ಸೆಲೆಬ್ರಿಟಿ ಕಾರ್ನರ್​: ಯಶಸ್ಸಿಗೆ ತರಾತುರಿ ಸಲ್ಲ

Cele 1
Published on

ಸೆಲೆಬ್ರಿಟಿಗಳನ್ನು ನೋಡಿ, ನಾನು ಸಹ ಅವರ ತರಹ ಆಗಬೇಕು ಅಂತ ಬಹಳಷ್ಟು ಯುವಕ-ಯುವತಿಯರಿಗೆ ಆಸೆ ಇರುತ್ತದೆ. ಅವರು ಅದನ್ನು ಸ್ಫೂರ್ತಿ ಅಂತ ಕರೆಯುತ್ತಾರೆ. ಆದರೆ, ಹಿರಿಯರು ಅದನ್ನು ಮೂರ್ಖತನ ಎನ್ನುತ್ತಾರೆ. ಇದನ್ನು ಹೇಗೆ ಸ್ವೀಕರಿಸಬೇಕು? ಅದು ಸರಿಯೋ, ತಪ್ಪೋ? ಹೇಳುವುದು ಕಷ್ಟ.

ನಮ್ಮ ಭಾರತೀಯ ಸಾಮಾಜಿಕ ಸೆಟಪ್​ ಹೇಗಿದೆ ಎಂದರೆ, ವಿದ್ಯಾರ್ಥಿಯೊಬ್ಬ ಓದಿ, ಕೆಲಸ ಹುಡುಕಿಕೊಂಡು, ಕೈತುಂಬ ಸಂಪಾದನೆ ಮಾಡಿ, ವಯಸ್ಸಿಗೆ ಬಂದ ಮೇಲೆ ಮದುವೆಯಾಗಿ, ಮಕ್ಕಳು ಮಾಡಿಕೊಂಡು, ಆ ಮಕ್ಕಳನ್ನು ಚೆನ್ನಾಗಿ ಬೆಳೆಸಿ, ನಿವೃತ್ತಿಗೆ ಏನು ಬೇಕೋ ಪ್ಲಾನ್​ಗಳನ್ನು ಮಾಡಿಕೊಂಡು, ನಿವೃತ್ತಿ ಜೀವನವನ್ನು ಆರಾಮಾಗಿ ಸಾಗಿಸಿ, ಎಲ್ಲಿಗೆ ಬಂದೆವೋ ಅಲ್ಲಿಗೆ ಹೋಗಬೇಕು ಎನ್ನುವುದು ಒಂದು ಯಶಸ್ವಿ ಜೀವನ ಎಂದು ನಂಬಲಾಗುತ್ತದೆ. ನಮ್ಮಲ್ಲಿ ರಿಸ್ಕ್​ ತೆಗೆದುಕೊಳ್ಳುವ ವಾತಾವರಣ ಬಹಳ ಕಡಿಮೆ. ರಿಸ್ಕ್​ ತೆಗೆದುಕೊಳ್ಳುವುದಕ್ಕೆ ಇಲ್ಲಿ ಪ್ರೋತ್ಸಾಹ ಸಿಗುವುದಿಲ್ಲ. ಹಾಗಾಗಿ, ಇಂಥ ಸೆಟಪ್​ನಲ್ಲಿ ಮಕ್ಕಳು ಆ್​ಬೀಟ್​ ಆದಂತಹ ಕೆಲಸ ಮಾಡುತ್ತೀನಿ ಎಂದರೆ ಬಹಳಷ್ಟು ಮನೆಗಳಲ್ಲಿ ಪ್ರೋತ್ಸಾಹ ಸಿಗುವುದಿಲ್ಲ. ಅದರಲ್ಲೂ ನನ್ನ ಮತ್ತು ನನ್ನ ಹಿಂದಿನ ತಲೆಮಾರಿನವರವರೆಗೂ ಕೆಲಸ ಬಿಟ್ಟು, ಸಂಗೀತ, ಕಲೆ ಮುಂತಾದ ವೃತ್ತಿಯಲ್ಲಿ ತೊಡಗಿಸಿ ಕೊಳ್ಳುವುದು ಬಹಳ ರಿಸ್ಕ್​ ಎಂದೇ ಪರಿಗಣಿಸಲಾಗುತ್ತಿತ್ತು.

