

ವಾರ ಕಳೆಯುವ ಹೊತ್ತಿಗೆ ಬೃಹತ್ ಸೇನೆಯನ್ನೂ, ಸೇನಾ ಸಲಕರಣೆಗಳನ್ನೂ ರಷ್ಯಾ ಕಿಯೆವ್ನತ್ತ ಕಳಿಸಿತು. ಟ್ಯಾಂಕ್ಗಳು, ಫಿರಂಗಿಗಳು, ಸೇನಾವಾಹನಗಳ ಜತೆಗೆ ಇಂಧನ, ಮದ್ದುಗುಂಡು ಮತ್ತು ಆಹಾರಸಾಮಗ್ರಿಗಳನ್ನು ಹೊತ್ತ ವಾಹನಗಳಿದ್ದು ರಸ್ತೆಯಲ್ಲಿ ಸುಮಾರು 64 ಕಿಲೋಮೀಟರ್ ಉದ್ದದವರೆಗೆ ಅಂದರೆ ಬೆಲರೂಸ್ ಗಡಿ ಮತ್ತು ಕಿಯೆವ್ ನಗರದ ನಡುವಿನ ಅಂತರದ ಅರ್ಧಕ್ಕಿಂತಲೂ ಹೆಚ್ಚು ದೂರದುದ್ದಕ್ಕೂ ಹರಡಿಕೊಂಡಿದ್ದ ಈ ದೈತ್ಯ ಸೇನಾಪಡೆಯ ಉದ್ದೇಶ ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ ರಾಜಧಾನಿಯನ್ನು ಕೈವಶ ಮಾಡಿಕೊಳ್ಳುವುದಾಗಿರುವಂತೆ ಕಂಡಿತ್ತು. ಆದರೆ, ಆ ಸೇನಾಪಡೆಯೂ ರಾಜಧಾನಿಯ ಹೊರವಲಯದಲ್ಲೇ ನಿಂತಿತು, ವಾರವಾದರೂ ಅಲ್ಲಿಯೇ ನಿಂತಿದೆ!
ಈ ಬೆಳವಣಿಗೆ, ಉಗ್ರ ರಷ್ಯನ್ ದಾಳಿಯನ್ನು ಯೂಕ್ರೇನ್ ಯಶಸ್ವಿಯಾಗಿ ತಡೆದು ನಿಲ್ಲಿಸಿದೆ, ರಷ್ಯಾ ತನ್ನ ಗುರಿಸಾಧನೆಯಲ್ಲಿ ವಿಫಲವಾಗುತ್ತಿದೆ ಎಂಬ ಅಭಿಪ್ರಾಯವನ್ನು ಮೂಡಿಸಿದೆ, ಪಶ್ಚಿಮದ ಮಾಧ್ಯಮಗಳು ಹಾಗೆ ಹೇಳುತ್ತಲೇ ಇವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ರಷ್ಯಾದ ಉದ್ದೇಶ ಮತ್ತು ಕಾರ್ಯವಿಧಾನ ಬೇರೆಯೇ ಇರಬಹುದೆಂದು ರ್ತಸಲು ಅವಕಾಶವಾಗುತ್ತದೆ. ಅಧ್ಯಕ್ಷ ವ್ಲಾದಿಮೀರ್ ಪೂತಿನ್ರ ಯೋಜನೆಯಾಗಿ, ಅದು ಯೂಕ್ರೇನ್ ಅಧ್ಯಕ್ಷ ಮತ್ತು ಸೇನೆಯನ್ನು ದಿಕ್ಕುತಪ್ಪಿಸುವ ತಂತ್ರವಾಗಿರುವಂತೆ ಕಾಣುತ್ತಿದೆ.
