ಸಾಲ ತೀರಿಸಲಿಕ್ಕೆಂದೇ ಸಂಶೋಧಿಸಿದ ಸೇಫ್ಟಿಪಿನ್

Untitled design
Published on

ಅಮೆರಿಕದ ನ್ಯೂಯಾರ್ಕ್ ಸಂಸ್ಥಾನದ ಮಾರ್ಟಿನ್ಸ್​ಬರ್ಗ್​ನಲ್ಲಿ 1796ರಲ್ಲಿ ಜನಿಸಿದ ವಾಲ್ಟರ್ ಹಂಟ್ ಒಬ್ಬ ಯಂತ್ರಕರ್ವಿು ಆಗಿದ್ದವನು. ಹೊಸ ವಿನ್ಯಾಸದ ಹೊಲಿಗೆ ಯಂತ್ರ, ಬೆರಳಚ್ಚು ಯಂತ್ರ ಇತ್ಯಾದಿ ಏನಾದರೊಂದು ಆವಿಷ್ಕಾರ ಮಾಡುವುದು ಅವನ ಪ್ರವೃತ್ತಿ. ಆದರೆ ಅದನ್ನು ದುಡ್ಡು ಮಾಡುವ ದಂಧೆಯಾಗಿಸುವುದಕ್ಕೆ ಆತನ ನೈತಿಕತೆ, ಸಜ್ಜನಿಕೆಗಳು ಅಡ್ಡ ಬರುತ್ತಿದ್ದವು. ಹಾಗಾಗಿ ವಾಲ್ಟರ್ ಶ್ರೀಮಂತನಾಗಲಿಲ್ಲ, ಮಾತ್ರವಲ್ಲ, ಸ್ನೇಹಿತರಿಂದ ಕೈಸಾಲ ತೆಗೆದುಕೊಳ್ಳುತ್ತಿದ್ದ. ಒಮ್ಮೆ 15 ಡಾಲರ್ ಸಾಲ ಮರುಪಾವತಿ ಆಗಬೇಕಿತ್ತು. ಆ ಕಾಲದಲ್ಲಿ ಅದು ದೊಡ್ಡ ಮೊತ್ತವೇ. ಏನಪ್ಪಾ ಮಾಡುವುದು ಎಂಬ ಚಿಂತೆಯಲ್ಲಿ, ಒಂದುದಿನ ಅವನದೇ ಕಾರ್ಖಾನೆಯ ನಿರುಪಯುಕ್ತ ತಂತಿ ಚೂರೊಂದನ್ನು ಕೈಯಲ್ಲಿ ಹಿಡಿದುಕೊಂಡು ಬಗ್ಗಿಸುತ್ತ ಸುರುಳಿ ಸುತ್ತುತ್ತ ಯೋಚನೆಯಲ್ಲಿದ್ದನು.

ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ತಂತಿ ಚೂರಿನ ಮಧ್ಯಭಾಗವನ್ನು ಸುರುಳಿ ಸುತ್ತಿದರೆ, ಉಳಿದೆರಡು ತುದಿಗಳನ್ನು ಹತ್ತಿರ-ದೂರ ಮಾಡುವುದು ಸಾಧ್ಯವೆಂದೂ, ಒಂದು ತುದಿಯನ್ನು ಹಾಗೇ ಬಿಟ್ಟು ಇನ್ನೊಂದು ತುದಿಯನ್ನು ಕೊಕ್ಕೆಯಾಗಿಸಿದರೆ ಎರಡನ್ನೂ ಸೇರಿಸಿ ಮುಚ್ಚುವುದಕ್ಕಾಗುತ್ತದೆಂದೂ ಕಂಡುಕೊಂಡನು. ವಾಲ್ಟರ್​ಗೆ ಅದೊಂದು ‘ಯುರೇಕಾ’! ಕ್ಷಣ. ಹಾಗೆ ಆವಿಷ್ಕಾರವಾದದ್ದೇ ಸೇಫ್ಟಿಪಿನ್. ಆಮೇಲೆ ವಾಲ್ಟರ್ ಆ ರಚನೆಯ ಹಕ್ಕೋಲೆ (patent)ಗೆ ಅರ್ಜಿ ಸಲ್ಲಿಸಿದನು. 1849ರ ಏಪ್ರಿಲ್ 10ರಂದು ಹಕ್ಕೋಲೆ ಸಿಕ್ಕಿತು. ಆದರೆ ಬಡತನ ನೀಗಲಿಕ್ಕಾಗಿ ಅದನ್ನು 400 ಡಾಲರ್​ಗೆ ಒಬ್ಬ ಉದ್ಯಮಿಗೆ ಮಾರಿಬಿಟ್ಟನು. ಈಗ ಪ್ರಪಂಚದಲ್ಲಿ ದಿನವೊಂದಕ್ಕೆ ಕೋಟಿಗಟ್ಟಲೆ ಸೇಫ್ಟಿಪಿನ್ ಉತ್ಪಾದನೆಯಾಗುತ್ತವೆ. ಅಷ್ಟೇ ಪ್ರಮಾಣದಲ್ಲಿ ವ್ಯಾಪಕ ಬಳಕೆಯೂ ಇದೆ. ಅದೊಂದು ದೊಡ್ಡ ಉದ್ಯಮವೇ ಆಗಿದೆ. ಆದಾಯದ ಒಂದಂಶ ರಾಯಧನವಾಗಿ ವಾಲ್ಟರ್ ಹಂಟ್​ಗೆ ಸೇರಬಹುದಿತ್ತು, ಆದರೆ ಆತ ಹಕ್ಕೋಲೆಯನ್ನು ಮಾರಿ ಆಗಿತ್ತು. ಹಾಗೆ ಬಡವನಾಗಿದ್ದುಕೊಂಡೇ 1859ರಲ್ಲಿ ತೀರಿಹೋದನು. ಹಕ್ಕೋಲೆ ಸಿಕ್ಕಿದ್ದ ಏಪ್ರಿಲ್ 10ರ ದಿನಾಂಕವನ್ನು ಈಗ ‘ಸೇಫ್ಟಿಪಿನ್ ದಿನಾಚರಣೆ’ ಎಂದು ಸಂಭ್ರಮಿಸುವ ಕೃತಜ್ಞರು ಪ್ರಪಂಚದಲ್ಲಿ ಕೆಲವರಾದರೂ ಇದ್ದಾರೆಂದು ಅವನ ಆತ್ಮ ಸಂತೃಪ್ತವಾಗಿರಬಹುದು.

ಅಷ್ಟಾಗಿ, ಸೇಫ್ಟಿಪಿನ್​ನ ಈಗಿನ ವಿನ್ಯಾಸವಷ್ಟೇ ವಾಲ್ಟರ್ ಹಂಟ್ ಮಾಡಿದ ಆವಿಷ್ಕಾರ. ಏಕೆಂದರೆ ಉಡುಪುಗಳನ್ನು ಧರಿಸುವಾಗ ಅಂತಹ ಪರಿಕರಗಳ ಬಳಕೆ ಪ್ರಾಚೀನ ಗ್ರೀಕರಲ್ಲೇ ಇತ್ತೆಂಬ ದಾಖಲೆಗಳಿವೆ. ಹೋಮರ್​ನ ಒಡೆಸ್ಸಿ ಕಾವ್ಯದಲ್ಲಿ ರಾಣಿ ಪೆನಿಲೋಪ್​ಳನ್ನು ಮೋಹಿಸಿದ್ದ ನೂರಾರು ಗಂಡುಗಳ ಪೈಕಿ ಎಂಟಿನೌಸ್ ಎಂಬಾತ ಕಸೂತಿಯಿದ್ದ ಬೆಲೆಬಾಳುವ ಪೋಷಾಕು ಮತ್ತು ಬಂಗಾರದ ಒಂದು ಡಜನ್ ಪಿನ್​ಗಳನ್ನು ಪೆನಿಲೋಪ್​ಗೆ ಉಡುಗೊರೆ ಕೊಟ್ಟಿದ್ದನೆಂಬ ವಿವರಗಳಿವೆ. ಹಾಗೆ ಬಟ್ಟೆ ಜೋಡಣೆಗೆ ಪಿನ್ ಬಳಕೆ ಅಲ್ಲಲ್ಲಿ ಬೇರೆಡೆಗಳಲ್ಲೂ ಇತ್ತು. ಆದರೆ ವಾಲ್ಟರ್ ಹಂಟ್ ಮಾಡಿದ ವಿನ್ಯಾಸ, ಅದರ ಸರಳತೆ, ಅಗ್ಗವಾಗಿ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯತೆ- ಇವುಗಳಿಂದಾಗಿ ಸೇಫ್ಟಿಪಿನ್ ಇಂದು ವಿಶ್ವವ್ಯಾಪಿಯಾಗಿದೆ. ಕೆಲವರಿಗಂತೂ ಒಡವೆ, ಪಾತ್ರೆ, ವಸ್ತ್ರಗಳು ಕುಟುಂಬದಲ್ಲಿ ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರ ಆಗುವಂತೆ ‘ಇದು ನನ್ನ ಅಜ್ಜಿಯಿಂದ ಬಳುವಳಿಯಾದ ಸೇಫ್ಟಿಪಿನ್!’ ಎಂದು ಹೇಳಿಕೊಳ್ಳುವಷ್ಟು ಭಾವುಕತೆಯ ಲೇಪವನ್ನೂ ಪಡೆದಿದೆ.

