

| ಡಾ. ಗುರುಮೂರ್ತಿ ವೀ. ಯರಗಂಬಳಿಮಠ
ಭಾರತದ ಮಣ್ಣಿನ ಪ್ರತಿ ಕಣದಲ್ಲಿಯೂ ಶಿವಶಕ್ತಿ ಚೈತನ್ಯದ ಪಾವನ ಸಾನ್ನಿಧ್ಯವಿದೆ. ದೈವೀ ಭಾವ ತನ್ಮಯತೆಯಲ್ಲಿ ಭರತ ಖಂಡದ ಸಮಗ್ರತೆ ಇಡೀ ಜಗತ್ತಿನಲ್ಲೇ ಅನನ್ಯ. ಶಿವಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿದಿರುವ ಯುಗಪುರುಷ ಶ್ರೀ ವೀರಭದ್ರ ದೇವರು ವೀರಶೈವ ಧರ್ಮ ಪರಂಪರೆಯಲ್ಲಿ ಎದ್ದು ಕಾಣುತ್ತಾನೆ. ಸನಾತನ ವೀರಶೈವ ಧರ್ಮದ ಆಚರಣೆಗಳಿಂದ ಮೊದಲ್ಗೊಂಡು ಇಂದಿಗೂ ಆಚರಿಸಲಾಗುವ ಗುಗ್ಗಳ ಮಹೋತ್ಸವಾದಿ ಆಚರಣೆಗಳಲ್ಲಿ ಅಧರ್ಮವನ್ನು ಕೊನೆಗಾಣಿಸಿ ಧರ್ಮವನ್ನು ಉಳಿಸಿ ಬೆಳೆಸುವ ಆಶಯ ಅಡಕವಾಗಿದೆ.
ಆಂಧ್ರದ ಅನ್ನಮಯ್ಯ ಜಿಲ್ಲಾ ಕೇಂದ್ರಸ್ಥಾನ ರಾಯಚೋಟಿ ಕ್ಷೇತ್ರದಲ್ಲಿ ಶ್ರೀ ವೀರಭದ್ರ ದೇವರು ಮಾತೆ ಭದ್ರಕಾಳಿ ಸಮೇತ ನೆಲೆಸಿದ್ದಾನೆ. ವೀರಭದ್ರ ದೇವಾಲಯದ ಹಿಂಭಾಗದಿಂದ ಸುಮಾರು 1 ಕಿ.ಮೀ. ಅಂತರದಲ್ಲಿ ಅಗಸ್ಱೇಶ್ವರ ದೇವಾಲಯವಿದೆ. ಅಲ್ಲಿ ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿರುವ ಶಿವಲಿಂಗವಿದೆ. ಈ ಶಿವನ ಸಾನ್ನಿಧ್ಯದಲ್ಲಿರುವುದೇ ದೇಶದ ಪ್ರಥಮ ವೀರಭದ್ರ ದೇವರ ಅವತಾರ ಮತ್ತು ಶಿಲಾ ವಿಗ್ರಹ. ಇಲ್ಲಿಂದಲೇ ದೇಶದಾದ್ಯಂತ ವೀರಭದ್ರ ದೇವರ ವಿಗ್ರಹಗಳ ಪ್ರತಿಷ್ಠಾಪನೆಗೆ ಭಗವತ್ಪ್ರೇರಣೆ ದೊರೆತಿದೆ ಎಂದು ಹೇಳಲಾಗುತ್ತದೆ. ಭಾರತದ ಬೇರೆಬೇರೆ ರಾಜ್ಯಗಳಿಂದ ಇಲ್ಲಿಗೆ ಭಕ್ತ ಸಂಕುಲ ಆಗಮಿಸುತ್ತದೆ. ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ತಮ್ಮ ಸಂಕಲ್ಪದ ಸೇವೆ ಸಲ್ಲಿಸಲು ಅಸಂಖ್ಯ ಭಕ್ತಗಣ ವರ್ಷವಿಡೀ ವೀರಭದ್ರ ದೇವರ ಸನ್ನಿಧಿಗೆ ಆಗಮಿಸುತ್ತದೆ. ರಾಜ್ಯದ ಸುಮಾರು 1 ಲಕ್ಷಕ್ಕೂ ಅಧಿಕ ಮನೆತನಗಳಿಗೆ ರಾಯಚೋಟಿ ವೀರಭದ್ರ ದೇವರೇ ಕುಲದೈವ.