ಸೇನಾಶಕ್ತಿಯಲ್ಲಿ ಭೌಗೋಳಿಕವಾಗಿ ಜಗತ್ತಿನ ಮತ್ತು ಯೂರೋಪ್ನ ಅತ್ಯಂತ ದೊಡ್ಡ ದೇಶದ ಮುಂದೆ ಯೂರೋಪ್ನ ಎರಡನೆಯ ದೊಡ್ಡ ದೇಶ ಏನೇನೂ ಅಲ್ಲ. ವಾಸ್ತವ ಹೀಗಿದ್ದೂ ರಷ್ಯಾ ಪೂರ್ಣ ವಿಜಯವನ್ನು ಉದ್ದೇಶಪೂರ್ವಕವಾಗಿ ಮುಂದೂಡುತ್ತಿರುವುದಕ್ಕೆ ಕಾರಣ ನಂತರದ ದಿನಗಳನ್ನೂ ಗಮನದಲ್ಲಿಟ್ಟುಕೊಂಡಿರುವುದಾಗಿದೆ. ಯುದ್ಧ ಆರಂಭವಾಗುವ ಹೊತ್ತಿಗೆ ಕಿಯೆವ್ ನಗರದಲ್ಲಿದ್ದ ಜನಸಂಖ್ಯೆ ಸುಮಾರು 30 ಲಕ್ಷ. ಮೊನ್ನೆಮೊನ್ನೆಯವರೆಗೂ ಇವರಲ್ಲಿ ಬಹುತೇಕರು ರಷ್ಯಾದ ವಿರೋಧಿಗಳಾಗಿರಲಿಲ್ಲ. ಆದರೆ ರಷ್ಯಾಗೆ ನ್ಯಾಟೋ ಮತ್ತು ಯೂಕ್ರೇನ್ ಒಡ್ಡಿರುವ ಅಪಾಯವನ್ನು ಮರೆಮಾಚಿ, ಆ ದೇಶವನ್ನೂ ಅದರ ಅಧ್ಯಕ್ಷರನ್ನೂ ವಿಕೃತವಾಗಿ ಚಿತ್ರಿಸುವ ವ್ಯವಸ್ಥಿತ ಪ್ರಯತ್ನದಿಂದಾಗಿ ನಗರದ ಬಹುತೇಕರು ರಷ್ಯಾ ವಿರೋಧಿಗಳಾಗಿ ಬದಲಾಗಿದ್ದಾರೆ. ಇದೇ ಸ್ಥಿತಿ ದೇಶದ ಎರಡನೆಯ ದೊಡ್ಡ ನಗರ ರ್ಖಾವ್ನದೂ ಸಹಾ. ದೊಡ್ಡ ಸಂಖ್ಯೆಯ ನಾಗರಿಕ ವಿರೋಧಿಗಳಿರುವ ನಗರಗಳನ್ನು ಆಕ್ರಮಿಸಿಕೊಂಡರೆ ಅಲ್ಲಿ ಶಾಂತಿಪಾಲನೆಗಾಗಿ ಸೈನಿಕರನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸುವ ಒತ್ತಡಕ್ಕೆ ರಷ್ಯಾ ಒಳಗಾಗುತ್ತಿತ್ತು ಮತ್ತದು ಇತರೆಡೆ ಕಾರ್ಯಾಚರಣೆಗಳಿಗೆ ಸೈನಿಕರ ಕೊರತೆಗೆ ಕಾರಣವಾಗುತ್ತಿತ್ತು. ಜತೆಗೆ, ಸುಮಾರು ಒಂದು ಲಕ್ಷದಷ್ಟು ನಾಗರಿಕರಿಗೆ ಯೂಕ್ರೇನ್ ಸೇನೆ ಅಮೆರಿಕಾದಿಂದ ಬಂದ ರೈಫಲ್ಗಳನ್ನು ನೀಡಿದೆ, ಅವುಗಳನ್ನು ಬಳಸುವುದನ್ನೂ ತರಾತುರಿಯಲ್ಲಿ ಕಲಿಸಿದೆ. ಹೀಗಾಗಿ ಕಿಯೆವ್ ಅಥವಾ ರ್ಖಾವ್ ನಗರವನ್ನು ಪ್ರವೇಶಿಸುವ ರಷ್ಯನ್ ಸೇನೆ ತನ್ನೆದುರು ಕಾಣಿಸಿಕೊಳ್ಳುವ ಯೂಕ್ರೇನ್ ಸೇನೆಯನ್ನಷ್ಟೇ ಅಲ್ಲ, ಮನೆಮನೆಗಳ ಅರೆತೆರೆದ ಕಿಟಕಿಗಳ ಹಿಂದಿರುವ ಶಸ್ತ್ರಸಜ್ಜಿತ ನಾಗರಿಕರನ್ನೂ ಎದುರಿಸಬೇಕಾಗುತ್ತದೆ. ಪರಿಣಾಮವಾಗಿ ತನ್ನ ಸೈನಿಕರ ಸಾವುನೋವು ಅಧಿಕವಾಗುವ ಅಪಾಯದ ಅರಿವು ರಷ್ಯನ್ ಸೇನೆಗಿದೆ. ಯೂಕ್ರೇನ್ ನಾಗರಿಕರನ್ನು ಕೊಲ್ಲುತ್ತಾ ಹೋದರೆ ಅದು ಯುದ್ಧಾಪರಾಧ, ಅಮಾನವೀಯ ಕೃತ್ಯ, ರಷ್ಯನ್ ಅಧ್ಯಕ್ಷರನ್ನು ಅದಕ್ಕಾಗಿ ವಿಚಾರಣೆಗೊಳಪಡಿಸಿ ಶಿಕ್ಷಿಸಬೇಕು ಎಂದು ಯೂಕ್ರೇನ್ ಮತ್ತು ಪಶ್ಚಿಮದ ನಾಯಕರು ಹಾಗೂ ಮಾಧ್ಯಮಗಳು ಕೂಗತೊಡಗುತ್ತವೆ. ಆ ನಾಗರಿಕರು ಶಸ್ತ್ರಸಜ್ಜಿತರಾಗಿದ್ದರು ಎನ್ನುವುದನ್ನು ಅವು ಮರೆಮಾಚುತ್ತವೆ. ಈ ಬಗೆಯ ಉದ್ದೇಶಪೂರ್ವಕ ದುಷ್ಪ್ರಚಾರ ಅಂತಾರಾಷ್ಟ್ರೀಯ ರಂಗದಲ್ಲಿ ರಷ್ಯಾದ ವರ್ಚಸ್ಸಿಗೆ ಭಾರಿ ಪೆಟ್ಟು ನೀಡುತ್ತದೆ. ಇದನ್ನೆಲ್ಲಾ ತಪ್ಪಿಸುವ ಅತ್ಯುತ್ತಮ ಮಾರ್ಗವೆಂದರೆ ಆ ನಗರಗಳನ್ನು ಆಕ್ರಮಿಸಿಕೊಳ್ಳದೇ, ಸುಮ್ಮನೆ ಬೆದರಿಕೆ ಒಡ್ಡುತ್ತಾ, ಆ ಬೆದರಿಕೆ ನಿಜವೆನ್ನುವಂತೆ ಆಗಾಗ ಶೆಲ್ ದಾಳಿಯೆಸಗುತ್ತಾ ದಿನಗಳೆಯುವುದು!
ಈ ನೀತಿಯಿಂದ ಇನ್ನೂ ಒಂದು ಮುಖ್ಯವಾದ ಗುರಿ ಸಾಧನೆಯಾಗುತ್ತದೆ. ರಾಜಧಾನಿಗೆ ಬೆದರಿಕೆಯೊಡ್ಡಿ, ಅದರ ರಕ್ಷಣೆಗಾಗಿ ಯೂಕ್ರೇನ್ ಸೇನೆಯ ದೊಡ್ಡ ಭಾಗವನ್ನು ಕಟ್ಟಿಹಾಕಿ ನಿಲ್ಲಿಸಿಬಿಟ್ಟರೆ ಸಾಮರಿಕವಾಗಿ ಮುಖ್ಯವೆನಿಸುವ ಇತರೆಡೆಗಳಲ್ಲಿ ಸೇನೆಯನ್ನು ಸುಲಭವಾಗಿ ಮುನ್ನಡೆಸಿಕೊಂಡು ಹೋಗಬಹುದು. ಇದೇನೂ ಅಪರಿಚಿತ ಯುದ್ಧತಂತ್ರವಲ್ಲ. 1965ರ ಯುದ್ಧದಲ್ಲಿ ನಮ್ಮ ಸೇನೆಯೂ ಇದನ್ನೇ ಮಾಡಿತ್ತು. ಚಿಕನ್ಸ್ ನೆಕ್-ಛಾಂಬ್ ಜಾರಿಯನ್ ವಲಯದಲ್ಲಿ ಮುನ್ನುಗ್ಗಿಬಂದು ಅಂದು ಕಾಶ್ಮೀರ ಕಣಿವೆಯೊಂದಿಗೆ ಭಾರತದ ಇತರ ಭಾಗಕ್ಕಿದ್ದ ಏಕೈಕ ಭೂ-ಸಂಪರ್ಕವಾದ ಜಮ್ಮು-ಅಖ್ನೂರ್ ರಸ್ತೆಯನ್ನು ಕತ್ತರಿಸಿಬಿಡಲು ಪಾಕಿಸ್ತಾನ ಹಂಚಿಕೆ ಹಾಕಿತ್ತು. ವಿವಿಧ ಕಾರಣಗಳಿಂದಾಗಿ ಅಲ್ಲಿ ನಮ್ಮ ಸೇನಾಶಕ್ತಿ ಪರಿಣಾಮಕಾರಿಯಾಗಿರಲಿಲ್ಲ. ಪಾಕಿಸ್ತಾನೀಯರನ್ನು ಅಲ್ಲಿ ಮಾತ್ರ ಎದುರಿಸಿದರೆ ಸೋಲು ಖಚಿತ ಎಂದರಿತ ಭಾರತೀಯ ಸೇನಾ ಮತ್ತು ರಾಜಕೀಯ ನಾಯಕತ್ವ ಪಾಕಿಸ್ತಾನಕ್ಕೆ ಮುಖ್ಯವೆನಿಸುವ ಬೇರೊಂದು ಕಡೆ ಆಕ್ರಮಣವೆಸಗಿ ಅದರ ಸೇನೆಯ ಗಮನವನ್ನು ಅತ್ತ ಸೆಳೆಯುವ ತಂತ್ರ ಹೂಡಿತು. ಲಾಹೋರ್ ಮೇಲೆ ದಾಳಿಯೆಸಗಿದ್ದು ಅದೇ ಉದ್ದೇಶದಿಂದ. ಗಡಿ ದಾಟಿದ ಆರು ಗಂಟೆಯೊಳಗೆ ಭಾರತೀಯ ಸೇನೆ ಲಾಹೋರ್ ನಗರದ ಹೊರವಲಯ ತಲುಪಿತು. ಆಗ ಕಾಶ್ಮೀರವನ್ನು ಮರೆತು ಲಾಹೋರ್ ನಗರವನ್ನು ರಕ್ಷಿಸಿಕೊಳ್ಳುವುದು ಪಾಕಿಸ್ತಾನಕ್ಕೆ ಮುಖ್ಯವಾಯಿತು. ಪರಿಣಾಮವಾಗಿ ಜಮ್ಮು-ಅಖ್ನೂರ್ ರಸ್ತೆಯ ಮೇಲೆ ಅದು ನಿರ್ವಿುಸಿದ್ದ ಒತ್ತಡ ಕಡಿಮೆಯಾಗಿ ಅದನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಯಿತಲ್ಲದೆ, ಸಾಮರಿಕವಾಗಿ ಮುಖ್ಯವೆನಿಸಿದ ಹಲವು ಪ್ರದೇಶಗಳನ್ನು ವಶಪಡಿಸಿಕೊಳ್ಳುವುದರಲ್ಲೂ ನಮ್ಮ ಸೇನೆ ಯಶಸ್ವಿಯಾಯಿತು. ಯೂಕ್ರೇನ್ನಲ್ಲಿ ರಷ್ಯನ್ ಸೇನೆಯ ನಡೆ ಸರಿಸುಮಾರು ಹೀಗೆಯೇ ಇದೆ. ಕಿಯೆವ್ ಮತ್ತು ರ್ಖಾವ್ ನಗರಗಳ ಮೇಲೆ ಒತ್ತಡ ನಿರ್ವಿುಸಿ ಯೂಕ್ರೇನ್ ಸೇನೆಯ ಬಹುದೊಡ್ಡ ಭಾಗವನ್ನು ಅಲ್ಲಿ ಕಟ್ಟಿಹಾಕಿರುವ ರಷ್ಯನ್ ಸೇನೆ ಇತರೆಡೆ ತನ್ನ ಗುರಿಗಳನ್ನು ಸಾಧಿಸಿಕೊಳ್ಳುತ್ತಿದೆ.
