

ಪಿಯು ಫಲಿತಾಂಶದ ಆಸುಪಾಸಿನಲ್ಲೇ ಅಂದರೆ ಆಗಸ್ಟ್ ಕೊನೆಯ ವಾರದಿಂದಲೇ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಷ್ಟರಲ್ಲೇ ಬಹುತೇಕ ಕಾಲೇಜುಗಳ ಚೈತನ್ಯ ಉಡುಗಿ ಹೋಗಿದೆ. ಶೇ. 30-40ರಷ್ಟು ಅಡ್ಮಿಶನ್ನೂ ಆಗುತ್ತಿಲ್ಲ. ಕೆಲವು ಕಾಲೇಜುಗಳಲ್ಲಂತೂ ಇನ್ನೂ ಅಕೌಂಟೇ ಓಪನ್ ಆಗಿಲ್ಲ. ಕಾಲೇಜುಗಳು ಬಾಗಿಲು ಎಳೆದುಕೊಳ್ಳುವುದಷ್ಟೇ ಬಾಕಿ ಇದೆ. ಅರೆ! ಹಾಗಾದರೆ ಪಿಯುಸಿ ಪಾಸಾದ ಲಕ್ಷಾಂತರ ಹುಡುಗ ಹುಡುಗಿಯರು ಎಲ್ಲಿ ಹೋದರು? ಎಲ್ಲರಿಗೂ ಒಂದೇ ಪ್ರಶ್ನೆ.
ದೂರದ ಸಂಬಂಧಿಯೊಬ್ಬರ ಮಗನ ಸಮಾಚಾರ ಕೇಳಿ. ಕಳೆದ ತಿಂಗಳು ಪಿಯುಸಿ ಮುಗಿಸಿ, ಮೊನ್ನೆಯಷ್ಟೇ ಸಿಇಟಿ ಬರೆದು, ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮ ರ್ಯಾಂಕ್ ಪಡೆದಿರುವ ಹುಡುಗ ಈಗ ಇನ್ನೇನು ಮಾಡುವುದೆಂಬ ಗೊಂದಲದಲ್ಲಿದ್ದಾನೆ. ಇಷ್ಟಾದ ಮೇಲೂ ಈತನಿಗೆ ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವಲ್ಲ ಎಂಬುದು ಪಾಲಕರ ಕಳವಳ. ಒಮ್ಮೆ ಬಿ.ಎ, ಬಿ.ಎಸ್ಸಿ, ಫಾರ್ಮಸಿ, ಮತ್ತೊಮ್ಮೆ ಇಂಜಿನಿಯರಿಂಗ್ನಲ್ಲಿ ಉತ್ತಮ ಭವಿಷ್ಯವಿದೆ ಅಥವಾ ವೈದ್ಯಕೀಯ ಪ್ರವೇಶಾತಿಗೆ ಪ್ರಯತ್ನ ಪಟ್ಟರೆ ಹೇಗೆ? ಎಂದೆಲ್ಲ ಯೋಚಿಸುತ್ತಿದ್ದಾನೆ ಈ ಹುಡುಗ. ಇದು ಇವನೊಬ್ಬನ ಕಥೆ-ವ್ಯಥೆಯೋ ಅಲ್ಲ; ಬಹುತೇಕರದ್ದು. ಟರ್ನಿಂಗ್ ಪಾಯಿಂಟ್ ಎಂದುಕೊಳ್ಳುವ ಶಿಕ್ಷಣದ ಬಹುಮುಖ್ಯ ಪಾತ್ರವಹಿಸುವ ಪಿಯುಸಿ ವಿದ್ಯಾಭ್ಯಾಸ ಕರೋನಾ ಕಾರಣದಿಂದಾಗಿ ತನ್ನ ಸ್ಥಿರತೆಯನ್ನು ಬದಿಗೆ ಸರಿಸಿ ಈ ಬಾರಿ ವಿದ್ಯಾರ್ಥಿಗಳಿಗೆ ಸುಗಮವಾಗಿಬಿಟ್ಟಿತು. ಈಗ ಶಿಕ್ಷಣ ಮುಂದುವರಿಸುವಲ್ಲಿ ಹತ್ತಾರು ಆಯ್ಕೆಗಳು ಗೋಚರಿಸಿದರೂ ಎಲ್ಲೆಡೆ ಒಂದು ಬಗೆಯ ನೀರಸವಾದ ವಾತಾವರಣ ಸೃಷ್ಟಿಯಾಗಿದೆ. ಏನಾಗಿದೆ ನಮ್ಮ ಒಟ್ಟಾರೆ ವ್ಯವಸ್ಥೆಗೆ? ಈ ವಿಚಿತ್ರ ಪರಿಸ್ಥಿತಿಗೆ ಏನು ಕಾರಣ?
ಈಗ ದೇಶದೆಲ್ಲೆಡೆ ಹೊಸ ಶಿಕ್ಷಣ ನೀತಿಯ ಹವಾ. ನಮ್ಮ ರಾಜ್ಯವಂತೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡಬೇಕು ಎಂಬ ಯೋಜನೆಯಲ್ಲಿ ಮುಂಚೂಣಿಯಲ್ಲಿದೆ. ಇದರಲ್ಲಿ ಆಯ್ಕೆಗಳು, ಅವಕಾಶಗಳು ಹೆಚ್ಚು. ಅರ್ಧಕ್ಕೇ ಶಿಕ್ಷಣ ಬಿಡುವವರಿಗೂ ಇಲ್ಲಿ ಅನೇಕ ಆಯ್ಕೆಗಳು. ನಾಲ್ಕೇ ವರ್ಷಕ್ಕೆ ಪಿಎಚ್ಡಿಗೆ ಅಡ್ಮಿಶನ್ ತೆಗೆದುಕೊಳ್ಳುವುದಕ್ಕೆ ಕೂಡ ಇದರಲ್ಲಿ ಅವಕಾಶ. ವಿದ್ಯಾರ್ಥಿಗಳೆಲ್ಲ ಇಂತಹ ಹೊಸತನವನ್ನು ಮುಕ್ತವಾಗಿ ಸ್ವಾಗತಿಸುತ್ತಾರೆ ಎಂದು ಕನಸು ಕಾಣುತ್ತಿದ್ದ ಶಿಕ್ಷಣ ವಲಯಕ್ಕೆ ಇದು ಒಂದು ಬಗೆಯ ನಿರಾಸೆ. ಹೊಸ ನೀತಿಯ ಧ್ಯೇಯೋದ್ದೇಶಗಳೇನೋ ಒಳ್ಳೆಯವೇ. ಆದರೆ ಅವು ವಿದ್ಯಾರ್ಥಿಗಳನ್ನು, ಪೋಷಕರನ್ನು ಪರಿಣಾಮಕಾರಿಯಾಗಿ ತಲುಪದೇ ಇರುವುದೇ ಈಗಿನ ಪರಿಸ್ಥಿತಿಗೆ ಕಾರಣವೇ? ಕೇವಲ ಶಿಕ್ಷಣ ನೀತಿಯನ್ನು ಬದಲಾಯಿಸುವುದಷ್ಟೇ ಅಲ್ಲದೆ, ತಮ್ಮ ಇಷ್ಟದ ವಿಷಯಗಳನ್ನು ಪ್ರಧಾನವಾಗಿ ಆರಿಸಿಕೊಳ್ಳಬಹುದಾದ ವ್ಯವಸ್ಥೆಯಲ್ಲಿ ಭರವಸೆಯಿಟ್ಟು ಎಂದಿಗಿಂತ ಸೀಟ್ ಸಂಖ್ಯೆ ಹೆಚ್ಚಿಸಿತು ಶಿಕ್ಷಣ ಇಲಾಖೆ. ಮೊದಲಿನ ಸೀಟುಗಳೇ ಭರ್ತಿಯಾಗಿಲ್ಲ, ಇನ್ನು ಹೆಚ್ಚುವರಿ ಸೀಟುಗಳ ಕಥೆ ಏನು?