ಅದಕ್ಕೆ ಕಾರಣವೂ ಇದೆ. ಬೇರೆ ಕೆಲಸಗಳಂತೆ ಸಂಗೀತ ಅಥವಾ ಕಲೆಯ ಕ್ಷೇತ್ರದಲ್ಲಿ ಬಹಳ ಸುಲಭವಾಗಿ ಕೆಲಸ ಸಿಗುವುದಿಲ್ಲ. ಸಿಕ್ಕರೂ ಅಲ್ಲಿ ಗ್ಯಾರಂಟಿ ಇರುವುದಿಲ್ಲ. ಅಲ್ಲಿ ಪಿಎ್​, ವೈದ್ಯಕಿಯ ನೆರವು ಸಿಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೇ ಕೆಲಸ ಎಂಬ ್ಲೋ ಇರುವುದಿಲ್ಲ ಮತ್ತು ಪ್ರತಿ ತಿಂಗಳು ಇಂತಿಷ್ಟು ಸಂಬಳ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಈ ಕ್ಷೇತ್ರದಲ್ಲಿ ಸೆಕ್ಯುರಿಟಿ ಇಲ್ಲ ಎನ್ನುವುದು ಬಹಳಷ್ಟು ತಂದೆ&ತಾಯಿಯರ ಯೋಚನೆಯಾಗಿತ್ತು. ಆದರೆ, ಮಕ್ಕಳ ವಿಷಯ ಬಂದಾಗ, ಅವರಿಗೇನೋ ಒಂದು ಮಾಡಬೇಕು ಎಂಬ ಆಸೆ. ನಾನು ಇಷ್ಟು ವರ್ಷಗಳಲ್ಲಿ ಎರಡು ತರಹದ ಜನರನ್ನು ನೋಡಿದ್ದೇನೆ. ಕೆಲವರಲ್ಲಿ ನಿಜಕ್ಕೂ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಅಕ್ಕಪಕ್ಕದವರು, ಸಂಬಂಧಿಕರು, ಸ್ನೇಹಿತರು, ಅಧ್ಯಾಪಕರು ಎಲ್ಲರೂ ಪೋಷಿಸುತ್ತಾರೆ. ಆ ಪೋಷಣೆ ಸಿಕ್ಕ ತಕ್ಷಣ, ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ಬರುತ್ತದೆ. "ನಾನು ಇದನ್ನು ಮಾಡಬಹುದು, ಇದನ್ನು ವೃತ್ತಿಯಾಗಿ ತೆಗೆದುಕೊಳ್ಳಬಹುದು' ಎಂದು ಅನಿಸುತ್ತದೆ.

ನನ್ನ ಹತ್ತಿರ ಮಾತಾಡುವ ಬಹಳಷ್ಟು ಜನ, "ನಿಮ್ಮನ್ನು ನೋಡಿ ನಾನು ಗಿಟಾರ್​ ನುಡಿಸುವುದನ್ನು ಕಲಿತೆ' ಎಂದು ಹೇಳುತ್ತಾರೆ. ನಿಮ್ಮ ತರಹ ಆಗಬೇಕು ಎನ್ನುತ್ತಾರೆ. ಆಗ ನನಗೆ ಸಂತೋಷವಾದರೂ, ಹೆದರಿಕೆ ಮತ್ತು ಮುಜುಗರವೂ ಆಗುತ್ತದೆ. ಸಂತೋಷ ಯಾಕೆ ಎಂದರೆ, ಯಾರೋ ನಾನು ಮಾಡಿದ್ದು ಸರಿ ಅಂತ ಒಪ್ಪಿಕೊಂಡಿದ್ದಾರೆ ಎಂದು. ಹೆದರಿಕೆ ಯಾಕೆ ಎಂದರೆ, ಇಲ್ಲಿಯವರೆಗೂ ಬರುವುದಕ್ಕೆ ನಾನೆಷ್ಟು ಕಷ್ಟಪಟ್ಟಿದ್ದೀನಿ ಎಂದು ನನಗೆ ಮಾತ್ರ ಗೊತ್ತಿದೆ. ಅವರಿಗೆ ಗೊತ್ತಿರುವುದಿಲ್ಲ. ಆ ಕ್ಷಮತೆ, ಶ್ರಮ, ಏಕಾಗ್ರತೆ, ಏನೇ ಬಂದರೂ ಜಗ್ಗಲ್ಲ ಎಂಬ ಹಠ, ಕಷ್ಟಗಳು ಇದ್ಯಾವುದೂ ಯಾರಿಗೂ ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ. ಇಲ್ಲಿ ಹೆಜ್ಜೆಹೆಜ್ಜೆಗೂ ಸಮಸ್ಯೆಗಳಿರುತ್ತವೆ. ಬರೀ ಹಣದ ಸಮಸ್ಯೆಯಷ್ಟೇ ಅಲ್ಲ, ಇಲ್ಲಿ ಮಾನಸಿಕವಾಗಿ ಬೆಂಬಲ ಸಿಗುವುದೂ ಕಷ್ಟವಾಗುತ್ತದೆ. ಇದೆಲ್ಲದರ ಜತೆಗೆ, ಸಮಾಜದಲ್ಲಿ ಹುಚ್ಚುತನ ಎಂಬ ಪಟ್ಟ.

