

ಪ್ರತಿಯೊಬ್ಬ ಮನುಷ್ಯನಿಗೂ ಇರುವ ಆಯ್ಕೆ-ಒಂದೋ ಸೃಷ್ಟಿಕರ್ತನ ಒಂದು ‘ಅಂಗ’ದಂತೆ ಇರುವುದು ಅಥವಾ ಆಲೋಚನೆ ಮತ್ತು ಭಾವನೆಗಳ ಕಂತೆಯಾಗಿ ಬದುಕಿರುವುದು. ಪ್ರತಿಕ್ಷಣವೂ ಈ ಆಯ್ಕೆ ಲಭ್ಯ. ಸ್ವೀಕಾರದ ಸ್ಥಿತಿಯಲ್ಲಿದ್ದರೆ, ಜೀವನ ನಿಮ್ಮನ್ನು ಅನುಗ್ರಹದ ವಿಭಿನ್ನ ಸ್ತರಕ್ಕೆ ಕೊಂಡೊಯ್ಯುತ್ತದೆ, ಅಲ್ಲಿ ಸೃಷ್ಟಿಯಲ್ಲಿನ ಒಂದು ಕಲ್ಲು, ಮರ ಮತ್ತು ಅಣುವೂ ನಿಮ್ಮೊಂದಿಗೆ ನಿಮಗೆ ತಿಳಿದ ಭಾಷೆಯಲ್ಲಿ ಮಾತನಾಡುತ್ತದೆ.
ಆದರೆ, ರಸ್ತೆಯಲ್ಲಿ ಹೋಗುತ್ತಿದ್ದಾಗ ಒಂದು ಸೈಕಲ್ ಬಂದರೆ ಹಿಂದಡಿಯಿಡುತ್ತೀರಿ? ನೋವಿನ ಪರಿಣಾಮ ಗೊತ್ತಿರುವುದರಿಂದಲೇ ಹಾಗೆ ಮಾಡುತ್ತೀರಿ. ನೋವಿಲ್ಲದಿದ್ದರೆ, ಕದಲುತ್ತಲೂ ಇರಲಿಲ್ಲ. ಟ್ರಕ್ ಬಂದರೂ ಹಿಂಜರಿಯುತ್ತಿರಲಿಲ್ಲ! ಏಕೆಂದರೆ ಅದು ಅಹಂನ ಸ್ವಭಾವ. ಹಾಗಾಗಿ ನೋವು ಒಳ್ಳೆಯದು. ನೀವದನ್ನು ನಿಜವಾಗಿ ಒಪ್ಪಿಕೊಂಡರೆ, ಆಗ ನೋವು ಮಾತ್ರ ಇರುತ್ತದೆ, ಸಂಕಟ ಇರುವುದಿಲ್ಲ. ಇದಕ್ಕೆ ಹಲವಾರು ಉದಾಹರಣೆ ನೀಡಬಹುದು.
ಯೋಗಿ ಸದಾಶಿವ ಬ್ರಹ್ಮೇಂದ್ರರ ಜೀವನ ಅದ್ಭುತ ನಿದರ್ಶನ. ಅವರು ಕೊಯಮತ್ತೂರಿನಿಂದ 200 ಕಿ.ಮೀ. ದೂರದಲ್ಲಿರುವ ನೆರೂರು ಎಂಬ ಊರಿನಲ್ಲಿ ಜೀವಿಸುತ್ತಿದ್ದರು. ಅವರೊಬ್ಬ ನಿರ್ಕಾಯ (ದೇಹದ ಬಗ್ಗೆ ಅರಿವನ್ನು ಇಟ್ಟುಕೊಳ್ಳದ) ಯೋಗಿಯಾಗಿದ್ದರು. ಶರೀರದಲ್ಲಿರುವ ಎಲ್ಲ 72 ಸಾವಿರ ನಾಡಿಗಳೂ ಸಚೇತನಗೊಂಡರೆ, ಆಗ ಶರೀರದ ಅರಿವು ಇರುವುದಿಲ್ಲ. ಶರೀರವಿಲ್ಲದೆ ಕುಳಿತುಕೊಳ್ಳುವ ಸ್ವಾತಂತ್ರ್ಯವನ್ನು ಕಲ್ಪಿಸಿಕೊಳ್ಳಬಲ್ಲಿರೇನು? ನೀವದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಉದಾಹರಣೆಗೆ, ನೆಲದ ಮೇಲೆ ಕುಳಿತಾಗ ಕಾಲುಗಳು ನೋಯುತ್ತವೆ ಮತ್ತು ಶೀಘ್ರದಲ್ಲೇ ನೀವು ಕೇವಲ ಕಾಲನೋವು ಆಗಿರುತ್ತೀರಷ್ಟೆ. ನಿಮ್ಮೆಲ್ಲ ಮಾನವ ಗುಣಗಳು ಮರೆಯಾಗುತ್ತವೆ. ಆದರೆ, 72 ಸಾವಿರ ನಾಡಿಗಳನ್ನು ಸಚೇತನಗೊಳಿಸಿದರೆ, ಶರೀರವನ್ನು ನಿಮಗೆ ಬೇಕಾದಂತೆ ಬಳಸಬಹುದು, ನಿಮ್ಮ ಶರೀರ ನಿಮ್ಮನ್ನು ನಿಯಂತ್ರಿಸುವುದಿಲ್ಲ.
