ಪ್ರಾದೇಶಿಕ ಅಸಮಾನತೆ ಸಲ್ಲದು

Library
Published on

ರಾಜ್ಯ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿನ ಪುಸ್ತಕ ಆಯ್ಕೆ ಸಮಿತಿಯಲ್ಲಿ ಪ್ರಾದೇಶಿಕ ಅಸಮಾನತೆ ತಾಂಡವವಾಡಿದ್ದು, ಸಾಮಾಜಿಕ ಪ್ರಾತಿನಿಧ್ಯವನ್ನು ಗಾಳಿಗೆ ತೂರಲಾಗಿದೆಯೆಂಬ ಮಾಧ್ಯಮಗಳ ಇತ್ತೀಚಿನ ವರದಿಗಳು ಕಂಡು ಬೇಸರವಾಯಿತು. ರಾಜ್ಯ ಏಕೀಕರಣದ ಸಮಯದಿಂದಲೂ ಈ ಪ್ರಾದೇಶಿಕ ಅಸಮಾನತೆ ಜೀವಂತವಾಗಿಯೇ ಇದೆೆ. ರಾಜ್ಯವನ್ನು ಉತ್ತರ-ದಕ್ಷಿಣವೆಂಬ ತಾರತಮ್ಯ ಮಾಡದೆ ಸಮತೂಕದಲ್ಲಿ ತೂಗಿದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಬಹುದು. ಪ್ರಸ್ತುತ ಪುಸ್ತಕ ಆಯ್ಕೆ ಸಮಿತಿಯ ವಿಚಾರವನ್ನು ವಿಮರ್ಶೆಗೊಳಪಡಿಸಿದಾಗ ದಕ್ಷಿಣದವರೆಂದರೆ ಜಾಣರು, ಪ್ರಬುದ್ಧರು ಉತ್ತರದವರೆಂದರೆ ಅಷ್ಟಕಷ್ಟೇ ಎಂಬ ಧೋರಣೆ ತಳೆದಂತಿದೆ. ಇದು ಸಲ್ಲ.

ಪುಸ್ತಕ ಆಯ್ಕೆ ಸಮಿತಿಯಲ್ಲಿ ಬಹುತೇಕ ದಕ್ಷಿಣ ಭಾಗದವರಿಗೆ ಮಣೆ ಹಾಕಿರುವುದು ಯಾವ ನ್ಯಾಯ? ಕಾಲಮಿಂಚಿಲ್ಲ. ರಾಜ್ಯ ಸರ್ಕಾರ ಪುಸ್ತಕ ಆಯ್ಕೆ ಸಮಿತಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪ್ರಾದೇಶಿಕ ಅಸಮಾನತೆ ಹೊಗಲಾಡಿಸಲು ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ಯಾವುದೇ ಭಾಗದ ಜನರಿಗೆ ಅಸಮಾಧಾನವಾಗದಂತೆ ಎಚ್ಚರ ವಹಿಸಿ, ಪ್ರತಿಭೆಗಳಿಗೆ ಸೂಕ್ತ ಆದ್ಯತೆ ನೀಡಬೇಕು.

ಇದಲ್ಲದೆ, ಸರ್ಕಾರದ ನಿಗಮ-ಮಂಡಳಿಗಳು, ಪ್ರಾಧಿಕಾರಗಳಲ್ಲಿ ಲಿಂಗ-ಅಸಮಾನತೆ ಕಂಡುಬರುತ್ತಿದೆ. ಪ್ರತಿಯೊಂದರಲ್ಲೂ ಪುರುಷಪ್ರಧಾನ ನಡೆಯೇ ಮೇಲುಗೈಯಾಗಿದೆ, ಸ್ತ್ರೀಯರಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಪ್ರಾವೀಣ್ಯ ಹಾಗೂ ಪ್ರತಿಭೆಯಿದ್ದರೂ ಪುರುಷಪ್ರಧಾನ ಸಮಾಜದಲ್ಲಿ ಅವಕಾಶವಂಚಿತರಾಗುತ್ತಿರುವುದು ದುರಂತವೇ ಸರಿ.

| ಬೀರಪ್ಪ ಡಿ.ಡಂಬಳಿ ಕೋಹಳ್ಳಿ (ಅಥಣಿ ತಾಲ್ಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net