

ವಿದ್ಯಾಪುರದಲ್ಲಿ ಒಂದು ಶಾಲೆಯಿತ್ತು. ಆ ಶಾಲೆಯ 6ನೇ ತರಗತಿಯಲ್ಲಿ ಜ್ಞಾನ ಎಂಬ ಹುಡುಗಿಯಿದ್ದಳು. ಅವಳು ಓದಿನಲ್ಲಿ ಮುಂದಿದ್ದು, ತರಗತಿಗೆ ಪ್ರಥಮ ಸ್ಥಾನ ಪಡೆಯುತ್ತಿದ್ದಳು. ಅದೇ ತರಗತಿಯಲ್ಲಿ ದಿಶಾ ಎಂಬ ಹುಡುಗಿಯಿದ್ದಳು. ಅವಳು ಚೆನ್ನಾಗಿ ಓದುತ್ತಿರಲಿಲ್ಲ. ಅವಳಿಗೆ ಬೇರೆಯವರಿಗೆ ತೊಂದರೆ ಕೊಡುವುದರಲ್ಲಿ ಸಂತೋಷ ಸಿಗುತ್ತಿತ್ತು. ಜ್ಞಾನ ಹಾಗೂ ದಿಶಾ ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿತ್ತು. ಆ ವರ್ಷ ಶಾಲೆಯಿಂದ ಕೊಡುವ ಪುಸ್ತಕ ಎಲ್ಲರಿಗೂ ಸಿಗಲಿಲ್ಲ. ಆದರೆ ದಿಶಾಳಿಗೆ ಎಲ್ಲ ಪುಸ್ತಕಗಳು ದೊರೆತವು.
ಜ್ಞಾನಳಿಗೆ ಪುಸ್ತಕಗಳು ದೊರೆಯಲಿಲ್ಲ. ದಿಶಾಳಿಗೆ ತುಂಬಾ ಸಂತೋಷವಾಯಿತು. ಪ್ರತಿದಿನ ದಿಶಾ ಜ್ಞಾನಳ ಮನೆಯ ಬಳಿ ಬಂದು ಗಟ್ಟಿಯಾಗಿ ಪುಸ್ತಕವನ್ನು ಓದುತ್ತಿದ್ದಳು. ಜ್ಞಾನಳಿಗೆ ಇದರಿಂದ ಕಿರಿಕಿರಿ ಉಂಟಾಯಿತು. ಅವಳು ಈ ವಿಷಯವನ್ನು ಶಿಕ್ಷಕರ ಬಳಿ ಹೇಳಿಕೊಂಡಳು. ಅವರು ಒಂದು ಉಪಾಯವನ್ನು ಹೇಳಿದರು. ಹೀಗೆ ದಿಶಾ ಪುಸ್ತಕವನ್ನು ಓದುವಾಗ ಜ್ಞಾನ ಅದನ್ನು ಗಮನವಿಟ್ಟು ಕೇಳುತ್ತಿದ್ದಳು. ಪರೀಕ್ಷೆಯ ಸಮಯದಲ್ಲಿ ಜ್ಞಾನಳಿಗೆ ಇದು ಸಹಕಾರಿಯಾಯಿತು. ಆದರೆ ದಿಶಾ ಪುಸ್ತಕವನ್ನು ಗಮನವಿಟ್ಟು ಓದಿರಲಿಲ್ಲ. ಅವಳು ಜ್ಞಾನಳಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದಷ್ಟೇ ಗಟ್ಟಿಯಾಗಿ ಓದುತ್ತಿದ್ದಳು. ಸರಿಯಾಗಿ ಓದದ್ದರಿಂದ ಅವಳು ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು.
| ಸಂಕೇತಾ ಎಚ್.ಎಸ್ . 9ನೇ ತರಗತಿ, ಉಡುಪಿ