ರಾಜ ಧರ್ಮ; ಭಾರತ ಸಮಗ್ರತೆ ಹಾಳುಮಾಡುತ್ತಿರುವವರು...

RAJADHARMA
Published on
ಈಗ ಸಿಎಎ, ಎನ್​ಸಿಆರ್ ಹೆಸರಲ್ಲಿ ರಾಷ್ಟ್ರವನ್ನೇ ಸುಡುತ್ತಿರುವವರು ದೇಶದ್ರೋಹಿಗಳು. ಸತ್ಯ. ಒಗ್ಗೂಡಿಯೂ ಇವರು ಕಳ್ಳಗ್ಯಾಂಗಿನಂತೆ ಸುಲಭ ಹಂಚಿಕೆಯಲ್ಲೇ ದೃಷ್ಟಿ ಇಡುತ್ತ ಕಾಮನ್ ಮಿನಿಮಂ ಪ್ರೋಗ್ರಾಂ ಮಾಡುತ್ತ, ವಂಚಿಸುತ್ತಾರೆ. ಹಾಗೆಂದರೆ ‘ಲೂಟಿ’. ‘ನೀನೂ ತಿನ್ನು, ನನಗೂ ಕೊಡು’ ಎಂಬುದೇ ಅದು.

ಈಗ ಜಾರ್ಖಂಡ್ ಆಯ್ತು, ಮೊನ್ನೆ ಮಹಾರಾಷ್ಟ್ರ ಆಯ್ತು. ಆಚೆಗೆ ತೆಲಂಗಾಣ ಆಯ್ತು. ಹಿಂದೆ ಪಶ್ಚಿಮ ಬಂಗಾಳ ಆಯ್ತು. ಇತ್ತ ತಮಿಳುನಾಡು ಆಯ್ತು; ಸ್ವಲ್ಪವೇ ಹಿಂದೆ ಕರ್ನಾಟಕದ ಸೋತ ಸ್ವಾರ್ಥಿಗಳು ಆಯ್ತು. ಇವರಾರಿಗೂ ಭಾರತಯೋಗಕ್ಷೇಮ ಬೇಡ; ಅವರವರ ಸ್ವಾರ್ಥಕ್ಕೆ, ಸಾಧನೆಗೆ ಒಂದೊಂದು ಹಾಳುಮುಳು ಪಕ್ಷಗಳು. ಒಗ್ಗೂಡಿದರೆ ದೇಶಸಮಗ್ರ ದೃಷ್ಟಿಯ, ರಾಷ್ಟ್ರೀಯ ಶಕ್ತಿಗಳನ್ನು ಸೋಲಿಸಿ ಭಾರತನಾಶದಲ್ಲಿ ತಮ್ಮ ಸ್ವಹಿತವನ್ನು ಸಾಧಿಸಿ ಬಯಸುವ ಪುಂಡರು, ಹಾಗೆನ್ನಬಾರದು! ಅದಕ್ಕೊಂದು ಪಕ್ಷ=(ರೆಕ್ಕೆ)=ಪುಕ್ಕ=ಸೊಗಲಾಡಿ ಪ್ರಣಾಳಿ.

ಅದರ ರಕ್ಷಣೆಯು ಸೇನೆ, ರೌಡಿ, ಕಿತಾಪತಿ ತಲೆಯ ದಳಪತಿಗಳು, ಅಂದಿನ ಪಾಳೇಗಾರ ದಳವಾಯಿಗಳು-ಎಲ್ಲ, ವಿಜಯನಗರ ಪತನದ ಸನಿಹದ ಸನ್ನಿವೇಶವನ್ನು ನನಗೆ ನೆನಪಿಸುತ್ತಿದೆ.

ಶ್ರೀಕೃಷ್ಣದೇವರಾಯನ ಮುತ್ಸದ್ಧಿತನ, ಹಕ್ಕ-ಬುಕ್ಕರೆಂಬ ಹರಿಹರ, ಬುಕ್ಕರಾಯರ ದೇಶಭಕ್ತಿ, ವಿದ್ಯಾರಣ್ಯರ ಮಾರ್ಗದರ್ಶನ, ಅವರ ತಪಸ್ಸು, ರಾಷ್ಟ್ರಭಕ್ತಿ, ಅವರ ವೇದೋಪಾಸನೆಯ ಫಲ, ವೇದ ಭಾಷ್ಯ ಸಂರಕ್ಷಣಾ ದೀಕ್ಷೆಯ ಛಲ, ಸನಾತನ ಧರ್ಮದ ಬುನಾದಿಯ ಸಾಮ್ರಾಜ್ಯಸ್ಥಾಪನೆಯ ದೀಕ್ಷೆ-ಇವಾವುದೂ ಇಲ್ಲದ ಅರವೀಡು ವಂಶದ (ಅಳಿಯ) ರಾಮರಾಯ, ಈ ಮಹಾಸಾಮ್ರಾಜ್ಯವನ್ನು ಹಾಳು ಮಾಡಿದ ಸಂದರ್ಭ ಮರುಕಳಿಸುವಂತಿದೆ.

