

ಇದಾದ ಕೆಲವೇ ನಿಮಿಷಗಳಲ್ಲಿ ಆನಂದ್ನ ಮೊಬೈಲ್ಗೆ ವಾಟ್ಸಪ್ ಸಂದೇಶವೊಂದು ಬಂದಿತು. ಅದರಲ್ಲಿನ ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿದಾಗ ಹೆಸರನ್ನು ನೋಂದಾಯಿಸಿಕೊಳ್ಳಲು ಏನು ಮಾಡಬೇಕೆಂಬ ಸೂಚನೆಗಳಿದ್ದವು. ಖುಷಿಗೊಂಡ ಆನಂದ್ ತನ್ನ ಪತ್ನಿ ರುಕ್ಮಿಣಿಗೆ ಹೇಳಿದ. ಸಂತಸಗೊಂಡ ಆಕೆ, ‘ನಮ್ಮ ಜಾಹ್ನವಿ ಪ್ರತಿಭಾವಂತೆ. 11 ವರ್ಷ ವಯಸ್ಸಿಗೇ ಆಕೆ ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಅದೃಷ್ಟವಿದ್ದರೆ ಆಕೆ ರಾಷ್ಟ್ರ ಮಟ್ಟದಲ್ಲಿಯೂ ಚಾಂಪಿಯನ್ ಆಗಬಹುದು. ಹೇಗಿದ್ದರೂ ಅವಳಿಗೂ ತಾನು ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂದು ತುಂಬಾ ಆಸೆಯಿದೆ. ಹೆಸರನ್ನು ನೋಂದಾಯಿಸಿ’ ಎಂದಳು.
ಆನ್ಲೈನಿನಲ್ಲಿಯೇ ಅರ್ಜಿ ತುಂಬಿ ಅದನ್ನು ಅಪ್ಲೋಡ್ ಮಾಡುವ ಮೊದಲು ನೋಂದಣಿ ಶುಲ್ಕವಾದ 25,000 ರೂ.ಗಳನ್ನು ನಿಗದಿತ ಬ್ಯಾಂಕ್ ಅಕೌಂಟಿಗೆ ತುಂಬಿ ಅದರ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕೆಂಬ ಸೂಚನೆ ಬಂದಿತು. ತುಂಬಾ ದುಬಾರಿ ಶುಲ್ಕವಲ್ಲವೇ? ಎಂದು ರುಕ್ಮಿಣಿ ಹಿಂದೇಟು ಹಾಕಿದಾಗ, ‘ಇರುವ ಒಬ್ಬಳೇ ಮಗಳಿಗೆ ಪೋ›ತ್ಸಾಹ ನೀಡಬೇಕಾದ್ದು ನಮ್ಮ ಕರ್ತವ್ಯ. ಒಂದು ವೇಳೆ ಅವಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಗೆದ್ದರೂ ಇದರ ನಾಲ್ಕರಷ್ಟು ಹಣ ಬಹುಮಾನವಾಗಿ ಬರುತ್ತದೆ’ ಎಂದ ಆನಂದ್, ಹಣವನ್ನು ಟ್ರಾನ್ಸ್ಫರ್ ಮಾಡಿದ.
ಮುಂದಿನ ವಾರ ಸದರಿ ಕಂಪನಿಯಿಂದ ನಿಕಿತಾ ಎನ್ನುವವಳು ಆನಂದ್ನಿಗೆ ಕರೆಮಾಡಿ, ‘ನಿಮ್ಮ ಮಗಳ ಅರ್ಜಿ ನೋಂದಾಯಿತವಾಗಿದೆ. ನೀವು ಅವಳಿಂದ ಸಿನಿಮಾ ಗೀತೆಯೊಂದಕ್ಕೆ ಡಾನ್ಸ್ಮಾಡಿಸಿ ಅದರ ವಿಡಿಯೋವನ್ನು ಐದು ದಿನಗಳ ಒಳಗೆ ನಮಗೆ ಕಳುಹಿಸಿ’ ಎಂದು ಹೇಳಿ ಲಿಂಕ್ ಕಳುಹಿಸಿದಳು. ಖುಷಿಯಾದ ದಂಪತಿ ಮಗಳನ್ನು ಸೂಕ್ತವಾಗಿ ತಯಾರು ಮಾಡಿ ಜನಪ್ರಿಯವಾದ ಸಿನಿಮಾ ಹಾಡೊಂದಕ್ಕೆ ನೃತ್ಯ ಮಾಡಿಸಿ ತಮ್ಮ ಮೊಬೈಲ್ ಫೋನಿನಲ್ಲಿಯೇ ವಿಡಿಯೋ ಮಾಡಿದರು. ಅದನ್ನು ಅಪ್ಲೋಡ್ ಮಾಡಿದರು. ಮಾರನೆಯ ದಿನ ಅದೇ ನಿಕಿತಾ ಫೋನ್ ಮಾಡಿ, ‘ನಿಮ್ಮ ಮಗಳು ತುಂಬಾ ಚೆನ್ನಾಗಿ ಡಾನ್ಸ್ ಮಾಡಿದ್ದಾಳೆ. ಆಕೆಯನ್ನು ರಾಜ್ಯ ಮಟ್ಟದ ಸ್ಪರ್ಧೆಯ ಮೊದಲ ಸುತ್ತಿಗೆ ಆಯ್ಕೆ ಮಾಡಿದ್ದೇವೆ, ಅಭಿನಂದನೆಗಳು. ಇನ್ನೊಂದು ವಾರದ ನಂತರ ಮತ್ತೆ ಫೋನ್ ಮಾಡುತ್ತೇವೆ. ಈ ಸ್ಪರ್ಧೆ ಸುಮಾರು ಒಂದು ತಿಂಗಳ ಅವಧಿಗೆ ನಡೆಯುತ್ತದೆ. ಅಲ್ಲಿಯವರೆಗೆ ನಿಮ್ಮ ಮಗಳು ಶಾಲೆಗೆ ಹೋಗಲಾಗುವುದಿಲ್ಲ. ನಿಮಗೆ ಒಪ್ಪಿಗೆಯಾದರೆ ಮಾತ್ರ ಮುಂದುವರಿಯಿರಿ’ ಎಂದಳು. ಆನಂದ್-ರುಕ್ಮಿಣಿ ಈ ಷರತ್ತಿಗೂ ಸಮ್ಮತಿಸಿದರು.
ಎರಡೇ ದಿನಗಳಲ್ಲಿ ಮತ್ತೆ ಆನಂದ್ನನ್ನು ಸಂರ್ಪಸಿದ ನಿಕಿತಾ, ‘ನಮ್ಮ ಸ್ಪರ್ಧೆಗಳು ಮುಂದಿನ ತಿಂಗಳ ಎರಡನೆಯ ವಾರದಲ್ಲಿ ಬೆಂಗಳೂರಿನ ಸ್ಟೂಡಿಯೋವೊಂದರಲ್ಲಿ ಆರಂಭವಾಗಲಿದೆ. ಅದಕ್ಕೂ ಮುಂಚೆ ನಿಮ್ಮ ಮಗಳನ್ನು ರಿಹರ್ಸಲ್ಗಳಿಗೆ ಕರೆದುಕೊಂಡು ಬರಬೇಕಾಗುತ್ತದೆ. ನಮ್ಮ ಡಾನ್ಸ್ ಮಾಸ್ಟರ್ ತರಬೇತಿ ಕೊಡುತ್ತಾರೆ, ಅವಳಿಗಾಗಿ ನಾವು ಹೊಸ ಬಟ್ಟೆಗಳನ್ನು ಹೊಲಿಸಿ ಆಭರಣಗಳನ್ನು ತೊಡಲು ಕೊಡುತ್ತೇವೆ. ಇದರ ಜತೆಗೆ ನಮಗೆ ಟಿವಿ ಸ್ಟುಡಿಯೋ ಬುಕಿಂಗ್, ಲೈಟಿಂಗ್ ಮುಂತಾದ ಖರ್ಚುಗಳು ಬರುತ್ತದೆ. ಹೀಗಾಗಿ ಕೂಡಲೇ ಮುಂಗಡವಾಗಿ ಎರಡು ಲಕ್ಷ ರೂ.ಗಳನ್ನು ನಮ್ಮ ಅಕೌಂಟಿಗೆ ತುಂಬಿ. ನಂತರ ರಿಹರ್ಸಲ್ಗಳಿಗೆ ಎಲ್ಲಿಗೆ ಕರೆದುಕೊಂಡು ಬರಬೇಕು ಎಂದು ತಿಳಿಸುತ್ತೇವೆ’ ಎಂದಳು.
