ಮನೆಯೊಳಗೆ ಕೂರೋಣ, ನಾಶವಾಗಲಿ ಕರೊನಾ!

punch ka joy 31 mar 20
Published on

ಏಪ್ರಿಲ್ ಒಂದು ಮೂರ್ಖರ ದಿನಾಚರಣೆ. ನಮ್ಮನ್ನು ನೋಡಿ ನಾವು ನಗುವ, ಅದಾಗದಿದ್ದರೆ ಇನ್ನೊಬ್ಬರ ಮೂರ್ಖತನವನ್ನು ಕಂಡು ಹಲ್ಲು ಕಿಸಿಯುವ ದಿನ. ಈ ಬಾರಿ ಕರೊನಾ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಿಲ್ಲ. ಮೂರ್ಖರ ದಿನದಂದು ಮನೆಯೊಳಗೇ ಇದ್ದುಕೊಂಡು ಗಂಡ ತನ್ನ ಹೆಂಡತಿಯನ್ನು, ಹೆಂಡತಿ ತನ್ನ ಗಂಡನನ್ನು ನೋಡಿ ನಗಬೇಕಾದ ಅನಿವಾರ್ಯತೆ ಬಂದಿದೆ.

‘ನೀವೇಕೆ ಇನ್ನೂ ಕರೊನಾದ ಕುರಿತು ಲೇಖನ ಬರೆದಿಲ್ಲ? ನಿಮಗೆ ಕರೊನಾದ ಬಗ್ಗೆ ಪ್ಯಾರ್ ಇಲ್ಲವೆ? ಅಥವಾ ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿರುವ ಈ ಮಹಾಮಾರಿಯ ಕುರಿತು ಬರೆಯಲು ಭಯವೆ?’ ಎಂದು ಓದುಗ ಮಿತ್ರರೊಬ್ಬರು ಕೇಳಿದ್ದಾರೆ. ಕರೊನಾದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರುತ್ತಿರುವ ಮಾಹಿತಿಗಳನ್ನು ನೋಡಿದಾಗ, ಸುದ್ದಿಗಳನ್ನು ವೀಕ್ಷಿಸಿದಾಗ ಯಾರಿಗೇ ಆದರೂ ಅಂಜಿಕೆ ಆಗಲೇಬೇಕು. ನಿಜ ಹೇಳಬೇಕೆಂದರೆ ನಾನೂ ಹೆದರಿದ್ದೇನೆ. ಆದರೆ ಪ್ಯಾನಿಕ್ ಆಗಿಲ್ಲ. ಅದರ ಬದಲು ಸಾಧ್ಯವಾದಷ್ಟು ದಿನ ‘ಕರೊನಾ ಪ್ಯಾರ್ ಹೈ’ ಅನ್ನುತ್ತ ನಗುನಗುತ್ತಲೆ ಕರೊನಾ ಸವಾಲನ್ನು ಎದುರಿಸಬೇಕೆಂದು ನಿರ್ಧರಿಸಿದ್ದೇನೆ.

ಇಂದಿರಾ ಗಾಂಧಿ ತುರ್ತಪರಿಸ್ಥಿತಿ ಘೋಷಿಸಿ ತನ್ನ ವಿರೋಧಿಗಳನ್ನು ಜೈಲಿಗೆ ಹಾಕಿದಾಗ ಕವಿ ಚಂಪಾ ಅದನ್ನು ಪ್ರತಿಭಟಿಸಲು ತಮಾಷೆಯಾಗಿ ಕವನಗಳನ್ನು ಬರೆದಿದ್ದರು. ನಂತರ ಅವುಗಳನ್ನೆಲ್ಲ ಸೇರಿಸಿ ‘ತುರ್ತಿನ ಗುರ್ತಗಳು’ ಎಂಬ ಸಂಕಲನವನ್ನೇ ತಂದಿದ್ದರು. ಈಗ ಕರೊನಾ ಜನರನ್ನು ಗೃಹಬಂಧನದಲ್ಲಿ ಇರಿಸಿರುವುದರಿಂದ ಕವಿಗಳು ಅದರ ವಿರುದ್ಧ ಕವನ ಬರೆಯಲು ಇದು ಸಕಾಲ. ನಾನು ಈಗಾಗಲೇ ಕರೊನಾದ ಬಗ್ಗೆ ಒಂದು ಡಜನ್​ಗೂ ಹೆಚ್ಚು ಹನಿಗವನಗಳನ್ನು ಬರೆದಿದ್ದೇನೆ. ಈ ಲಾಕ್​ಡೌನ್ ಶುರುವಾಗುವುದಕ್ಕಿಂತ ಮೊದಲೇ, ಶಿವರಾತ್ರಿಯ ಸಂದರ್ಭದಲ್ಲಿ ನಾನು ಆ ಪರಶಿವನ ಹತ್ತಿರ ಹೀಗೆ ಪ್ರಾರ್ಥಿಸಿದ್ದೆ:

ಈ ಬಾರಿ ನಿನ್ನ ಬಳಿ

ಬೇರೆ ಏನನ್ನೂ

ಬೇಡುವುದಿಲ್ಲ ಓ ಈಶ್ವರ

ಕಾಪಾಡು ನಿನ್ನ

ಭಕ್ತ ಜನರನ್ನು

ಬರದಂತೆ ಕರೊನಾ ಜ್ವರ!

ಶಿವನಿಗೆ ನನ್ನ ಮೊರೆ ಕೇಳಿಸಲಿಲ್ಲ. ಕರೊನಾ ಪೀಡಿತರ ಸಂಖ್ಯೆ ಏರುತ್ತಲೇ ಇದೆ. ನಾನೂ ಅದರ ಬಗ್ಗೆ ಕವನ ಬರೆಯುತ್ತಲೇ ಇದ್ದೇನೆ. ಲಾಕ್​ಡೌನ್ ಮುಗಿಯುವುದರೊಳಗೆ ಕರೊನಾದ ಕುರಿತು ಇನ್ನಷ್ಟು ಹನಿಗವನಗಳನ್ನು ಬರೆದು ‘ಕರೊನಾ ಹನಿಗಳು’ ಎಂಬ ಸಂಕಲನವನ್ನೇ ಪ್ರಕಟಿಸಿದರೆ ಹೇಗೆ? ಊಹೂಂ, ಆ ಶೀರ್ಷಿಕೆ ಬೇಡ. ಪುಸ್ತಕವನ್ನು ಮುಟ್ಟಿದರೆ ಇದರ ಹನಿಗಳ ಮೂಲಕ ಕರೊನಾ ಹರಡಬಹುದೆಂದು ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಬಹುದು. ಮೊದಲೇ ಕವನ ಎಂದರೆ ತಲೆನೋವು ಎಂದು ಹೆದರುವವರು ‘ಕರೊನಾ ಹನಿಗಳು’ ಎಂಬ ಶೀರ್ಷಿಕೆಯನ್ನು ಕಂಡು ಇನ್ನಷ್ಟು ಕಂಗಾಲಾಗಬಹುದು. ಬೇರೆ ಏನಾದರೂ ಯೋಚಿಸೋಣ. ಕರೊನಾ ಜನ್ಮತಾಳಿದ್ದು ಚೀನಾ ದೇಶದಲ್ಲಿ. ಅದರ ಪ್ರಧಾನ ಲಕ್ಷಣ ಕೆಮ್ಮು. ಆದ್ದರಿಂದ ಕರೊನಾ ಕುರಿತ ಕವನ ಸಂಕಲನಕ್ಕೆ ‘ಕೆಮ್​ಬಾವುಟ’ ಎಂಬ ಶೀರ್ಷಿಕೆ ಚೆನ್ನಾಗಿ ಒಪ್ಪುತ್ತದೆ. ಆದರೆ ಒಂದು ಸಮಸ್ಯೆ. ಕೆಂಬಾವುಟ ನಮ್ಮ ಚಿಹ್ನೆ ಎಂದು ಕಮ್ಯುನಿಷ್ಟರು ತಕರಾರು ತೆಗೆಯಬಹುದು.

