ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಬಲ

Kashmir Lake
Published on

ದಶಕಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆದಿರುವುದು ಅಲ್ಲಿನ ನಿವಾಸಿಗಳಿಗೆ ಮತ್ತು ದೇಶಕ್ಕೆ ಮಾಡಿದ ದೊಡ್ಡ ದ್ರೋಹ. ಈ ಕಳಂಕವನ್ನು, ಜನರಿಗೆ ಮಾಡಿದ ಅನ್ಯಾಯವನ್ನು ತೊಡೆದುಹಾಕಲು ಏನನ್ನಾದರೂ ಮಾಡಬೇಕೆಂಬುದು ನನ್ನ ಬಲವಾದ ಬಯಕೆಯಾಗಿತ್ತು. ಜಮ್ಮು-ಕಾಶ್ಮೀರದ ಜನರ ನೋವನ್ನು ನಿವಾರಿಸಲು ಸದಾಕಾಲ ಕೆಲಸ ಮಾಡಲು ಬಯಸುತ್ತೇನೆ.

ಸಕಾಲಿಕ
ಸಂವಿಧಾನದ 370 ಮತ್ತು 35ಎ ವಿಧಿಗಳ ರದ್ದತಿಯ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಡಿ. 11ರ ಐತಿಹಾಸಿಕ ತೀರ್ಪಿನ ಮೂಲಕ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿದಿದೆ. 2019ರ ಆ. 5ರಂದು ತೆಗೆದುಕೊಂಡ ನಿರ್ಧಾರವು ಸಾಂವಿಧಾನಿಕ ಏಕತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆಯೇ ಹೊರತು ವಿಘಟನೆಯಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಸರಿಯಾಗಿ ಗುರುತಿಸಿದೆ. 370ನೇ ವಿಧಿ ಶಾಶ್ವತವಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಗುರುತಿಸಿದೆ.

ಜಮ್ಮು, ಕಾಶ್ಮೀರ ಮತ್ತು ಲಡಾಖ್​ನ ಅದ್ಭುತವಾದ ಭೂದೃಶ್ಯಗಳು, ಪ್ರಶಾಂತ ಕಣಿವೆಗಳು ಮತ್ತು ಭವ್ಯವಾದ ಪರ್ವತಗಳು ತಲೆಮಾರುಗಳಿಂದ ಕವಿಗಳು, ಕಲಾವಿದರು ಮತ್ತು ಸಾಹಸಿಗಳ ಮನಸೂರೆಗೊಂಡಿವೆ. ಇದು ಭವ್ಯತೆಯು ಅಸಾಧಾರಣವಾದುದನ್ನು ಸಂಧಿಸುವ ಸ್ಥಳವಾಗಿದೆ. ಇಲ್ಲಿ ಹಿಮಾಲಯವು ಆಕಾಶದೆತ್ತರಕ್ಕೆ ನಿಂತಿದೆ. ಸರೋವರ-ನದಿಗಳ ಶುದ್ಧ ನೀರು ಸ್ವರ್ಗವನ್ನು ಪ್ರತಿಬಿಂಬಿಸುತ್ತವೆ. ಆದರೆ, ಕಳೆದ ಏಳು ದಶಕಗಳಿಂದ, ಈ ಸ್ಥಳಗಳು ಹಿಂಸಾಚಾರ ಮತ್ತು ಅಸ್ಥಿರತೆಗೆ ಸಾಕ್ಷಿಯಾಗಿದ್ದವು. ದುರದೃಷ್ಟವಶಾತ್, ಶತಮಾನಗಳ ವಸಾಹತುಶಾಹಿಯಿಂದಾಗಿ, ಆರ್ಥಿಕ ಮತ್ತು ಮಾನಸಿಕ ಅಧೀನತೆಯಿಂದಾಗಿ, ನಮ್ಮದು ಒಂದು ರೀತಿಯ ಗೊಂದಲಮಯ ಸಮಾಜವಾಗಿದೆ. ಮೂಲಭೂತ ವಿಷಯಗಳ ಬಗ್ಗೆ ಸ್ಪಷ್ಟತೆಯ ಬದಲು, ನಾವು ದ್ವಂದ್ವಕ್ಕೀಡಾಗುತ್ತೇವೆ. ವಿಷಾದದ ವಿಷಯವೆಂದರೆ, ಜಮ್ಮು-ಕಾಶ್ಮೀರ ಇಂತಹ ಮನಸ್ಥಿತಿಯ ದೊಡ್ಡ ಬಲಿಪಶುವಾಯಿತು.

