ಸದಾಚಾರ ಸಂಪನ್ನತೆಯೇ ಸುಭದ್ರ ಸಮಾಜದ ಅಡಿಪಾಯ

untitled-design-2-690253564bf68
Published on
ವೇದಾಂತ ವ್ಯಾಖ್ಯಾನಗಳು, ಉಪನ್ಯಾಸಗಳು, ನಿರಂತರ, ನಿರರ್ಗಳ ಭಾಷೆಯಲ್ಲಿ ಹೃದಯವನ್ನು ನಾಟುವಂತೆ ಪುಂಖಾನುಪುಂಖವಾಗಿ ಸ್ವಾಮಿ ವಿವೇಕಾನಂದರ ದೇವದುರ್ಲಭ ಕಂಠದಿಂದ ಮೊಳಗುತ್ತಿದ್ದುದನ್ನು ಕೇಳಿಸಿಕೊಂಡ ಪಾಶ್ಚಾತ್ಯ ಚಿಂತಕನೊಬ್ಬ ಈಗಿನ ತಲೆಮಾರಿಗೆ ಅತ್ಯಂತ ಮನವೊಪ್ಪುವ ಪ್ರಶ್ನೆಯೊಂದನ್ನು ಕೇಳಿದ. ಪ್ರಶ್ನೆ ಹೀಗಿತ್ತು- Sir, What is the use of religion to society? ಅರ್ಥಾತ್ ‘ಮಹಾಶಯರೇ ಈ ಎಲ್ಲಾ ತತ್ವಗಳಿಂದ ಸಮಾಜಕ್ಕೇನು ಪ್ರಯೋಜನ?’ 2017ರಲ್ಲಿ ಲಂಡನ್​ನ ಭಾರತೀಯ ದೂತಾವಾಸದಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅಂದು ಅಲ್ಲಿನ ಐಎಫ್​ಎಸ್ ಅಧಿಕಾರಿ ತಮಿಳುನಾಡಿನ ರಾಜನ್ ನನಗೆ ಕೇಳಿದ ಪ್ರಶ್ನೆಯೂ ಹಾಗೇ ಇತ್ತು.

Does religion have a future sir? -ಧರ್ಮಕ್ಕೆ ಭವಿಷ್ಯವಿದೆಯೇ- ಎಂದು. ಇರಲಿ; ವಿವೇಕಾನಂದರು ಏನೆಂದು ಉತ್ತರಿಸಿದರು... ಅವರು ಹೇಳುತ್ತಾರೆ- ‘ನೋಡಿ ಆಧುನಿಕ ಸಮಾಜವಾಗಲಿ ಪ್ರಾಚೀನ ಸಮಾಜವಾಗಲಿ ಸತ್ಯಕ್ಕೆ ಅದರ ಹಂಗಿಲ್ಲ. ಸಮಾಜದ ಹಂಗಿನಲ್ಲಿ ಸತ್ಯ ಇರುವುದಿಲ್ಲ. ಸಮಾಜ ಸತ್ಯಕ್ಕೆ ಶರಣಾಗಬೇಕೇ ಹೊರತು ಸತ್ಯ ಸಮಾಜಕ್ಕೆ ಶರಣಾಗುವುದಿಲ್ಲ. ಯಾವ ಸಮಾಜದಲ್ಲಿ ಉನ್ನತ ಸತ್ಯಗಳು ಪ್ರಾಯೋಗಿಕವಲ್ಲವೋ, ಅನುಷ್ಠಾನ ಮಾಡಲಾಗುವುದಿಲ್ಲವೋ ಅದು ಸಮಾಜವೇ ಅಲ್ಲ. ಅಂತಹ ಸಮಾಜವನ್ನು ತೊರೆದು ಕಾಡಿನಲ್ಲಿ ಬದುಕುವುದು ಲೇಸು. ಇದೇ ಭಾರತೀಯ ಸಮಾಜಕ್ಕೂ ಅನ್ಯ ಸಮಾಜಗಳಿಗೂ ಇರುವ ವ್ಯತ್ಯಾಸ. ಆದ್ದರಿಂದಲೇ ಅವೆಲ್ಲಾ ಹೇಳ ಹೆಸರಿಲ್ಲದಂತೆ ನಿರ್ನಾಮವಾದವು.