‘ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ನಿಮ್ ಕತೆ ಹಾಂಗೆ ಆಯ್ತು ಕಾಣಿ’. ಈ ರೀತಿಯಾಗಿ ರೂಮಿನೊಳಗೆ ಕುಳಿತು ಕರೊನಾ ಕುರಿತು ಕವಿತೆ ಬರೆಯುತ್ತಿದ್ದ ಈ ಡುಂಡಿರಾಜನನ್ನು ರೋಮಿನ ಆ ಮೂರ್ಖ ರಾಜನಿಗೆ ಹೋಲಿಸಿ ಟೀಕಿಸಿದ್ದು ಇನ್ನಾರೂ ಅಲ್ಲ. ನಮ್ಮ ಮನೆಯಲ್ಲೇ ಇರುವ ವಿಮರ್ಶಕಿ, ನನ್ನ ಹೆಂಡತಿ ಭಾರತಿ! ರೋಮ್ ನಗರದ ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಚಕ್ರವರ್ತಿ ನೀರೊ, ಮರಳೋ ನೀರೋ ಹಾಕಿ ನಂದಿಸುವ ಬದಲು ತನ್ನ ಪಾಡಿಗೆ ತಾನು ಪಿಟೀಲು ಕುಯ್ಯುತ್ತಾ ಕುಳಿತಿದ್ದರೆ ಅದು ತಪ್ಪು ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಸತ್ಯ ಸಂಗತಿಯೆಂದರೆ ರೋಮ್ ನಗರದಲ್ಲಿ ಮಹಾ ಅಗ್ನಿದುರಂತ ಸಂಭವಿಸಿದಾಗ ಪಿಟೀಲನ್ನು ಇನ್ನೂ ಕಂಡುಹಿಡಿದಿರಲಿಲ್ಲ. ಅದು ಬಳಕೆಗೆ ಬಂದದ್ದು ಆ ಘಟನೆಯಾಗಿ ಸುಮಾರು 1500 ವರ್ಷಗಳ ನಂತರ. ಅಂದಮೇಲೆ ನೀರೊ ಪಿಟೀಲು ನುಡಿಸಿದ್ದು ಸುಳ್ಳು ಎಂದಾಯಿತು. ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ನೀರೊ ಪಿಟೀಲು ನುಡಿಸುತ್ತಿದ್ದ ಅನ್ನುವುದು ಸಂಕಷ್ಟದ ಸಂದರ್ಭದಲ್ಲಿ ಬೇಜವಾಬ್ದಾರಿತನದಿಂದ ವರ್ತಿಸುವುದಕ್ಕೆ ಒಂದು ರೂಪಕವಷ್ಟೆ.

ಏನೇ ಇರಲಿ. ಕರೊನಾದ ಬಗ್ಗೆ ತಮಾಷೆ ಮಾಡುವವರೆಲ್ಲ ಪರಿಸ್ಥಿತಿಯ ಗಂಭೀರತೆಯನ್ನು ಅರಿಯದವರು ಎಂದು ಭಾವಿಸಬಾರದು. ಹಾಸ್ಯ, ವ್ಯಂಗ್ಯ, ವಿಡಂಬನೆಗಳ ಮುಖಾಂತರವೂ ಕರೊನಾದ ಬಗ್ಗೆ ಜನಜಾಗೃತಿ ಮೂಡಿಸಬಹುದು. ಉದಾಹರಣೆಗೆ ನನಗೆ ವಾಟ್ಸಾಪ್​ನಲ್ಲಿ ಬಂದ ಈ ನಾಲ್ಕು ಸಾಲು ಓದಿ.

