

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತು ಎಂಬ ಸಂತಸದ ಜತೆಗೆ, ದೇಶದಿಂದ ಬೇರ್ಪಟ್ಟ ಭೂಭಾಗದಲ್ಲಿದ್ದ ಲಕ್ಷಾಂತರ ಭಾರತೀಯರ ಮಾರಣಹೋಮ ನಡೆದುಹೋಯಿತು. ದೇಶ ತುಂಡಾಗುವ ಜತೆಗೆ ಜನರ ಪ್ರಾಣಗಳು, ಮಹಿಳೆಯರ ಮಾನಹರಣವಾದವು.
1966ರಲ್ಲಿ, ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಲು ತೆರಳಿದ್ದ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಇಂದಿಗೂ ಅದರ ಸತ್ಯ ತಿಳಿದುಬಂದಿಲ್ಲ.
1984ರಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಹತ್ಯೆಮಾಡಿದರು.
2002ರಲ್ಲಿ ಗುಜರಾತ್ನಲ್ಲಿ ಕರಸೇವಕರ ಮೇಲಿನ ಆಕ್ರಮಣದ ನಂತರದ ಗಲಭೆಗಳು ನಡೆದು ದೇಶ ಪ್ರಕ್ಷುಬ್ಧವಾಯಿತು.
ಈ ನಾಲ್ಕೂ ಸಂದರ್ಭದಲ್ಲಿ ಇದ್ದ ಒಂದು ಸಮಾನ ಅಂಶವೆಂದರೆ, ರಾಹು-ಕೇತು ಕ್ರಮವಾಗಿ ವೃಷಭ ಹಾಗೂ ವೃಶ್ಚಿಕ ರಾಶಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೀಗ ಐದನೇ ಬಾರಿಗೆ ಅಂತಹದ್ದೇ ಸನ್ನಿವೇಶ ಸೆ.22ರ ಮಧ್ಯರಾತ್ರಿಯಿಂದ ಎದುರಾಗಲಿದೆ. ಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಚಲಿಸುವುದು ಶನಿ. ಅವನು ಚಲಿಸಲು 30 ತಿಂಗಳು ಬೇಕು. ನಂತರದ ಸ್ಥಾನ ರಾಹು-ಕೇತುಗಳದು. ಸೆ.22ರಂದು ರಾಹು-ಕೇತು ಆಗಮಿಸಿದರೆ ಅಲ್ಲಿಂದ ಮುಂದೆ ಸಾಗುವುದು 18 ತಿಂಗಳ ನಂತರ, 2022ರ ಮಾರ್ಚ್ ನಂತರವೇ.
ರಾಹು-ಕೇತು ಸಂಚಾರ ಎಂದರೆ ಅತಿರೇಕ. ಒಳ್ಳೆಯದಾದರೂ ಅಷ್ಟೆ ಕೆಡುಕಾದರೂ ಅಷ್ಟೆ. ಹನ್ನೆರಡು ರಾಶಿಗಳ ಮೇಲೆಯೂ ಇದರ ಕರಿಛಾಯೆ ಇದ್ದೇ ಇರುತ್ತದೆ, ಅನಾರೋಗ್ಯ ಕಾಡುತ್ತದೆ. ಆದರೆ ವೃಷಭ ರಾಶಿಯಿರುವುದರಿಂದ ಆರ್ಥಿಕತೆ ಸುಧಾರಣೆಯಾಗುತ್ತದೆ. ದೇವತೆಗಳ ಸೇನೆಯ ಅಧಿಪತಿಯಾದ ಷಣ್ಮುಖನನ್ನು ಪ್ರಾರ್ಥನೆ ಮಾಡುವುದರಿಂದ ಸಂಕಷ್ಟವನ್ನು ಎದುರಿಸಲು ಶಕ್ತಿ ದೊರಕುತ್ತದೆ.