ಯಾರಿಗೆ ಹೇಳಲಿ ಈ ಗೋಳು? ಈ ರಾಮರಾಯನಿಗೆ ಚಾರಿತ್ರ್ಯಶುದ್ಧಿಯೂ ಇರಲಿಲ್ಲ ಎನ್ನುತ್ತಾರೆ. ಆದಿಲ್ ಶಾಹಿ, ಇಬ್ರಾಹಿಂ ಶಾಹಿ, ಕುತುಬ್ ಶಾಹಿ, ಸಜಾಂ ಶಾಹಿ ಇಂದು ಈ ಎಲ್ಲರನ್ನೂ ಪರಸ್ಪರ ಎದುರುಕಟ್ಟಿ ವಿಜಯನಗರ ಉಳಿಸಲು ಹೋಗಿ, ದೇಶದ್ರೋಹಿಗಳ ಮತೀಯರನ್ನೇ ಸೇರಿಸಿ ಸೇನೆ ಮಾಡಿಕೊಂಡ ಈ ರಾಯ, ಅವರೆಲ್ಲರೂ ಒಗ್ಗೂಡಿ ತನ್ನ ಮೇಲೆ ಎರಗಬಹುದೆಂಬ ಕಲ್ಪನೆಯೇ ಇಲ್ಲದ ದಡ್ಡ! ರಾಷ್ಟ್ರಕಲ್ಪನೆ, ಭಕ್ತಿ, ನಿಷ್ಠೆ ಇಲ್ಲದವರನ್ನು ಸೇನೆಯಲ್ಲಿ ಸೇರಿಸಿಕೊಂಡೇ ಚಿತ್ರದುರ್ಗದ ಮದಕರಿ ನಾಯಕರು ಆಮೇಲೆ ಹತರಾದರು.

ಮೈಸೂರು ಜಯಲಕ್ಷ್ಮಮ್ಮಣ್ಣಿ ಕರಾಚುರಿ ನಂಜರಾಜಯ್ಯನ ಕಾಟ ತಡೆಯಲಾರದೆ, ಎಲ್ಲೋ ಸರದಾರನಾಗಿ, ಅನಾಮಧೇಯನಾಗಿದ್ದ ಹೈದರಾಲಿಯನ್ನು ಕರೆದು ಸೇನೆ ವಹಿಸಿ ಮೈಸೂರು ರಾಜ್ಯ ಹಾಳಾಯ್ತು. ವಿಜಯನಗರ ಪತನ, ದುರ್ಗಪತನ, ಮೈಸೂರು ನಾಶ, ಉತ್ತರ ಭಾರತದಲ್ಲಿ ಇಂಥ ದ್ರೋಹಿ ಗ್ಯಾಂಗುಗಳು ಅಂದು ನಮ್ಮ ಸ್ವಾತಂತ್ರ್ಯ ಹಾಳು ಮಾಡಿ, ನಮ್ಮನ್ನು ದಾಸ್ಯದಲ್ಲಿ ತಳ್ಳಿದವು. ಇಂದೂ ಅದೇ ಪರಿಸ್ಥಿತಿಯ ಮರುಕಳಿಕೆ.

ಬಹಳ ಹಿಂದೆ ಹೋಗೋಣ. ಶ್ರೀಕೃಷ್ಣನ ಕಾಲ ಹೇಗಿತ್ತು? ಅಲ್ಲೂ ಸ್ವಾರ್ಥಿಪುಂಡರೂ ರಾಷ್ಟ್ರಪ್ರಜ್ಞೆ ಇಲ್ಲದ ಭ್ರಷ್ಟರು, ಶಿಶುಪಾಲ, ಪೌಂಡ್ರಕ ವಾಸುದೇವ, ಜರಾಸಂಧ, ಕಾಲಯವನ, ದಕ್ಷಿಣದ ಚೋಳರು, ನರಕ, ದಂತವಕ್ರ, ಒಂದೊಂದು ದಿಕ್ಕಿಗೆ ಒಬ್ಬೊಬ್ಬರು-ಮಹಾಖಳನಾಯಕರು.