ಬರೆದದ್ದೆಲ್ಲ/ಕವನವಲ್ಲ/ಕೆಮ್ಮಿದ್ದೆಲ್ಲ/ಕರೊನವಲ್ಲ!

ಇದನ್ನು ರಚಿಸಿದವರು ಹಾಸ್ಯದ ಧಾಟಿಯಲ್ಲಿ ಕವನ ಮತ್ತು ಕರೊನಾ ಎರಡರ ಕುರಿತು ಸತ್ಯ ಸಂಗತಿಯನ್ನು ತುಂಬ ಚುಟುಕಾಗಿ, ಆದರೆ ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಯಾರೋ ಕೆಮ್ಮುತ್ತಿದ್ದಾರೆ ಅಂದಾಕ್ಷಣ ಅದು ಅನಾರೋಗ್ಯದ ಲಕ್ಷಣ ಅಂದುಕೊಳ್ಳಬಾರದು. ಆರೋಗ್ಯವಂತರೂ ಕೆಲವೊಮ್ಮೆ ಬೇರೆ ಬೇರೆ ಕಾರಣಕ್ಕೆ ಕೆಮ್ಮುತ್ತಾರೆ. ಸರ್ಕಾರಿ ಕಚೇರಿಗೆ ಹೋದಾಗ ನಮ್ಮನ್ನು ತಲೆಯೆತ್ತಿ ನೋಡದೆ ಮೊಬೈಲ್ ವೀಕ್ಷಣೆಯಲ್ಲಿ ಮುಳುಗಿರುವ ಉದ್ಯೋಗಿಯ ಗಮನ ಸೆಳೆಯಲು ಕೆಮ್ಮುವುದೂ ಒಂದು ವಿಧಾನ. ಗಂಡ ಅವನ ತಾಯಿಯ ಹತ್ತಿರ ಮಾತನಾಡುತ್ತಿರುವಾಗ ಹೆಂಡತಿ ಕೆಮ್ಮಿದರೆ ಮಾತನಾಡಿದ್ದು ಸಾಕು ಎಂದು ಅರ್ಥ. ವಯಸ್ಸಾಗಿ ಹಾಸಿಗೆ ಹಿಡಿದು ಕೆಮ್ಮುತ್ತಾ ಇರುವ ವೃದ್ಧರು ಮೌನವಾಗಿದ್ದರೆ ಮನೆಯಲ್ಲಿರುವ ಕಿರಿಯರಿಗೆ ಅನುಮಾನವಾಗುತ್ತದೆ. ಹೀಗಾಗಿ ಅವರು ತಾವಿನ್ನೂ ಬದುಕಿದ್ದೇವೆಂದು ತಿಳಿಸಲು ಕೆಮ್ಮು ಇರದಿದ್ದರೂ ಆಗಾಗ ಜೋರಾಗಿ ಕೆಮ್ಮುವುದುಂಟು. ಭಾಷಣಕಾರರು, ಹಾಡುಗಾರರು ಮೈಕಿನ ಮುಂದೆ ನಿಂತಾಗ ಗಂಟಲು ಸರಿಪಡಿಸಿಕೊಳ್ಳಲು ಕೆಮ್ಮುತ್ತಾರೆ. ಆದರೆ ಹಾಳು ಕರೊನಾದಿಂದಾಗಿ ಈಗ ಯಾವ ಕಾರಣಕ್ಕೆ ಕೆಮ್ಮಿದರೂ ಜನರು ಕೆಮ್ಮಿದವರನ್ನು ಅನುಮಾನದಿಂದ ನೋಡುವಂತಾಗಿದೆ. ಆದ್ದರಿಂದ ಸಾರ್ವಜನಿಕವಾಗಿ ಕೆಮ್ಮದಿರುವುದೇ ಕ್ಷೇಮ. ಅಕಸ್ಮಾತ್ ಕೆಮ್ಮು ಬಂದರೆ ಬಾಯಿಗೆ ಕೈ ಅಥವಾ ಕರವಸ್ತŠ ಅಡ್ಡ ಇರಿಸಿಕೊಳ್ಳುವುದು ಒಳ್ಳೆಯದು.