ಷಡಾನನಂ ಕುಂಕುಮ ರಕ್ತವರ್ಣಂ, ಮಹಾಮತಿಂ ದಿವ್ಯ ಮಯೂರವಾಹನಂ/ರುದ್ರಸ್ಯ ಸೇನಂ ಸುರಸೈನ್ಯನಾಥಂ, ಗುಹಂ ಸದಾ ಶರಣಮಹಂ ಪ್ರಪದ್ಯೆ//
ಇನ್ನು, ದೇಶದ ವಿಚಾರಕ್ಕೆ ಬರುವುದಾದರೆ, ಭಾರತದ ರಾಜಕಾರಣಕ್ಕಷ್ಟೆ ಅಲ್ಲದೆ ದೇಶಕ್ಕೆ ಸಿಕ್ಕಿರುವ ಅಮೂಲ್ಯ ರತ್ನ ಪ್ರಧಾನಿ ನರೇಂದ್ರ ಮೋದಿ. ದೇಶದಲ್ಲಿ ಕಾಂಗ್ರೆಸ್ ಪತನವಾಗಿ ಮೋದಿ ಅಧಿಕಾರಕ್ಕೆ ಬರುತ್ತಾರೆ ಎಂದು 2013ರಲ್ಲಿ ನಾನು ಮೊದಲ ಬಾರಿಗೆ ತಿಳಿಸಿದ್ದೆ. ರಾಷ್ಟ್ರೀಯ ಪಕ್ಷಗಳ ಕುರಿತು ಹೇಳುವುದಾದರೆ, ಎರಡೂ ಗುಂಪಿನಿಂದ ಯಾವುದೇ ನಿರೀಕ್ಷೆಗಳಿಲ್ಲ. ಮೋದಿಯವರೊಬ್ಬರೇ ಆಶಾಕಿರಣ. ಅವರಿಗೆ ಸೂಕ್ತ ಸಲಹೆ ನೀಡದ ಪರಿಣಾಮ ತೊಂದರೆಗಳು ಆಗುತ್ತಿವೆ, ಕರ್ತವ್ಯ ನಿರ್ವಹಣೆಗೆ ಅನೇಕ ಅಡ್ಡಿಗಳಿವೆ. ಸತ್ಯ-ಧರ್ಮ ಪಾಲನೆ ಮಾಡುವವರಿಗಷ್ಟೆ ಉಳಿಗಾಲ. ಹಿಂದು ಧರ್ಮವನ್ನು ಸಂರಕ್ಷಿಸುವ ಕಾರ್ಯಕ್ಕೆಂದೇ ಮೋದಿಯವರಿಗೆ ಅಧಿಕಾರ ಸಿಕ್ಕಿದೆ. ಹಿಂದು ಧರ್ಮವನ್ನು ಜಾತಿ ಎಂಬಂತೆ ಕೆಲವರು ಬಿಂಬಿಸುತ್ತಿದ್ದಾರೆ, ಅದು ತಪ್ಪು.