ಮೊದಲ ರಥೋತ್ಸವ: ನೂರಾರು ವರ್ಷಗಳಿಂದ ರಾಯಚೋಟಿ ವೀರಭದ್ರ ದೇವರ ವಾರ್ಷಿಕ ಜಾತ್ರೆ ಸಾಂಪ್ರದಾಯಿಕ ಧಾರ್ವಿುಕ ಉತ್ಸವಗಳ ಮೂಲಕ ಜರುಗುತ್ತ ಬಂದಿದ್ದರೂ ರಥೋತ್ಸವ ಇರಲಿಲ್ಲ. ಇದನ್ನು ಗಮನಿಸಿದ ಹುಬ್ಬಳ್ಳಿಯ ಭಕ್ತ ಸಮೂಹ ವೀರಭದ್ರ ದೇವರಿಗೆ ಹೊಸದಾಗಿ ರಥ ನಿರ್ವಿುಸಲು ಸಂಕಲ್ಪಿಸಿತು. ಸುಮಾರು 10.5 ಲಕ್ಷ ರೂ. ವೆಚ್ಚದಲ್ಲಿ ಹೊಸ ರಥ ನಿರ್ವಣವಾಯಿತು. ಅದರಲ್ಲಿ ಭದ್ರಕಾಳಿ ಸಮೇತ ವೀರಭದ್ರ ದೇವರ ಮೊದಲ ರಥೋತ್ಸವ 2011ರಲ್ಲಿ ಯಶಸ್ವಿಯಾಗಿ ಜರುಗಿತು. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕೇದಾರ ವೈರಾಗ್ಯ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಮೊದಲ ರಥೋತ್ಸವ ಉದ್ಘಾಟಿಸಿದರು. 2020ರಲ್ಲಿ ಜರುಗಿದ ಈ ರಥೋತ್ಸವದ ದಶಮಾನೋತ್ಸವವನ್ನು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಉದ್ಘಾಟನೆ ಮಾಡಿದ್ದರು. ಜತೆಗೆ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಈ ಕ್ಷೇತ್ರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಜರುಗಿಸಿ ಆಶೀರ್ವದಿಸಿದ್ದರು.
ವಿಶೇಷ ಉತ್ಸವಗಳು: ಜಾತ್ರೆ ಅಂಗವಾಗಿ ರಾಯಚೋಟಿ ವೀರಭದ್ರೇಶ್ವರ ಸನ್ನಿಧಾನದಲ್ಲಿ ಫೆ. 16ರಿಂದ ಫೆ. 25ರವರೆಗೆ ವಿವಿಧ ವಿಶೇಷ ಉತ್ಸವಗಳು ಜರುಗಲಿವೆ. ಫೆ. 16ರಂದು ಕಲ್ಯಾಣ ಉತ್ಸವ ಮತ್ತು ಗಜ ವಾಹನೋತ್ಸವ, ಫೆ.17 ಯಾಳಿ ಹಾಗೂ ಸಿಂಹ ವಾಹನೋತ್ಸವ, ಫೆ. 18 ಪುರುಷ ಮೃಗ ಮತ್ತು ಮಯೂರ ವಾಹನೋತ್ಸವ, ಜತೆಗೆ ಮಹಾ ಶಿವರಾತ್ರಿ ನಿಮಿತ್ತ ಅಘೊರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮಹಾಪೂಜೆ, ಫೆ. 19 ಹುಲಿ ಹಾಗೂ ಚಂದ್ರಪ್ರಭಾ ವಾಹನೋತ್ಸವ, ಫೆ. 20 ಶೇಷ ಮತ್ತು ರಾವಣ ವಾಹನೋತ್ಸವ, ಜತೆಗೆ ಅಮಾವಾಸ್ಯೆಯ ಚಂಡಿ ಹೋಮ, ಪುಷ್ಪಯಾಗ, ಫೆ. 21 ಸೂರ್ಯಪ್ರಭ ಉತ್ಸವ ಹಾಗೂ ನಂದಿ ವಾಹನೋತ್ಸವ; ಅದೇ ದಿನ ವೀರಭದ್ರೇಶ್ವರ ದೇವರಿಗೆ ಹಾಗೂ ಭದ್ರಕಾಳಿ ಅಮ್ಮನವರಿಗೆ ಬಂಗಾರದ ಕಿರೀಟ ಧಾರಣೆ ನಡೆಯಲಿದೆ. ಫೆ. 