ದೂರದಲ್ಲಿ ಶಲ್ಯ! ಅಂದಿನ ಮದ್ರ, ಇಂದಿನ ಇರಾಕ್. ಯಾರಿಗೂ ರಾಷ್ಟ್ರಸಮಗ್ರತೆಯ, ಅದರ ರಕ್ಷಣೆಯ ಪರಿವೆ, ಜವಾಬುದಾರಿ, ಪ್ರಜ್ಞೆ ಏನೂ ಇರಲಿಲ್ಲ. ಭೀಷ್ಮದ್ರೋಣರಗಿತ್ತೋ? ಶಕುನಿಗೋ? ರಾಷ್ಟ್ರಪ್ರಜ್ಞೆ ಉದಿಸಲೆಂದೇ ಹಿಂದೆ ಅಶ್ವಮೇಧ, ರಾಜಸೂಯ ಯಾಗಗಳ, ಒಳ ತಿರುಳೂ ಇತ್ತು. ಯುಧಿಷ್ಠಿರ ಸಾಮ್ರಾಟ್ ಆಗಿಯೇ ಇದ್ದ! ಆದರೇನು? ಉರುಳಿಸಲು ಪಗಡೆದಾಳಗಳು! ಇಂದಿರಾ ಕಾಲದ ಚರಣ್ ಸಿಂಗ್, ಈಗಣ ಚರಣ್ ಸಿಂಗ್ ನಂಬರ್ 2 ಉದ್ಧವ್ ಠಾಕ್ರೆ, ಇಲ್ಲವೇನಿರಯ್ಯ? ಇಂದಿರಾ ಕಾಂಗ್ರೆಸ್ಸನ್ನೇ ಒಡೆದದ್ದು ಯಾವ ಪುರುಷಾರ್ಥಕ್ಕಾಗಿ? ಸ್ವಾರ್ಥ, ಅಹಂಕಾರಕ್ಕೆ.

ಈಗ ಎಲ್ಲರಿಗೂ ಪ್ರಧಾನಿಯಾಗಲು ಆಸೆ! ಠಾಕ್ರೆಗೆ ಆ ಪದವಿ ಬರಲಿದೆ ಎಂದೊಬ್ಬ ರಾವುತ್ ಹೇಳಿದರಲ್ಲ? ಪವಾರ್, ಸೋನಿಯಾ, ಅಖಿಲೇಶ್, ಮಾಯಾವತಿ, ಮಮತಾ ಬ್ಯಾನರ್ಜಿ, ಸ್ಟಾಲಿನ್, ಮತ್ತೆ ಗೌಡ, ಚಂದ್ರಬಾಬು ನಾಯ್ಡು, ನಿತೀಶಕುಮಾರ್ ಎಲ್ಲರೂ ‘ಭಾವೀ ಪ್ರಧಾನಿ’ಗಳೇ! ಆಸೆ ಆಕಾಶದೆತ್ತರ! ‘ಭಾವೀ’ ಎಂದೆ. ಅದು ಸಂಸ್ಕೃತ ಶಬ್ದ. ಕನ್ನಡದಲ್ಲಿ ‘ಭಾವಿ’ಗಳಿವೆ. ಎಲ್ಲರೂ ಬೀಳುವವರೇ! ನೀರಿಲ್ಲದ ‘ಭಾವಿಗಳು’. ಅವರ ಗಗನ ಗೋಪುರಗಳು.

ಈಗಣ ಪಾಳೆಯಗಾರರಿಗೆ ಅಧಿಕಾರ ದೊರೆಯದಿದ್ದರೂ, ಅತಂತ್ರರನ್ನು ಮ್ಯಾನೇಜ್ ಮಾಡುವ ಕಿಂಗ್​ವೆುೕಕರ್ ಪದವಿ ಬೇಕಂತೆ! ಗೌಡರು ಮಾಡುತ್ತಿರುವುದೂ, ಈ ಸೋನಿಯಾ ಮತ್ತು ಪವಾರ್ ಮಾಡುತ್ತಿರುವುದೂ ಈ ಸರ್ಕಸ್ಸನ್ನೇ! ನಡುವೆ ಓವೈಸಿ ಸಾಹೇಬ್ರು, ಅವರ ಹಿಂದಣ ಒಂದಿಷ್ಟು ಹಿಂಬಾಲಕರು, ಎಲ್ಲರಿಗೂ ಇಲ್ಲಿ ಬೇಕಾದುದು ಅವ್ಯವಸ್ಥೆ, ಅರಾಜಕತೆ, ಅನಾಯಕತೆ ಎಂಬ ಹದಗೆಟ್ಟ, ಕಾನೂನು ಕುಸಿದ, ನ್ಯಾಯಬಾಹಿರ, ಫ್ರೀ ಫಾರ್ ಆಲ್ ಎಂಬ ದಂಗೆಯ, ದೊಂಬಿಯ ಅವಸ್ಥೆ. ಕೇರಳದ ಲಾಯರು ಒಬ್ಬರು ಶಂಕರನ್ ನಂಬೂದ್ರಿ ಎಂಬುವರು ಹಿಂದೆ ಗಾಂಧಿಯವರ ಮೋಪ್ಲಾ ಪ್ರೋತ್ಸಾಹಕಾಲದ ಸ್ಥಿತಿ ಕುರಿತು "Gandhi and Anarchy' ಎಂಬ ಪುಸ್ತಕವನ್ನೇ ಬರೆದಿದ್ದಾರೆ.

