ಪಾತರಗಿತ್ತಿಯರೆಂಬ ಬಿನ್ನಾಣಗಿತ್ತಿಯರು

Putani
Published on

| ಅನೀಶ್ ಬಿ. ಕೊಪ್ಪ

ಪಾತರಗಿತ್ತಿ ಪಕ್ಕ... ನೋಡಿದೇನಾ ಅಕ್ಕಾ... ಎಂದು ಪದ್ಯ ಕಟ್ಟಲು ಬೇಂದ್ರೆಯವರಂತಹ ಕವಿಗಳಿಗೂ ಸ್ಪೂರ್ತಿ ನೀಡಿದ ಪಾತರಗಿತ್ತಿಗಳ ಲೋಕವೇ ಬಲು ಸೊಗಸು. ನಮ್ಮ ಸುತ್ತಮುತ್ತಲೂ ನಮ್ಮದೇ ಬಣ್ಣದ ಲೋಕದಂತೆ ಹಾರಾಡುತ್ತ ಹೂವಿಂದ ಹೂವಿಗೆ ಮೆಲುವಾಗಿ ಏರಿಳಿಯುತ್ತ ಇರುವ ಚಿಟ್ಟೆಗಳ ಚಿತ್ತಾಕರ್ಷಕವಾದ ವರ್ಣಸಂಯೋಜನೆಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ನಯನ ಮನೋಹರ ಚಿಟ್ಟೆಗಳು ಪ್ರಾಕೃತಿಕ ಸಮತೋಲನಕ್ಕೆ ಬಹೂಪಕಾರಿಯಾಗಿವೆ. ಒಂದು ವೇಳೆ ಈ ಜಗದಲ್ಲಿ ಚಿಟ್ಟೆ, ಪತಂಗ ಹಾಗೂ ಜೇನುನೊಣಗಳು ಇಲ್ಲವೆಂದಾಗಿದ್ದಲ್ಲಿ ಬಹುಶಃ ನಮ್ಮ ಬದುಕೇ ನಾಶವಾಗುತ್ತಿತ್ತೇನೋ! ಏಕೆಂದರೆ ಬಹಳಷ್ಟು ಪರಾಗಸ್ಪರ್ಶ ಕ್ರಿಯೆಗಳು ನಡೆಯುವುದು ಇವುಗಳ ಮುಖಾಂತರವೇ. ಹೆಚ್ಚಿನ ಹೂವುಗಳಲ್ಲಿ ಪಾತರಗಿತ್ತಿಗಳ ಮೂಲಕವೇ ಪರಾಗಸ್ಪರ್ಶಗಳಾಗುತ್ತವೆ. ಹೂವಿನ ಮಕರಂದವನ್ನು ಹೀರುವ ಮೂಲಕ ಪರಾಗಸ್ಪರ್ಶವನ್ನು ಸಾಧಿಸುವ ಚಿಟ್ಟೆಗಳು ಪ್ರಮುಖ ಪರಾಗಸ್ಪರ್ಶಿಗಳೂ ಹೌದು. ಪರಾಗಸ್ಪರ್ಶವು ಗಿಡದಲ್ಲಿ ಕಾಯಿ, ಹಣ್ಣುಗಳಾಗಲು ಸಹಕಾರಿ.

