

2016ರಲ್ಲಿ ಒಂದು ದಿನ ಮಂಜರಿಯನ್ನು ಹುಡುಕಿಕೊಂಡು ಅವಳ ಊರಿನವನೇ ಆದ ಮೋಹನ್ ಬಂದ. ಆತ ಸುಮಾರು 25 ವರ್ಷ ವಯಸ್ಸಿನವನಾಗಿದ್ದು ಮದುವೆಯಾಗಿರಲಿಲ್ಲ. ಆತ ಮಂಜರಿಗೆ ಬಾಲ್ಯದಿಂದ ಪರಿಚಿತನಾಗಿದ್ದು ನೌಕರಿ ಅರಸಿ ನಗರಕ್ಕೆ ಬಂದಿದ್ದಾಗಿ ತಿಳಿಸಿದ. ‘ನನಗೆ ಈ ಊರಿನಲ್ಲಿ ಯಾವುದಾದರೊಂದು ಕೆಲಸ ಹುಡುಕಿಕೊಡಲು ಸಹಾಯ ಮಾಡುವಿರಾ’ ಎಂದು ಆತ ಉದಯ್ ಮತ್ತು ಮಂಜರಿಯನ್ನು ಕೋರಿದ. ಇಬ್ಬರೂ ಒಪ್ಪಿದರು.
‘ನೌಕರಿ ಸಿಗುವವರೆಗೆ ನೀನು ನಮ್ಮ ಮನೆಯಲ್ಲಿಯೇ ಇರಬಹುದು’ ಎಂದು ಉದಯ್ ಸೂಚಿಸಿದ. ಮಂಜರಿ ತಮ್ಮ ಗ್ರಾಮದ ಬಗ್ಗೆ, ಬಾಲ್ಯದ ಬಗ್ಗೆ ಮೋಹನ್ನ ಜತೆಗೆ ಮಾತನಾಡುತ್ತಾ ಇರುತ್ತಿದ್ದು ಅವನ ಸಮೀಪಕ್ಕೆ ಬಂದಿದ್ದಳು. ತನಗೇ ತಿಳಿಯದಂತೆ ಮಂಜರಿಗೆ ಮೋಹನನ ಮೇಲೆ ಪ್ರೇಮಾಂಕುರವಾಗಿತ್ತು. ಕೆಲ ದಿನಗಳ ನಂತರ ಮೋಹನ್ನಿಗೆ ಉದಯ್ನ ಸಹಾಯದಿಂದ ಫ್ಯಾಕ್ಟರಿಯೊಂದರಲ್ಲಿ ನೌಕರಿ ದೊರೆಯಿತು. ಹೀಗಾಗಿ ಮೋಹನ್ ಫ್ಯಾಕ್ಟರಿಯ ಸಮೀಪವೇ ರೂಮ್ ಮಾಡಿದ. ಆದರೂ ಹತ್ತು ಹದಿನೈದು ದಿನಕ್ಕೊಮ್ಮೆ ಆತ ಮಂಜರಿಯ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ.
ಒಮ್ಮೆ ತುರ್ತು ಕೆಲಸದ ನಿಮಿತ್ತ ಉದಯ್ ಊರಿಗೆ ಹೋಗಬೇಕಾಗಿ ಬಂದಾಗ ಆತ ಮಂಜರಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ತನ್ನ ಮನೆಯಲ್ಲಿಯೇ ಬಂದಿರಲು ಮೋಹನ್ಗೆ ಹೇಳಿದ. ಆ ಸಮಯದಲ್ಲಿ ಮಂಜರಿ ಮತ್ತು ಮೋಹನ್ ನಡುವೆ ದೈಹಿಕ ಸಂಪರ್ಕವೂ ಏರ್ಪಟ್ಟಿತು. ಆನಂತರ ಅವರು ಬೇರೆ ಬೇರೆ ಜಾಗಗಳಲ್ಲಿ ಗುಟ್ಟಾಗಿ ಭೇಟಿ ಮಾಡಲಾರಂಭಿಸಿದರು. ಮಂಜರಿ ಕೆಲವೊಮ್ಮೆ ಕೆಲಸಕ್ಕೆ ರಜೆ ಹಾಕಿ ಮಕ್ಕಳು ಶಾಲೆಗೆ ಹೋದ ಸಮಯದಲ್ಲಿ ಮೋಹನ್ನನ್ನು ಬರಹೇಳುತ್ತಿದ್ದಳು.
