ರತ್ನಮ್ಮ ಧಾನ್ಯಸಿರಿ! ಸಿರಿಧಾನ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಸಾಧಕಿ

Ratnamma
Published on

| ಕಿರುವಾರ ಎಸ್.ಸುದರ್ಶನ್ ಕೋಲಾರ

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಯಶೋಗಾಥೆ ಬಾನೆತ್ತರಕ್ಕೆ ಬೆಳೆದಿರುವುದು ಗೊತ್ತಿರುವ ಸಂಗತಿಯೇ. ಆದರೆ ಅನಾದಿ ಕಾಲದಿಂದಲೂ ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಸದ್ದಿಲ್ಲದೆ ಎಲೆ ಮರೆ ಕಾಯಿಯಂತೆ ಬಿಸಿಲು-ಮಳೆಗೆ ಜಗ್ಗದೆ ದುಡಿಯತ್ತಲೇ ಇದ್ದಾರೆ. ಆದರೆ ಈ ಕಾಲ ಬದಲಾಗಿದೆ. ಬದ್ಧತೆಯಿದ್ದು ಬುದ್ಧಿ ಉಪಯೋಗಿಸಿದರೆ ಈ ಕ್ಷೇತ್ರದಲ್ಲಿ ಎಲ್ಲವೂ ಸಾಧ್ಯ ಎಂದು ತೋರಿಸಿದ್ದಾರೆ ಕೋಲಾರದ ಸಾಧಕ ಕೃಷಿ ಮಹಿಳೆ ರತ್ನಮ್ಮ.

ಶ್ರೀನಿವಾಸಪುರ ತಾಲೂಕಿನ ಗುಂಡಮ್ಮನತ್ತ ಗ್ರಾಮದ ರತ್ನಮ್ಮ ಸಿರಿಧಾನ್ಯಗಳ ಉತ್ಪಾದನೆ ಹಾಗೂ ಮೌಲ್ಯವರ್ಧನೆಯಲ್ಲಿ ಕ್ರಾಂತಿ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಹೆಸರಾಂತ ಕಂಪನಿಗಳಿಗೆ ಸೆಡ್ಡು ಹೊಡೆಯುವ ರೀತಿ ಛಲದಿಂದ ಮುಂದೆ ಸಾಗುತ್ತಿದ್ದಾರೆ. ಕೃಷಿಕ ಮಹಿಳೆಯರ ದಿನದಂದು ಅವರ ಯಶೋಗಾಥೆಯನ್ನು ಇಲ್ಲಿ ಮೆಲುಕು ಹಾಕಲಾಗಿದೆ.

ಶಿಕ್ಷಕಿಯಾಗಬೇಕು, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತರ ಕೆಲಸ ಮಾಡಬೇಕು ಎಂಬುದು ರತ್ನಮ್ಮ ಕನಸಾಗಿತ್ತು. ಆದರೆ ಕಾರಣಾಂತರಗಳಿಂದ ಶಿಕ್ಷಕಿಯಾಗುವ ಬಯಕೆ ಈಡೇರಲಿಲ್ಲ. ಇದರೆ ಇಷ್ಟಕ್ಕೆ ಸುಮ್ಮನಾಗದ ರತ್ನಮ್ಮ ಪತಿ ನಾರಾಯಣಸ್ವಾಮಿ ಹಾಗೂ ಮಕ್ಕಳ ಸಹಕಾರ ಪಡೆದು ಸಿರಿಧಾನ್ಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮೆ, ನವಣೆ, ಆರಕ, ಊದಲು, ಕೊರಲೆ, ಬರಗು, ರಾಗಿ, ಜೋಳ, ಸಜ್ಜೆ ಬೆಳೆಯುತ್ತಿದ್ದು, ಅಗತ್ಯ ತರಬೇತಿ ಪಡೆದು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ. ಸಿರಿಧಾನ್ಯ ಸ್ವಸಹಾಯ ಸಂಘ ಸ್ಥಾಪಿಸಿ ಉತ್ತಮ ಲಾಭಗಳಿಸಿ ಬದುಕು ರೂಪಿಸಿಕೊಂಡಿದ್ದಾರೆ.

