

ಸನಾತನ ಮೌಲ್ಯಗಳ ಆಧಾರದಲ್ಲಿ ಜೀವನದ ಸವಾಲುಗಳಿಗೆ ಸ್ಪಂದಿಸುವ ಪ್ರಾಯೋಗಿಕ ಆಧುನಿಕ ಶಿಕ್ಷಣವನ್ನು ರೂಪಿಸುವುದು ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತೀಯರ ಹೆಗಲಿಗೆ ಬಿದ್ದಿರುವ ವಿಶೇಷ ಹೊಣೆಗಾರಿಕೆ. ಇಂತಹ ಅಪೂರ್ವ ಜವಾಬ್ದಾರಿಯನ್ನು ಭಾರತೀಯರು ಸಮರ್ಥವಾಗಿ ನಿರ್ವಹಿಸಿದಲ್ಲಿ, ಜಗತ್ತಿನಲ್ಲಿ ಶಾಂತಿ-ಸೌಖ್ಯ-ಸಾಮರಸ್ಯದ ಒಂದು ಹೊಸ ಮನ್ವಂತರಕ್ಕೆ ನಾಂದಿಯಾಗುವುದು ನಿಶ್ಚಿತ.
ಪ್ರಕೃತಿ ಮತ್ತು ದೈವೀಶಕ್ತಿಗಳು ಮನುಷ್ಯನನ್ನು ಪ್ರಪಂಚದಲ್ಲಿ ಏಕೆ ಸೃಷ್ಟಿಸಿವೆ? ಅನಿವಾರ್ಯವಾದ ಈ ಸಾವು-ನೋವುಗಳ ಜೀವನವನ್ನು ಹೇಗೆ ಸಮರ್ಥವಾಗಿ ಎದುರಿಸಬಹುದು? ಎಂಬ ಮೂಲಭೂತ ಪ್ರಶ್ನೆಗಳ ಬಗ್ಗೆ ವೈಜ್ಞಾನಿಕವೂ, ಪ್ರಾಯೋಗಿಕವೂ ಆದ ಅರಿವು ಭಾರತೀಯ ಸಂಸ್ಕೃತಿಯಲ್ಲಿದೆ ಎಂಬುದು ನಮಗೆ ಮೊದಲು ಖಚಿತವಾಗಬೇಕು. ವಿಶ್ವದ ಬಹಳಷ್ಟು ಜನ ಶ್ರೇಷ್ಠ ಚಿಂತಕರು ಇದನ್ನು ಈಗಾಗಲೇ ಶ್ರುತಪಡಿಸಿದ್ದಾರೆ.
ಆಧುನಿಕ ವಿಚಾರಗಳು ಮತ್ತು ಜ್ಞಾನದ ಹೊಸ ಅಲೆಗಳು ಭಾರತವೂ ಸೇರಿದಂತೆ, ವಿಶ್ವದೆಲ್ಲೆಡೆ ವ್ಯಾಪಿಸಿವೆ. ಭಾರತೀಯ ಜೀವನಪದ್ಧತಿ ಮತ್ತು ಉನ್ನತ ಚಿಂತನೆಗಳು ಅಭಿವೃದ್ಧಿಪರವಲ್ಲ ಎಂಬ ಪಾಶ್ಚಾತ್ಯ ಧೋರಣೆಯ ದಾಸ್ಯದಿಂದ ನಾವು ಮುಕ್ತರಾಗಬೇಕು. ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು, ಗಾಂಧೀಜಿ, ಸೋದರಿ ನಿವೇದಿತಾ ಮತ್ತು ಇನ್ನೂ ಅನೇಕ ದಾರ್ಶನಿಕರು ಈ ದೇಶದ ಸಾರವನ್ನು ಸತ್ಯದ ಆಧಾರದಲ್ಲಿ ಅರಿತರು. ನಂತರ, ಭಾರತದ ಹಿರಿಮೆ, ಗರಿಮೆಗಳನ್ನು ಜಗತ್ತಿಗೆ ವಸ್ತುನಿಷ್ಠವಾಗಿ ಸಾರಿ ಹೇಳಿದರು. ವಿಶ್ವದ ನಾಗರಿಕತೆಗಳು ಮತ್ತು ಸಂಸ್ಕೃತಿಗಳು ಬಹಳ ಬೇಗನೆ ಬೆರೆತುಹೋಗುತ್ತಿರುವ ಈ ಸಂಧಿಕಾಲದಲ್ಲಿ, ಈ ಯುಗದ ಅವಶ್ಯಕತೆಗಳಿಗೆ ಸ್ಪಂದಿಸಿ, ವೈಜ್ಞಾನಿಕ ಸತ್ಯಶೋಧನೆಗೆ ಸಹಕಾರಿಯಾಗಿ ಆಧುನಿಕ ಜೀವನದ ಸವಾಲುಗಳಿಗೆ ಪ್ರಾಯೋಗಿಕವಾಗಿ ಸ್ಪಂದಿಸಬೇಕಾದ ಸಂದರ್ಭ ಈಗ ಬಂದೊದಗಿದೆ. ಕಾಲದ ಈ ಕರೆಗೆ ಓಗೊಟ್ಟು, ಸನಾತನ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಒಂದು ಸಮಗ್ರ ಶಿಕ್ಷಣನೀತಿಯನ್ನು ‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಹಿನ್ನೆಲೆಯಲ್ಲಿ ರೂಪಿಸಬೇಕಾಗಿರುವುದು ಇಂದಿನ ಜಾಗತಿಕ ಅಗತ್ಯವಾಗಿದೆ.
