ನೀವುಂಟು, ಸೊಸೆಯುಂಟು... ಮಧ್ಯೆ ನನ್ನನ್ನ ತರಬೇಡಿ... ಎನ್ನಬಹುದೆ ಪುತ್ರ?

nandondu kathe
Published on
ತ್ತೀಚೆಗೆ ನನ್ನ ಮುಂದೆ ಕೌನ್ಸಿಲಿಂಗ್‍ಗೆಂದು ಕುಳಿತ ವೃದ್ಧ ದಂಪತಿಯ ಚಿತ್ರಣ . ಆ ವೃದ್ಧರಿಗೆ 67ವರ್ಷ ಪ್ರಾಯ. ಅವರ ಹೆಂಡತಿಗೆ ಸುಮಾರು 60ರ ಹತ್ತಿರ. ಒಂದು ವಾರದಿಂದ ಆತ ಊಟತಿಂಡಿ ಬಿಟ್ಟಿದ್ದಾರೆ. ತುಂಬ ಉದಾಸೀನವಾಗಿ ಮಾತಾಡುತ್ತಾರೆ.

ಅವರ ಮನೆಯಲ್ಲಿ ನಡೆದ ಪ್ರಸಂಗ ಹೀಗಿದೆ. ಮಗನಿಗೆ ಮದುವೆಯಾಯಿತು. ಸೊಸೆ ಮನೆಗೆ ಬಂದು ನಾಲ್ಕು ದಿನವಾಗಿತ್ತು. ಮರುದಿನ ಅವರಿಬ್ಬರೂ ಒಂದು ತಿಂಗಳ ಕಾಲ ಪರದೇಶಕ್ಕೆ ಹೋಗುವವರಿದ್ದರು. ಅಂದು ಶುಕ್ರವಾರ ಸಂಜೆ ದೀಪಹಚ್ಚುವ ಸಮಯ. ಹೊರಗೆ ಹೋದ ಮಗಸೊಸೆ ಮನೆಗೆ ಬಂದಾಗ ಸೊಸೆ ಸಂಪೂರ್ಣವಾಗಿ ತನ್ನ ಕೂದಲನ್ನು ಬಾಯ್‍ಕಟ್ ಮಾಡಿಸಿಕೊಂಡಿದ್ದಳು. ಅವರಿಬ್ಬರ ಪ್ರವಾಸಕ್ಕೆಂದು ತಿಂಡಿ ಮಾಡುತ್ತಿದ್ದ ಅತ್ತೆ ಅಡುಗೆ ಮನೆಯಲ್ಲಿದ್ದರು. ಸೊಸೆಯನ್ನು ನೋಡಿದ ಮಾವ ಕಂಗಾಲಾಗಿ " ಇದೇನಮ್ಮ ಮದುವೆಯಾಗಿ ನಾಲ್ಕುದಿನವಾಗಿಲ್ಲ ಹೀಗೆ ಕೂದಲನ್ನು ಕತ್ತರಿಸಿಕೊಂಡಿದ್ದೀಯಾ? ಅದಲ್ಲದೇ ಶುಕ್ರವಾರ ಸಂಜೆ ಹೊತ್ತು " ಎಂದು ಉದ್ಗರಿಸಿದರು.

ತಕ್ಷಣ ಸೊಸೆ " ನನ್ನ ಕೂದಲು ನನ್ನಿಷ್ಟ ನಿಮಗೇನಾಯಿತು? ಇದರಿಂದ ನಿಮಗೇನು ಕಷ್ಟ"? ಎಂದು ಸಿಡುಕಿ ತನ್ನ ರೂಮಿಗೆ ಹೋದಳು. ಆ ಹೊತ್ತಿಗೆ ಈ ವಾದ ಕೇಳಿದ ತಾಯಿ ಹೊರಬಂದವರು ಸೋಫ಼ಾ ಮೇಲೆ ಕೂತಿದ್ದ ಮಗನ ಮುಖ ನೋಡಿದರು. ತಕ್ಷಣ ಮಗ ಹೇಳಿದ " ಅಮ್ಮ ದಯವಿಟ್ಟು ಇದರಲ್ಲಿ ನನ್ನನ್ನು ಎಳೆಯ ಬೇಡಿ. ಅವಳು ನನಗೆ ಹೇಗೆ ಹೆಂಡತಿಯೋ ಹಾಗೇ ನಿಮಗೆ ಸೊಸೆ. ನಿಮ್ಮಿಬ್ಬರ ಸಂಬಂಧದಲ್ಲಿ ನಾನು ಮಧ್ಯೆ ಬರುವುದಿಲ್ಲ. ನೀನು ನೀವೇ ಸರಿಮಾಡಿಕೊಳ್ಳಿ" ಎಂದವನೇ ಎದ್ದು ಒಳಗೆ ರೂಮಿನಲ್ಲಿ ಅಳುತ್ತಿದ್ದ ಹೆಂಡತಿಯನ್ನು ಸಮಾಧಾನ ಮಾಡಲು ಒಳಗೆ ಹೊರಟುಹೋದ!
ಈ ಪ್ರಸಂಗ ಮೇಲ್ನೋಟಕ್ಕೆ ಸಂಪ್ರದಾಯದ ನಂಬಿಕೆಗಳಿಗೂ, ಆಧುನಿಕತೆಯ ನಡವಳಿಕೆಗೂ ಉಂಟಾದ ಸಂಘರ್ಷವೆನಿಸುತ್ತದೆ. ಇದು ನಿಜವೇ ಆದರೂ ಇಲ್ಲಿ ಮೂರೂ ವ್ಯಕ್ತಿಗಳ ನಡವಳಿಕೆಗಳೂ ಈ ಸಂಘರ್ಷಕ್ಕೆ ಕಾರಣವೆನಿಸುತ್ತದೆ. ಸೊಸೆ ಕೂದಲನ್ನು ಕತ್ತರಿಸಿಕೊಂಡು ಬಂದನಂತರ ನೋಡಿದ ಮಾವ ತಕ್ಷಣ ಹಾಗೆ ಪ್ರತಿಕ್ರಯಿಸದಿದ್ದರೂ ಸಂಘರ್ಷವಾಗುತ್ತಿರಲಿಲ್ಲ.

ನಿಜ ಸಂಪ್ರದಾಯಸ್ಥರಿಗೆ ಇವೆಲ್ಲಾ ಅಪವಿತ್ರಕಾರ್ಯಗಳೇ. ಆದರೆ ನಾವು ನಂಬಿದ ಸಂಪ್ರದಾಯವನ್ನು ನಮ್ಮ ಮಗ ಮತ್ತು ಸೊಸೆಯೂ ಪಾಲಿಸಲೇ ಬೇಕು ಎನ್ನುವ ಬಲವಾದ ನಂಬಿಕೆ ಈ ದಿನಗಳಲ್ಲಿ ಸಡಿಲ ಗೊಳ್ಳಲೇ ಬೇಕಾಗಿದೆ. ಅವರು ಆ ಕ್ಷಣ ಸುಮ್ಮನಿದ್ದು ಒಳಗೆ ಹೆಂಡತಿಯ ಹತ್ತಿರ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತು. ಅತ್ತೆಯಾದರು ನಿಧಾನವಾಗಿ ಸೊಸೆಯ ಹತ್ತಿರ ಈ ಬಗ್ಗೆ ಅವಳ ಅಭಿಪ್ರಾಯವನ್ನೂ ಕೇಳಬಹುದಿತ್ತು. ಈ ಕೆಲಸಕ್ಕೆ ತಮ್ಮ ಮಗನೂ ಕೈ ಜೋಡಿಸಿದ್ದಾನೆ ಎನ್ನುವ ಸತ್ಯವನ್ನೂ ಅರಿಯಬೇಕಾಗಿತ್ತು. ಸೊಸೆಯನ್ನು ಕೇಳುವ ಬದಲು ಮಗನನ್ನು ಈ ಬಗ್ಗೆ ಕೇಳಬಹುದಿತ್ತು. ಎಲ್ಲವೂ ’ ಮಾಡಬಹುದಿತ್ತು ’ ಅಷ್ಟೇ ಮಾಡಿಲ್ಲ. ಮಾತು ಉದುರಿದೆ ನೆಂಟಸ್ಥಿಕೆಯೆಂಬ ಮುತ್ತು ಒಡೆದಿದೆ. ಇಲ್ಲಿ ಸೊಸೆಯ ನಡವಳಿಕೆಯನೊಮ್ಮೆ ಗಮನಿಸಿ. ಅವಳಿಗೆ ತಾನು ಮಾಡಿದ್ದು ತಪ್ಪು ಎನ್ನುವ ಅರಿವಿದೆ. ಈ ಬಗ್ಗೆ ಅತ್ತೆ ಮತ್ತು ಮಾವ ಏನಾದರೂ ಹೇಳಬಹುದು ಎನ್ನುವ ಗುಮಾನಿಯೂ ಇದೆ. ಮನೆಯ ಒಳಗೆ ಕಾಲಿಡುತ್ತಲೇ ಮಾವ ಪ್ರಶ್ನಿಸಿದ್ದು ಅವಳ ಆತ್ಮಾಭಿಮಾನಕ್ಕೆ ಚುಚ್ಚಿದಂತಾಗಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಭರದಲ್ಲಿ ಒರಟಾಗಿ ಮಾತಾಡಿದ್ದಾಳೆ.

