ರೇಡಿಯೋ ಎಂಬ ಬೆರಗಿನ ಫೀನಿಕ್ಸ್! ಪ್ರತಿ ಕ್ಷಣ ಕಣ್ಣು ಕಿವಿ ಓಪನ್ ಆಗಿರಬೇಕು...

Redio 12 Feb 20
Published on

1946ರ ಫೆಬ್ರವರಿ 13ರಂದು ವಿಶ್ವಸಂಸ್ಥೆಯು ‘ಯುನೈಟೆಡ್ ನೇಷನ್ಸ್ ರೇಡಿಯೋ’ ಆರಂಭಿಸಿದ ದಿನವನ್ನೇ ‘ವಿಶ್ವ ರೇಡಿಯೋ ದಿನ’ವನ್ನಾಗಿ ಪ್ರತಿ ವರ್ಷ ಆಚರಿಸಲು ಯುನೆಸ್ಕೊ 2012ರಲ್ಲಿ ಆರಂಭಿಸಿತು. ಸ್ಪ್ಯಾನಿಷ್ ರೇಡಿಯೋ ಅಕಾಡೆಮಿ 2010ರಲ್ಲಿ ಮಾಡಿದ ಮನವಿಯ ಮೇರೆಗೆ ಯುನೆಸ್ಕೊ ಈ ನಿರ್ಧಾರ ಕೈಗೊಂಡಿತು. ಸರ್ವವ್ಯಾಪಿಯಾಗಿರುವ, ಸರ್ವಸ್ಪರ್ಶಿ ಯಾಗಿರುವ ರೇಡಿಯೋ ಈಗಲೂ ತನ್ನ ಬೇಡಿಕೆ ಕಳೆದುಕೊಂಡಿಲ್ಲ.

ಟೈಪ್​ರೈಟರ್ ಹೋಯ್ತು, ಕಂಪ್ಯೂಟರ್ ಬಂತು; ಲ್ಯಾಂಡ್​ಲೈನ್ ಹೋಯ್ತು, ಮೊಬೈಲ್ ಫೋನ್ ಬಂತು; ಹಾಗೆಯೇ ರೇಡಿಯೋ ಹೋಯ್ತು, ಟಿವಿ ಬಂತು... ಎನ್ನುವ ಕಾಲವೊಂದಿತ್ತು. ಆದರೆ ಅದೇ ರೇಡಿಯೋ ತನ್ನ ಸ್ವರೂಪವನ್ನು ಬದಲಿಸಿಕೊಂಡು ಮತ್ತೆ ದಾಂಗುಡಿ ಇಟ್ಟಿತು. ಮೊದಲಿಗಿಂತ ಹೆಚ್ಚು ಜನಪ್ರಿಯವಾಯಿತು.

ಈಗಲೂ ದೇಶದ ಶೇಕಡ 99ರಷ್ಟು ಜನರನ್ನು ತಲುಪುತ್ತಿರುವ ಮಾಧ್ಯಮವೆಂದರೆ ರೇಡಿಯೋ (ಆಂಪ್ಲಿಟ್ಯೂಡ್ ಮಾಡುಲೇಷನ್ - ಎಎಂ). ಇನ್ನು ಎಫ್​ಎಂ (ಫ್ರೀಕ್ವೆನ್ಸಿ ಮಾಡುಲೇಷನ್) ರೇಡಿಯೋ ದೇಶದ ಶೇಕಡ 65ರಷ್ಟು ಜನರನ್ನು ತಲುಪುತ್ತಿದೆ. ಅದಕ್ಕೇ ಅಲ್ವೆ, ಪ್ರಧಾನಿ ನರೇಂದ್ರ ಮೋದಿ ಕೂಡ ಜನರಿಗೆ ತಮ್ಮ ‘ಮನ್ ಕಿ ಬಾತ್’ ತಲುಪಿಸಲು ರೇಡಿಯೋನ್ನೇ ಆರಿಸಿಕೊಂಡಿದ್ದು.