ಯೂಕ್ರೇನ್ನ ಸೇನಾಶಕ್ತಿಯನ್ನೂ, ಉತ್ಸಾಹವನ್ನೂ ಹೆಚ್ಚಿಸಿರುವುದೇ ನ್ಯಾಟೋ, ಮುಖ್ಯವಾಗಿ ಅಮೆರಿಕಾ. ಇಲ್ಲಿರುವ ಮೂಲಭೂತ ಸಮಸ್ಯೆಯೆಂದರೆ ಅಮೆರಿಕಾದ ಪ್ರಮುಖ ಅಥವಾ ಏಕೈಕ ವೈರಿ ರಷ್ಯಾ ಎಂಬ ಶೀತಲ ಸಮರದ ಮನಸ್ಥಿತಿಯಿಂದ ಡೆಮೋಕ್ರಾಟಿಕ್ ಪಕ್ಷವಿನ್ನೂ ಹೊರಬರಲಾಗದಿರುವುದು. ಭೂತಕಾಲದ ಬಂಧಿಯಾಗಿರುವ ಅದು ಹೊಸ ಕಾಲದ ಹೊಸ ಶತ್ರುಗಳನ್ನು ಗುರುತಿಸುವ ಸಾಮರ್ಥ್ಯವನ್ನೇ ಬೆಳೆಸಿಕೊಂಡಿಲ್ಲ. ಬಿಲ್ ಕ್ಲಿಂಟನ್, ಬರಾಕ್ ಒಬಾಮಾ ಕಾಲದಲ್ಲಿ ನಡೆದದ್ದು ಅದೇ. ಅದನ್ನೇ ಈಗ ಜೋ ಬೈಡೆನ್ ಆಡಳಿತಾವಧಿಯಲ್ಲೂ ನೋಡುತ್ತಿದ್ದೇವೆ. ಯೂಕ್ರೇನನ್ನು ರಷ್ಯಾ ವಿರುದ್ಧ ಎತ್ತಿಕಟ್ಟುವ ಒಬಾಮಾ ಪ್ರಯತ್ನ ಆ ದೇಶಕ್ಕೇ ಹಾನಿಕರವಾಗಿ ಅದು ಕ್ರಿಮಿಯಾ ಪರ್ಯಾಯದ್ವೀಪವನ್ನು ಕಳೆದುಕೊಂಡದ್ದನ್ನು 2014ರಲ್ಲಿ ನೋಡಿದೆವು. ನಂತರ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಮನ ಹೊರಳಿಸಿದ್ದು ಚೀನಾದತ್ತ. ನ್ಯಾಟೋ ಸೇರುವ ಯೂಕ್ರೇನ್ನ ಬಯಕೆಗೆ ಅವರದು ತಣ್ಣನೆಯ ಪ್ರತಿಕ್ರಿಯೆ. ಆದರೆ ಜೋ ಬೈಡೆನ್ ಶ್ವೇತಭವನ ಪ್ರವೇಶಿಸುತ್ತಿದ್ದಂತೇ ಎಲ್ಲವೂ ಮತ್ತೆ ಹಿಂದಿನ ಸ್ಥಿತಿಗೇ ಮರಳತೊಡಗಿತು. ಯೂಕ್ರೇನ್ ಅಧ್ಯಕ್ಷ ವೊಲೊದಿಮೀರ್ ಝೆಲೆನ್ಸ್ಕಿಯವರ ನ್ಯಾಟೋ ಬಯಕೆಗೆ ಬೈಡೆನ್ರದು ಉತ್ಸಾಹದ ಪ್ರತಿಕ್ರಿಯೆ. ಇದು ತನ್ನ ದೇಶದ ಹಿತಾಸಕ್ತಿಗಳಿಗೆ ಮಾರಕವೆಂದು ಸರಿಯಾಗಿಯೇ ಅರ್ಥೈಸಿದ ಅಧ್ಯಕ್ಷ ಪೂತಿನ್ ಕಳೆದ ಏಪ್ರಿಲ್ನಲ್ಲೇ ಯೂಕ್ರೇನ್ಗೆ ಸೇನಾ ಬೆದರಿಕೆ ಒಡ್ಡಿದರು. ತಮ್ಮ ಕ್ರಮ ಬೈಡೆನ್ ಹಾಗೂ ಝೆಲೆನ್ಸ್ಕಿ ಇಬ್ಬರಿಗೂ ಸರಿದಾರಿ ತೋರುತ್ತದೆಂದು ಅವರ ನಿರೀಕ್ಷೆಯಾಗಿತ್ತು. ಆದರೆ ನಲವತ್ತು ವರ್ಷಗಳಿಂದಲೂ ಬದಲಾಗದ ಡೆಮೋಕ್ರಾಟಿಕ್ ಪಕ್ಷ ಈಗ ಬದಲಾಗುತ್ತದೆಂಬ ಆಶಯ ಹುಸಿಯಾಗುತ್ತಿದೆಂದು ಅವರಿಗೆ ಅರಿವಾಗಲು ಹೆಚ್ಚುಕಾಲ ಬೇಕಾಗಲಿಲ್ಲ. ಯೂಕ್ರೇನ್, ಪೊಲ್ಯಾಂಡ್ ಮತ್ತು ಲಿಥುವೇನಿಯಾಗಳ ಜತೆಗೂಡಿ ಸಮರ ಕಸರತ್ತು ನಡೆಸಿದ ಅಮೆರಿಕಾ ಅಕ್ಟೋಬರ್ನಲ್ಲಿ ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಯೂಕ್ರೇನ್ಗೆ ರವಾನಿಸಿತು. ಪ್ರತಿಯಾಗಿ ನವೆಂಬರ್ನಲ್ಲಿ ರಷ್ಯಾ ಗಡಿಯಲ್ಲಿ ಸೇನಾಜಮಾವಣೆ ಮಾಡತೊಡಗಿತು. ಡಿಸೆಂಬರ್ನಲ್ಲಿ ಬೈಡೆನ್ ಸರ್ಕಾರ 350 ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಯೂಕ್ರೇನ್ಗೆ ನೀಡಿತು. ಇಂದು ಯೂಕ್ರೇನ್ ಯುದ್ಧದಲ್ಲಿ ಬಳಸುತ್ತಿರುವ ಇವುಗಳಲ್ಲಿ ಹೆಚ್ಚಿನವು ಬಂದದ್ದು ಒದೆಸ್ಸಾ ಬಂದರಿಗೆ ನೌಕೆಗಳ ಮೂಲಕ ಮತ್ತು ಕಿಯೆವ್ಗೆ ವಾಯುಮಾರ್ಗದ ಮೂಲಕ. ಈ ಹಾದಿಗಳನ್ನು ಬಂದ್ ಮಾಡದೇ ಯೂಕ್ರೇನ್ನ ಸಮರೋತ್ಸಾಹವನ್ನು ಕುಗ್ಗಿಸುವುದು ರಷ್ಯಾಗೆ ಸಾಧ್ಯವಿಲ್ಲ. ಕಿಯೆವ್ ವಿಮಾನನಿಲ್ದಾಣ ಕಾರ್ಯ ನಿರ್ವಹಿಸದಂತೆ ಮಾಡಿ ರಷ್ಯಾ ವಾಯುಮಾರ್ಗವನ್ನು ಈಗಾಗಲೇ ಬಂದ್ ಮಾಡಿದೆ. ಯೂಕ್ರೇನನ್ನು ಸುತ್ತುವರಿಯುವುದು ಅದರ ಮುಂದಿನ ಗುರಿ.
ಪೂರ್ವ ಮತ್ತು ಉತ್ತರದಲ್ಲಿ ಯೂಕ್ರೇನ್ ಈಗಾಗಲೇ ರಷ್ಯಾ ಮತ್ತದರ ಸಹಯೋಗಿ ಬೆಲರೂಸ್ನಿಂದ ಆವೃತವಾಗಿದೆ. ಜತೆಗೆ ಯೂಕ್ರೇನ್ನಿಂದ ಪ್ರತ್ಯೇಕತೆ ಘೊಷಿಸಿಕೊಂಡಿರುವ ಪೂರ್ವದ ಲುಹಾನ್ಸ್ ಮತ್ತು ದೊನೆತ್ಸ್ ಪ್ರದೇಶಗಳು ರಷಿಯಾದವೇ ಆಗಿರುವಂತಿವೆ. ಹೀಗಾಗಿ ಯೂಕ್ರೇನ್ನ ದಕ್ಷಿಣ ಬಾಗಿಲುಗಳನ್ನು ಮುಚ್ಚಲು ರಷ್ಯನ್ ಸೇನೆ ದೊನೆತ್ಸ್ನಿಂದ ಹೊರಟು ಕಪ್ಪು ಸಮುದ್ರದ ಭಾಗವಾದ ಅಜೋವ್ ಸಮುದ್ರ ತೀರದಲ್ಲಿ ಪಶ್ಚಿಮದತ್ತ ಸಾಗುತ್ತಿದೆ. ಅಲ್ಲಿ ಅದಕ್ಕೆ ಎದುರಾದ ಮೊದಲ ತಡೆ ಮಾರಿಯಾಪೋಲ್ ಬಂದರು. ಅದರ ಜತೆಗೆ ಸನಿಹದ ವೊಲ್ನೋವಾಖಾ ಪಟ್ಟಣವನ್ನೂ ಸುತ್ತುವರಿದ ರಷ್ಯನ್ ಸೇನೆ ಅವುಗಳಾಚೆಯ ಝುಪೊರಿಝಿಯಾ ನಗರವನ್ನು ವಶಕ್ಕೆ ತೆಗೆದುಕೊಂಡಿದೆ. ಇನ್ನು ಅದರ ಮುಂದಿನ ಗುರಿ ಈಗಾಗಲೇ ಇನ್ನೊಂದು ರಷ್ಯನ್ ಪಡೆ ಕ್ರಿಮಿಯಾದಿಂದ ಉತ್ತರಕ್ಕೆ ಬಂದು ಆಕ್ರಮಿಸಿಕೊಂಡಿರುವ ಖೆಸೋನ್ ನಗರವನ್ನು