ಇಷ್ಟು ವರ್ಣರಂಜಿತ ಇತಿಹಾಸವಿರುವ ಸೇಫ್ಟಿಪಿನ್ ಅನ್ನು ಇಂಗ್ಲಿಷ್​ನಲ್ಲೇ ಗುರುತಿಸುವುದಕ್ಕಿಂತ ಕನ್ನಡದ್ದೊಂದು ಪದವಿದ್ದರೆ ಚಂದವೆಂದು ಕಳೆದ ಬಾರಿಯ ಅಂಕಣದಲ್ಲಿ ಸವಾಲಾಗಿ ಸೇರಿಸಿಕೊಂಡಿದ್ದಾಗಿತ್ತು. ಅನೇಕ ಓದುಗರು ಪದಶಃ ತರ್ಜುಮೆ ಮಾಡಿ ‘ಕ್ಷೇಮ ಸೂಜಿ’, ‘ಸುರಕ್ಷಾ ಸೂಜಿ’, ‘ರಕ್ಷಿತ ಸೂಜಿ’, ‘ಕಾಪು ಸೂಜಿ’ ಮುಂತಾದ ಒಳ್ಳೊಳ್ಳೆಯ ಪದಗಳನ್ನು ಸೂಚಿಸಿದ್ದಾರೆ. ಇವೆಲ್ಲ ಚೆನ್ನಾಗಿಯೇ ಇವೆ, ಸೇಫ್ಟಿಪಿನ್ ಒಂದು ಥರದ ಸೂಜಿ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗುವಂತಿವೆ. ಆದರೆ ಮಾತಿನಲ್ಲಿ/ಬರಹದಲ್ಲಿ ತೀರ ಗ್ರಾಂಥಿಕ ಎನಿಸುವುದಿಲ್ಲವೇ? ಅದಕ್ಕಿಂತ, ಸೂಜಿ ಪದ ಬಳಸದೆಯೇ ಸೂಜಿಯ ಚಿತ್ರಣ ಕೊಡುವುದು ಸಾಧ್ಯವೇ ಎಂದು ನೋಡಬಹುದು. ಮಾಮೂಲಿ ಸೂಜಿಗಿಂತ ಸೇಫ್ಟಿಪಿನ್ ಭಿನ್ನವಾಗುವುದು ಅದರ ಚೂಪಾದ ತುದಿಯನ್ನು ಮುಚ್ಚುವ ವ್ಯವಸ್ಥೆ ಇರುವುದರಿಂದ. ಅಷ್ಟೇಅಲ್ಲ, ಅದು ಸುರಕ್ಷಿತ ಅನಿಸುವುದೇ ಮುಚ್ಚುವಿಕೆಯಿಂದ. ಈ ದೃಷ್ಟಿಯನ್ನಿಟ್ಟುಕೊಂಡು ‘ಮುಚ್ಚುಮುಳ್ಳು’ ಎಂಬ ಪದ ಸೂಚಿಸಿದ್ದಾರೆ ವಿನಾಯಕ ಕಾಮತ್. ಹೆಚ್ಚಾಗಿ ಬಟ್ಟೆಗೇ ಉಪಯೋಗಿಸುವುದರಿಂದ, ಮಾನ ಮುಚ್ಚುವ ಮುಳ್ಳೂ ಹೌದು ಎಂದು ಅವರ ತರ್ಕ. ಇನ್ನೊಂದು ಪದ ‘ಮೊನೆ ವಂಕಿ’, ಸೂಚಿಸಿದವರು ತೇರದಾಳದಿಂದ ಎಸ್.ಆರ್ ರಾವಳ. ಮೊನೆ ಅಂದರೆ ಚೂಪಾದ ತುದಿ. ವಂಕಿ ಪದಕ್ಕಿರುವ ಬೇರೆಬೇರೆ ಅರ್ಥಗಳ ಪೈಕಿ ಕೊನೆಯನ್ನು ಬಗ್ಗಿಸಿದ ಲೋಹದ ಕೊಂಡಿ ಎಂದು ತೆಗೆದುಕೊಳ್ಳಬಹುದು. ಸೇಫ್ಟಿಪಿನ್​ನ ನಿಖರ ಚಿತ್ರಣ ‘ಮೊನೆ ವಂಕಿ’ ಪದದಲ್ಲಿದೆ! ಹಾಗೆಯೇ ಸೇಫ್ಟಿಪಿನ್ ಆಕಾರ ಕನ್ನಡದ ಐ ಅಕ್ಷರವನ್ನು ಹೋಲುವುದರಿಂದ ಸುಧೀರ ಟಂಕಸಾಲಿ ಅವರು ಟಂಕಿಸಿದ ‘ಐಸೂಜಿ’ ಎಂಬ ಪದ ಸಹ ಮುದ್ದಾಗಿದೆ.

