ಮಳೆಗಾಲ ಬಂದಾಗ, ಆನಂದ ತಂದಾಗ...

Putani F
Published on
ಪಿರಿ ಪಿರಿ ಮಳೆ ಹೊರಗೆ ಕಾಲಿಡಲಿಕ್ಕೇ ಬೇಜಾರು, ಇನ್ನು ಬಟ್ಟೆಯಲ್ಲಾ ಒದ್ದೆ ಮಾಡಿಕೊಂಡು ಶಾಲೆಗೆ ಹೋಗಿ ಚಳಿಯಲ್ಲಿ ಕೂರಬೇಕಾ... ಇನ್ನೊಂದು ಸ್ವಲ್ಪ ಜೋರಾಗಿ ಮಳೆ ಬಂದರೆ ಅಮ್ಮನ ಬೆಚ್ಚಗಿನ ತೋಳಿನಲ್ಲೇ ಇರಬಹುದಲ್ವಾ ಅನ್ನುವ ಮಕ್ಕಳ ನಡುವೆ... ಹೇ... ಮಳೆ ಬರ್ತಾ ಇದೆ... ಬನ್ರೋ ಆಟ ಆಡೋಣ... ಹಳ್ಳ, ಕೊಳ್ಳದಲ್ಲಿ ನೀರು ತುಂಬಿದೆ... ಆಟ ಆಡಲಿಕ್ಕೆ ತುಂಬಾ ಮಜಾ ಇರುತ್ತೆ ಅನ್ನುವ ಮಕ್ಕಳೂ ಇದ್ದಾರೆ... ಇನ್ನು ಗ್ರಾಮೀಣ ಭಾಗದ ಮಕ್ಕಳು ಮಣ್ಣಿನ ರಸ್ತೆಯಲ್ಲಿ ಜಾರುತ್ತಾ, ಬೀಳುತ್ತಾ, ದಾರಿಯಲ್ಲಿ ಸಿಗುವ ಹೂವು, ಹಣ್ಣು-ಹಂಪಲುಗಳನ್ನು ಮೆಲ್ಲುತ್ತಾ... ಶಾಲೆಗೆ ಸಾಗುವ ಮಜವೇ ಬೇರೆ. ‘ಮಕ್ಕಳೇ, ಮಳೆಗಾಲದ ಅನುಭವ ಹಂಚಿಕೊಳ್ಳಿ’ ಎಂಬ ವಿಜಯವಾಣಿ ಕರೆಗೆ ಮಕ್ಕಳಿಂದ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಈ ವಾರ ಅದರಲ್ಲಿ ಆಯ್ದ ಕೆಲ ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಮುಂದಿನ ವಾರ ಇನ್ನಷ್ಟು ಬರಹಗಳು ಪ್ರಕಟವಾಗಲಿವೆ.

ಹಳ್ಳದಲ್ಲೇ ಉಳಿದ ಮನಸ್ಸು

ಹೋದ ತಿಂಗಳ ಒಂದು ರಾತ್ರಿ ಕೂಡ್ಲಿಗಿ ಹತ್ತಿರದ ಕಕ್ಕುಪ್ಪಿ ಕಾಡಿನಲ್ಲಿ ಎರಡು ತಾಸು ಬಿಟ್ಟೂ ಬಿಡದೇ ಜೋರು ಮಳೆ ಬಂದಿದ್ದಕ್ಕೆ ಅಲ್ಲಿನ ಹಳ್ಳ ತುಂಬಿ ಹರಿಯಿತು. ಇದನ್ನು ಅಪ್ಪ ಹೇಳಿದಾಗ ನಾನು ಮತ್ತು ತಮ್ಮ ಸ್ವರ್ಣಾಕ್ಷ ಸೇರಿ ಅಲ್ಲಿಗೆ ಕರೆದೊಯ್ಯುವಂತೆ ಕೇಳಿದಾಗ ಅಪ್ಪ ಹೂಂ ಅಂದರು. ಬೆಳಿಗ್ಗೆಯೇ ಹಳ್ಳದತ್ತಿರ ಇದ್ದೆವು. ಹಳ್ಳ ತುಂಬಿ ರಸ್ತೆ ಮೇಲೆಲ್ಲಾ ಹರಿಯುತ್ತಿದ್ದನ್ನು ನೋಡಿ ಕುಣಿದು ಕುಪ್ಪಳಿಸಿದೆವು. ಮೊದಲಿಗೆ ನೀರಿಗೆ ಇಳಿಯಲು ಧೈರ್ಯ ಬರಲಿಲ್ಲ. ದಂಡೆಯಲ್ಲೇ ಆಡಿದೆವು. ಅಪ್ಪನ ಹೆಲ್ಪ್ ತಗೊಂಡು ಹೆದರುತ್ತಲೇ ಹಳ್ಳದ ಮಧ್ಯಕ್ಕೆ ಹೋದೆವು. ನೀರಿನ ರಭಸಕ್ಕೆ ಆಯತಪ್ಪಿ ಭಯ ಆಗುತ್ತಿತ್ತು. ಅಪ್ಪ ನಮ್ಮನ್ನು ಹಿಡಿದು, ಧೈರ್ಯ ಹೇಳುತ್ತಾ ನೀರಿನಲ್ಲಿ ಆಡಿಸಿದರು. ನೀರು ಡಾನ್ಸ್ ಮಾಡುತ್ತಾ, ಸೇತುವೆಯಿಂದ ಕೆಳಗೆ ದಬ್ ದಬ್ ಅಂತಾ ಬಿದ್ದು ಉಕ್ಕಿ ಹರಿಯುವುದನ್ನು ನೋಡಿ ಆದ ಖುಷಿ ಅಷ್ಟಿಷ್ಟಲ್ಲ. ಈ ಮಧ್ಯೆ ನಮ್ಮಲ್ಲಿದ್ದ ಭಯ ಮಾಯವಾಗಿತ್ತು! ನೀರಿಗೆ ಬೊಗಸೆ, ಮುಖ ಕೊಟ್ಟು ಆನಂದಿಸಿದೆವು. ಬಟ್ಟೆಯಲ್ಲಾ ಒದ್ದೆ ಆದವು. ತಣ್ಣನೆ ಗಾಳಿ ಬೀಸಿ, ಚಳಿ ಆಗಿ, ಮೈ ನಡುಕವೂ ಬಂತು. ಆದರೂ ಹಳ್ಳ ಬಿಟ್ಟು ಮೇಲೆ ಬರಲಿಲ್ಲ. ಶಾಲೆಗೆ ಹೊತ್ತಾಯ್ತು ಅಂತಾ ಅಪ್ಪ ಗದರಿ ಕರೆದರು. ಅಂದು ಶಾಲೆಯಲ್ಲಿದ್ದರೂ ಮನಸ್ಸು ಹಳ್ಳದ ಕಡೆ ಹರಿದಿತ್ತು.

| ಸ್ವಸ್ತಿ ಎಸ್.ಎಂ 3ನೇ ತರಗತಿ, ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆ, ಕೂಡ್ಲಿಗಿ, ವಿಜಯನಗರ ಜಿಲ್ಲೆ

ಢಂ.. ಢಮಾರ್..

