

| ಜಗನ್ನಾಥ ದೇಸಾಯಿ ಗಂಗಾವತಿ
ವಿದ್ಯುತ್ ದರ ಏರಿಕೆ ಮತ್ತು ಮುಂಗಾರು ವೈಫಲ್ಯ ಪರಿಣಾಮ ಅಕ್ಕಿ ಹೊರೆಯಾಗುವ ಮುನ್ಸೂಚನೆ ಸಿಕ್ಕಿವೆ. ಸರ್ಕಾರವು ಈಗಾಗಲೆ ಅನ್ನಭಾಗ್ಯದ ಅಕ್ಕಿಗೆ ಪರದಾಡುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಅಕ್ಕಿ ದರವೇ ಗಗನಮುಖಿಯಾಗುವ ಆತಂಕ ವ್ಯಕ್ತವಾಗಿದೆ.
ರಾಜ್ಯದ ಭತ್ತದ ಕಣಜ ಎಂದೇ ಕರೆಯಿಸಿಕೊಂಡಿರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಯ ಮೂಲಕ ಮೊದಲ ಹಂಗಾಮಿಗೆ ನೀರು ದೊರೆಯುವುದೇ ಅನುಮಾನ ಎಂಬಂಥ ಸ್ಥಿತಿಯಿದೆ. ವಿದ್ಯುತ್ ದರ ಏರಿಕೆಯಿಂದ ಅಕ್ಕಿ ಗಿರಣಿಗಳ ಮಾಲೀಕರೂ ಬೆಚ್ಚಿಬಿದ್ದಿದ್ದು, ಉತ್ಪಾದನಾ ವೆಚ್ಚ ಏರಿಕೆ ಆಗುವುದರಿಂದ ಅಕ್ಕಿ ದರವೂ ಹೆಚ್ಚಳ ಖಚಿತವಾಗಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆಯಾಗಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ತಗ್ಗಿದೆ. ಜಲಾಶಯದಲ್ಲಿ ಸಂಗ್ರಹವಿರುವ ನೀರು ಕುಡಿಯಲು ಸಾಲದು ಎಂಬಂಥ ಸ್ಥಿತಿಯಿದೆ. ಸದ್ಯ ಜಲಾಶಯದಲ್ಲಿ 1576.53 ಅಡಿ ನೀರಿದೆ. ಇದು ಕಳೆದ ಹತ್ತು ವರ್ಷಗಳ ಸರಾಸರಿಗಿಂತ ಕಡಿಮೆಯಾಗಿದೆ. 10 ವರ್ಷಗಳ ಸರಾಸರಿ ನೀರಿನ ಸಂಗ್ರಹಣೆ ಪ್ರಮಾಣ 1590.68 ಅಡಿ ಆಗಿದ್ದು, ಒಳಹರಿವು ಈಗ 279 ಕ್ಯೂಸೆಕ್ ಆಗಿದೆ. ಮುಂಗಾರು ಹಂಗಾಮಿನ ಆರಂಭದಲ್ಲಿ ನದಿ ಮೂಲದ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿತ್ತು. ಅಂತೆಯೇ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿತ್ತು. ಪ್ರಸಕ್ತ ವರ್ಷ ಈ ಪ್ರಮಾಣ ತೀವ್ರ ಕುಸಿತ ಕಂಡಿದೆ. ಪರಿಣಾಮ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಳ್ಳುವ ಆತಂಕವೂ ಎದುರಾಗಿದೆ. ಇದೇ ರೀತಿ ರಾಜ್ಯದಲ್ಲಿ ಭತ್ತ ಬೆಳೆಯುವ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಭತ್ತ ಬೆಳೆಗಾರರು ಕೈಚೆಲ್ಲಿ ಕುಳಿತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುವ ಭತ್ತದ ಗುಣಮಟ್ಟವೂ ಉತ್ತಮವಾಗಿರುತ್ತದೆ. ಅಂತೆಯೇ ಈ ಹಂಗಾಮಿನಲ್ಲಿ ಬೆಳೆವ ಭತ್ತವನ್ನು ಅಕ್ಕಿ ಗಿರಣಿಗಳ ಮಾಲೀಕರು ಸಂಗ್ರಹಿಸಿಕೊಟ್ಟುಕೊಂಡು, ಸಣ್ಣ ಸೋನಾ ಮಸೂರಿ ಅಕ್ಕಿ ತಯಾರಿಸಿ ಮಾರಾಟ ಮಾಡುವುದು ರೂಢಿ. ರಾಜ್ಯದ 14 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತದೆ. ಅದರಲ್ಲೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಭತ್ತಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ಮುಂಗಾರು ವೈಫಲ್ಯದಿಂದ ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಕ್ಕಿಯ ಬೆಲೆ ಕಳೆದ ಹಂಗಾಮಿನ ಅಂತ್ಯಕ್ಕೆ 4800 ಪ್ರತಿ ಕ್ವಿಂಟಾಲ್ ಆಗಿದ್ದು, ಇದೀಗ 5500 ರೂ. ವರೆಗೆ ಬಂದು ತಲುಪಿದೆ.
ಗಿರಣಿ ಮಾಲೀಕರಿಗೆ ಹೊರೆ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಿಂದ ಅಕ್ಕಿ ಗಿರಣಿಗಳ ಮಾಲೀಕರಿಗೆ ಹೊರೆಯಾಗಿದೆ. ಹೆಚ್ಚುವರಿ ಉತ್ಪಾದನಾ ವೆಚ್ಚ ಉದ್ಯಮಿದಾರರ ಹೆಗಲೇರಲಿದೆ. ಅಂತೆಯೇ ಈ ಬಗ್ಗೆ ಸರ್ಕಾರಕ್ಕೆ ಉದ್ಯಮಿದಾರರು ಸಂದೇಶ ರವಾನಿಸಿದ್ದು ಅಕ್ಕಿ ಬೆಲೆಯೇರಿಕೆಯ ಮಾಹಿತಿ ನೀಡಿದ್ದಾರೆ. ಮುಂಗಾರು ವೈಫಲ್ಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯ ಕೊರತೆ ಆಗುವಂತೆ ಮಾಡಲಿದ್ದು, ದರ ಏರಿಕೆಗೆ ಕಾರಣವಾಗಲಿದೆ. ಮುಂಗಾರು ತಡವಾಗಿ ಕಾಲುವೆಯಿಂದ ನೀರು ದೊರೆಯುವುದು ವಿಳಂಬವಾದರೆ ಭತ್ತದ ಗುಣಮಟ್ಟದ ಮೇಲೂ ಪರಿಣಾಮದ ಆತಂಕವಿದೆ. ಹೀಗಾಗಿ ಸದ್ಯ ಲಭ್ಯವಿರುವ ಭತ್ತವನ್ನು ಅಕ್ಕಿಗಿರಣಿಗಳ ಮಾಲೀಕರು ಅಕ್ಕಿಯ ಉತ್ಪಾದನೆಗೆ ಬಳಕೆ ಮಾಡಬೇಕಿರುವುದರಿಂದ ಉತ್ಪಾದನೆ ಹೊರೆ ಹೆಚ್ಚಳವಾಗಿ ದರ ಏರಿಸುವ ಅನಿವಾರ್ಯತೆಗೆ ಸಿಲುಕಲಿದ್ದಾರೆ.