ರಾಷ್ಟ್ರೀಯ ಚಿಟ್ಟೆ: ಚಿಟ್ಟೆಗಳು ಸುಮಾರು ಒಂದು ಸೆಂ. ಮೀ ನಿಂದ 25 ಸೆಂ.ಮೀ ಉದ್ದ ಬೆಳೆಯುತ್ತವೆ. ಜಗತ್ತಿನ ಅತ್ಯಂತ ದೊಡ್ದ ಚಿಟ್ಟೆಯಾದ ಕ್ವೀನ್ ಅಲೆಕ್ಸಾಂಡ್ರಾ ಬರ್ಡ್ ವಿಂಗ್ (Queen Alexandra Birdwing) 25 ರಿಂದ 28 ಸೆಂ.ಮೀ ತನಕ ಬೆಳೆಯುತ್ತದೆ. ಇವುಗಳು ಹೆಚ್ಚಾಗಿ ವೆಸ್ಟ್ ಇಂಡೀಸ್​ನ ದ್ವೀಪಗಳಾದ ಪಾಪುವಾನ್ಯೂಗಿನಿ ಹಾಗೂ ಸೋಲೋಮನ್ ಕಾಡುಗಳಲ್ಲಿ ಕಂಡು ಬರುತ್ತವೆ. ಅಂತೆಯೇ ವಿಶ್ವದ ಅತಿ ಚಿಕ್ಕ ಚಿಟ್ಟೆಯಾದ ಆಫ್ರಿಕನ್ ಗ್ರಾಸ್ ಜ್ಯುವೆಲ್​ಗಳು ಹೆಚ್ಚಾಗಿ ಆಫ್ರಿಕಾ, ಅರೇಬಿಯಾ ಮತ್ತು ದಕ್ಷಿಣ ಯುರೋಪ್​ನ ಭಾಗಗಳಲ್ಲಿ ಕಂಡುಬರುತ್ತವೆ. ಕನ್ನಡ ಬಾವುಟದ ಬಣ್ಣವಾದ ಹಳದಿ ಮತ್ತು ಕೆಂಪು ಬಣ್ಣಗಳಿಂದ ಕೂಡಿರುವ ಸದರನ್ ಬರ್ಡ್​ವಿಂಗ್ ಅಥವಾ ಸಹ್ಯಾದ್ರಿ ಬರ್ಡ್​ವಿಂಗ್ ಚಿಟ್ಟೆಯು ನಮ್ಮ ದೇಶದ ಅತಿ ದೊಡ್ಡ ಚಿಟ್ಟೆಯಾಗಿದೆ. ಆರೆಂಜ್ ಓಕ್ಲೀಫ್ ಚಿಟ್ಟೆಯು ನಮ್ಮ ರಾಷ್ಟ್ರೀಯ ಚಿಟ್ಟೆಯಾಗಿದೆ.

ಮೊಟ್ಟೆಯಿಂದ ಚಿಟ್ಟೆಯಾಗುವ ಬಗೆ: ಚಿಟ್ಟೆಗಳ ಜೀವನ ಚಕ್ರವು ಒಟ್ಟು 4 ಹಂತಗಳಲ್ಲಿ ಸಾಗುತ್ತವೆ. ಅವು ಮೊಟ್ಟೆ, ಲಾರ್ವಾ (ಅಥವಾ ಕ್ಯಾಟರ್ಪಿಲ್ಲರ್/ಕಂಬಳಿಹುಳು), ಪ್ಯೂಪಾ ಮತ್ತು ವಯಸ್ಕ. ಮೊಟ್ಟೆಗಳು ಸಾಮಾನ್ಯವಾಗಿ ಎಲೆಗಳ ಕೆಳಭಾಗದಲ್ಲಿ ಅಥವಾ ಕೆಲವು ಸಸ್ಯದ ಕಾಂಡಗಳ ಮೇಲೆ ಬಹಳ ಚಿಕ್ಕದಾಗಿ ಕಾಣಿಸಿಕೊಳ್ಳುತ್ತವೆ. ಒಮ್ಮೆ ಮೊಟ್ಟೆಯೊಳಗೆ ಅಭಿವೃದ್ಧಿ ಹೊಂದಿ, ಮರಿಹುಳಗಳು ಮೊಟ್ಟೆಯಿಂದ ಹೊರಬಂದು, ಲಾರ್ವಾ ಹಂತಕ್ಕೆ ಕಾಲಿಡುತ್ತವೆ. ಇವುಗಳನ್ನೇ ನಾವು ಕಂಬಳಿಹುಳಗಳ ರೂಪದಲ್ಲಿ ಕಾಣುತ್ತೇವೆ. ಈ ಹಂತದಲ್ಲಿ ಇದು ಒಂದು ರೀತಿ ಹೊಟ್ಟೆಬಾಕನಂತೆ ತನ್ನದೇ ಚಿಪ್ಪು ಹಾಗೂ ಸಸ್ಯಗಳ ಎಲೆಗಳನ್ನು ತಿಂದು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುತ್ತದೆ. ನಂತರದ ಪ್ಯೂಪಾ ಹಂತದಲ್ಲಿ ಒಂದು ರೀತಿಯ ನಾಟಕೀಯ ರೂಪಾಂತರಗೊಳ್ಳುತ್ತದೆ. ಇದು ವಿಶ್ರಾಂತಿಯ ಹಂತವಾಗಿದ್ದು, ಈ ಸಮಯದಲ್ಲಿ ಆಹಾರವನ್ನು ಪಡೆಯದೆಯೇ, ಚಲಿಸಲೂ ಸಾಧ್ಯವಿಲ್ಲದೆಯೇ ವಿಶ್ರಾಂತ ಸ್ಥಿತಿಯಲ್ಲಿರುತ್ತವೆ. ಕೊನೆಯ ಹಂತವಾದ ವಯಸ್ಕ ಹಂತದಲ್ಲಿ ಊದಿಕೊಂಡ ಹೊಟ್ಟೆ ಮತ್ತು ಸುಕ್ಕುಗಟ್ಟಿದ ರೆಕ್ಕೆಗಳೊಂದಿಗೆ ಪ್ಯೂಪಾ ಹೊರಪೊರೆಯಿಂದ ಹೊರಬರುತ್ತದೆ. ಅದರ ವಯಸ್ಕ ಜೀವನದ ಮೊದಲ ಕೆಲವು ಗಂಟೆಗಳ ಕಾಲ ಚಿಟ್ಟೆಯಾಗಿ ಹೊರಹೊಮ್ಮಲು ಹಲವು ನೈಸರ್ಗಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ದಾಟಿ, ರೆಕ್ಕೆಗಳನ್ನು ಸಂಪೂರ್ಣವಾಗಿ ಒಣಗಿಸಿ, ವಿಸ್ತರಿಸಿದ ನಂತರ ವಯಸ್ಕ ಚಿಟ್ಟೆಯಾಗಿ ರೂಪುಗೊಳ್ಳುತ್ತದೆ.

