

| ಮೃತ್ಯುಂಜಯ ಕಪಗಲ್ ಬೆಂಗಳೂರು
ಬೊಕ್ಕಸಕ್ಕೆ ಆದಾಯ ಮೂಲಗಳ ಪೈಕಿ ಒಂದಾದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಆದಾಯ ಜಮಾದಲ್ಲಿ ಏರಿಳಿತದಿಂದಾಗಿ ಮಾಸಿಕ ಗುರಿ ತಲುಪಲು ಇಲಾಖೆ ಏದುಸಿರು ಬಿಡುತ್ತಿದೆ.
ಕೃಷಿ ಉತ್ಪನ್ನಗಳ ವಹಿವಾಟು, ಉದ್ಯಮ-ವ್ಯವಹಾರ, ಆರ್ಥಿಕ ಚಟುವಟಿಕೆಗೆ ಉತ್ತೇಜಿಸಲೆಂದು ಮೊದಲ ಆದ್ಯತೆಯ ಮೇಲೆ ಲಾಕ್ಡೌನ್ ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿತು. ಬಹುತೇಕ ಚಟುವಟಿಕೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿವೆ. ಸರ್ಕಾರಕ್ಕೆ ಆದಾಯ ಇಲಾಖೆಗಳು ಚೇತರಿಕೆ ಹಾದಿಯಲ್ಲಿವೆ. ಆದರೆ ಆಸ್ತಿ ವಹಿವಾಟು ಸ್ಥಿರವಾದ ವೃದ್ಧಿ ಕಾಣದೆ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕರೊನಾಘಾತದಿಂದ ಈ ವಲಯ ಇನ್ನೂ ಹೊರಬಂದಿಲ್ಲ. ಹೀಗಾಗಿ ಮಾಸಿಕ ಆದಾಯ ಸಂಗ್ರಹ ಗುರಿಯಲ್ಲಿ ಶೇ.30 ಕೊರತೆ ಉಂಟಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಪ್ರಸಕ್ತ ಆರ್ಥಿಕ ವರ್ಷದ ಗುರಿ ತಲುಪುವುದು ಕಷ್ಟ ಸಾಧ್ಯವೆಂದು ಇಲಾಖೆ ಮೂಲಗಳು ಕಳವಳ ವ್ಯಕ್ತಪಡಿಸಿವೆ.
ಬೆಳವಣಿಗೆ ಮಂದ: ಕರೊನಾ ಭೀತಿಯಿಂದ ಜೀವ-ಜೀವನ ಇನ್ನೂ ಪೂರ್ಣ ಮುಕ್ತವಾಗಿಲ್ಲ. ಲಾಕ್ಡೌನ್ನಿಂದಾದ ನಿರ್ವಾತ ಸ್ಥಿತಿಯು ಮಂದ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದಾಗಿ ಆದಾಯದ ಮೂಲಗಳು ಏರಿಳಿತ ಅನುಭವಿಸುತ್ತಿವೆ.
ಹಣ ಪ್ರಸರಣ ಪ್ರಮಾಣ ಹೆಚ್ಚಳ, ಜನರ ಕೊಳ್ಳುವ ಸಾಮರ್ಥ್ಯ ವೃದ್ಧಿಸಿದರಷ್ಟೇ ಹೊಲ, ಮನೆ, ನಿವೇಶನ ಇತ್ಯಾದಿಗಳ ವಹಿವಾಟು ಸುಧಾರಿಸಿ ಶುಲ್ಕ ಸಂಗ್ರಹ ಏರುಮುಖವಾಗಲು ಸಾಧ್ಯ.
ನಿರ್ಬಂಧ ತೆರವುಗೊಳಿಸಿ ನೋಂದಣಿಗೆ ಅನುವು ಮಾಡಿಕೊಟ್ಟ ಕಳೆದ 6 ತಿಂಗಳ ಪೈಕಿ ಆಗಸ್ಟ್ನಲ್ಲಿ ಶುಲ್ಕ ಸಂಗ್ರಹ ಉತ್ತಮವಾಗಿದ್ದರೆ, ನಂತರದ ತಿಂಗಳು ಕುಸಿಯಿತು. ಒಟ್ಟಾರೆ ಮಾಸಿಕ ಶೇ. 25 ರಿಂದ 30 ಹಿನ್ನಡೆಯಾಗಿದೆ ಎನ್ನುವುದನ್ನು ಇಲಾಖೆ ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ.
ತುಲನಾತ್ಮಕ ಅಂಕಿ-ಅಂಶ: ಪ್ರಸಕ್ತ ಆರ್ಥಿಕ ವರ್ಷದ ಮೊದಲ 6 ತಿಂಗಳಲ್ಲಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ರೂಪದಲ್ಲಿ 6,151.37 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ. ಈವರೆಗೆ 4,610.12 ಕೋಟಿ ರೂ. ಸಂಗ್ರಹವಾಗಿದ್ದು, ಶೇ. 74.94 ಪ್ರಗತಿ ಸಾಧ್ಯವಾಗಿದೆ. ಕಳೆದ ವರ್ಷ ಇದೇ ಅವಧಿಗೆ 6,432 ಕೋಟಿ ರೂ. ಗುರಿ ಮುಂದೆ 5,572.23 ಕೋಟಿ ರೂ. (ಶೇ. 86.62) ಪ್ರಗತಿ ಸಾಧಿಸಿತ್ತು.
ಪ್ರಸಕ್ತ ಆಗಸ್ಟ್ನಲ್ಲಿ ಗರಿಷ್ಠ 969.19 ಕೋಟಿ ರೂ. ಸಂಗ್ರಹಿಸಿ, ಮಾಸಿಕ ಗುರಿಯ ಶೇ. 83.24 ಪ್ರಗತಿ ಸಾಧಿಸಿದ್ದರೆ, ಸೆಪ್ಟೆಂಬರ್ನಲ್ಲಿ 831.95 ಕೋಟಿ ರೂ. (ಶೇ.70.60) ಹಾಗೂ ಅಕ್ಟೋಬರ್ನಲ್ಲಿ 933.53 ಕೋಟಿ ರೂ. (ಶೇ. 74.82) ಸಂಗ್ರಹಿಸಲು ಸಾಧ್ಯವಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ 878.26 ಕೋಟಿ ರೂ. (ಶೇ. 88.02) ಹಾಗೂ ಅಕ್ಟೋ ಬರ್ನಲ್ಲಿ 902. 36 ಕೋಟಿ ರೂ. (ಶೇ.88.77) ಸಂಗ್ರಹವಾಗಿದೆ ಎಂದು ಇಲಾಖೆ ಮೂಲಗಳು ವಿವರಿಸಿವೆ.