ಆನರ್ಸ್ ಪದವಿ ಪರಿಕಲ್ಪನೆಯೇ ಗೊಂದಲದ ಗೂಡಾಗಿದೆ, ಅದೊಂದು ದೀರ್ಘ ದಾರಿ. ನಮಗೆ ಸರಿಹೊಂದಲ್ಲ. ಪ್ರೊಫೆಷನಲ್ ಕೋರ್ಸ್ಗಳಿಗೆ ಬೆಲೆ ಹೆಚ್ಚು, ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಪ್ರಯೋಗದ ದಾಳವಾಗುವುದು ಬೇಡ, ಇನ್ನೂ ನಮ್ಮ ಮಗ/ಮಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂದು ಹೇಳಿಲ್ಲ ಇದು ಅನೇಕ ಮಂದಿ ಪೋಷಕರ ಅಳಲು. ಇಂತಹ ಗೊಂದಲಗಳನ್ನು ಪರಿಹರಿಸಿಕೊಂಡು ಸರ್ಕಾರ ಮುಂದಡಿಯಿಡಬೇಕಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತದೆ. ಇನ್ನೊಂದೆಡೆ, ವರ್ಷದಿಂದ ವರ್ಷಕ್ಕೆ ಕಲಾ ವಿಭಾಗವೂ ಸೇರಿ ಪದವಿ ಕೋರ್ಸಗಳಿಗೆ ಬೇಡಿಕೆ ಕುಸಿಯುತ್ತಲೇ ಇದೆ. ಈ ವರ್ಷ ಇಷ್ಟೊಂದು ಮಂದಿ ಪಿಯುಸಿ ತೇರ್ಗಡೆಯಾಗಿಯೂ ಇದು ಮುಂದುವರಿದಿದೆ ಎಂದರೆ ಪ್ರಶ್ನೆಯಲ್ಲೇ ಉತ್ತರವಿದೆಯೇ? ಆದ್ದರಿಂದ ಸದ್ಯದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉಂಟಾಗಿರುವ ಗೊಂದಲಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ, ಶಿಕ್ಷಣ ತಜ್ಞರು ಗಮನಹರಿಸಲೇ ಬೇಕಾದ ಅನಿವಾರ್ಯತೆ ಇದೆ.
ಕರೊನಾ ಕೊಟ್ಟ ಹೊಡೆತದಿಂದ ನಮ್ಮ ಸುತ್ತಲಿನ ಸಮಾಜ ಇನ್ನೂ ಚೇತರಿಸಿಕೊಂಡಿಲ್ಲ. ಬಡವರ, ಕೃಷಿಯನ್ನು ನಂಬಿದವರ, ಸಣ್ಣಪುಟ್ಟ ಕೂಲಿಯಲ್ಲಿ ತೊಡಗಿದವರ ಕೈಗಳಲ್ಲಿ ಇನ್ನೂ ಹಣ ಓಡಾಡುತ್ತಿಲ್ಲ. ಹೀಗಾಗಿ ನೂರಾರು ಯುವಕರು ತಮ್ಮ ಶಿಕ್ಷಣ ಮುಂದುವರಿಸುವ ಕನಸೇ ಕಾಣುತ್ತಿಲ್ಲ ಎನಿಸುತ್ತದೆ. ಕರೊನಾ ತಂದಿತ್ತ ಅನಿಶ್ಚಿತ ಬದುಕಿನ ಆತಂಕದಿಂದ ಜನರಿನ್ನೂ ಸುಧಾರಿಸಿಕೊಂಡಿಲ್ಲ. ಮುಂದೆ ಹೇಗೋ ಏನೋ? ಮುಂದೆ ಏನಾದರೂ ಸಾಧ್ಯವಾದರೆ ಡಿಗ್ರಿ ಇತ್ಯಾದಿ ಓದೋಣ, ಸದ್ಯಕ್ಕೊಂದು ಕೆಲಸ ಸಿಕ್ಕರೆ ಸಾಕು ಎಂದು ಪಿಯುಸಿ ಮುಗಿದ ಹುಡುಗರೆಲ್ಲ ಸಣ್ಣಪುಟ್ಟ ಉದ್ಯೋಗ ಹಿಡಿಯುವತ್ತ ಪ್ರಯತ್ನಿಸುತ್ತಿದ್ದಾರೆಯೇ? ಪದವಿ ತರಗತಿ ಪ್ರವೇಶದ ಹಿನ್ನಡೆಗೆ ಅದೂ ಒಂದು ಸಾಧ್ಯತೆ ಎನಿಸುತ್ತದೆ.