ಇನ್ನೊಂದು ಸಾಧ್ಯತೆಯೆಂದರೆ ‘ಅಣಿ’ ಅಥವಾ ‘ಆಣಿ’ ಪದಗಳನ್ನು ಸೂಜಿ ಎಂಬರ್ಥದಲ್ಲಿ ಬಳಸಿಕೊಂಡು ಅವುಗಳಿಗೊಂದು ವಿಶೇಷಣ ತೊಡಿಸಿ ಸುರಕ್ಷೆಯ ಚಿತ್ರಣ ಕೊಡುವುದು. ಅಣಿ ಮತ್ತು ಆಣಿ ಎರಡೂ ಪದಗಳು ಸ್ವರಾಕ್ಷರದಿಂದ ಆರಂಭವಾಗುವುದರಿಂದ ಬೇರೆ ಪದದೊಡನೆ ಜೋಡಿಸುವುದು ಸುಲಭ. ಅಲ್ಲದೆ ಇವೆರಡೂ ಸಂಸ್ಕೃತ ಮತ್ತು ಕನ್ನಡದಲ್ಲೂ ಬಳಕೆಯಾಗುತ್ತವೆ. ಮೊಳೆ, ಸೂಜಿ ಮುಂತಾಗಿ ಚೂಪಾಗಿರುವ ವಸ್ತುಗಳಿಗೆ ಅನ್ವಯವಾಗುತ್ತವೆ. ಹೀಗೆ ಅಣಿ/ಆಣಿ ಬಳಸಿ ರಚನೆಯಾದಂಥವು: ‘ಮುಚ್ಚಣಿ’ (ವಿದ್ಯಾಶಂಕರ ಶರ್ಮ); ‘ಭದ್ರಾಣಿ’ (ಡಾ.ಸುರೇಶ ಸೊಣ್ಣಪ್ಪ), ‘ರಕ್ಷಾಣಿ’ (ಸಂಜೀವ ಜೋಷಿ, ಷಡಕ್ಷರಮುನಿ ಸ್ವಾಮೀಜಿ), ‘ಕಾಪಣಿ’ (ಗಿರೀಶ್ ಎ.ವಿ), ‘ಕೊಕ್ಕೆಯಾಣಿ’ (ಸುರೇಂದ್ರ ಪೈ). ಮರಾಠಿಯಲ್ಲಿರುವ ‘ಟಾಚಣಿ’ ಆಗಬಹುದೆಂದವರು: ಪ್ರಕಾಶ ಕುಲಕರ್ಣಿ ಮತ್ತು ಅಶೋಕ ಪೂಜಾರ. ಅಣಿ ಪದದೊಡನೆ ಪುರಾಣಕಾಲದ ಅಣಿಮಾಂಡವ್ಯನೆಂಬ ಋಷಿಯ ಕಥೆಯೂ ನೆನಪಾಗುತ್ತದೆ. ನಿರಪರಾಧಿಯಾಗಿದ್ದರೂ ಕಳ್ಳತನದ ಆಪಾದನೆಯಿಂದಾಗಿ ಶೂಲಕ್ಕೇರಿಸಲ್ಪಟ್ಟವನು. ಸಾಯದೆ, ದೇಹಕ್ಕೆ ಚುಚ್ಚಿದ್ದ ಶೂಲ ಅಂಟಿಕೊಂಡು ಬದುಕುಳಿದವನು. ಮುಂದೆ ಸಹಜ ಮರಣಾನಂತರ ನರಕಕ್ಕೆ ಹೋಗಬೇಕಾಯ್ತು, ಬಾಲ್ಯದಲ್ಲಿ ನೊಣಗಳನ್ನು ಕೊಲ್ಲುತ್ತಿದ್ದನೆಂಬ ಕಾರಣಕ್ಕೆ. ಬಾಲಾಪರಾಧ ಶಿಕ್ಷಾರ್ಹವಲ್ಲ ಎಂದು ವಾದಿಸಿ ಯಮನಿಗೇ ಶಾಪ ಕೊಟ್ಟು, ಯಮ ವಿದುರನಾಗಿ ಹುಟ್ಟುವಂತೆ ಮಾಡಿದ ಮಹಾನುಭಾವ ಅಣಿಮಾಂಡವ್ಯ.