ವಿವಿಧ ಬಗೆಯ ಚಿಟ್ಟೆ: 17 ರಿಂದ 20 ಸಾವಿರ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಿವಿಧ ಪ್ರಭೇದ ಮತ್ತು ವಿವಿಧ ವರ್ಣಮಯ ಚಿಟ್ಟೆಗಳು ಈ ಜಗತ್ತಿನಲ್ಲಿವೆ. ಭಾರತದಲ್ಲಿ ಈವರೆಗೂ ವಿವಿಧ ಬಗೆಯ 1502 ಚಿಟ್ಟೆಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಕರಾವಳಿ, ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಹವಾಮಾನಕ್ಕೆ ತಕ್ಕಂತೆ ಜೀವಿಸುವ ಸುಮಾರು 318 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ. ಚಿಟ್ಟೆಗಳ ಜೀವತಾವಧಿ ಅದರ ದೇಹ ರಚನೆಯ ಮೇಲೆ ಅವಲಂಬಿತವಾಗಿದೆ. ಕೆಲವು ಚಿಟ್ಟೆಗಳನ್ನು ಗಾತ್ರದ ಮೇಲೆ ಅದರ ಆಯಸ್ಸು ನಿರ್ಧರಿಸಬಹುದಾಗಿದೆ. ಸಾಮಾನ್ಯವಾಗಿ ಚಿಟ್ಟೆಗಳ ಜೀವಿತಾವಧಿ 2 ಮತ್ತು 4 ವಾರಗಳು ಇರುತ್ತದೆ. ಆದರೂ ಕೆಲವೊಂದು ಚಿಟ್ಟೆಗಳಿಗೆ 8 ತಿಂಗಳುಗಳವರೆಗೆ ಬದುಕುವ ಶಕ್ತಿ ಇದೆ.

ಚಿಟ್ಟೆಗಳಿಗೂ ಇವೆ ಪಾರ್ಕ್!: ಚಿಟ್ಟೆಗಳನ್ನು ರಕ್ಷಿಸಲು ಮತ್ತು ಅವುಗಳ ಸಂತಾನಾಭಿವೃದ್ಧಿಗಾಗಿ ಸರ್ಕಾರ ಮತ್ತು ಅನೇಕ ಸಂಶೋಧನಾ ಸಂಸ್ಥೆಗಳು ಚಿಟ್ಟೆಗಳಿಗಾಗಿಯೇ ಪಾರ್ಕ್​ಗಳನ್ನು ನಿರ್ವಿುಸಿವೆ. ಭಾರತದ ಪ್ರಮುಖ ಚಿಟ್ಟೆ ಪಾರ್ಕ್​ಗಳೆಂದರೆ ? ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು (ದೇಶದ ಮೊದಲ ಚಿಟ್ಟೆ ಉದ್ಯಾನ). ? ಬಟಫ್ಲೈ ಗಾರ್ಡನ್, ಶಿಮ್ಲಾ. ? ಒವಲೇಕರ್ ವಾಡಿ (Ovalekar Wadi) ಬಟಫ್ಲೈ ಗಾರ್ಡನ್, ಥಾಣೆ. ? ಬಟಫ್ಲೈ ರಿಸರ್ವ್ ಪಾರ್ಕ್, ಸಿಕ್ಕಿಂ. ? ಬಟಫ್ಲೈ ಪಾರ್ಕ್, ಚಂಡೀಗಢ.

