ಒಬ್ಬಂಟಿ ಹೆಂಗಸರು ಏನು ಮಾಡುತ್ತಿರುತ್ತಾರೆ?

ravi mar 20
Published on

ಬ್ಬರು ಹೆಂಗಸರು ಒಟ್ಟಿಗೆ ಸೇರಿದರೆ ಏನು ಮಾತಾಡಿಕೊಳ್ಳುತ್ತಾರೆ ಎಂಬ ಬಗೆಗಿನ ನನ್ನ ಕುತೂಹಲ ಯಾವತ್ತೋ ಖಾಲಿಯಾಯ್ತು. ಸಾಮಾನ್ಯವಾಗಿ ಇಬ್ಬರು ಹೆಂಗಸರು ಒಬ್ಬರನ್ನೊಬ್ಬರು ಸೇರುವುದಿಲ್ಲ. ಸೇರಿದರೂ ನೇರವಾಗಿ ತಮಗೆ ಸಂಬಂಧಿಸಿದ ಸಂಗತಿಗಳನ್ನು ಬಿಟ್ಟು ಉಳಿದೆಲ್ಲವನ್ನೂ ಮಾತನಾಡಿಕೊಳ್ಳುತ್ತಾರೆ. ಮಾತು ಮುಗಿದು ಎದ್ದು ಹೋದ ನಂತರ ಪರಸ್ಪರರಿಗೆ ಸಂಬಂಧಿಸಿದ ವಿಷಯಗಳನ್ನು ಮತ್ಯಾರ ಹತ್ತಿರವೋ ಬೇರೆ ಬೇರೆಯಾಗಿ ಮಾತಾಡಿಕೊಳ್ಳುತ್ತಾರೆ. ಅವರ ಭಾಷೆಯಲ್ಲೇ ಇದನ್ನು ಹೇಳುವುದಾದರೆ ಅವರು ಅವರಿವರನ್ನು ‘ಆಡಿಕೋತಾರೆ’! ಆದರೆ ಹೆಂಗಸು ಒಬ್ಬಳೇ ಇದ್ದಾಗ ಏನು ಮಾಡುತ್ತಿರುತ್ತಾಳೆ? ನನಗದು ಸದಾ ಕುತೂಹಲದ ಸಂಗತಿಯೇ. ಗಂಡಸಾದರೆ, ಒಬ್ಬನೇ ಇದ್ದಾಗ ಸಿಗರೇಟು ಸೇದುತ್ತಾನೆ. ಬಿಯರ್ ಕುಡಿಯುತ್ತಾನೆ. ಬೇಜಾರಾದರೆ ಪಿಕ್ಚರಿಗೆ ಹೊರಡುತ್ತಾನೆ. ಗಡ್ಡ ಬಿಡುತ್ತಾನೆ. ಬಿಟ್ಟ ಗಡ್ಡ ಟ್ರಿಮ್ ಮಾಡಿಕೋತಾನೆ. ಯಾರನ್ನೋ ನೆನಪಿಸಿಕೊಂಡು ಇನ್ಯಾರನ್ನೋ ಕರೆತರುತ್ತಾನೆ. ಅದೆಲ್ಲ ಬೇಡವೆನ್ನಿಸಿದರೆ ಸುಮ್ಮನೆ ಮಕಾಡೆ ಮಲಗಿ ನಿದ್ದೆ ಹೋಗುತ್ತಾನೆ. ಬೆಳಗ್ಗೆ ಎದ್ದು ಹಾಗೇ ಆಫೀಸಿಗೆ ಹೋದರೂ, ‘ಪರದೆ ಮಡಚಿ ಹಾಸಿಗೆ ಸುತ್ತಿಟ್ಟು ಯಾಕೆ ಹೋಗಲಿಲ್ಲ’ ಅಂತ ಅವನನ್ನು ಯಾರೂ ಕೇಳುವುದಿಲ್ಲ. ಒಬ್ಬಂಟಿ ಗಂಡಸಿನ ಮನೆ ಅಂದರೇನೇ ಅರಾಜಕತೆ. ಅವನು ಹಾಗಿದ್ದರೇನೇ ಚೆನ್ನ. ಕುದುರೆ ಹಾಗೆ ಬೆವೆತಿದ್ದರೂ ಅದರ ವಿವರಣೆ ಘಮಘಮ. ದಾಡಿ ಮಾಡಿಕೊಳ್ಳದಿದ್ದರೆ ‘ಪಾಪ ಡಿಪ್ರೆಸ್ಡ್ ಫೆಲೋ’ ಅಂತೀವಿ. ಹೋಟೆಲಿನಲ್ಲಿ ಉಂಡು ಬಂದು ಮನೆಯಲ್ಲಿ ಮಲಗಿದರೆ ಗಂಡಸಿಗದು ತೀರ ಸಹಜ. ಅವನೇ ಅಡುಗೆ ಮಾಡಿಕೋತೀನಿ ಅಂತ ಘೊಷಿಸಿ ಬಿಟ್ಟರಂತೂ ಪಕ್ಕದ ಮನೆ ಸಾರು, ಎದುರುಮನೆ ಪಲ್ಯ, ಹಿತ್ತಲಿನವರ ಮಾಂಸದೂಟ, ಕೊನೇ ಮನೆಯ ಅವಿವಾಹಿತೆ ಕಳಿಸೇ ಕಳಿಸುತ್ತಾಳೆ ಹೆಪ್ಪಿಗಿಷ್ಟು ಮಜ್ಜಿಗೆ.