ಸಮಾಜದಲ್ಲಿ ಕರೊನಾ ತಂದೊಡ್ಡಿರುವ ಅವಾಂತರಗಳು ಅಷ್ಟಿಷ್ಟಲ್ಲ. ಎಲ್ಲ ಕ್ಷೇತ್ರದ ಪ್ರಗತಿಯ ವೇಗಕ್ಕೆ ಕರೊನಾ ತಡೆ ಹಾಕಿದ್ದಂತೂ ಅಕ್ಷರಶಃ ಸತ್ಯ. ಶಿಕ್ಷಣಕ್ಷೇತ್ರದ ಕತೆಯಂತೂ ಕೇಳುವುದೇ ಬೇಡ. ಶಿಕ್ಷಣ ಮುಂದುವರಿಸಬೇಕು, ಉದ್ಯೋಗ ಜಗತ್ತಿಗೆ ಕಾಲಿಡಬೇಕು ಎಂದು ಕನಸು ಕಾಣು ತ್ತಿದ್ದ ಯುವಜನತೆ ಸಾಕಷ್ಟು ನಿರಾಸೆಗೆ ಒಳಗಾಗಿದ್ದಾರೆ.
ಭವಿಷ್ಯದ ಸ್ವಪ್ನವನ್ನು ಕಾಣುತ್ತಿದ್ದ ವಿದ್ಯಾರ್ಥಿಗಳು ಯಾವ ಮೊಬೈಲನ್ನು ತೊರೆದು ಓದಬೇಕಿತ್ತೋ ಕರೊನಾದ ಪ್ರಭಾವದಿಂದ ಆನ್ಲೈನ್ ತರಗತಿಗಳಿಗಾಗಿ ಹಗಲು-ರಾತ್ರಿ ಎನ್ನದೆ ಮೊಬೈಲ್ ಎಂಬ ಮಾಯಾಜಾಲದ ಬೆನ್ಹತ್ತುವಂತಾಯಿತು. ಆಫ್ ಲೈನ್ ತರಗತಿಗಳ ಪರ್ಯಾಯವಾಗಿ ಆನ್ಲೈನ್ ತರಗತಿಗಳು ಶುರುವಾದರೂ ವಿದ್ಯಾರ್ಥಿಗಳ ಕಲಿಕೆ ಸಹಜವಾಗಿ ಸಾಗಲಿಲ್ಲ. ಎರಡು ಮೂರು ವರ್ಷಗಳಲ್ಲಿ ಮುಗಿಯಬೇಕಿದ್ದ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ಗಳು ಕರೊನಾದಿಂದಾಗಿ ವಿಳಂಬವಾಗಿರುವುದು ಕೂಡ ವಿದ್ಯಾರ್ಥಿಗಳ ಭವಿಷ್ಯದ ಕುರಿತಾಗಿ ದೊಡ್ಡ ಪರಿಣಾಮ ಬೀರಿದೆ. ಈ ಕಾರಣಕ್ಕಾಗಿಯೇ ಆರ್ಥಿಕವಾಗಿ ಹಿಂದುಳಿದ ಬಡತನ ಕುಟುಂಬದ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. ಲಾಕ್ಡೌನ್ನಿಂದ ಆನ್ಲೈನ್ ತರಗತಿಗಳು ಶುರುವಾಗಿ ಅಲ್ಪವಾದರೂ ಪಠ್ಯದ ಕಲಿಕೆಗೆ ಅವಕಾಶ ಮಾಡಿತ್ತಾದರೂ ಪ್ರಾಯೋಗಿಕವಾಗಿ ಕಲಿಯಲೇಬೇಕಿದ್ದ ಅದೆಷ್ಟೋ ಅಂಶಗಳನ್ನು ವಿದ್ಯಾರ್ಥಿಗಳು ಕಲಿಯಲೇ ಇಲ್ಲ! ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಅತ್ಯಂತ ಮುಖ್ಯವಾಗುತ್ತವೆ. ಪ್ರಾಯೋಗಿಕ ತರಗತಿಗಳು ನಡೆಯದೇ ಇರುವುದು ಸಹ ವಿದ್ಯಾರ್ಥಿಗಳ ಭವಿಷ್ಯದ ಏಳಿಗೆಯನ್ನು ಕುಂಠಿತಗೊಳಿಸಬಹುದು. ಕರೊನಾದಿಂದಾಗಿ ಎಲ್ಲಾ ಉದ್ಯಮದಲ್ಲೂ ಅನೇಕ ಸವಾಲುಗಳು ಎದುರಾಗಿವೆ.