ಏಕೆಂದರೆ ಅವುಗಳ ಮುಂದುವರೆದ ಅಸ್ತಿತ್ವದಿಂದ ಯಾವ ಮನುಷ್ಯನಿಗೂ ವರ್ತಮಾನದಲ್ಲಾಗಲಿ ಭವಿಷ್ಯದಲ್ಲಾಗಲಿ ಯಾವ ಪ್ರಯೋಜನವೂ ಇರುತ್ತಿರಲಿಲ್ಲ. ಪ್ರಯೋಜನವಿಲ್ಲದ ಸಂಸ್ಥೆಗಳನ್ನು ಪ್ರಕೃತಿಯ ಸಹಕಾರದೊಂದಿಗೆ ಕಾಲ ನುಂಗಿಹಾಕಿಬಿಡುತ್ತದೆ. ಸದ್ದಿಲ್ಲದೆ ಪ್ರಳಯ ಕೆಲಸ ಮಾಡುವ ರೀತಿಗಳಲ್ಲಿ ಇದೂ ಒಂದು. ಆರ್ಯ ಸಂಸ್ಕೃತಿಗೂ, ಗ್ರೀಕೋ ರೋಮನ್ ಸಂಸ್ಕೃತಿಗೂ ಇರುವ ಸ್ಪಷ್ಟ ವ್ಯತ್ಯಾಸ ಇದು. ಈ ಸೂಕ್ಷ್ಮಗಳನ್ನು ಅರಿಯದ ಯುರೋಪಿಯನ್ ಇತಿಹಾಸಕಾರರೂ ಅವರ ವಿಧೇಯ ಭಾರತೀಯ ವಿದ್ಯಾರ್ಥಿಗಳೂ, ಸಮಾಜ ಸುಧಾರಕರಿಗೆ ಮತ್ತು ಸುಧಾರಣೆಗಳಿಗೆ ಕೊಟ್ಟ ಮಹತ್ವವನ್ನು ಸತ್ಯಾನ್ವೇಷಣೆಯ ಬೃಹತ್ ಪ್ರಯತ್ನ ಮತ್ತು ಆ ನಿಟ್ಟಿನಲ್ಲಿ ಧೀರೋದಾತ್ತ ಸಾಧನೆಗಳನ್ನು ಮಾಡಿದ ಋಷಿ ಪರಂಪರೆ ಮತ್ತು ವಿಜ್ಞಾನಿಗಳ ಪರಂಪರೆಗೆ ಕೊಡದೇ ಪ್ರಮಾದವನ್ನೇ ಮಾಡಿದೆ. ಮನುಷ್ಯನ ಪ್ರಜ್ಞಾಸ್ತರ ಏರಿದಂತೆಲ್ಲಾ ಇಲ್ಲವೇ ಹಾಗೆ ಮೂಡಿ ಬಂದ ಪ್ರಜ್ಞಾವಂತರನ್ನು ಸಮಾಜದ ಆದರ್ಶಗಳನ್ನಾಗಿ ಬಿಂಬಿಸಿದಾಗಲೆಲ್ಲಾ ಸಮಾಜ ತನ್ನ ಬದಲಾವಣೆಗಳನ್ನು ತಾನೇ ತಂದುಕೊಳ್ಳುತ್ತದೆ.

ರಾಮನ ಪಿತೃಭಕ್ತಿ, ಅದೇ ಕಾಲದಲ್ಲಿ ಪ್ರಕಟಗೊಂಡ ಪರಶುರಾಮನ ಪಿತೃಭಕ್ತಿ, ಅಷ್ಟೇ ಏಕೆ, ಇಂದ್ರಜಿತುವಿನ ಪಿತೃಭಕ್ತಿಗೂ ಮೂಲ ಸ್ರೋತವಾದದ್ದು ಅಂದು ಸಮಾಜದಲ್ಲಿ ಮನೆ ಮಾತಾಗಿದ್ದ ನಚಿಕೇತನ ಪಿತೃಭಕ್ತಿ. ಸ್ವಾತಂತ್ರ್ಯಪೂರ್ವದ ಮಹಾತ್ಮಾ ಗಾಂಧಿ, ಮೊರಾರ್ಜಿ ಮೊದಲಾದ ಗೃಹಸ್ಥರ ಬ್ರಹ್ಮಚರ್ಯಕ್ಕೆ ಮೂಲ ಸ್ರೋತ ಶ್ರೀ ರಾಮಕೃಷ್ಣರ ಬ್ರಹ್ಮಚರ್ಯ. ಅದಮ್ಯ ರಾಷ್ಟ್ರಪ್ರೇಮಕ್ಕೆ ಗಂಗೋತ್ರಿಯಾಗಿದ್ದು ವಿವೇಕಾನಂದರ ರಾಷ್ಟ್ರಪ್ರೇಮ. Patriotism is more dangerous than casteism ಎಂಬ ತಮಿಳುನಾಡಿನ ಕೆಲವು ಬುದ್ಧಿಹೀನ ಮತ್ತು ಮೂರ್ಖ ಅಧಿಕಾರಿಗಳ ಮಾತು ಒತ್ತಟ್ಟಿಗಿರಲಿ. ಅದನ್ನು ಅವರು ಕರೆಯುವುದು Parallel thinking (ಪರ್ಯಾಯ ಚಿಂತನೆ) ಎಂದು. ಇವರಿಗೆ Patriotism ಗೊತ್ತಿಲ್ಲ,  casteismಊ ಗೊತ್ತಿಲ್ಲ. ತಮಗೆ ಗೊತ್ತಿಲ್ಲದ್ದನ್ನು ಇನ್ನೊಬ್ಬರಿಗೆ ಅರ್ಥವಾಗದಂತೆ ಹೇಳುವ ಉದ್ದಾಮ ಪಂಡಿತರಿವರು. ಅದು ಒತ್ತಟ್ಟಿಗಿರಲಿ, ಸತ್ಯಾನ್ವೇಷಣೆಯನ್ನೇ ಜೀವನದ ಪ್ರಧಾನ ಅಥವಾ ಏಕಮೇವ ಗುರಿಯಾಗಿರಿಸಿಕೊಂಡು ಬೇರೆಲ್ಲವನ್ನೂ ಎರಡನೇ ಸ್ಥಾನಕ್ಕಿಳಿಸಿದವನೇ ನಿಜವಾದ ಕ್ರಾಂತಿಕಾರಿ.