ಮೊದಲು ಸಂಪೂರ್ಣ ಸರ್ಕಾರದ ಹಿಡಿತದಲ್ಲಿದ್ದ ಈ ಕ್ಷೇತ್ರ ಖಾಸಗಿಯವರಿಗೂ ಮುಕ್ತಗೊಂಡ ನಂತರ ವ್ಯಾಪಕವಾಗಿ ಬೆಳೆಯುತ್ತಿದೆ. ದೇಶಾದ್ಯಂತ ಈಗ 400ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳಿವೆ. ಟಿವಿ ನೋಡಬೇಕೆಂದರೆ ನೀವು ಕೇಬಲ್​ನವರಿಗೋ, ಡಿಟಿಎಚ್​ನವರಿಗೋ ದುಡ್ಡು ಕೊಡಬೇಕು. ರೇಡಿಯೋ ಕೇಳಲು ಯಾವುದೇ ಶುಲ್ಕ ತೆರಬೇಕಿಲ್ಲ. ತೀರಾ ಲೋಕಲ್ ಸುದ್ದಿಗಳೂ, ಮಾಹಿತಿಯೂ ರೇಡಿಯೋದಲ್ಲಿ ಸಿಗುತ್ತದೆ. ನಿಮ್ಮಿಷ್ಟದ ಕಾರ್ಯಕ್ರಮ ಕೇಳುವಾಗ ನೀವೂ ಫೋನ್ ಮಾಡಿ ರೇಡಿಯೋ ಜಾಕಿ (ಆರ್​ಜೆ) ಜತೆ ಮಾತನಾಡಬಹುದು. ಈ ಆರ್​ಜೆಗಳೋ ಮಾತಿನ ಮೋಡಿಯಿಂದಲೇ ಶ್ರೋತೃಗಳ ಕುಟುಂಬದ ಸದಸ್ಯರಾಗಿಬಿಟ್ಟಿದ್ದಾರೆ. ಅವರ ಧ್ವನಿಗಳು ಈಗ ಎಲ್ಲರಿಗೂ ಪರಿಚಿತ. ಅವರ ಧ್ವನಿಯ ಏರಿಳಿತಗಳು ಕೇಳುಗರ ಎದೆಬಡಿತದ ವೇಗವನ್ನು ನಿರ್ಧರಿಸುತ್ತಿವೆ. ಅವರ ಹೃದಯದಲ್ಲಿ ಭಾವನೆಗಳನ್ನು ಬಡಿದೆಬ್ಬಿಸುತ್ತಿವೆ. ಇಂತಹ ಸರ್ವಸ್ವರ್ಶಿ ಮಾಧ್ಯಮ ಕೇವಲ ಮನರಂಜನೆಗಾಗಿ ಬಳಕೆಯಾಗುತ್ತಿದೆಯೇ? ಜನಹಿತಕ್ಕೂ ಉಪಯೋಗವಾಗುತ್ತಿದೆಯೇ? ನಿರಂತರ ಬದಲಾವಣೆಯ ಈ ಕಾಲದಲ್ಲೂ ಅದು ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದು ಹೇಗೆ? ಆರ್​ಜೆ ನೇತ್ರಾ ಏನಂತಾರೆ?..

ಪ್ರತಿ ಕ್ಷಣ ಕಣ್ಣು ಕಿವಿ ಓಪನ್ ಆಗಿರಬೇಕು...
ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚೆಚ್ಚು ರೇಡಿಯೋ ಕೇಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅದರಲ್ಲಿ ಬರುವ ಹಾಡುಗಳು ಮತ್ತು ಆರ್​ಜೆಗಳ ಮಾತು. ಎಲ್ಲರೂ ಯಾವಾಗಲೂ ಟಿವಿ ನೋಡಲು ಸಾಧ್ಯವಿಲ್ಲ. ಹಾಡುಗಳನ್ನು ಕೇಳುವ ಮೂಲಕ ಬೇಸರ ಕಳೆದುಕೊಳ್ಳುತ್ತಿದ್ದಾರೆ. ನಾವು ಕೂಡ ಜನರ ಯೋಚನೆಗಳಿಗೆ ಪೂರಕವಾಗಿ ಮಾತನಾಡುತ್ತೇವೆ. ಅವರನ್ನು ಆಕರ್ಷಿಸುವಂತೆ ಮಾತನಾಡಿದರೆ ಒಳ್ಳೊಳ್ಳೆಯ ವಿಷಯಗಳು ಷೇರ್ ಆಗುತ್ತವೆ. ಯಾರಾದರೂ ಸಮಸ್ಯೆ ಹೇಳಿಕೊಂಡರೆ ಅದಕ್ಕೆ ಬೇಕಾದ ಟಿಪ್ಸ್ ಕೊಡುತ್ತೇವೆ. ಅವರಿಗೆ ಇಷ್ಟವಾದ ಮತ್ತು ಸಂದರ್ಭಕ್ಕೆ ತಕ್ಕಂತಹ ಹಾಡುಗಳನ್ನು ಪ್ಲೇ ಮಾಡುತ್ತೇವೆ. ಇದೆಲ್ಲದರ ಜತೆಗೆ ಸೋಶಿಯಲ್ ಮೀಡಿಯಾ ಮೂಲಕವೂ ನಾವು ಜನರ ಆಸಕ್ತಿ ಏನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ರೇಡಿಯೋ ಇಷ್ಟು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ. ಜತೆಗೆ ಆರ್​ಜೆಗಳು ಜನರನ್ನು ಎಂಗೇಜ್ ಮಾಡಿಕೊಳ್ಳುವ ರೀತಿಯೂ ಜನರು ರೇಡಿಯೋವನ್ನು ಇಷ್ಟಪಡಲು ಮತ್ತೊಂದು ಕಾರಣ.

| ಹರೀಶ್​ ಬಸವರಾಜ್​, ಮಂಜುಕೊಟಗುಣಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net