ಸೋಮಾರಿ ಮೊಮ್ಮಗ: ಮಕ್ಕಳ ಕಥೆ

Story
Published on

ಒಂದು ಊರಿನಲ್ಲಿ ಒಬ್ಬ ಅಜ್ಜಿ - ಮೊಮ್ಮಗ ಇದ್ದರು. ಯಾವಾಗಲೂ ಊಟ ಮಾಡುವುದು, ಕುಳಿತು ಕೊಳ್ಳುವುದು ಇಷ್ಟೇ ಮೊಮ್ಮಗನ ದಿನಚರಿಯಾಗಿತ್ತು. ಹೀಗೆ ಒಂದು ದಿನ ಅಜ್ಜಿ ‘ನಾನು ದಿನಾಲೂ ಕಟ್ಟಿಗೆ ಮಾರಿ ಬಂದ ಹಣದಿಂದ ನಿನ್ನನ್ನು ಸಾಕುತ್ತಿದ್ದೇನೆ. ನೀನು ದುಡಿಯದೇ ಕಾಲ ಕಳೆದರೆ ನಾಳೆ ನಾನು ಹೋಗಿ, ನನ್ನ ಹಣವೂ ಖಾಲಿಯಾದರೆ ಜೀವನ ಹೇಗೆ ನಡೆಸುತ್ತಿಯಾ?’ ಅಂತ ಹೇಳಿದರೂ ಕೇಳಲಿಲ್ಲ. ಪಕ್ಕದ ಮನೆಯ ತನ್ನ ಗೆಳತಿಯ ಹತ್ತಿರ ಹೇಳಿಸಿದರೂ ಕೇಳಲಿಲ್ಲ. ಕೊನೆಗೆ ದುಡಿಯದೇ ಇದ್ದರೂ ಪರವಾಗಿಲ್ಲ ಊರಿನ ಮುಂದೆ ಕಟ್ಟೆಯ ಮೇಲೆ ಕುಳಿತುಕೊಂಡು ಬಾ ಎಂದು ಹೇಳಿದಳು.

‘ಬರಿ ಊರಿನ ಮುಂದಿನ ಕಟ್ಟೆ ಅಷ್ಟೇ ಅಲ್ಲವಾ ಹೋಗಿ ಬರುವೆ’ ಎಂದು ಹೊರಡುತ್ತಾನೆ. ಅವನು ಕಟ್ಟೆ ಹತ್ತಿರ ಹೋದ ತಕ್ಷಣ ಊರಿನ ಯುವಕರೆಲ್ಲರೂ ಅಣ್ಣ ಬಂದ ಅನ್ನುತ್ತಾರೆ, ಕುಳಿತಾಕ್ಷಣ ಅಣ್ಣ ಕುಳಿತು ಕೊಂಡ ಅನ್ನುವರು, ಕುಳಿತು ಸಾಕಾದ ಮೇಲೆ ಎದ್ದ ತಕ್ಷಣ ಅಣ್ಣ ಎದ್ದ ಅನ್ನುವರು, ಹೊರಟ ತಕ್ಷಣ ಅಣ್ಣ ಹೋದ ಎಂದರು. ಪ್ರತಿ ದಿನ ಹೋದಾಗಲೂ ಅಣ್ಣ ಬಂದ, ಅಣ್ಣ ಕುಳಿತ, ಅಣ್ಣ ಎದ್ದ, ಅಣ್ಣ ಹೊರಟ ಎನ್ನುತ್ತಿರುತ್ತಾರೆ. ಪ್ರತಿದಿನ ಅವನು ಮಲಗಿದಾಗ ನಿದ್ದೆಗಣ್ಣಿನಲ್ಲಿ ಅಣ್ಣ ಬಂದ, ಅಣ್ಣ ಕುಳಿತ, ಅಣ್ಣ ಎದ್ದ, ಅಣ್ಣ ಹೊರಟ ಎಂದು ಕನವರಿಸುತ್ತಿದ್ದನು. ಒಂದು ದಿನ ರಾತ್ರಿ ಒಬ್ಬ ಕಳ್ಳ ಅಜ್ಜಿ ಕಟ್ಟಿಗೆ ಮಾರಿ ಬಂದ ಹಣ, ಚಿನ್ನ-ಒಡವೆ ಯನ್ನು ಕದಿಯಲು ಬಂದನು. ಕಳ್ಳ ಬಂದ ತಕ್ಷಣ ಮೊಮ್ಮಗ ‘ಅಣ್ಣ ಬಂದ’ ಎಂದು ಕನವರಿಸಿದ. ಕಳ್ಳನು ಹೆದರಿ ಪಕ್ಕದ ಕದದ ಸಂದಿನಲ್ಲಿ ಕುಳಿತ. ಆಗ ‘ಅಣ್ಣ ಕುಳಿತ’ ಎಂದನು. ಕಳ್ಳನು ಇವನು ತನ್ನನ್ನು ನೋಡಿದ್ದಾನೆ ಎಂದುಕೊಂಡು ಸುಮ್ಮನೆ ಹೋಗೋಣ ಎಂದು ಎದ್ದನು. ಮೊಮ್ಮಗ ತಕ್ಷಣ ‘ಅಣ್ಣ ಎದ್ದ’ ಎಂದನು.

ಮೊಮ್ಮಗ ನಿಜವಾಗಲೂ ತನ್ನನ್ನು ನೋಡಿದ್ದಾನೆ ಎಂದು ಕಳ್ಳ ಹೆದರಿ ಹೊರಟಾಗ ಮೊಮ್ಮಗ ‘ಅಣ್ಣ ಹೋದ’ ಎಂದು ಕನವರಿಸಿದನು. ಕಳ್ಳ ಯೋಚನೆ ಮಾಡಿ ಬೆಳಿಗ್ಗೆ ಅಜ್ಜಿಯ ಕಾಲು ಹಿಡಿದುಕೊಂಡು ನನ್ನದು ತಪ್ಪಾಯಿತು ಅಜ್ಜಿ, ನನ್ನನ್ನು ಕ್ಷಮಿಸು ಎಂದು ಕೇಳಿಕೊಂಡನು. ಅಜ್ಜಿ ಯಾಕಪ್ಪಾ ಏನಾಯಿತು ಎಂದು ಕೇಳಲು ನಡೆದ ವಿಷಯ ತಿಳಿಸಿದನು. ಆಗ ಮೊಮ್ಮಗನ ಕುರಿತು ‘ನೋಡಪ್ಪ ನೀನು ಬರಿ ಕಟ್ಟೆಯ ಮೇಲೆ ಕುಳಿತದ್ದಕ್ಕೆ ಇಷ್ಟು ಲಾಭವಾಯಿತು. ಇನ್ನು ನೀನು ದುಡಿದರೆ ಎಷ್ಟು ಲಾಭವಾಗುವುದು’ ಎಂದು ತಿಳಿಹೇಳಿದಳು. ಆಗ ಮೊಮ್ಮಗನಿಗೆ ಜ್ಞಾನೋದಯವಾಗಿ ಅಂದಿನಿಂದ ಇಬ್ಬರೂ ದುಡಿದು ಅಜ್ಜಿ ಮೊಮ್ಮಗ ಸಂತೋಷದಿಂದ ಜೀವನ ಸಾಗಿಸಿದರು.

ನೀತಿ: ಸೋಮಾರಿಯಾಗಿ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು,

| ಸಿದ್ಧಾಂತ ಬಣಕಾರ 2 ನೇ ತರಗತಿ, ತರಳಬಾಳು ಸಿ.ಬಿ.ಎಸ್.ಇ ಶಾಲೆ, ಸಿರಿಗೆರೆ, ಚಿತ್ರದುರ್ಗ ಜಿಲ್ಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net