ಇದೆಲ್ಲವನ್ನೂ ಎದುರಿಸಿಕೊಂಡು, ಅದರ ಮೇಲೆ "ನಾನು ಮಾಡಿದ್ದೇ ಸರಿ' ಎನ್ನುವ ಹಠದಿಂದ ಮುಂದುವರಿಯುವ ಛಲ ಕಡಿಮೆ ಜನರಲ್ಲಿ ಇರುತ್ತದೆ. ಅದರಲ್ಲೂ ಇವತ್ತಿನ ಯುವಕರಿಕೆ ಬೇಗ ಯಶಸ್ಸು ಸಿಗಬೇಕು ಎಂಬ ಹಂಬಲ. ಅದು ಅಷ್ಟು ಸುಲಭ ಅಲ್ಲ ಎಂದು ಅವರಿಗೆ ಅರ್ಥ ಆಗುವುದಿಲ್ಲ. ಒಂದು ಯಶಸ್ಸು ಸಿಗಬೇಕು ಎಂದರೆ ವರ್ಷಗಟ್ಟಲೆ ಬೇಕು. ಒಬ್ಬ ಶಿಲ್ಪಿ ನಿಧಾನಕ್ಕೆ ಹೇಗೆ ಒಂದು ಮೂರ್ತಿಯನ್ನು ಕೆತ್ತುತ್ತಾನೋ, ನಮ್ಮನ್ನು ಮತ್ತು ನಮ್ಮ ವೃತ್ತಿಯನ್ನು ಸಹ ನಾವು ಅಷ್ಟೇ ನಿಧಾನಕ್ಕೆ ರೂಪಿಸಿಕೊಳ್ಳಬೇಕು. ಇಲ್ಲಿ ಕಲೆಯಷ್ಟೇ ಅಲ್ಲ, ಯಾವುದೇ ವೃತ್ತಿಯಾದರೂ ಹಾಗೆಯೇ. ಒಬ್ಬ ಸ್ಟ್​ಾವೇರ್​ ಇಂಜಿನಿಯರ್​ ಸಹ ತಾನೊಬ್ಬ ಗ್ರೇಟ್​ ಎಂದು ಅನಿಸಿಕೊಳ್ಳುವುದಕ್ಕೆ ಸಾಕಷ್ಟು ವರ್ಷ ಬೇಕಾಗುತ್ತದೆ. ಆ ವಿಷಯದ ಬಗ್ಗೆ ಪರಿಣಿತಿ ಹೊಂದುವುದಕ್ಕೆ 20 ವರ್ಷಗಳಾದರೂ ಬೇಕಾಗುತ್ತದೆ. ಅದೇ ರೀತಿ ಕಲೆ ಸಹ. ಒಬ್ಬ ಕಲಾವಿದ ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ, ಹೆಸರು ಮಾಡುವುದಕ್ಕೆ 20 ವರ್ಷಗಳಾದರೂ ಬೇಕು.

