

ಮೂವತ್ತೈದು ವರ್ಷದ ರಾಜು ಮತ್ತು ಮೂವತ್ತು ವರ್ಷದ ವಿದ್ಯಾ ಉತ್ತರ ಭಾರತ ಮೂಲದವರಾಗಿದ್ದು, ಮಹಾನಗರದ ಬೇರೆ-ಬೇರೆ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದರು. ವಿದ್ಯಾಳ ತಂದೆ ರಾಮದೇವ್ ಮತ್ತು ತಾಯಿ ಆಶಾ ಅವರ ಜತೆಗೇ ವಾಸವಾಗಿದ್ದರು. ರಾಜು-ವಿದ್ಯಾರ ಮಗಳು ಮುನ್ನಿಯನ್ನು ದಿನಪೂರ್ತಿ ಅವರೇ ನೋಡಿಕೊಳ್ಳುತ್ತಿದ್ದರು. ಮುನ್ನಿಗೆ ಮೂರೂವರೆ ವರ್ಷ ತುಂಬಿದಾಗ ರಾಜು ಅವಳನ್ನು ಮನೆ ಬಳಿಯ ಪ್ಲೇ ಹೋಂಗೆ ದಾಖಲು ಮಾಡಿದ. ಸುಶೀಲಮ್ಮ ಎಂಬಾಕೆ ತನ್ನ ಮನೆಯ ವಿಶಾಲವಾದ ಕಾಂಪೌಂಡಿನಲ್ಲಿಯೇ ಈ ನರ್ಸರಿ ಶಾಲೆಯನ್ನು ನಡೆಸುತ್ತಿದ್ದಳು. ಎರಡು ಅಂತಸ್ತಿನ ಮನೆಯ ಕೆಳ ಅಂತಸ್ತನ್ನು ಶಾಲೆಯಾಗಿ ಮಾರ್ಪಡಿಸಿದ್ದಳು. ಮೇಲಂತಸ್ತಿನಲ್ಲಿ ಗಂಡ ಕೋದಂಡರಾಮ ಮತ್ತು ಮಗ ಸತೀಶ್ ಜತೆಗೆ ವಾಸಿಸುತ್ತಿದ್ದಳು. ಕೋದಂಡರಾಮ ಬ್ಯಾಂಕ್ ಕೆಲಸದಿಂದ ನಿವೃತ್ತಿ ಹೊಂದಿದ್ದರೆ, ಸತೀಶ್ ಪದವಿಯ ನಂತರ ನೌಕರಿಗಾಗಿ ಹುಡುಕಾಡುತ್ತಿದ್ದ.
ಸುಶೀಲಮ್ಮಳ ಪ್ಲೇಹೋಮ್ಲ್ಲಿ ಮೂರರಿಂದ ಆರು ವರ್ಷ ವಯಸ್ಸಿನ 25 ಬಾಲಕ-ಬಾಲಕಿಯರಿದ್ದರು. ಮಕ್ಕಳನ್ನು ನೋಡಿಕೊಳ್ಳಲು ಇಬ್ಬರು ಆಯಾಗಳಿದ್ದರು. ಬೆಳಗಿನ 9.30ರಿಂದ ಮಧ್ಯಾಹ್ನ 12.30ರವರೆಗೆ
ಪ್ಲೇ ಹೋಂ ನಡೆಸಲಾಗುತ್ತಿತ್ತು. 2016ರ ಫೆಬ್ರವರಿಯ ಒಂದು ಮಧ್ಯಾಹ್ನ ಎಂದಿನಂತೆ ರಾಮದೇವ್ ಶಾಲೆಗೆ ಬಂದು ಮೊಮ್ಮಗಳನ್ನು ಮನೆಗೆ ಕರೆದೊಯ್ದ. ಮುನ್ನಿ ಎಂದಿನಂತೆ ಲವಲವಿಕೆಯಿಲ್ಲದೆ ಇರುವುದನ್ನು ಆತ ಗಮನಿಸಿ ಕಾರಣ ಕೇಳಿದಾಗ ಆಕೆ ಉತ್ತರಿಸಲಿಲ್ಲ. ಮುನ್ನಿ ಮನೆಗೆ ಬಂದ ಕೂಡಲೇ ಆಶಾ ಅವಳನ್ನು ಕೋಣೆಗೆ ಕರೆದುಕೊಂಡು ಹೋಗಿ ಅವಳ ಬಟ್ಟೆ ಬದಲಾಯಿಸಲು ಹೋದಳು. ಆದರೆ ಆ ಬಾಲಕಿ ತನ್ನ ಬಟ್ಟೆಗಳನ್ನು ಬದಲಾಯಿಸಲು ಬಿಡಲಿಲ್ಲ. ಸುಮ್ಮನಾದ ಆಶಾ ಮುಖ ತೊಳೆಸಿ ಊಟ ಮಾಡಿಸಲು ಹೊರಟಾಗ ಮುನ್ನಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಆಶ್ಚರ್ಯಗೊಂಡ ಆಶಾ, ‘ಇದೇನಿದು ಇಂದು ನಿನಗೇನಾಗಿದೆ, ಏಕೆ ಅಳುತ್ತಿರುವೆ?’ ಎಂದು ಪ್ರಶ್ನಿಸಿದಾಗ ಆಕೆ ಸರಿಯಾದ ಉತ್ತರ ಕೊಡಲಿಲ್ಲ. ಊಟವನ್ನೂ ಮಾಡದೆ ಕೋಣೆಗೆ ಹೋಗಿ ಮಲಗಿಬಿಟ್ಟಳು. ಮೊಮ್ಮಗಳ ವಿಚಿತ್ರ ನಡವಳಿಕೆಯಿಂದ ಗಾಬರಿಯಾದ ಆಶಾ ಕೂಡಲೇ ಮಗಳಿಗೆ ಕರೆ ಮಾಡಿದರು. ವಿದ್ಯಾ, ‘ನಾನು ಮನೆಗೆ ಬೇಗನೇ ಬರುತ್ತೇನೆ, ನಂತರ ವಿಚಾರಿಸೋಣ, ಮುನ್ನಿ ಮಲಗಿರಲಿ’ ಎಂದಳು.
ವಿದ್ಯಾ ಅಂದು ಸಂಜೆ ಮನೆಗೆ ಬಂದವಳೇ ಮುನ್ನಿಯನ್ನು ಮಾತನಾಡಿಸಿದಾಗ ಆಕೆ ಅಳತೊಡಗಿದಳು. ‘ನಿನ್ನ ಬಟ್ಟೆ ಬದಲಾಯಿಸುವೆ’ ಎಂದು ಮಗುವನ್ನು ಬಾತ್ರೂಂಗೆ ಕರೆದುಕೊಂಡು ಹೋದಳು. ಆಗ ಆ ಬಾಲಕಿ ಮೂತ್ರ ಮಾಡುವ ಜಾಗದಲ್ಲಿ ತುಂಬ ನೋವಾಗುತ್ತಿದೆ ಎಂದು ಹೇಳಿದಾಗ, ವಿದ್ಯಾ ಪರೀಕ್ಷೆಮಾಡಿದಳು. ಬಾಲಕಿಯ ಮರ್ಮಾಂಗ ಕೆಂಪಾಗಿದ್ದು, ಅಲ್ಲಿ ಗಾಯಗಳಾಗಿದ್ದವು. ವಿದ್ಯಾ ಗಾಬರಿಯಾಗಿ ಏನಾಯಿತು ಎಂದು ಮಗುವನ್ನು ಕೇಳಿದಾಗ, ‘ಸತೀಶ್ ಅಂಕಲ್ ನನಗೆ ಗಾಯವನ್ನು ಮಾಡಿದ’ ಎಂಬ ಉತ್ತರ ಬಂದಿತು. ಸತೀಶ್ ಸುಶೀಲಮ್ಮನ ಮಗ ಎಂದು ವಿದ್ಯಾಗೆ ತಿಳಿದಿತ್ತು. ಅಷ್ಟರಲ್ಲಿ ರಾಜು ಮನೆಗೆ ಬಂದ. ಅವನಿಗೆ ವಿಷಯ ತಿಳಿಸಿದ ವಿದ್ಯಾ ಅವನ ಜತೆಗೆ ಪ್ಲೇಹೋಂಗೆ ಹೋಗಿ ಸುಶೀಲಮ್ಮನನ್ನು ಭೇಟಿ ಮಾಡಿ ಸತೀಶ್ನನ್ನು ಕರೆಸಿದಳು. ‘ನೀನು ಮುನ್ನಿಗೆ ಏನು ಮಾಡಿದೆ?’ ಎಂದು ಕೇಳಿದಾಗ, ಆತ ‘ನಾನು ಮುನ್ನಿಯನ್ನು ನೋಡಿಯೇ ಇಲ್ಲ, ಶಾಲೆ ನಡೆಯುವ ಸಮಯದಲ್ಲಿ ನಾನು ಮನೆಯಲ್ಲಿರಲೇ ಇಲ್ಲ’ ಎಂದ. ಆದರೆ ಅವರ ಜತೆಗಿದ್ದ ಮುನ್ನಿ ‘ಅಂಕಲ್ ನನಗೆ ತೊಂದರೆ ಕೊಟ್ಟರು’ ಎಂದು ಎಲ್ಲರೆದುರೂ ಹೇಳಿದಳು. ಆಗ ಸತೀಶ್ ಹಾರಿಕೆಯ ಉತ್ತರ ಕೊಟ್ಟು ಹೊರಟುಹೋದ. ಸುಶೀಲಮ್ಮ ಸಹಾ ತನ್ನ ಮಗ ಶಾಲೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ ಎನ್ನುತ್ತ ಅವರನ್ನು ಕಳುಹಿಸಿದಳು.
