ಪರೀಕ್ಷೆಗಷ್ಟೇ ಅಲ್ಲ ಓದು; ಉತ್ತಮ ಕಲಿಕೆಗೆ ಹತ್ತು ಸೂತ್ರಗಳು..

Masth
Published on

| ಪ್ರೊ. ಗಿರೀಶ್ ಯರಲಕಟ್ಟಿಮಠ

ಪ್ರಥಮ ಎಂಬಿಎ ಸೆಮಿಸ್ಟರ್​ನಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ ಪರೀಕ್ಷೆಗಳು ಸಮೀಪಿಸುತ್ತಿರುವಂತೆ ನನ್ನ ಕೊಠಡಿಗೆ ಧಾವಿಸಿದ. ‘ಸರ್ ನೀವು ನೋಟ್ಸ್ ಕೊಡುತ್ತೀರಾ’ ಎಂದು ಪ್ರಾರಂಭಿಸಿದ. ನಾನು ನಿರಾಕರಿಸಿದೆ. ಅಟ್​ಲೀಸ್ಟ್ ಪಿಪಿಟಿನಾದ್ರೂ ಕೊಡಿ ಎಂದ. ಅದೂ ಸಾಧ್ಯವಿಲ್ಲ ಎಂದೆ. ಜತೆಗೆ ‘ನಾವು ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಶ್ವದರ್ಜೆ ಮಟ್ಟದ ಪುಸ್ತಕಗಳನ್ನು ಪ್ರತಿ ವಿಷಯಕ್ಕೂ ಕೊಟ್ಟಿದ್ದೇವೆ. ಹಾಗು ದಿನನಿತ್ಯವೂ ಪ್ರತಿ ವಿದ್ಯಾರ್ಥಿಗೂ ವ್ಯವಹಾರಕ್ಕೆ ಸಂಬಂಧಪಟ್ಟ ದಿನ ಪತ್ರಿಕೆ ನೀಡುತ್ತೇವೆ. ಬಿಟ್ಟು ಬಿಡದೆ ಪ್ರತಿ ತರಗತಿಯಲ್ಲೂ ಉತ್ತಮ ಗುಣಮಟ್ಟದ ಉಪನ್ಯಾಸ ನೀಡುತ್ತೇವೆ, ಗ್ರಂಥಾಲಯವು ಸಹ 12 ಗಂಟೆ ನಿಮಗಾಗಿ ತೆರೆದಿರುತ್ತದೆ. ಇಷ್ಟು ನಿಮ್ಮ ಪರೀಕ್ಷಾ ತಯಾರಿಕೆಗೆ ಸಾಕಲ್ಲವೇ?’ ಎಂದು ಪ್ರಶ್ನಿಸಿದೆ.

‘ನೀವು ಕೊಟ್ಟಿರುವ ಪುಸ್ತಕಗಳನ್ನು ತೆರೆಯಲು ಭಯ ಸರ್, ತುಂಬಾ ಸಿಲೆಬಸ್, ಸಮಯ ಕಡಿಮೆ, ಹೊಸ ಹೊಸ ಪಠ್ಯ ವಿಷಯ. ನಮಗೆ ಡಿಗ್ರೀಲಿ ಯಾರೋ ಒಬ್ಬರು ಫೋಟೋ ಕಾಫಿ (ಜೆರಾಕ್ಸ್) ಮಾಡಿಸಿದ ನೋಟ್ಸ್​ನ್ನು ಪರೀಕ್ಷೆಯ ಹಿಂದಿನ ದಿನ ಓದಿ ಪಾಸಾದ್ವಿ’ ಎಂದ. ನಾನು ಒಂದು ಕ್ಷಣ ತಬ್ಬಿಬಾದೆ ಹಾಗೂ ಸ್ವಲ್ಪ ಸಿಟ್ಟಿನಿಂದಲೇ ಹೇಳಿದೆ.

‘ನೀವು ಈಗ ಸ್ನಾತಕೋತ್ತರ ವಿದ್ಯಾರ್ಥಿ. ಸಾಕಷ್ಟು ಆಕರಗಳನ್ನು ಓದಿ ನಿಮ್ಮದೇ ಆದ ಟಿಪ್ಪಣಿ ಮಾಡಿಕೊಳ್ಳುತ್ತ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ. ನಾನು ಯಾವ ಕಾರಣಕ್ಕೂ ನೋಟ್ಸ್ ಮತ್ತು ಪಿಪಿಟಿಗಳನ್ನು ಕೊಡುವುದಿಲ್ಲ’ ಎಂದೆ. ಅವನು ಯಾವುದೋ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿದವ. ಇದು ಇಂದಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಪೈಕಿ ಬಹುತೇಕರ ಮನಸ್ಥಿತಿ.

