

ಉತ್ತರ: ನಿಮ್ಮ ನಾಲ್ಕು ಪುಟಗಳ ಪತ್ರ ಓದಿ ನಿಮ್ಮ ತಲೆಯಲ್ಲಿ ಈ ಅನುಮಾನವೆನ್ನುವ ಭೂತ ಯಾವ ಪರಿಯಲ್ಲಿ ಬೀಡುಬಿಟ್ಟಿದೆಯೆಂದು ಆಶ್ಚರ್ಯವಾಯಿತು. ನಿಮ್ಮ ಕಾಟವನ್ನು ಸಹಿಸಿಕೊಂಡು ನಿಮ್ಮನ್ನು ಪ್ರೀತಿಸುತ್ತ ನಿಮ್ಮ ಗಂಡ ನಿಮ್ಮ ಜೊತೆಯಲ್ಲೇ ಇದ್ದಾರಲ್ಲ ನಿಮ್ಮ ಗಂಡ? ಅವರಿಗೊಂದು ಮೆಚ್ಚುಗೆಯನ್ನು ಸಲ್ಲಿಸಲೇಬೇಕು. ನಿಮ್ಮ ಜಾಣತನವನ್ನೂ ನಾನು ಮೆಚ್ಚುತ್ತೇನೆ. ನೀವು ‘ನನಗೆ ಅನುಮಾನ’ ವೆನ್ನುವ ಸ್ವಭಾವವಿದೆ ಎನ್ನುವುದನ್ನು ಗುರುತಿಸಿಕೊಂಡಿದ್ದೀರಿ. ಮತ್ತು ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತ ಪತ್ರವನ್ನೂ ಬರೆದಿದ್ದೀರಿ. ಇದೇ ಜಾಣತನವನ್ನು ಉಪಯೋಗಿಸಿ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೂ ಪ್ರಯತ್ನಿಸಿದರೆ ಮುಂದಿನ ನಿಮ್ಮ ಬದುಕು ಸ್ವಲ್ಪ ಮಟ್ಟಿಗಾದರೂ ಹಸನಾಗಬಹುದು. ಸ್ವಲ್ಪ ಸಾವಧಾನವಾಗಿ ಕುಳಿತು ಆಳವಾಗಿ ಯೋಚನೆ ಮಾಡಿ. ನಿಮ್ಮ ಈ ಅನುಮಾನ ಮತ್ತು ಕೂಗಾಡುವ ನಡವಳಿಕೆಗಳಿಂದಾಗಿ ನಿಮ್ಮ ಸಂಸಾರ ಏನೆಲ್ಲ ಸಂಕಷ್ಟವನ್ನು ಅನುಭವಿಸುತ್ತಿದೆ ಎನ್ನುವುದರ ಪರಿವೆ ನಿಮಗಿಲ್ಲ.
ನಿಮ್ಮ ಈ ಜಗಳಗಂಟಿತನದಿಂದ ನೀವಾದರೂ ನೆಮ್ಮದಿಯಾಗಿದ್ದೀರಾ? ಅದೂ ಇಲ್ಲವಲ್ಲ? ಯೋಚಿಸಿ ತಲೆಗೂದಲು ಉದುರುತ್ತಿದೆ ಎನ್ನುತ್ತೀರಿ. ತಲೆಗೂದಲು ಒಂದೇ ಅಲ್ಲ, ತಲೆಯೊಳಗಿನ ನರಮಂಡಲಗಳೂ ನೀವು ಕೂಗಾಡಿದಷ್ಟೂ ಚಿಂದಿಚಿತ್ರಾನ್ನವಾಗುತ್ತವೆ! ಯಾರ ಮೇಲಾದರೂ ಕೋಪದಿಂದ ಕೂಗಾಡಿದರೆ, ಕೂಗಾಡಿಸಿಕೊಂಡವರು ಒಂದು ಕ್ಷಣ ವಿಚಲಿತರಾಗಿ ನಂತರ ಮರೆತೇ ಬಿಡಬಹುದು. ಆದರೆ ಕೂಗಾಡಿದವರಿಗೆ ಶಾಶ್ವತವಾಗಿ ನರಮಂಡಲಗಳು ಡ್ಯಾಮೇಜ್ ಆಗುತ್ತವೆ.
ನಂತರ ಒಂದಲ್ಲ ಒಂದು ರೋಗದಿಂದ ನರಳಬೇಕಾಗುತ್ತದೆ. ಈಗ ನೀವೇ ಯೋಚಿಸಿ. ದೇಹ ಮತ್ತು ಮಿದುಳಿಗೆ ಇಷ್ಟೆಲ್ಲ ಹಾನಿ ಮಾಡಿಕೊಳ್ಳುವುದು ಒಳ್ಳೆಯದೋ ಅಥವಾ ಈಗಲೇ ಮನೋವೈದ್ಯರ ಹತ್ತಿರ ಹೋಗಿ ತಪಾಸಣೆ ಮಾಡಿಸಿಕೊಂಡು ಔಷಧಿಯನ್ನೂ ಥೆರಪಿಗಳನ್ನೂ ತೆಗೆದುಕೊಂಡು ಮುಂದೆ ಮಕ್ಕಳಿಗೆ ಬೇಕಾದ ತಾಯಿಯಾಗಿ, ಗಂಡನಿಗೆ ಹಿತವೆನಿಸುವ ಹೆಂಡತಿಯಾಗಿ ಬಾಳುವುದು ಒಳ್ಳೆಯದೋ? ನಿಮಗಿನ್ನೂ 42 ವಯಸ್ಸು. ಮುಂದೆ ಇನ್ನೂ 50-60 ವರ್ಷಗಳ ಬದುಕಿದೆ. ಅದನ್ನು ಖಂಡಿತ ನೇರಗೊಳಿಸಿಕೊಳ್ಳಬೇಕೆಂದು ನಿಮಗನ್ನಿಸಬೇಕಲ್ಲವೇ?