ಮಾನವವಿಕಾಸ, ವಿಶ್ವಶಾಂತಿ ಮತ್ತು ಸವೋದಯ ಎಂಬ ಬುದ್ಧಿಗ್ರಾಹ್ಯವಾಗುವ ತತ್ವಗಳು ಪ್ರಾಯೋಗಿಕವಾಗಿ ಬೆಳಗಲಿ. ಎಲ್ಲ ಧರ್ಮಗಳಲ್ಲಿ ಇರುವ ಮೂಲಾಂಶಗಳನ್ನರಿತು, ಪ್ರಪಂಚದ ಉದ್ದಗಲಕ್ಕೂ ಹಬ್ಬುತ್ತಿರುವ ಯುದ್ಧಗಳು, ಸಂಕುಚಿತ ಮನೋಭಾವನೆಗಳು, ಧರ್ವಂಧತೆ- ಇವುಗಳನ್ನು ನಿವಾರಿಸಬೇಕಾಗಿದೆ. ಇಂದಿನ ಅಗತ್ಯವಾದ ಸತ್ಯಶೋಧನೆ ಮತ್ತು ಆದರ್ಶ ಸಮಾಜ ನಿರ್ವಣದ ಹಿನ್ನೆಲೆಯಲ್ಲಿ ಶಾಂತಿ-ಸೌಖ್ಯ-ಸಾಮರಸ್ಯದ ನವಯುಗಕ್ಕೆ ನಾಂದಿಯಾಗುವ, ಸಮಗ್ರ ಶಿಕ್ಷಣ ಪದ್ಧತಿಯನ್ನು ರೂಪಿಸಬೇಕು. ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿಯೇ ಪರಿಣಾಮಕಾರಿಯೂ, ಸರ್ವಜನಹಿತಕಾರಿಯೂ ಆದ ಹೊಸ ನಿಲುವುಗಳನ್ನು ತಳೆಯುವಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸಬೇಕಾದ ಕಾಲ ಸನ್ನಿಹಿತವಾಗಿದೆ.
ಈಗ ನಮಗೆ ಬೇಕಾಗಿರುವುದೇನು?:
* ಆಧುನಿಕ ಧೋರಣೆಯನ್ನು ಹೊಂದಿರುವ ಸಕಾರಾತ್ಮಕವೂ, ವೈಜ್ಞಾನಿಕವೂ ಆದ ಭಾರತೀಯ ಸಂಸ್ಕೃತಿಯ ಜ್ಞಾನರಾಶಿಯನ್ನು ಮೇಳೈಸಿಕೊಂಡ, ರಾಷ್ಟ್ರೀಯ ಐಕ್ಯತೆ ಮತ್ತು ವ್ಯಕ್ತಿತ್ವವಿಕಸನಕ್ಕೆ ಸಹಾಯಕವಾದ ವಿಶ್ವಮಾನ್ಯ ಶಿಕ್ಷಣ ನಮಗಿಂದು ಬೇಕಾಗಿದೆ.
* ಸದ್ಗುಣಗಳಿಂದ ಪುಷ್ಟಿಗೊಂಡ ಶಿಕ್ಷಣವನ್ನು ಪಡೆದಾಗ, ಜನತೆಯ ವಿವೇಕವು ಜಾಗೃತವಾಗಬೇಕು; ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದ ಜೀವನಪದ್ಧತಿಯಲ್ಲಿ ಪರೀಕ್ಷಿಸಲ್ಪಟ್ಟ ಜ್ಞಾನದ ಅನನ್ಯತೆಯನ್ನು ಅಳವಡಿಸುವ ಪ್ರಕ್ರಿಯೆ ನಡೆಯಬೇಕು.