ವಿಜ್ಞಾನಿ ಬಾಹ್ಯದಲ್ಲಿ ಮತ್ತು ಋಷಿ ಆಂತರ್ಯದಲ್ಲಿರುವ ಪ್ರಕೃತಿಯ ರಹಸ್ಯಗಳನ್ನು ಭೇದಿಸಿ ಅವುಗಳನ್ನು ಸುವಿಸ್ತಾರವಾಗಿ ಅಧ್ಯಯನಿಸಿ ಪ್ರಾಕೃತಿಕ ಶಕ್ತಿಗಳ ಮೇಲೆ ನಿಯಂತ್ರಣವನ್ನು ಸಾಧಿಸಿ ಭೂಲೋಕವನ್ನು ಸ್ವರ್ಗಸದೃಶವನ್ನಾಗಿಸುತ್ತಾನೆ. ಈ ಸತ್ಯದರ್ಶನಕ್ಕೆ ಅವಶ್ಯಕವಾದ ಮನೋಸ್ಥಿತಿಯನ್ನು ಪಡೆಯಲು ಅನುಸರಿಸುವ ಶಿಸ್ತನ್ನೇ ಧರ್ಮ ಎಂದು ಕರೆಯುವುದು. ಅದಕ್ಕೆ ವಿರುದ್ಧವಾದ ಜೀವನ ಪದ್ಧತಿ ಇತ್ಯಾದಿ ಎಷ್ಟೇ ಪ್ರಿಯವಾಗಿರಲಿ ಅದನ್ನು ನಿರ್ಭಿಡೆಯಿಂದ ಪಕ್ಕಕ್ಕೆಸೆಯಬೇಕು. ಇದೇ ತ್ಯಾಗ. ಆದ್ದರಿಂದ ಸತ್ಯ ಮತ್ತು ಧರ್ಮಗಳ ಬುನಾದಿಯೇ ತ್ಯಾಗ. ಸತ್ಯದರ್ಶನಕ್ಕೆ ಇರುವ ರಾಜಮಾರ್ಗವೇ ಆಳವಾದ ಚಿಂತನೆ. ಆಂತರ್ಯದ ಆಳದಲ್ಲಿ ಅಡಗಿರುವ ನಿಗೂಢ ಸತ್ಯಗಳನ್ನು ಭೇದಿಸಬಲ್ಲ ಸಾಮರ್ಥ್ಯವುಳ್ಳ ಪ್ರಖರ ಬುದ್ಧಿ, ಏಕಾಗ್ರತೆ ಮತ್ತು ಹರಿತಗೊಂಡ ಮನಸ್ಸು. ಮನಸ್ಸು ಒಳಹರಿಯುವುದಕ್ಕೆ ಭೋಗಾಸಕ್ತಿಯೇ ದೊಡ್ಡ ಅಡ್ಡಿ. ಆದ್ದರಿಂದ ಎಲ್ಲ ಭೋಗಗಳನ್ನೂ ಕೊಡುವ ಸಾಮರ್ಥ್ಯವಿದ್ದ ಸಿಂಹಾಸನವನ್ನು ತ್ಯಾಗ ಮಾಡಿದ ರಾಮ, ಸಿದ್ದಾರ್ಥ, ಶ್ರೀ ರಾಮಕೃಷ್ಣ, ವಿವೇಕಾನಂದ, ಅಕ್ಕಮಹಾದೇವಿ, ಮೀರಾಬಾಯಿ ನಮಗೆ ಪ್ರಾತಃಸ್ಮರಣೀಯರು.