ಇದು ಅವಳ ಮಾತಿನ ಶೈಲಿ. ಬಹುಶಃ ಅವಳ ತೌರಿನಲ್ಲಿ ತಂದೆತಾಯಿಗೆ ಹೀಗೇ ಒರಟಾಗಿ ಉತ್ತರಿಸಿ ಅಭ್ಯಾಸವೂ ಇರಬಹುದು. ಕೆಲವರ ಮನೆಯಲ್ಲಿ ಮಾತುಗಾರಿಕೆಯೇ ಹೀಗೆ ವಿಪರೀತ ಒರಟಾಗಿರುವುದನ್ನು ನಾವು ನೆರೆಹೊರೆಯವರಲ್ಲಿ ಗಮನಿಸುತ್ತಲೇ ಇರುತ್ತೇವೆ. ಆದರೂ ಆಕೆ ಮಾವನಿಗೆ ಹೀಗೆ ಉತ್ತರಿಸಿದ್ದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನು ಮಗನ ನಡವಳಿಕೆಯನ್ನು ಗಮನಿಸಿ. ಅವನು ನ್ಯಾಯವಾಗಿ ತನ್ನ ಹೆಂಡತಿಗೂ ತನ್ನ ಹೆತ್ತವರಿಗೂ ನಡುವೆ ಕೊಂಡಿಯಾಗಿ ಸಂಬಂಧಗಳನ್ನು ಬೆಸೆಯಬೇಕು ಎಂದು ಸಮಾಜ ನಿರೀಕ್ಷಿಸುತ್ತದೆ. ಸ್ವಲ್ಪ ಮಟ್ಟಿಗೆ ಅದು ಕುಟುಂಬದ ಎಲ್ಲ ಮಾನಸಿಕ ಆರೋಗ್ಯಕ್ಕೆ ಅವಶ್ಯಕವೂ ಆಗಿದೆ. ಆದರೆ ಈ ವಿಷಯದಲ್ಲಿ ಇಂದಿನ ಗಂಡುಮಕ್ಕಳು ಪಲಾಯನವಾದಿಗಳೇ ಆಗಿದ್ದಾರೆ. ಇಲ್ಲಿಯೂ ಈ ಮಗ ಹೇಳಿದ ಮಾತುಗಳನ್ನು ಗಮನಿಸಿ " ನಿಮ್ಮ ಸಂಬಂಧಗಳನ್ನು ನೀವೇ ಸರಿಮಾಡಿಕೊಳ್ಳಿ" ಎಂದರೆ ಏನರ್ಥ? ತಾನು ಈ ಮನೆಗೆ ಸೇರಿದವನಲ್ಲವೆಂದೇ? ಇದು ಒಂದು ರೀತಿಯಲ್ಲಿ ಪಲಾಯನವಾದವೂ ಹೌದು, ಇನ್ನೊಂದು ರೀತಿಯಲ್ಲಿ ಹಠದ ಅಹಂಕಾರವೂ ಹೌದು. ಅವನು ತಂದೆಯ ಜೊತೆಯಲ್ಲಿ ಕುಳಿತು ನಿಧಾನವಾಗಿ ಮಾತಾಡಬಹುದಿತ್ತು. ತನ್ನ ಹೆಂಡತಿ ಒರಟಾಗಿ ಮಾತಾಡಿದ್ದಕ್ಕೆ ಕ್ಷಮೆ ಕೇಳಬಹುದಿತ್ತು. ’ ತಾವು ಶುಕ್ರವಾರವೆನ್ನುವುದನ್ನು ಗಮನಿಸಲಿಲ್ಲ, ಪರದೇಶದಲ್ಲಿ ಹೇರ್‍ ಡ್ರಸಿಂಗ್ ತುಂಬ ದುಬಾರಿ, ಉದ್ದ ಕೂದಲನ್ನು ಅವಳಿಗೆ ಸಂಭಾಳಿಸಲು ಬರುವುದಿಲ್ಲ’ ಏನೆಲ್ಲಾ ಸಕಾರಣವಾದ ವಿವರಗಳನ್ನು ಕೊಟ್ಟು ತಂದೆಯನ್ನು ಗೌರವಿಸುತ್ತಲೇ ತನ್ನ ಹೆಂಡತಿಯನ್ನೂ ಸಮರ್ಥಿಸಿಕೊಳ್ಳಬಹುದಿತ್ತು. ಅದಕ್ಕೇ  ಆಪ್ತಸಲಹಾಗಾರರು ಪದೇಪದೇ ಹೇಳುವುದು " ನಿಮ್ಮ ಬುದ್ಧಿವಂತಿಕೆ ಮುಖ್ಯವಲ್ಲ, ನಿಮ್ಮ ಬರೀ ಭಾವನೆಗಳೆ ಮುಖ್ಯವಲ್ಲ, ಭಾವನೆಗಳನ್ನು ಬುದ್ಧಿವಂತಿಕೆಯಿಂದ ಬಳಸಿ " ಎಂದು ಇದನ್ನೇ ಅಲ್ಲವೇ ’ಎಮೋಷನಲ್ ಇಂಟಲಿಜೆನ್ಸ್’ ಎನ್ನುವುದು?
ಕೆಲವು ಗಂಡು ಮಕ್ಕಳಿಗೆ ನಿಜವಾಗಲೂ ಮದುವೆಯಾದ ಮೇಲೆ ಸಂಬಂಧಗಳನ್ನು ನಿಭಾಯಿಸಲು ಬರುವುದಿಲ್ಲ. ಇದಕ್ಕೆ ಅವರ ಬಾಲ್ಯವೇ ಕಾರಣ ಎಂದು ಮನೋವೈದ್ಯರು ಹೇಳುತ್ತಾರೆ. ನಮ್ಮಲ್ಲಿ ಗಂಡು ಮಕ್ಕಳನ್ನು ಬೆಳೆಸುವ ಕ್ರಮವೂ ವೈಜ್ಞಾನಿಕವಾಗಿಲ್ಲ. ತೀರಾ ಶಿಸ್ತು ಮತ್ತು ನಿಬಂಧನೆಗಳನ್ನು ಹೇರಿ " ನೀನು ಗಂಡು ಭಯ ಪಡಬಾರದು, ಅಳಬಾರದು ಹೆಣ್ಣಿನಂತೆ, ಸದಾ ಓದುತ್ತಿರ ಬೇಕು, ಒಳ್ಳೆ ಮಾರ್ಕ್ ಗಳಿಸಿ ಒಳ್ಳೆ ಉದ್ಯೋಗ ಪಡೆಯಬೇಕು " ಇಂಥವೇ ಮಾತುಗಳನ್ನು ಹೆತ್ತವರು ಆಡುತ್ತಾ ಮಕ್ಕಳಿಗೆ ತಂದೆ ತಾಯಿಯರೆಂದರೆ ಒಳಗೊಳಗೇ ಜಿಗುಪ್ಸೆ ಬರುವಹಾಗೆ ಮಾಡಿದರೆ, ಅಂಥಾ ಗಂಡುಗಳು ತಮಗೆ ಆಪ್ತವಾಗುವ ಹೆಂಡತಿಯ ಮುಂದೆ ತನ್ನ ಹೆತ್ತವರ ಬಗ್ಗೆ ಅಸಹನೆಯನ್ನೇ ತೋಡಿಕೊಂಡರೆ, ಅವಳು ಈ ಅತ್ತೆ ಮಾವನನ್ನು ಹೇಗೆ ಗೌರವಿಸಿಯಾಳು. ನನ್ನ ಹತ್ತಿರ ಬಂದ ಒಬ್ಬ ಮಹಿಳೆ ಹೀಗೆಯೇ ಅಲವತ್ತುಕೊಂಡರು " ಮೇಡಂ ನನಗೆ ಅರವತ್ತು ವರ್ಷ ವಯಸ್ಸು. 