ಸದಾಶಿವರಿಗೆ ದೇಹದ ಅರಿವೇ ಇರಲಿಲ್ಲ. ಅದರ ಪರಿಣಾಮವಾಗಿ, ಬಟ್ಟೆ ಧರಿಸುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಒಂದು ದಿನ, ಈ ನಗ್ನಯೋಗಿ ಒಬ್ಬ ರಾಜನ ಉದ್ಯಾನದೊಳಕ್ಕೆ ಹೋದರು. ಅಲ್ಲಿ ರಾಜ ತನ್ನ ರಾಣಿಯರೊಂದಿಗೆ ನದಿತೀರದಲ್ಲಿ ವಿಶ್ರಮಿಸುತ್ತಿದ್ದ. ಸದಾಶಿವರನ್ನು ನೋಡಿದ ರಾಜನಿಗೆ ಕೋಪ ಬಂತು. ‘ನಮ್ಮ ಮುಂದೆ ನಗ್ನವಾಗಿ ಹೋಗುತ್ತಿರುವ ಈ ಮನುಷ್ಯ ಯಾರು?’ ಎಂದು ಸೈನಿಕರನ್ನು ಕೇಳಿದ. ಅವರು ಸದಾಶಿವರನ್ನು ಕರೆದರು. ಅವರು ತಿರುಗಿ ನೋಡಲಿಲ್ಲ. ಅವರು ವ್ಯಗ್ರರಾಗಿ, ಸದಾಶಿವರನ್ನು ಹಿಂಬಾಲಿಸಿ ಖಡ್ಗಗಳನ್ನು ಬೀಸಿದರು. ಸದಾಶಿವರ ಬಲಗೈ ತುಂಡಾಗಿ ನೆಲಕ್ಕೆ ಬಿತ್ತು. ಸದಾಶಿವರು ನಿಲ್ಲದೆ ನಡೆಯುತ್ತ ಹೋದರು.
ಆಗ ಸೈನಿಕರು ಹೆದರಿದರು. ಈತ ಸಾಮಾನ್ಯ ಮನುಷ್ಯನಲ್ಲ ಎಂಬುದು ಅವರಿಗೆ ಅರ್ಥವಾಯಿತು. ರಾಜ ಮತ್ತು ಅವನ ಅನುಚರರು ಓಡಿ ಹೋಗಿ, ಅವರ ಪಾದಗಳಿಗೆ ಬಿದ್ದರು ಮತ್ತು ಅವರನ್ನು ಮರಳಿ ಕರೆತಂದರು. ಇಂದಿಗೂ, ಅವರ ಸಮಾಧಿ ನೆರೂರಿನಲ್ಲಿದೆ, ಅದೊಂದು ಅತ್ಯಂತ ಶಕ್ತಿಯುತ ಸ್ಥಳವಾಗಿದೆ.