ರಾಮನ ಚಿತ್ರಪಟವನ್ನು ಚರಂಡಿಗೆಸೆಯುವುದೂ, ಋಷಿಜೀವನವನ್ನು ನಡೆಸಲು ಯತ್ನಿಸುತ್ತಿರುವ ಸಾಮಾಜಿಕ ವರ್ಗವೊಂದನ್ನು ಹೀಯಾಳಿಸುವುದು ಸತ್ಯದ ಕತ್ತುಹಿಸುಕಿ ಅನೃತವನ್ನು ಆರಾಧಿಸಿದಂತೆ. ಸುಳ್ಳುಗಳನ್ನು ಸತ್ಯದ ಜಾಗದಲ್ಲಿ ಕೂರಿಸಿದಂತೆ. ಪಾಪವನ್ನು ಪುಣ್ಯದ ಜಾಗದಲ್ಲಿ ಕೂರಿಸಿದಂತೆ. ಪಾಪ ಪುಣ್ಯಗಳ ವ್ಯತ್ಯಾಸವನ್ನು ಕಿತ್ತೆಸೆಯುವುದು, ರಾಕ್ಷಸನೆಂದು ಪರಿಗಣಿಸಲ್ಪಟ್ಟವನನ್ನು ದೇವರ ಜಾಗದಲ್ಲಿ ಕೂಡಿಸುವುದು, ದೇವನೆಂದು ಆರಾಧಿಸಲ್ಪಡುತ್ತಿದ್ದವನ ಬಗ್ಗೆ, ದೇವತೆಯೆಂದು ಆರಾಧಿಸಲ್ಪಡುವವಳ ಬಗ್ಗೆ ಇನ್ನಿಲ್ಲದ ಕಥೆಗಳನ್ನು ಕಟ್ಟುವುದು, ಇಂದ್ರಿಯ ನಿಗ್ರಹವನ್ನು ಗುರಿಯಾಗಿಸಿಕೊಂಡಿರುವ ಸಂಪ್ರದಾಯವನ್ನು ಮತ್ತು ಮೃಗದಂತೆ ಯಾವ ಇಂದ್ರಿಯ ನಿಗ್ರಹವೂ ಇಲ್ಲದ ಜೀವನಪದ್ಧತಿಗಳೊಂದಿಗೆ ಸಮೀಕರಿಸುವುದು, ಅನಾಚಾರಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯುವುದು, ಸಮಾಜದ ಗಣ್ಯರನ್ನು ಅವಾಚ್ಯ ಶಬ್ದಗಳಿಂದ ಹೀಯಾಳಿಸುವುದು, ಯಾವ ರೀತಿಯಿಂದಲಾದರೂ ಸರಿಯೇ ಧನಿಕರಾದವರನ್ನು ಲಜ್ಜಾಹೀನವಾದ ವರ್ತನೆ, ಕವಿತೆ, ಮಾತುಗಳು ಇವುಗಳನ್ನು ನಿರ್ಭಿಡೆಯಿಂದ ಮಾಡುವವರನ್ನು ಹೊಗಳಿ ಅಟ್ಟಕ್ಕೇರಿಸುವುದು ಇವೇ parallel thinking ನ ಪ್ರಮುಖ ಲಕ್ಷಣಗಳು. ಈ ಹುನ್ನಾರವೇ ಕರ್ನಾಟಕದಲ್ಲಿ ಇತ್ತಿಚೆಗೆ ಧೂಳೆಬ್ಬಿಸಿದ್ದು.