ಆ ರಾತ್ರಿ ಮುನ್ನಿ ತನಗೆ ತುಂಬ ನೋವಾಗುತ್ತಿದೆ ಎಂದು ದೂರಿದಾಗ ಮಾರನೆಯ ಬೆಳಗ್ಗೆಯೇ ರಾಜು ಮತ್ತು ವಿದ್ಯಾ ವೈದ್ಯರಲ್ಲಿಗೆ ಕರೆದುಕೊಂಡು ಹೋದರು. ಮಗುವನ್ನು ಪರೀಕ್ಷೆ ಮಾಡಿದ ಮಹಿಳಾ ವೈದ್ಯರು, ‘ನಿಮ್ಮ ಮಗುವಿನ ಮರ್ವಂಗಕ್ಕೆ ಗಾಯವಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿದಂತೆ ಕಾಣುತ್ತಿದೆ, ಇದು ಪೊಲೀಸ್ ಪ್ರಕರಣವಾದ್ದರಿಂದ ನಾನು ಪೊಲೀಸರಿಗೆ ತಿಳಿಸಲೇ ಬೇಕಾಗುತ್ತದೆ’ ಎಂದು ಹೇಳಿ ಮುನ್ನಿಗೆ ಉಪಚಾರ ಮಾಡಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದರು. ಕೂಡಲೇ ಮಹಿಳಾ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು. ವಿದ್ಯಾಳ ಹೇಳಿಕೆ ಪಡೆದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾನೂನು (ಪೋಕ್ಸೋ) ಅನ್ವಯ ಸತೀಶ್ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಮುನ್ನಿಯನ್ನು ವಿದ್ಯಾ ಹಾಗೂಆಪ್ತ ಸಮಾಲೋಚಕಿಯ ಎದುರು ಮಾತನಾಡಿಸಿದಾಗ ಆ ಬಾಲಕಿ ಹೀಗೆ ಹೇಳಿದಳು: ‘ನಿನ್ನೆ ಎಂದಿನಂತೆ ಶಾಲೆಯಲ್ಲಿ ಆಟವಾಡುತ್ತಿದ್ದಾಗ ನನ್ನನ್ನು ಕರೆದ ಸತೀಶ್ ಅಂಕಲ್ ಚಾಕೊಲೇಟ್ ಕೊಡುತ್ತೇನೆ ಎಂದು ಹೇಳಿ ಮಹಡಿ ಮೇಲಿದ್ದ ಕೋಣೆಗೆ ಕರೆದುಕೊಂಡು ಹೋದ. ಅಲ್ಲಿ ಹಾಸಿಗೆ ಮೇಲೆ ಮಲಗಿಸಿ ನನ್ನನ್ನು ವಿವಸ್ತ್ರಳನ್ನಾಗಿ ಮಾಡಿ ನನ್ನ ಮೈಮುಟ್ಟಿದ. ನಂತರ ತನ್ನ ಮೊಬೈಲ್ ಫೋನಿನಲ್ಲಿ ಕೆಲವು ವಿಡಿಯೋಗಳನ್ನು ನೋಡುತ್ತ ಪ್ಯಾಂಟ್ ಕಳಚಿ ನನ್ನ ಮೇಲೆ ಬಿದ್ದ. ಆಗ ನಾನು ಜೋರಾಗಿ ಅಳಲಾರಂಭಿಸಿದಾಗ ನನ್ನ ಬಾಯಿ ಮುಚ್ಚಿದ. ನಿನಗೆ ತುಂಬ ಚಾಕೊಲೇಟ್ ಕೊಡುವೆ, ಈ ವಿಷಯ ಯಾರಿಗೂ ಹೇಳಬೇಡ’ ಎಂದ. ನಾನು ಯಾರಿಗೂ ಹೇಳಲಿಲ್ಲ. ಆದರೆ ನಂತರ ನನಗೆ ಬಹಳ ನೋವಾದಾಗ ಮಮ್ಮಿಗೆ ಹೇಳಿದೆ.’ ಮುನ್ನಿ ಹೇಳಿಕೆ ದಾಖಲು ಮಾಡಿಕೊಂಡ ಪೊಲೀಸರು ಕೂಡಲೇ ಸುಶೀಲಮ್ಮನ ಮನೆಗೆ ಹೋದರು. ಸತೀಶ್ನನ್ನು ಕರೆಸಿದಾಗ, ಆತ ತಾನು ಏನನ್ನೂ ಮಾಡಿಲ್ಲ ಎಂದ. ಅವನ ಮೊಬೈಲ್ ಫೋನನ್ನು ವಶಪಡಿಸಿಕೊಂಡು ನೋಡಿದಾಗ ಅದರಲ್ಲಿ ಹಲವಾರು ಸೆಕ್ಸ್ ವಿಡಿಯೋ ತುಣುಕುಗಳಿದ್ದವು. ಅವನನ್ನು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಒಪ್ಪಿಕೊಂಡ. ಅವನನ್ನು ಬಂಧಿಸಿ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ಪೊಲೀಸರು ಶಾಲೆಯಲ್ಲಿದ್ದ ಇಬ್ಬರು ಆಯಾಗಳ ಹೇಳಿಕೆ ಪಡೆದಾಗ ಅವರಲ್ಲಿ ಒಬ್ಬಳು ಮುನ್ನಿಯನ್ನು ಸತೀಶ್ ತನ್ನ ಕೊಠಡಿಗೆ ಕರೆದುಕೊಂಡು ಹೋಗಿದ್ದನ್ನು ತಾನು ನೋಡಿದ್ದಾಗಿ ಹೇಳಿದಳು.
ಮ್ಯಾಜಿಸ್ಟ್ರೇಟರ ಎದುರು ನಡೆಸಿದ ಗುರುತಿನ ಕವಾಯಿತಿನಲ್ಲಿ ಮುನ್ನಿ ಆರೋಪಿಯನ್ನು ನಿಖರವಾಗಿ ಗುರುತಿಸಿದಳು. ತನಿಖೆ ಮುಕ್ತಾಯದ ನಂತರ ಸತೀಶ್ ಮೇಲೆ ಅತ್ಯಾಚಾರದ ಆರೋಪವನ್ನೂ, ಸುಶೀಲಮ್ಮಳ ಮೇಲೆ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪವನ್ನೂ ಹೊರಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಲಯದಲ್ಲಿ ಮುನ್ನಿ ಸತೀಶ್ನತ್ತ ಬೊಟ್ಟು ಮಾಡಿ ‘ಈ ಅಂಕಲ್ ನನಗೆ ತೊಂದರೆ ಕೊಟ್ಟಿದ್ದು’ ಎಂದು ಖಡಾಖಂಡಿತವಾಗಿ ಹೇಳಿದ್ದಲ್ಲದೆ ಆತ ಮಾಡಿದ ಕೃತ್ಯವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದಳು. ಆ ಪುಟ್ಟ ಬಾಲಕಿ ನಿಖರವಾಗಿ ಸಾಕ್ಷ್ಯ ನೀಡಿದ್ದು ಎಲ್ಲರನ್ನೂ ಬೆರಗುಗೊಳಿಸಿತು. ಮುನ್ನಿಯ ಸಾಕ್ಷ್ಯದ ಜತೆಗೆ ಇತರ ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇರೆಗೆ ಪೋಕ್ಸೋ ಅಡಿಯಲ್ಲಿ ಸತೀಶ್ಗೆ ಹತ್ತು ವರ್ಷದ ಕಠಿಣ ಕಾರಾಗೃಹವಾಸ ವಿಧಿಸಿದ್ದಲ್ಲದೆ 20 