ಹಲವು ವರ್ಷಗಳ ಹಿಂದೆ ನನಗೊಂದು ಅಪಘಾತವಾಯಿತು. ಅವು ನನ್ನ ಮೋಟಾರ್ ಸೈಕಲ್ಲಿನ ದಿನಗಳಾಗಿದ್ದವು, ಆಗ ನನ್ನ ಮೋಟಾರ್ ಸೈಕಲ್ಲಿನಲ್ಲಿ ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದೆ. ನಾನು ನಿಂತಿದ್ದ ಮೋಟಾರ್ ಸೈಕಲ್ಲಿನ ಮೇಲೆ ಕುಳಿತಿರುವಾಗ ಇನ್ನೊಂದು ವಾಹನ ಹಿಮ್ಮುಖವಾಗಿ ಬಂದು ನನ್ನ ಕಾಲನ್ನು ಮೋಟಾರ್ ಸೈಕಲ್ಲಿನ ಕಾಲು ಇಡುವ ಸ್ಥಳಕ್ಕೆ ಒತ್ತಿಬಿಟ್ಟಿತು. ನನ್ನ ಮೀನಖಂಡ ಮೂಳೆಯವರೆಗೂ ಕತ್ತರಿಸಿಹೋಯಿತು. ಅದೊಂದು ದೂರದ ಸ್ಥಳವಾಗಿತ್ತು ಮತ್ತು ಅರಿವಳಿಕೆ ಸೌಲಭ್ಯ(ಅನಸ್ತೇಶಿಯ)ವಿಲ್ಲದ ಸ್ಥಳೀಯ ಆಸ್ಪತ್ರೆಗೆ ಹೋದೆ. ಅಲ್ಲಿ ವೈದ್ಯರು ಗಾಯವನ್ನು ಪರಿಶೀಲಿಸಿ, ‘ನೀವು ಅರಿವಳಿಕೆ ಸೌಲಭ್ಯವಿರುವ ದೊಡ್ಡ ಆಸ್ಪತ್ರೆಗೆ ಹೋಗಬೇಕು’ ಎಂದರು. ದೊಡ್ಡ ಆಸ್ಪತ್ರೆ ತುಂಬ ದೂರದಲ್ಲಿತ್ತು, ಮತ್ತು ಅದು ನಾನು ಹೊರಟಿದ್ದ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿತ್ತು.
ನನಗೆ ಜೀವನದಲ್ಲಿ ಹಿಂತಿರುಗಿ ಹೋಗುವುದೆನ್ನುವುದೇ ಗೊತ್ತಿಲ್ಲ; ಅದು ಯಾವಾಗಲೂ ನನ್ನ ಸಮಸ್ಯೆಯಾಗಿತ್ತು! ಹಾಗಾಗಿ ಹೇಳಿದೆ, ‘ನಾನು ಈ ಕಡೆ ಹೋಗುವುದಿಲ್ಲ; ನಾನು ಆ ಕಡೆ ಹೋಗಬೇಕು’. ಅದಕ್ಕೆ ವೈದ್ಯರು, ‘ಈ ಪರಿಸ್ಥಿತಿಯಲ್ಲಿ ನೀವು ಎಲ್ಲಿಗೂ ಹೋಗುವ ಹಾಗಿಲ್ಲ’ ಎಂದರು. ನಾವು ಮಾತನಾಡುತ್ತಿರುವಾಗಲೇ, ಅವರ ಆಸ್ಪತ್ರೆಯಲ್ಲಿ ರಕ್ತ ಸುರಿದು ಹರಡುತ್ತಿತ್ತು. ನನ್ನ ವಾದ ಗೆಲ್ಲಲಿಲ್ಲ; ರಕ್ತವೇ ಗೆದ್ದಿತು! ಅವರು ಬೇರೆ ದಾರಿಯಿಲ್ಲವಾಗಿ ಅರಿವಳಿಕೆಯಿಲ್ಲದೆಯೇ ಗಾಯಕ್ಕೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಮಾಂಸಖಂಡವನ್ನು ಸರಿಯಾದ ಸ್ಥಳದಲ್ಲಿಡಲು ಅವರು ಮೂರು ವಿವಿಧ ಹಂತಗಳಲ್ಲಿ ಐವತ್ತನಾಲ್ಕು ಹೊಲಿಗೆಗಳನ್ನು ಹಾಕಿದರು. ಈ ಇಡೀ ಪ್ರಕ್ರಿಯೆಯಲ್ಲಿ, ವೈದ್ಯರು ಬೆವರುತ್ತಿದ್ದರು ಮತ್ತು ಏದುಸಿರು ಬಿಡುತ್ತಿದ್ದರು, ನಾನು ವೈದ್ಯರೊಂದಿಗೆ ಮಾತನಾಡುತ್ತಲೇ ಇದ್ದೆ. ಎಲ್ಲ ಮುಗಿದ ಮೇಲೆ, ‘ನಿಮಗೆ ನೋವೇ ಇರಲಿಲ್ಲವೇ?’ ಎಂದು ಅವರು ಕೇಳಿದರು.