ಈ ಮಹಾಮಾರಿಯನ್ನು ದಿಟ್ಟವಾಗಿ ಎದುರಿಸುವಲ್ಲಿ ಅನೇಕ ಉದ್ಯಮಗಳು ತಿಣುಕಾಡಿವೆ. ಇದೇ ಕಾರಣಕ್ಕಾಗಿಯೇ ಸಾಮಾನ್ಯ ನೇಮಕಾತಿಗಳು ಹೆಚ್ಚಿನದಾಗಿ ಆಗದಿರುವುದು ಅಥವಾ ಅದು ಸರಿಯಾಗಿ ಗಮನಕ್ಕೆ ಬಾರದಿರುವುದು ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಪ್ರಗತಿಗೆ ತ್ರಾಸವನ್ನು ಉಂಟುಮಾಡುತ್ತಿವೆ, ನೇಮಕಾತಿ ಆಗದೇ ಇದ್ದರೆ ಮುಂದೇನು? ಎನ್ನುವ ಪ್ರಶ್ನೆ ಯುವಸಮೂಹವನ್ನು ಚಿಂತೆಗೀಡುಮಾಡಿದೆ. ರಾಜ್ಯ ಸರ್ಕಾರ ಕರೊನಾ ಕಾರಣಕ್ಕೆ ಅನಿವಾರ್ಯವಾಗಿ ಅನ್ಯ ಮಾರ್ಗವಿಲ್ಲದೆ ಎಲ್ಲರನ್ನೂ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡಿತು. ಈಗ ಅನೇಕ ಸಂಘ, ಸಂಸ್ಥೆ, ಉದ್ಯಮಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಪ್ರಮೋಟ್ ಆದವರು ಎನ್ನುವ ಕಾರಣಕ್ಕೆ ನೇಮಕಾತಿ ಮಾಡಿಕೊಳ್ಳದೆ ಇರುವ ಸಾಧ್ಯತೆಯೂ ಸಹ ಹೆಚ್ಚಿದೆ. ಒಟ್ಟಾರೆ ಈ ಕರೊನಾ ಎಂಬ ಮಹಾಮಾರಿಯಿಂದಾಗಿ ನಾವು ಶಿಕ್ಷಣ ಮುಗಿಸಿ, ಒಳ್ಳೆಯ ಉದ್ಯೋಗ ಮಾಡಬೇಕು ಎನ್ನುವ ಆಶಾದಾಯಕ ಕನಸೊಂದಿದ್ದ ಯುವಸಮೂಹ ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುವ ಅನಿವಾರ್ಯವಿದೆ.
ಸಮಾಜದ ಪ್ರತೀ ಕ್ಷೇತ್ರಕ್ಕೆ ಹೊಡೆತ ನೀಡಿರುವಂತೆಯೇ ಶಿಕ್ಷಣರಂಗ ವನ್ನೂ ಕರೊನಾ ಅಲ್ಲಾಡಿಸಿಬಿಟ್ಟಿದೆ. ಈ ನಡುವೆ ಛಲಬಿಡದೆ ವಿದ್ಯಾರ್ಥಿಗಳು ಓದಲೇಬೇಕೆಂಬ ಹಂಬಲ ಹೊಂದಿರುವವರು ಹಲವರು. ಎಲ್ಲದರ ನಡುವೆ ಹೊಸ ಪರಿಕಲ್ಪನೆ ಗಳನ್ನು ಹೊತ್ತ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಯಾಗುತ್ತಿದೆ. ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ವಿವಿಧ ಕೋರ್ಸಗಳ ಗೊಂಚಲು ವಿದ್ಯಾರ್ಥಿಗಳ ಮುಂದಿದೆ. ಯಾವುದಾದರೊಂದು ಕೋರ್ಸ ಸೇರಿ ಬದುಕು ಕಟ್ಟಿಕೊಳ್ಳುವ ಕನಸು ಈಗಷ್ಟೇ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳದ್ದು. ಒಬ್ಬೊಬ್ಬರದು ಒಂದೊಂದು ಆಯ್ಕೆ, ಒಂದೊಂದು ನಿರೀಕ್ಷೆ.
ನಾನು ಬಿಕಾಂ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಪದವಿ ವ್ಯಾಸಂಗ ಮುಗಿಸಿದ ಕೂಡಲೇ ಖಾಸಗೀ ಕಂಪನಿಗಳಲ್ಲಿ ಅಕೌಂಟೆಂಟ್ ಇತ್ಯಾದಿ ಉದ್ಯೋಗಗಳಿಗೆ ಸೇರಿಕೊಳ್ಳಬಹುದು. ಉತ್ತಮ ವೇತನವೂ ಇರುತ್ತದೆ. ಹೀಗಾಗಿ ಬೇರೆ ಕೋರ್ಸಗಳಿಗಿಂತ ಇದೇ ನನ್ನನ್ನು ಹೆಚ್ಚು ಸೆಳೆಯಿತು ಎನ್ನುತ್ತಾರೆ ತುಮಕೂರಿನ ಕುಮಾರ್.