ಆದರೆ ಯಾವ ಒಬ್ಬಂಟಿ ಹೆಂಗಸಾದರೂ ಹೀಗೆ ಬದುಕಿರೋಕೆ ಸಾಧ್ಯವಾ? ಸೀರೆ-ರವಿಕೆ ಮ್ಯಾಚ್ ಆಗದಿದ್ದರೂ ಆಕೆ ಟೇಸ್ಟ್​ಲೆಸ್ ಹೆಂಗಸು ಅನ್ನಿಸಿಕೋತಾಳೆ. ಮನೆಯೊಳಕ್ಕೆ ಕಾಲಿಟ್ಟ ಕೂಡಲೇ-‘ಐ ಚಞ ಠಟ್ಟ್ಟ ಇವತ್ತಿನ್ನೂ ಮನೆ ನೀಟು ಮಾಡಿಕೊಳ್ಳೋಕಾಗಿಲ್ಲ. ಕೊಳ್​ಕೊಳೆಯಾಗಿದೆ’ ಅಂತ ಅಪಾಲಜಿಟಿಕ್ ದನಿಯಲ್ಲಿ ಮಾತನಾಡುತ್ತಾಳೆ. ಬೇಜಾರಾಯಿತು ಅಂತ ಒಬ್ಬಳೇ ಪಿಕ್ಚರಿಗೆ ಹೊರಡೋಕಾಗಲ್ಲ. ದುಃಖವಾಯಿತು ಅಂತ ಎಲ್ಲದರಲ್ಲೂ ಅಸಡ್ಡೆಯಿಂದ ಇರೋಕಾಗಲ್ಲ. ಫಕ್ಕನೆ ಕಣ್ಣೀರು ಬಂದುಬಿಟ್ರೆ ‘ಏನಾಯ್ತು ಮೇಡಂ’ ಅಂತ ಯಾರೋ ಕೇಳಿಬಿಡುತ್ತಾರೆ. ‘ಏನಿಲ್ಲ, ಸ್ವಲ್ಪ ತೊಂದರೆಯಾಗಿತ್ತು. ನಾನು ಸರಿ ಮಾಡ್ಕೋತೀನಿ ಬಿಡಿ’ ಅನ್ನಬೇಕು. ಗಂಡ ಇದ್ದವಳಾ? ಗಂಡ ಬಿಟ್ಟವಳಾ? ಬಿಟ್ಟಿರೋದು ತಾತ್ಕಾಲಿಕವಾ? ಪರಮನೆಂಟಾ? ಕೊರತೆ ಆತನಿಗಿತ್ತಾ? ಈಕೆಗಿತ್ತಾ? ಬೇರೆ ಸಂಬಂಧ? ಮದುವೆಗೆ ಮುಂಚೆ? ಮದುವೆಯ ನಂತರ? ಹೀಗೆ ಯಾರು ಕೇಳದಿದ್ದರೂ ಆಕೆಯೆದುರು ಒಂದಷ್ಟು ಪ್ರಶ್ನೆಗಳು ಇದ್ದೇ ಇರುತ್ತವೆ. ಹಾಗಂತ ಯಾರಾದರೂ ಕೇಳಿಬಿಟ್ಟಿದ್ದರೆ ಪಟಪಟನೆ ಉತ್ತರಿಸಿ ಇನ್ನು ನೀವು ತೆಪ್ಪಗಿರಿ ಅಂದುಬಿಡಬಹುದಿತ್ತೇನೋ? ಆದರೆ ಆ ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ಅವು ಉತ್ತರವಿಲ್ಲದೆ ಉಳಿದುಬಿಡುತ್ತವೆ.

