

ಕರೊನಾ ಹಿನ್ನೆಲೆಯಲ್ಲಿ ದ್ವೀತಿಯ ಪರೀಕ್ಷೆಯ ನಿರೀಕ್ಷೆಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರ ಪಾಸ್ ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಹಲವಾರು ಸಮಸ್ಯೆಗಳು ಉದ್ಭವವಾಗಿವೆ. ಅದರಲ್ಲಿ ಪದವಿ ಕೋರ್ಸ್ ಪ್ರವೇಶವೂ ಒಂದು. ಈ ಬಾರಿ ಪದವಿ ಸೀಟುಗಳ ಹಂಚಿಕೆಯನ್ನು ಯಾವ ರೀತಿ ಮಾಡಬೇಕೆಂಬ ತಲೆನೋವು ಆರಂಭವಾಗಿದೆ. ಹೀಗಾಗಿ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಪ್ರತ್ಯೇಕ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದ್ದು, ಹೊಸ ಪದ್ಧತಿಯ ಪ್ರವೇಶ ಪ್ರಕ್ರಿಯೆ ನಡೆಯುವುದು ಖಚಿತವಾಗಿದೆ.
| ದೇವರಾಜ್ ಕನಕಪುರ
ಕರೊನಾ ಎರಡನೇ ಅಲೆಯ ತೀವ್ರತೆಯನ್ನು ಮನಗಂಡು ಕೇಂದ್ರ ಸರ್ಕಾರ ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮ ಬೋಧನೆ ಮಾಡುವ ಶಾಲೆಗಳಿಗೆ 10 ಮತ್ತು 12ನೇ ತರಗತಿಗಳ ಪರೀಕ್ಷೆಯನ್ನು ರದ್ದು ಮಾಡಿದೆ. ರಾಜ್ಯದಲ್ಲೂ ಪರೀಕ್ಷೆ ರದ್ದು ಮಾಡುವಂತೆ ಪಾಲಕರು ಮತ್ತು ವಿದ್ಯಾರ್ಥಿ ಸಮುದಾಯ ಆಗ್ರಹಪಡಿಸಿದ್ದರಿಂದ ರಾಜ್ಯ ಸರ್ಕಾರ ಕೂಡ 2021ನೇ ವರ್ಷದ ದ್ವೀತಿಯ ಪಿಯು ಪರೀಕ್ಷೆಯನ್ನು ರದ್ದು ಮಾಡಿದೆ. ಇದರಿಂದ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಏನು ಮಾಡಬೇಕು? ಎಲ್ಲರೂ ಪಾಸ್ ಆಗಿರುವುದರಿಂದ ಪದವಿ ಪ್ರವೇಶದ ಗತಿ ಏನು? ಕಡಿಮೆ ಅಂಕ ಪಡೆದವರ ಪಾಡೇನು ಎಂಬಿತ್ಯಾದಿ ಹೊಸ ಸಮಸ್ಯೆಗಳು ಉದ್ಭವಿಸಿವೆ. ಸರ್ಕಾರ ಇದನ್ನೆಲ್ಲ ಪರಿಹರಿಸುವ ಕಡೆ ಹೆಜ್ಜೆ ಹಾಕುತ್ತಿದೆ.
