

ಈ ವರ್ಷ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿದ್ದೇವೆ. ಈ ಸುಸಂದರ್ಭದಲ್ಲಿ ಸಾಮಾಜಿಕ, ಆರ್ಥಿಕ, ಆಡಳಿತ, ಕಾನೂನು ವ್ಯವಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂಬ ಆಶಯ, ಹಂಬಲ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ಸಮರ್ಪಕವಾದ ಶ್ರೇಷ್ಠ ಸಂವಿಧಾನ ಜಾರಿಗೆ ಬಂದು 72 ವರ್ಷಗಳಾಗಿವೆ. ಈ ಸಂವಿಧಾನದ ಚೌಕಟ್ಟಿನೊಳಗೆ ದೇಶದ ಕಾನೂನು ವ್ಯವಸ್ಥೆ ಬಂದಿರುವುದು ಹೌದಾದರೂ ಇಂದಿನ ಕಾಲಕ್ಕೆ ಅವಶ್ಯಕವಾದ ಸೂಕ್ತ ತಿದ್ದುಪಡಿಗಳು ಆಗಬೇಕಿವೆ ಎಂಬುದು ದೇಶದ ಜನಸಾಮಾನ್ಯರ ಆದಿಯಾಗಿ ವಕೀಲರ ಹಾಗೂ ಕಾನೂನು ಪಂಡಿತರ ಬಹಳ ದಿನದ ಅಪೇಕ್ಷೆ. ‘ಕಾನೂನು ಕ್ಷೇತ್ರದ ಭಾರತೀಯಕರಣ ಆಗಬೇಕು’ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಉಲ್ಲೇಖಿಸಿರುವುದು ಗಮನಸೆಳೆದಿದೆ, ಅದೇ ರೀತಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಇತ್ತೀಚೆಗೆ ಅಧಿವಕ್ತಾ ಪರಿಷತ್ ಹೈದರಾಬಾದ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ‘ಭಾರತೀಯ ನ್ಯಾಯಶಾಸ್ತ್ರವನ್ನು ಇಂದಿನ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿರುವುದು ಸಾಕಷ್ಟು ಚರ್ಚೆಯಾದ ವಿಚಾರ.
ಈಗಿನ ಕೇಂದ್ರ ಸರ್ಕಾರ ಕಳೆದ ವರ್ಷ ಜುಲೈ ತಿಂಗಳಲ್ಲಿ ಐದು ಜನರ ಸಮಿತಿಯನ್ನು ರಚಿಸಿ ಅಪರಾಧಿಕ ಕಾನೂನಿನಲ್ಲಿ (Criminal Law) ಮಾರ್ಪಾಡು ತರಲು ಬೇಕಾದ ಸಲಹೆ ಸೂಚನೆ ಕೊಡುವುದರೊಂದಿಗೆ ಭಾರತೀಯ ಅಪರಾಧಿಕ ನ್ಯಾಯವ್ಯವಸ್ಥೆ (Criminal Justice System)ಯಲ್ಲಿ ಭಾರಿ ಬದಲಾವಣೆಯ ನಡೆಯನ್ನು ತೋರಿಸಿತ್ತು. ಗೃಹ ಸಚಿವ ಅಮಿತ್ ಷಾ 2021ರ ಅಂತ್ಯದಲ್ಲಿ ಸಂಸದರು, ನ್ಯಾಯಮೂರ್ತಿಗಳು, ಕಾನೂನು ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಕಾನೂನು ಕ್ಷೇತ್ರದಲ್ಲಿ ಅನುಭವ, ಆಸಕ್ತಿ ಹಾಗೂ ಇಚ್ಛಾಶಕ್ತಿ ಹೊಂದಿದವರ ಸಲಹೆ ಮತ್ತು ಸೂಚನೆಗಳನ್ನು ಆಮಂತ್ರಿಸಿರುವುದು ಮಹತ್ತರವಾದ ಹೆಜ್ಜೆ. ಭಾರತೀಯ ದಂಡ ಸಂಹಿತೆ (Indian Penal Code,1860), ಭಾರತೀಯ ಸಾಕ್ಷ್ಯ ಅಧಿನಿಯಮ (Indian Evidence Act, 1872), ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (Code Of Criminal Procedure,1973, ಸ್ಪೋಟಕಗಳ ಕಾಯ್ದೆ (Code Of Criminal Procedure, 1884) ಸ್ಪೋಟಕ ವಸ್ತು ಕಾಯ್ದೆ (Explosive Substances Act, 1908)- ಅಂದಿನ ಕಾಲಕ್ಕೆ ತಕ್ಕಂತೆ ರಚಿಸಲ್ಪಟ್ಟ ಈ ಕಾನೂನುಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಸರ್ಕಾರ ಈ ಹಿಂದೆ ಮಾಡಿರುವುದು ಹೌದಾದರೂ, ಅನೇಕ ವಿಚಾರಗಳಲ್ಲಿ ಇಂದಿಗೂ ನ್ಯಾಯಾಲಯಗಳ ತೀರ್ಪಗಳ ಆಧಾರ ಮತ್ತು ವ್ಯಾಖ್ಯಾನದ ಮೇಲೆ ನ್ಯಾಯಾಂಗ ವ್ಯವಸ್ಥೆ ಅವಲಂಬಿತವಾಗಿದೆ.