ಕಮ್ಯುನಿಷ್ಠರಿಗೆ ಪರೋಕ್ಷವಾಗಿ, ತಲೆಗೆಟ್ಟ ಈ ಪಶುಗಳನ್ನು ಹಿಡಿದು ಆಡಿಸಿ, ಕುಣಿಸಲು ಇದು ಸದವಕಾಶ. ಕಮ್ಯುನಿಷ್ಟರೊಬ್ಬರು ಪ್ರಧಾನಿಯಾಗಲು ಪ್ರಕಟ ಅವಕಾಶವಿಲ್ಲವಲ್ಲ? ಅದಕ್ಕೆ ಪ್ರಧಾನಿಯನ್ನೇ ಹಿಡಿದು ಬಿಡುವುದು ಅಂದಿನ ತಂತ್ರಗಾರಿಕೆ ಆಗಿತ್ತು. Brezhniv Kossigin ಕಾಲದ ಇಂದಿರಾ, ಸ್ಟಾಲಿನ್ ಕಾಲದ ನೆಹ್ರೂ, ಗುಜ್ರಾಲ್, ಗೌಡ, ಚಂದ್ರಶೇಖರರ ಕಾಲದ ಜ್ಯೋತಿ ಬಸು, ಹರಿಕಿಶನ್ ಸಿಂಗ್, ಹಿಂದಣ ಇಂದ್ರಜಿತ್ ಗುಪ್ತಾ, ಭೂಪೇಶ್, ಸೋಮನಾಥ ಚಟರ್ಜಿ, ಬಸವ ಪೊನ್ನಯ್ಯ, ನಂಬೂದ್ರಿ ಪಾದ್, ಎ.ಕೆ.ಗೋಪಾಲನ್ ಇಂಥವರು ಮಾಡಿದ್ದು ಇದನ್ನೇ-ಕೇಂದ್ರವನ್ನೇ ಹಿಡಿದು ಕೈಗೊಂಬೆ ಮಾಡಿಕೊಂಡು ಬ್ಯಾಕ್ ಸೀಟ್ ಡ್ರೖೆವ್ ಎಂಬುವುದನ್ನು ಮೊಗಲರು, ರಜಪೂತ್ ಸರ್ದಾರರನ್ನೇ ಇಟ್ಟು ಆಳಲಿಲ್ಲವೇ? ಟಿಪು್ಪಗೆ ಪೂರ್ಣಯ್ಯ ಇರಲಿಲ್ಲವೆ? ಹಾಗೆ ಆಡಲು ಈಗ ಮೋದಿ, ಷಾ ಅಡ್ಡವಿದ್ದಾರೆ, ಬಿಡುವುದಿಲ್ಲ!

ಇತ್ತೀಚೆಗೆ ಒಬ್ಬ ಪ್ರಾಜ್ಞ ದೇಶಭಕ್ತ ರಾಜಕಾರಣಿಯೊಡನೆ ಮಾತನಾಡುತ್ತಿದ್ದೆ. ಅವರು ವಿಶ್ಲೇಷಿಸಿದ್ದು ಹೀಗೆ-‘ 1000 ವರ್ಷಗಳ ಗುಲಾಮಿ ಪರ್ವದ ನಂತರ, ಧಿಮ್ಮಿ ಆಡಳಿತದ ದಾಸ್ಯದ ನಂತರ, ಈಗ ಒಮ್ಮೆಲೆಗೇ ಹಿಂದೂಶಕ್ತಿಯೊಂದು ತಲೆಯೆತ್ತಿ ನಮ್ಮನ್ನು ಮೌರ್ಯ ಗುಪ್ತ, ವಿಕ್ರಮಾದಿತ್ಯ, ಹರ್ಷವರ್ಧನ, ಪುಲಕೇಶಿಯರಂತಹವರ ಕಾಲದ ಆತ್ಮಗೌರವ, ಆತ್ಮವಿಶ್ವಾಸದ ನೆಲೆಗೆ, ಪರ್ವಕ್ಕೆ ಕರೆದೊಯ್ಯುತ್ತಿದೆ.