ಕಳೆದಸಲ ಕೇಳಿದ್ದ Shuttle ಪದಕ್ಕೂ ವಿಭಿನ್ನ ಚಿಂತನೆಯ ಪ್ರವೇಶಿಕೆಗಳು ಬಂದಿವೆ. ‘ತಾರಾಡು’ ಎಂಬ ಕ್ರಿಯಾಪದ ಚೆನ್ನಾಗಿ ಹೊಂದುತ್ತದೆಂದು ಇಬ್ಬರು ಓದುಗರು ಸೂಚಿಸಿದ್ದಾರೆ: ಮೂಡುಬಿದರೆಯಿಂದ ಯಶೋದಾ ಎಂ ಗೋಪಿ, ಮತ್ತು ಮೈಸೂರಿನಿಂದ ಎನ್.ವಿ ಶಂಕರ್. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ವಿನಲ್ಲಿ ತಾರಾಡು ಪದಕ್ಕೆ ಓಡಾಡು, ಬಂದುಹೋಗಿ ಮಾಡು, ಎಡೆತಾಕು ಎಂಬ ಅರ್ಥಗಳನ್ನು ಕೊಡಲಾಗಿದೆ. ‘ನೂರಾಡಿ ಏನು ಫಲವು ತಾರಾಡುವಾಗ ಒಲವು...’ ಎಂದು ಬೇಂದ್ರೆಯವರು ಸಖೀಗೀತದಲ್ಲೂ, ‘ಗೃಹಿಣಿಗೆ, ಅಡಿಗೆಮನೆಗೂ ಉಗ್ರಾಣಕ್ಕೂ ತಾರಾಡುವುದರಲ್ಲಿ ವ್ಯರ್ಥವಾಗಿ ಕಾಲ, ಶಕ್ತಿ ಕಳೆದುಹೋಗುತ್ತದೆ’ ಎಂದು ಲೇಖಕಿ ಸುಶೀಲಾ ಲಿಂಗಯ್ಯ ‘ಗೃಹವಿಜ್ಞಾನ’ವೆಂಬ ಕೃತಿಯಲ್ಲೂ ಬಳಸಿದ ಉದಾಹರಣೆಗಳನ್ನು ಕೊಡಲಾಗಿದೆ. ಇಂಗ್ಲಿಷ್​ನಲ್ಲಿ Shuttle ಕ್ರಿಯಾಪದವಾಗಿ ಬಳಕೆಯಾಗುವುದು ಈ ಅರ್ಥದಲ್ಲೇ. ಹಾಗಾಗಿ, ಕ್ರಿಯಾಪದವಾಗಿ ‘ತಾರಾಡು’, ನಾಮಪದವಾಗಿ ಬೇಕಿದ್ದರೆ ‘ತಾರಾಟಕ’ ಎಂದರಾಯ್ತು. ಹೋಗಿ-ಬಂದು ಮಾಡುವುದನ್ನು ಹ್ರಸ್ವವಾಗಿ ‘ಹೋಬ’ ಎನ್ನಬಹುದಲ್ಲವೇ ಎಂಬ ಚಂದ್ರಿಕಾ ಹೆಗಡೆ ಮತ್ತಿಹಳ್ಳಿಯವರ ಸಲಹೆಯೂ ಚೆನ್ನಾಗಿದೆ. ಷಟಲ್ ‘ಹೋಬ’ ಅಂತಾದರೆ ಆಡಲಿಕ್ಕೆ ಬಳಸುವ ಷಟಲ್​ಕಾಕ್ ‘ಹೋಬ ಪುಕ್ಕ’ ಆಗುತ್ತದೆ. ‘ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ’ ರೀತಿಯಂತಾಗುತ್ತದೆಂದು ವಿ.ವಿಜಯೇಂದ್ರ ರಾವ್ ಅವರ ಅನುಮೋದನೆಯೂ ಇದೆ.