ಆದರೆ ಸ್ವಾಮಿ ವಿವೇಕಾನಂದರ ‘ಉಪನಿಷತ್ತುಗಳಿಗೆ ಹಿಂದಿರುಗಿ’ (Go back to Upanishads) ಮಾತಿಗೆ ಪೂರ್ಣ ವಿರುದ್ಧವಾಗಿವೆ ಈ ಮೇಲಿನ ಉಪದೇಶಗಳು. ಎಲ್ಲರಿಗೂ ಇದು ಸಾಧ್ಯವಿಲ್ಲವಾದರೇನಂತೆ, ನಾಡಿನ ಆದರ್ಶ ಇರಬೇಕಾದ್ದು ಎಂದಿಗೂ ಹೀಗೆಯೇ. ಇವರೇ ಸಮಾಜದ ಶ್ರೇಷ್ಠರು! ಮನುಷ್ಯನಿಗಿರುವ ಅಭಿರುಚಿ, ಸಾಮರ್ಥ್ಯಗಳ ಮೇಲೆಯೇ ಭಾರತೀಯರು ಸಮಾಜದಲ್ಲಿ ಶ್ರೇಷ್ಠತೆ ಕನಿಷ್ಠತೆಗಳನ್ನು ನಿರ್ವಿುಸಿರುವುದು ಎಂಬುದನ್ನು ನೀತಿಶತಕದ ಕರ್ತೃ ರಾಜಾ ಭರ್ತೃಹರಿ ಹೀಗೆ ತೋರಿಸಿದ್ದಾನೆ. ಯಾರು ತಮಗೇ ತೊಂದರೆ ತೆಗೆದುಕೊಂಡು ಪರರಿಗೆ ಹಿತವನ್ನು ಉಂಟುಮಾಡುತ್ತಾರೋ ಅವರು ಸತ್ಪುರುಷರು. ಇವರು ದೀಪದಂತೆ; ಕುಲದೀಪ, ಜಗದೀಪ ನಾಮಾಂಕಿತಗಳು ಹುಟ್ಟಿದ್ದು ಹೀಗೆಯೇ. ತಮಗೂ ಒಳಿತಾಗಲಿ ಇತರರಿಗೂ ಒಳಿತಾಗಲಿ ಎಂದು ಬದುಕುವವರು ಸಾಮಾನ್ಯರು. ಇತರರನ್ನು ತೊಂದರೆಗೊಳಿಸಿಯಾದರೂ ಸರಿಯೇ ತಮ್ಮ ಸುಖವನ್ನು ಸಾಧಿಸಿಕೊಳ್ಳಬೇಕೆನ್ನುವವರು ರಾಕ್ಷಸರು. ರಾಮನಿಗೆ ನೋವಾದರೂ ಸರಿಯೇ, ಸೀತೆ ತನ್ನವಳಾಗಬೇಕೆಂದ ರಾವಣ ರಾಕ್ಷಸ. ಆದರೆ ನಮ್ಮ Parallel thinking ಪ್ರಭೃತಿಗಳಿಗೆ ಅವನು ದೇವರು! ತಮಗೇನೂ ಲಾಭವಿಲ್ಲದಿದ್ದರೂ ಇತರರ ಸುಖವನ್ನು ನೋಡಲಾಗದೇ ಅವರಿಗೆ ತೊಂದರೆಯನ್ನೀಯುವವರಿಗೆ ಏನೆಂದು ಕರೆಯಲಿ! ಅವನಿಗೆ ಹೊಂದುವ ಹೆಸರೇ ಇಲ್ಲವಲ್ಲ! ಅವನು ಮನುಷ್ಯಲೋಕಕ್ಕೇ ಸೇರುವುದಿಲ್ಲ ಎಂದು ಭರ್ತೃಹರಿ ಅಭಿಪ್ರಾಯಪಟ್ಟಂತಿದೆ!

ಒಂದು ಸಮಾಜದ ಶಕ್ತಿ ನಿಂತಿರುವುದು ಮೊದಲೆರೆಡು ವರ್ಗಗಳು ಬಲಿಷ್ಠಗೊಳ್ಳುವುದರ ಮೇಲೆ. ಅದರಲ್ಲೂ ಮೊದಲ ವರ್ಗ. ಅದನ್ನೇ ನಾನು ಪ್ರಾರಂಭದಲ್ಲಿ ತ್ಯಾಗ ಎಂದು ಕರೆದಿದ್ದು. ತನಗಾಗಿ ಅಡಿಗೆ ಮಾಡಿಕೊಂಡವನು ತಟ್ಟೆಯಲ್ಲಿ ರೋಗವನ್ನು ಇಟ್ಟುಕೊಂಡು ಉಣ್ಣುತ್ತಿದ್ದಾನೆ ಎನ್ನುತ್ತಾನೆ ಶ್ರೀಕೃಷ್ಣ ಗೀತೆಯಲ್ಲಿ. ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರು ‘ಪರರಿಗಾಗಿ ಬದುಕಿದವರು ಮಾತ್ರ ಬದುಕಿದಂತೆ. ಇತರರು ಬದುಕಿಯೂ ಸತ್ತಂತೆ’ ಎನ್ನುತ್ತಾರೆ. ನೀಲಕಂಠ ಶಿವನು ಲೋಕವನ್ನು ರಕ್ಷಿಸಲು ಹಾಲಾಹಲವನ್ನು ನುಂಗಿದ್ದಕ್ಕೇ ದೇವಾಧಿದೇವ, ಮಹಾದೇವ ಎಂದು ಕರೆಯಲ್ಪಟ್ಟ. ದಧೀಚಿ, ಶಿಬಿ ಚಕ್ರವರ್ತಿ ಇವರೆಲ್ಲಾ ಅದೇ ಮಾರ್ಗ ಅನುಸರಿಸಿದವರು.