ಮರುದಿನ ವಿದ್ಯಾರ್ಥಿಗಳೊಡನೆ ಮಾತನಾಡುತ್ತಾ ಶಿಫಾರಸ್ಸು ಮಾಡಿದ ಪುಸ್ತಕಗಳನ್ನು ನೀವು ಅಧ್ಯಯನ ಮಾಡುವುದಿಲ್ಲ ಎಂದಾದರೆ ನೀವು ಅಂಕಗಳನ್ನು ಮೌಲ್ಯ ಮಾಪನದಲ್ಲಿ ನೀರಿಕ್ಷಿಸಬೇಡಿ ಎಂದೆ. ಒಬ್ಬ ವಿದ್ಯಾರ್ಥಿ ‘ಬರೀ ಪಾಯಿಂಟ್ ಬರುದ್ರೇ ಮಾರ್ಕ್ಸ್ ಸಿಕ್ಕಲ್ವಾ ಸರ್’ ಎಂದ. ನಾನು ಪ್ರತಿ ಉತ್ತರದಲ್ಲೂ ನಿಖರತೆಯನ್ನು ಅಪೇಕ್ಷಿಸುತ್ತೇನೆ ಎಂದೆ. ಎಲ್ಲ್ಲ ವಿದ್ಯಾರ್ಥಿಗಳ ಮುಖಗಳು ಬಾಡಿಹೋದವು. ಪರೀಕ್ಷೆ ಸಮಯದಲ್ಲಿ ಟೆಕ್ಸ್ಟ್​​ ಬುಕ್ ಓದೋದು ಸಾಧ್ಯಾನಾ ಎನ್ನುವುದು ಅವರ ಪ್ರಶ್ನೆ. ನಾನು ಖಂಡಿತ ಸಾಧ್ಯವಿದೆ ಎಂದೆ. ಅದಕ್ಕಾಗಿ ಕೆಲವೊಂದು ಟಿಪ್ಸ್ ಕೊಟ್ಟೆ. ಅವು ಇಲ್ಲಿವೆ. ಇದು ಎಲ್ಲರೂ ಅನುಸರಿಸಬಹುದಾದ ಮಾದರಿ.

ಉತ್ತಮ ಕಲಿಕೆಗೆ ಹತ್ತು ಸೂತ್ರಗಳು

  1. ಇಷ್ಟಪಟ್ಟು ಓದಿ: ಯಾವುದೇ ಪುಸ್ತಕವನ್ನು ಪರೀಕ್ಷಾ ತಯಾರಿಕೆಯ ಉದ್ದೇಶದಿಂದ ಓದಬೇಡಿ, ಓದುವಾಗ ಯಾವ ಯುನಿಟ್ ಅಥವಾ ಮಾಡ್ಯುಲ್​ನಿಂದ ಎಷ್ಟು ಪ್ರಶ್ನೆಗಳು ಬರಬಹುದು ಎಂದು ಯೋಚನೆ ಮಾಡಲೇಬೇಡಿ, ಉದಾಹರಣೆಗೆ ನಾವು ನಿತ್ಯ ಪತ್ರಿಕೆಯೊಂದರಿಂದ ಮಾಹಿತಿಯನ್ನು ಹೊರತುಪಡಿಸಿ ಬೇರೇನೂ ಅಪೇಕ್ಷಿಸುವುದಿಲ್ಲ. ಹಾಗೆಯೇ ವಿಷಯದ ಪಠ್ಯ ಪುಸ್ತಕಗಳನ್ನು ಓದಬೇಕಾದರೆ ಏನನ್ನೂ ಅಪೇಕ್ಷಿಸಬೇಡಿ, ಮನಸೋ ಇಚ್ಛೆ ಪುಸ್ತಕಗಳನ್ನು ಓದಿ, ಆಸಕ್ತಿ ಹೆಚ್ಚುತ್ತದೆ ಹಾಗೂ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗುತ್ತದೆ.