Shuttleಎಂದರೆ ಬಟ್ಟೆ ನೇಯುವ ಮಗ್ಗದಲ್ಲಿ ಉದ್ದ ಎಳೆಗಳ ನಡುವೆ ಅಡ್ಡ ಎಳೆಗಳನ್ನು ಎಡಭಾಗದಿಂದ ಬಲಕ್ಕೆ, ಬಲಭಾಗದಿಂದ ಎಡಕ್ಕೆ ನಿರಂತರವಾಗಿ ಹಾಕುತ್ತ ಓಡಾಡುವ ಉಪಕರಣ ಕೂಡ ಆಗುತ್ತದೆ. ಇದಕ್ಕೆ ‘ಲಾಳಿ’ ಎಂಬ ಕನ್ನಡ ಪದ ಈಗಾಗಲೇ ಇದೆ. ಸಂತ ಶಿಶುನಾಳ ಶರೀಫರು ‘ಹಗ್ಗ ಮಗ್ಗವ ನುಂಗಿ ಮಗ್ಗವ ಲಾಳಿಯು ನುಂಗಿ ಮಗ್ಗದಾಗಿರುವ ಅಣ್ಣನನ್ನು ಕುಣಿಯು ನುಂಗಿತ್ತ...’ ಎಂದಿದ್ದರಲ್ಲಿರುವ ಲಾಳಿ ಅದೇ. ಸೂಚಿಸಿದವರು: ರಾಜು ಗದಗ, ವಾಸುದೇವ ಭಟ್, ಬಿ.ವಿ.ಕುಲಕರ್ಣಿ, ಮನೋನ್ಮಣಿ ಕೆ.ವಿ, ಲೋಕೇಶ ಮಠದ, ಮೈ.ಸು.ಶ್ರೀನಿವಾಸಬಾಬು, ಡಾ.ಸಂಗಮೇಶ ಸುರಭಿ ಮುಂತಾದವರು. ಅದೇ ಅರ್ಥದ ‘ಅಟ್ಟೆ’ ಪದ ನೆನಪಿಸಿದವರು: ಶಿವಯೋಗಿ ಎನ್.ಎಮ್ ಪ್ರಮೋದ ಕುಲಕರ್ಣಿ, ರಾಜೀವ ಪಟವರ್ಧನ್, ಮಮತಾ ಜಿ ಮೈಸೂರು ಮುಂತಾದವರು. ಲಾಳಿ/ಅಟ್ಟೆಗಳು ಮಗ್ಗದ ಸಂದರ್ಭಕ್ಕೆ ಸರಿಯೇ; ಆದರೆ ಸಂಚಾರವ್ಯವಸ್ಥೆಗೆ ಅಥವಾ ಸ್ಪೇಸ್​ಷಟಲ್​ಗೆ ಹೊಂದಿಸುವುದು ಕಷ್ಟ. ‘ತಾರಾಟಕ’ ಪದಕ್ಕಾದರೆ ಆ ಸಾಮರ್ಥ್ಯವಿದೆ. ಅತ್ತಿಂದಿತ್ತ ಚಲನೆಯ ಆವರ್ತನ ಮಾಡುವುದೆಂಬ ಅರ್ಥದ ‘ಆವರ್ತಕ’ (ಪ್ರಭುಪ್ರಸಾದ್ ನಡುತೋಟ, ಎನ್.ಕೆ ಸುಬ್ಬಣ್ಣ, ಕಾಳಮ್ಮ ಎಚ್.ಎಸ್) ಸಹ ಸೂಕ್ತವೆನಿಸುತ್ತದೆ.