ಸಾವಿರ ರೂ. ದಂಡ ಹಾಕಲಾಯಿತು. ಸುಶೀಲಮ್ಮ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಶಾಲೆ ನಡೆಸುತ್ತಿದ್ದ ಕಾರಣ ಆ ಶಾಲೆಯನ್ನು ಕೂಡಲೇ ಬಂದ್ ಮಾಡಿಸಬೇಕೆಂದು ಆದೇಶಿಸಿದ ನ್ಯಾಯಾಲಯ ಆಕೆ ಸತೀಶ್ನ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟಳೆಂಬುದಕ್ಕೆ ಸಾಕ್ಷ್ಯವಿಲ್ಲದ ಕಾರಣ ಅವಳನ್ನು ಬಿಡುಗಡೆ ಮಾಡಿತು.
ಮಕ್ಕಳನ್ನು ಪ್ಲೇ ಹೋಂಗಳಿಗಾಗಲೀ ಅಥವಾ ಶಾಲೆಗಾಗಲೀ ಸೇರಿಸುವಾಗ ಅದಕ್ಕೆ ಸರ್ಕಾರದ ಅನುಮತಿಯಿದೆಯೇ, ಮಕ್ಕಳ ರಕ್ಷಣೆಗೆ ಬೇಕಾದ ಸಾಧನಗಳನ್ನು ಇಡಲಾಗಿದೆಯೇ ಎನ್ನುವುದನ್ನು ಗಮನಿಸಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಪ್ರವೇಶ ದೊರೆಯಿತು ಎನ್ನುವ ಸಂತಸದಿಂದ ಸಿಕ್ಕ ಸಿಕ್ಕ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು. ಕಾಲಕಾಲಕ್ಕೆ ಶಾಲೆಗೆ ಹೋಗಿ ಮಕ್ಕಳ ಬಗ್ಗೆ ವಿಚಾರಿಸಬೇಕು. ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ ಆ ದಿನ ಶಾಲೆಯಲ್ಲಿ ಏನು ನಡೆಯಿತೆಂದು ಕೂಲಂಕಷವಾಗಿ ವಿಚಾರಿಸಬೇಕು. ಒಂದು ವೇಳೆ ಮಕ್ಕಳು ದಿನನಿತ್ಯದಂತೆ ವರ್ತಿಸದಿದ್ದರೆ ಕೂಡಲೇ ಆ ಬಗ್ಗೆ ಕಾರಣವನ್ನು ಹುಡುಕಬೇಕು. ಬೇರೆಯವರು ಮಕ್ಕಳ ಮೈ ಮುಟ್ಟಿದರೆ ಅಂತಹ ಸ್ಪರ್ಶವು ಎಂತಹದು ಎಂದು ಅರಿಯುವಂತಹ ತಿಳಿವಳಿಕೆ ಕಲಿಸಬೇಕು. ‘ನಾಚಿಕೆಯನಾಗಿಪುವು ನಮ್ಮ ಸುಖದಾತುರದ ಯೋಚನೆಗಳವನು ಮರುವಗಲು ಪರಿಕಿಸಲು ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು ರೇಚನವದಾತ್ಮಕ್ಕೆ ಮಂಕುತಿಮ್ಮ’ ಎಂಬಂತೆ ತನ್ನ ಪೈಚಾಚಿಕ ಕೃತ್ಯದಿಂದ ಇಡೀ ಜೀವನವನ್ನು ಹಾಳುಮಾಡಿಕೊಂಡ ಸತೀಶ್ ಜೈಲಿನ ಕಂಬಿಗಳನ್ನೆಣಿಸುತ್ತಿದ್ದಾನೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)