ಮನುಷ್ಯ ಕುಲದೀಪನಾಗಬೇಕಾದರೆ ತಾನು ಉರಿದು ಜಗತ್ತನ್ನು ಬೆಳಗುವ ಸೂರ್ಯನಾಗುವ ಧ್ಯೇಯವನ್ನಿಟ್ಟುಕೊಂಡಿರಬೇಕು. ಮನುಷ್ಯನ Philosophy ಇರುವುದೇ ಹಾಗೆ. ಆ ರೀತಿ ಬದುಕಿದವರೇ ಸಾಧು. ಒಂದು ರೀತಿಯಲ್ಲಿ ಸರ್ವಮುಕ್ತಿಯೇ ವೇದಾಂತ ಬೋಧಿಸುವ ಆದರ್ಶ. ಡಾ. ರಾಧಾಕೃಷ್ಣನ್ ಇದನ್ನು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ವೇದಾಂತ ಬೋಧಿಸುವುದು ಸ್ವಮುಕ್ತಿಯನ್ನಲ್ಲ. ಈ ಬೋಧನೆಗಳು ಸನಾತನ ಧರ್ಮದಲ್ಲಿ ನಖಶಿಖಾಂತ ಇವೆ. ಅವುಗಳನ್ನು ಆಮೂಲಾಗ್ರವಾಗಿ ಅನುಷ್ಠಾನಗೊಳಿಸಿದ ಮಹಾತ್ಮರ ಪಡೆಯೂ ಇದೆ. ಆದರೆ ಆಧುನಿಕ ಅಧ್ಯಯನಹೀನ ಟೀಕಾಕಾರರಿಗೆ ಏನೂ ಗೊತ್ತಿಲ್ಲ. ಅವರಿಗೆ ಅರ್ಥವಾಗುವ ಸಂಭವವೂ ಕಡಿಮೆಯೇ.

ಇನ್ನು ಎರಡನೇ ಶ್ರೇಣಿಯವರು ಯಜ್ಞ ದೃಷ್ಟಿಯವರು, ಸಂಶಿತವ್ರತರು ಎನ್ನುತ್ತಾನೆ ಶ್ರೀಕೃಷ್ಣ. ಪರಸ್ಪರ ತತ್ವವೇ, ಯಾವುದೂ ನನಗೆ ಮಾತ್ರ ಸೇರಿದ್ದಲ್ಲ ಎನ್ನುವುದೇ ಯಜ್ಞ. ನಾಡಿನ ರಾಜ ಮತ್ತು ಪ್ರಜಾ ಸಂಕುಲ ಬದುಕುವುದೇ ಈ ಮೇಲಿನ ಎರಡು ವರ್ಗಗಳ ನಿರಂತರ ದಾನ ಮತ್ತು ಯಜ್ಞಗಳ ಆಚರಣೆಯಿಂದ. ರಾಜನೇ ಪ್ರತಿಯೊಂದೂ ಮಾಡಲಾಗದು ಮತ್ತು ಸುಸಂಸ್ಕೃತ ಸಮಾಜದಲ್ಲಿ ದಾನಬುದ್ಧಿಯುಳ್ಳವರಿಗೆ ಕೊರತೆಯೇನೂ ಇರುವುದಿಲ್ಲ. ಆಡಳಿತ ವರ್ಗ ಅವರನ್ನು ಗೌರವಿಸಿ, ಸತ್ಕರಿಸಿ ಪೋ›ತ್ಸಾಹಿಸುತ್ತಿರಬೇಕು. ಇವರನ್ನು ತೊಂದರೆಗೊಳಪಡಿಸಲು ಕೊನೆಯ ಎರಡು ವರ್ಗ ಒಂದಲ್ಲ ಒಂದು ಕುಂಟುನೆಪವನ್ನು ಹುಡುಕುತ್ತಲೇ ಇರುತ್ತವೆ.