ಕೊನೆಯದಾಗಿ Dissection. ಇದಕ್ಕೆ ‘ಛೇದನ’ ಎಂಬ ಪದವನ್ನು ಸೂಚಿಸಿ ನೂರಕ್ಕೂ ಹೆಚ್ಚು ಪ್ರವೇಶಿಕೆಗಳು ಬಂದಿವೆ. ಜೀವಶಾಸ್ತ್ರ ಪಠ್ಯಪುಸ್ತಕಗಳ ಕನ್ನಡ ಆವೃತ್ತಿಯಲ್ಲಿ ಇದು ಬಳಕೆಯಾಗಿದೆ ಎಂದು ಕೆಲವರು ತಿಳಿಸಿದ್ದಾರೆ. ಹತ್ತನೆಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ನನ್ನಂಥವರಿಗೆ ಜೀವಶಾಸ್ತ್ರದಲ್ಲಿ ಛೇದನ ಅಷ್ಟೇಅಲ್ಲ, ‘ಅಡ್ಡ ಕೊಯ್ತ’, ‘ಉದ್ದ ಕೊಯ್ತ’ಗಳು, ಗಣಿತದಲ್ಲಿ ಗಣಪದ್ಧತಿಯಲ್ಲಿ ‘ಛೇದನ ಗಣ’, ‘ವೆನ್ನನ ನಕ್ಷೆ’ ಸಹ ನೆನಪಿರುತ್ತವೆ. ಸ್ವಾರಸ್ಯವೇನೆಂದರೆ Dissection ಮೂಲತಃ ಇದ್ದದ್ದು- ಅಂಗಾಂಶ ಪರೀಕ್ಷೆಗಾಗಿ ಪ್ರಾಣಿ ಅಥವಾ ಸಸ್ಯವನ್ನು ತುಂಡರಿಸುವ ಪ್ರಕ್ರಿಯೆ ಎಂಬರ್ಥದಲ್ಲೇ. ಕ್ರಮೇಣ, ಸಸ್ಯ ಅಥವಾ ಪ್ರಾಣಿಯೇ ಆಗಬೇಕಿಲ್ಲ, ಯಾವುದೇ ವಸ್ತು ಅಥವಾ ವಿಷಯದ ಕೂಲಂಕಷ ಅರಿಕೆಗಾಗಿ ಪ್ರತ್ಯೇಕ ಭಾಗಗಳಾಗಿಸುವುದನ್ನೂ Dissection ಎನ್ನಲಾಯಿತು. ಈ ದೃಷ್ಟಿಯಿಂದ ‘ತುಂಡರಿಕೆ’ (ಭಾಗ್ಯಶ್ರೀ ಕೆ.ಸಿ, ಮಧುರಾ ಮಂಗಳೂರು, ಸಂಯಮ ಭಟ್, ರಾಜೇಂದ್ರ ದೇಶಪಾಂಡೆ, ಸತ್ಯಮಾಧವ ಲಿಂಗದಹಳ್ಳಿ, ಅನಸೂಯಾ ಜಗದೀಶ್, ಶಾಂತಿನಿ ಮಂಜುನಾಥ್, ಎನ್.ಎಚ್.ದೇಶಪಾಂಡೆ ಮುಂತಾದವರು) ಪದ ಗಮನಾರ್ಹವಾಗಿದೆ. ಅದೇ ತರ್ಕದಿಂದ ‘ಕುಯ್ದರಿಕೆ’ (ಪ್ರಕಾಶ್ ಬಿ), ‘ಸೀಳುಪರೀಕ್ಷೆ’ (ರಂ.ಗು.ಶ್ರೀನಿವಾಸ), ಮತ್ತು ‘ಛೇದಾಧ್ಯಯನ’ (ಎ.ಬಿ.ಪ್ರಕಾಶ್) ಸಹ. ಬೆಂಗಳೂರಿನಲ್ಲಿ ವೈದ್ಯರಾಗಿರುವ ಡಾ.ಕಿರಣ ಪೇಟಕರ ಇಲ್ಲೊಂದು ಭಾಷಾಸೂಕ್ಷ್ಮದ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಏನೆಂದರೆ ಇಂಗ್ಲಿಷ್​ನ Dissection ಪದವನ್ನೇ ಸೀಳಿ ನೋಡಿದರೆ Dis ಮತ್ತು section ಎಂಬೆರಡು ಭಾಗಗಳಿವೆ. ಈಜಿಠ ಉಪಸರ್ಗ ಸಾಮಾನ್ಯವಾಗಿ ಅಲ್ಲದ್ದು/ಇಲ್ಲದ್ದು ಎಂಬ ನೇತ್ಯಾತ್ಮಕ ವಿಶೇಷಣವಾಗಿ ಬಳಕೆ. ಹಾಗಾದರೆ Dissection ಅಂದರೆ ವಿಭಜಿಸಿದ್ದೋ ಅಥವಾ ವಿಭಜನೆಯಿಲ್ಲದ್ದು? ಅಂದಹಾಗೆ ಡಾ.ಕಿರಣ ಕನ್ನಡಪ್ರಿಯ ವೈದ್ಯಮಿತ್ರರೊಡನೆ ‘ವಿಘಟನೆ’ ಪದ ಬಳಸುತ್ತಾರಂತೆ.