ನನ್ನ ಹತ್ತಿರ ಬರುವ ಬಹಳಷ್ಟು ಜನ, ಒಂದು ಹಾಡು ಮಾಡಿಕೊಂಡು ಬಂದು ಇದನ್ನು ಹೇಗಾದರೂ ಮಾಡಿ ವೈರಲ್​ ಮಾಡಬೇಕು ಎಂದು ಹೇಳುತ್ತಾರೆ. ಆ ಹಾಡನ್ನು ಪ್ರಮೋಟ್​ ಮಾಡಿಕೊಡಿ ಎಂದು ಕೇಳುತ್ತಾರೆ. ನಾನಾಗ ಕೇಳುವುದು ಒಂದೇ ಮಾತು. "ಇದುವರೆಗೂ ಎಷ್ಟು ಹಾಡು ಬರೆದಿದ್ದೀಯ' ಎಂದು? "ಇದೇ ಮೊದಲ ಹಾಡು' ಎಂದರೆ, "65ನೇ ಹಾಡು ಬರೆದುಕೊಂಡು ಬಾ, ಆಮೇಲೆ ಸಪೋರ್ಟ್​ ಮಾಡುತ್ತೀನಿ' ಎಂದು ಹೇಳಿ ಕಳುಹಿಸುತ್ತೇನೆ. ಏಕೆಂದರೆ, 60ನೇ ಹಾಡು ಬರೆಯುವ ಹೊತ್ತಿಗೆ ಅವನಿಗೆ ಯಾರ ಸಪೋರ್ಟ್​ ಕೂಡ ಬೇಕಿರುವುದಿಲ್ಲ. ಅಷ್ಟು ಹೊತ್ತಿಗೆ, ಏನು ಮಾಡಿದರೆ ಚೆನ್ನ ಎಂಬ ಅರಿವು ಬಂದಿರುತ್ತದೆ. ಅವನ ಕೆಲಸದಲ್ಲಿ ಒಂದು ಮೆಚ್ಯುರಿಟಿ ಸಿಕ್ಕಿರುತ್ತದೆ. ಆದರೆ, 60 ಹಾಡುಗಳು ಮಾಡುವವರೆಗೂ, ಯಶಸ್ಸು ಕಾಣದೆ, ಬರೀ ಶ್ರಮ ಹಾಕಿ ಕಾಯುವ ತಾಳ್ಮೆ ಇದೆಯಾ ಎಂಬುದು ಮುಖ್ಯ. 60 ಹಾಡು ಬರೆಯುವುದಕ್ಕೆ ನಾಲ್ಕೆ$ದು ವರ್ಷಗಳಾಗುತ್ತವೆ. ಆ ನಾಲ್ಕೆ$ದು ವರ್ಷ ಅಪ್ಪ&ಅಮ್ಮ, ಸಂಬಂಧಿಕರು ಎಲ್ಲರಿಗೂ ಉತ್ತರ ಕೊಡಬೇಕು. ಆ ನಾಲ್ಕೆ$ದು ವರ್ಷಗಳ ಕಾಲ ಯಾರಿಗೂ ಬೇಸರವಾಗದಂತೆ, ಮುಜುಗರವಾಗದಂತೆ, ತಲೆ ತಗ್ಗಿಸದಂತೆ ಬದುಕುವುದಕ್ಕೆ ಸಾಧ್ಯವಿದೆಯಾ? ಎಂಬ ಹಲವು ಪ್ರಶ್ನೆಗಳಿವೆ. ಈ ಸವಾಲುಗಳ ಬಗ್ಗೆ ಯೋಚಿಸುವ ಗಾಢತೆಯನ್ನು ನಾನು ಯುವಕರಲ್ಲಿ ನೋಡಿಲ್ಲ. ಬರೀ ಯಶಸ್ವಿಯಾಗುವುದಷ್ಟೇ ಅಲ್ಲ, ಅದರ ಹಿಂದೆ ಹಲವಾರು ವಿಷಯಗಳಿರುತ್ತವೆ.