ಕಾನೂನು ಶಾಲೆಗಳಲ್ಲಿ ಮತ್ತು ನ್ಯಾಯದಾನ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಇರುವವರ ಅನುಭವದ ಮಾತು ಅವಲೋಕಿಸಿದರೆ ಅರಿವಿಗೆ ಬರುವ ವಿಚಾರವೆಂದರೆ ಕೆಲವು ಆರೋಪಗಳ ಬಗ್ಗೆ ವ್ಯಾಖ್ಯಾನವೇ ಇರುವುದಿಲ್ಲ, ಕೆಲವು ಆರೋಪಗಳ ಬಗ್ಗೆ ಇರುವ ಶಿಕ್ಷೆಪ್ರಮಾಣ ಅಥವಾ ದಂಡಪ್ರಮಾಣ ಅತ್ಯಂತ ಕಡಿಮೆ. ಅಲ್ಲದೆ, ಇಂದಿನ ಕಾಲದ ಕೆಲವೊಂದು ಆರೋಪಗಳ ಬಗ್ಗೆ ಉಲ್ಲೇಖ ಇಲ್ಲದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಬ್ರಿಟಿಷ್ ಕಾಲದ ಕೆಲವೊಂದು ಕಲಂಗಳು ಇಂದಿಗೆ ಅಪ್ರಸ್ತುತವಾಗಿದ್ದು, ಮಾರ್ಪಾಡುಗಳು ಇಲ್ಲದೆ ಮುಂದುವರಿಯುತ್ತಿರುವುದು ವಿಷಾದನೀಯ. ಭಾರತೀಯ ಸಾಕ್ಷ ್ಯ ಅಧಿನಿಯಮ (Indian Evidence Act,1860) ದಲ್ಲಿ ಕೂಡ ಇಂದಿನ ಕಾಲಕ್ಕೆ ಬೇಕಾದ ವಿಜ್ಞಾನ-ತಂತ್ರಜ್ಞಾನ ಆಧಾರಿತ ಮಾರ್ಪಾಡುಗಳ ಅವಶ್ಯಕತೆ ಎದ್ದು ಕಾಣುತ್ತಿದೆ. ಉದಾಹರಣೆಗೆ, ಡಿಎನ್ಎ, ಬ್ರೇನ್ ಮ್ಯಾಪಿಂಗ್, ಎಲೆಕ್ಟ್ರಾನಿಕ್ ಸಾಕ್ಷ್ಯ, ಸೈಬರ್ ಅಪರಾಧ, Ballistic Evidenceನಂಥ ವಿಚಾರಗಳಲ್ಲಿ ಇನ್ನಷ್ಟು ಬದಲಾವಣೆಯ ಅವಶ್ಯಕತೆ ಇದೆ. ಇನ್ನು ದಂಡ ಪ್ರಕ್ರಿಯಾ ಸಂಹಿತೆ (CRPC) ಅಡಿಯಲ್ಲಿ ನೋಡುವುದಾದರೆ ಅಪರಾಧದ ಸಂಜ್ಞೆ (Cognizance) ಎಂದರೇನು, ಅದನ್ನು ದಂಡಾಧಿಕಾರಿ ಯಾವ ರೀತಿ ತೆಗೆದುಕೊಳ್ಳಬೇಕು, ಈ ಪ್ರಕ್ರಿಯೆಯ ಪರಿಣಾಮಗಳೇನು ಇತ್ಯಾದಿಗಳ ಬಗ್ಗೆ ಇನ್ನಷ್ಟು ಸ್ಪಷ್ಟತೆ ಕಾನೂನಿನಲ್ಲಿಯೇ ಬರಬೇಕಾಗಿದೆ. ಪೊಲೀಸರು ಅಂತಿಮ ವರದಿ ಅಥವಾ ‘ಬಿ’ ಅಂತಿಮ ವರದಿ ಸಲ್ಲಿಸುವ ಬಗ್ಗೆ ಮತ್ತು ಈ ರೀತಿ ‘ಬಿ’ ಅಂತಿಮ ವರದಿ ಸಲ್ಲಿಸಿದಾಗ ನ್ಯಾಯಾಲಯ ಅಥವಾ ದಂಡಾಧಿಕಾರಿ ಯಾವ ಕ್ರಮ ಕೈಗೊಳ್ಳಬೇಕು, ನಂತರ ದೂರುದಾರರು ಯಾವ ಮಾರ್ಗ ಅನುಸರಿಸಬೇಕು, ತಕರಾರು ಅರ್ಜಿ ಯಾವ ರೀತಿ ಇರಬೇಕು, ‘ಬಿ’ ಅಂತಿಮ ಅರ್ಜಿಗೆ ತಕರಾರು ಸಲ್ಲಿಸಿದಾಗ ದಂಡಾಧಿಕಾರಿ ಅಥವಾ ನ್ಯಾಯಾಲಯದ ಮುಂದಿನ ಹೆಜ್ಜೆ ಏನಿರಬೇಕು ಎಂಬ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬರಬೇಕಿದೆ. ಕೆಳ ನ್ಯಾಯಾಲಯಗಳಿಗೆ ವಿವೇಚನೆಯಿಂದ ಆದೇಶ ನೀಡುವ ವಿಶೇಷ ಅಧಿಕಾರದ ಅವಶ್ಯಕತೆ ಕೂಡ ಇದೆ, ದೂರುದಾರರು ಹಾಜರಾಗದ ಕಾರಣಕ್ಕೆ ದೂರು ಅರ್ಜಿಯನ್ನು ವಜಾ ಮಾಡಿದಾಗ ಆ ಅರ್ಜಿಯನ್ನು ಮರುಸ್ಥಾಪನೆ ಮಾಡಲು ಅವಕಾಶ ಇಲ್ಲದೆ ಮೇಲಿನ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಬೇಕಾಗುತ್ತದೆ. ಇದರಿಂದ ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತದೆ. ಈ ರೀತಿ ಅನೇಕ ಸನ್ನಿವೇಶಗಳು ನ್ಯಾಯಾಂಗ ವ್ಯವಸ್ಥೆಯನ್ನು ಪದೇಪದೆ ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿವೆ. ಇಂತಹ ಕಾನೂನಿನ ಜಿಜ್ಞಾಸೆಗಳಿಗೆ ಅಥವಾ ತೊಡಕುಗಳಿಗೆ ಪರಿಹಾರ ಕಂಡುಕೊಳ್ಳುವ ಸದಾವಕಾಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ಬಂದಿರುವುದು ದೇಶದ ಹಿತದೃಷ್ಟಿಯಿಂದ ಮಹತ್ವ ಪಡೆದಿದೆ. ನಮ್ಮ ಅನುಭವಕ್ಕೆ ಬಂದಿರುವ ಇಂತಹ ಸಂಗತಿಗಳನ್ನು, ಕಾನೂನಿನ ಜಿಜ್ಞಾಸೆಗಳನ್ನು ಹಾಗೂ ಸಮಯೋಚಿತ ಸಲಹೆ, ಸೂಚನೆಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ನಾವು ಕೂಡ ನೀಡಬಹುದಲ್ಲವೇ?
(ಲೇಖಕರು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು)