

ಒಂದು ಸಿನಿಮಾಗೆ ಎಷ್ಟು ಸಮಯ ಹಾಕುತ್ತೀರಾ ಎಂಬುದು ಮುಖ್ಯವಾಗುವುದಿಲ್ಲ. ಆ ಚಿತ್ರ ಜನರಿಗೆ ಎಷ್ಟು ಇಷ್ಟವಾಗುತ್ತದೆ ಎನ್ನುವುದಷ್ಟೇ ಮುಖ್ಯ. ‘ಶಾಂತಿ ಕ್ರಾಂತಿ’ ಚಿತ್ರಕ್ಕೆ 350ರಿಂದ 400 ದಿನಗಳ ಚಿತ್ರೀಕರಣ ಮಾಡಿದೆ. ‘ರಾಮಾಚಾರಿ’ 35 ದಿನಗಳಲ್ಲಿ ಮುಗಿಯಿತು. ಆ ಚಿತ್ರ ದೊಡ್ಡ ಹಿಟ್ ಆಯಿತು. ನಾನು ಕಷ್ಟಪಟ್ಟೆ, ತುಂಬ ಖರ್ಚು ಮಾಡಿದೆ ಎಂದರೆ ಜನ ಸಿನಿಮಾ ನೋಡುವುದಿಲ್ಲ. ಅವರು ಸಿನಿಮಾ ನೋಡುವುದು ಬೇರೆ ಕಾರಣಕ್ಕೆ. ಅವರು ಒಂದು ಚಿತ್ರಕ್ಕೆ ಮೀಸಲಿಡುವ ಎರಡೂವರೆ ಗಂಟೆ ಸಮಯಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ಅವರ ಸಮಯಕ್ಕೆ ನಾವು ಮನರಂಜಿಸಬೇಕು. ಬೇಸರ ತರಿಸಬಾರದು.
ಅದರಲ್ಲೂ ಜನ ರವಿಚಂದ್ರನ್ ಸಿನಿಮಾ ಎಂದರೆ ಏನೋ ಮಾಡಿರುತ್ತಾರೆ, ಹೊಸದೇನೋ ತೋರಿಸಿರುತ್ತಾರೆ ಎಂದು ಬಂದಿರುತ್ತಾರೆ. ಅವರನ್ನು ತೃಪ್ತಿಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಈಗ ಕಾಲ ಸಾಕಷ್ಟು ಬದಲಾಗಿದೆ. ನಮ್ಮನ್ನು ಆಗ ಪ್ರೀತಿಸುತ್ತಿದ್ದ ಜನ ಬೇರೆ. ಈಗಿನ ಪ್ರೇಕ್ಷಕರು ಬೇರೆ. ಅವರಿಗೆ ಬೇರೆಬೇರೆ ಸ್ಟಾರ್ಗಳು ಕಾಣಿಸುತ್ತಿರುತ್ತಾರೆ. ಆದರೂ ಒಂದು ಕಣ್ಣು ನಮ್ಮ ಮೇಲೆ ಇರುತ್ತದೆ. ಅವರನ್ನೂ ಮೆಚ್ಚಿಸಬೇಕು, ಹಳಬರನ್ನೂ ಮೆಚ್ಚಿಸಬೇಕು. ಇದು ದೊಡ್ಡ ಸವಾಲು ನನಗೆ.
ಈಗ ಹಲವು ವೇದಿಕೆಗಳಿವೆ: ನನಗೆ ನನ್ನ ಸಿನಿಮಾಗಳನ್ನು ಮಾತ್ರ ನಿರ್ದೇಶನ ಮಾಡಬೇಕು ಅಂತೇನಿಲ್ಲ. ದುಡ್ಡು ಹಾಕುವುದಕ್ಕೆ ನಿರ್ವಪಕರು ಬಂದರೆ, ಬೇರೆ ಹೀರೋಗಳ ಚಿತ್ರ ನಿರ್ದೇಶನ ಮಾಡುವುದಕ್ಕೂ ಸಿದ್ಧ. ಆದರೆ, ನಾನು ದುಡ್ಡು ಖರ್ಚು ಮಾಡಿಸುತ್ತೇನೆ ಎಂದು ಬಹಳಷ್ಟು ಜನರಿಗೆ ಭಯವಿದೆ. ಹೆಚ್ಚು ಖರ್ಚು ಮಾಡಿಸುತ್ತೇನೆ ಎನ್ನುವುದೆಲ್ಲ ಸುಳ್ಳು. ಪ್ರತಿ ಚಿತ್ರಕ್ಕೂ ಅದರದ್ದೇ ಆದ ಬಜೆಟ್ ಇರುತ್ತದೆ, ಇತಿಮಿತಿಗಳಿರುತ್ತವೆ. ‘ರಾಮಾಚಾರಿ’ ಚಿತ್ರಕ್ಕೆ ‘ಶಾಂತಿ ಕ್ರಾಂತಿ’ಯ ಬಜೆಟ್ ಖರ್ಚು ಮಾಡುವುದಕ್ಕೆ ಸಾಧ್ಯವಿಲ್ಲ. ಕಥೆ ಮಾಡುವಾಗ, ಈ ಚಿತ್ರಕ್ಕೆ ಇಷ್ಟು ಬಜೆಟ್ ಬೇಕು ಎಂಬುದು ಗೊತ್ತಾಗುತ್ತದೆ. ಅದನ್ನು ಕೊಟ್ಟರೆ ಸಾಕು. ಹಾಗೆ ನೋಡಿದರೆ, ಈಗಿನ ಕಾಲದಲ್ಲಿ ಬಜೆಟ್ ದೊಡ್ಡ ವಿಷಯವೇ ಅಲ್ಲ. ಏಕೆಂದರೆ, ಚಿತ್ರರಂಗ ಬೆಳೆದಿದೆ. ಮುಂಚೆ ಒಂದು ಚಿತ್ರ ಒಂದು ವರ್ಷದಲ್ಲಿ ಕಲೆಕ್ಟ್ ಮಾಡುವ ಹಣ, ಈಗ ಒಂದು ದಿನದಲ್ಲಿ ಬರುತ್ತದೆ. ಸರಿಯಾಗಿ ಹೋಂವರ್ಕ್ ಮಾಡಿದರೆ ಒಂದೇ ವಾರದಲ್ಲಿ ದುಡ್ಡು ತೆಗೆಯಬಹುದು. ಅದೇ ರೀತಿ ಕೆಟ್ಟ ಸಿನಿಮಾ ಎಂದರೆ ಒಂದೇ ದಿನಕ್ಕೆ ವಾಪಸ್ಸು ಮನೆಗೂ ಕಳಿಸುತ್ತಾರೆ.
ಮುಂಚೆ ಚಿತ್ರಮಂದಿರದಿಂದ ಮಾತ್ರ ದುಡ್ಡು ಬರಬೇಕಿತ್ತು. ಈಗ ಹಲವು ವೇದಿಕೆಗಳಿವೆ. ಸ್ಯಾಟಲೈಟ್, ಒಟಿಟಿ, ಡಬ್ಬಿಂಗ್... ಹೀಗೆ ಬೇರೆಬೇರೆ ಮಾರುಕಟ್ಟೆಗಳು ಹುಟ್ಟಿಕೊಂಡಿವೆ. ಚೆನ್ನಾಗಿ ಮಾಡಿದರೆ, ಚೆನ್ನಾಗಿ ದುಡ್ಡಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಕಡಿಮೆಯಾಗುತ್ತಿದ್ದಾರೆ, ವಿಮರ್ಶಕರು ಹೆಚ್ಚುತ್ತಿದ್ದಾರೆ. ಇವತ್ತು ಯಾರು ಬೇಕಾದರೂ ಚಿತ್ರದ ಬಗ್ಗೆ ಮಾತನಾಡಬಹುದು, ವಿಮರ್ಶೆ ಮಾಡಬಹುದು. ಅವರಿಗೆ ಸಿನಿಮಾ ಬಗ್ಗೆ ಎಷ್ಟು ಗೊತ್ತು ಎಂದು ಪ್ರಶ್ನೆ ಮಾಡುವುದಕ್ಕೆ ಯಾರೂ ಇಲ್ಲ. ಈ ನಿಟ್ಟಿನಲ್ಲಿ ಜನ ಬುದ್ಧಿವಂತರಾಗಬೇಕು; ಸತ್ಯ-ಸುಳ್ಳುಗಳ ಬಗ್ಗೆ ಯೋಚನೆ ಮಾಡಬೇಕು. ಇವತ್ತಿನ ದಿನಗಳಲ್ಲಿ ಸ್ಟಾರ್ಗಳನ್ನು, ಲೈಕ್ಗಳನ್ನು ಖರೀದಿಸಬಹುದು ಎಂದು ಗೊತ್ತಿದ್ದರೆ, ನಿಜ ಯಾವುದು-ಸುಳ್ಳು ಯಾವುದು ಎಂದು ಅರ್ಥವಾಗುತ್ತದೆ.