ಈಗ ಮೊಗಲ್ ಸಂತಾನದ, ಉತ್ತರಾಧಿಕಾರಿಗಳಿಗೆ ಸಹನೆಯಿಲ್ಲ. ಇದು ಒಂದು ಮುಖ. ಮತ್ತೊಂದರಲ್ಲಿ ಅದು ವರ್ಗ ಆಳಿ, ತುಳಿದ ಮುಸ್ಲಿಂ ಶಕ್ತಿಗಳಿಗೆ ಮತ್ತೆ ಅಧಿಕಾರ ಹಿಡಿಯುವ ಚಪಲ, ಒತ್ತಡ, ಕನಸು, ಬ್ರಿಟಿಷರು ಬಿಟ್ಟು ಹೋಗುವಾಗ, ಔರಂಗಝೇಬನ ಸಂತತಿಗೆ ಅಧಿಕಾರ ಕೊಡದೆ, ಒಡೆದರೂ, ಇಲ್ಲಿ ಭಾರತದಲ್ಲಿ ಹಿಂದೂ ಸರ್ಕಾರ ಬರುವಂತೆ ಆಯಿತಲ್ಲ? ಎಂಬ ಕೊರಗು. ಬರೀ ಅರ್ಧ ಸಿಕ್ಕಿತು-ಪಾಕಿಸ್ತಾನ, ಪೂರ್ವ ಪಶ್ಚಿಮ ಭಾಗ ಕೊಟ್ಟರೂ ತೃಪ್ತಿಯಿಲ್ಲ! ಎಲ್ಲ ಭಾರತವೂ ಬೇಕು! ಅದು ಪಾಕ್ ಹೃದಯ. ಅದು ಓವೈಸಿ ಆಸೆ. ಅದು ಇಲ್ಲುಳಿದ ಮುಸ್ಲಿಂಲೀಗಿನ ಕನಸು. ಅದಕ್ಕೆ ದಡ್ಡ ನಮ್ಮ ಕಾಂಗ್ರೆಸ್ಸು ಪ್ರೋತ್ಸಾಹ! ತಿಳಿಯಿತೇ?

ದೇವಾಸುರರು ಕ್ಷೀರಸಮುದ್ರ ಕಡೆದರು. ಒಗ್ಗೂಡದವರು ಸೇರಿ ಕಡೆದದ್ದು ಅಂದು. ನಮ್ಮ ಸ್ವಾತಂತ್ರ್ಯಸಂಗ್ರಾಮ ಪರ್ವದಲ್ಲೂ ಹಿಂದೂ-ಮುಸ್ಲಿಂರು (ತೋರಿಕೆಗಾದರೂ) ಸೇರಿ ಸ್ವಾತಂತ್ರ್ಯವನ್ನು ಸಂಪಾದಿಸಿದರು. ಅದು ಗಾಂಧಿ ಲೆಕ್ಕ! ಮುಸ್ಲಿಂರು ನಿಜವಾಗಿ ಕೈಜೋಡಿಸಿದರೆ? ಸಂಶಯ ಇತ್ತೆ? ಯೋಚಿಸಿ. ಅಮೃತ ಬಂದಾಗ ದೇವತೆಗಳಿಗೆ ಮಾತ್ರ ಸಿಕ್ಕಿತು! ರಾಜೇಂದ್ರಪ್ರಸಾದರು ಅಧ್ಯಕ್ಷರು. ಪಟೇಲರ ಬದಲಿಗೆ ನೆಹ್ರೂ! ಪಾಕ್​ಗೆ ಪೂರ್ಣಭಾರತ ದಕ್ಕಲಿಲ್ಲ! ಅದು ಕೊರಗು! ಈಗ ಸಮಯ ಹೇಗೆ? ಹಿಂದೂಶಕ್ತಿಗಳು ಒಗ್ಗೂಡುತ್ತಿವೆ.