ಪಾಪಿಯನ್ನು ಪೋ›ತ್ಸಾಹಿಸುವುದು, ಸೇವಾವ್ರತರನ್ನು ನಿಂದಿಸುವುದು, ಅವರ ಉತ್ಸಾಹವನ್ನು ಕುಗ್ಗಿಸುವುದು ತನ್ನ ಏಕಮೇವ ವ್ರತವನ್ನಾಗಿರಿಸಿಕೊಂಡಿರುತ್ತಾರೆ ಇತ್ತೀಚೆಗೆ ನಾವು ನೋಡಿದಂತೆ ಕೊನೆಯ ಎರಡು ವರ್ಗದವರು. ಅನಕ್ಷರಸ್ಥ, ಅವಿದ್ಯಾವಂತ, ಅವಿವೇಕಗಳಿಂದ ಕೂಡಿದ ಪ್ರಜಾಪ್ರಭುತ್ವವೇನಾದರೂ ಇದ್ದುಬಿಟ್ಟರೆ ಇದರಂಥ ಸಾಮೂಹಿಕ ವಿಕೃತ ಮೋಜು ಬೇರಾವುದೂ ಇರುವುದಿಲ್ಲ. ಆರ್ಯ ಸಂಸ್ಕೃತಿಯಲ್ಲಿ ಪ್ರತಿ ಪೂಜೆಯ ನಂತರ ಒಂದು ಪ್ರಾರ್ಥನೆಯಿದೆ. ಅದರಲ್ಲಿ ‘ಸಜ್ಜನರು ಶಾಂತಿಯಿಂದ ಬದುಕಲಿ’ ಎಂದು ಬರುತ್ತದೆ. ಯಾವ ಗದ್ದಲ ಗಲಾಟೆಯೂ ಇಲ್ಲದೆ ತಮ್ಮ ಪಾಡಿಗೆ ತಾವು ಗೌರವಯುತವಾಗಿ ಸತ್ಕಾರ್ಯಗಳನ್ನೆಸಗುತ್ತಾ ಸಜ್ಜನರು ಕೀರ್ತಿವಂತರಾಗಿ ಬೆಳೆಯುತ್ತಿದ್ದರೆ ರಾಕ್ಷಸರೂ ಅನಾಮಿಕರೂ ಸುಮ್ಮನೆ ಕುಳಿತುಕೊಂಡು ನೋಡುತ್ತಾ ಇರುವರೇನು? ಸಾಧ್ಯವಿಲ್ಲದ ಮಾತು! ಅಂಥ ಸ್ವಾಮಿ ವಿವೇಕಾನಂದರನ್ನೇ ಬಿಡದ ವೀರಾಗ್ರಣಿಗಳಲ್ಲವೇ ಅವರು. ‘ಭಾರತೀಯರೇ! ನಿಮಗೆ ತಿನ್ನಿಸಲು ಬಂದರೆ ನನ್ನ ಕೈಯನ್ನೇ ಕಚ್ಚುತ್ತೀರಿ! ನಿಮ್ಮ ಕೈಯಲ್ಲಿ ಕಚ್ಚಿಸಿಕೊಂಡೂ ತಿನ್ನಿಸುತ್ತಿದ್ದೇನೆ’ ಎಂದು ನೋವುಂಡವರು ಅವರು. ಅಷ್ಟು ಲಜ್ಜೆಗೆಟ್ಟ ಮಾನುಷರಾಕ್ಷಸರು ನಾವು. ಆದರೆ ವಿವೇಕಾನಂದರು ತಿನ್ನಿಸುವುದನ್ನು ಮಾತ್ರ ಬಿಡಲಿಲ್ಲ. ಅವರು ಧರ್ಮವ್ರತರು, ಉಪನಿಷತ್ ಚಿಂತನೆಯನ್ನು ಅನುಸರಿಸಿದವರು, ಮಹಾದೇವ ಶಿವನ ಆರಾಧಕರು, ಆ ಮಹಾನ್ ಆರ್ಯೋಕ್ತಿಯನ್ನು ಮತ್ತೆ ಒಕ್ಕೊರಲಿನಿಂದ ಹಾಡೋಣ.

ದುರ್ಜನಃ ಸಜ್ಜನೋ ಭೂಯಾತ್ |

ಸಜ್ಜನಃ ಶಾಂತಿಮಾಪ್ನುಯಾತ್ |

ಶಾಂತೌ ಮುಚ್ಯೇತ ಬಂಧೇಭ್ಯೋ

ಮುಕ್ತಶ್ಚ ಅನ್ಯಾನ್ ವಿಮೋಚಯೇತ್ ||

ಅರ್ಥಾತ್ ‘ದುರ್ಜನರು ಸಜ್ಜನರಾಗಲಿ, ಸಜ್ಜನರು ಶಾಂತಿಯನ್ನು ಹೊಂದಲಿ, ಶಾಂತರು ಬಂಧನಗಳಿಂದ ಮುಕ್ತರಾಗಲಿ, ಮುಕ್ತರು ಅನ್ಯರನ್ನು ಮುಕ್ತರನ್ನಾಗಿಸಲಿ.’