ವಿದ್ಯುತ್ ದರ ಏರಿಕೆ ಹಾಗೂ ಮುಂಗಾರು ವೈಫಲ್ಯದಿಂದ ಭತ್ತದ ಉತ್ಪಾದನೆ ಮತ್ತು ಅಕ್ಕಿ ತಯಾರಿಕೆ ಮೇಲೆ ಹೊರೆ ಬೀಳಲಿದೆ. ಅಕ್ಕಿ ದರವೂ ಹೆಚ್ಚಳ ಆಗಲಿದೆ. ಪ್ರತಿ ಕ್ವಿಂಟಾಲ್ ಆರು ಸಾವಿರ ರೂ. ಗಡಿ ದಾಟುವ ಸಾಧ್ಯತೆ ದಟ್ಟವಾಗಿದೆ. | ಸಾವಿತ್ರಿ ಪುರುಷೋತ್ತಮ, ಕಾರ್ಯಾಧ್ಯಕ್ಷ, ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘ, ರಾಯಚೂರು
ದರ ಏರಿಸುವ ಅನಿವಾರ್ಯತೆ: ರಾಜ್ಯದಲ್ಲಿ ಸದ್ಯ ಎರಡು ಸಾವಿರ ಅಕ್ಕಿ ಗಿರಣಿಗಳಿದ್ದು, ಈ ಪೈಕಿ ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿವೆ. ಅವುಗಳು ಭತ್ತದ ಕೊರತೆ ಎದುರಿಸುವ ಜತೆಗೆ ಆರ್ಥಿಕವಾಗಿ ಹೊರೆ ತಪ್ಪಿಸಿಕೊಳ್ಳಲು ಅಕ್ಕಿ ದರ ಏರಿಸುವ ಅನಿವಾರ್ಯತೆಗೆ ಸಿಲುಕಿವೆ. ಈಗಿನ ಮಾಹಿತಿಯಂತೆ ಅಕ್ಕಿ ದರವು ಭವಿಷ್ಯದಲ್ಲಿ ಪ್ರತಿ ಕ್ವಿಂಟಾಲ್ಗೆ ಆರು ಸಾವಿರ ರೂ. ಗಡಿ ದಾಟುವುದು ನಿಶ್ಚಿತ ಎಂಬ ಮಾತು ಉದ್ಯಮಿಗಳಿಂದ ಕೇಳಿಬಂದಿದೆ.
ರಾಜ್ಯದಲ್ಲಿ ಭತ್ತ ಬೆಳೆಯುವ ಪ್ರದೇಶ: ಎಲ್ಲ ಹಂಗಾಮುಗಳು ಒಳಗೊಂಡಂತೆ ರಾಜ್ಯದಲ್ಲಿ ಭತ್ತ ಬೆಳೆಯುವ ಪ್ರದೇಶ ಮತ್ತು ಅಂಕಿ ಅಂಶಗಳ ಅಂದಾಜು ಮಾಹಿತಿ ಹೀಗಿದೆ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 1,78,460 ಹೆಕ್ಟೇರ್ನಲ್ಲಿ ಭತ್ತ ಬೆಳೆಯಾಗುತ್ತಿದೆ. ಅದರಂತೆ ಕೊಪ್ಪಳ -1,01,924 ಹೆಕ್ಟೇರ್, ರಾಯಚೂರು- 3,46,215 ಹೆ., ಯಾದಗಿರಿ -1,431,22ಹೆ., ತುಮಕೂರು- 4,480 ಹೆ., ಮಂಡ್ಯ -72,478 ಹೆ., ದಾವಣಗೆರೆ -1,260,53 ಹೆ., ಶಿವಮೊಗ್ಗ - 88,216 ಹೆ., ಉತ್ತರ ಕನ್ನಡ- 47,001 ಹೆ., ಬೆಳಗಾವಿ-60,730 ಹೆ., ಹಾವೇರಿ ಜಿಲ್ಲೆಯಲ್ಲಿ 43,380 ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈಗ ಇಷ್ಟೂ ಜಿಲ್ಲೆಗಳ ಮಿಲ್ ಮಾಲಿಕರಿಗೆ, ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಭತ್ತದ ದರದ ಬಿಸಿ ತಾಕಲಿದೆ.