ಪ್ರತಿಯೊಬ್ಬರ ಜೀವನದಲ್ಲೂ ಒಂದು ಕಥೆ: ಮಕ್ಕಳ ಕಥೆ

Putani Lead 2
Published on

ಒಮ್ಮೆ ತಂದೆ-ಮಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನ ಕಿಟಕಿಯಿಂದ ಹೊರಗೆ ನೋಡಿದ 24 ವರ್ಷದ ಮಗ ಒಮ್ಮೆಲೇ ಕೂಗಿದ- ‘ಅಪ್ಪಾ, ಮರಗಳು ಹಿಂದೆ ಹೋಗುತ್ತಿವೆ ನೋಡಿ!’ ಎಂದು. ತಂದೆ ಮುಗುಳ್ನಕ್ಕ. ಅಲ್ಲಿಯೇ ಹತ್ತಿರದಲ್ಲಿ ಕುಳಿತಿದ್ದ ಯುವ ದಂಪತಿ, 24 ವರ್ಷದ ಆ ಯುವಕನ ಬಾಲಿಶ ನಡವಳಿಕೆಯನ್ನು ಕರುಣೆಯಿಂದ ನೋಡಿದರು. ಇದ್ದಕ್ಕಿದ್ದಂತೆ ಆ ಯುವಕ ಮತ್ತೆ ಉದ್ಗರಿಸಿದನು. ‘ಅಪ್ಪಾ, ಮೋಡಗಳು ನಮ್ಮೊಂದಿಗೆ ಓಡುತ್ತಿವೆ ನೋಡಿ!’ ಎಂದು. ದಂಪತಿಗೆ ಯುವಕನ ಈ ನಡವಳಿಕೆ ನೋಡಲು ಸಾಧ್ಯವಾಗಲಿಲ್ಲ. ಅವರು ಯುವಕನ ತಂದೆಗೆ ಹೇಳಿದರು, ‘ನೀವು ನಿಮ್ಮ ಮಗನನ್ನು ಒಳ್ಳೆಯ ವೈದ್ಯರ ಬಳಿಗೆ ಏಕೆ ಕರೆದೊಯ್ಯಬಾರದು?’ ತಂದೆ ಮುಗುಳ್ನಕ್ಕು ಹೇಳಿದ... ‘ನಾನು ಅದನ್ನೇ ಮಾಡಿದ್ದೇನೆ ಮತ್ತು ನಾವು ಇವಾಗ ಆಸ್ಪತ್ರೆಯಿಂದ ತಿರುಗಿ ಬರುತ್ತಿದ್ದೇವೆ. ನನ್ನ ಮಗ ಹುಟ್ಟಿನಿಂದಲೇ ಕುರುಡನಾಗಿದ್ದನು. ಅವನಿಗೆ ಇಂದೇ ಕಣ್ಣುಗಳು ಬಂದಿವೆ’ ಎಂದು. ಆ ದಂಪತಿಗೆ ಕಣ್ಣು ತುಂಬಿ ಬಂದಿತು.. ಮಾತು ಮರೆತುಹೋದವು..

ನೀತಿ: ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಒಂದು ಕಥೆ ಇರುತ್ತದೆ. ಯಾರದೇ ಬಗ್ಗೆ ನಾವು ಸರಿಯಾಗಿ ತಿಳಿದುಕೊಳ್ಳುವ ಮೊದಲು ಅವರ ಬಗ್ಗೆ ನಿರ್ಣಯಿಸಬಾರದು. ಒಮ್ಮೊಮ್ಮೆ ಸತ್ಯ ನಮಗೆ ತುಂಬಾ ಆಶ್ಚರ್ಯ ತರಬಹುದು..

| ವ್ಯಾಸರಾಮ ಪ್ರ ಜೋಶಿ 7ನೇ ತರಗತಿ, ಶ್ರೀ ಜಯತೀರ್ಥ ವಿದ್ಯಾಪೀಠ, ಉತ್ತರಾದಿಮಠ, ಬೆಂಗಳೂರು

ಆನೆ ಮಿತ್ರನಾದಾಗ..!

ಅದು ಒಂದು ಪುಟ್ಟ ಹಳ್ಳಿ. ಹಳ್ಳಿಯ ಪಕ್ಕದಲ್ಲಿ ಒಂದು ದಟ್ಟ ಕಾಡು. ಅಲ್ಲಿ ಸುಂದರವಾದ ಪರಿಸರವಿತ್ತು. ಹೂ, ಹಣ್ಣಿನ ಗಿಡ, ಮರಗಳು ಹಚ್ಚ ಹಸಿರಾಗಿದ್ದವು. ಆ ದೃಶ್ಯ ಕಣ್ಣಿಗೆ ಆಕರ್ಷಕವಾಗಿ ಕಾಣುತ್ತಿತು. ಅಲ್ಲಿ ತಿಮ್ಮ ಎಂಬ ಹುಡುಗನಿದ್ದ. ಅವನು ಪ್ರಾಣಿ-ಪಕ್ಷಿಗಳನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಹಳ್ಳಿಯ ಪಕ್ಕದ ಕಾಡಿನಲ್ಲಿ ಸಿಗುವ ಹಣ್ಣು, ಗೆಡ್ಡೆ-ಗೆಣಸು ತಂದು ತಿನ್ನುತ್ತಿದ್ದನು. ಹೀಗೆ ಒಂದು ದಿನ ತಿಮ್ಮ ಕಾಡಿಗೆ ಹೋದಾಗ ಒಂದು ಕಾಡಾನೆ ಅವನನ್ನು ಹಿಂಬಾಲಿಸಿಕೊಂಡು ಬಂತು. ಅಗ ತಿಮ್ಮ ಓಡುತ್ತಾ ತನ್ನ ಗುಡಿಸಿಲಿನ ಬಳಿ ಬಂದ. ಆನೆ ಕೂಡ ಅವನನ್ನು ಹಿಂಬಾಲಿಸಿಕೊಂಡು ಗುಡಿಸಲು ಬಳಿ ಬಂದಿತು. ಇಬ್ಬರಿಗೂ ಓಡಿ ಓಡಿ ಸುಸ್ತಾಗಿತ್ತು. ತಿಮ್ಮ ಆನೆಯ ದಣಿವನ್ನು ನೋಡಿ ಅದಕ್ಕೆ ನೀರು ಮತ್ತು ಹಣ್ಣನ್ನು ನೀಡಿದನು. ಆಗ ಆನೆಗೂ ತಿಮ್ಮನಿಗೂ ಒಂದು ಒಳ್ಳೆಯ ಬಾಂಧವ್ಯ ಬೆಳೆಯಿತು. ಕ್ರಮೇಣ ಇಬ್ಬರೂ ಸ್ನೇಹಿತರಾದರು.

ನೀತಿ: ನಮ್ಮ ಗುಣವನ್ನು ನೋಡಿ ಶತ್ರುಗಳು ಸಹ ಮಿತ್ರರಾಗುತ್ತಾರೆ.

| ಬಿ.ಎಸ್.ಗಣೇಶ್ ಪ್ರಸಾದ್ ಬೆಣ್ಣೆ, ಟಿ. ಎನ್ ಕೋಟಿ, 10ನೇ ತರಗತಿ, ವೇದಾವತಿ ಆಂಗ್ಲ ಮಾದ್ಯಮ ಶಾಲೆ, ಪರಶುರಾಮಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net