ನನ್ನ ಜೀವನದ ಆರಂಭದಿಂದಲೂ ಜಮ್ಮು-ಕಾಶ್ಮೀರ ಆಂದೋಲನದೊಂದಿಗೆ ಸಂಪರ್ಕ ಹೊಂದುವ ಅವಕಾಶವನ್ನು ನಾನು ಪಡೆದಿದ್ದೇನೆ. ಜಮ್ಮು-ಕಾಶ್ಮೀರ ಕೇವಲ ರಾಜಕೀಯ ವಿಷಯವಲ್ಲ ಎಂಬ ಸೈದ್ಧಾಂತಿಕ ಚೌಕಟ್ಟಿಗೆ ಸೇರಿದವನು ನಾನು. ನೆಹರೂ ಸಂಪುಟದಲ್ಲಿ ಪ್ರಮುಖ ಖಾತೆ ಹೊಂದಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರು ದೀರ್ಘಕಾಲ ಸರ್ಕಾರದಲ್ಲಿ ಉಳಿಯಬಹುದಿತ್ತು. ಆದರೆ ಕಾಶ್ಮೀರ ಸಮಸ್ಯೆಯ ಕಾರಣದಿಂದಾಗಿ ಸಂಪುಟವನ್ನು ತೊರೆದರು. ಮುಂದೆ ತಮ್ಮ ಜೀವನವನ್ನು ಪಣಕ್ಕಿಟ್ಟು ಕಠಿಣ ಹಾದಿ ಹಿಡಿದರು. ಅವರ ಪ್ರಯತ್ನಗಳು ಮತ್ತು ತ್ಯಾಗದಿಂದಾಗಿ ಕೋಟ್ಯಂತರ ಭಾರತೀಯರು ಕಾಶ್ಮೀರ ಸಮಸ್ಯೆಯೊಂದಿಗೆ ಭಾವನಾತ್ಮಕವಾಗಿ ಗುರುತಿಸಿಕೊಳ್ಳುವಂತಾಯಿತು. ವರ್ಷಗಳ ನಂತರ, ಶ್ರೀನಗರದ ಸಾರ್ವಜನಿಕ ಸಭೆಯೊಂದರಲ್ಲಿ ಅಟಲ್​ಜಿ ‘ಇನ್ಸಾನಿಯತ್’, ‘ಜಮ್ಹೂರಿಯಾತ್’ ಮತ್ತು ‘ಕಾಶ್ಮೀರಿಯಾತ್’ ಎಂಬ ಪ್ರಬಲ ಸಂದೇಶ ನೀಡಿದರು. ಇದು ಸದಾ ಸ್ಪೂರ್ತಿಯ ಮೂಲ.

ಜಮ್ಮು-ಕಾಶ್ಮೀರದಲ್ಲಿ ನಡೆದಿರುವುದು ಅಲ್ಲಿನ ನಿವಾಸಿಗಳಿಗೆ ಮತ್ತು ನಮ್ಮ ದೇಶಕ್ಕೆ ಮಾಡಿದ ದೊಡ್ಡ ದ್ರೋಹ ಎಂಬುದು ನನ್ನ ದೃಢ ನಂಬಿಕೆಯಾಗಿತ್ತು. ಈ ಕಳಂಕವನ್ನು, ಜನರಿಗೆ ಮಾಡಿದ ಅನ್ಯಾಯವನ್ನು ತೊಡೆದುಹಾಕಲು ನಾನು ಏನನ್ನಾದರೂ ಮಾಡಬೇಕೆಂಬುದು ನನ್ನ ಬಲವಾದ ಬಯಕೆಯಾಗಿತ್ತು. ಜಮ್ಮು-ಕಾಶ್ಮೀರದ ಜನರ ನೋವನ್ನು ನಿವಾರಿಸಲು ನಾನು ಸದಾಕಾಲ ಕೆಲಸ ಮಾಡಲು ಬಯಸುತ್ತೇನೆ.