ನೆಹ್ರೂ ತಪ್ಪುಗಳನ್ನು ಸರಿಪಡಿಸಲಾಗುತ್ತಿದೆ. ನೆಹ್ರೂಯಿಸಂ ಸಾಯುತ್ತಿದೆ. ನರಸಿಂಹರಾಯರು, ನೆಹ್ರೂಯಿಸಂಗೆ ಮೊದಲ ಚೂರಿ ಹಾಕಿದವರು. ಆಗ ಅವರೊಡನಿದ್ದ ಮನಮೋಹನ್ ಸಿಂಗರು, ಆ ನೆಹ್ರೂಯಿಸಂ ಹೆಣವನ್ನು ತಬ್ಬಿಕೊಂಡು ಅಳುತ್ತಿದ್ದಾರೆ. ಅಳುವಿನ ಸಮೂಹ ಸನ್ನಿ- ಗೊಳು ಗಾಯನದಲ್ಲಿ ಸೋನಿಯಾ, ಅವರ ಪಡೆ, ರಾಬರ್ಟ್ ವಾದ್ರಾ, ಪ್ರಿಯಾಂಕಾ, ರಾಹುಲ್, ಕರ್ನಾಟಕದ ಘಟಾನುಘಟಿಗಳು. ದೆಹಲಿಯವರು, ಬೇರೆಡೆಯವರು ಹತಾಶ ಈ ಸಾಯಿ, ಇಸ್ಲಾಮಿ ಸೇನೆ, ಕಮ್ಯುನಿಷ್ಟರೂ, ಹಿಂದುಮುಂದು ತಿಳಿಯದ ಸಂಘಟನೆಗಳು ಎಲ್ಲ ಸೇರಿ ಊಳಿಡುತ್ತಿದ್ದಾರೆ. ಹೆಣಕ್ಕೆ ಜೀವ ಬರುತ್ತದೆ ಎಂಬ ಶುಕ್ರಸಂಜೀವಿನಿ ಭ್ರಾಂತಿ!

ಹೇಳಬೇಕಾದುದನ್ನು ಪ್ರಕಟಿಸಿ ಅವರವರ ಬಾಯಲ್ಲೇ ಬರುತ್ತಿರುವ ಸತ್ಯವನ್ನು ಹೊದಿಕೆ ಕಳಚಿ, ಈಗ ಯಾರಾದರೊಬ್ಬರು ಹೇಳಿ ಪ್ರಕಟಿಸಬೇಕಾಗಿದೆ. ರಾಹುಲ್ ಭಾಷಣಗಳಲ್ಲಿ ಎಷ್ಟು ಸಲ ‘ಹಮಾರಾ’ ‘ಹಿಂದೂಸ್ಥಾನ’ ಶಬ್ದ ಬರುತ್ತದೆ, ಎಣಿಸಿ ನೋಡಿ. ಉತ್ತರ ಭಾರತದ ಮುಸ್ಲಿಂರ ಬಾಯಿಗಳಲ್ಲೂ ಸಹ. ಯಾರೂ ‘ಇಂಡಿಯಾ’ ಎನ್ನುವುದಿಲ್ಲ. ‘ಭಾರತ್’ ಎನ್ನುವುದಿಲ್ಲ. ಹೃದಯಾಂತರಾಳದ ಭಾಷೆ. ‘ಇದು ಹಿಂದೂಸ್ಥಾನ’ ಎನ್ನುತ್ತಿದೆ. ದಿಗ್ವಿಜಯ, ಜೈರಾಂ ರಮೇಶ್, ಖರ್ಗೆ, ಮೊಯ್ಲಿ, ಸೋನಿಯಾ, ಕೊನೆಗೆ ಓವೈಸಿ ಮಾತಿನಲ್ಲಿ ಇದೇ ಶಬ್ದ ‘ಹಿಂದೂಸ್ಥಾನ’. ಅಂದರೆ, ಭಾರತ ಅಂದೂ-ಇಂದೂ ಹಿಂದೂಸ್ಥಾನ ಎಂಬ ಒಪ್ಪಿಗೆ. ಸರ್ಕಾರ ಪ್ರಕಟವಾಗಿ ಹಾಗೆ ಘೋಷಣೆ ಮಾಡಿ ‘ಹಿಂದೂರಾಷ್ಟ್ರ’ ಎನ್ನಲಿ, ಬಿಡಲಿ ಇಲ್ಲಿರುವುದೇ ಹಿಂದೂರಾಷ್ಟ್ರ. ಅದು ಪಾಕಿಸ್ತಾನ ಆಗ ಬೇಕು ಎಂಬ ಬಯಕೆಯವರನ್ನು ನಿಗ್ರಹ ಮಾಡಿ, ಸಮಸ್ಯೆ ತೀರಿಸುವುದು ಈಗಣ ತುರ್ತು ಕರ್ತವ್ಯ. ‘ಹಿಂದೂರಾಷ್ಟ್ರ’ದಲ್ಲಿ ಯಾರೂ ಬದುಕುವ ಹಕ್ಕು ಕಳೆದುಕೊಳ್ಳುವುದಿಲ್ಲ.

ಸತ್ಯ! ನೈಜ ಸೆಕ್ಯುಲರ್ ರಾಷ್ಟ್ರದಲ್ಲಿ ಸಹನೆ, ಸಹಬಾಳ್ವೆ, ಸೋದರ್ಯಗಳನ್ನು ಅರಬ್ಬಿ ದೇಶಗಳಿಂದ ಆಮದು ಮಾಡಿಕೊಳ್ಳಬೇಕಿಲ್ಲ. ಹಿಂದೂರಾಷ್ಟ್ರದಲ್ಲಿ ಪ್ರತ್ಯೇಕತಾವಾದಿಗಳ ಸೊಲ್ಲು ಅಡಗುತ್ತದೆ. ಪುಂಡಾಟಿಕೆ ನಿಲ್ಲುತ್ತದೆ. ಕೋಮುಹಿಂಸೆ ಇರುವುದಿಲ್ಲ. ಯಾರಿಗೂ ಹೆಚ್ಚಿನ ಮಾನ್ಯತೆ ಇರುವುದಿಲ್ಲ. ಒಂದೇ ಕಾನೂನು ಇರುತ್ತದೆ. ಅದು ಕಮ್ಯುನಲ್, ಕಮ್ಯುನಿಸ್ಟ್, ಕಾಂಗ್ರೆಸ್ಸಿಗರಿಗೆ ಭಯ. ಇವರ ಹುಟ್ಟು ಅಡಗದಿದ್ದರೆ ನಾವು ಯಾರೂ ಶಾಂತಿಯಿಂದಿರಲು ಸಾಧ್ಯವಿಲ್ಲ. ಅವರ ಚರಿತ್ರೆಯೇ ಅದಕ್ಕೆ ಸಾಕ್ಷಿ. ಆದುದರಿಂದ ಅವರು ‘ಹಿಂದೂರಾಷ್ಟ್ರ’ ಮುದ್ರಿಕೆಗೆ ಸವಾಲು ಹಾಕುತ್ತ ಬಂದಿದ್ದಾರೆ. ‘ಇಂಡಿಯಾ’ ಕೃತಕ ಬರಹ, ಶಬ್ದ, ಅಪದ್ಧ. ‘ಭಾರತ’ ಪ್ರಾಚೀನವಾದರೂ ‘ಹಿಂದೂರಾಷ್ಟ್ರ’ದಷ್ಟು ಪ್ರಬಲ ದನಿ ಈಗ ಬರುವುದಿಲ್ಲ. ‘ಹಿಂದೂ’ ಶಬ್ದ ಕ್ರಿ.ಶ. 6-7ನೇ ಶತಮಾನಗಳಲ್ಲೇ ಚೀನಿಯರ ದಾಖಲೆಗಳಲ್ಲಿವೆ.

ಏಕೆ ಅಳುಕು? ಏಕೆ ನಾಚಿಕೆ? ‘ಜೈಹಿಂದ್’ ಶಬ್ದವನ್ನು ನೆಹ್ರೂ ಪ್ರಚುರಿಸಲಿಲ್ಲವೆ? ಎಚ್​ಎಎಲ್, ಎಚ್​ಎಂಟಿ ಇತ್ಯಾದಿ ನಾಮಕರಣಗಳು ನೆಹ್ರೂರದೇ ಅಲ್ಲವೇ? ‘ಹಿಂದೂ’ ವ್ಯಾಪ್ತಿಯಲ್ಲಿ ಸೇರದುದು ಇಲ್ಲಿ ಯಾವುದೂ ಅಲ್ಲ-ಅದು ಒಂದು ಜೀವನಶೈಲಿಯ ಗುರುತು. ಅದರಡಿ ನಾನಾ ಮತಗ್ರಹಿಕೆಗಳಿರಲು ಅಡ್ಡಿಯಿಲ್ಲ! ಹಿಡಿದು ಕೂಡಿಸುವುದು ‘ಹಿಂದೂ’!

ಇನ್ನೊಂದು ಮಾತು. ಕೆಲ ಪುಢಾರಿಗಳಿಗೆ ನ್ಯಾಶನಲ್ ವಿಜನ್ ಇಲ್ಲ. ತಮ್ಮ ಸ್ವಾರ್ಥಕ್ಕೆ ಪ್ರಾದೇಶಿಕ ಬಣ್ಣ ಹಚ್ಚುವ ನಟನಾಯಕರು ಇವರು. ರಾಷ್ಟ್ರೀಯತೆ ಅಡಿಯಲ್ಲಿ ಪ್ರಾದೇಶಿಕ ಹಿತ ಸೇರುತ್ತದೆ, ಸಂಶಯವಿಲ್ಲ. ಪ್ರಾದೇಶಿಕಹಿತವೊಂದರಲ್ಲೇ ರಾಷ್ಟ್ರೀಯತೆ ಅಡಗುವುದಿಲ್ಲ-ಇದನ್ನು ಪುಡಿ ಪುಢಾರಿಗಳು ತಿಳಿಯಬೇಕು. ಈಗ ಗಣರಾಜ್ಯ ಎಂಬ ಫೆಡರಲ್ ತತ್ತ್ವ ತಿಳಿದವರು ಇದನ್ನು ವಿವರಿಸಿ ಸಾರಬೇಕಾಗಿದೆ. ಒಬ್ಬರು ಆಕಸ್ಮಿಕ ಪ್ರಧಾನಿಯಾದರೂ, ಗ್ರಾಮ ಪಂಚಾಯ್ತಿ ಸದಸ್ಯನಂತೆಯೇ ಸಂಸತ್ತಿನಲ್ಲಿ ಮಾತನಾಡುತ್ತಿದ್ದುದು ಹಾಸ್ಯಾಸ್ಪದ.

