ಜಾಲಿ ಲೈಫ್​ಗೆ ಸಾಧು ಡೈರೆಕ್ಷನ್

Sadhu
Published on

ಬೆಂಗಳೂರು: ಸಾಧುಕೋಕಿಲ ಸಕಲ ಕಲಾವಲ್ಲಭ ಎಂಬುದು ಯಾರಿಗೆ ಗೊತ್ತಿಲ್ಲ ಹೇಳಿ. ನಟನೆಗೂ ಸೈ, ನಿರ್ದೇಶನಕ್ಕೂ ಜೈ ... ಸಂಗೀತದ ವಿಚಾರಕ್ಕೆ ಬಂದರೆ ಅಲ್ಲಿ ಎತ್ತಿದ ಕೈ. ಐದು ವರ್ಷಗಳಿಂದ ನಿರ್ದೇಶನದಿಂದ ದೂರವಾಗಿ, ಬರೀ ನಟನೆ ಮತ್ತು ಸಂಗೀತ ನಿರ್ದೇಶನದಲ್ಲೇ ತೊಡಗಿಸಿಕೊಂಡಿದ್ದ ಸಾಧು ಮಹಾರಾಜ್, ಈಗ ಐದು ವರ್ಷಗಳ ನಂತರ ‘ಜಾಲಿ ಲೈಫ್’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಹಿಂದೆ ‘ಅಮೃತವಾಣಿ’, ‘ಪೆರೋಲ್’ ಮತ್ತು ‘ಬರ್ಫಿ’ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಶೇಖರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾ ಘೋಷಣೆ ಮತ್ತು ಸಾಧು ಕೋಕಿಲ ಅವರ ಜನ್ಮದಿನದ ನಿಮಿತ್ತ ಕೆಂಗೇರಿ ಬಳಿ ವಿಶೇಷ ಕಾರ್ಯಕ್ರಮವೊಂದನ್ನು ಚಿತ್ರತಂಡ ಹಮ್ಮಿಕೊಂಡಿತ್ತು.

‘ಇಲ್ಲಿಯವರೆಗೂ ಈ ತರಹದ ಜನ್ಮದಿನವನ್ನು ನಾನು ಆಚರಣೆ ಮಾಡಿಲ್ಲ’ ಎನ್ನುತ್ತಲೇ ಮಾತು ಆರಂಭಿಸಿದ ಸಾಧು, ‘‘ಜಾಲಿ ಲೈಫ್’ ಸಿನಿಮಾ ಯುವಪೀಳಿಗೆಯ ಸಿನಿಮಾ. ಕಾಲೇಜು ಹುಡುಗರ ಕಥೆ. ನನ್ನ ಮೇಲೆ ಭರವಸೆ ಇಟ್ಟು ಈ ಸಿನಿಮಾ ನಿರ್ದೇಶನ ನೀಡಿದ್ದಾರೆ ರಾಜಶೇಖರ್. ನನ್ನ ಮಗ ಸುರಾಗ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾನೆ. ಆತನೇ ಯಾಕೆ ಎಂದರೆ, ಅವನೂ ಯುವಕ. ನಾವು ಹಳೇ ತಲೆಮಾರಿನವರು. ಸಿನಿಮಾದಲ್ಲಿರುವ ಬಹುತೇಕರು ಹೊಸಬರೇ’ ಎನ್ನುತ್ತಾರೆ ಸಾಧು.

ಏಪ್ರಿಲ್ ಮೊದಲ ವಾರದಿಂದ ಶೂಟಿಂಗ್ ಶುರುವಾಗಲಿದೆ. ಜುಲೈ, ಆಗಸ್ಟ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಇನ್ನು, ಸಾಧು ಹುಟ್ಟುಹಬ್ಬಕ್ಕೆ ‘ಮಠ’ ಮತ್ತು ‘ಫ್ಯಾಮಿಲಿ ಪ್ಯಾಕ್’ ಚಿತ್ರತಂಡದವರು ಶುಭಕೋರಿ ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದ್ದಾರೆ. ‘ಫ್ಯಾಮಿಲಿ ಪ್ಯಾಕ್’ ಚಿತ್ರದಲ್ಲಿ ಶ್ರೀಕೃಷ್ಣ ಅವತಾರದಲ್ಲಿ ಸಾಧು ಕಾಣಿಸಿಕೊಂಡಿದ್ದು, ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net