ಇಂತಹ ವಿಷಯಗಳು ಬಹಳ ದಿನಗಳ ಕಾಲ ಗುಟ್ಟಾಗಿರದಿರುವ ಕಾರಣ ಪತ್ನಿಯ ಚಟುವಟಿಕೆಗಳ ಬಗ್ಗೆ ಉದಯ್ ಅರಿತು ತರಾಟೆಗೆ ತೆಗೆದುಕೊಂಡ. ‘ನೀನು ಬೇರೆಯವರ ಸುಳ್ಳು ಮಾತುಗಳನ್ನು ನಂಬಿ ವಿನಾಕಾರಣ ಅಪವಾದ ಹೊರಿಸುತ್ತಿರುವೆ. ನಿನ್ನಂತಹ ಸಂಶಯಸ್ಥನ ಜತೆ ಜೀವನ ಮಾಡಲಾರೆ. ನಾನು ಬೇರೆ ಮನೆಯಲ್ಲಿ ಮಕ್ಕಳ ಜತೆಗೆ ಜೀವಿಸುವೆ’ ಎಂದು ಆಕೆ ಅವನಿಗೇ ತಿರುಗೇಟು ನೀಡಿದಳು.
ಅವಳ ನಡತೆಯ ಬಗ್ಗೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳಿರದ ಕಾರಣ ಉದಯ್ ಸುಮ್ಮನಾದ. ಆದರೆ ಸಂಶಯದ ಅಲೆ ಅವನ ಮನವನ್ನು ಸಂಪೂರ್ಣವಾಗಿ ಆವರಿಸಿ ಕೊಂಡಿತ್ತು. ಪತ್ನಿಗಿಂತಲೂ ಆತನಿಗೆ ಮೋಹನ್ ಮೇಲೆ ರೋಷ ಉಕ್ಕೇರಿತ್ತು. ಏನಾದರೂ ಮಾಡಿ ಮೋಹನ್ನ ಕೃತ್ಯವನ್ನು ಬಯಲಿಗೆಳೆಯಬೇಕೆಂದು ತೀರ್ವನಿಸಿದ ಆತ ಆಗಾಗ ರಜೆ ಹಾಕಿ ಹೆಂಡತಿಯ ಚಟುವಟಿಕೆಗಳನ್ನು ಗಮನಿಸತೊಡಗಿದ. ಒಂದು ಬೆಳಿಗ್ಗೆ ಮಂಜರಿ 11 ಗಂಟೆಗೆ ಮನೆಗೆ ಹಿಂತಿರುಗಿ ಬಂದಾಗ ಹೊರಗೆ ಅಡಗಿದ್ದ ಉದಯ್ ಮನೆಯಲ್ಲೇನಾಗುತ್ತದೆ ಎಂದು ಗಮನಿಸತೊಡಗಿದ. ಸ್ವಲ್ಪ ಹೊತ್ತಿನ ನಂತರ ಮೋಹನ್ ಮನೆಯೊಳಗೆ ಹೋದ. ಹದಿನೈದು ನಿಮಿಷದ ನಂತರ ಉದಯ್ ಮನೆಯ ಬಾಗಿಲನ್ನು ಬಡಿದ. ಮಂಜರಿ ಬಾಗಿಲನ್ನು ತೆರೆದಳು. ಮೋಹನ್ ಹಜಾರದಲ್ಲಿಯೇ ಕುಳಿತಿದ್ದ. ‘ಕಡೆಗೂ ನಿಮ್ಮಿಬ್ಬರ ಕೃತ್ಯವನ್ನು ಬಯಲು ಮಾಡಿದೆ’ ಎಂದ ಉದಯ್ ಪತ್ನಿಗೆ ಥಳಿಸಿದಲ್ಲದೇ ಮೋಹನ್ಗೆ ಛೀಮಾರಿ ಹಾಕಿ ‘ಉಂಡ ಮನೆಗೆ ಎರಡು ಬಗೆದ ಪಾಪಿ ನೀನು, ಇನ್ನೊಮ್ಮೆ ನನ್ನ ಮನೆಗೆ ಬಂದರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಸಿದ.