ಈ ಮೇಲಿನ ಸೂಕ್ಷ್ಮಗಳು ಧರ್ಮ ಎಂಬ ವಿಷಯ(Religion)ವನ್ನು ಅಧ್ಯಯನ ಮಾಡಹೊರಟಾಗ ಸಿಗುವ ಪ್ರಾರಂಭಿಕ ಹಂತಗಳು. ಆದ್ದರಿಂದ ಶಿಕ್ಷಣದಲ್ಲಿ ಧರ್ಮ ಒಂದು Compulsory ವಿಷಯ ಆಗಿರಬೇಕು. ಇಲ್ಲೆಲ್ಲಾ ನಾವು ಕಾಣುವ ತತ್ವಗಳಲ್ಲಿ ಪ್ರಮುಖವಾದದ್ದೇ ಸಮಾಜದ ಮೊದಲ ಹಾಗೂ ಪ್ರಧಾನ ತತ್ವವೇ ಸತ್ಯಾನ್ವೇಷಣೆ ಆಗಿರಬೇಕು ಎನ್ನುವುದು. ಏಕೆಂದರೆ ವ್ಯಕ್ತಿಯಾಗಲಿ ಸಮಾಜವಾಗಲಿ ಸ್ಥಾನಮಾನಗಳನ್ನು ಪಡೆಯುವುದು ಸತ್ಯಾನ್ವೇಷಣೆಗೆ ಅದು ಕೊಡುವ ಮಹತ್ವದಿಂದ. ಈ ಅನ್ವೇಷಣೆಯ ಕ್ಷೇತ್ರವೇ (Field) ಪ್ರಕೃತಿ. ಬಾಹ್ಯ ಪ್ರಕೃತಿಯ ಅನ್ವೇಷಣೆಯಲ್ಲಿ ವಿಜ್ಞಾನಿಗಳು ತಮ್ಮನ್ನು ತೊಡಗಿಸಿಕೊಂಡರೆ ಆಂತರಿಕ ಪ್ರಕೃತಿಯನ್ನು ಋಷಿ ನೋಡಿಕೊಳ್ಳುತ್ತಾನೆ.

ಸುಖಕ್ಕೆ ಬೇಕಾದ ಉಪಕರಣಗಳನ್ನು, ವಾತಾವರಣವನ್ನು ವಿಜ್ಞಾನ ನಿರ್ವಿುಸಬಲ್ಲದು. ಆದರೆ ಸುಖವನ್ನೇ ಕೊಡಲು ಅದಕ್ಕೆ ಆಗುವುದಿಲ್ಲ. ಹವಾನಿಯಂತ್ರಿತ ಕೊಠಡಿ ನಿದ್ದೆಗೆ ಅನುಕೂಲ. ಆದರೆ ನಿದ್ದೆಯನ್ನೇ ಕೊಡಲಾರದು. ಅದು ಬರುವುದು ಆಂತರಿಕ ಪ್ರಕೃತಿ ಅಥವಾ ಮನಸ್ಸು ಸ್ಥಿರವಾಗಿದ್ದಾಗ. ಇದು ಆಧ್ಯಾತ್ಮದಿಂದ ಸಿಗುವಂಥಾದ್ದು. ಭಯೋತ್ಪಾದನೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅನ್ಯಾಯ, ಅನೀತಿಗಳಿಂದ ಅಧಿಕಾರ ಹಿಡಿಯುವುದು ಇವುಗಳಿಗೆ ವಿಜ್ಞಾನದಲ್ಲಿ ಪರಿಹಾರವಿಲ್ಲ. ಅದು ಬರುವುದು ಆಂತರಿಕ ಸತ್ಯಗಳ ಪರಿಚಯದಿಂದ ಅರ್ಥಾತ್ ಆಧ್ಯಾತ್ಮದಿಂದ. ಆದ್ದರಿಂದ ಆಧ್ಯಾತ್ಮ ವಿಜ್ಞಾನದ ಗುರಿ (Consummation). ಒಂದು ಪುಟ್ಟ ಲೇಖನದಲ್ಲಿ ಬರೆಯಲು ಸಾಧ್ಯವಾಗುವುದು ಇಷ್ಟೇ. ಈ ಸಮಗ್ರ ದೃಷ್ಟಿಕೋನವು ಜೀವನಕ್ಕೆ ಅನಿವಾರ್ಯ. ಸಮಗ್ರ ದೃಷ್ಟಿಕೋನ, ಸಮಗ್ರ ವ್ಯಕ್ತಿತ್ವ, ಸಮಗ್ರ ಜೀವನ ಇವು ಧರ್ಮದ ಮೂಲಭೂತ ಹಂತಗಳು. ಸನಾತನಿಗಳು ತಮ್ಮ ಧರ್ಮವನ್ನು ರೂಪಿಸಿದ್ದು ಹೀಗೆಯೇ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net