

ಎರಡನೇ ಮಹಾಯುದ್ಧದ ಸಮಯದಲ್ಲಿ ಆಸ್ಟ್ರಿಯಾದಲ್ಲಿ ನಡೆದ ಘಟನೆ ಇದು. ಹಿಟ್ಲರನು ಯಹೂದಿ ಜನಾಂಗದವರನ್ನು ಹಿಡಿದು ಬಂದಿ ಮಾಡಿ ಸೆರೆಶಿಬಿರಕ್ಕೆ ಕಳುಹಿಸುತ್ತಿದ್ದ ಸಮಯ. ಒಂದು ಮುಂಜಾನೆ ಸೈನಿಕರು ಒಂದು ಮನೆಯೊಳಗೆ ಬಂದರು. ಅಲ್ಲಿ ಒಂದು ಶ್ರೀಮಂತ ಯಹೂದಿ ಸಂಸಾರ ನೆಲೆಸಿತ್ತು. ಹದಿನೇಳು ಮಂದಿ, ಒಂದು ದೊಡ್ಡ ಮನೆಯಲ್ಲಿ ವಾಸವಾಗಿದ್ದರು. ಸೈನಿಕರು ಬಂದು, ಆ ಮನೆಯನ್ನು ಆಕ್ರಮಿಸಿಕೊಂಡು, ದೊಡ್ಡವರನ್ನು ಮತ್ತು ಮಕ್ಕಳನ್ನು ಬೇರೆ ಬೇರೆ ಮಾಡಿದರು.
ಹದಿಮೂರು ವರ್ಷದ ಹುಡುಗಿ ಮತ್ತು ಅವಳ ಎಂಟು ವರ್ಷದ ತಮ್ಮನನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಚಳಿಗಾಲ ಆಗಲೇ ಶುರುವಾಗಿತ್ತು; ಆಸ್ಟ್ರಿಯಾದಲ್ಲಿ ಆಗ ತುಂಬ ಚಳಿ ಇತ್ತು. ಶ್ರೀಮಂತರ ಮಕ್ಕಳು ಮೂರು ದಿನಗಳ ಕಾಲ ರೈಲು ನಿಲ್ದಾಣದ ಜಗುಲಿಯಲ್ಲಿ ಕಳೆದರು; ಜೊತೆಗೆ ತಂದೆ-ತಾಯಿ ಎಲ್ಲಿಗೆ ಹೋದರು ಎಂಬುದೂ ಅವರಿಗೆ ಗೊತ್ತಿಲ್ಲ; ಸೈನಿಕರ ಬಂದೂಕು ಇವರ ಮುಖದ ಮುಂದೆಯೇ ಇದೆ. ಎಂಥ ಘೊರ ಪರಿಸ್ಥಿತಿ. ಆದರೂ, ಮಕ್ಕಳು ಸ್ವಲ್ಪ ಸಮಯ ಮಾತ್ರ ಸಂಕಟಪಟ್ಟರು; ಆಮೇಲೆ ಅವರು ಏನೋ ಒಂದನ್ನು ಹುಡುಕಿಕೊಂಡು ಅವರ ಪಾಡಿಗೆ ಆಟವಾಡುವುದಕ್ಕೆ ಶುರು ಮಾಡಿದರು. ಆ ಹುಡುಗ ಕಾಲ್ಚೆಂಡು ಆಡತೊಡಗಿದ. ಮೂರು ದಿನಗಳಾದ ಮೇಲೆ- ಸರಕುಗಳನ್ನು ಕೊಂಡೊಯ್ಯುವ ರೈಲು ಬಂತು, ಅಲ್ಲಿದ್ದ ಎಲ್ಲರನ್ನೂ ಅದರಲ್ಲಿ ತಳ್ಳಿದರು. ಹುಡುಗಿ ಆಗ ತಮ್ಮನ ಕಡೆ ನೋಡಿದಳು, ಅವನು ಬೂಟುಗಳನ್ನು ಹಾಕಿಕೊಳ್ಳುವುದನ್ನು ಮರೆತುಬಿಟ್ಟಿದ್ದ. ಚಳಿಗಾಲದಲ್ಲಿ ಬೂಟುಗಳನ್ನು ಹಾಕದಿದ್ದಲ್ಲಿ ಆರೋಗ್ಯ ಹಾಳಾಗುತ್ತದೆ ಎಂದು ಅವಳಿಗೆ ಕೆಟ್ಟಕೋಪ ಬಂದಿತು, ಅವನ ಕಿವಿ ಹಿಂಡಿ, ಬೈದು ಹೊಡೆದಳು. ಮುಂದಿನ ನಿಲ್ದಾಣದಲ್ಲಿ ಹುಡುಗರನ್ನು ಮತ್ತು ಹುಡುಗಿಯರನ್ನು ಬೇರೆ ಬೇರೆ ಮಾಡಿದರು. ಐದೂವರೆ ವರ್ಷದ ನಂತರ ಆ ಹುಡುಗಿ ಸೆರೆವಾಸದಿಂದ ಹೊರಗೆ ಬಂದಳು. ಅವರ ಮನೆಯವರ ಪೈಕಿ ಯಾರೂ ಉಳಿದಿಲ್ಲವೆಂದು ಆಗ ಅವಳಿಗೆ ತಿಳಿದುಬಂತು, ತಮ್ಮನ ಸಮೇತ. ಆ ಕ್ಷಣದಲ್ಲಿ, ಅವಳಿಗೆ ಅನ್ನಿಸಿದ್ದು ಒಂದೇ- ತಮ್ಮನ ಜೊತೆ ಇದ್ದ ಕಡೆಯ ಕ್ಷಣಗಳು, ಅವನು ಬೂಟುಗಳನ್ನು ಕಳೆದುಕೊಂಡಿದ್ದಕ್ಕೆ ಅವನನ್ನು ಕೆಟ್ಟ ಮಾತುಗಳಿಂದ ಬೈದು, ಹೊಡೆದು ಮಾಡಿದ್ದಳು. ಆಗ ಅವಳು ಮನಸ್ಸು ಮಾಡಿದಳು, ‘ಈ ದಿನದಿಂದ, ನಾನು ಯಾರನ್ನಾದರೂ ಭೇಟಿ ಮಾಡಿದರೆ ಅದು ಯಾರೇ ಆಗಿರಲಿ ನಾನು ಅವರ ಜೊತೆ ನಡೆದುಕೊಳ್ಳುವುದು ಹೇಗಿರಬೇಕು ಎಂದರೆ ಅದೇ ಕಡೆಯ ಬಾರಿ ಅವರನ್ನು ಮಾತನಾಡಿಸುತ್ತಿದ್ದೀನಿ ಎನ್ನುವ ಹಾಗೆ ನಡೆದುಕೊಳ್ಳಬೇಕು. ಆಗ ಮಾತ್ರ ನಾನು ಪಶ್ಚಾತ್ತಾಪ ಪಡುವುದರಿಂದ ಪಾರಾಗಬಹುದು’.