‘ಒಂಟಿ ಸೀನು ಅಪಶಕುನ. ಜಂಟಿ ಸೀನು ಶುಭಶಕುನ. ಪ್ಲೆಂಟಿ ಸೀನು ಅನುಮಾನ. ಇರಬಹುದೆ ಕರೊನಾ?’ ಎಂಬುದು ಇನ್ನೊಂದು ವಾಟ್ಸಾಪ್ ಜೋಕು. ನಿರಂತರವಾಗಿ ಸೀನುವುದು ಕರೊನಾದ ಲಕ್ಷಣಗಳಲ್ಲಿ ಒಂದು ಎಂಬುದನ್ನು ಈ ಜೋಕು ಪರಿಣಾಮಕಾರಿಯಾಗಿ ಹೇಳುತ್ತದಲ್ಲವೆ? ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂಬ ಬಸವಣ್ಣನವರ ಪ್ರಸಿದ್ಧ ವಚನವನ್ನು ಅನುಕರಿಸಿ ರಚಿಸಿದ ‘ಕೆಮ್ಮಬೇಡ, ಸೀನಬೇಡ, ಹತ್ತಿರ ಬರಬೇಡ, ಅನ್ಯರಿಗೆ ಉಗುಳು ಸಿಡಿಸಬೇಡ, ಇದೇ ಕರೊನಾ ವೈರಸ್ ತಡೆಯುವ ಪರಿ’ ಎನ್ನುವ ಚುಟುಕವೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಜನಪ್ರಿಯ ಚಿತ್ರಗೀತೆಗಳ ಧಾಟಿಯಲ್ಲಿ ಹಾಡಿದ ಕರೊನಾ ಕುರಿತ ಕೆಲವು ಅಣಕವಾಡುಗಳು ವೈರಲ್ ಆಗಿವೆ. ಕರೊನಾ ಬಗ್ಗೆ ಬರುತ್ತಿರುವ ಕವನ, ಜೋಕು, ವ್ಯಂಗ್ಯಚಿತ್ರಗಳ ಉದ್ದೇಶ ಕೇವಲ ರಂಜನೆಗೆ ಸೀಮಿತವಾಗದೆ ಜನಜಾಗೃತಿ ಮೂಡಿಸುವಂತಿದ್ದರೆ ಅವುಗಳು ಸ್ವಾಗತಾರ್ಹ. ಏಕೆಂದರೆ ಅವು ಜನರು ಧೃತಿಗೆಡದೆ, ಖಿನ್ನತೆಗೆ ಜಾರದೆ ಕರೊನಾದಂಥ ಕಠಿಣ ಸನ್ನಿವೇಶವನ್ನು ಎದುರಿಸಲು ನೆರವಾಗುತ್ತವೆ. ಸಂತೋಷದ ಸಂಗತಿಯೆಂದರೆ ನನ್ನ ಹಾಗೆ ಅನೇಕರು ಕರೊನಾ ಕುರಿತು ಕವನ ಬರೆಯುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ‘ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂಬಂತೆ

ಕಂಪಿಸಿತು ಭೂಮಿ ಒಂದು ಸೆಕೆಂಡು

ಕರೊನಾ ಕವಿಗಳ ದಂಡು ಕಂಡು

ಎನ್ನಬೇಕಾದೀತು.

ಕರೊನಾದ ಬಗ್ಗೆ ಜಾಗೃತಿ ಮೂಡಿಸುವುದು, ಅದು ಹರಡದಂತೆ ತಡೆಯುವ ವಿಧಾನಗಳನ್ನು ಜನರಿಗೆ ತಿಳಿಸುವುದು ಅತ್ಯಗತ್ಯ. ಕೆಲವು ದಿನಗಳ ಹಿಂದೆ ಸರ್ಕಾರ ರಿಂಗ್​ಟೋನ್ ಮೂಲಕ ಈ ಕೆಲಸ ಮಾಡಿತ್ತು. ಅದರಿಂದಾಗಿ ನೀವು ಯಾರಿಗಾದರೂ ಫೋನ್ ಮಾಡಿದರೆ ಮೊದಲು ಕೇಳಿಸುತ್ತಿದ್ದದ್ದು ಕರ್ಕಶ ಕೆಮ್ಮಿನ ಶಬ್ದ. ಆರಂಭದಲ್ಲಿ ನಾನು ಕರೆ ಸ್ವೀಕರಿಸಿದ ನನ್ನ ಪ್ರೀತಿಪಾತ್ರರೇ ಕೆಮ್ಮುತ್ತಿದ್ದಾರೆಂದು ಭಾವಿಸಿ ಗಾಬರಿಯಾಗಿದ್ದೆ. ಆಮೇಲೆ ಆ ಕೆಮ್ಮು ಅವರದ್ದಲ್ಲ ಸರ್ಕಾರದ್ದು ಎಂದು ಗೊತ್ತಾಯಿತು. ಕೊನೆಕೊನೆಗೆ ಈ ಕಡ್ಡಾಯ ಕೆಮ್ಮನ್ನು ಕೇಳಿ ಕೇಳಿ ರೋಸಿ ಹೋದ ಕೆಲವರು ನನ್ನ ‘ಕವಿತಾ ಪಢನೆ ದೋ ಹಮ್ಕೊ ಆಮೇಲ್ ಬೇಕಾರ್ ಕೆಮ್ಕೊ’ ಎಂಬ ಚುಟುಕನ್ನು ನೆನೆದು ಅದೇ ರೀತಿಯಲ್ಲಿ ‘ಫೋನ್ ಕರನೆ ದೊ ಹಮ್ಕೊ ಆಮೇಲ್ ಬೇಕಾದ್ರೆ ಕೆಮ್ಕೊ’ ಎಂದು ತಮಾಷೆ ಮಾಡಿದ್ದರು.

ಏಪ್ರಿಲ್ ಒಂದು ಮೂರ್ಖರ ದಿನಾಚರಣೆ. ನಮ್ಮನ್ನು ನೋಡಿ ನಾವು ನಗುವ, ಅದಾಗದಿದ್ದರೆ ಇನ್ನೊಬ್ಬರ ಮೂರ್ಖತನವನ್ನು ಕಂಡು ಹಲ್ಲು ಕಿಸಿಯುವ ದಿನ. ಇಷ್ಟು ವರ್ಷ ನಗರದ ಅನೇಕ ಕಡೆಗಳಲ್ಲಿ ನಗೆಹಬ್ಬವನ್ನು ಏರ್ಪಡಿಸುವ ಮೂಲಕ ಮೂರ್ಖರ ದಿನ ಭರ್ಜರಿಯಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಕರೊನಾ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಿಲ್ಲ. ಮೂರ್ಖರ ದಿನದಂದು ಮನೆಯೊಳಗೇ ಇದ್ದುಕೊಂಡು ಗಂಡ ತನ್ನ ಹೆಂಡತಿಯನ್ನು, ಹೆಂಡತಿ ತನ್ನ ಗಂಡನನ್ನು ನೋಡಿ ನಗಬೇಕಾದ ಅನಿವಾರ್ಯತೆ ಬಂದಿದೆ. ಹಾಗೆ ನೋಡಿದರೆ ಜನರ ಮೂರ್ಖತನವನ್ನು ನೋಡಿ ನಗಲು ಏಪ್ರಿಲ್ ಒಂದಕ್ಕೆ ಕಾಯಬೇಕಾಗಿಲ್ಲ. ಕೆಲವರು ಅದನ್ನು ಆಗಾಗ ಪ್ರದರ್ಶಿಸುತ್ತಲೇ ಇರುತ್ತಾರೆ. ಮಾರ್ಚ್ 22ರಂದು ಬೆಳಗ್ಗೆ ಏಳರಿಂದ ರಾತ್ರಿ ಒಂಬತ್ತರವರೆಗೆ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿಯವರು ದೇಶದ ಜನರಿಗೆ ಕರೆ ನೀಡಿದ್ದರು. ಅಂದು ಸಂಜೆ ಐದು ಗಂಟೆಗೆ ಮನೆಯ ಕಿಟಕಿ ಅಥವಾ ಬಾಲ್ಕನಿಯಲ್ಲಿ ನಿಂತು ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಕರೊನಾ ತಡೆಗಟ್ಟಲು ಶ್ರಮಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸುವಂತೆಯೂ ಅವರು ಸೂಚಿಸಿದ್ದರು. ಆದರೆ ಆದದ್ದೇನು? ಹಲವು ಕಡೆ ನೂರಾರು ಜನರು ಗುಂಪುಗುಂಪಾಗಿ ಜಾಗಟೆ ಬಾರಿಸುತ್ತ, ಶಂಖನಾದ ಮಾಡುತ್ತ ಬೀದಿಗಿಳಿದು ಕುಣಿದಾಡಿದರು. ಸಾಮಾಜಿಕ ಅಂತರವನ್ನು ಕಾದುಕೊಳ್ಳುವ ಕರ್ಫ್ಯೂವಿನ ಮೂಲ ಉದ್ದೇಶವನ್ನೇ ಹಾಳುಮಾಡಿ ತಮ್ಮ ಮೂರ್ಖತನವನ್ನು ಜಗಜ್ಜಾಹೀರು ಮಾಡಿದರು.

ಈಗ ದೇಶಾದ್ಯಂತ ಲಾಕ್​ಡೌನ್ ಘೋಷಿಸಲಾಗಿದೆ. ಅಗತ್ಯ ವಸ್ತು ಹಾಗೂ ಸೇವೆಗಳ ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವವರ ಕಷ್ಟಕ್ಕೂ ಸರ್ಕಾರ ಸ್ಪಂದಿಸುತ್ತದೆ. ಹೀಗಾಗಿ ಎಲ್ಲರೂ ಲಾಕ್​ಡೌನ್ ಮುಗಿಯುವವರೆಗೆ ಮನೆಯೊಳಗೆ ಕುಳಿತು ಕರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಕಾರ ನೀಡುವುದು ಅಷ್ಟೇನೂ ಕಷ್ಟವಲ್ಲ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ. ಇರಾನ್ ಮತ್ತು ಇರಾಕ್ ನಡುವೆ ಯುದ್ಧ ನಡೆಯುತ್ತಿದ್ದಾಗ ವೈಎನ್​ಕೆ ‘ಸುಮ್ನೆ ಇರಾಣ ಅಂದ್ರೆ ಇರಾಕ್ ಬಿಡಂಗಿಲ್ಲ’ ಅಂದಿದ್ದರು. ಈ ಸಂದರ್ಭದಲ್ಲಿ ಅದನ್ನು ತುಸು ಬದಲಾಯಿಸಿ ಹೀಗೆ ಹೇಳೋಣ: ಸುಮ್ನೆ ಮನೆಯೊಳಗೆ ಇರೋಣ, ನಾಶವಾಗಲಿ ಕರೊನ!

ಮುಗಿಸುವ ಮುನ್ನ:

‘ಕರೊನಾ ಸಂಹಾರಕ್ಕೆ/ ಎಲ್ಲಾ ಟೆಕ್ಕಿಗಳೂ ಈಗ/ಮಾಡುತ್ತಿದ್ದಾರಂತೆ ಹೋಮ’

‘ಗೊತ್ತಾಯ್ತು ಬಿಡಿ/ಆ ಹೋಮದ ಹೆಸರು/ವರ್ಕ್ ಫ್ರಾಂ ಹೋಮಾ?’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net