  2. ಯಾವ ಉದ್ದೇಶಕ್ಕೆ ಓದಬೇಕು: ವೃತ್ತಿಪರ ಕೋರ್ಸ್​ನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಒಂದು ವಿಷಯವನ್ನು ಓದುವ ಮೊದಲು, ಇದನ್ನು ನಾವು ಯಾವ ಉದ್ದೇಶಕ್ಕೆ ಓದಬೇಕು ಎಂದು ಯೋಚನೆ ಮಾಡಬೇಕಾಗುತ್ತದೆ. ಉದಾಹರಣೆಗೆ ಎಂ.ಬಿ.ಎ. ವಿದ್ಯಾರ್ಥಿಗಳು ಸ್ಟಾಟಿಸ್ಟಿಕ್ಸ್ (ಅಂಕಿ ಅಂಶಗಳು) ಏಕೆ ಓದಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಮೂಲಭೂತವಾಗಿ ಎಂ.ಬಿ.ಎ. ಕೋರ್ಸ್ ನಮಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಅಂಕಿ ಅಂಶಗಳ ಸಹಾಯವಿಲ್ಲದೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅಂಕಿ ಅಂಶಗಳನ್ನು ಒಂದು ವಿಷಯವಾಗಿ ಓದುವುದು ಅನಿವಾರ್ಯ. ಯಾವುದೇ ವಿಷಯ ಓದುವುದಕ್ಕಿಂತ ಮೊದಲು ಈ ವಿಷಯ ನೀವು ಮುಂದೆ ಆರಿಸಿಕೊಳ್ಳುವ ವೃತ್ತಿಯಲ್ಲಿ ಹೇಗೆ ಸಹಾಯಮಾಡಬಲ್ಲದು ಹಾಗೂ ಅದು ಎಲ್ಲಿ ಅನ್ವಯವಾಗುತ್ತದೆ ಎಂದು ತಿಳಿದುಕೊಳ್ಳಬೇಕು.
  3. ಗುಣಮಟ್ಟದ ಅಧ್ಯಯನ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಹೆಚ್ಚಿಗೆ ವಿಷಯವನ್ನು ಅಧ್ಯಯನವನ್ನು ಮಾಡಲು ಹೇಳುವುದು ಅತ್ಯಂತ ಸೂಕ್ತವಾದದು. ಪಠ್ಯಕ್ರಮ ಎಷ್ಟೇ ವಿಸõತವಾಗಿದ್ದರೂ, ಗುಣಮಟ್ಟದ ಅಧ್ಯಯನಕ್ಕೆ ಹೆಚ್ಚು ಒತ್ತುಕೊಡಿ. ಸಾಕಷ್ಟು ಕೇಸ್ ಸ್ಟಡಿಗಳನ್ನು ಓದಿ, ಮೂಲಭೂತ ವ್ಯಾಖ್ಯೆಗಳನ್ನು ಓದಿ, ಬರೆದು, ಅಭ್ಯಾಸ ಮಾಡಿ. ಆದಷ್ಟು ಬೇಗ, ಸಿಲೆಬಸ್ ಮುಗಿಸುವ ಬಗ್ಗೆ ಯೋಚನೆ ಮಾಡಬೇಡಿ. ನೀವು ಹೆಚ್ಚಿನ ಆಸಕ್ತಿ ಬೆಳಸಿಕೊಂಡಷ್ಟು ವಿಷಯ ಸರಳವೆನಿಸುತ್ತದೆ.
  4. ಅನವಶ್ಯಕ ಭಯ ಬೇಡ: ಇನ್ನು ಪ್ರಾಬ್ಲಮ್ ಓರಿಯಂಟೆಡ್ ವಿಷಯಗಳಲ್ಲಿ ಎಲ್ಲಿ ಗಣಿತ, ಸಂಖ್ಯಾಶಾಸ್ತ್ರಗಳನ್ನು ಉಪಯೋಗಿಸಿ ವಿಷಯಗಳನ್ನು ಓದಬೇಕಾಗಿರುವುದೋ, ಅಲ್ಲಿ ಅನವಶ್ಯಕ ಭಯ ಬೇಡ. ಗಣಿತ, ಸಂಖ್ಯಾಶಾಸ್ತ್ರ, ಲೆಕ್ಕಶಾಸ್ತ್ರ, ಹಣಕಾಸು ನಿರ್ವಹಣೆ, ವಿಷಯಗಳನ್ನು ಕಥೆ, ಕಾದಂಬರಿಗಳ ತರಹ ಓದಬೇಡಿ, ಮೂಲಭೂತ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡು ಪಠ್ಯಪುಸ್ತಕದಲ್ಲಿರುವಂತೆ, ಹೇಗೆ ಸಮಸ್ಯೆಗಳನ್ನು ಬಿಡಿಸಿದ್ದಾರೆ ಎಂಬುದನ್ನು ನೋಡಿಕೊಂಡು, ಅರ್ಥವಾಗದಿದ್ದಲ್ಲಿ ಸಂಬಂಧಪಟ್ಟ ಶಿಕ್ಷಕರೊಡನೆ ಯಾವ ಸಂಕೋಚವೂ ಇಲ್ಲದೆ ರ್ಚಚಿಸಿ, ಸ್ನೇಹಿತರ ಸಹಾಯ ಪಡೆದು, ಸಮಸ್ಯೆಗಳನ್ನು ಬಿಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
  5. ಹಳೇ ಪ್ರಶ್ನೆಪತ್ರಿಕೆ ನೋಡಬೇಡಿ: ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡುವ ಮೊದಲು, ಒಂದು ಬಾರಿ ಯಾದರೂ ನಿಮಗೆ ಅಧ್ಯಯನಕ್ಕೆ ನಿಗದಿಯಾಗಿರುವ ವಿಷಯ ಓದಿ. ಕೇವಲ ಪ್ರಶ್ನೆಗಳಿಗೆ ಒಂದು ಆಕರದಿಂದ ಉತ್ತರ ಸಿದ್ಧಪಡಿಸಿದರೆ ಅದು ಅಧ್ಯಯನ ಎನಿಸುವುದಿಲ್ಲ.