ಖಂಡಿತವಾಗಿಯೂ ನೋವು ಇತ್ತು. ಭಯಂಕರವಾದ, ತಡೆಯಲಾಗದಷ್ಟು ನೋವಿತ್ತು. ಆದರೆ ನೋವು ಸಹಜವಾದ ಸಂಗತಿ; ಅದನ್ನು ವೇದನೆಯನ್ನಾಗಿಸಿಕೊಳ್ಳಬೇಕಿಲ್ಲ. ಯಾರಾದರೂ ಉದ್ದೇಶಪೂರ್ವಕವಾಗಿ ತಮಗೆ ತಾವೇ ದುಃಖವನ್ನು ಸೃಷ್ಟಿಸಿಕೊಳ್ಳುತ್ತಾರೆಯೇ? ನಿಮಗೆ ನೀವು ಏನು ಮಾಡಿಕೊಳ್ಳುತ್ತಿದ್ದೀರಿ ಎನ್ನುವ ಅರಿವು ನಿಮಗಿಲ್ಲ: ದುಃಖಕ್ಕೆ ಅದೊಂದೇ ಕಾರಣ.
ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಪ್ರಸಂಗ ಇದಕ್ಕೊಂದು ಪ್ರಸಿದ್ಧ ಉದಾಹರಣೆ. ಅವರ ಕೈಕಾಲುಗಳಿಗೆ ಮೊಳೆಗಳನ್ನು ಹೊಡೆಯಲಾಗಿತ್ತು. ಆ ಪರಿಸ್ಥಿತಿಯಲ್ಲಿ ಬೇರೆ ಯಾರಾಗಿದ್ದರೂ ಚೀರಾಡುತ್ತಿದ್ದರು ಮತ್ತು ಜಗತ್ತನ್ನು ಶಪಿಸುತ್ತಿದ್ದರು. ಆದರೆ ಅವರು, ‘ತಂದೆ, ಅವರನ್ನು ಕ್ಷಮಿಸು, ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿಲ್ಲ’ ಎಂದು ಹೇಳಿದರೆಂದು ಉಲ್ಲೇಖವಿದೆ. ತಾವು ವೇದನೆಯಲ್ಲಿ ಇರುವಾಗ ಯಾರಾದರೂ ಹೀಗೆ ಹೇಳಲು ಸಾಧ್ಯವೇ? ಸ್ಪಷ್ಟವಾಗಿಯೂ, ಅವರು ಅತೀವವಾದ ನೋವಿನಲ್ಲಿದ್ದರು. ಆದರೆ ಅವರಲ್ಲಿ ವೇದನೆಯಿರಲಿಲ್ಲ.
ನಿಮಗೆ ಅರಿವಿಲ್ಲದಿರುವುದೇ ನೀವು ನಿಮಗೆ ಮತ್ತು ಸುತ್ತಲಿರುವ ಜನರಿಗೆ ದುಃಖವನ್ನುಂಟುಮಾಡಲು ಇರುವ ಏಕೈಕ ಕಾರಣ. ಹಾಗಾಗಿ ನಮಗೀಗ ಬೇಕಾಗಿರುವುದು, ಹೊಸ ಉಪಾಯಗಳಲ್ಲ, ಹೊಸ ಸಿದ್ಧಾಂತಗಳಲ್ಲ, ಹೊಸ ಘೊಷಣೆಗಳಲ್ಲ. ನಮಗೆ ಬೇಕಾಗಿರುವುದು ಅರಿವು. ಅರಿವು ಸೀಮಿತ ಪರಿಧಿಯಿಂದ ದೊಡ್ಡ ಗ್ರಹಿಕೆಯ ಕಡೆಗೆ ವಿಸ್ತರಿಸಬೇಕಾಗಿದೆ. ನಿಮ್ಮನ್ನು ಜೀವನಕ್ಕೆ ಸಂಪೂರ್ಣವಾಗಿ ತೆರೆದಿಟ್ಟುಕೊಳ್ಳುವುದು.