ಅಂಕಗಳ ಬದಲು ಗ್ರೇಡಿಂಗ್: ಪ್ರತಿ ವರ್ಷದಂತೆ ಈ ವರ್ಷ ಅಂಕಗಳನ್ನು ನೀಡುವ ಬದಲು ಗ್ರೇಡಿಂಗ್ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಎ ಪ್ಲಸ್ನಿಂದ ಸಿ ವರೆಗೆ ಗ್ರೇಡಿಂಗ್ ನೀಡಲಿದೆ. ಆದರೆ, ಉದ್ಯೋಗಾವಕಾಶ ಮತ್ತು ವೃತ್ತಿಪರ ಕೋರ್ಸ್ಗಳ ಪ್ರವೇಶದ ವೇಳೆಯಲ್ಲಿ ಇದರಿಂದ ಹೆಚ್ಚು ಗೊಂದಲ ಆರಂಭ ವಾಗಲಿದೆ. ಸದ್ಯ ವೃತ್ತಿಪರ ಕೋರ್ಸ್ಗಳ ಪ್ರವೇಶದ ವೇಳೆ ದ್ವೀತಿಯ ಪಿಯು ಅಂಕಗಳನ್ನು ಪರಿಗಣಿಸದೇ ಇರಲು ಸರ್ಕಾರ ನಿರ್ಧರಿಸಿದೆ. ಆದರೆ, ಕೆಲವು ಸರ್ಕಾರಿ ಉದ್ಯೋಗಗಳು ನೇರ ನೇಮಕಾತಿ ಮೂಲಕ ನಡೆಯಲಿದ್ದು, ದ್ವೀತಿಯ ಪಿಯು ಅಂಕಗಳ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ನೀಡುವುದು ಮುಂದೊಂದು ದಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಸಮಸ್ಯೆಯಾಗುವ ಸಾಧ್ಯತೆ ಇದೆ.
ಸಿಇಟಿ ಅಂಕಗಳ ಪರಿಗಣನೆ
ಈ ವರ್ಷ ಗ್ರೇಡಿಂಗ್ ನೀಡುತ್ತಿರುವುದರಿಂದ ನೇರವಾಗಿ ಸಿಇಟಿಯಲ್ಲಿ ತೆಗೆದುಕೊಳ್ಳುವ ಅಂಕ ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ. ವೃತ್ತಿಪರ ಕೋರ್ಸ್ ಪ್ರವೇಶ ಪರೀಕ್ಷೆಗಳಲ್ಲೂ ಇದೇ ಮಾನದಂಡ ಅನುಸರಿಸುವಂತೆ ಮನವಿ ಮಾಡಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.
ಪ್ರತ್ಯೇಕ ಪ್ರವೇಶ ಪರೀಕ್ಷೆ
ಬಹುತೇಕ ಪದವಿ ಕಾಲೇಜುಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ಮಾಡಲು ಆಲೋಚನೆ ನಡೆಸುತ್ತಿವೆ. ಇಷ್ಟು ವರ್ಷ ದ್ವೀತಿಯ ಪಿಯುನಲ್ಲಿ ಹೆಚ್ಚಿನ ಅಂಕ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಕಟ್ ಆಫ್ ಅಂಕ ನಿಗದಿಪಡಿಸುತ್ತಿತ್ತು. ಈ ಬಾರಿ ಹಾಗಾಗಲ್ಲ. 2021ರಲ್ಲಿ ಪ್ರವೇಶ ಪಡೆದಿರುವ 6.25 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗುವುದರಿಂದ ಪದವಿ ಸೀಟುಗಳಿಗೆ ಬೇಡಿಕೆ ಹೆಚ್ಚಲಿದೆ.
ತೃಪ್ತಿ ಇಲ್ಲದಿದ್ದರೆ ಪರೀಕ್ಷೆ ಎದುರಿಸಿ
ರಾಜ್ಯ ಸರ್ಕಾರ ದ್ವೀತಿಯ ಪಿಯು ಫಲಿತಾಂಶವನ್ನು ವಿದ್ಯಾರ್ಥಿಗಳು ಈ ಹಿಂದೆ ತೆಗೆದುಕೊಂಡಿರುವ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಪರೀಕ್ಷೆಗಳ ಅಂಕದ ಮೇಲೆ ನಿರ್ಧಾರ ಮಾಡುತ್ತಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುವ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಬಹುದು. ಈ ವಿದ್ಯಾರ್ಥಿಗಳಿಗೆ ಕರೊನಾ ಹತೋಟಿಗೆ ಬಂದ ಮೇಲೆ ಇಲಾಖೆ ಪರೀಕ್ಷೆಯನ್ನು ಆಯೋಜಿಸುತ್ತದೆ.
ವಿದ್ಯಾರ್ಥಿಗಳೇನು ಮಾಡಬೇಕು?