ನಾನೂ ಮೊದಲು ಹೆದರಿದ್ದೆ. ಆಮೇಲೆ ತಿಳಿಯಿತು ಇದು ಮಳೆರಾಯನ ಆಗಮನದ ಸೂಚನೆ ಎಂದು. ನನ್ನೂರು ಶಿರಸಿ, ಹಸಿರಿನ ಒಡಲಿನ ಸಿರಿ, ಮಳೆ ಸ್ವಲ್ಪ ಹೆಚ್ಚು, ಮಳೆರಾಯನನ್ನು ನಾನೂ ಸಂಭ್ರಮದಿಂದ ಎದುರು ನೋಡುತ್ತಿದ್ದೆ. ಮಳೆಯಲ್ಲಿ ಆಟ ಆಡಿ ಹರಿದು ಬರುವ ನೀರಿನ ಓಟಕ್ಕೆ ಕಟ್ಟೆಯ ಕಟ್ಟಿದೆ. ಎಷ್ಟು ಕಟ್ಟಿದರೂ ಕೊಚ್ಚಿಕೊಂಡು ಹೋಗುತ್ತಿತ್ತು. ಆಗ ನನಗೆ ನೆನಪಾಗಿದ್ದು ಕನ್ನಂಬಾಡಿಯ ಅದ್ಭುತ. ಮಳೆಗಾಲದ ತಯಾರಿ ಎಂದು ಅಪ್ಪನ ಜತೆ ಪೇಟೆಗೆ ಹೋಗಿ ತಂದ ಹೊಸ ಬಣ್ಣದ ಛತ್ರಿ ಹಿಡಿದು ಕುಣಿದದ್ದೆ ಕುಣಿದದ್ದು. ಶಾಲೆಗೆ ಹೋಗಲು ಅಮ್ಮನ ಹತ್ತಿರ ಹೇಳಿ ತರಿಸಿಕೊಂಡ ರೇನ್​ಕೋಟ್ ಬೇರೆ. ಮೊನ್ನೆಯ ಮಳೆಯಲ್ಲಿ ಊರಿಗೆ ಹೋದಾಗ ರೈತರ ಕೃಷಿ ಕಾರ್ಯ ಆರಂಭ ಆಗಿತ್ತು. ಎತ್ತುಗಳನ್ನು ಕಟ್ಟಿ ಉಳುಮೆ ಮಾಡುತ್ತಿದ್ದ ದೃಶ್ಯ, ಜಾರುವ ಮರವೇರಿ ಅಡಿಕೆಗೆ ಔಷಧ ಸಿಂಪಡಿಸುವ ಕೆಲಸ ಮರೆಯಲಾಗದ ಅನುಭವ. ನಾನು ಬಣ್ಣದ ಛತ್ರಿ ಹಿಡಿದು ಕಾಡುಹಣ್ಣು ಕೊಯ್ದು ತಿಂದಿದ್ದಂತೂ ಮರೆಯಲಾರೆ. ಮಳೆಗಾಲದ ಹಲಸಿನ ಹಣ್ಣು ಇನ್ನೂ ರುಚಿ.

| ಅವನಿ ಗಣೇಶ ಭಟ್ಟ 5 ನೇ ತರಗತಿ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಶಿರಸಿ, ಉತ್ತರ ಕನ್ನಡ

ಹುಯ್ಯೋ ಹುಯ್ಯೋ ಮಳೆರಾಯ

ನನ್ನೂರು ಕರಾವಳಿಯ ಒಂದು ಹಳ್ಳಿ. ಮಳೆಗಾಲದ ಪ್ರಾರಂಭದಲ್ಲಿ ಗುಡುಗು ಸಿಡಿಲು ಜೋರಾಗೇ ಇರುತ್ತದೆ. ಆಗ ಮಾತ್ರ ನನಗೆ ತುಂಬಾ ಭಯವಾಗುತ್ತದೆ. ಆದರೂ ಮಳೆಯಲ್ಲಿ ನೆನೆಯುತ್ತಾ ಆಟವಾಡುವುದೆಂದರೆ ಇಷ್ಟ. ಅಮ್ಮ ಮಳೆಯಲ್ಲಿ ಆಟವಾಡಲು ಬಿಡುವುದಿಲ್ಲ. ಒಮ್ಮೊಮ್ಮೆ ಶಾಲೆಯಿಂದ ಬರುವಾಗ ಮಳೆಯಲ್ಲಿ ನೆನೆದು ಶೀತವಾಗಿ ಸಣ್ಣಗೆ ಜ್ವರ ಬಂದು ಶಾಲೆಗೆ ರಜೆ ಹಾಕಿ ಮನೆಯಲ್ಲಿ ಕೂತದ್ದೂ ಇದೆ. ಆಗೆಲ್ಲ ಕಿಟಕಿಯ ಪಕ್ಕ ಕೂತು ಹೊರಗೆ ಮಳೆ ಬರುವ ದೃಶ್ಯವನ್ನು, ಹೆಂಗಸರು ತಲೆಯ ಮೇಲೆ ಗೊರಬು ಹಾಕಿಕೊಂಡು ಭತ್ತದ ನಾಟಿ ಮಾಡುವುದನ್ನು ನೋಡುವುದೇ ಖುಷಿ. ಆದರೂ ಈ ಮಳೆ ದಿನಾ ನಾನು ಶಾಲೆಗೆ ಹೋಗುವ ಮತ್ತು ಬಿಡುವ ಸಮಯಕ್ಕೆ ಸರಿಯಾಗಿ ಬಂದು ನಮ್ಮಂತಹ ಮಕ್ಕಳನ್ನೆಲ್ಲ ಒದ್ದೆ ಮಾಡಿಬಿಡುತ್ತದೆ. ಈ ಮಳೆಗೆ ಮಕ್ಕಳನ್ನು ನೋಡಿದರೆ ಅದೇನು ಹೊಟ್ಟೆಕಿಚ್ಚೋ ಎಂದು ಅಮ್ಮ ಬೈಯ್ಯತ್ತಿರುತ್ತಾಳೆ. ಅದು ಹೊಟ್ಟೆಕಿಚ್ಚು ಅಲ್ಲಮ್ಮ, ಮಳೆಗೆ ಮಕ್ಕಳನ್ನು ಕಂಡರೆ ಪ್ರೀತಿ ಎಂದು ನಾನು ನಕ್ಕುಬಿಡುತ್ತೇನೆ. ನಮ್ಮ ತೋಟದ ತುಂಬಾ ನವಿಲುಗಳದ್ದೇ ಸಾಮ್ರಾಜ್ಯ! ಮೋಡವಾದ ಕೂಡಲೇ ಅವು ಗರಿಬಿಚ್ಚಿ ಕುಣಿಯುತ್ತಾ ಒಮ್ಮೊಮ್ಮೆ ಗರಿಯನ್ನು ಉದುರಿಸುತ್ತವೆ. ಅವುಗಳನ್ನು ಸಂಗ್ರಹಿಸಿ ಕರಕುಶಲ ವಸ್ತುಗಳನ್ನು ಮಾಡುತ್ತೇನೆ.

| ಸಾನ್ವಿ ಶಾಸ್ತ್ರಿ ಗುಂಡ್ಮಿ 5 ನೇ ತರಗತಿ, ಸೇಂಟ್ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಸಾಸ್ತಾನ ಉಡುಪಿ ಜಿಲ್ಲೆ

ಮಳೆಗೆ ಥ್ಯಾಂಕ್ಸ್....

ಮಳೆಗಾಲದಲ್ಲಿ ಶಾಲೆಗೆ ಹೋಗುವುದೆಂದರೆ ಸ್ವಲ್ಪ ಬೇಜಾರಾಗುತ್ತದೆ. ಆದರೆ ಶಾಲೆಗೆ ಹೋಗಲೇ ಬೇಕು ಅಂತ ತಯಾರಾಗಿ ಸ್ನೇಹಿತರೊಂದಿಗೆ ಮಳೆಯಲ್ಲಿ ನೆನೆಯುತ್ತಾ, ಹರಿಯುವ ರಸ್ತೆ ನೀರಿನಲ್ಲಿ ಆಟವಾಡುತ್ತಾ ಹೋಗುತ್ತೇವೆ. ಶಾಲೆಗೆ ಹೋಗುವ ದಾರಿಯಲ್ಲಿ ಒಂದು ನೇರಳೆ ಹಣ್ಣಿನ ಮರವಿದೆ. ಅದರಲ್ಲಿನ ಹಣ್ಣುಗಳನ್ನು ಕಲ್ಲಿನಿಂದ ಉದುರಿಸಿ ಶಾಲೆಗೆ ತೆಗೆದುಕೊಂಡು ಹೋಗಿ, ಇತರರಿಗೆ ಹಂಚಿ ತಿನ್ನುತ್ತಾ ನಮ್ಮ ಸಾಧನೆಯನ್ನು ವಿವರಿಸುತ್ತೇವೆ. ನಮ್ಮ ಶಾಲೆ ಹಿಂದೆ ಒಂದು ಸಣ್ಣ ಕೆರೆ ಇದೆ. ಸ್ನೇಹಿತರೆಲ್ಲ ಸೇರಿ ಕೆರೆ ನೀರಿನಲ್ಲಿ ಆಟ ಆಡುತ್ತೇವೆ. ಇದು ನಮಗೆ ಸಂತೋಷ ನೀಡುತ್ತದೆ. ಹಾಗಾಗಿ ಮಳೆಗೆ ಧನ್ಯವಾದ ಹೇಳುತ್ತೇನೆ.

| ಸಂಗಮೇಶ್ 8ನೇ ತರಗತಿ, ರವೀಂದ್ರ ಹಿರಿಯ ಪ್ರಾಥಮಿಕ ಶಾಲೆ, ಬೀದರ್

ಮಳೆಗೆ ಮೈಯೊಡ್ಡಿದಾಗ

ಮಳೆಗಾಲ ಬಂತೆಂದರೆ ಅದೇನೋ ಖುಷಿ, ಸಡಗರ. ಮಳೆಗೂ ಅಷ್ಟೇ ನಮ್ಮಂತಹ ಮಕ್ಕಳೆಂದರೆ ಅದೇನೋ ಪ್ರೀತಿ. ಈಗ ಮಳೆ ಜೋರಾಗಿ ಬಂದಿರುವುದರಿಂದ ಶಾಲೆಗೆ ರಜೆ ಕೊಟ್ಟಿದ್ದಾರೆ. ಅದಕ್ಕೇ ಏನೋ ಮಳೆಗೆ ಬೇಜಾರು. ಸ್ವಲ್ಪ ಹೊತ್ತು ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತದೆ. ಮಳೆಗಾಲ ಬಂದಾಗ ನನಗೆ ತುಂಬಾ ಖುಷಿ ಕೊಡುವ ವಿಷಯವೆಂದರೆ ನಮ್ಮ ಮನೆಯ ಹತ್ತಿರ ಇರುವ ಕೋಡಿಫಾಲ್ಸ್ ಎಂಬ ಪುಟ್ಟ ಜಲಪಾತ. ಬಂಡೆ ಕಲ್ಲುಗಳ ಮಧ್ಯದಿಂದ ಧುಮುಕುತ್ತಾ ಬರುವ ಅದರ ಆರ್ಭಟ, ಶಬ್ಧ ಎಲ್ಲವೂ ಕಣ್ಣಿಗೆ, ಕಿವಿಗೆ ತುಂಬಾ ಮುದ ನೀಡುತ್ತದೆ. ನಾನು ನನ್ನ ತಂಗಿಯ ಜತೆ ಸೇರಿ ಕಾಗದದ ದೋಣಿಗಳನ್ನು ಬಿಟ್ಟು ಆಟವಾಡುವುದು, ಅಲ್ಲಿ ಝುರಿಗೆ ತಲೆ ಕೊಟ್ಟು ಸ್ನಾನ ಮಾಡುತ್ತಾ ಕುಳಿತುಕೊಂಡರೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ಕೊನೆಯಲ್ಲಿ ಅಮ್ಮನ ಕೈಯಲ್ಲಿ ಕೋಲು ನೋಡಿದಾಗಲೇ ಗೊತ್ತಾಗುವುದು ನಾವು ಬಂದು ಬಹಳ ಹೊತ್ತಾಗಿತ್ತು ಎಂದು. ಹೀಗೆ ಮಳೆಗಾಲ ಬಂತೆಂದರೆ ಹಚ್ಚ ಹಸಿರಿನ ಪರಿಸರದ ಮಧ್ಯೆ ಮಳೆಗೆ ಮೈಯೊಡ್ಡುವುದು ನಿಜಕ್ಕೂ ಸಂತೋಷ ನೀಡುತ್ತದೆ.

| ಎನ್. ಶ್ರೇಯಸ್ ರಾವ್ 6ನೇ ತರಗತಿ, ನಿಟಿಲಾಪುರ, ಕಲ್ಲಡ್ಕ

ನವಿಲ ನರ್ತನ...

ಜೂನ್ ತಿಂಗಳಿನಲ್ಲಿ ಒಂದು ದಿನ ಶಾಲೆಯಿಂದ ಬಂದ ಮೇಲೆ ಗೆಳೆಯರೆಲ್ಲ ಸೇರಿ ಆಟ ಆಡುತ್ತಿದ್ದೆವು. ಆಗಸದಲ್ಲಿ ಮೋಡ ತುಂಬಿತ್ತು. ತುಂತುರು ಮಳೆಯೂ ಬೀಳುತ್ತಿತ್ತು. ಆಗ ನಮ್ಮ ಮನೆಯ ಸಮೀಪದ ಬೆಟ್ಟದಿಂದ ನವಿಲು ಕೂಗುವುದು ಕೇಳುತ್ತಿತ್ತು. ಗೆಳೆಯರೆಲ್ಲ ಸೇರಿ ನವಿಲನ್ನು ನೋಡಲು ಮೆಲ್ಲ ಮೆಲ್ಲನೆ ಹೆಜ್ಜೆ ಇಡುತ್ತ ಹೋದೆವು ನವಿಲು ಗರಿಬಿಚ್ಚಿ ನರ್ತಿಸುತ್ತಿತ್ತು. ಅದನ್ನು ನೋಡಿ ನಮಗೆಲ್ಲ ತುಂಬ ಸಂತೋಷವಾಗಿ ದೊಡ್ಡದಾಗಿ ಮಾತನಾಡಿದೆವು. ನವಿಲು ಭಯದಿಂದ ಬಿಚ್ಚಿದ ಗರಿಯನ್ನು ಮುಚ್ಚಿ ಹಾರಿ ಹೋಯಿತು. ಆ ಸುಂದರ ದೃಶ್ಯ ಇಂದಿಗೂ ನನಗೆ ಆಗಾಗಿ ನೆನಪಾಗಿ ಮನಕ್ಕೆ ತುಂಬಾ ಖುಷಿ ಕೊಡುವುದು.

| ಅನೀಶ ಜಿ. ಭಟ್ಟ 7ನೇ ತರಗತಿ ಚಂದನ ಶಾಲೆ, ಶಿರಸಿ (ಉ.ಕ.)

ಎಲ್ಲರ ದೃಷ್ಟಿ ನಮ್ಮ ಕಡೆ

ಮಳೆಗಾಲ ಬಂತೆಂದರೆ ಬಣ್ಣಬಣ್ಣದ ಛತ್ರಿ, ಬಣ್ಣ ಬಣ್ಣದ ರೇನ್ ಕೋಟ್ ಹಾಕಿಕೊಂಡು ಮಳೆಯಲ್ಲಿ ಓಡಾಡುವ ತವಕ. ಶಾಲೆಯಲ್ಲಿ ಶಿಕ್ಷಕರು ದಾನಿಗಳ ಸಹಕಾರದಿಂದ ಶಾಲೆಯ ಎಲ್ಲ ಮಕ್ಕಳಿಗೂ ಈ ವರ್ಷ ಚಂದದ ರೇನ್ ಕೋಟ್ ಕೊಡಿಸಿದ್ದರು. ಶಾಲೆಯ ಹತ್ತಿರವೇ ನಮ್ಮ ಮನೆ ಇದ್ದರೂ ಹನಿಹನಿ ಮಳೆಗೂ ರೇನ್ ಕೋಟ್ ಹಾಕಿಕೊಂಡು ಹೋಗಲು ನನಗೆ ಇಷ್ಟ ಆಗುತ್ತಿತ್ತು. ಕಳೆದ ವಾರ ನಾವೆಲ್ಲ ವಿದ್ಯಾರ್ಥಿಗಳು ಶಿಕ್ಷಕರ ಜತೆಗೆ ಶಾಲೆಯಿಂದ ಕಾಲ್ನಡಿಗೆ ದೂರದಲ್ಲಿರುವ ಸಸ್ಯಗಳ ನರ್ಸರಿಗೆ ಗಿಡಗಳ ಬಗ್ಗೆ ಮಾಹಿತಿ ತಿಳಿಯಲು ಹೊರಟೆವು. ಮಲೆನಾಡಿನ ಮಳೆ ನಮ್ಮ ಜತೆಗೆ ಹೊರಟಿತ್ತು! ಎಲ್ಲರೂ ಪೆಂಗ್ವಿನ್​ಗಳಂತೆ ರೇನ್​ಕೋಟ್ ಹಾಕಿಕೊಂಡು ಹೋಗುವಾಗ ದಾರಿಯಲ್ಲಿ ಹೋಗುವ ವಾಹನ ಸವಾರರ, ಪಾದಚಾರಿಗಳ ದೃಷ್ಟಿ ನಮ್ಮ ಕಡೆಗೆ ಇತ್ತು. ಎರಡು ಮೂರು ಕಾರಿನ ಚಾಲಕರು ಮತ್ತು ಅವರ ಜೊತೆಗಿದ್ದವರು ಕಾರು ನಿಲ್ಲಿಸಿ ನಮ್ಮ ಜತೆಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಹೋದರು. ನಮ್ಮ ಚಂದದ ರೇನ್ ಕೋಟ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದು, ನಮಗೆ ಬಹಳ ಖುಷಿ ಕೊಟ್ಟಿತು.

| ಪ್ರಾರ್ಥನಾ ಶೆಟ್ಟಿ 5ನೇ ತರಗತಿ, ಸ.ಕಿ.ಪ್ರಾ.ಶಾಲೆ,ಸಣ್ಣಕೆರೆ, ಕೊಪ್ಪ, ಚಿಕ್ಕಮಗಳೂರು ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net