ಮತ್ತೆ ಬಂದ ರುಧಿರಾಭಿಷೇಕ

Rd26 Jan 20
Published on

ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ರಾಷ್ಟ್ರೀಯ ಮನೋಭಾವದ ಬರಹಗಳಿಗೆ ವಿಶಿಷ್ಟ ಸ್ಥಾನಮಾನಗಳೂ, ಪರಂಪರೆಯೂ ಇವೆ. ಈ ಪರಂಪರೆಯ ಬಹುಮುಖ್ಯ ಲೇಖಕರಲ್ಲಿ ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ ಕೂಡ ಒಬ್ಬರು. ಸ್ವಾತಂತ್ರ್ಯೕರ ಚಂದ್ರಶೇಖರ ಆಜಾದರನ್ನು ಕುರಿತ ‘ಅಜೇಯ’, ದೇಶಪ್ರೇಮಿ ವಾಸುದೇವ ಬಲವಂತ ಫಡ್ಕೆಯವರ ಬಗೆಗಿನ ‘ಅದಮ್ಯ’ದಂತಹ ಅವಿಸ್ಮರಣೀಯ ಕೃತಿಗಳ ಮೂಲಕ ಕನ್ನಡಿಗರ ಮನೆಮಾತಾದವರು ಅವರು.

ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿನ ಅತೀವ ಆಸಕ್ತಿಯಿಂದಾಗಿ ಪತ್ರಿಕೋದ್ಯಮ ಕ್ಷೇತ್ರವನ್ನೇ ಆರಿಸಿಕೊಂಡರು. ಕೆಲವು ಸಾಪ್ತಾಹಿಕ, ಪಾಕ್ಷಿಕಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಅವರು ಆರು ವರ್ಷಗಳ ಕಾಲ ಕಾಶಿ ಮುಂತಾದ ಕಡೆಗಳಲ್ಲಿ ಸಂಚರಿಸಿ, ಸಂಶೋಧನೆ ನಡೆಸಿ ಚಂದ್ರಶೇಖರ ಆಜಾದರನ್ನು ಕುರಿತು ಅಜೇಯ ಕೃತಿಯನ್ನು ರಚಿಸಿದರು. ದೇಶ, ದೇಶಭಕ್ತಿ, ಸ್ವಾತಂತ್ರ್ಯ ಹೋರಾಟ ಇವೆಲ್ಲವುಗಳನ್ನು ಓದುಗರ ಹೃದಯಕ್ಕೆ ಮುಟ್ಟುವಂತೆ ಚಿತ್ರಿಸಿದ ಈ ಕೃತಿ ಅವರಿಗೆ ಖ್ಯಾತಿಯನ್ನೂ ತಂದುಕೊಟ್ಟಿತು. ಇದಾದ ನಂತರ ವಾಸುದೇವ ಬಲವಂತ ಫಡ್ಕೆ ಕುರಿತ ‘ಅದಮ್ಯ’ ಕೃತಿರಚನೆ ಮಾಡಿದರು. ಹದಿನೆಂಟು ಸ್ವಾತಂತ್ರ ್ಯೊಧರ ಕುರಿತಾದ ವ್ಯಕ್ತಿಚಿತ್ರಗಳ ‘ಸಿಡಿಮದ್ದು ನೆತ್ತರು ನೇಣುಗಂಬ’ ಇವರ ಇನ್ನೊಂದು ವಿಶಿಷ್ಟ ಕೃತಿ. ಇವಲ್ಲದೆ ಮಕ್ಕಳಿಗಾಗಿ ಅಲ್ಲೂರಿ ಸೀತಾರಾಮರಾಜು, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಶ್ರೀ ಅರವಿಂದರು, ಮೇಡಂ ಕಾಮಾ ಮುಂತಾದ ಅನೇಕ ಕೃತಿಗಳ ರಚನೆ ಮಾಡಿದ್ದಾರೆ.

