ಇಂಡಿಯಾ ಬುಕ್​ನಲ್ಲಿ ಕಲಬುರಗಿ ಯುವಕ; ಚಿತ್ರಕಲಾವಿದನ ದಾಖಲೆ

Kalburgi 12 Feb 20
Published on

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ಹೆಚ್ಚಿನವರಿಗೆ ತುಡಿತವಿರುತ್ತದೆ. ಈ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ಅಗತ್ಯ. ಸತತ ಪ್ರಯತ್ನದ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ ಕಲಬುರ್ಗಿಯ ಚಿತ್ರಕಲಾವಿದ ನಿಜಲಿಂಗ ಮುಗಳಿ.

ಅಮೂರ್ತಕಲೆ, ರೇಖಾಚಿತ್ರ, ವ್ಯಂಗ್ಯಚಿತ್ರ ಮತ್ತು ಸೃಜನಾತ್ಮಕ ಕಲೆಯಲ್ಲಿ ನಿಪುಣರಾಗಿರುವ ನಿಜಲಿಂಗ ಅವರು, ಇಂಪ್ರೆಸ್ಸಿವ್ ಕ್ವಿಲ್ಲಿಂಗ್ ಪೇಪರ್ ಸ್ಟ್ರಿಪ್ ಡ್ರಾಯಿಂಗ್ ವಿಭಾಗದಲ್ಲಿ ದಾಖಲೆ ನಿರ್ವಿುಸಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿಯೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರಿಂದ ನಿಜಲಿಂಗ ಅವರು ಪದವಿ ಹಂತದಲ್ಲೂ ಈ ವಿಷಯವನ್ನೇ ಆಯ್ಕೆ ಮಾಡಿಕೊಂಡರು. ಶರಣಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎ ಫೈನ್ ಆರ್ಟ್ಸ್​ನಲ್ಲಿ 2012ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ಈ ಪದವಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಫಸ್ಟ್ ರ್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಜತೆಗೆೆ ಹಂಪಿ ವಿಶ್ವವಿದ್ಯಾಲಯದಲ್ಲಿ ವಿಜ್ಯೂವಲ್ ಆರ್ಟ್ ನಲ್ಲಿ ಎಂ.ಫಿಲ್ ಮುಗಿಸಿದ್ದಾರೆ.

ನಿಜಲಿಂಗ ಮುಗಳಿಯವರು, ಪ್ರಾಥಮಿಕ ಶಾಲೆಯಿಂದಲೇ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮುಂದೊಂದು ದಿನ ಖ್ಯಾತ ಚಿತ್ರಕಾರನಾಗಿ ಹೊರಹೊಮ್ಮಬೇಕೆಂಬ ಬಯಕೆ ಹುಟ್ಟಿದ್ದೇ ಇಲ್ಲಿಂದ ಎನ್ನುತ್ತಾರೆ ಅವರು. ಕಾಲೇಜು ಶಿಕ್ಷಣದಲ್ಲೂ ಹಲವೆಡೆ ಪ್ರಶಸ್ತಿಗಳನ್ನು ಬಾಚಿದ್ದಾರೆ. ಪದವಿ ಮತ್ತು ಸ್ನಾತಕೋತ್ತರದಲ್ಲಿ ಕಲಿಯುವಾಗಲೂ ಪ್ರತಿ ಸ್ಪರ್ಧೆಯಲ್ಲೂ ತಾವೊಂದು ಪ್ರಶಸ್ತಿ ತೆಗೆದುಕೊಳ್ಳದೇ ಹಿಂತಿರುಗುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ಚಿತ್ರಕಲೆ ಜತೆಗೆ ಛಾಯಾಚಿತ್ರದಲ್ಲಿಯೂ ಇವರು ಸಾಕಷ್ಟು ಹೆಸರು ಗಳಿಸಿದ್ದಾರೆ. ಛಾಯಾಚಿತ್ರ ಕ್ಷೇತ್ರದಲ್ಲಿ ಅಂತರ್ ವಿಶ್ವವಿದ್ಯಾಲಯದ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಖ್ಯಾತಿ ಗಳಿಸಿದ್ದಾರೆ. ಗಂಗಾವತಿಯಲ್ಲಿ ನಡೆದ ಅಂತರ ಕಾಲೇಜು ವಿಭಾಗದಲ್ಲಿ ಕಾರ್ಟೂನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕಲಬುರ್ಗಿಯಲ್ಲಿ ಕಾರ್ಟೂನ್ ಹಾಗೂ ಇನ್​ಸ್ಟಾಲೇಷನ್ ಮತ್ತು ಛಾಯಾಚಿತ್ರ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿ ಗಳಿಸಿದ್ದಾರೆ.