  6. ಬೇರೆಯವರ ನೋಟ್ಸ್ ಬೇಡ: ನೀವು ಒಬ್ಬ ಪಿ.ಜಿ. ವಿದ್ಯಾರ್ಥಿಯಾಗಿರುವುದರಿಂದ ಈಗಿನಿಂದಲೇ ವಿಶ್ವದರ್ಜೆಯ ಉತ್ತಮ ಪುಸ್ತಕಗಳನ್ನು ಓದಲು ಸಾಕಷ್ಟು ಸಮಯ ಮೀಸಲಿಡಿ. ಇದು ನಿಮ್ಮ ಪರೀಕ್ಷೆಯ ಗುಣಮಟ್ಟದ ತಯಾರಿಕೆಗೂ ಹಾಗೂ ನಂತರ ನಿಮ್ಮ ವೃತ್ತಿ ಜೀವನದಲ್ಲಿಯೂ ತುಂಬ ಸಹಕಾರಿಯಾಗುತ್ತದೆ. ದಯವಿಟ್ಟು ಬೇರೆಯವರ ಶಾರ್ಟ್-ಕಟ್ ಟಿಪ್ಪಣಿಗಳನ್ನು ಓದಲೇಬೇಡಿ.
  7. ಓದಿದ್ದನ್ನೆಲ್ಲಾ ಬರೆಯಬೇಡಿ: ಕೆಲವೊಮ್ಮೆ ವಿದ್ಯಾರ್ಥಿಗಳು ನಾನು ಉಪಯೋಗಿಸುವ ಪಿಪಿಟಿಯ ಎಲ್ಲಾ ಪಾಯಿಂಟ್​ಗಳನ್ನು ಬರೆದುಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರಾಧ್ಯಾಪಕರು ಒಂದು ಹೊಸ ಪರಿ ಕಲ್ಪನೆಯನ್ನು ತರಗತಿಗೆ ಹೇಗೆ ಪರಿಚಯಿಸುತ್ತಾರೆ ಎಂಬುದರ ಬಗ್ಗೆ ಆಸಕ್ತಿ ಇರಲಿ. ನಿಮಗೆ ಪರಿಕಲ್ಪನೆ ಅರ್ಥವಾಗದಿದ್ದಲ್ಲಿ ಪ್ರಾಧ್ಯಾಪಕರನ್ನು ಆ ಪರಿಕಲ್ಪನೆಯ ಮೇಲೆ ಹೆಚ್ಚು ಉದಾಹರಣೆಗಳನ್ನು ನೀಡುವಂತೆ ಕೇಳಿಕೊಳ್ಳಿ. ಎಷ್ಟೋ ವಿದ್ಯಾರ್ಥಿಗಳು ತಾವು ಸೆಮಿಸ್ಟರ್ ಪೂರ್ತಿ ತರಗತಿಯಲ್ಲಿ ಬರೆದುಕೊಂಡ ನೋಟ್ಸ್​ಗಳನ್ನು ತಾವೇ ಓದುವುದಿಲ್ಲ. ನೆನಪಿರಲಿ. ಓದಿ ಅರ್ಥೈಸಿಕೊಂಡು ಮನನ ಮಾಡುತ್ತಹೋಗಿ, ಹೊಸ ಹೊಸ ಉದಾಹರಣೆಗಳನ್ನು ಪರಿಕಲ್ಪನೆಗೆ ತಕ್ಕಂತೆ ನೆನಪಿಡಿ. ಅದೇ ನಿಜವಾದ ಕಲಿಕೆ. ಪರೀಕ್ಷೆಯ ಹಿಂದಿನ ದಿನವೂ ಪಠ್ಯಪುಸ್ತಕಗಳನ್ನು ಓದಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ.