ಪದವಿ ಶಿಕ್ಷಣಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂಬ ಭ್ರಮೆಯಿಂದ ಹೊರಬರಬೇಕು. ಸರ್ಕಾರ ನಡೆಸಲು ಇಚ್ಛಿಸಿರುವ ಪ್ರವೇಶ ಪರೀಕ್ಷೆಯ ಕುರಿತು ಮಾಹಿತಿ ಪಡೆದು ಸಿದ್ಧತೆಯಲ್ಲಿ ತೊಡಗಬೇಕು. ಯಾವ ಕೋರ್ಸ್ ಯಾವ ಕಾಲೇಜಿನಲ್ಲಿವೆ ಎಂಬುದನ್ನು ಪಟ್ಟಿ ಮಾಡಿಕೊಳ್ಳಬೇಕು. ಈ ವರ್ಷ ಕಟ್ ಆಫ್ ನಿಗದಿಪಡಿಸುವುದು ಕಷ್ಟ ವಾಗಿರುವುದರಿಂದ ಯಾವ ರೀತಿ ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇಲಾಖೆ ಹೊರಡಿಸುವ ಆದೇಶಗಳ ಬಗ್ಗೆ ನಿಗಾ ವಹಿಸಿ, ಪ್ರವೇಶ ಪರೀಕ್ಷೆಗೆ ಸಿದ್ಧತೆಯಲ್ಲಿ ತೊಡಗಬೇಕು.
ಪದವಿ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ನಡೆಯುತ್ತದೆ ಎಂದ ಮಾತ್ರಕ್ಕೆ ವಿದ್ಯಾರ್ಥಿಗಳು ಗಾಬರಿ ಆಗುವ ಅವಶ್ಯಕತೆ ಇಲ್ಲ. ಪ್ರವೇಶ ಪರೀಕ್ಷೆಗಳು ಕಠಿಣವಾಗಿರು ವುದಿಲ್ಲ. ಪದವಿ ಸೀಟುಗಳ ಬೇಡಿಕೆ ಹೆಚ್ಚಿದರೆ ಸೀಟುಗಳ ಸಂಖ್ಯೆ ಹೆಚ್ಚಿಸುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ತೆಗೆದುಕೊಳ್ಳುತ್ತದೆ. ಪರೀಕ್ಷೆ ನಡೆಸುತ್ತಿಲ್ಲ ಎಂಬ ಕಾರಣಕ್ಕೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಸರಿಯಲ್ಲ. ಪಾಲಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು. | ಡಾ. ಎಚ್.ಬಿ. ಚಂದ್ರಶೇಖರ್ ಹಿರಿಯ ಸಹಾಯಕ ನಿರ್ದೇಶಕ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ)
ಉದ್ಯೋಗಾವಕಾಶದ ಜಿಜ್ಞಾಸೆ
ಕರೊನಾದಿಂದ ಪಾಸ್ ಆಗಿರುವ ವಿದ್ಯಾರ್ಥಿಗಳು, ಮುಂದೆ ಸಾಮಾನ್ಯವಾಗಿ ಪರೀಕ್ಷೆ ಬರೆದು ಪಾಸ್ ಅದ ವಿದ್ಯಾರ್ಥಿಗಳ ನಡುವೆ ತಾರತಮ್ಯ ಏರ್ಪಡಬಹುದು. ಏಕೆಂದರೆ, ಕರೊನಾ ಪಾಸ್ನಲ್ಲಿ ಗ್ರೇಡಿಂಗ್ ನೀಡುವುದ ರಿಂದ ಈ ವಿದ್ಯಾರ್ಥಿಗಳು ಮತ್ತು ಮುಂದೆ ಸಾಮಾನ್ಯ ಪರೀಕ್ಷೆಯಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ಯಾರಿಗೆ ಉದ್ಯೋಗ ನೀಡಬೇಕೆಂಬ ಗೊಂದಲ ಆರಂಭವಾಗಬಹುದು.
ವಿದ್ಯಾರ್ಥಿಗಳ ಅಹವಾಲೇನು?