* ಇಂತಹ ಸಾಮರ್ಥ್ಯವನ್ನು ನೀಡುವಂತಹ, ವಿದ್ಯಾರ್ಥಿಯ ವಯೋಮಾನಕ್ಕೆ ತಕ್ಕಂತೆ ಹಂತಹಂತವಾಗಿ ವಿನ್ಯಾಸಗೊಳಿಸಿದ ಒಂದು ಸಂಶೋಧನಾತ್ಮಕ ಶೈಕ್ಷಣಿಕ ಪಠ್ಯವು ಜಾರಿಗೆ ಬರಬೇಕು. ಇಂತಹ ಪಠ್ಯವು ಆಧುನಿಕ ವಿಚಾರಗಳೊಡನೆ ರಾಷ್ಟ್ರೀಯತೆ, ವಿಶ್ವಭ್ರಾತೃತ್ವ ಹಾಗೂ ಸರ್ವಜನಹಿತಕಾರಿಯಾದ ಸಾಮರಸ್ಯವನ್ನು ಸಾಧಿಸುವ, ಹಳೇ ಬೇರು ಹೊಸ ಚಿಗುರು ಎಂಬಂತಹ ವಿಚಾರಧಾರೆಯನ್ನು ಹೊಂದಿರಬೇಕು.
* ನಮ್ಮ ಶಿಕ್ಷಣ ನೀತಿಯ ಆವಿಷ್ಕಾರಗಳು ಹಾಗೂ ಯೋಜನೆಗಳು ತಾತ್ಕಾಲಿಕ ರಾಜಕೀಯ ಸ್ಥಿತಿಗತಿಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಮತ್ತು ದೇಶದ ಐಕ್ಯತೆಯನ್ನು ಸಾಧಿಸುವ ದಿಕ್ಕಿನಲ್ಲಿ ಒಂದು ದಿಟ್ಟ ಹೆಜ್ಜೆಯಾಗಬೇಕು ಎಂಬುದು ಎಲ್ಲ ವಿವೇಕಿಗಳ ಆಶಯ.
ಎಲ್ಲರನ್ನೂ ಒಗ್ಗೂಡಿಸಬಲ್ಲ ಸಮಾಜದ ನಿರ್ಮಾಣ: 1. ಆತ್ಮನಿರ್ಭರತೆ, ಧೈರ್ಯ, ಪ್ರೀತಿ, ಶಾಂತಿ, ಸಂತೋಷಗಳನ್ನು ನೀಡುವ ಜ್ಞಾನ ಹಾಗೂ ಜೀವನಪದ್ಧತಿಗಾಗಿ ಜಗತ್ತು ಇಂದು ಭಾರತದ ಕಡೆಗೆ ನೋಡುತ್ತಿದೆ. ವಿಶ್ವದ ಬೇರೆ-ಬೇರೆ ಜನಾಂಗಗಳು ಅಂತಹ ಸಂಜೀವಿನಿ ಜ್ಞಾನರಾಶಿಗಾಗಿ ಹಾತೊರೆಯುತ್ತಿವೆ.
2. ಈಗಿನ ಮಕ್ಕಳಿಗೆ ಮತ್ತು ಯುವಕರಿಗೆ ಜೀವನದ ಸವಾಲುಗಳನ್ನು ಸಮಚಿತ್ತತೆಯಿಂದ ಎದುರಿಸಲು ಬೇಕಾಗುವ ಅವಶ್ಯಕ ಜ್ಞಾನವನ್ನು ನೀಡುವ ಸಲುವಾಗಿ ಸಾಮಾನ್ಯ ಶಿಕ್ಷಣ ಪದ್ಧತಿಗೆ ಪೂರಕ ಶಿಕ್ಷಣ (Complementary education) ಅನೌಪಚಾರಿಕ ಶಿಕ್ಷಣದ (co-curricular education) ಪಠ್ಯ ಮತ್ತು ಕಲಿಕಾ ಕ್ರಮವನ್ನು ಯೋಜಿಸಬೇಕು. ಆ ಮೂಲಕ ಸಾಮರಸ್ಯ ಮತ್ತು ಪ್ರಗತಿಯ ಸೂತ್ರವನ್ನು ಆಧುನಿಕ ಮಾಧ್ಯಮಗಳ ಮೂಲಕ ಯಶಸ್ವಿಯಾಗಿ ಪ್ರಸ್ತುತಪಡಿಸುವ ಕಾಲ ಸನ್ನಿಹಿತವಾಗಿದೆ.