ಚಿತ್ರಮಂದಿರದ ಅನುಭವವೇ ಬೇರೆ: ಪೈರಸಿ ಕಾಟ ಹಿಂದೆಂದಿ ಗಿಂತಲೂ ಈಗ ಹೆಚ್ಚಾಗಿದೆ. ರಜನಿಕಾಂತ್ ಸಿನಿಮಾಗಳೇ ಒಂದೇ ದಿನದಲ್ಲಿ ಟೆಲಿಗ್ರಾಮ್ಲ್ಲಿ ಬಿಡುಗಡೆಯಾಗುವಂತಹ ಪರಿಸ್ಥಿತಿ ಇದೆ. ಅದನ್ನೇ ನಿಲ್ಲಿಸೋಕೆ ಆಗುತ್ತಿಲ್ಲ ಎಂದರೆ, ನಮ್ಮ ಸಿನಿಮಾ ಹೇಗೆ ನಿಲ್ಲಿಸುವುದಕ್ಕೆ ಸಾಧ್ಯ ಹೇಳಿ? ಸಿನಿಮಾ ಚೆನ್ನಾಗಿದ್ದರೆ ಅದು ಸಮಸ್ಯೆ ಆಗುವುದಿಲ್ಲ. ಚೆನ್ನಾಗಿದ್ದಾಗ ಚಿತ್ರಮಂದಿರದಲ್ಲಿ ನೋಡಬೇಕು ಎಂದು ಮನಸ್ಸಾಗುತ್ತದೆ. ಚೆನ್ನಾಗಿಲ್ಲದಿದ್ದರೆ, ಮೊಬೈಲ್ನಲ್ಲೇ ನೋಡಿಬಿಡೋಣ ಎಂದು ಸುಮ್ಮನಾಗಿಬಿಡುತ್ತಾರೆ. ಏನೇ ಆದರೂ, ಚಿತ್ರಮಂದಿರದ ಅನುಭವಕ್ಕೆ ಹೋಲಿಕೆಯೇ ಇಲ್ಲ. ಮೊಬೈಲ್ನಲ್ಲಿ ಚಿತ್ರ ನೋಡುವಾಗ ಹಲವು ಅಡಚಣೆಗಳು ಇರುತ್ತವೆ. ಆದರೆ, ಚಿತ್ರಮಂದಿರಗಳಲ್ಲಿ ಹಾಗಿಲ್ಲ.
ಪರಭಾಷೆಯವರಿಗೆ ಹೆಚ್ಚಿನ ಜಾಗ: ಚಿತ್ರರಂಗ ಬೆಳೆಯಬೇಕೆಂದರೆ ಬೇರೆಬೇರೆ ತರಹದ ಸಿನಿಮಾಗಳು ಬರಬೇಕು. ಜನ ಯಾವತ್ತೂ ಹೊಸ ಪ್ರಯತ್ನಗಳಿಗೆ ಬೆಂಬಲ ಕೊಡುತ್ತಾರೆ. ಪ್ರಯತ್ನಕ್ಕೆ ಬೆಲೆ ಬಂದಾಗ, ಸಹಜವಾಗಿಯೇ ವಿಭಿನ್ನ ಸಿನಿಮಾಗಳು ಬರುತ್ತವೆ. ಪ್ರಯತ್ನಗಳು ಸೋತರೆ, ಹೊಸದೇನನ್ನೋ ಟ್ರೖೆ ಮಾಡುವುದಕ್ಕೆ ಹೆದರುತ್ತಾರೆ. ಮತ್ತೆ ಅದೇ ತರಹದ ನಾಲ್ಕು ಹಾಡು, ನಾಲ್ಕು ಫೈಟಿನ ಸಿನಿಮಾಗಳನ್ನು ಮಾಡುತ್ತಾರೆ.