ಚಿಟ್ಟೆ ಅರಣ್ಯ: ಕರ್ನಾಟಕದ ಕೊಡಗು, ಮಲೆನಾಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರೆಗೂ ವ್ಯಾಪಿಸಿರುವ ಹಾಸನ ಜಿಲ್ಲೆಯ ಸಕಲೇಶಪುರದ ಬಿಸ್ಲೇ ಘಾಟ್​ನಲ್ಲಿ ಹಲವಾರು ರೀತಿಯ ಚಿಟ್ಟೆಗಳು ಕಾಣಸಿಗುತ್ತವೆ. ಸಾಮಾನ್ಯವಾಗಿ ಇಲ್ಲಿ ಲೈನ್ ಬ್ಲೂ, ಕಾಮನ್ ಕ್ಯಾಸ್ಟರ್, ಕಾಮನ್ ಗ್ರಾಸೆಲ್ಲೋ, ಕಾಮನ್ ಜೇ ಹೀಗೆ ಅನೇಕ ಪ್ರಕಾರದ ಚಿಟ್ಟೆಗಳು ಕಾಣಸಿಗುತ್ತವೆ. ಈ ಕಾರಣಕ್ಕಾಗಿ ಇದನ್ನು ಕರ್ನಾಟಕದ ಚಿಟ್ಟೆ ಅರಣ್ಯ ಎಂತೆಂದೂ ಕರೆಯಲಾಗುತ್ತದೆ.

ಚಿಟ್ಟೆ ಹಬ್ಬ: ಬೆಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ಕರ್ನಾಟಕದ ಅರಣ್ಯ ಇಲಾಖೆಯು ಚಿಟ್ಟೆಗಳ ಹಬ್ಬವನ್ನೇ ಆಯೋಜಿಸಿತ್ತು! ಬಟಫ್ಲೈ ಛಾಯಾಚಿತ್ರ ಪ್ರದರ್ಶನ, ಫೋಟೋ ಸ್ಪರ್ಧೆ, ಕ್ವಿಜ್ ಇತ್ಯಾದಿ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು. ಮಕ್ಕಳಿಗಾಗಿ ಈ ರೀತಿಯ ಚಿಟ್ಟೆಗಳ ಹಬ್ಬವನ್ನು ಆಯೋಜಿಸುವುದರಿಂದ ಮಕ್ಕಳಿಗೆ ಚಿಟ್ಟೆಗಳ ವಿಸ್ಮಯ ಲೋಕದ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ.

ಕರ್ನಾಟಕದ ಚೆಂದದ ಚಿಟ್ಟೆ ಪಾರ್ಕ್: ಕರ್ನಾಟಕದ ಅರಣ್ಯ ಇಲಾಖೆಯು ಚಿಟ್ಟೆಗಳಿಗಾಗಿಯೇ ಪಾರ್ಕ್​ಗಳನ್ನು ನಿರ್ವಿುಸಿದೆ. ಬನ್ನೇರುಘಟ್ಟದ ಚಿಟ್ಟೆ ಉದ್ಯಾನವು ದೇಶದ ಮೊದಲ ಚಿಟ್ಟೆ ಉದ್ಯಾನವಾಗಿದ್ದು, 2006ರ ನವೆಂಬರ್ 25 ರಂದು ಸ್ಥಾಪನೆಗೊಂಡಿತು. ಈ ಪಾರ್ಕ್ ಚಿಟ್ಟೆಗಳ ಸಂರಕ್ಷಣೆಯ ಮೂಲ ಉದ್ದೇಶದೊಂದಿಗೆ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳ ಕೇಂದ್ರವಾಗಿದೆ. ಇದೊಂದೇಯಲ್ಲದೇ ಮೈಸೂರಿನ ಕಾರಂಜಿಕೆರೆ, ಕಾರವಾರ ತಾಲೂಕಿನ ಗೋಟೆಗಾಳಿ, ಜೊಯಿಡಾದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಚಿಟ್ಟೆ ಪಾರ್ಕ್​ಗಳು ಇವೆ. ಶಿವಮೊಗ್ಗದ ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಚಿಟ್ಟೆ ಪಾರ್ಕ್​ನ್ನು ಸಿದ್ಧಪಡಿಸಲಾಗುತ್ತಿದೆ. ಮಂಗಳೂರು ಹೊರವಲಯದ ಬೆಳವಾಯಿಯಲ್ಲಿ ನಿರ್ವಣಗೊಂಡಿರುವ ಸಮ್ಮಿಲನ್ ಶೆಟ್ಟೀಸ್ ಚಿಟ್ಟೆ ಪಾರ್ಕ್ ಖಾಸಗಿಯಾಗಿ ನಿರ್ವಣಗೊಂಡ ರಾಜ್ಯದ ಪ್ರಥಮ ಚಿಟ್ಟೆ ಪಾರ್ಕ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net