‘ಹೆಣ್ಣಿನಲ್ಲಿ ದೇವಿಯನ್ನು ಕಾಣು’ ಎಂದು ಶ್ರೀರಾಮನೇ ಹೇಳಿದರೂ ದೇಶದಲ್ಲಿ ಹೆಣ್ಣಿನ ಮೇಲಿನ ಅತ್ಯಾಚಾರ ನಿಂತಿಲ್ಲ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಲು ಇನ್ನೂ ಸಾಧ್ಯವಾಗುತ್ತಿಲ್ಲ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಹೇಳಬಹುದಾದರೂ, ತಪ್ಪನ್ನು ನೋಡುತ್ತ ಸುಮ್ಮನಿರುವುದೂ ಅಪರಾಧವೇ. ಹೆಣ್ಣಿನ ಮಾನಭಂಗವನ್ನು ನೋಡುತ್ತ ಸುಮ್ಮನೆ ಕುಳಿತ ಭೀಷ್ಮನೂ ಕೊನೆಯಲ್ಲಿ ಶರಶಯ್ಯೆ ಮೇಲೆ ಮಲಗುವಂತಾಯಿತಲ್ಲವೇ? ಅತ್ತ, ಬ್ರಿಟನ್ ಸರ್ಕಾರದ ಯಾವುದೇ ಆದೇಶಕ್ಕೆ ರಾಣಿಯೇ ಸಹಿ ಹಾಕುವ ಸ್ಥಿತಿಯಿದ್ದು, ಭಾರತದಲ್ಲಿ ರಾಜ್ಯಾಂಗ ಮತ್ತು ಕಾರ್ಯಾಂಗದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಗಟ್ಟಿ ನಿರ್ಧಾರ ಆಗುತ್ತಿಲ್ಲ. ಕಷ್ಟ ಬಂದಾಗ ಸ್ತ್ರೀದೇವತೆಗಳ ಮೊರೆಹೋಗುವ ಆಡಳಿತಗಾರರು ಸೌಲಭ್ಯ ನೀಡುವಾಗ ಮಾತ್ರ ಜಾಣಕುರುಡು ಪ್ರದರ್ಶಿಸಬಾರದು.
ಉತ್ತಮ ಉದ್ದೇಶವಿದ್ಯಾಗ್ಯೂ ಅನೇಕ ವೈಫಲ್ಯಗಳು ನಡೆದಿವೆ. ತಾವು ಮಾಡಿದ್ದನ್ನು ಹೇಳಿಕೊಳ್ಳುತ್ತಲೇ ಇರುವುದು ಸಾಧನೆಯಲ್ಲ. ತಮ್ಮ ಪ್ರಯತ್ನದಲ್ಲಾಗಿರುವ ವೈಫಲ್ಯವನ್ನು ಒಪ್ಪಿಕೊಂಡು ತಿದ್ದಿ ನಡೆದರೆ ಗೌರವ ಹೆಚ್ಚಾಗುತ್ತದೆ. ಆರ್ಥಿಕತೆ ಕ್ಷೇತ್ರದಲ್ಲಿ, ಆರ್ಬಿಐನಂತಹ ಸಂಸ್ಥೆಗಳಲ್ಲಿ, ನ್ಯಾಯಾಂಗದಂತಹ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಆರೋಪಗಳು ಬಲವಾಗಿವೆ. ಕೇವಲ ಆದಾಯ ತೆರಿಗೆ ದಾಳಿಯಂತಹ ಕ್ರಮದಿಂದ ಏನೂ ಸಾಧನೆ ಆಗುವುದಿಲ್ಲ. ಹಾಗಿದ್ದರೆ ತಮ್ಮ ಪಕ್ಷದಲ್ಲಿ ಯಾರೂ ಆರ್ಥಿಕ ವಂಚಕರಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಎಲ್ಲ ವಿಚಾರಗಳ ಕುರಿತು ಜನರಲ್ಲಿ ಸ್ಪಷ್ಟತೆ ಮೂಡಿಸಬೇಕು. ಆರ್ಥಿಕ ಭದ್ರತೆಯುಳ್ಳ ನೂತನ ಯುವಭಾರತವನ್ನು ಕಟ್ಟಲು ಮೋದಿಯವರು ಈಗಿನಿಂದಲೇ ಅಡಿಯಿಡಬೇಕು.
ಈ 18 ತಿಂಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಆಂತರಿಕ ಒಡಕು ಮೂಡುತ್ತದೆ. ಇದೆಲ್ಲ ಸಂಘರ್ಷದಲ್ಲಿ ದೇಶದ ಒಬ್ಬ ಮಹಾನ್ಪುರುಷ ಕಣ್ಮರೆಯಾಗುವ ಅಪಾಯ ಇದೆ. ಯುದ್ಧಭೀತಿಯೂ ಇದೆ. ಪ್ರಮುಖವಾಗಿ ಯುದ್ಧ ಹಾಗೂ ಆರ್ಥಿಕ ವಿಚಾರದಲ್ಲಿ ಸರ್ಕಾರ ಯಾವುದೇ ವಿಚಾರ ಮುಚ್ಚಿಡಬಾರದು.
ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ ನಂತರ ಅವರನ್ನು ಶೃಂಗೇರಿ ಪೀಠಕ್ಕೆ ಕರೆದೊಯ್ದು ಗುರುಗಳ ದರ್ಶನ ಮಾಡಿಸಿದ್ದೆ. ದೇಶಕ್ಕೆ ಸಂಕಷ್ಟ ತಂದಿಟ್ಟಿರುವುದು ಮಹಾ ತಪು್ಪ ಎಂದು ಗುರುಗಳು ಅವರಿಗೆ ತಿಳಿಸಿದ್ದರು. ‘ಸಿದ್ಧಾರ್ಥ ಶಂಕರ ರಾಯ್ ಅವರ ಮಾತನ್ನು ನಂಬಿ ಈ ತಪು್ಪ ಮಾಡಿದೆ’ ಎಂದು ಇಂದಿರಾ ನನ್ನ ಬಳಿ ತಿಳಿಸಿದ್ದರು. ಬಳಿಕ ಶಿವಪಂಚಾಕ್ಷರಿ ಮಂತ್ರದ ಉಪದೇಶ ಮಾಡಿಸಿಕೊಂಡು ಅಸ್ತಿತ್ವ ಉಳಿಸಿಕೊಂಡರು. ಆದರೆ ನಂತರದಲ್ಲಿ ಆ ಕುಟುಂಬ ಗುರುಗಳನ್ನು ಮರೆಯಿತು, ಅಭಿವೃದ್ಧಿ ಕಾಣದಾಯಿತು.
ಗುರುಗಳನ್ನು ಎಂದಿಗೂ ಮರೆಯಕೂಡದು. ತಿಳಿದೋ, ತಿಳಿಯದೆಯೋ ಮಾಡಿದ ಯಾವುದೇ ಪಾಪವಿದ್ದರೂ ‘ಚರಣಂ ಪವಿತ್ರಂ ವಿತತಂ ಪುರಾಣಂ’ ಎಂದು ಶ್ರೀ ಗುರುಚರಿತ್ರೆಯ 45ನೇ ಅಧ್ಯಾಯದಲ್ಲಿ ಹೇಳಿರುವಂತೆ, ಗುರುವಿನ ಪಾದಕ್ಕೆರಗಿ ಹಣೆಯನ್ನು ಚರಣಕ್ಕೆ ರ್ಸ³ಸಿದರೆ, ಬ್ರಹ್ಮನು ಹಣೆಯಲ್ಲಿ ಬರೆದಿರುವ ದುಷ್ಟಾಕ್ಷರಗಳೂ ಸುಷ್ಟಾಕ್ಷರಗಳಾಗುತ್ತವೆ. ಸರ್ಕಾರ ನಡೆಸುವವರು ಮೈಯೆಲ್ಲಾ ಕಣ್ಣಾಗಿರಬೇಕು, ನಿಸ್ವಾರ್ಥದಿಂದ ಕೆಲಸ ಮಾಡಬೇಕು. ಮೋದಿಯಂತಹ ರತ್ನಕ್ಕೆ ಯಾವುದೇ ಅಪಾಯ ಆಗದಂತೆ ಕಾಪಾಡುವ ಅಗತ್ಯ ಇಡೀ ದೇಶಕ್ಕೆ ಇದೆ.