ಆಕೆಯದು ಗಂಡಸು ಅನುಭವಿಸುವುದಕ್ಕಿಂತ ಡಿಫರೆಂಟಾದ ಒಬ್ಬಂಟಿತನ. ಅಲ್ಲಿ ತಾತ್ಕಾಲಿಕ ಗೆಳೆತನಗಳೂ ಕೆಲವೊಮ್ಮೆ ದುಬಾರಿ. ಮನೆಗೆ ಬಂದ ಅತಿಥಿ ಬೇಗ ಎದ್ದು ಹೋಗದಿದ್ದರೆ ದುಗುಡ. ‘ಎದ್ದು ಹೋಗು’ ಅಂತ ಹೇಳಿದರೆ, ಮತ್ತೆ ಬಾರನೇನೋ ಎಂಬ ಆತಂಕ. ಎಷ್ಟೇ ಕಷ್ಟವಾದರೂ ತಲಬಾಗಿಲು ತೆರೆದೇ ಇಟ್ಟು, ಬಾಗಿಲಿಗೇ ಛೇರು ಹಾಕಿಕೊಂಡು ಬಂದಾತನನ್ನು ಸಹನೆಯಿದ್ದಷ್ಟೂ ಹೊತ್ತು ಮಾತನಾಡಿಸಿ ಸಾಗಹಾಕುತ್ತಾಳೆ. ಆಕೆಗೆ ಪಕ್ಕದ ಮನೆಯಿಂದ ಕಟಕಿ, ಟಾಂಟು, ಕಾಮೆಂಟುಗಳು ಬಂದಾವೆಯೇ ಹೊರತು ಸಾರು, ಪಲ್ಯ, ಹೆಪ್ಪಿನ ಮಜ್ಜಿಗೆ ತಾವಾಗಿ ಬರುವುದಿಲ್ಲ. ಜ್ವರ ಬಂದು ಮಲಗಿದರೆ ಒಳಮನೆಯ ತನಕ ಎನ್​ಕ್ವೈರಿಗಳು ನಡೆದು ಬರುವುದಿಲ್ಲ. ನನ್ನ ಪರಿಚಯದವಳೊಬ್ಬಳು ಹೀಗೇ ದಶಕಗಟ್ಟಲೆ ಒಬ್ಬಂಟಿಯಾಗಿ ಇದ್ದೂ ಇದ್ದೂ ಎಂಥ ವಿಚಿತ್ರದ ವ್ಯಕ್ತಿತ್ವದವಳಾಗಿ ಬಿಟ್ಟಿದ್ದಳೆಂದರೆ, ಆಕೆಯ ಮನೆ ತುಂಬ ನಾಯಿಗಳು. ಅವೆಲ್ಲಕ್ಕೂ ತನಗಾಗದವರ ಹೆಸರುಗಳು. ‘ಈ ವಿಶಾಲಮ್ಮ ಶುದ್ಧ ತಿಂಡಿಪೋತಿ ಆಗಿಬಿಟ್ಟಿದ್ದಾಳೆ’ ಅನ್ನುತ್ತ ಗಡವನಂಥ ಹೆಣ್ಣು ನಾಯೊಂದರ ಬೆನ್ನ ಮೇಲೆ ಸಿಲವಾರದ ಪಾತ್ರೆ ಕುಕ್ಕಿ ನಾಯೊಂದನ್ನು ಓಡಿಸಿಬಿಡುತ್ತಿದ್ದಳು. ಕಡೆಕಡೆಗೆ ಆಕೆಗೆ ರಿಪೀಟೆಡ್ ಆಗಿ ಫಿಟ್ಸ್ ಬರತೊಡಗಿದ ಮೇಲೆ ಆಕೆಯನ್ನೂ, ನಾಯಿಗಳನ್ನೂ ಒಬ್ಬಂಟಿತನದಿಂದ ಮುಕ್ತಗೊಳಿಸಿ ಆಕೆಯ ಬಂಧುಗಳು ತಮ್ಮ ಮನೆಗೆ ಕರೆದೊಯ್ದರು. ಅಷ್ಟಾದ ಮೇಲೂ ಒಂದು ಕಂತ್ರಿ ನಾಯಿ ಸಾಕಿಕೊಂಡು, ‘ಸೀನಪ್ಪನಿಗೆ ಕ್ಯಾನ್ಸರು ಕಣೋ’ ಎಂದು ಹಲುಬುತ್ತಿದ್ದಳು.

ಆದರೆ ಎಲ್ಲ ಏಕಾಂಗಿ ಹೆಂಗಸರ ಬದುಕೂ ಹೀಗೆ ದುರ್ಭರವಾಗುವುದಿಲ್ಲ. ಇತ್ತೀಚೆಗಷ್ಟೇ ಚಿಕ್ಕ ಹಳ್ಳಿಯೊಂದಕ್ಕೆ ವರ್ಗಾ ಆಗಿ ಹೋದ ನನ್ನ ಗೆಳತಿಯೊಬ್ಬಳನ್ನು ಔತಣಕ್ಕೆಂದು ಮನೆಗೆ ಕರೆದಿದ್ದೆ. ವಾಪಸು ಬಿಡಲು ಹೋದಾಗ ಆಕೆಯ ಒಳಮನೆ ನೋಡಬೇಕೆನ್ನಿಸಿತು. ಸಾಕಷ್ಟು ರಾತ್ರಿಯಾಗಿದ್ದುದರಿಂದ ಮರುದಿನ ಬೆಳಗ್ಗೆ ಬರುವುದಾಗಿ ಹೇಳಿ ಬಂದೆ. ತೀರಾ ಬಂದ ಮೇಲೆ ಅನ್ನಿಸಿತು; ಹೊತ್ತಲ್ಲದ ಹೊತ್ತಿನಲ್ಲಿ ಮನೆ ನೋಡುತ್ತೇನೆಂದಿದ್ದರೂ ಆಕೆಗೆ ಮುಜುಗರವಾಗುತ್ತಿರಲಿಲ್ಲವೇನೋ? ನಾನೇ ನಖರೆ ಮಾಡಿದೆ. ಹಾಗಂದುಕೊಂಡು ಮಾರನೆಯ ದಿನ ಆಕೆಯ ಮನೆ ಹೊಕ್ಕರೆ, ಡಿಟ್ಞಛಛ್ಟಿf್ಝ ಪ್ರತಿಯೊಂದೂ ಅಚ್ಚುಕಟ್ಟು. ಭಯಂಕರ ಡಿಸಿಪ್ಲೀನು. ಮೇಜಿನ ಮೇಲೆ ರುಚಿರುಚಿಯಾದ, ಖಾರ ಖಾರವಾದ ತಿನಿಸು. ಚಪ್ಪರಿಸಿ ಕುಡಿಯುವಂಥ ಚಹಾ. ವರಚ್ಚಾಗಿ ಜೋಡಿಸಿಟ್ಟ ಪುಸ್ತಕಗಳು. ಸುಕ್ಕಿಲ್ಲದ ಟೇಬಲ್ ಕ್ಲಾತು. ಮಡತೆ ಬೀಳದ ದಿವಾನ್ ದಿಂಬು. ಕಮಟಿಲ್ಲದ ಬಾತ್​ರೂಮು. ಓರಣವಾಗಿದ್ದ ಕೈತೋಟ. ಹೆಂಗಸರು ಗಂಡನ ಪಿರಿಪಿರಿಗಳಿಲ್ಲದಿದ್ದರೇನೇ ಹೆಚ್ಚು ಮಟ್ಟಸವಾಗಿರುತ್ತಾರೇನೋ ಅನ್ನಿಸಿತು. ಆದರೂ ಪಾಪ, ಒಬ್ಬರೇ ಇರೋದು ಎಷ್ಟು ದುರ್ಭರವಲ್ಲವೇ? ಅಂದುಕೊಂಡೆ. ಅಂದುಕೊಂಡ ಎರಡೇ ವಾರಕ್ಕೆ ಪತ್ರ ಬಂತು.

‘ಊರಿನ್ಯಾಗ ಅಗದೀ ಆರಾಮಿದ್ದೀನಿ. ಒಬ್ಬಾಕಿನೇ ಇರೂದು ಎಷ್ಟು ರೂಢಿ ಆಗಿ ಹೋಗ್ಯದ ಅಂದ್ರ, ಇದೇ ಛಲೋ ಅನ್ನಸ್ತದ. ಹೊಸಾ ವಾತಾವರಣ ಅಡ್ಡಿಯಿಲ್ಲ. ಮನಸು ಸೈತ ಆರಾಮ ಅದ. ಎಂದಾರೆ ಒಮ್ಮೆ ಬಂದು ಹೋಗು. ಛಾ ಮಾಡಿಕೊಡ್ತೀನಿ. ಮಳೀ ನೋಡ್ಲಿಕ್ಕೆ ಬರ್ತೀನಿ ಅಂದಿದ್ದಿ. ಇಲ್ಲಿ ಮಳೀನೇ ಮುಗದು ಹೋತು’

ಅದೇಕೋ ಆಕೆಯ ಪತ್ರ ನೋಡಿ ಸಮಾಧಾನವೆನ್ನಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net