ಈ ವಾರದ ಮೂರು ಪದಗಳು

1 Nervous : ಸಭಾಕಂಪದಿಂದಲೋ ಮತ್ತಾ ್ಯ ಕಾರಣಕ್ಕೋ ನೀವು ನರ್ವಸ್ ಆದ/ಆಗುವ ಸಂದರ್ಭಗಳಿವೆಯೇ? ಆ ಸ್ಥಿತಿಯನ್ನು ಬಣ್ಣಿಸಲಿಕ್ಕೊಂದು ಕನ್ನಡ ಪದ ಬೇಕು.

2 Punch : ಕುಸ್ತಿಪಟುಗಳು ಕೊಟ್ಟುಕೊಳ್ಳುವುದಿರಬಹುದು, ಹಾಸ್ಯಪಟುಗಳು ಹೊಸೆಯುವುದಿರಬಹುದು, ಪಂಚ್ ಎನ್ನಲಿಕ್ಕೂ ‘ಪಂಚು’ ಅಲ್ಲದ ಕನ್ನಡ ಪದ ಬೇಕಿದೆ.

3 Walkie Talkie: ರೇಡಿಯೋ ತರಂಗಾಂತರಗಳಲ್ಲಿ ಕಾರ್ಯನಿರ್ವಹಿಸುವ, ಕೈಯಲ್ಲಿ ಹಿಡಿದು ಧ್ವನಿಸಂವಹನಕ್ಕೆ ಬಳಸುವ ಜೋಡಿ ಉಪಕರಣ. ಕನ್ನಡದಲ್ಲಿ ಏನನ್ನೋಣ?

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ:wa.me/+12404010945

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್

ಮತ್ತು ಅಂಕಣ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net