ದ್ವಿಷಡ್ಭುಜಂ ಷಣ್ಮುಖಂ ಅಂಬಿಕಾ ಸುತಂ/ಕುಮಾರಂ ಆದಿತ್ಯಸಮಾನ ತೇಜಸಂ/ಅಗ್ನಿಸಂಭವಂ, ವಂದೇ ಮಯೂರಾಸನಂ/ಸೇನಾನ್ಯಮಾದ್ಯಂ/ಮಮ ಇಷ್ಟ ಸಿದ್ಧಯೇ// ಎಂದು ಪ್ರಾರ್ಥನೆ ಮಾಡುತ್ತ ಪಳನಿ ಅಥವಾ ಕುಕ್ಕೆ ಸುಬ್ರಹ್ಮಣ್ಯನ ಆಶೀರ್ವಾದ ಪಡೆಯಬೇಕು. ದೇಶಾದ್ಯಂತ ಮಾದಕವಸ್ತು ವಿಚಾರ ತಿಂಗಳಿಂದ ಅಲ್ಲೋಲಕಲ್ಲೋಲ ಸೃಷ್ಟಿಸಿರುವುದು, ರಾಹುವು ಪ್ರವೇಶ ಮಾಡುವುದಕ್ಕೆ ಒಂದು ತಿಂಗಳ ಮೊದಲಿಂದಲೇ ತನ್ನ ಪ್ರಭಾವವನ್ನು ತೋರುತ್ತಾನೆ ಎಂಬುದನ್ನು ಪುಷ್ಟೀಕರಿಸುತ್ತದೆ. ಮೇಲಿನ ಶ್ಲೋಕ ಹೇಳುವುದರಿಂದ ರಾಹುವಿನ ಪ್ರಭಾವ ಕಡಿಮೆಯಾಗುತ್ತದೆ.
ಏ.5ರ ನಂತರವೇ ಮುಕ್ತಿ: ವಿಶ್ವವನ್ನು ಬಾಧಿಸುತ್ತಿರುವ ಕರೊನಾ ಮಹಾಮಾರಿಗೆ ಸದ್ಯದಲ್ಲಿ ಔಷಧ ಸಿಗುವ ಯಾವ ಸಾಧ್ಯತೆಯೂ ಇಲ್ಲ. 2021ರ ಏ.5ರ ನಂತರ ಮೇಷ ಸಂಕ್ರಮಣದ ವೇಳೆಗೆ ತಾನೇತಾನಾಗಿ ಕಡಿಮೆಯಾಗುತ್ತದೆ. ಅಲ್ಲಿವರೆಗೆ ದೇಶದಲ್ಲಿ ಸಾಲಬಾಧೆ, ರೈಲ್ವೆ ಅಪಘಾತ, ವಿಮಾನ ಅಪಘಾತ, ದಕ್ಷಿಣ ಕರಾವಳಿ ಹಾಗೂ ಕೇರಳದಲ್ಲಿ ಪ್ರವಾಹ, ಮಡಿಕೇರಿಯ ಅಸ್ತಿತ್ವಕ್ಕೇ ತೊಂದರೆ, ಕಾರವಾರ, ಮುಂಬೈ, ತೆಲಂಗಾಣ, ತಮಿಳುನಾಡಿನಲ್ಲಿ ಹಾಗೂ ದೇಶದ ಪೂರ್ವದಲ್ಲಿ ಪ್ರವಾಹ ಉಂಟಾಗಲಿದೆ.
ಮುಂದಿನ ಚುನಾವಣೆಗಳಲ್ಲಿ ರಾಜ್ಯಗಳ ಮಟ್ಟಿಗೆ ಬಿಜೆಪಿ ಏಕಾಂಗಿಯಾಗಿ ಜಯಿಸುವ ಸಾಧ್ಯತೆ ಕಡಿಮೆ. ಸಜ್ಜನರನ್ನು ಜತೆಯಾಗಿಸಿಕೊಂಡು ಸೂಕ್ತ ಕಾರ್ಯಕ್ರಮ ನೀಡಿದರೆ ಮಾತ್ರ ಜಯ ಲಭಿಸುತ್ತದೆ. ಮೋದಿಯವರ ನೇತೃತ್ವವನ್ನು ಉಳಿಸಿಕೊಂಡು ತಂಡ, ಕಾರ್ಯವಿಧಾನ ಬದಲಾಯಿಸಬೇಕು. ಈಗ ಆಗದಿದ್ದರೆ ಮುಂದೆಂದೂ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಬೇಕಾದರೆ ಮತದಾನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು, ಪ್ರಜೆಗಳೂ ಆಲಸ್ಯ ತೋರದೆ ಯೋಗ್ಯರನ್ನು ಆಯ್ಕೆ ಮಾಡಬೇಕು.