ರತ್ನಮ್ಮ ಮೂರು ಎಕರೆ ಜಮೀನಿನಲ್ಲಿ ರಾಗಿ, ನವಣೆ, ಮಾವು ಮತ್ತು ಕರಿಬೇವು ಬೆಳೆಯುತ್ತಿದ್ದಾರೆ. ಜತೆಗೆ ಮಾವಿನ ತೋಟದಲ್ಲಿ ಹಿಪ್ಪುನೇರಳೆಯನ್ನು ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಕೃಷಿ ಪೂರಕ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದು ಹಸು, ಎಮ್ಮೆ ಮತ್ತು ಕುರಿ ಸಾಕಣೆ ಮಾಡುತ್ತಿದ್ದಾರೆ. ಹೈನುಗಾರಿಕೆಗೆ ಪೂರಕವಾಗಿ ಮೇವಿನ ಜೋಳ ಬೆಳೆದು ಉಪಾಯವಾಗಿ ಲಾಭ ಗಳಿಸುವ ಮಾರ್ಗ ಕಂಡುಕೊಂಡಿದ್ದಾರೆ. ಐದೂವರೆ ವರ್ಷಗಳಿಂದ ಕೋಲಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದು ಮುಖ್ಯ ಕಸುಬಾಗಿ ಸಿರಿಧಾನ್ಯಗಳ ಮೌಲ್ಯವರ್ಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ಯಾಂಕ್, ಕೃಷಿ ಇಲಾಖೆಯ ಸಿರಿಧಾನ್ಯ ಘಟಕ ಸ್ಥಾಪಿಸಿ ಸಂಸ್ಕರಣೆ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸಂಸ್ಕರಣೆ ಮಾಡಿಕೊಟ್ಟು ಅಧಿಕ ಲಾಭ ಪಡೆಯುತ್ತಿದ್ದಾರೆ.