ರಾಜ್ಯ ಸರ್ಕಾರ ದ್ವೀತಿಯ ಪಿಯು ಫಲಿತಾಂಶದ ಬಗ್ಗೆ ತೀಮಾರ್ನ ತೆಗೆದುಕೊಳ್ಳುತ್ತಿದಂತೆಯೇ ರಾಜ್ಯದಲ್ಲಿರುವ ಪದವಿ ಕಾಲೇಜುಗಳ ಒಕ್ಕೂಟ ಮೊದಲ ಸುತ್ತಿನ ಮಾತುಕತೆ ನಡೆಸಿದೆ. ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದು ಕಷ್ಟ. ಈ ವಿಚಾರವನ್ನು ವಿಶ್ವವಿದ್ಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಪ್ರವೇಶ ಪರೀಕ್ಷೆ ನಡೆಸುವುದು ಉತ್ತಮ ಎಂಬ ಸಲಹೆಯನ್ನು ಸಹ ನೀಡಬೇಕೆಂದು ಆಲೋಚಿಸಿವೆ. ಆದರೆ, ಪದವಿ ಪ್ರವೇಶಕ್ಕೆ ಪ್ರತ್ಯೇಕ ಪರೀಕ್ಷೆ ನಡೆಸುವುದು ಸರಿಯಲ್ಲ. ವಿದ್ಯಾರ್ಥಿ ಗಳು ತೆಗೆದುಕೊಳ್ಳುವ ರ್ಯಾಂಕ್ ಆಧಾರದ ಮೇಲೆಯೇ ಸೀಟು ಹಂಚಿಕೆ ಮಾಡಬೇಕು ಎಂದು ವಿದ್ಯಾರ್ಥಿ ಸಮುದಾಯ ಸರ್ಕಾರಕ್ಕೆ ಮನವಿ ಮಾಡಿದೆ.
ಡಿಗ್ರಿ ಪ್ರವೇಶ ಕಷ್ಟ
ಈ ಬಾರಿ ದ್ವೀತಿಯ ಪಿಯುನಲ್ಲಿ ಎಲ್ಲರನ್ನೂ ಪಾಸ್ ಮಾಡುತ್ತಿರುವುದರಿಂದ ಪದವಿ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಲಿದೆ. ಎಲ್ಲರಿಗೂ ಉತ್ತಮ ಕಾಲೇಜುಗಳಲ್ಲಿ ಸೀಟು ದೊರಕಿಸಿಕೊಡುವುದು ಕಷ್ಟವಾಗಲಿದೆ. ಹೀಗಾಗಿ ವೃತ್ತಿಪರ ಕೋರ್ಸ್ನಂತೆ ಪದವಿ ಪ್ರವೇಶಕ್ಕೂ ಪ್ರತ್ಯೇಕ ಪರೀಕ್ಷೆ ನಡೆಸುವ ಆಲೋಚನೆಯನ್ನು ಉನ್ನತ ಶಿಕ್ಷಣ ಇಲಾಖೆ ವ್ಯಕ್ತಪಡಿ ಸಿದೆ. ಹೀಗಾಗಿ ಮೊದಲ ಬಾರಿಗೆ ಪ್ರವೇಶ ಪರೀಕ್ಷೆ ಬರೆದು ಪದವಿ ಸೀಟು ಪಡೆಯುವ ಸನ್ನಿವೇಶ ಎದುರಾಗಲಿದೆ.
ದ್ವೀತಿಯ ಪಿಯುನಲ್ಲಿ ಉತ್ತೀರ್ಣರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕೆಂದರೆ ಹೆಚ್ಚಿನ ಮೂಲಸೌಕರ್ಯದ ಅವಶ್ಯಕತೆ ಇರುತ್ತದೆ. ಪ್ರವೇಶ ಪರೀಕ್ಷೆ ಮಾಡುವ ಬಗ್ಗೆಯೂ ವಿವಿ ಗಮನ ಹರಿಸಬೇಕಿದೆ. | ಜಯಪ್ಪ ಅಧ್ಯಕ್ಷ, ರಾಜ್ಯ ಪದವಿ ಕಾಲೇಜುಗಳ ಪ್ರಾಂಶುಪಾಲರ ಒಕ್ಕೂಟ