ನಾನು ಈಗಷ್ಟೇ ಪದವಿಗೆ ಸೇರಿಕೊಂಡಿದ್ದೇನೆ. ಈಗಿನ ಹೊಸ ವ್ಯವಸ್ಥೆಯ ಮೇಲೆ ತುಂಬ ನಿರೀಕ್ಷೆ ಹಾಗೂ ಭರವಸೆ ಇಟ್ಟುಕೊಂಡಿದ್ದೇನೆ. ಪಿಯು ನನಗೆ ಕಲಿಸ ದಿದ್ದನ್ನು ಪದವಿ ಕಲಿಸಿಕೊಡಲಿದೆ ಎಂಬ ಆಸೆಯಿದೆ. ಇಲ್ಲಿ ವೃತ್ತಿಪರ ಶಿಕ್ಷಣವೂ ಸಿಕ್ಕಿ ಉತ್ತಮ ಉದ್ಯೋಗ ಸಿಗುತ್ತದೆ ಎಂದು ಭಾವಿಸಿದ್ದೇನೆ ಎನ್ನುತ್ತಾರೆ ಅಖಿಲೇಶ್.
ಕರೊನಾದಿಂದಾಗಿ ‘ಜೀವನ ಏನು?’ ಎಂಬುದನ್ನು ತಿಳಿದುಕೊಂಡೆ. ಬದುಕು ಕಟ್ಟಿಕೊಳ್ಳಲು ತಾಂತ್ರಿಕ ಶಿಕ್ಷಣ ಅತ್ಯವಶ್ಯಕ. ಪದವಿ ಶಿಕ್ಷಣದಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇನೆ. ರಾಷ್ಟಿ›ೕಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಲಿದೆ ಎಂಬ ಭರವಸೆಯಿದೆ ಎನ್ನುತ್ತಾರೆ ಬಿಬಿನ್.
ಹೊಸ ಶಿಕ್ಷಣ ನೀತಿಯಲ್ಲಿ ನಾನು ಕೇವಲ ವೃತ್ತಿ ಶಿಕ್ಷಣವನ್ನಷ್ಟೇ ನಿರೀಕ್ಷಿಸಲ್ಲ. ಬದಲಾಗಿ ಜೀವನ ಕೌಶಲಗಳಾದ ಉತ್ತಮ ಸಂವಹನ ಕಲೆ, ಒತ್ತಡ ನಿವಾರಣೆ, ರ್ತಾಕ ಆಲೋಚನೆಯಂತಹ ಕೌಶಲಗಳು ದೊರೆಯುತ್ತವೆ; ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂಬ ಹಂಬಲ ಇದೆ ಎನ್ನುತ್ತಾರೆ ನೆಲಮಂಗಲದ ಮೋಹನ್.
ಪದವಿ ಶಿಕ್ಷಣದಲ್ಲಿ ವೃತ್ತಿಗೆ ಬೇಕಾದ ಅಗತ್ಯ ಶಿಕ್ಷಣದ ಜತೆಗೆ ಜೀವನ ಕೌಶಲ ಪಡೆಯುತ್ತೇವೆ ಎಂಬ ನಿರೀಕ್ಷೆಯಿಂದ ಪಿಯು ಮುಗಿಸಿ ಪದವಿಗೆ ಅನೇಕ ವಿದ್ಯಾರ್ಥಿಗಳು ಸೇರಿದ್ದಾರೆ. ಹೊಸ ಶಿಕ್ಷಣ ನೀತಿ, ನಮ್ಮ ಪದವಿ ಕಾಲೇಜುಗಳು, ಅಲ್ಲಿನ ವ್ಯವಸ್ಥೆಗಳು, ಅಧ್ಯಾಪಕರು ಅವರ ಕನಸುಗಳನ್ನು ಎಷ್ಟರಮಟ್ಟಿಗೆ ನನಸು ಮಾಡುತ್ತಾರೆ ಎಂಬುದರ ಮೇಲೆ ಶಿಕ್ಷಣದ ಭವಿಷ್ಯ ನಿಂತಿದೆ.