ಖ್ಯಾತಿ ತಂದ ವೇದಿಕೆ ಉತ್ಪನ್ನ: ಆರಂಭದಲ್ಲಿ ಹೈನೋದ್ಯಮ, ರೇಷ್ಮೆ ಹುಳು ಸಾಕಣಿ ಮಾಡಿ ಬದುಕು ಕಟ್ಟಿಕೊಳ್ಳಲು ದಾರಿ ಕಂಡುಕೊಂಡಿದ್ದರು. ಇದರಿಂದ ಬಂದ ಹಣದಿಂದಲೇ ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಕೊಳವೆಬಾವಿಯಲ್ಲಿ ನೀರಿನ ಇಳುವರಿ ಕಡಿಮೆಯಾಗುತ್ತಿದ್ದಂತೆ ರೇಷ್ಮೆ ಉತ್ಪಾದನೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲಾಭಗಳಿಸಲು ಸಾಧ್ಯವಾಗಲಿಲ್ಲ. 5 ವರ್ಷಗಳ ಹಿಂದೆ ಗಂಗಮ್ಮ ಸ್ತ್ರೀ ಶಕ್ತಿ ಸಂಘ ಕಟ್ಟಿಕೊಂಡು ಅದರಲ್ಲಿ ಸಣ್ಣ ಪ್ರಮಾಣದಲ್ಲಿ ಸಾಲ ಪಡೆದು ಸಿರಿಧಾನ್ಯಗಳ ಉತ್ಪನ್ನ ಉತ್ಪಾದಿಸಲು ಪ್ರಾರಂಭಿಸಿದರು. ಈ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಕಷ್ಟ ಎನಿಸಿದರೂ ಪಟ್ಟು ಬಿಡದೆ ಕೆಲಸ ಶುರು ಮಾಡಿದರು. ಸರ್ಕಾರಿ ಕಾರ್ಯಕ್ರಮ, ಸಮಾವೇಶ, ಮೇಳಗಳಲ್ಲಿ ಸ್ಟಾಲ್​ಗಳನ್ನು ಹಾಕಿ ಸಿರಿಧಾನ್ಯ ಉತ್ಪನ್ನಗಳ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡುವುದರ ಜತೆಗೆ ಸಂಪರ್ಕ ಸಂಖ್ಯೆ ನೀಡಿ ಮಾರುಕಟ್ಟೆ ಕಂಡುಕೊಂಡರು. ಈಗ ವೇದಿಕ್ ಸಿರಿಧಾನ್ಯಗಳ ಪ್ರಾಡಕ್ಟ್​ಸ್ ಎಂದೇ ಹೆಸರು ಗಳಿಸಿದೆ. ವೇದಿಕ್ ಎಂಟರ್​ಪ್ರೖೆಸಸ್ ಸಂಸ್ಥೆ ತೆರೆದು ಸಿರಿಧಾನ್ಯಗಳ ಮತ್ತು ಉತ್ಪನ್ನಗಳಾದ ಮಾಲ್ಟ್, ಪಾಯಸಾ, ದೋಸೆ ಮಿಶ್ರಣ, ಇಡ್ಲಿ ಮಿಶ್ರಣ, ಹಪ್ಪಳ, ವರ್​ವಿುಸೆಲ್ಲಿ, ಪಾಸ್ತ ಇತ್ಯಾದಿಗಳನ್ನು ತಯಾರಿಸಿ ವೇದಿಕ್ ಫುಡ್ ಮತ್ತು ವರದಾ ಫುಡ್ ಎಂಬ ಬ್ರಾ್ಯಂಡ್​ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಜತೆಗೆ ತಾಲೂಕು, ಜಿಲ್ಲೆಗೆ ಸೀಮಿತವಾಗಿದ್ದ ಮಾರಾಟವು ಹೀಗೆ ಹೊರಜಿಲ್ಲೆಗಳಿಗೂ ವಿಸ್ತರಿಸಿದೆ.

ಗ್ರಾಮೀಣ ಮಹಿಳೆಯರಿಗೆ ಮಾದರಿ

ಆರಂಭದಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ಕಂಡುಬರಲಿಲ್ಲ. ಎದೆಗುಂದದೆ ತಾವು ಹಿಡಿದ ಮಾರ್ಗದಲ್ಲಿ ಮುಂದುವರಿದರು. ಸಿರಿಧಾನ್ಯ ಬೇಸಾಯ ಲಾಭದಾಯಕ ಎಂಬುದನ್ನು ಅರಿತು ಕೃಷಿಯ ಮೂಲಕ ತೋರಿಸಿಕೊಟ್ಟರು. ಸುತ್ತಮುತ್ತಲಿನ ರೈತರು ಬೆಳೆದ ಧಾನ್ಯ ಖರೀದಿಸಿ ಸಂಸ್ಕರಣ ಘಟಕದಲ್ಲಿ ವಿವಿಧ ಪುಡಿ ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡತೊಡಗಿದರು. ಆರೋಗ್ಯಕರ ಕಬ್ಬಿಣಾಂಶ ಮತ್ತು ವಿಟಮಿನ್ ‘ಸಿ’ ಭರಿತ ವೇದಿಕ್ ಸಿರಿಧಾನ್ಯ ಆರೋಗ್ಯ ಪೇಯ ತಯಾರಿಕೆಗೆ ಪೇಟೆಂಟ್ ಪಡೆದುಕೊಂಡಿರುವ ರತ್ನಮ್ಮ, ಗ್ರಾಮೀಣ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅವರ ಉತ್ಪನ್ನಗಳು ಜಿಲ್ಲೆ ಹಾಗೂ ರಾಜ್ಯಮಟ್ಟದ ಪ್ರದರ್ಶಗಳಲ್ಲಿ ಪ್ರದರ್ಶಿಸಲ್ಪಟ್ಟು ಗ್ರಾಹಕರ ಮೆಚ್ಚುಗೆ ಪಡೆದಿದ್ದಾರೆ. ಮಹಿಳಾ ಸಂಘದ ಸದಸ್ಯರು ತಯಾರಿಸಿಕೊಡುವ ಉತ್ಪನ್ನಗಳನ್ನು ಇವರದ್ದೆ ಬ್ರಾ್ಯಂಡ್ ಅಡಿ ಮಾರಾಟ ಮಾಡಿಕೊಡುತ್ತಿದ್ದಾರೆ.