ಎಂತಹ ಶಿಕ್ಷಣದ ಅಗತ್ಯವಿದೆ?: ಈಗ ನಮಗೆ ಬೇಕಾಗಿರುವುದು ಭಾರತೀಯ ಸಂಸ್ಕೃತಿಯಲ್ಲಿರುವ ಸಕಾರಾತ್ಮಕವೂ, ವೈಜ್ಞಾನಿಕವೂ, ವ್ಯಕ್ತಿತ್ವಪೋಷಕವೂ ಆದ, ಮನಸ್ಸನ್ನು ಸಂತೋಷ ಮತ್ತು ಶಾಂತಿಯಿಂದ ತುಂಬುವ, ಸದ್ಬುದ್ಧಿಯನ್ನು ನೀಡುವ, ಸಾವಿರಾರು ವರ್ಷಗಳ ಜೀವನಪದ್ಧತಿಯಲ್ಲಿ ಸಫಲವಾಗಿರುವ ಜ್ಞಾನದ ಘಟಕಗಳನ್ನು ಪರಿಶೀಲಿಸಿ, ಸಂಶೋಧಿಸಬೇಕು. ಅದನ್ನು ವಿದ್ಯಾರ್ಥಿಯ ವಯೋಮಾನಕ್ಕೆ ತಕ್ಕಂತೆ ಹಂತಹಂತವಾಗಿ ರೂಪಿಸಿ ಆಧುನಿಕ ವಿಚಾರಗಳೊಡನೆ ಮೇಳೈಸಿ, ರಾಷ್ಟ್ರೀಯತೆ, ವಿಶ್ವಭ್ರಾತೃತ್ವ ಹಾಗೂ ಸರ್ವಜನ ಸಾಮರಸ್ಯವನ್ನು ಸಾಧಿಸಬೇಕು. ವಿಚಾರಧಾರೆಯ ಒಂದು ಸಂಶೋಧನಾತ್ಮಕ ಶಿಕ್ಷಣ ನೀತಿ ರೂಪುಗೊಳ್ಳಬೇಕು. ಸಾವಿರಾರು ವರ್ಷಗಳ ಅನುಭವದ ಆಧಾರದ ಮೇಲೆ ಕಲ್ಯಾಣಕಾರಕವಾದ ಭಾರತೀಯ ಸಂಸ್ಕೃತಿಯ ಯಶಸ್ವಿ ಶಿಕ್ಷಣ ಪದ್ಧತಿ ಇಡೀ ಮಾನವಕುಲದ ಪ್ರಗತಿಯನ್ನು ಸಾಧಿಸಬಹುದೆಂಬುದು ನಿರ್ವಿವಾದ.
ಕಾಲಕಾಲಕ್ಕೆ ಸಹಜವಾಗಿ ಬೆಳೆದುಬಂದಿರುವ ಎಲ್ಲ ಧರ್ಮ, ವಿಜ್ಞಾನ, ಮನಶಾಸ್ತ್ರಗಳ ಹಿನ್ನೆಲೆಯಲ್ಲಿ ಶಾಂತಿ, ತಾಳ್ಮೆ, ಪ್ರೀತಿ, ಸಹಜೀವನದ ವಿಶ್ವಮಾನ್ಯ ತತ್ತ ್ವಗಳನ್ನೂ, ಭೌತಿಕವಾಗಿ ಎಲ್ಲರನ್ನೂ ಜೊತೆಗೂಡಿಸುವ ವಿಜ್ಞಾನದ ತತ್ತ ್ವನ್ನೂ ಬೋಧಿಸುವ ಸನಾತನ ಸಂಸ್ಕೃತಿಯ ಜೀವಸತ್ತ ್ವ ಈಗ ಜಗತ್ತಿಗೆ ಅವಶ್ಯವಾಗಿ ಬೇಕಾಗಿದೆ. ಸೀಮಿತ ಮತೀಯ ಚಿಂತನೆಗಳನ್ನು ಮೀರಿ, ಯೋಗ, ಆಯುರ್ವೆದ, ಅಧ್ಯಾತ್ಮ, ಧ್ಯಾನ, ಎಲ್ಲ ಜನಾಂಗಗಳ ಜೀವನ ಪದ್ಧತಿ ಮತ್ತು ನಂಬಿಕೆಗಳನ್ನು ಸ್ವೀಕರಿಸಿ, ಸರ್ವಜನ ಹಿತಕಾರಿಯಾಗಿಸುವಂತೆ ಪರಿಪೂರ್ಣಗೊಳಿಸಿ ಮಾನವಕುಲಕ್ಕೆ ವರದಾಯಕವಾಗುವ ವೈಜ್ಞಾನಿಕ ಜ್ಞಾನರಾಶಿ ಎಲ್ಲಿದೆ ಎಂದು ನೋಡಿದರೆ ಅದು ಭಾರತದಲ್ಲಿದೆ, ಸನಾತನ ಹಿಂದೂ ಸಂಸ್ಕೃತಿಯಲ್ಲಿದೆ ಎಂಬುದು ಅರಿವಿಗೆ ಬರುತ್ತದೆ. ವ್ಯಕ್ತಿತ್ವವಿಕಸನ, ಸಾಮಾಜಿಕ ಪರಿವರ್ತನೆಗೆ ಮಾತ್ರವಲ್ಲದೆ, ಸತ್ಯಶೋಧನೆಯ ಹಿನ್ನೆಲೆಯಲ್ಲಿ ಸರ್ವಜನಹಿತಕಾರಿಯಾದ ಕೌಟುಂಬಿಕ ಮತ್ತು ಸಾಮಾಜಿಕ ಜೀವನಕ್ಕೆ ಬೇಕಾದ ಎಲ್ಲ ತಿಳಿವಳಿಕೆಯೂ ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿದೆ. ಇದನ್ನು ಕಂಡುಕೊಂಡ ಆಧುನಿಕ ಜಗತ್ತು ಇದನ್ನು ವಿಪುಲವಾಗಿ ಬಳಸುತ್ತಿರುವುದನ್ನು ಇತ್ತೀಚಿನ ವಿದ್ಯಮಾನಗಳು ಎತ್ತಿ ತೋರಿಸುತ್ತಿವೆ.
ಭಾರತ ಈಗ ತನ್ನ ವಿಶ್ವಮಾನ್ಯ ಸನಾತನ ಸಂಸ್ಕೃತಿಯ ಮೌಲ್ಯವನ್ನು ಮತ್ತೊಮ್ಮೆ ನೆನಪಿಗೆ ತಂದುಕೊಳ್ಳುವುದಲ್ಲದೆ ಅದನ್ನು ವಿಚಾರದ ಮೂಸೆಯಲ್ಲಿ ತಿಕ್ಕಿ, ವೈಜ್ಞಾನಿಕ ಸತ್ಯಶೋಧನೆ ಮತ್ತು ಲೋಕ ಹಿತದೃಷ್ಟಿಯಿಂದ ನಮ್ಮ ಶಿಕ್ಷಣದಲ್ಲಿ ಅಳವಡಿಸಿ, ಇಂದಿನ ಮಕ್ಕಳಿಗೆ ಮತ್ತು ಯುವಕರಿಗೆ ಅದನ್ನು ಸಮರ್ಥವಾಗಿ ತಿಳಿಸಿಕೊಡುವ ಅವಕಾಶವನ್ನು ಸಾಮಾನ್ಯ ಶಿಕ್ಷಣ ಪದ್ಧತಿ ಮತ್ತು ಪೂರಕ ಶಿಕ್ಷಣ ಪದ್ಧತಿಗಳಲ್ಲಿ ಅಳವಡಿಸಿಕೊಳ್ಳಬೇಕು.
ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣ- ನಿನ್ನೆ, ಇಂದು ಮತ್ತು ಮುಂದೆ: ಪ್ರಗತಿಪರ ವೈಚಾರಿಕತೆಯ ಹೆಸರಿನಲ್ಲಿ ಇಂದು ಪಾಶ್ಚಾತ್ಯ ಚಿಂತಕರ ಕೊಡುಗೆಗಳ ಬಗ್ಗೆ ಮಾತ್ರ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತಿದೆ. ಅಂಥ ಚಿಂತನೆಯಲ್ಲೂ ಪ್ರಧಾನವಾಗಿ ಕೇವಲ ಭೌತವಾದದ ವಿಚಾರಗಳನ್ನೇ ಆತ್ಯಂತಿಕ ಹಾಗೂ ಪ್ರಗತಿಪರ ಎಂದು ಬಿಂಬಿಸಲಾಗುತ್ತಿದೆ. ಈ ದೇಶದ ಜ್ಞಾನಪರಂಪರೆ ಪ್ರಗತಿಪರವಲ್ಲವೆಂಬ ಪಾಶ್ಚಾತ್ಯ ಶಿಕ್ಷಣಪ್ರೇರಿತ ದಾಸ್ಯದಿಂದ, ಕೀಳರಿಮೆಯಿಂದ ನಾವು ಈಗ ಹೊರಬರಬೇಕು.