ರಸ್ತೆ, ಲೈಟ್, ನೀರು ಕೊಡುವುದು ಪಂಚಾಯ್ತಿ, ನಗರಸಭೆ, ಪುರಸಭೆಗಳ ಕೆಲಸ. ಗಡಿರಕ್ಷಣೆ, ಸೇನೆ, ರಾಷ್ಟ್ರಗೌರವ, ಆಂತರಿಕ ರಕ್ಷಣೆ ಇಂಥವು ಕೇಂದ್ರ/ರಾಷ್ಟ್ರೀಯ ಅಡಕಗಳು. ಗೌಡ, ಲಾಲೂ, ನಾಯ್ಡು, ಮಮತಾ, ಮಾಯಾ, ಪವಾರ್, ಗುಜ್ರಾಲ್, ಚಂದ್ರಶೇಖರ, ಚರಣ್ ಸಿಂಗಾದಿಗಳು ಫೇಲಾದುದು ಇಲ್ಲೇ! ಇವರಾರಿಗೂ ರಾಷ್ಟ್ರಹಿತ ತಿಳಿಯಲೂ ಇಲ್ಲ. ಬೇಕಾಗಲೂ ಇಲ್ಲ. ಜನತೆ ಅರಿಯಬೇಕು-ಯಾರನ್ನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು. ಈಗ ಸಿಎಎ, ಎನ್​ಸಿಆರ್ ಹೆಸರಲ್ಲಿ ರಾಷ್ಟ್ರವನ್ನೇ ಸುಡುತ್ತಿರುವವರು ದೇಶದ್ರೋಹಿಗಳು. ಸತ್ಯ.

ಒಗ್ಗೂಡಿಯೂ ಇವರು ಕಳ್ಳಗ್ಯಾಂಗಿನಂತೆ ಸುಲಭ ಹಂಚಿಕೆಯಲ್ಲೇ ದೃಷ್ಟಿ ಇಡುತ್ತ ಕಾಮನ್ ಮಿನಿಮಂ ಪ್ರೋಗ್ರಾಂ ಮಾಡುತ್ತ, ವಂಚಿಸುತ್ತಾರೆ. ಹಾಗೆಂದರೆ ‘ಲೂಟಿ’. ‘ನೀನೂ ತಿನ್ನು, ನನಗೂ ಕೊಡು’ ಎಂಬುದೇ ಅದು. ಈ ಕೂಟವನ್ನು ಅಂದು ಶ್ರೀಕೃಷ್ಣ ಮುರಿದದ್ದು, ಭಾಗವತ ಮಹಾಭಾರತದ ಕಥೆ. ಈಗ ಮುರಿಯಬೇಕಾದ್ದು ಮೋದಿ-ಷಾ ಕರ್ತವ್ಯ. ಈ ಗ್ಯಾಂಗು ಹಾಳಾದರೆ ಯಾರೂ ಅಳುವುದಿಲ್ಲ. ಇತರರಿಗೆ ಇ.ಡಿ., ಸಿಬಿಐ, ಐಟಿಗಳಿರುತ್ತ ಬೋನಿಗೆ ಬಿದ್ದರೆ ದೇಶಕ್ಕೆ ಕ್ಷೇಮ! ಹಿಂದೂಶಕ್ತಿ ವೃದ್ಧಿಯಲ್ಲೇ ರಾಷ್ಟ್ರಹಿತ. ಅದನ್ನು ತಡೆಯಲು ದೊಂಬಿ, ಗಲಭೆ, ಹಿಂಸಾಚಾರ ಮಾಡುತ್ತಿರುವವರನ್ನು ಕ್ರೂರವಾಗಿಯೇ ಶಿಕ್ಷಿಸದೆ ಹೋದರೆ ಉಳಿಗಾಲವಿಲ್ಲ. ‘ಜೈಹಿಂದ್’ ಕೂಗಿಗೆ ಅರ್ಥ ತುಂಬಿ ಮಾರಾಯ್ರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net