

ರೇಡಿಯೋ ಕೇವಲ ಮನರಂಜನೆಗಾಗಿ ಬಳಕೆಯಾಗುತ್ತಿದೆಯೇ? ಜನಹಿತಕ್ಕೂ ಉಪಯೋಗವಾಗುತ್ತಿದೆಯೇ? ನಿರಂತರ ಬದಲಾವಣೆಯ ಈ ಕಾಲದಲ್ಲೂ ಅದು ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದು ಹೇಗೆ? ಆರ್ಜೆ ರೋಹಿತ್ ಏನಂತಾರೆ?..
ಮಾಹಿತಿಯನ್ನು ಪ್ಲೇನ್ ಆಗಿ ಪ್ರಸ್ತುತಪಡಿಸದೆ, ಫನ್ ರೀತಿಯಲ್ಲಿ ಶ್ರೋತೃಗಳ ಗಮನಕ್ಕೆ ತರುವ ಕೆಲಸವನ್ನು ನಾನು ಆರ್ಜೆಯಾಗಿ ಮಾಡುತ್ತಿದ್ದೇನೆ. ಸಣ್ಣ ವಿಷಯಗಳೇ ಆಗಿದ್ದರೂ ಅವುಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಿದ ಖುಷಿ ಇದೆ. ಎಲ್ಲವೂ ಸಾಮಾಜಿಕ ಉದ್ದೇಶಕ್ಕಾಗಿ ಮಾಡಿದ್ದು ಎಂದು ಹೇಳಲು ಆಗುವುದಿಲ್ಲ.
ಏನಾದರೂ ವಿಭಿನ್ನವಾಗಿ ಯೋಚಿಸಬೇಕಿತ್ತು. ಆಗ ಹಲವು ಶೋಗಳನ್ನು ಮಾಡಿದ್ದೆವು. ಆ ಪೈಕಿ ‘ದಮ್ ಇದ್ರೆ ದಮ್ ಬಿಡಿ’ ಅಭಿಯಾನ ಶುರುವಾಗಿತ್ತು. ಸಿಗರೇಟ್ ಚಟಕ್ಕೆ ದಾಸರಾದವರಿಗೆ ಆ ಗೀಳಿನಿಂದ ಮುಕ್ತಿ ಕೊಡಿಸುವ ಕೆಲಸವದು. ಮೂರು ದಿನ ವೈದ್ಯರನ್ನು ಜತೆಗಿರಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಿ, ಆ ಚಟದಿಂದ ದೂರ ಮಾಡುವ ಪ್ರಯತ್ನ ಮಾಡಿದೆವು. ಅದೇ ರೀತಿ ಬೆಂಗಳೂರಿನಲ್ಲಿ ನೀರಿನ ಕೊರತೆ ತಲೆದೋರಿದಾಗ ‘ಬಕೆಟ್ ಹಿಡೀರಿ’ ಕಾರ್ಯಕ್ರಮ ಮಾಡಿದ್ದೆವು. ದಿನೇದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆ ಕಾರಣಕ್ಕೆ ನೀರು ಉಳಿಸಿ ಎಂಬುದನ್ನು ಹೀಗೆ ವ್ಯಂಗ್ಯವಾಗಿ ಹೇಳಲಾಗಿತ್ತು. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಹಸಿ ಕಸ ಒಣ ಕಸ ನಿರ್ವಹಣೆ ಬಗ್ಗೆಯೂ ಆಗಾಗ ಒಂದಷ್ಟು ಮಾಹಿತಿ ನೀಡುತ್ತಿರುತ್ತೇವೆ. ಒಟ್ಟಿನಲ್ಲಿ ಮನರಂಜನೆಗಾಗಿ ಅಷ್ಟೇ ರೇಡಿಯೊ ಕೆಲಸ ಮಾಡುತ್ತಿಲ್ಲ. ಸಾಮಾಜಿಕ ಕಳಕಳಿಗಾಗಿಯೂ ತನ್ನನ್ನು ತೊಡಗಿಸಿಕೊಂಡಿದೆ.