ಗೃಹಬಳಕೆ ಉತ್ಪನ್ನಗಳ ತಯಾರಿಕೆಗೂ ಸೈ

ರತ್ನಮ್ಮ ಮಹಿಳೆಯರಿಗೆ ಸಿರಿಧಾನ್ಯ ಸಂಸ್ಕರಣಾ ತರಬೇತಿ ನೀಡಿ, ಉತ್ಪನ್ನ ತಯಾರಿಸಲು ಪ್ರೋತ್ಸಾಹಿಸುವ ಜತೆಗೆ ಹಲವು ಗೃಹ ಬಳಕೆ ವಸ್ತುಗಳನ್ನು ತಯಾರಿಸಿ ಮಾರಾಟದಲ್ಲಿ ತೊಡಗಿಸಿದ್ದಾರೆ. ಉತ್ಪನ್ನಗಳ ರುಚಿ, ಶುದ್ಧತೆಗೆ ಮಾರುಹೋದ ಗ್ರಾಹಕರು ಮನೆಗೇ ಬಂದು ಖರೀದಿಸುತ್ತಿದ್ದು, ಹೊರಜಿಲ್ಲೆಗಳ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಶಸ್ತಿಗೆ ಭಾಜನ

ಈ ಸಾಧನೆಗೆ ರತ್ನಮ್ಮ ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದು, ಡಿ.7ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಿಲಿಯೇನರ್-ಬಿಲಿಯೇನರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ರಾಜ್ಯದ 50 ಮಂದಿ ಕೃಷಿ ಸಾಧಕರ ಪೈಕಿ ರತ್ನಮ್ಮ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಂಸೆ

ಸರ್ಕಾರದಿಂದ ಜಾರಿಗೆ ತಂದಿರುವ ಎನ್​ಆರ್​ಎಂಎಲ್ ಯೋಜನೆಯ ನೋಂದಣಿ ಮಾಡಿಸಿಕೊಂಡಿದ್ದು, ನಬಾರ್ಡ್, ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿ ಪ್ರಶಂಸಿಸಿದ್ದಾರೆ. ಬಾಗಲಕೋಟೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇಲ್ಲಿಗೆ ಬರುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳದಲ್ಲಿ ರತ್ನಮ್ಮ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಆರಂಭದಲ್ಲಿ ಕಷ್ಟ ಅನಿಸಿದರೂ ಈಗ ಖುಷಿ ತಂದಿದೆ. ಮನೆಯ ಸದಸ್ಯರ ಸಹಕಾರ, ಮಹಿಳಾ ಸಂಘದ ಸಹಕಾರದಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದೇನೆ. ಸಿರಿಧಾನ್ಯಗಳ ಉತ್ಪನ್ನಗಳು ಮನುಷ್ಯನ ದೇಹಕ್ಕೆ ಆರೋಗ್ಯಕರ ಎಂಬ ಅರಿವು ಮೂಡಿದರೆ ಸ್ವಯಂ ಪ್ರೇರಿತರಾಗಿ ಖರೀದಿ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

| ರತ್ನಮ್ಮ ಸಾಧಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net