

ಸ್ವಂತ ಶಕ್ತಿಯಿಂದ ದುಡಿಯಬೇಕೆಂಬ ಆಸೆ ಎಲ್ಲ ಮಹಿಳೆಯರಿಗೂ ಇರುತ್ತದೆ. ಆದರೆ ಮಕ್ಕಳು, ಮನೆ ಕೆಲಸದಂತಹ ಸರಣಿ ಸವಾಲುಗಳು ಈ ಆಸೆಗೆ ಅಡ್ಡಿ ಆಗುತ್ತವೆ. ಈ ಸವಾಲುಗಳನ್ನು ಮೀರಿ ಕಾರ್ಯಕ್ರಮಗಳಲ್ಲಿ ಅಡುಗೆ ಬಡಿಸುವ ಪಾರ್ಟ್ಟೈಮ್ ಜಾಬ್ ರಾಜ್ಯದಲ್ಲಿ ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ. ಇದೇ ಕಾಯಕದಲ್ಲಿ ಕೈಜೋಡಿಸುವ ಮೂಲಕ ನೂರಾರು ಹೆಣ್ಮಕ್ಕಳು ಶಾಲೆ, ಕಾಲೇಜು ಶುಲ್ಕವನ್ನು ತಾವೇ ಸಂಪಾದಿಸುತ್ತಿದ್ದಾರೆ.
‘ನಾವೇನು ಸರ್ಕಾರದ ಬಿಟ್ಟಿ ಭಾಗ್ಯ ನಂಬಿ ಕೂತಿಲ್ಲ. ಈ ಸರ್ಕಾರ ಇರೋವರೆಗೆ ದುಡ್ಡು ಕೊಡ್ತಾರೆ. ಬೇರೆಯವರು ಬಂದ್ರೆ ಹಣ ಸಿಗುತ್ತಾ?. ವಾರಕ್ಕೆ ಎರಡು ಕಾರ್ಯಕ್ರಮ ಸಿಕ್ಕರೆ ಸಾಕು. ಮನೆ, ತೋಟದ ಕೆಲಸ ಮುಗಿಸಿ 3 ಗಂಟೆ ಹೋಗಿ ಬಂದ್ರೆ ಸಾವಿರ ರೂ. ದುಡ್ಡು 2 ಟೈಮ್ ಊಟ ಸಿಗುತ್ತೆ, ಕೆಲಸ ಮಾಡಿ ಬಂದ್ರೆ ಒಳ್ಳೆಯ ವ್ಯಾಯಾಮ ಆಗುತ್ತೆ. ಇಷ್ಟು ಸಾಕಲ್ವಾ?’ ಶೃಂಗೇರಿ ಸನಿಹದ ಮಾಗಲು ಗ್ರಾಮದ ಭಾಗ್ಯ ಈ ಮಾತನ್ನು ಹೇಳುವಾಗ ಅವರಿಗೆ ಸಂಕೋಚ ಇರಲಿಲ್ಲ. ಮರ್ಯಾದೆಯಿಂದ ದುಡಿದು ತಿನ್ನೋಕೆ ನಾಚಿಕೆ ಏಕೆ ಆಗ್ಬೇಕು ಎಂಬ ಅವರ ಪ್ರಶ್ನೆ ಕೂಡ ಸರಿ ಅಲ್ವಾ? ಇದು ಭಾಗ್ಯ ಅವರ ಒಬ್ಬರ ಮಾತಲ್ಲ, ಚಿಕ್ಕಮಗಳೂರಿನ ಶೃಂಗೇರಿ, ಕಳಸ, ಜೈಪುರ, ಎನ್ಆರ್ ಪುರ, ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಅಷ್ಟೇ ಏಕೆ ರಾಜ್ಯದ ಬಹುತೇಕ ಕಡೆ ಸಾವಿರಾರು ಮಹಿಳೆಯರಿಗೆ ‘ಅನ್ನ’ಪೂರ್ಣೆ ಹೊಸ ಭರವಸೆಯ ಬದುಕು ಕಟ್ಟಿಕೊಟ್ಟಿದ್ದಾಳೆ. ಕೇಟರಿಂಗ್, ಹೋಟೆಲ್ ನಡೆಸುವ ಮೂಲಕ ಸಾವಿರಾರು ಮಹಿಳೆಯರು ಕರ್ನಾಟಕ ಏಕೆ? ದೇಶಾದ್ಯಂತ ಬದುಕು ಕಟ್ಟಿಕೊಂಡಿರುವ ಹಲವು ನಿದರ್ಶನಗಳಿವೆ. ಇದು ಹಣ, ಅನುಕೂಲ ಇದ್ದವರಿಗೆ ಆಯ್ತು. ತೋಟ, ಹೊಲ, ಗದ್ದೆ, ಮನೆಯಲ್ಲಿ ಹಿರಿಯರು, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದ್ದವರಿಗೆ ಹೋಟೆಲ್, ಕೇಟರಿಂಗ್ ಕಾಯಕ ದೂರದ ಮಾತು. ಇಂತವರಿಗೆ ಅಡುಗೆ ಬಡಿಸುವ, ತಾಂಬೂಲ ನೀಡುವ ಪಾರ್ಟ್ ಟೈಮ್ ಜಾಬ್ ಕೈಹಿಡಿದಿದೆ.
ವಿದ್ಯಾಭ್ಯಾಸಕ್ಕೂ ನೆರವು
ಅಡುಗೆ ಬಡಿಸುವ ಕಾಯಕ ಮಹಿಳೆಯರಿಗಷ್ಟೇ ನೆರವಾಗ್ತಿಲ್ಲ. ನೂರಾರು ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೂ ಆಧಾರವಾಗಿದೆ. ಶಾಲೆ, ಕಾಲೇಜು ರಜೆ ಇರುವ ದಿನ ಹೆಣ್ಮಕ್ಕಳು ಇಡೀ ದಿನ ಕಾರ್ಯಕ್ರಮಗಳಿಗೆ ನೆರವಾಗುತ್ತಾರೆ. ಅಡುಗೆ ಬಡಿಸುವ ಜತೆಗೆ ಇತರ ಕೆಲಸಗಳಿಗೆ ಸಹಾಯ ಮಾಡಿ ದಿನಕ್ಕೆ 1000 ರೂ. ಪಡೆಯುತ್ತಾರೆ. ಮನೆಯಲ್ಲಿ ಕುಳಿತು ಮೊಬೈಲ್ ನೋಡ್ತಿದ್ದ ಮಗಳು ಈಗ ಅವಳ ಓದಿನ ಖರ್ಚಿಗೆ ಸಂಪಾದಿಸಿಕೊಳ್ಳುತ್ತಿದ್ದಾಳೆಂದು ಅನೇಕ ಪಾಲಕರು ಖುಷಿಯಲ್ಲಿದ್ದಾರೆ.
ಮಗಳು ಪೂರ್ಣಿಮಾ ಸೆಕೆಂಡ್ ಪಿಯುಸಿ ಓದುತ್ತಿದ್ದಾಳೆ. ಅವಳ ಕಾಲೇಜು ಬೆಳಗ್ಗೆ 8ಕ್ಕೆ ಶುರುವಾಗಿ 1 ಗಂಟೆಗೆ ಮುಗಿಯುತ್ತದೆ. ಬಳಿಕ ನನ್ನ ಜತೆ ಅಡುಗೆ ಬಡಿಸಲು ಅವಳೂ ಬರುತ್ತಾಳೆ. ನನ್ನಂತೆ ತಿಂಗಳಿಗೆ ಕನಿಷ್ಠ 2 ಸಾವಿರ ರೂ. ದುಡಿಯುತ್ತಾಳೆ. ಬರುವ ದುಡ್ಡಲ್ಲಿ ಫೀಸ್ ಕಟ್ಟಿದ್ದಾಳೆ. ಬ್ಯಾಂಕ್ಗೂ ಹಣ ಹಾಕುತ್ತಿದ್ದಾಳೆ. ಈ ಬಗ್ಗೆ ನನಗೆ ಹೆಮ್ಮೆ ಇದೆ.
| ಲಲಿತಾ ಹರಿಹರಪುರ ನಿವಾಸಿಕಟ್ಟಿಗೆ ಬೇಕಿಲ್ಲ, ಕಾಡಿಗೂ ಹೋಗಲ್ಲ
ಮಲೆನಾಡಿನ ಬಹುತೇಕ ಕಡೆ ಮಹಿಳೆಯರು ಬೆಳಗ್ಗೆ ಎದ್ದು ಕಟ್ಟಿಗೆ ತರಲು ಕಾಡಿಗೆ ಹೋಗುತ್ತಾರೆ. ಜತೆಗೆ ಜಾನುವಾರಿಗೆ ಮೇವು ಅಂತ ಕಿ.ಮೀ ಗಟ್ಟಲೆ ಅಲೆಯುತ್ತಾರೆ. ಹೀಗೆ ಅಲೆದರಷ್ಟೇ ಗಂಜಿ ಸಿಗುವ ಪರಿಸ್ಥಿತಿ ಅನೇಕರ ಮನೆಯಲ್ಲಿದೆ. ಆದರೆ ಅಡುಗೆ ಬಡಿಸುವ ಕಾಯಕ ಬಂದ ಮೇಲೆ ಬಹುತೇಕ ಮಹಿಳೆಯರ ಕಷ್ಟ ಕರಗಿದೆ. ಅಂಗೈ ಕಾಸಿಗೆ ತಿಂಗಳಿಡೀ ಕಷ್ಟಪಡುವ ಬದಲು ತಿಂಗಳಿಗೆ 1-2 ಕಾರ್ಯಕ್ರಮಕ್ಕೆ ತೆರಳಿ ಹಣ ಸಂಪಾದಿಸು ತ್ತಿದ್ದಾರೆ. ಇದರಿಂದಾಗಿ ಹಾವಿನಿಂದ ಕಚ್ಚಿಸಿಕೊಳ್ಳುವ, ಚಳಿ, ಮಳೆ, ಬಿಸಿಲಲ್ಲಿ ಕಾಡು ಸುತ್ತಬೇಕಾದ ಕಾಟವೂ ತಪ್ಪಿದೆ.
ಹೆಣ್ಮಕ್ಕಳೇ ಬೆಸ್ಟ್ ಏಕೆ?