22 ಪ್ರಾತಃಕಾಲ 4 ಗಂಟೆಗೆ ರಾಯಚೋಟಿ ವೀರಭದ್ರೇಶ್ವರ ದೇವರ ಅಂಗ್ನಿಕುಂಡ ಪ್ರವೇಶೋತ್ಸವ ಸಾವಿರಾರು ಪುರವಂತರು ಮತ್ತು ಭಕ್ತರೊಂದಿಗೆ ಜರುಗಲಿದೆ. ನಂತರ ಮುಂಜಾನೆ 11.45ಕ್ಕೆ ವಜ್ರ ತ್ರಿನೇತ್ರ ಧಾರಣೆ ಹಾಗೂ ಮಹಾನೈವೇದ್ಯ, ಸಂಜೆ 4.30ಕ್ಕೆ ಭದ್ರಕಾಳಿ ಸಮೇತ ವೀರಭದ್ರ ದೇವರ ಮಹಾ ರಥೋತ್ಸವವು ವಿವಿಧ ಜನಪದ ವಾದ್ಯಮೇಳಗಳೊಂದಿಗೆ ನಡೆಯಲಿದೆ. ಫೆ. 23 ವಸಂತೋತ್ಸವ ಮತ್ತು ಹಂಸವಾಹನೋತ್ಸವ, ಫೆ. 24 ಸರಸ್ವತಿ ಪೂಜೆ ಹಾಗೂ ಅಶ್ವವಾಹನೋತ್ಸವ, ಫೆ. 25 ಪಲ್ಲಕ್ಕಿ ಮತ್ತು ಉಯ್ಯಾಲೆ ಉತ್ಸವ ನಡೆಯರಿವೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳ ಅಸಂಖ್ಯಾತ ಭಕ್ತರು ಈ 10 ದಿನಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ವೀರಭದ್ರದೇವರ ಕೃಪೆಗೆ ಪಾತ್ರರಾಗಲಿದ್ದಾರೆ. ಭಕ್ತಗಣಕ್ಕೆ ನಿರಂತರ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ವೀರಭದ್ರಸ್ವಾಮಿ ದೇವಸ್ಥಾನ ಟ್ರಸ್ಟ ಕಮಿಟಿ, ಹುಬ್ಬಳ್ಳಿಯ ವೀರಭದ್ರೇಶ್ವರಸ್ವಾಮಿ ರಥೋತ್ಸವ ಸೇವಾ ಸಮಿತಿ ಹಾಗೂ ವೀರಭದ್ರಸ್ವಾಮಿ ದಾಸೋಹ ಸೇವಾ ಸಮಿತಿ ಜಂಟಿಯಾಗಿ ಎಲ್ಲ ಸೇವಾ ಕೈಂಕರ್ಯಗಳನ್ನು ನಡೆಸಿಕೊಡುತ್ತವೆ. ಜಾತ್ರೆಯ 10 ದಿನಗಳ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇಲ್ಲಿ ಮೇಳೈಸಿ ಮೆರುಗು ತುಂಬಲಿವೆ.
ಪ್ರಸಕ್ತ ವರ್ಷದ ರಥೋತ್ಸವ: ಪ್ರಸಕ್ತ ವರ್ಷದ ರಥೋತ್ಸವ ಫೆ. 22ರಂದು ನಡೆಯಲಿದೆ. ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಲಿದ್ದಾರೆ. ಫೆ. 21ರಂದು ಮುಂಜಾನೆ 9ಕ್ಕೆ ರಾಯಚೋಟಿ ನಗರದಲ್ಲಿ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಅದೇ ದಿನ ಸಂಜೆ 5.30ಕ್ಕೆ ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜನಜಾಗೃತಿ ಧರ್ಮ ಸಮ್ಮೇಳನವೂ ಜರುಗಲಿದೆ. ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಬೆಳಗಾವಿ ಜಿಲ್ಲೆ ಸಂಪಗಾಂವ ಕಟಾಪುರಿ ಹಿರೇಮಠದ ಚೆನ್ನವೀರ ಶಿವಾಚಾರ್ಯ ಸ್ವಾಮಿಗಳು, ನಂದ್ಯಾಲ ಬ್ರಹ್ಮಶ್ರೀ ನಂದುಲಮಠದ ಶಶಿಭೂಷಣ ಸಿದ್ಧಾಂತಿ ಸ್ವಾಮೀಜಿ ಉಪಸ್ಥಿತರಿರುತ್ತಾರೆ.