ತಲುಪುವುದು. ಅಲ್ಲಿಗೆ ಅಜೋವ್ ಸಮುದ್ರತೀರವೆಲ್ಲವೂ ರಷ್ಯಾದ ಕೈಗೆ ಬಿದ್ದಂತಾಗುತ್ತದೆ. ಖೆಸೋನ್ ನಗರದಲ್ಲಿ ಒಟ್ಟುಗೂಡುವ ಎರಡೂ ಪಡೆಗಳು ಜತೆಯಾಗಿ ಒದೆಸ್ಸಾ ಬಂದರಿನ ಮೇಲೆ ಮುಗಿಬೀಳುತ್ತವೆ. ಅದು ಯಶಸ್ವಿಯಾಗುತ್ತಿದ್ದಂತೇ ಯೂಕ್ರೇನ್ನ ದಕ್ಷಿಣ ಸಮುದ್ರ ಬಾಗಿಲು ಪೂರ್ಣವಾಗಿ ಬಂದ್ ಆಗಿಹೋಗುತ್ತದೆ.
ಯೂಕ್ರೇನ್ನ ದಕ್ಷಿಣ ತೀರದ ಮೇಲೆ ರಷ್ಯಾ ಕಣ್ಣಿಟ್ಟಿರುವುದಕ್ಕೆ ಬಲವಾದ ಆರ್ಥಿಕ ಕಾರಣವೂ ಒಂದಿದೆ. ಕಿಯೆವ್ನಲ್ಲಿ ತನ್ನ ಪರವಾಗಿದ್ದ ಸರ್ಕಾರ ಫೆಬ್ರವರಿ 2014ರಲ್ಲಿ ಕುಸಿದುಬೀಳುತ್ತಿದ್ದಂತೇ ಏಪ್ರಿಲ್ನಲ್ಲಿ ಕ್ರಿಮಿಯಾವನ್ನು ರಷ್ಯಾ ಆಕ್ರಮಿಸಿಕೊಂಡಿತು. ಬಹುಪಾಲು ರಷಿಯನ್ನರೇ ಆಗಿರುವ ಅಲ್ಲಿನ ಜನತೆ ರಷಿಯನ್ ಆಡಳಿತವನ್ನು ಒಪ್ಪಿಕೊಂಡದ್ದೂ ಆಯಿತು. ಆದರೆ ಕ್ರಿಮಿಯಾಗೆ ನೀರುಣಿಸುತ್ತಿದ್ದ ಏಕೈಕ ಸಾಧನವಾದ ನೀಪರ್ ನದಿಯ ಕಾಲುವೆಯನ್ನು ಯೂಕ್ರೇನಿಯನ್ನರು ಮುಚ್ಚಿಬಿಟ್ಟಾಗ ಸಮಸ್ಯೆಯೆದ್ದಿತು. ತನ್ನ ಕಡೆಯಿಂದ ನೀರು ಪೂರೈಸಲು ನಾಲ್ಕು ಬಿಲಿಯನ್ ಡಾಲರ್ ವೆಚ್ಚದಲ್ಲಿ ರಷ್ಯಾ ಏನೇನೋ ಕಸರತ್ತು ಮಾಡಿದರೂ ನೀಪರ್ ನದಿಯಿಂದ ಬರುತ್ತಿದ್ದಷ್ಟು ನೀರನ್ನು ಕ್ರಿಮಿಯಾಗೆ ಪೂರೈಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಕ್ರಿಮಿಯಾದಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ. ಅದು ರಷಿಯಾ-ವಿರೋಧಿ ಆಂದೋಲನವಾಗಿ ಬದಲಾಗುವ ಸೂಚನೆಯೂ 2020ರಲ್ಲಿ ಕಾಣಿಸಿಕೊಂಡಿತು. ಯೂಕ್ರೇನ್ನ ದಕ್ಷಿಣ ತೀರವನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಮುಚ್ಚಲ್ಪಟ್ಟಿರುವ ನೀಪರ್ ನದಿಕಾಲುವೆಯನ್ನು ತೆರೆದು ಕ್ರಿಮಿಯಾಗೆ ಮತ್ತೆ ನೀರುಣಿಸುವುದು ರಷಿಯಾಗೆ ಈಗ ಅತಿಮುಖ್ಯ. ಮಾರಿಯಾಪೋಲ್ ಮತ್ತು ಖೆಸೋನ್ ನಗರಗಳ ನಡುವಿನ ಇಡೀ ಪ್ರದೇಶ ರಷ್ಯನ್ನರ ಕೈಗೆ ಬಿದ್ದರೆ ಕ್ರಿಮಿಯಾಗೆ ಇನ್ನೆಂದೂ ನೀರಿನ ಕೊರತೆಯಾಗದು.
ಆದರೆ ಇಷ್ಟು ಮಾಡಿದ ಮೇಲೂ ಪಶ್ಚಿಮದ ರುಮೇನಿಯಾ ಮತ್ತು ಪೊಲ್ಯಾಂಡ್ಗಳಿಂದ ಅಮೆರಿಕನ್ ಶಸ್ತ್ರಾಸ್ತ್ರಗಳು ಯೂಕ್ರೇನ್ಗೆ ಬರುವುದನ್ನು ತಡೆಯುವುದು ರಷ್ಯಾಗೆ ದೊಡ್ಡ ಸಮಸ್ಯೆಯಾಗುತ್ತದೆ. ಯುದ್ಧ ಆರಂಭವಾದ ಒಂದೇವಾರದಲ್ಲಿ ಹದಿನೇಳು ಸಾವಿರ ಟ್ಯಾಂಕ್-ನಿರೋಧಕ ಕ್ಷಿಪಣಿಗಳು ಸೇರಿದಂತೆ ಅಗಾಧ ಪ್ರಮಾಣದ ಅಮೆರಿಕನ್ ಶಸ್ತ್ರಾಸ್ತ್ರಗಳು ರುಮೇನಿಯಾ ಕಡೆಯಿಂದ ರಸ್ತೆಮಾರ್ಗವಾಗಿ ಯೂಕ್ರೇನ್ಗೆ ಬಂದಿವೆ. ಇದನ್ನು ತಡೆಯಲು ರಷ್ಯಾವೇನಾದರೂ ನ್ಯಾಟೋ ರಾಷ್ಟ್ರವಾದ ರುಮೇನಿಯಾದ ಗಡಿಯಲ್ಲಿ ಕಾರ್ಯಾಚರಣೆ ಕೈಗೊಂಡರೆ ನ್ಯಾಟೋವನ್ನು ಯುದ್ಧಕ್ಕೆಳೆದಂತೆ! ಮುಂದೆ ಆರಂಭವಾಗಬಹುದಾದ ಮಹಾ ಆದರೆ ಕ್ಷಿಪ್ರ ಯುದ್ಧವನ್ನು ಗೆಲ್ಲಲಾಗದು ಎಂದು ರಷ್ಯಾಗೆ ಗೊತ್ತು. ತಾನೂ ಗೆಲ್ಲಲಾಗದು ಎಂದು ನ್ಯಾಟೋ ಅರಿತರೆ ಪ್ರಸಕ್ತ ಯುದ್ಧ ನಿಲುಗಡೆಗೆ ಬರಲು ವೇದಿಕೆ ಸಿದ್ಧವಾಗುತ್ತದೆ.
ಕೊನೆಯ ಮಾತು: ಈಗ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇದ್ದಿದ್ದರೆ! 2025ರಲ್ಲಿ ಮತ್ತೆ ಅಧ್ಯಕ್ಷಗಾದಿಗೇರಲು ಪ್ರಯತ್ನವನ್ನಾರಂಭಿಸಿರುವ ಟ್ರಂಪ್ರಿಗಾಗಿ ಶ್ವೇತಭವನವನ್ನೂ, ನಮಗಾಗಿ ಈ ಜಗತ್ತನ್ನೂ ಬೈಡೆನ್ ಮಹಾಶಯ ಸುರಕ್ಷಿತವಾಗಿ ಉಳಿಸುತ್ತಾರೆಂದು ಆಶಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)