ಮೂಲಭೂತವಾಗಿ ಹೇಳುವುದಾದರೆ 370 ಮತ್ತು 35ಎ ವಿಧಿಗಳು ಪ್ರಮುಖ ಅಡೆತಡೆಗಳಾಗಿದ್ದವು. ಒಡೆಯಲಾಗದ ಗೋಡೆಯಂತೆ ಕಾಣುತ್ತಿದ್ದವು. ಇದರಿಂದ ಬಡವರು, ದೀನರು ಬಳಲುತ್ತಿದ್ದರು. ಈ ವಿಧಿಗಳು ಜಮ್ಮು-ಕಾಶ್ಮೀರದ ಜನರು ತಮ್ಮ ಇತರ ಸಹ ಭಾರತೀಯರು ಪಡೆದ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ಎಂದಿಗೂ ಪಡೆಯದಂತೆ ಮಾಡಿದ್ದವು. ಕಳೆದ ಹಲವು ದಶಕಗಳಲ್ಲಿ ಸಮಸ್ಯೆಯನ್ನು ಹತ್ತಿರದಿಂದ ನೋಡಿದ ಒಬ್ಬ ಕಾರ್ಯಕರ್ತನಾಗಿ, ನಾನು ಸಮಸ್ಯೆಯ ಸಂಕೀರ್ಣತೆಯ ಸೂಕ್ಷ್ಮ ತಿಳಿವಳಿಕೆ ಹೊಂದಿದ್ದೆ. ಆದರೂ, ನನಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಅದೆಂದರೆ, ಜಮ್ಮು-ಕಾಶ್ಮೀರದ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ ಮತ್ತು ತಮ್ಮ ಸಾಮರ್ಥ್ಯ-ಕೌಶಲ್ಯಗಳ ಆಧಾರದ ಮೇಲೆ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಾರೆ, ತಮ್ಮ ಮಕ್ಕಳ ಉತ್ತಮ ಗುಣಮಟ್ಟದ ಜೀವನವನ್ನು, ಹಿಂಸೆ-ಅನಿಶ್ಚಿತತೆಯಿಂದ ಮುಕ್ತವಾದ ಜೀವನವನ್ನು ಬಯಸುತ್ತಾರೆ ಎಂಬುದು.

2014ರಲ್ಲಿ ನಾವು ಅಧಿಕಾರ ವಹಿಸಿಕೊಂಡ ನಂತರ, ಜಮ್ಮು-ಕಾಶ್ಮೀರದಲ್ಲಿ ವಿನಾಶಕಾರಿ ಪ್ರವಾಹಗಳು ಸಂಭವಿಸಿದವು. ಕಣಿವೆಯಲ್ಲಿ ಸಾಕಷ್ಟು ಹಾನಿಯಾಯಿತು. ಆ ವರ್ಷ ಸೆಪ್ಟೆಂಬರ್​ನಲ್ಲಿ ನಾನು ಪರಿಸ್ಥಿತಿಯನ್ನು ತಿಳಿಯಲು ಶ್ರೀನಗರಕ್ಕೆ ಹೋಗಿದ್ದೆ. ಪುನರ್ವಸತಿಗೆ 1000 ಕೋಟಿ ರೂ. ನೆರವು ಘೊಷಿಸಿದೆ. ನಾನು ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿ ಮಾಡುತ್ತಿರುತ್ತೇನೆ. ಈ ಸಂವಾದಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ- ಜನರು ಅಭಿವೃದ್ಧಿಯನ್ನು ಬಯಸುವುದು ಮಾತ್ರವಲ್ಲ, ಅವರು ದಶಕಗಳಿಂದ ಚಾಲ್ತಿಯಲ್ಲಿರುವ ಭ್ರಷ್ಟಾಚಾರದಿಂದ ಮುಕ್ತಿಯನ್ನೂ ಬಯಸುತ್ತಾರೆ. ಜಮ್ಮು-ಕಾಶ್ಮೀರದಲ್ಲಿ ನಾವು ಯಾರನ್ನು ಕಳೆದುಕೊಂಡೆವೋ ಅವರ ಸ್ಮರಣಾರ್ಥ, ದೀಪಾವಳಿಯನ್ನು ಆಚರಿಸದಿರಲು ಅದೇ ವರ್ಷ ನಿರ್ಧರಿಸಿದೆ. ದೀಪಾವಳಿ ದಿನ ಜಮ್ಮು-ಕಾಶ್ಮೀರದಲ್ಲಿರಲು ನಿರ್ಧರಿಸಿದೆ.