  8. ಋಣಾತ್ಮಕವಾಗಿ ಆಲೋಚಿಸದಿರಿ: ಪರೀಕ್ಷೆ ಸಮೀಪಿಸುತ್ತಿರುವಂತೆ ಎಲ್ಲಾ ಋಣಾತ್ಮಕ ಆಲೋಚನೆಗಳಿಂದ ದೂರವಿರಿ. ನಿಮ್ಮ ಸೀನಿಯರ್ಸ್ ಹಿಂದಿನ ಫಲಿತಾಂಶದ ಬಗ್ಗೆ ಮಾತನಾಡಬಹುದು. ಒಬ್ಬ ಮೌಲ್ಯಮಾಪಕರ ಬಗ್ಗೆ ನಿಮಗೆ ತಪ್ಪು ಮಾಹಿತಿ ನೀಡಬಹುದು. ಪರೀಕ್ಷೆಗಾಗಿ ಅತ್ಯುತ್ತಮ ತಯಾರಿ ನಡೆಸುವುದನ್ನು ಬಿಟ್ಟು ಪರೀಕ್ಷೆ ಫಲಿತಾಂಶ, ಮುಂದಿನ ಜೀವನದ ಬಗ್ಗೆ ಚಿಂತೆಯನ್ನು ಪರೀಕ್ಷೆ ಮುಗಿಯುವ ತನಕ ಒಂದು ನಿಮಿಷವೂ ಮಾಡಬೇಡಿ.
  9. ದೈಹಿಕ, ಮಾನಸಿಕ ಆರೋಗ್ಯ: ನಿಮಗೆ ಇಷ್ಟವಾದ ಆಹಾರವನ್ನು ನಿಯಮಿತವಾಗಿ ಸೇವನೆ ಮಾಡಿ. ಪರೀಕ್ಷೆ ಮುಗಿಯವ ತನಕ ಕರಿದ ಪದಾರ್ಥಗಳನ್ನು ಕಡಿಮೆಮಾಡಿ. ಅನವಶ್ಯಕವಾಗಿ ಅತೀ ಹೆಚ್ಚು ಟೀ, ಕಾಫಿ ಕುಡಿಯಬೇಡಿ, ಸ್ವಲ್ಪ ದುಬಾರಿಯಾದರೂ ಅಡ್ಡಿ ಇಲ್ಲ, ಹಣ್ಣುಗಳ ಸೇವನೆ ಮಾಡಿ. ದಿನನಿತ್ಯ 1 ಗಂಟೆಯ ವೇಗದ ನಡಿಗೆ ನಿಮ್ಮನ್ನು ಯಾವಾಗಲೂ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಸ್ಥಿರವಾಗಿಡಬಲ್ಲದು. ಒಂದು ಸಣ್ಣ, ನೃತ್ಯ, ಯೋಗ, ಧ್ಯಾನ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಬಲ್ಲವು.
  10. ಗೆಲುವು ಪಡೆಯುವ ವಿಶ್ವಾಸವಿರಲಿ: ಯಾವಾಗಲೂ ಪರೀಕ್ಷೆಯಲ್ಲಿ ಗೆಲುವು ಪಡೆಯುವ ವಿಶ್ವಾಸವಿರಲಿ. ಪರೀಕ್ಷೆ ಮುಗಿಯುವ ತನಕ ವಾಟ್ಸ್​ಪ್, ಫೇಸ್​ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದಿಂದ ದೂರವಿರಿ, ಯಾರಾದರೂ ಪ್ರಶ್ನೆಪತ್ರಿಕೆ ಪರೀಕ್ಷೆಗೆ ಮೊದಲೇ ಹೊರಬಂದಿರುವುದನ್ನು ನಿಮಗೆ ತಿಳಿಸಲು ಯತ್ನಿಸಿದರೆ, ಅದರಿಂದ ಗಾಬರಿಗೊಳ್ಳಬೇಡಿ, ಆ ಪ್ರಶ್ನೆ ಪತ್ರಿಕೆಯ ಹುಡುಕಾಟದಲ್ಲಿ ತೊಡಗಬೇಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net