ಹಿಂದು ಧರ್ಮಕ್ಕೆ ತೊಂದರೆ ನೀಡುವುದನ್ನು ಮುಂದು ವರಿಸಿದರೆ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ನೇಪಾಳ ರಾಷ್ಟ್ರಗಳೇ ನಿರ್ನಾಮವಾಗುತ್ತವೆ. ಹಿಮಾಲಯವೇ ಕುಸಿದು ಅಲ್ಲೆಲ್ಲ ಜಲಪ್ರಳಯವಾಗುತ್ತದೆ. ಶಿವಪಾರ್ವತಿಯರ ಏಕಾಂತದ ಸ್ಥಳ ಕೈಲಾಸಕ್ಕೆ ಪ್ರವಾಸೋದ್ಯಮದ ಹೆಸರಿನಲ್ಲಿ ಅಪಚಾರ ಎಸಗುವುದನ್ನು ನಿಲ್ಲಿಸಬೇಕು. ಭಾರತ ಸರ್ಕಾರ ಅದನ್ನು ಸುಪರ್ದಿಗೆ ಪಡೆದು, ನಿರ್ಜನ ಪ್ರದೇಶವಾಗಿಸಬೇಕು.
ರಾಜ್ಯದ ಮಟ್ಟಿಗೆ ನೋಡುವುದಾದರೆ, ಯಡಿಯೂರಪ್ಪ ಅವರಿಗೆ ಪ್ರಮುಖ ಶಸ್ತ್ರಚಿಕಿತ್ಸೆಯೊಂದು ನಡೆಯುವ ಸಾಧ್ಯತೆಯಿದೆ. ಸದ್ಯ ಎರಡನೇ ಮನೆಯಲ್ಲಿರುವ ಗುರು ನ.23ಕ್ಕೆ ಮೂರನೇ ಮನೆಗೆ ಹೋಗುತ್ತಿದ್ದು, ಅಷ್ಟು ಶುಭವಲ್ಲ. ಅವರ ಸ್ಥಾನಕ್ಕೆ ಸಂಚಕಾರವೂ ಇದೆ. ಅವರನ್ನು ಬದಲಾವಣೆ ಮಾಡುವ ಯಾವುದೇ ಪ್ರಯತ್ನಗಳು ರಾಜ್ಯದಲ್ಲಿ ಅಸ್ಥಿರತೆ ಉಂಟುಮಾಡುತ್ತವೆ. ತಮ್ಮ ಜೀವನದಲ್ಲಿ ಅತ್ಯುತ್ತಮ ಕಾರ್ಯ ಮಾಡಲು ಯಡಿಯೂರಪ್ಪ ಅವರಿಗೆ ಅವಕಾಶವಿದೆ. ಮಂತ್ರಿಮಂಡಲವನ್ನು ಶುದ್ಧ ಮಾಡಬೇಕು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಯುವಕರಿಗೆ ಅವಕಾಶ ನೀಡಬೇಕು. ಬಿಎಸ್ವೈ ಅವರು ಸನ್ನತಿಯ ಚಂದಲಾ ಪರಮೇಶ್ವರಿ ಹಾಗೂ ಇಡಗುಂಜಿ ಮಹಾಗಣಪತಿ ಆಶೀರ್ವಾದ ಪಡೆಯುವುದು ಸೂಕ್ತ.