ಈಗಂತೂ ಹೀರೋ ಪರಿಕಲ್ಪನೆಯೇ ಬದಲಾಗಿದೆ. ಹೀರೋ ಎಂದರೆ ಆರಡಿ ಇರಬೇಕು, ಒಂಬತ್ತಡಿ ಇರಬೇಕು ಎಂಬ ಕಲ್ಪನೆಯಲ್ಲ ಹೋಯಿತು. ಹೀರೋ ಎನ್ನುವವನು ಸ್ಕ್ರೀನ್ ಮೇಲೆ ಹೀರೋ ಆಗಬೇಕು. ಆತ ಮಾಡುವ ಪಾತ್ರದಲ್ಲಿ ಗೆಲ್ಲಬೇಕು, ಜನರ ಮನಸ್ಸಿನಲ್ಲುಳಿಯಬೇಕು. ಜನ ಯಾಕೆ ‘ಒಂದು ಮೊಟ್ಟೆಯ ಕಥೆ’ ನೋಡಿ ಗೆಲ್ಲಿಸಿದರು ಎಂದರೆ, ಅಲ್ಲಿ ಹೀರೋ ಬಹಳ ಕನ್ವಿನ್ಸಿಂಗ್ ಆಗಿದ್ದರು. ಈ ತರಹ ನಾಲ್ಕು ಜನ ಹುಟ್ಟಿಕೊಳ್ಳಬೇಕು. ಅವರ ಕಡೆಯಿಂದ ಪ್ರತೀ ವರ್ಷ ಎರಡು ಸಿನಿಮಾಗಳು ಬರಬೇಕು. ಇದರ ಜತೆಗೆ ನಮ್ಮ ಕಮರ್ಷಿಯಲ್ ಹೀರೋಗಳು ಸಹ ವರ್ಷಕ್ಕೆ ಎರಡೆರಡು ಸಿನಿಮಾಗಳನ್ನು ಮಾಡಬೇಕು. ಆಗ ಬ್ಯಾಲೆನ್ಸ್ ಸರಿಯಾಗಿರುತ್ತದೆ. ಎಲ್ಲ ತರಹದ ಸಿನಿಮಾಗಳು ಬಂದರೆ ಆಗ ನಾವು ಸ್ಪರ್ಧೆ ಮಾಡಬಹುದು. ಇದು ಮಿಸ್ ಆಗುತ್ತಿರುವುದರಿಂದಲೇ, ನಾವು ಬೇರೆ ಭಾಷೆಯವರಿಗೆ ಹೆಚ್ಚಿನ ಜಾಗ ಕೊಡುತ್ತಿದ್ದೇವೆ.
ನಿರೀಕ್ಷೆ ಮತ್ತು ವಾಸ್ತವ: ಮುಂಚಿನ ತರಹ ಒಂದು ಚಿತ್ರ 100 ದಿನ ಓಡುತ್ತದೆ, ಸಿಲ್ವರ್ ಜ್ಯೂಬಿಲಿ ಬಾರಿಸುತ್ತದೆ ಎಂದು ನಿರೀಕ್ಷಿಸುವುದು ತಪು್ಪ. ಈಗೇನಿದ್ದರೂ ಮೊದಲ ವಾರದ ಕಲೆಕ್ಷನ್ ಬಹಳ ಮುಖ್ಯವಾಗುತ್ತದೆ. ಆ ಒಂದು ವಾರದಲ್ಲಿ ಚಿತ್ರಕ್ಕೆ ಹಾಕಿದ ಹಣವನ್ನು ಎಳೆದುಕೊಳ್ಳಬೇಕು. ಎರಡನೆಯ ವಾರದ ನಂತರ ಮಲ್ಟಿಪ್ಲೆಕ್ಸ್ ಗಳ ಶೇರ್ ಜಾಸ್ತಿಯಾಗಿ, ನಿರ್ವಪಕರ ಶೇರ್ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ, ಎಲ್ಲರೂ ಹೆಚ್ಚುಹೆಚ್ಚು ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರಗಳನ್ನು ಹಾಕುವುದಕ್ಕೆ ಮುಂದಾಗುತ್ತಾರೆ. ಕೆಲವು ಚಿತ್ರಗಳಿಗೆ ಅಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳ ಅವಶ್ಯಕತೆ ಇರುವುದಿಲ್ಲ. ಆದರೂ ಜನ ಬರಬಹುದು, ಬೇಗ ದುಡ್ಡು ಮಾಡಿಕೊಳ್ಳಬಹುದು ಎಂದು ಚಿತ್ರ ಪ್ರದರ್ಶನ ಮಾಡಲಾಗುತ್ತದೆ. ಆಗ ಇನ್ನಷ್ಟು ಖರ್ಚಾಗುತ್ತದೆ. ಇಲ್ಲಿ ಗೆದ್ದಾಗಷ್ಟೇ ಚೆನ್ನಾಗಿರುತ್ತದೆ. ಸೋತರೆ ತುಂಬ ಏಟು ಬೀಳುತ್ತದೆ. ಮಧ್ಯೆ ಬ್ಯಾಲೆನ್ಸ್ ಎನ್ನುವುದೇ ಇರುವುದಿಲ್ಲ.
(ಲೇಖಕರು ಖ್ಯಾತ ನಟ-ನಿರ್ದೇಶಕ)