20ನೇ ವರ್ಷಕ್ಕೇ ಮದುವೆಯಾಗಿ ಬಂದೆ. ಆಗಲೇ ನನ್ನತ್ತೆಗೆ ಆರೋಗ್ಯ ಸರಿಯಿರಲಿಲ್ಲ. ಆಗಿನಿಂದ ಅಡುಗೆಮನೆಯಲ್ಲಿ ಬೆಂದಿದ್ದೇನೆ. ನಲವತ್ತು ವರ್ಷಗಳ ಕಾಲ ನನ್ನತ್ತೆಯ ಮನೆಯ ಎಲ್ಲರಿಗೂ ಅಡುಗೆ ಮಾಡಿಹಾಕಿದ್ದೇನೆ. ಸಣ್ಣಪುಟ್ಟ ಸಮಾರಂಭಗಳಲ್ಲಿ ನನ್ನ ಗಂಡ ನೀನೇ ಚೆನ್ನಾಗಿ ಅಡುಗೆ ಮಾಡುತ್ತೀಯಾ ಅಡುಗೆಯವರು ಬೇಡ ಎನ್ನುತ್ತಿದ್ದರಿಂದ ನೂರುಜನಕ್ಕೆ ಅಡುಗೆ ಮಾಡಿದ್ದೇನೆ. ನನ್ನ ಸಂಬಧಿಕರು ನನ್ನ ಅಡುಗೆ ರುಚಿಯನ್ನು ಈಗಲೂ ನೆನಸಿಕೊಳ್ಳುತ್ತಾರೆ. ಈಗ ನನ್ನ ಮಗ ಸೊಸೆ ಹೇಳುತ್ತಾರೆ ನನಗೆ ರುಚಿಯಾಗಿ ಅಡುಗೆ ಮಾಡಲು ಬರುವುದಿಲ್ಲವಂತೆ. ನೀನು ಏನೇನೋ ಅಡುಗೆ ಮಾಡಿ ತಿನ್ನುತಿನ್ನು ಅನ್ನುತ್ತಿದ್ದೆ ನನಗದು ಟಾರ್ಚರ್ ಆಗಿತ್ತು ಅನ್ನುತ್ತಾನೆ. ಇದಕ್ಕಿಂತಾ ಅವಮಾನ ಬೇಕಾ " ? ಇಂಥಾ ನೂರೆಂಟು ಕಾರಣಗಳು ಹುಡುಕಿದರೆ ಪ್ರತಿ ಮನೆಯಲ್ಲೂ ಸಿಗುತ್ತವೆ. ತಮ್ಮ ತಂದೆತಾಯಿಯರನ್ನು ಅರ್ಥೈಸಿಕೊಳ್ಳಲು, ಗೌರವಿಸಲು ಗಂಡುಮಕ್ಕಳೇ ಸೋತುಹೋದರೆ ಸೊಸೆಯರನ್ನು ಬಯ್ದು ಪ್ರಯೋಜನವೇನು?
ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್‌ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್‌ ಐಡಿ: shanthanag@gmail.com / lalitha.vijayavani@gmail.com vijayavani.net ನ ಅಂಕಣ ವಿಭಾಗದ ನಂದೊಂದು ಕಥೆ ವಿಭಾಗದಲ್ಲಿ ಡಾ.ಶಾಂತಾ ನಾಗರಾಜ್‌ ಅವರು ಬರೆದಿರುವ ಇತರ ಲೇಖನಗಳು ಲಭ್ಯ.

https://www.vijayavani.net/s-nandondu-kathe-aug6/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net