ಇದು ಪ್ರತಿಯೊಬ್ಬ ಮನುಷ್ಯನಿಗೂ ಇರುವ ಆಯ್ಕೆಯಾಗಿದೆ- ಇಲ್ಲಿ ಒಂದೋ ಸೃಷ್ಟಿಕರ್ತನ ಒಂದು ‘ಅಂಗ’ದಂತೆ ಇರುವುದು ಅಥವಾ ಆಲೋಚನೆ ಮತ್ತು ಭಾವನೆಗಳ ಕಂತೆಯಾಗಿ ಬದುಕಿರುವುದು. ಪ್ರತಿಕ್ಷಣವೂ ಈ ಆಯ್ಕೆ ಲಭ್ಯ. ಸ್ವೀಕಾರದ ಸ್ಥಿತಿಯಲ್ಲಿದ್ದರೆ, ಜೀವನ ನಿಮ್ಮನ್ನು ಅನುಗ್ರಹದ ಒಂದು ವಿಭಿನ್ನ ಸ್ತರಕ್ಕೆ ಕೊಂಡೊಯ್ಯುತ್ತದೆ, ಅಲ್ಲಿ ಸೃಷ್ಟಿಯಲ್ಲಿನ ಒಂದು ಕಲ್ಲು, ಮರ ಮತ್ತು ಒಂದು ಅಣುವೂ ನಿಮ್ಮೊಂದಿಗೆ ನಿಮಗೆ ತಿಳಿದ ಭಾಷೆಯಲ್ಲಿ ಮಾತನಾಡುತ್ತದೆ. ಇಲ್ಲವಾದರೆ, ಈ ವಿಶಾಲ ಅಸ್ತಿತ್ವದಲ್ಲಿ ನಿರಂತರವಾಗಿ ಅಸುರಕ್ಷತಾ ಭಾವನೆಯಿಂದ ಏಕಾಂಗಿಯಾಗಿರುತ್ತೀರಿ.
ಹಾಗಾಗಿ ವೇದನೆಯಲ್ಲಿದ್ದರೆ, ಅದು ನಿಮ್ಮನ್ನು ನೀವು ದುರಸ್ತಿ ಮಾಡಿಕೊಳ್ಳಬೇಕಾದ ಸಮಯ- ಬೇರೆಯವರನ್ನಲ್ಲ. ಈ ಸರಳ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಜನರು ಅನೇಕ ಜನ್ಮಗಳನ್ನೇ ತೆಗೆದುಕೊಳ್ಳುತ್ತಾರೆ.
ಒಂದು ದಿನ, ಶಂಕರನ್ ಪಿಳ್ಳೈ ತನ್ನ ಗೆಳೆಯರೊಂದಿಗೆ ಕುಡಿಯಲು ಹೋದ. ಯೋಗಿಗಳು ಮತ್ತು ಕುಡುಕರು ಸಮಯರಹಿತರಾಗಿರುತ್ತಾರೆ- ಅವರಿಗೆ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಅವನು ಇದ್ದಕ್ಕಿದ್ದಂತೆ ಗಡಿಯಾರವನ್ನು ನೋಡಿಕೊಂಡಾಗ, ಬೆಳಗಿನ ಜಾವ 2.30 ಆಗಿತ್ತು. ಅವನು ತುರ್ತಾಗಿ ಮನೆಗೆ ಹೋಗಬೇಕಿತ್ತು, ಹಾಗಾಗಿ ಅವನು ಶೀಘ್ರವಾಗಿ ಮನೆಗೆ ತಲುಪುವ ಒಂದು ದಾರಿಯಲ್ಲಿ ಸಾಗಿದ. ಅವನು ತನ್ನ ನಡುಗುವ ಕಾಲುಗಳಿಂದ ನಡೆದುಕೊಂಡು ಹೋಗುತ್ತಿದ್ದುದರಿಂದ ಮುಳ್ಳಿನ ಪೊದೆಯೊಳಕ್ಕೆ ಬಿದ್ದ. ಅವನ ಇಡೀ ಮುಖ ಪರಚಿಹೋಯಿತು. ಕೊನೆಗೆ, ಅವನು ಮನೆ ಸೇರಿದ, ಮನೆಯ ಬೀಗ ತೆಗೆಯಲು ಅರ್ಧಗಂಟೆ ಬೇಕಾಯಿತು. ಅವನು ಒಳಗೆ ಹೋಗಿ ಸ್ನಾನದ ಕೋಣೆಯ ಕನ್ನಡಿ ಮುಂದೆ ನಿಂತು ನೋಡಿದ, ಅವನ ಇಡೀ ಮುಖದಲ್ಲಿ ರಕ್ತ ಸೋರುತ್ತಿತ್ತು. ಔಷಧದ ಪೆಟ್ಟಿಗೆಯನ್ನು ತೆರೆದು ಮುಖವನ್ನು ತನ್ನ ಕೈಯಲ್ಲಾದಷ್ಟು ಮಟ್ಟಿಗೆ ದುರಸ್ತಿಮಾಡಿದ. ಬೆಳಗ್ಗೆ ಎಂಟು ಗಂಟೆಗೆ ಅವನ ಹೆಂಡತಿ ಒಂದು ಬಕೆಟ್ ತಣ್ಣೀರನ್ನು ತಂದು ಅವನ ಮುಖಕ್ಕೆರಚಿ, ‘ಮೂರ್ಖ, ಮತ್ತೆ ಕುಡಿದೆಯಾ?’ ಎಂದಳು.
‘ಇಲ್ಲ ಚಿನ್ನಾ, ಒಂದು ಹನಿಯನ್ನೂ ಮುಟ್ಟಿಲ್ಲ’ ಎಂದ. ಅವನ ಕಾಲರ್ ಹಿಡಿದು ಸ್ನಾನದ ಕೋಣೆಗೆ ಎಳೆದುಕೊಂಡು ಹೋಗಿ ಕನ್ನಡಿಯನ್ನು ತೋರಿಸಿದಳು. ಅವನು ರಾತ್ರಿ ಹಚ್ಚಿದ ಬ್ಯಾಂಡ್ಏಡ್ ಕನ್ನಡಿಯಲ್ಲೆಲ್ಲ ತುಂಬಿಕೊಂಡಿತ್ತು. ಸಂಪೂರ್ಣವಾಗಿ ಪ್ರಜ್ಞೆಯಿಲ್ಲದವನು ಅಥವಾ ಮತ್ತೇರಿದವನು ಮಾತ್ರ ಹೀಗೆ ಮಾಡುತ್ತಾನೆ, ಅಲ್ಲವೇ? ಕನ್ನಡಿಗೆ ಬ್ಯಾಂಡ್ ಏಡ್ ಹಚ್ಚಿದರೆ ನಿಮ್ಮ ಗಾಯ ವಾಸಿಯಾಗುವುದಿಲ್ಲ. ನೀವು ಗಾಯಗಳಿಗೆ ಚಿಕಿತ್ಸೆ ನೀಡಬೇಕು.
ಸಂತೋಷ ಮತ್ತು ದುಃಖಗಳೆರಡೂ ನಿಮ್ಮೊಳಗಿನಿಂದ ಉಂಟಾಗುತ್ತವೆ. ಹಾಗಾಗಿ ಅದರ ಬಗ್ಗೆ ಗಮನ ನೀಡಿ, ಬೇರೆಯವರ ಬಗ್ಗೆ ಅಲ್ಲ. ಇದನ್ನು ಎಷ್ಟು ಬೇಗ ಕಲಿಯುತ್ತೀರೋ, ಅಷ್ಟು ಬೇಗ ಜೀವನ ಘನತೆ ಮತ್ತು ಸೌಂದರ್ಯದಿಂದ ತುಂಬುತ್ತದೆ. ಇರುವ ಪರಿಸ್ಥಿತಿಯನ್ನು ನಿಜವಾಗಿಯೂ ಸ್ವೀಕರಿಸಿದರೆ, ನೋವು ಕೇವಲ ನೋವಾಗಿರುತ್ತದೆ. ಇರುವ ಪರಿಸ್ಥಿತಿಯನ್ನು ಪ್ರತಿರೋಧಿಸಿದರೆ, ನೋವು ವೇದನೆಯಾಗಿ ಬೆಳೆಯುತ್ತದೆ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)