ಹೌದು, ಅತಿ ಕೆಟ್ಟ ಪರಿಸ್ಥಿತಿಗಳಲ್ಲಿ ಕೂಡ ಮಾನವೀಯತೆಯನ್ನು ಪ್ರದರ್ಶಿಸಬಹುದು. ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ, ಅದನ್ನು ವರ ಅಥವಾ ಶಾಪವನ್ನಾಗಿ ಮಾಡಿಕೊಳ್ಳಬಹುದು. ನರಕದಲ್ಲಿ ಇಟ್ಟರೂ, ಅಲ್ಲಿಯೂ ಪ್ರಜ್ಞೆಯಿಂದಿದ್ದು, ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಂಶದ ಜೊತೆ ಸಂಪರ್ಕದಲ್ಲಿದ್ದರೆ ಸಂತೋಷವಾಗಿ ಇರಬಹುದು. ಹಾಗಲ್ಲದೆ ಇದ್ದಲ್ಲಿ, ನಮ್ಮನ್ನು ಸ್ವರ್ಗದಲ್ಲಿಟ್ಟರೂ ಸಂತೋಷದಿಂದ ಇರುವುದಿಲ್ಲ, ಬದಲಿಗೆ ಗೊಂದಲದಲ್ಲೇ ಮುಳುಗುತ್ತೇವೆ. ಅಲ್ಲದೆ, ಯಾರು ಹೇಳಿದರು, ನೀವು ಈಗಾಗಲೇ ಸ್ವರ್ಗದಲ್ಲಿಲ್ಲ ಎಂದು? ಸ್ವರ್ಗದಲ್ಲಿಲ್ಲ ಎಂದು ನಿಮಗೇನಾದರೂ ಖಾತ್ರಿಯಿದೆಯೇ? ಇಲ್ಲವಲ್ಲ. ಇದಕ್ಕಿಂತ ಒಳ್ಳೆಯ ಸ್ಥಳ ಇನ್ನೊಂದಿದೆ ಎಂದು ಏಕೆ ಅಂದುಕೊಳ್ಳುತ್ತೀರಿ? ಕೆಲವು ಜನ ತಮ್ಮ ಜೀವನವನ್ನು ನರಕ ಮಾಡಿಕೊಂಡು ಈ ಕೆಟ್ಟ ಯೋಚನೆಯನ್ನು ಸೃಷ್ಟಿಸಿದ್ದಾರೆ. ಇಲ್ಲಿನ ಬದುಕನ್ನು ನರಕಸದೃಶ ಮಾಡಿಕೊಂಡು ಅವರು ಸ್ವರ್ಗಕ್ಕೆ ಹೋಗಬೇಕು ಎಂದು ಕನಸು ಕಾಣುತ್ತಾರೆ. ನೀವು ಭಾವಪರವಶರಾಗಿದ್ದರೆ, ಬದುಕನ್ನೇ ಸ್ವರ್ಗ ಮಾಡಿಕೊಂಡರೆ, ಏಕೆ ಎಲ್ಲಿಗೋ ಹೋಗಬೇಕು ಎಂದುಕೊಳ್ಳುತ್ತೀರಾ? ನಿಮ್ಮಲ್ಲಿ ನೀವೇ ಸ್ವರ್ಗ ಸೃಷ್ಟಿಸಿಕೊಳ್ಳುವುದು ಹೇಗೆ ಎಂದು ನೋಡಿ. ಇಲ್ಲದ್ದಿದ್ದಲ್ಲಿ, ಸ್ವರ್ಗದಲ್ಲಿದ್ದರೂ ನರಳುತ್ತೀರ. ಅದರಲ್ಲೂ, ಎಲ್ಲರೂ ಖುಷಿಯಾಗಿದ್ದಾಗ, ಹೆಚ್ಚು ನರಳುತ್ತೀರ. ನಿಮ್ಮ ಎಲ್ಲ ಪ್ರತಿಸ್ಪರ್ಧಿಗಳು, ಶತ್ರುಗಳು, ಸುತ್ತಮುತ್ತ ಇರುವವರು ಸಂತೋಷವಾಗಿದ್ದರೆ, ಸಂಕಟ ಪಡುತ್ತೀರ. ಈಗಿನ ಪರಿಸ್ಥಿತಿಯಲ್ಲಿ ಬಹಳ ಜನ ಇನ್ಯಾರೋ ಸಂತೋಷವಾಗಿದ್ದಾರೆ ಎಂದು ತಾವು ಸಂಕಟ ಪಡುತ್ತಿದ್ದಾರೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಕಾರ್ನಲ್ಲಿ ಹೋದರೆ ಸಂಕಟ ಪಡುತ್ತೀರಿ. ಎಲ್ಲರೂ ನಡೆದುಕೊಂಡು ಹೋಗುತ್ತಿದ್ದರೆ ನೀವು ಚೆನ್ನಾಗಿ ಇರುತ್ತೀರಿ; ಎಲ್ಲರೂ ಬಡವರಾಗಿದ್ದರೆ ನೀವು ಚೆನ್ನಾಗಿ ಇರುತ್ತೀರಿ. ಯಾರೋ ಶ್ರೀಮಂತರಾಗಿದ್ದಾರೆ, ಅದು ನಿಮಗೆ ಸಮಸ್ಯೆ. ಬೇರೆಯವರ ಸುಖ, ಸಂತೋಷ ಮತ್ತು ಏಳಿಗೆಯನ್ನು ಕಂಡು ಸಂಕಟ ಪಡುತ್ತೀರಿ. ಏಕೆಂದರೆ ನಿಮ್ಮಲ್ಲಿ ಸಂತೋಷವೇ ಇಲ್ಲ. ಆ ಮನುಷ್ಯನನ್ನು ಕೆಳಗೆ ಎಳೆದರೆ ಅಥವಾ ಅವನಿಗಿಂತ ಮೇಲೆ ಹೋದರೆ ನಿಮಗೆ ಖುಷಿ ಸಿಗುತ್ತದೆ ಎಂದುಕೊಳ್ಳುತ್ತೀರಿ, ಆದರೆ ಅದು ಆ ರೀತಿ ನಡೆಯುವುದಿಲ್ಲ ಎಂಬುದನ್ನು ನೆನಪಿಡಿ.
ಶಂಕರನ್ ಪಿಳೆ್ಳ ೖಗೆ ಒಬ್ಬ ಮಗನಿದ್ದ. ಆದರೆ, ಪಿಳೆ್ಳ ೖ ಬಳಿ ಪಶುಸಂಪತ್ತು ಇರಲಿಲ್ಲ. ಅವನ ಹೆಂಡತಿ ಸದಾ ಕಾಡುತ್ತಿದ್ದಳು, ‘ನಮಗೆ ಮಗು ಇದೆ ಆದರೆ ಹಸು ಇಲ್ಲ, ಹಾಲು ಇಲ್ಲ’ ಅಂತ. ಅವನು ಬೇಸತ್ತು ‘ಆಚೆ ಓಡಾಡಿ ಬರುತ್ತೇನೆ’ ಎಂದು ಹೋದ, ಆಗ ಅವನು ಒಬ್ಬರ ಮನೆಯಲ್ಲಿ ಎಂಟು ಹಸುಗಳನ್ನು ಕಂಡ. ಅವರ ಮನೆಯಲ್ಲಿ ಇಬ್ಬರೇ ಮಕ್ಕಳಿದ್ದರು. ಅವನು ಯೋಚಿಸಿದ, ಎಂಟು ಹಸು ಇಬ್ಬರು ಮಕ್ಕಳಿಗೆ? ಒಳಗಡೆ ಹೋಗಿ, ಒಂದು ಹಸುವನ್ನು ಕರೆದುಕೊಂಡು ಮನೆಯತ್ತ ಹೋದ. ಸ್ವಲ್ಪ ದಿನದ ನಂತರ, ಪೊಲೀಸರು ಬಂದು ಅವನನ್ನು ಬಂಧಿಸಿ, ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಶಂಕರನ್ ಪಿಳ್ಳೆ ೖ ಹೇಳಿದ, ‘ನಾನೇನು ಕಳ್ಳತನ ಮಾಡಿಲ್ಲ. ಈ ಹಸು ನನ್ನ ಹತ್ತಿರ ಕಳೆದ ಒಂದು ತಿಂಗಳಿಂದ ಇದೆ, ಇದು ನನ್ನ ಹಸು’. ಅವರು ಅದಕ್ಕೆ, ‘ಈ ಹಸು ಬೇರೆಯವರ ಮನೆಯಲ್ಲಿ ಇತ್ತು’ ಎಂದರು. ಆಗ ಪಿಳೆ ್ಳ ೖ ಹೇಳಿದ, ‘ಎರಡು ವರ್ಷದ ಮುಂಚೆ, ನನ್ನ ಹೆಂಡತಿಯೂ ಬೇರೆಯವರ ಮನೆಯಲ್ಲಿ ಇದ್ದಳು- ಅವಳ ತಂದೆಯ ಮನೆಯಲ್ಲಿ- ಈಗ ಅವಳು ನನ್ನ ಹೆಂಡತಿ. ನೀವು ಅದನ್ನು ಇಲ್ಲವೆನ್ನುತ್ತೀರಾ? ಇಲ್ಲ ತಾನೇ, ಹಾಗಾದರೆ ಹಸುವಿನ ವಿಷಯದಲ್ಲಿ ಏನು ಸಮಸ್ಯೆ?’ ಅವರು ‘ಅವೆರಡು ಒಂದೇ ಅಲ್ಲ’ ಎಂದರು.
ಆ ಹಸುವಿನ ಯಜಮಾನ ಹೇಳಿದ, ‘ನೀನು ಹಸುವನ್ನು ಕದಿಯುವುದನ್ನು ನೋಡಿದ ಇಬ್ಬರು ಸಾಕ್ಷಿಗಳನ್ನು ನಾನು ಕರೆತರಬಲ್ಲೆ’. ಶಂಕರನ್ ಹೇಳಿದ, ‘ಅದು ಅರ್ಥವಿಲ್ಲದ್ದು! ನಾನು ಕದಿಯುವುದನ್ನು ನೋಡದೇ ಇರುವ ನೂರು ಸಾಕ್ಷಿಗಳನ್ನು ಹಾಜರುಪಡಿಸಬಹುದು’.
ಆದ್ದರಿಂದ ನಮಗೆ, ಇದು ನಿಜವಾಗಲೂ ಸ್ವರ್ಗವೋ ಅಲ್ವೋ ಎಂದು ಗೊತ್ತಿಲ್ಲ. ಇದು ಸ್ವರ್ಗವೇ ಆಗಿದ್ದು ಅದನ್ನು ಅರಿತುಕೊಳ್ಳದಿದ್ದರೆ- ಎಂಥ ದುಃಸ್ಥಿತಿಯ ಬದುಕು. ನಾನು ಹೇಳುತ್ತಿದ್ದೇನೆ- ‘ಇದು ಸ್ವರ್ಗವೇ. ಏಕೆಂದರೆ ನಿಮ್ಮ ಅನುಭವಗಳ ಮೂಲ ನಿಮ್ಮಲ್ಲಿಯೇ ಇದೆ. ಇದರ ಹೊಣೆ ನೀವು ತೆಗೆದುಕೊಂಡರೆ, ಈಗಾಗಲೇ ಸ್ವರ್ಗವನ್ನು ಸೃಷ್ಟಿಸಬಹುದು. ನೀವು ಸಹಿಸಲಾರದ ನಿಮ್ಮ ನೆರೆಯವರು, ಪಕ್ಕದ ಮನೆಯ ಗಲಾಟೆ, ಮಗು, ಸಂಬಂಧಿಕರು, ಇವರೆಲ್ಲ ನಿಮ್ಮ ಜೀವನಕ್ಕೆ ಒಂದು ಸ್ವಾರಸ್ಯ ಹಾಗೂ ಉತ್ಸಾಹ ತುಂಬಲು ಇದ್ದಾರೆ ಎಂದು ಭಾವಿಸಿಕೊಳ್ಳಿ- ಆಗ ನೋಡಿ ಇದು ವಾಸ್ತವವಾಗಿ ಸ್ವರ್ಗವೇ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)