ಮೇಲೆ ಗಮನಿಸಿದಂತೆ ವೈದಿಕ ಹಾಗೂ ಪೌರಾಣಿಕ ಯುಗದಲ್ಲಿ ನಮ್ಮ ಶಿಕ್ಷಣ ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿತ್ತು. ಧನಾರ್ಜನೆ ಮತ್ತು ಜೀವನೋಪಾಯಕ್ಕಾಗಿ ಕೌಶಲಗಳನ್ನು ಕಲಿಸಿಕೊಡುವುದರ ಜೊತೆಗೆ ನೀತಿ ಮತ್ತು ಗುಣಕ್ಕೆ ಪ್ರಾಧಾನ್ಯ ನೀಡಿದ ಪರಂಪರೆ ನಮ್ಮದು. ಇದನ್ನೇ ಇಂದು ‘ಮೌಲ್ಯಾಧಾರಿತ ಶಿಕ್ಷಣ’ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಶಬ್ದಪ್ರಯೋಗ ಬೇರೆಬೇರೆಯಾದರೂ ಮೂಲ ವಿಷಯ ಮತ್ತು ಗುರಿ ಒಂದೇ ಆಗಿದೆ. Value ಎಂದು ಹೇಳುವುದರ ಇಲ್ಲಿನ ಅರ್ಥ Virtue ಆಗಿದೆ. ಮೌಲ್ಯ ಎಂದರೆ ‘ಸದ್ಗುಣಸಂಪನ್ನತೆ’ ಎಂದು ತಿಳಿಯಬೇಕು. ಇದನ್ನು ಬಾಲ್ಯದಿಂದಲೇ ಅನೌಪಚಾರಿಕ ಶಿಕ್ಷಣದ ಮೂಲಕ ಮತ್ತು ಮನೆಮನೆಗಳಲ್ಲಿ ಸದ್ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಸಂಸ್ಕಾರವರ್ಧನೆಯ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಸಮರ್ಥವಾದ ಆದರ್ಶ ಜೀವನಕ್ಕೆ ಅವರನ್ನು ಸಜ್ಜುಗೊಳಿಸುವುದು ಶಿಕ್ಷಣದ ಮುಖ್ಯ ಗುರಿಯಾಗಬೇಕು.
ಸತ್ಯಶೋಧನೆ, ಅನುಕಂಪ, ಸೇವಾಮನೋಭಾವ ಮುಂತಾದ ಸದ್ಗುಣಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಬೇಕಾದ ತರಬೇತಿಯನ್ನು ಶಿಕ್ಷಣವಿಧಾನದಲ್ಲಿ ಹೇಗೆ ಅಳವಡಿಸಬೇಕೆಂಬುದನ್ನು ಶಿಕ್ಷಣ ಕ್ಷೇತ್ರದ ತಜ್ಞರು ಈಗ ಚಿಂತಿಸಬೇಕಾಗಿದೆ. ಭಾರತೀಯ ಯೋಗ, ಅಧ್ಯಾತ್ಮ ಮತ್ತು ವಿಶ್ವಮೌಲ್ಯಗಳನ್ನು ಆಮೂಲಾಗ್ರವಾಗಿ ಚಿಂತಿಸಿ ಹೊಸದಾಗಿ ಅಳವಡಿಸಿಕೊಳ್ಳಬೇಕಾಗಿದೆ. ಎಲ್ಲ ಧರ್ಮಗಳ ಮೂಲ ಮೌಲ್ಯಗಳನ್ನು ಆರಿಸಿ ಒಂದು ಪಠ್ಯಕ್ರಮವನ್ನು (Curriculum for Integral Value Education) ಹಾಗೂ ಅದನ್ನು ಕಾರ್ಯಗತಗೊಳಿಸುವ ವಿಧಿವಿಧಾನಗಳನ್ನು (Methodology) ಅಳವಡಿಸಬೇಕಾಗಿದೆ. ಜಾತಿ, ಮತಗಳ ಸಂಕೋಲೆಗಳಿಗೆ ಅತೀತವಾದ, ಎಲ್ಲ ಸಂಸ್ಕೃತಿಗಳ ಸಾರವನ್ನು ಒಳಗೊಳ್ಳುವಂಥ ಕ್ರಿಯಾಶೀಲ ನೀತಿಯನ್ನು ರೂಪಿಸಬೇಕು. ಮಕ್ಕಳ ಅಭ್ಯುದಯ ಮತ್ತು ಸಮಾಜದ ಅಭಿವೃದ್ಧಿಯನ್ನು ಬಯಸುವ ಎಲ್ಲ ದೇಶಪ್ರೇಮಿಗಳೂ ಈ ಮಹಾನ್ ಶಿಕ್ಷಣಯಜ್ಞದಲ್ಲಿ ಸಂಪೂರ್ಣವಾಗಿ ಸಹಕರಿಸಬೇಕು.