ಅದೇ ದಿನ ಉದಯ್ ಮತ್ತು ಮಂಜರಿ ನಡುವೆ ದೊಡ್ಡ ವಾಗ್ವಾದವಾಯಿತು. ಅವಳು ‘ನೀವು ಸುಮ್ಮಸುಮ್ಮನೆ ನನ್ನ ಶೀಲದ ಬಗ್ಗೆ ಶಂಕಿಸಿದ್ದೀರಿ. ನಾನು ಮೋಹನ್ನ ಜತೆಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆನೇ ಹೊರತು ಅವನೊಡನೆ ಪಲ್ಲಂಗದ ಮೇಲಿರಲಿಲ್ಲವಲ್ಲ’ ಎಂದಳು. ‘ನೀನು ಇಂದು ಕಾರ್ಖಾನೆಗೆ ಹೋಗದಿರುವುದು ಮತ್ತು ಮೋಹನ್ ಬಂದದ್ದು ಕಾಕತಾಳೀಯವೇ’ ಎಂದು ಉದಯ್ ಕೇಳಿದಾಗ ‘ಹೊಟ್ಟೆನೋವಿನ ಕಾರಣ ನಾನು ವಾಪಸ್ ಬಂದೆ. ಬಸ್ಸ್ಟಾ್ಯಂಡ್ನಲ್ಲಿ ಇಳಿದು ಬರುತ್ತಿದ್ದ ನನ್ನನ್ನು ನೋಡಿದ್ದ ಮೋಹನ್ ಮಾತನಾಡಿಸಲು ಮನೆಗೆ ಬಂದಿದ್ದ. ನೀನು ಸುಖಾಸುಮ್ಮನೆ ನನ್ನನ್ನು ಶಂಕಿಸಿದ ಕಾರಣ ನಾನು ಬೇರೆ ಮನೆ ಮಾಡಿಕೊಂಡು ಮಕ್ಕಳೊಡನೆ ಇರುತ್ತೇನೆ’ ಎಂದು ಹೇಳಿದ ಮಂಜರಿ ಒಂದು ತಿಂಗಳ ನಂತರ ಬೇರೆ ಮನೆಯನ್ನು ಬಾಡಿಗೆಗೆ ಹಿಡಿದು ಮಕ್ಕಳೊಡನೆ ಹೊರಟೇ ಹೋದಳು.
‘ನನ್ನ ಮಕ್ಕಳನ್ನು ಕಾಲಕಾಲಕ್ಕೆ ಭೇಟಿ ಮಾಡಲು ಅನುವು ಮಾಡಿಕೊಡಬೇಕು’ ಎಂದು ಉದಯ್ ಕೇಳಿದಾಗ ಆಕೆ ‘ಮಕ್ಕಳ ವಿದ್ಯಾಭ್ಯಾಸ ಮತ್ತು ಮನೆ ಬಾಡಿಗೆಗೆ ತಗಲುವ ಖರ್ಚು ನೀಡಿದರೆ ಮಕ್ಕಳನ್ನು ನೋಡಲು ಬಿಡುವೆ’ ಎಂದಳು. ಉದಯ್ ಇದಕ್ಕೊಪ್ಪಿದ. ತನ್ನ ಜೀವನವನ್ನು ಹಾಳುಗೆಡಹಿದ ಮೋಹನ್ನ ಮೇಲೆ ಸೇಡನ್ನು ತೀರಿಸಿಕೊಳ್ಳಲೇಬೇಕು ಎಂದು ಸೂಕ್ತ ಅವಕಾಶಕ್ಕಾಗಿ ಉದಯ್ ಕಾಯುತ್ತಿದ್ದ. ಸುಮಾರು ಆರು ತಿಂಗಳ ನಂತರ ಉದಯ್ನ ಸ್ನೇಹಿತನೊಬ್ಬ ಕರೆ ಮಾಡಿ ‘ಇಂದು ರಾತ್ರಿ 10 ಗಂಟೆಗೆ ಮೋಹನ್ ಮಂಜರಿಯ ಮನೆಗೆ ಹೋಗುತ್ತಿದ್ದಾನೆ. ಆತ ಅವಳ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದಾಗ ನಾನು ಕೇಳಿಸಿಕೊಂಡೆ’ ಎಂದು ತಿಳಿಸಿದ. ಪುರಾವೆ ಸಹಿತ ಅವರಿಬ್ಬರನ್ನೂ ಹಿಡಿಯುವ ಅವಕಾಶ ದೊರೆಯುತ್ತದೆಯೆಂದು ಉದಯ್ ಮಂಜರಿಯ ಮನೆಯ ಹೊರಗೆ ಹೊಂಚು ಹಾಕಿ ಕುಳಿತ. ರಾತ್ರಿ 9 ಗಂಟೆಗೆ ಮಂಜರಿ ಮನೆ ಬಾಗಿಲಿಗೆ ಬೀಗ ಹಾಕದೇ ಹೊರಗೆ ಹೋದಳು. ಆಗ ಉದಯ್ ಮನೆಯೊಳಗೆ ನುಗ್ಗಿದ. ಅವನ ಮಕ್ಕಳು ಹಜಾರದಲ್ಲಿ ನಿದ್ದೆಮಾಡುತ್ತಿದ್ದರು. ಆತ ಮಲಗುವ ಕೋಣೆಗೆ ಹೋಗಿ ಮಂಜರಿಯ ಮಂಚದ ಕೆಳಗೆ ಅಡಗಿಕೊಂಡ. ರಾತ್ರಿ 10.30ಕ್ಕೆ ಮೋಹನ್ ಬಂದ. ಆತ ಮತ್ತು ಮಂಜರಿ ಊಟ ಮಾಡಿ ಮಂಚದ ಮೇಲೆ ಮಲಗಿದರು. ತನ್ನ ಪತ್ನಿ ಇನ್ನೊಬ್ಬನ ಜೊತೆ ಸರಸಸಲ್ಲಾಪ ನಡೆಸುತ್ತಿದ್ದುದು ಉದಯ್ನ ರೋಷವನ್ನು ಉಕ್ಕೇರಿಸಿತ್ತು. ಆದರೂ ತಾಳ್ಮೆಯಿಂದ ಸುಮ್ಮನಿದ್ದ. ಹರಿತ ಚಾಕುವನ್ನು ಆತ ತನ್ನ ಜೇಬಿನಲ್ಲಿಯೇ ಇಟ್ಟುಕೊಂಡಿದ್ದ. ಬೆಳಗಿನ ಸುಮಾರು 4 ಗಂಟೆಗೆ ಎದ್ದ ಮಂಜರಿ ರೂಮಿನ ಹೊರಗಿದ್ದ ಶೌಚಗೃಹಕ್ಕೆ ಹೋದಳು. ಅದೇ ಸಮಯಕ್ಕೆ ಮಂಚದ ಕೆಳಗಿನಿಂದ ಮೆಲ್ಲನೆ ಹೊರಬಂದ ಉದಯ್ ಶೌಚಗೃಹದ ಬಾಗಿಲಿಗೆ ಹೊರಗಿನಿಂದ ಅಗುಳಿ ಹಾಕಿದ. ನಂತರ ಚಾಕುವನ್ನು ಹೊರತೆಗೆದು ಮಂಚದ ಮೇಲೆ ಮಲಗಿದ್ದ ಮೋಹನ್ನ ಬಾಯಿಯನ್ನು ದಿಂಬಿನಿಂದ ಮುಚ್ಚಿ ಹಲವಾರು ಬಾರಿ ಇರಿದ. ಬಾಯಿಯನ್ನು ಬಲವಾಗಿ ಮುಚ್ಚಿದ್ದ ಕಾರಣ ಮೋಹನ್ಗೆ ಕೂಗಲೂ ಆಗಲಿಲ್ಲ. ಕೆಲ ನಿಮಿಷಗಳ ನಂತರ ಆತ ಸಾವನ್ನಪ್ಪಿದ. ಆನಂತರ ಉದಯ್ ಶೌಚಗೃಹದ ಅಗುಳಿಯನ್ನು ತೆರೆದು ಮನೆಯಿಂದ ಹೊರಟು ಹೋದ.
ಶೌಚಗೃಹದಿಂದ ಹೊರಬಂದ ಮಂಜರಿಗೆ ಮೋಹನ್ ರಕ್ತದ ಮಡುವಿನಲ್ಲಿ ಸತ್ತುಬಿದ್ದದ್ದನ್ನು ಕಂಡು ಗಾಬರಿಯಾಯಿತು. ಯಾರು ಕೊಲೆ ಮಾಡಿದರೆಂದು ತಿಳಿಯಲಿಲ್ಲ. ಕೂಡಲೇ ಆಕೆ ಪೊಲೀಸರಿಗೆ ದೂರು ಕೊಟ್ಟಳು. ‘ನಿಮಗೆ ಯಾರ ಮೇಲಾದರೂ ಸಂಶಯವಿದೆಯೇ’ ಎಂದು ಕೇಳಿದಾಗ ಆಕೆ ಇಲ್ಲ ಎಂದಳು. ಆದರೆ ನೆರೆಹೊರೆಯವರು ಉದಯ್ ಮತ್ತು ಮೋಹನ್ಗೆ ವೈಮನಸ್ಯವಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿ ಉದಯ್ ಮೋಹನ್ಗೆ ಈ ಹಿಂದೆ ಕೊಲೆ ಬೆದರಿಕೆ ಹಾಕಿದ್ದನ್ನು ತಿಳಿಸಿದರು. ಈ ಮೇರೆಗೆ ಉದಯ್ನನ್ನು ಪ್ರಶ್ನಿಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಕೊಲೆಗೆ ಉಪಯೋಗಿಸಿದ ರಕ್ತಸಿಕ್ತ ಚಾಕುವನ್ನು ಪೊಲೀಸರಿಗೆ ಒಪ್ಪಿಸಿದ. ಅವನ ಮೊಬೈಲ್ ಫೋನಿನ ಲೊಕೇಷನ್, ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಬೆರಳಚ್ಚು ಗುರುತುಗಳು, ಚಾಕುವಿನ ಮೇಲಿದ್ದ ರಕ್ತ ಮುಂತಾದುವುಗಳ ಆಧಾರದ ಮೇರೆಗೆ ಅವನನ್ನು ಬಂಧಿಸಲಾಯಿತು. ಈ ಪ್ರಕರಣ ಕೇವಲ ಸಾಂರ್ದಭಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದ್ದ ಕಾರಣ ನ್ಯಾಯಾಲಯ ಉದಯ್ಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಿತು. ‘ನಿನ್ನ ಪತ್ನಿಯನ್ನು ಬೇರೊಬ್ಬ ಕದ್ದಾಗ ಆಕೆಯನ್ನು ಅವನೊಡನೇ ಇರಲು ಬಿಡುವುದು ಅತಿ ದೊಡ್ಡ ಪ್ರತೀಕಾರ’ ಎಂದ ಫ್ರೆಂಚ್ ನಟ -ನಿರ್ದೇಶಕ ಅಲೆಕ್ಸಾಂಡರ್ ಜೀತ್ರಿಯ ಮಾತುಗಳನ್ನು ಉದಯ್ ಪಾಲಿಸಿದ್ದರೆ ಆತನಿಗೆ ಜೈಲುವಾಸ ತಪ್ಪುತ್ತಿತ್ತೇನೋ...
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)