ಕಿರುತೆರೆ ಹಾಗೂ ಹಿರಿತೆರೆಗಳಲ್ಲೂ ದುಡಿದ ಅನುಭವವುಳ್ಳ ಅವರು ಭಕ್ತಿವೇದಾಂತ ಶ್ರೀಲ ಪ್ರಭುಪಾದರ ಬಗ್ಗೆ ‘ಮಹಾಸಾಧಕ’ ಎಂಬ ಕೃತಿಯನ್ನು ರಚಿಸಿದ್ದಾರೆ. 1971ರಲ್ಲಿ ಅವರು ಬರೆದ ‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’ ಕೃತಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಲಭಿಸಿದೆ. 1974ರಲ್ಲಿ ಅಜೇಯ ಮತ್ತು 1984ರಲ್ಲಿ ಅದಮ್ಯ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ರುಧಿರಾಭಿಷೇಕ

1885-1915ರವರೆಗೆ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಅಜ್ಞಾತ ವೀರರ ಜೀವನ, ಬಲಿದಾನಗಳನ್ನು ವಿವರವಾದ ಚಿತ್ರಣವನ್ನು ಕಟ್ಟಿಕೊಡುವ ಕಥನವೇ ‘ರುಧಿರಾಭಿಷೇಕ’. ಇದರಲ್ಲಿ ಬಹುಪಾಲು ಅಪರಿಚಿತರಾಗಿಯೇ ಉಳಿದಿರುವ ಬ್ರಹ್ಮಬಾಂಧವ ಉಪಾಧ್ಯಾಯ, ಮಾಸ್ಟರ್ ಅಮೀರ್​ಚಂದ್, ಕರ್ತಾರಸಿಂಗ್ ಸರಾಬಾ, ಅವಧ ಬಿಹಾರಿ, ಸ್ವಾಮಿ ಪ್ರಜ್ಞಾನಂದ ಸರಸ್ವತಿ ಮುಂತಾದ ಹತ್ತಾರು ವ್ಯಕ್ತಿಗಳ ವಿಸõತ ಪರಿಚಯ ನೀಡಲಾಗಿದೆ. ಅದರಲ್ಲಿಯೂ ವಿಶೇಷವಾಗಿ ‘ಬಾಘಾ ಜತೀನ್’ ಎಂದೇ ಪ್ರಖ್ಯಾತರಾದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ಮುಖರ್ಜಿಯವರ ಜೀವನ ಹಾಗೂ ಹೋರಾಟದ ಪೂರ್ಣ ಇತಿಹಾಸ ಇದರಲ್ಲಿದೆ. ವಿವೇಕಾನಂದರ ಆಶೀರ್ವಾದ ಹಾಗೂ ಅರವಿಂದರ ಮಾರ್ಗದರ್ಶನದಲ್ಲಿ ಬೆಳೆದ ಜತೀಂದ್ರ; ಬಾಲ್ಯದಲ್ಲಿ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ಶಿವಾಜಿಯ ಚರಿತ್ರೆಗಳನ್ನೆಲ್ಲ ಕೇಳಿ ದೇಶಭಕ್ತಿಯನ್ನು ಬೆಳೆಸಿಕೊಂಡಿದ್ದರು. ಶಿವಾಜಿಗೆ ದೇವಿ ಭವಾನಿಯೇ ಬಂದು ಖಡ್ಗವನ್ನು ಕೊಟ್ಟ ಕಥೆ ಕೇಳಿ, ತನಗೂ ಹಾಗೊಂದು ಖಡ್ಗ ಸಿಗಬಾರದೇ ಎಂದು ಹಂಬಲಿಸುತ್ತಿದ್ದ ಜತೀನ್​ಗೆ ಒಮ್ಮೆ ಊರಿನ ಕಾಳಿಯ ಗುಡಿಯಲ್ಲಿ ಹರಕೆಗೆಂದು ಇಟ್ಟಿದ್ದ ಕೆಲವು ಕತ್ತಿಗಳು ಕಂಡವು. ತಾಯಿಯೇ ಅದನ್ನು ಅನುಗ್ರಹಿಸಿದಳೆಂದು ಒಂದನ್ನು ಇಟ್ಟುಕೊಂಡಿದ್ದರು. ಜತೀನ್ ಇದ್ದ ಬಂಗಾಳದ ಪ್ರಾಂತದ ಕೋಯಾ ಎಂಬ ಹಳ್ಳಿಯ ಸುತ್ತ ಒಂದು ಹುಲಿ ಆತಂಕ ಸೃಷ್ಟಿಸಿತ್ತು. ಒಮ್ಮೆ ಕಾಡಿನ ಮಾರ್ಗವಾಗಿ ಪಕ್ಕದ ಹಳ್ಳಿಗೆ ಹೋಗುವ ಸಂದರ್ಭ ರಾತ್ರಿ ಒದಗಿತು. ಜತೀನ್ ಆ ಕತ್ತಿಯನ್ನು ತೆಗೆದುಕೊಂಡು ಹೊರಟರು. ಕಾಡಿನ ಮಧ್ಯೆ ಹೋಗುವಾಗ ನರಭಕ್ಷಕ ಹುಲಿ ಮೈಮೇಲೆರಗಿತು. ಹುಲಿಯ ಪಂಜಿನೇಟು ತಿಂದರೂ ಅದನ್ನು ಕೊಂದಿದ್ದರಿಂದ ಜತೀನ್ ಹೆಸರಿನ ಜತೆಗೇ ಬಾಘಾ ಬಿರುದು ಸೇರಿಕೊಂಡಿತು. ನಂತರ ಕಲ್ಕತ್ತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ವಾಮೀ ವಿವೇಕಾನಂದರ ದರ್ಶನವಾಯಿತು. ಅಪ್ರತಿಮ ದೇಶಭಕ್ತಿಯಿಂದಾಗಿ ಅರವಿಂದರ ಗಮನ ಸೆಳೆದ ‘ಅನುಶೀಲನ ಸಮಿತಿ’ಯ ನಾಯಕತ್ವ ವಹಿಸಿಕೊಂಡರು. ಈ ಸಮಿತಿಯ ಕ್ರಾಂತಿಕಾರಿ ಚಟುವಟಿಕೆಗಳಿಂದ ಬ್ರಿಟಿಷರು ಜತೀನ್ ಮೇಲೆ ಕಣ್ಣಿಟ್ಟರು. ಮುಂದೆ ಚಾಸಖಂದದ ಗುಡ್ಡದ ಆಯಕಟ್ಟಿನ ಪ್ರದೇಶಗಳಲ್ಲಿ ಅಡಗಿ ಕುಳಿತಿದ್ದ ಜತೀನ್ ಸೆಪ್ಟೆಂಬರ್ 9ರ ಸಂಜೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಗುಂಡೇಟಿನಿಂದ ಜರ್ಜರಿತರಾದರು. ರಾತ್ರಿಯೇ ನಡೆದ ಶಸ್ತ್ರಚಿಕಿತ್ಸೆಯಿಂದ ಜತೀನ್ ಬದುಕುಳಿದರೂ ಮರುದಿನ ಬೆಳಗ್ಗೆ ಎಚ್ಚರಗೊಂಡಾಗ ಬ್ರಿಟಿಷರ ಗುಲಾಮನಾಗಿ ಬದುಕಬಾರದೆಂಬ ಪ್ರಜ್ಞೆ ಜಾಗೃತವಾಯಿತು. ಕೂಡಲೇ ಮೈಮೇಲಿದ್ದ ಬ್ಯಾಂಡೇಜ್​ಗಳನ್ನೆಲ್ಲ ಕಿತ್ತುಕೊಂಡಿದ್ದರಿಂದ ಧಾರಾಕಾರವಾಗಿ ರಕ್ತ ಸುರಿಯತೊಡಗಿತು. ನೋಡುತ್ತಿದ್ದಂತೆಯೇ ಅವರ ಪ್ರಾಣಪಕ್ಷಿ ಹಾರಿಹೋಯಿತ್ತು. ಭಾರತಮಾತೆಗೆ ಅಕ್ಷರಶಃ ‘ರುಧಿರಾಭಿಷೇಕ’ ಮಾಡಿಯೇ ಜತೀನ್ ಹುತಾತ್ಮರಾದರು.