ಕಾಲೇಜಿನ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಬರುವುದಕ್ಕೆ ನನಗೆ ಆಗಾಗ ಕರೆ ಬರುತ್ತಿರುತ್ತದೆ. ನಾನು ಹೋಗಿ ಸ್ಟೇಜ್​ ಮೇಲೆ ಕಾಲೇಜ್​ ವ್ಯವಸ್ಥಾಪಕ ಮಂಡಳಿಯನ್ನು ಬೈದಿದ್ದೂ ಇದೆ. ಏಕೆಂದರೆ, ನನ್ನಂಥವರನ್ನು ಕರೆಸಿಬಿಟ್ಟು, ಒಂದು ಉದಾಹರಣೆಯಾಗಿ ತೋರಿಸಲಾಗುತ್ತಿದೆ. ಸಂಗೀತ ಕ್ಷೇತ್ರಕ್ಕೆ ಕಾಲಿಡಬೇಕು ಎಂದು ಆಸೆಪಟ್ಟಿದ್ದ ಸಾವಿರ ಜನರ ಪೈಕಿ ನಾನೂ ಒಬ್ಬ. ಮಿಕ್ಕ 999 ಜನ ಕಾರಣಾಂತರಗಳಿಂದ ಅಷ್ಟಾಗಿ ಮಿಂಚದಿರಬಹುದು. ನನ್ನನ್ನು ತೋರಿಸಿದ ತಕ್ಷಣ "ಇವನ ತರಹ ನಾನು ಆಗುತ್ತೀನಿ' ಎಂಬ ಆಸೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ. ಒಂದು ಯಶಸ್ಸಿನ ಹಿಂದೆ ಎಷ್ಟು ಕಷ್ಟವಿದೆ, ನೋವಿದೆ, ಏನೆಲ್ಲ ಕಳೆದುಕೊಳ್ಳಬೇಕಾಗಬಹುದು, ಎಷ್ಟು ತಾಳ್ಮೆ ಬೇಕು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಯಶಸ್ಸಿನ ಹಿಂದೆ, ಶ್ರಮವಷ್ಟೇ ಅಲ್ಲ, ಒಂದು ಎಕ್ಸ್​ ್ಯಾಕ್ಟರ್​ ಇರುತ್ತದೆ. ಇವೆಲ್ಲವನ್ನೂ ಮೀರಿ ಒಂದು ವಿಷಯ ಇರುತ್ತದೆ. "ಲಕ್​ ೇವರ್ಸ್​ ದಿ ಬ್ರೇವ್​' ಅಂತಾರಲ್ಲ. ಹಾಗೆ, ಧೈರ್ಯದಿಂದ ಮುನ್ನುಗ್ಗುವವರಿಗೆ ಅಂಥವರಿಗೆ ಅವಕಾಶ ಸಿಗುತ್ತದೆ. ಕೆಲವರು ಸಾಕಷ್ಟು ಕಷ್ಟಪಟ್ಟರೂ ಅವರಿಗೆ ನಿರೀತ ಯಶಸ್ಸು ಸಿಗದಿರಬಹುದು. ಎಷ್ಟೇ ಶ್ರಮ ಹಾಕಿದರೂ, ಸೂಕ್ತ ಸ್ಥಾನಮಾನ ಸಿಗದಿರಬಹುದು. ಅದಕ್ಕೂ ತಯಾರಾಗಿರಬೇಕು.

"ನಿಮ್ಮ ಪ್ರಕಾರ, ಯಶಸ್ಸು ಎಂದರೆ ಏನು?' ಎಂದು ಬಹಳಷ್ಟು ಜನ ಕೇಳುತ್ತಾರೆ. ಮೊದಲ ಬಾರಿಗೆ ಗಿಟಾರ್​ ಹಿಡಿದುಕೊಂಡು ಹಾಡಿದಾಗ ಸಿಕ್ಕ ಆನಂದ ಇದೆಯಲ್ಲ, ಅಂದೇ ನಾನು ಯಶಸ್ವಿಯಾಗಿಬಿಟ್ಟೆ. ಜೀವನದಲ್ಲಿ ನಾವು ಇಷ್ಟಪಟ್ಟಿದ್ದನ್ನು ಮಾಡುವುದಕ್ಕೆ ಸಿಕ್ಕರೆ ದೊಡ್ಡ ಪುಣ್ಯ. ಹಾಗಾಗಿ, ನೀವು ಏನೇ ಆಗಿ, ಪರಿಶ್ರಮ, ಬದ್ಧತೆ, ತಯಾರಿಯೊಂದಿಗೆ ಮುನ್ನುಗ್ಗಿ! ಆಲ್​ ದಿ ಬೆಸ್ಟ್​!

(ಲೇಖಕರು ಗಾಯಕ, ಸಂಗೀತ ನಿರ್ದೇಶಕ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net