ವಿಶ್ವಕ್ಕೆ ಇಂದು ಸ್ವಾಮಿ ವಿವೇಕಾನಂದರು, ಶ್ರೀಅರವಿಂದರು, ಭಗಿನಿ ನಿವೇದಿತಾ, ಷೋಪೆನ್ ಹೋವರ್, ಆರ್ನಾಲ್ಡ್ ಟಾಯ್್ನ ಮುಂತಾದ ಅನೇಕ ಚಿಂತನಶೀಲರಿಂದ ಪ್ರೇರಿತವಾದ ಪ್ರಜಾಸತ್ತಾತ್ಮಕ ನೆಲೆಯಲ್ಲಿ ರೂಪಿತವಾದ, ಸಮನ್ವಯಸಾಮರಸ್ಯದಿಂದ ಒಡಗೂಡಿದ ಒಂದು ಶಿಕ್ಷಣಕ್ರಮದ ಆವಶ್ಯಕತೆಯಿದೆ. ಸನಾತನ ಮೌಲ್ಯಗಳ ಆಧಾರದಲ್ಲಿ ಜೀವನದ ಸವಾಲುಗಳಿಗೆ ಸ್ಪಂದಿಸುವ ಪ್ರಾಯೋಗಿಕ ಆಧುನಿಕ ಶಿಕ್ಷಣವನ್ನು ರೂಪಿಸುವುದು ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತೀಯರ ಹೆಗಲಿಗೆ ಬಿದ್ದಿರುವ ವಿಶೇಷ ಹೊಣೆಗಾರಿಕೆ ಎನ್ನಬಹುದು. ಇಂತಹ ಅಪೂರ್ವ ಜವಾಬ್ದಾರಿಯನ್ನು ಭಾರತೀಯರು ಸಮರ್ಥವಾಗಿ ನಿರ್ವಹಿಸಿದಲ್ಲಿ, ಜಗತ್ತಿನಲ್ಲಿ ಶಾಂತಿ-ಸೌಖ್ಯ-ಸಾಮರಸ್ಯದ ಒಂದು ಹೊಸ ಮನ್ವಂತರಕ್ಕೆ ನಾಂದಿಯಾಗುವುದು ನಿಶ್ಚಿತ. ಇಂತಹ ಪರಿವರ್ತನೆ ಬರಬೇಕಾದರೆ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರವಾದ ಕ್ರಾಂತಿಕಾರಿ ಬದಲಾವಣೆಯಾಗಬೇಕು. ಅಂದರೆ, ಭಾರತೀಯ ಹಾಗೂ ಪಾಶ್ಚಾತ್ಯ ಜ್ಞಾನರಾಶಿಯನ್ನು ಸಮನ್ವಯಗೊಳಿಸುವ ಒಂದು ಅಪೂರ್ವ, ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಮುಂದಿನ ಯುವಜನತೆ ಈ ಯೋಜನೆಯ ಫಲಾನುಭವಿಗಳಾಗಿ ಹೊಸದೊಂದು ಸುಂದರ ಜಗತ್ತನ್ನು ನಿರ್ವಿುಸುವಂತಾಗಬೇಕು.
ಕೇಂದ್ರ ಸರ್ಕಾರವು ಕಾರ್ಯಗತಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ಯೋಜನೆಯು ಇವೆಲ್ಲವನ್ನೂ ಗಮನಿಸಬೇಕಾಗಿದೆ. ಅತ್ಯುತ್ತಮ ಅಭಿವೃದ್ಧಿಪರ ಶಿಕ್ಷಣದ ಮೂಲಕ ಭಾರತ ದೇಶ ಮಾತ್ರವಲ್ಲದೆ, ಇಡೀ ವಿಶ್ವದ ತಮಸ್ಸನ್ನು, ಸಂಕುಚಿತ ಆವರಣಗಳನ್ನು, ಅಡ್ಡಿಆತಂಕಗಳನ್ನು ನಿವಾರಿಸಲಿ, ಶಾಂತಿ-ಸಾಮರಸ್ಯದ, ಆದರ್ಶ ಸಮಾಜ ನಿರ್ವಣವಾಗಲಿ ಎಂದು ಆಶಿಸೋಣ. ಪರಸ್ಪರ ಸಹಕಾರವನ್ನು ಸಮಾನಮನಸ್ಕರಾಗಿ ನೀಡುತ್ತ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ.
ನಿತ್ಯಜೀವನದಲ್ಲಿ ಧರ್ಮ ಹಾಗೂ ತತ್ವಗಳ ಅನುಷ್ಠಾನ: ಪ್ರಸಕ್ತ ಭಾರತೀಯ ಸಮಾಜವು ಧರ್ಮ, ನೀತಿಗಳ ಕುರಿತ ಉದಾಸೀನತೆಯಿಂದ ಹಾಗೂ ಸಾಮಾಜಿಕ ಪ್ರಜ್ಞೆಯ ಅಭಾವದಿಂದ ಬಳಲುತ್ತಿದೆ. ಪ್ರಾಮಾಣಿಕ ಅಭ್ಯಾಸ, ಸ್ವಾಧ್ಯಾಯದಿಂದ ಮನಸ್ಸಿನಲ್ಲಿ ವಿವೇಕ ಜಾಗೃತಿಯುಂಟಾಗುತ್ತದೆ. ಅದರಿಂದ ಜ್ಞಾನವರ್ಧನೆ ಸಾಧ್ಯವಾಗುತ್ತದೆ. ಈ ವಿವೇಕದ ಬೆಳಕಿನಲ್ಲಿ ನಿತ್ಯಜೀವನವನ್ನು ನಡೆಸಿದಾಗ ಮಾತ್ರ ಎಲ್ಲರ ಮನಃಪರಿವರ್ತನೆ ಸಾಧ್ಯ. ಸನಾತನ ಧರ್ಮವನ್ನು ನಿಜವಾಗಿ ಅರಿತಿರುವವರು, ಅದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳವುದಕ್ಕೆ ಆದ್ಯತೆ ಕೊಡಬೇಕು.
ಸಾಮಾಜಿಕ ಪ್ರಜ್ಞೆ: ಧರ್ಮದ ಅನುಷ್ಠಾನದ ಜೊತೆಗೆ ಇಂದಿನ ಮತ್ತೊಂದು ಅಗತ್ಯವೆಂದರೆ ಸಾಮಾಜಿಕ ಪ್ರಜ್ಞೆ. ಸಾವಿರಾರು ವರ್ಷಗಳಿಂದ ಬೆಳೆದುಬಂದ ನಮ್ಮ ದೇಶದ ಸಮಾಜ ರಚನೆ ತುಂಬ ವೈವಿಧ್ಯಮಯ. ಅದು ಅನೇಕ ಸಂಪ್ರದಾಯಗಳ, ರೀತಿರಿವಾಜುಗಳ, ನಂಬಿಕೆಗಳ, ಭಾಷೆಗಳ, ವ್ಯವಸಾಯಗಳ, ಜೀವನಪದ್ಧತಿಗಳ ವಿಶಾಲ ಸ್ತೋಮ. ಪ್ರತಿಯೊಬ್ಬ ಭಾರತೀಯನಿಗೂ ಇದನ್ನು ಅರಿಯುವ ಒಂದು ಸಾಮರಸ್ಯದ ಜ್ಞಾನ ಅವಶ್ಯಕವಾಗಿ ಬೇಕು. ಎಲ್ಲರನ್ನೂ ನಮ್ಮವರೆಂದು ಪರಿಭಾವಿಸಿ ಎಲ್ಲರ ಜೀವನಪದ್ಧತಿಗಳನ್ನೂ ಗೌರವಿಸಿ, ಸಮರಸತೆಯ ಸೂತ್ರದಲ್ಲಿ ನಮ್ಮ ಸಾಮಾಜಿಕ ನಡವಳಿಕೆಯನ್ನು ರೂಪಿಸಿಕೊಳ್ಳಬೇಕು. ಇದರಿಂದ ಮನಸ್ಸಿನಲ್ಲಿ ಹೊಸತೊಂದು ರೀತಿಯ ಭಾವ ಜಾಗೃತವಾಗುವುದು. ನಮ್ಮ ವಿದ್ಯಾಭ್ಯಾಸ ಪದ್ಧತಿಯಲ್ಲಿ ಸಾಧಾರಣ ಶಿಕ್ಷಣದೊಂದಿಗೆ ಸಂಯಮ, ಏಕಾಗ್ರತೆ, ವಿವೇಕ ಮೊದಲಾದ ಮಾನಸಿಕ ಶಕ್ತಿಗಳನ್ನು ಜಾಗೃತಗೊಳಿಸುವ ತರಬೇತಿಯನ್ನು ನೀಡಿದರೆ ಕ್ಲೇಶರಹಿತ, ಶಾಂತಿಯುತ ಆದರ್ಶ ಸಮಾಜದ ನಿರ್ಮಾಣ ಸಾಧ್ಯ.
(ಲೇಖಕರು ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರು)