಹೇಳುವುದಿರಲಿ, ಸಂಭಾಷಣೆಯೇ ಇಲ್ಲದೆ ಕೇವಲ ಕಣ್ಣಿನಲ್ಲಿ, ಮುಖಭಾವದಲ್ಲಿ, ಮೌನದಲ್ಲಿ, ಶೋಕದಲ್ಲಿ, ಮಂದಹಾಸದಲ್ಲಿ ನೋಡುಗರನ್ನು ಹಿಡಿದಿಡುವ ಅದ್ಭುತ ಶಕ್ತಿ, ಛಾತಿ ಅವರಲ್ಲಿದೆ. ಯಾವ ಭಾಷೆಯ ಚಿತ್ರ ಮಾಡಿದರೂ, ಆ ಭಾಷೆಯ ಸೊಗಡು ಅರಿತುಕೊಂಡು ತಾನೇ ಡಬ್ಬಿಂಗ್ ಮಾಡಬೇಕೆನ್ನುವ ಹಟ ಅವರ ಪಾತ್ರಗಳ ತೂಕ ಹೆಚ್ಚಿಸಿದೆ. ಭಾವಸೂಕ್ಷ್ಮಗಳ ಮನೋಜ್ಞ ಭೂಮಿಕೆಗೆ ಜೀವ ತುಂಬಿದ ‘ದಿಯಾ’ದಂಥ ತಮಿಳು ಚಿತ್ರವಿರಲಿ, ಲವಲವಿಕೆಯ ಪಾತ್ರದಲ್ಲಿ ದೀಪಾವಳಿಯ ಬೆಳಕು ಮೂಡಿಸುವ ‘ಫಿದಾ’ದಂಥ ತೆಲುಗು ಚಿತ್ರವಿರಲಿ, ಹಾಸ್ಯ, ಅಭಿನಯ, ನೃತ್ಯ ಮೇಳೈಸಿದ ‘ಮಾರಿ-2’ದಂಥ ಜನಪ್ರಿಯ ಚಿತ್ರವಿರಲಿ, ಪಲ್ಲವಿಗೆ ಲೀಲಾಜಾಲ.

2018 ಡಿಸೆಂಬರ್​ನಲ್ಲಿ ಕನ್ನಡದ ಯಶ್ ನಟನೆಯ ‘ಕೆಜಿಎಫ್’ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಅಬ್ಬರಕ್ಕೆ ಅದೇ ಸಮಯದಲ್ಲಿ ಬೇರೆಬೇರೆ ಭಾಷೆಗಳಲ್ಲಿ ಬಿಡುಗಡೆಗೊಂಡ ಹಲವು ಚಿತ್ರಗಳು ನೆಲಕಚ್ಚಿದವು. ಪಲ್ಲವಿ ನಟಿಸಿದ ‘ಪಡಿ ಪಡಿ ಲೆಚ್ಚೆ ಮನಸು’ (ಪಿಪಿಎಲ್​ಎಂ) ಕೂಡ ‘ಕೆಜಿಎಫ್’ ಜತೆಗೇ ರಿಲೀಸ್ ಆಗಿ ಫ್ಲಾಪ್ ಪಟ್ಟಿಗೆ ಸೇರಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ವಪಕರ ಬಗ್ಗೆ ಸಹಾನುಭೂತಿಯಿಂದ ಪಲ್ಲವಿ ಸಂಭಾವನೆ ಹಿಂದಿರುಗಿಸಲು ಮುಂದಾಗಿದ್ದು ಅವರ ದೊಡ್ಡಗುಣ. ಹೀಗೆ ಚಿತ್ರರಸಿಕರ ಪಾಲಿಗೆ ಸಾಯಿ ಪಲ್ಲವಿ ಎಂದರೆ ಒಂದು ವಿಸ್ಮಯ, ಅದ್ಭುತ ನಟಿ, ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಮನಸ್ಸಿನ ಹುಡುಗಿ. ಇದಕ್ಕಿಂತ ಹೆಚ್ಚೇನು ಬೇಕು?

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net