2018ರಲ್ಲಿ ದೆಹಲಿಯಲ್ಲಿ ನಡೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2019ರಲ್ಲಿ ಹೈದರಾಬಾದ್​ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಕಲಾ ಮೇಳಗಳಲ್ಲಿ ಭಾಗವಹಿಸಿ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ಗುಂಪು ಚಿತ್ರಕಲಾ ಪ್ರದರ್ಶನದಲ್ಲಿಯೂ ಇವರದ್ದು ಎತ್ತಿದ ಕೈ. ಕಲಬುರ್ಗಿಯ ಡೆಕ್ಕನ್ ಆರ್ಟ್ ಸೊಸೈಟಿ, ಕರ್ನಾಟಕ ರಾಜ್ಯೋತ್ಸವ, ಚೈತನ್ಯಮಯಿ ಆರ್ಟ್ ಗ್ಯಾಲರಿ, ಬೆಂಗಳೂರಿನಲ್ಲಿ ನಡೆದ ಚಿತ್ರ ಪರಿಷೆ, ಹೈದರಾಬಾದ್​ನಲ್ಲಿ ನಡೆದ ಸ್ಟೇಟ್ ಆರ್ಟ್ ಗ್ಯಾಲರಿಸೇರಿದಂತೆ ಹಲವಾರು ಕಡೆಗಳಲ್ಲಿ ಗುಂಪು ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ, ಚಿತ್ರಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಈಗ ದಾಖಲೆ ಬರೆಯುವ ಮೂಲಕ ತಮ್ಮ ಸಾಧನೆಗೆ ಇನ್ನಷ್ಟು ಗರಿಗಳನ್ನು ತುಂಬಿಸಿಕೊಂಡಿದ್ದಾರೆ.

ಬಹುಮುಖ ಪ್ರತಿಭೆ

ಶರಣಬಸವ ವಿಶ್ವವಿದ್ಯಾಲಯದ ಫೈನ್ ಆರ್ಟ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ನಿಜಲಿಂಗ, ಚಿತ್ರಕಲೆ, ಫೋಟೋಗ್ರ್ರಯಲ್ಲಿ ಅಷ್ಟೇ ಅಲ್ಲದೇ, ಚುಟುಕು ಕವನ ಬರೆಯುವಿಕೆಯಲ್ಲಿಯೂ ಪ್ರತಿಭೆ ಹೊಂದಿದ್ದಾರೆ. ಇತ್ತೀಚೆಗೆ ಗುಜರಾತ್​ನಲ್ಲಿ ನಡೆದ ಆರ್ಟ್ ಪಾಯಿಂಟ್ ಸಂಸ್ಥೆ ನೀಡುವ ಅತ್ಯುತ್ತಮ ಪೋಟೋಗ್ರಫಿ ಪ್ರಶಸ್ತಿಗಳಲ್ಲಿ ರಜತ ಪದಕ ಪಡೆದುಕೊಂಡಿದ್ದಾರೆ.

| ದಸ್ತಗೀರ ನದಾಫ್ ಯಳಸಂಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net