ಜಮ್ಮು-ಕಾಶ್ಮೀರದ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸಲು ನಮ್ಮ ಸರ್ಕಾರದ ಸಚಿವರು ಆಗಾಗ ಅಲ್ಲಿಗೆ ಹೋಗಿ ಜನರೊಂದಿಗೆ ನೇರ ಸಂವಾದ ನಡೆಸಬೇಕೆಂದು ನಿರ್ಧರಿಸಿದೆವು. ಈ ಭೇಟಿಗಳು ಅಲ್ಲಿ ಸೌಹಾರ್ದ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. 2014ರ ಮೇನಿಂದ 2019ರ ಮಾರ್ಚ್​ವರೆಗೆ ಸಚಿವರ 150ಕ್ಕೂ ಹೆಚ್ಚು ಭೇಟಿಗಳು ನಡೆದಿವೆ. ಇದೊಂದು ದಾಖಲೆ. 2015ರ ವಿಶೇಷ ಪ್ಯಾಕೇಜ್ ಜಮ್ಮು-ಕಾಶ್ಮೀರದ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ. ಇದು ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಉತ್ತೇಜನ ಮತ್ತು ಕರಕುಶಲ ಉದ್ಯಮಕ್ಕೆ ಬೆಂಬಲವಾಗಿದೆ.

ನಾವು ಜಮ್ಮು-ಕಾಶ್ಮೀರದಲ್ಲಿ ಕ್ರೀಡೆಯ ಶಕ್ತಿಯನ್ನು ಬಳಸಿಕೊಂಡಿದ್ದೇವೆ, ಯುವಜನರ ಕನಸುಗಳಿಗೆ ಕಿಚ್ಚು ಹೊತ್ತಿಸುವ ಸಾಮರ್ಥ್ಯವನ್ನು ಗುರುತಿಸಿದ್ದೇವೆ. ಕ್ರೀಡಾ ಉಪಕ್ರಮಗಳ ಮೂಲಕ, ಅವರ ಆಕಾಂಕ್ಷೆಗಳು ಮತ್ತು ಭವಿಷ್ಯದಲ್ಲಿ ಅಥ್ಲೆಟಿಕ್ ಹಾದಿ ಹಿಡಿಯುವ ಅವರ ರೂಪಾಂತರದ ಪರಿಣಾಮವನ್ನು ನೋಡಿದ್ದೇವೆ. ಕ್ರೀಡಾ ಸ್ಥಳಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ತರಬೇತುದಾರರು ಲಭ್ಯವಾಗುವಂತೆ ಮಾಡಲಾಗಿದೆ. ಅತ್ಯಂತ ವಿಶಿಷ್ಟ ವಿಷಯವೆಂದರೆ ಸ್ಥಳೀಯ ಫುಟ್​ಬಾಲ್ ಕ್ಲಬ್​ಗಳ ಸ್ಥಾಪನೆಯನ್ನು ಪೋ›ತ್ಸಾಹಿಸುವುದು. ಫಲಿತಾಂಶಗಳು ಅತ್ಯುತ್ತಮವಾಗಿದ್ದವು. ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ್ತಿ ಅಫ್ಶಾನ್ ಆಶಿಕ್ ಹೆಸರು ನೆನಪಿಗೆ ಬರುತ್ತದೆ- 2014ರ ಡಿಸೆಂಬರ್​ನಲ್ಲಿ ಅವರು ಶ್ರೀನಗರದಲ್ಲಿ ಕಲ್ಲುತೂರಾಟ ನಡೆಸುತ್ತಿದ್ದ ಗುಂಪಿನ ಭಾಗವಾಗಿದ್ದರು. ಆದರೆ ಸೂಕ್ತ ಪೋ›ತ್ಸಾಹ ದೊರೆತಿದ್ದರಿಂದ ಆಕೆ ಫುಟ್ಬಾಲ್ ಕಡೆಗೆ ತಿರುಗಿದರು, ಅವರನ್ನು ತರಬೇತಿಗೆ ಕಳುಹಿಸಲಾಯಿತು, ಆಟದಲ್ಲಿ ಮಿಂಚಿದರು. ಇತರ ಯುವಕರು ಕಿಕ್ ಬಾಕ್ಸಿಂಗ್, ಕರಾಟೆ ಮತ್ತು ಇತರ ಕ್ರೀಡೆಗಳಲ್ಲಿ ಮಿಂಚಲು ಪ್ರಾರಂಭಿಸಿದರು.

ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಂಚಾಯತ್ ಚುನಾವಣೆಗಳು ಪ್ರಮುಖವಾಗಿವೆ. ಮತ್ತೊಮ್ಮೆ ನಾವು ಅಧಿಕಾರದಲ್ಲಿ ಉಳಿಯುವ ಅಥವಾ ನಮ್ಮ ತತ್ವಗಳ ಮೇಲೆ ನಿಲ್ಲುವ ಆಯ್ಕೆಯ ಸವಾಲನ್ನು ಎದುರಿಸಿದೆವು- ಆಯ್ಕೆ ಎಂದಿಗೂ ಕಠಿಣವಾಗಿರಲಿಲ್ಲ. ನಾವು ಸರ್ಕಾರವನ್ನು ಬಿಡುತ್ತೇವೆ, ಆದರೆ ನಮ್ಮ ಆದರ್ಶಗಳನ್ನಲ್ಲ. ಪಂಚಾಯತ್ ಚುನಾವಣೆಯ ಯಶಸ್ಸು ಅಲ್ಲಿನ ಜನರ ಪ್ರಜಾಸತ್ತಾತ್ಮಕ ಗುಣವನ್ನು ಸೂಚಿಸುತ್ತದೆ. ಹಳ್ಳಿಗಳ ಪ್ರಧಾನರೊಂದಿಗೆ ನಡೆಸಿದ ಸಂವಾದವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇತರ ಸಮಸ್ಯೆಗಳ ಜತೆಗೆ, ನಾನು ಅವರಿಗೆ ಯಾವುದೇ ಹಂತದಲ್ಲೂ ಶಾಲೆಗಳನ್ನು ಸುಡಬಾರದು, ಬೇರೆಯವರೂ ಆ ಕೆಲಸ ಮಾಡದಂತೆ ಖಚಿತಪಡಿಸಿಕೊಳ್ಳಬೇಕು ಎಂದು ವಿನಂತಿಸಿದೆ. ಅವರು ಇದಕ್ಕೆ ಬದ್ಧವಾಗಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಅಷ್ಟಕ್ಕೂ, ಶಾಲೆಗಳನ್ನು ಸುಟ್ಟರೆ ಹೆಚ್ಚು ನಷ್ಟಕ್ಕೊಳಗಾಗುವವರು ಪುಟ್ಟ ಮಕ್ಕಳು.

ಆಗಸ್ಟ್ 5ರ ಐತಿಹಾಸಿಕ ದಿನವು ಪ್ರತಿಯೊಬ್ಬ ಭಾರತೀಯನ ಹೃದಯ ಮತ್ತು ಮನಸ್ಸಿನಲ್ಲಿ ಅಚ್ಚೊತ್ತಿದೆ. ನಮ್ಮ ಸಂಸತ್ತು 370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಅಂಗೀಕರಿಸಿತು. ಅಂದಿನಿಂದ, ಜಮ್ಮು, ಕಾಶ್ಮೀರ ಮತ್ತು ಲಡಾಖ್​ನಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ನ್ಯಾಯಾಲಯದ ತೀರ್ಪು ಈಗ ಬಂದಿದೆ. ಆದರೆ ಅಭಿವೃದ್ಧಿಯ ಅಲೆಯನ್ನು ಜನತಾ ನ್ಯಾಯಾಲಯ 4 ವರ್ಷಗಳಿಂದ ನೋಡಿದೆ. 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸುವ ಸಂಸತ್ತಿನ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.

ರಾಜಕೀಯವಾಗಿ, ಕಳೆದ 4 ವರ್ಷಗಳಲ್ಲಿ ತಳಮಟ್ಟದ ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಮಹಿಳೆಯರು, ಆದಿವಾಸಿಗಳು, ಪರಿಶಿಷ್ಟ ಜಾತಿ, ಪಂಗಡದವರಿಗೆ ಸವಲತ್ತುಗಳು ಸಿಗುತ್ತಿರಲಿಲ್ಲ. 2019 ಆ. 5ರ ನಿರ್ಧಾರ ಎಲ್ಲವನ್ನೂ ಬದಲಾಯಿಸಿತು. ಎಲ್ಲ ಕೇಂದ್ರೀಯ ಕಾನೂನುಗಳು ಈಗ ಭಯ-ಪಕ್ಷಪಾತವಿಲ್ಲದೆ ಅನ್ವಯವಾಗುತ್ತಿವೆ. ಪ್ರಾತಿನಿಧ್ಯ ಹೆಚ್ಚು ವ್ಯಾಪಕವಾಗಿದೆ- 3 ಹಂತದ ಪಂಚಾಯತ್​ರಾಜ್ ವ್ಯವಸ್ಥೆ ಜಾರಿಯಲ್ಲಿದೆ, ಬ್ಲಾಕ್ ಅಭಿವೃದ್ಧಿ ಪರಿಷತ್ (ಬಿಡಿಸಿ) ಚುನಾವಣೆಗಳು ನಡೆದಿವೆ. ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತ ಸಮುದಾಯಗಳು ಅಭಿವೃದ್ಧಿಯ ಫಲವನ್ನು ಪಡೆಯಲು ಪ್ರಾರಂಭಿಸಿವೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಪರಿಪೂರ್ಣತೆಯ ಮಟ್ಟವನ್ನು ತಲುಪಿವೆ. ಹೀಗಾಗಿ ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಿವೆ. ಇವುಗಳಲ್ಲಿ ಸೌಭಾಗ್ಯ, ಉಜ್ವಲಾ ಮತ್ತು ಉಜಾಲ ಯೋಜನೆಗಳು ಸೇರಿವೆ. ವಸತಿ, ನಲ್ಲಿ ನೀರಿನ ಸಂಪರ್ಕ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ದಾಪುಗಾಲು ಹಾಕಲಾಗಿದೆ. ಜನರಿಗೆ ಪ್ರಮುಖ ಸವಾಲಾಗಿರುವ ಆರೋಗ್ಯ ರಕ್ಷಣೆಯ ಮೂಲಸೌಕರ್ಯವನ್ನು ಉನ್ನತೀಕರಿಸಲಾಗಿದೆ. ಭ್ರಷ್ಟಾಚಾರ, ಪಕ್ಷಪಾತದ ಕೂಪವಾಗಿದ್ದ ಸರ್ಕಾರಿ ಹುದ್ದೆಗಳನ್ನು ಪಾರದರ್ಶಕ ರೀತಿಯಲ್ಲಿ ಭರ್ತಿ ಮಾಡಲಾಗಿದೆ. ಮೂಲಸೌಕರ್ಯ, ಪ್ರವಾಸೋದ್ಯಮಕ್ಕೆ ಉತ್ತೇಜನ ಎಲ್ಲರಿಗೂ ಕಾಣಿಸುತ್ತಿದೆ. ದಾಖಲೆಯ ಬೆಳವಣಿಗೆ, ದಾಖಲೆಯ ಅಭಿವೃದ್ಧಿ, ದಾಖಲೆ ಪ್ರವಾಸಿಗರ ಒಳಹರಿವು ಕಂಡುಬರುತ್ತಿದೆ. ಡಿ. 11ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮನೋಭಾವವನ್ನು ಬಲಪಡಿಸಿದೆ - ಅದು ನಮಗೆ ಏಕತೆಯ ಬಂಧಗಳು ಮತ್ತು ಉತ್ತಮ ಆಡಳಿತದ ಹಂಚಿಕೆಯ ಬದ್ಧತೆಯನ್ನು ನೆನಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net