ಯುಗದ್ರಷ್ಟ ಭಗತ್ ಸಿಂಗ್ (6ನೇ ಆವೃತ್ತಿ)

ಕ್ರಾಂತಿಕಾರಿ ಸ್ವಾತಂತ್ರ ್ಯ ಹೋರಾಟಗಾರ ಭಗತ್ ಸಿಂಗ್ ಅವರ ತಮ್ಮನ ಮಗಳಾದ ಡಾ. ವೀರೇಂದ್ರ ಸಿಂಧು ಅವರು ತಮ್ಮ ಕುಟುಂಬದ ಹಿರಿಯರಿಂದ ಲಭ್ಯವಾದ ಮಾಹಿತಿಗಳನ್ನು ಸಂಗ್ರಹಿಸಿ ರಚಿಸಿರುವ ಕೃತಿ ‘ಯುಗದ್ರಷ್ಟ ಭಗತ್ ಸಿಂಗ್’. ಇದನ್ನು ಬಾಬು ಕೃಷ್ಣಮೂರ್ತಿಯವರು ಅರ್ಥಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವು ಭಗತ್ ಸಿಂಗ್ ಕುಟುಂಬ ಮತ್ತು ಆತನ ಸಹಚರರಾದ ಆಜಾದ್ ಚಂದ್ರಶೇಖರ, ರಾಜಗುರು, ಸುಖದೇವ್, ಭಟುಕೇಶ್ವರ್ ದತ್ತ ಮುಂತಾದವರ ಜೀವನಗಾಥೆಗಳನ್ನುತೆರೆದಿಡುತ್ತದೆ. ಸ್ವಾತಂತ್ರ ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ಈ ಪುಸ್ತಕ ಸಮಗ್ರವಾಗಿ ಕಟ್ಟಿಕೊಡುತ್ತದೆ.

1857 - ಭಾರತ ಸ್ವಾತಂತ್ರ್ಯ ಸಂಗ್ರಾಮ (12ನೇ ಆವೃತ್ತಿ)

ಬ್ರಿಟಿಷರು 1857ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮವನ್ನು ‘ಸಿಪಾಯಿ ದಂಗೆ’ ಎಂದು ಅಪಪ್ರಚಾರ ಮಾಡುವ ಮೂಲಕ ಇದರ ಪ್ರಾಮುಖ್ಯತೆಯನ್ನು ಮುಚ್ಚಿಹಾಕಿದ್ದರು. ಹೀಗಾಗಿ ಈ ಹೋರಾಟದ ಹಿಂದಿದ್ದ ಸತ್ಯವನ್ನು ಜನರ ಮುಂದೆ ಬಿಚ್ಚಿಡುವ ಪ್ರಯತ್ನವಾಗಿ ವೀರ ಸಾವರ್ಕರ ಅವರು ರಚಿಸಿದ ಬೃಹತ್ ಗ್ರಂಥ ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857’. ಬ್ರಿಟಿಷರ ಉಪಟಳದಿಂದಾಗಿ ಹಾಲೆಂಡ್​ನಲ್ಲಿ ಮೇಡಮ್ ಕಾಮಾ ಅವರ ನೆರವು ಪಡೆದು ಯಾವುದೇ ಶೀರ್ಷಿಕೆ ಇಲ್ಲದೆ ಈ ಗ್ರಂಥ ಮುದ್ರಿಸಲ್ಪಟ್ಟಿತು. ಇದನ್ನು ಭಾರತಕ್ಕೆ ಅತ್ಯಂತ ಗುಪ್ತವಾಗಿ ರವಾನಿಸಬೇಕಾಯಿತು. ಭಾರತದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಈ ಗ್ರಂಥ ಸಾಕಷ್ಟು ಪ್ರಭಾವ ಬೀರಿತು. ಈ ಗ್ರಂಥವನ್ನೋದಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದವರಲ್ಲಿ ಸುಭಾಸ್​ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಪ್ರಮುಖರು. ಈ ಬೃಹದಂಥವನ್ನು ‘1857 - ಭಾರತ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಹೆಸರಿನಲ್ಲಿ ಬಾಬು ಕೃಷ್ಣಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಹೀರೋಗಳು-4 (ವಿಜಯವಾಣಿ ಅಂಕಣಬರಹಗಳ ಸಂಕಲನ)

‘ವಿಜಯವಾಣಿ’ಯಲ್ಲಿ ಪ್ರಕಟವಾದ ಬಾಬು ಕೃಷ್ಣಮೂರ್ತಿಯವರ ‘ಹೋರಾಟದ ಹಾದಿ’ ಅಂಕಣ ಬರಹಗಳ ಸಂಗ್ರಹ ‘ಸ್ವಾತಂತ್ರ ್ಯ ಹೋರಾಟದ ಹೀರೋಗಳು-4’. ಇದರಲ್ಲಿ ‘ಬಾಘಾ ಜತೀನನ ಬಲಗೈ ಬಂಟ ಅಮರೇಂದ್ರ’, ’ಯಾವ ಚಿತ್ರಹಿಂಸೆಗೂ ಮಣಿಯದ ಕ್ರಾಂತಿಕಾರಿಣಿ ನಾನೀಬಾಲಾ ದೇವಿ’, ’ಬಾಘಾ ಜತೀನನ ನಿಷ್ಠಾವಂತ ಉತ್ತರಾಧಿಕಾರಿ ಅತುಲ್​ಕೃಷ್ಣ ’, ’ಜದುಗೋಪಾಲ ಎಂಬ ಚಿಂತನಶೀಲ ಕ್ರಾಂತಿಕಾರಿ’, ’ಕ್ರಾಂತಿಕಾರ್ಯಕ್ಕೆ ಭದ್ರಬುನಾದಿ ಹಾಕಿದ ಸಂನ್ಯಾಸಿ ಸ್ವಾಮಿ ನಿರಾಲಂಬ ಜತೀಂದ್ರನಾಥ ಬ್ಯಾನರ್ಜಿ’, ’ಛಲಬಿಡದ ಕದನ ಕಲಿ ಜೋಗೇಶ್​ಚಂದ್ರ ಚಟರ್ಜಿ’, ’ಕ್ರಾಂತಿ ಆಂದೋಲನದ ಪ್ರಬುದ್ಧ ಚೇತನ ಸನ್ಯಾಲ್’, ’ಸಾಕುಮಗನಿಂದಲೇ ದ್ರೋಹಕ್ಕೊಳಗಾದ ದೇಶಭಕ್ತ ಅಮೀರ್​ಚಂದ್’, ’ವೈಸ್​ರಾಯ್ ಮೇಲೆ ಬಾಂಬ್ ಎಸೆದ ಧೀರ ಬಿಶ್ವಾಸ್’, ’ಪತಿಯ ಅನುರೂಪ ಸತಿ ರಾಮರಖಿ’, ’ಕ್ರಾಂತಿಅಲೆ ಎಬ್ಬಿಸಿದ ಪಂಡಿತ್ ಗೇಂದಾಲಾಲ್’, ’ಹುತಾತ್ಮನಾದ ನಿರ್ಭೀತ ಪತ್ರಕರ್ತ ಗಣೇಶ ಶಂಕರ ವಿದ್ಯಾರ್ಥಿ’, ’ಇಬ್ಬರು ಅನಾಮಧೇಯ ಕ್ರಾಂತಿಕಾರಿಗಳು ಮುಕುಂದೀಲಾಲ್ ಗುಪ್ತ, ಗೋವಿಂದ್ ಚರಣ್​ಕರ್’, ’ಕ್ರಾಂತಿಯ ಕಟ್ಟಾಳು ಪ್ರೇಮ್ ಕೃಷ್ಣ ಖನ್ನಾ’ ಮುಂತಾದ ಲೇಖನಗಳಿವೆ.

ಇಂದು ಲೋಕಾರ್ಪಣೆ

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ ಈ ನಾಲ್ಕೂ ಕೃತಿಗಳು ಜ. 26ರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಾಗ್ಮಿ ಡಾ. ಪಾವಗಡ ಪ್ರಕಾಶ್ ರಾವ್, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಲೇಖಕ ಡಾ. ಡಿ.ವಿ. ಗುರುಪ್ರಸಾದ್ ಪಾಲ್ಗೊಳ್ಳಲಿದ್ದು; ಸುಪ್ರೀಂ ಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಎಂ.ಎನ್. ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬಾಬು ಕೃಷ್ಣಮೂರ್ತಿಯವರ ಎಲ್ಲ ಕೃತಿಗಳೂ ವಿಶೇಷ ರಿಯಾಯತಿಯಲ್ಲಿ ದೊರೆಯಲಿವೆ.

| ಸುಬೋಧ್​​ ವೈಶಂಪಾಯನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net