‘ಇಷ್ಟೊಂದು ದುಬಾರಿ ಹಣ ಕೊಟ್ಟು ಸ್ಪರ್ಧೆಗೆ ಕಳುಹಿಸುವುದು ಬೇಡ, ಮುಂದೆ ಅವಳ ಮದುವೆಯ ಖರ್ಚಿಗಾಗಿ ಹಣವನ್ನು ಕೂಡಿಡಬೇಕು, ಈಗಾಗಲೇ 25000 ರೂ. ಹೋಗಿದೆ, ಅಷ್ಟಕ್ಕೇ ಮುಗಿಸಿಬಿಡೋಣ’ ಎಂದು ರುಕ್ಮಿಣಿ ಎಷ್ಟು ಹೇಳಿದರೂ ಕೇಳದ ಆನಂದ್ ಮಗಳು ಈ ಸ್ಪರ್ಧೆಯಲ್ಲಿ ಜಯಗಳಿಸುವುದು ತನಗೆ ಬಹುಮುಖ್ಯವೆಂದು ಹೇಳಿ ಹಣವನ್ನು ಡಿಪಾಸಿಟ್ ಮಾಡಿದ. ಮಾರನೆಯ ದಿನ ಮತ್ತೊಮ್ಮೆ ಅವನನ್ನು ಸಂರ್ಪಸಿದ ನಿಕಿತಾ, ‘ನಿಮ್ಮದೇ ರಾಜ್ಯದಿಂದ ಸುಮಾರು 100 ಸ್ಪರ್ಧಿಗಳು ಬಂದಿದ್ದಾರೆ. ನಮ್ಮ ಅಭಿಪ್ರಾಯದಲ್ಲಿ ನಿಮ್ಮ ಮಗಳೇ ಮುಂಚೂಣಿಯಲ್ಲಿದ್ದಾಳೆ. ಅವಳು ಬಹುಮಾನಗಳಿಸಬೇಕಾದರೆ ಏನೇನು ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆಸೂಚನೆಗಳನ್ನು ನೀಡುವ ವಿಡಿಯೋ ಗೈಡ್ ಮಾಡಿದ್ದೇವೆ. ಬೇಕಾದಲ್ಲಿ ಅದನ್ನು ಖರೀದಿಸಬಹುದು. ಬಲವಂತವೇನಿಲ್ಲ. ಕೇವಲ 10000 ರೂಗಳನ್ನು ಡಿಪಾಸಿಟ್ ಮಾಡಿದರೆ ಕೊರಿಯರ್ನಲ್ಲಿ ಕಳಿಸುತ್ತೇವೆ’ ಎಂದಳು. ಅದನ್ನೂ ಒಪ್ಪಿದ ಆನಂದ್ ಆ ಹಣವನ್ನೂ ಕಂಪನಿಯ ಅಕೌಂಟಿಗೆ ತುಂಬಿದ. ಎರಡು ದಿನಗಳ ನಂತರ ಅವನಿಗೆ ಕೊರಿಯರ್ನಲ್ಲಿ ಒಂದು ಡಿವಿಡಿ ಬಂದಿತು. ಅದನ್ನು ಪ್ಲೇ ಮಾಡಿದಾಗ ಈ ಹಿಂದೆ ಪ್ರತಿಷ್ಠಿತ ವಾಹಿನಿಗಳಲ್ಲಿ ನಡೆದ ನೃತ್ಯ ಸ್ಪರ್ಧೆಗಳ ಫೈನಲ್ ಎಪಿಸೋಡ್ಗಳ ರೆಕಾರ್ಡಿಂಗ್ ಅದಾಗಿತ್ತು. ಅದನ್ನು ಕಂಡು ಆನಂದನಿಗೆ ಬೇಸರವಾಯಿತು. ಆದರೂ ಆತ ತಲೆಕೆಡಿಸಿಕೊಳ್ಳದೆ ಮಗಳನ್ನು ಸಿನಿಮಾ ನೃತ್ಯ ಕಲಿಸುವ ಶಾಲೆಯೊಂದಕ್ಕೂ ಸೇರಿಸಿ ಹೊಸಹೊಸ ನೃತ್ಯಗಳನ್ನು ಕಲಿಯಲು ಸೂಚಿಸಿದ.
ತಾನು ಟಿವಿ ತಾರೆಯಾಗುತ್ತೇನೆ, ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸುವಂತಾಗುತ್ತೇನೆ ಎಂದು ಜಾಹ್ನವಿ ತನ್ನ ಸಹಪಾಠಿಗಳಿಗೆ ಹೇಳಿ ಅವರಲ್ಲಿ ಅಸೂಯೆ ಮೂಡಿಸಿದ್ದಳು. ರುಕ್ಮಿಣಿಯೂ ಅಕ್ಕಪಕ್ಕದವರೊಡನೆ ಜಾಹ್ನವಿಯ ಪೋ›ಗ್ರಾಂ ಬಗ್ಗೆ ತಿಳಿಸಿದ್ದಳು. ಕೆಲ ದಿನಗಳ ಬಳಿಕ ಪರಿಚಯದವರೆಲ್ಲ ಜಾಹ್ನವಿಯ ಕಾರ್ಯಕ್ರಮ ಯಾವಾಗ ಬರುತ್ತದೆ ಎಂದು ಕೇಳತೊಡಗಿದಾಗ ರುಕ್ಮಿಣಿ ಜೆನಿತ್ ಸಂಸ್ಥೆಯನ್ನು ಸಂರ್ಪಸಲು ಆನಂದ್ನ ಮೇಲೆ ಒತ್ತಡ ಹಾಕತೊಡಗಿದಳು.
ಆನಂದ್ ಆ ಸಂಸ್ಥೆಗೆ ಇಮೇಲ್ ಕಳಿಸಿದ. ಉತ್ತರ ಬರಲಿಲ್ಲ. ಒಂದು ತಿಂಗಳಾದ ನಂತರವೂ ಯಾವುದೇ ಸಂದೇಶವು ಬರದಿದ್ದಾಗ ಆನಂದ್ ಗಾಬರಿಗೊಂಡು ನಿಕಿತಾ ಮತ್ತು ಕುಮಾರ್ ಮೊಬೈಲ್ ಫೋನುಗಳನ್ನು ಸಂರ್ಪಸಲು ಯತ್ನಿಸಿದ. ಅವು ಚಾಲ್ತಿಯಲ್ಲಿಲ್ಲವೆಂಬ ಸಂದೇಶ ಬಂದಿತು. ಮುಂದೇನು ಮಾಡುವುದೆಂದು ಆತ ತನ್ನ ಸ್ನೇಹಿತರನ್ನು ಸಂರ್ಪಸಿದಾಗ, ‘ನಿನಗೆ ಟೋಪಿ ಹಾಕಿರುವ ಹಾಗೆ ಕಾಣುತ್ತದೆ. ಪೊಲೀಸ್ ಠಾಣೆಗೆ ದೂರು ನೀಡು’ ಎಂದರು. ಆತ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಾಗ, ವಂಚನೆ ಪ್ರಕರಣ ದಾಖಲಿಸಲಾಯಿತು.
ಆನಂದನನ್ನು ಸಂರ್ಪಸಿದ್ದ ಜೆನಿತ್ ಸಂಸ್ಥೆ ಹರಿಯಾಣಾ ಮೂಲದ್ದೆಂದು ಪೊಲೀಸರು ಪತ್ತೆ ಮಾಡಿದರು. ಆ ವಿಳಾಸವನ್ನು ಸಂರ್ಪಸಿದಾಗ ಸಂಸ್ಥೆಯನ್ನು ತಿಂಗಳ ಹಿಂದೆಯೇ ಮುಚ್ಚಲಾಗಿದೆಯೆಂದು ತಿಳಿಯಿತು. ಆನಂದ್ ಹಣ ತುಂಬಿದ್ದ ಅಕೌಂಟುಗಳು ರಾಂಚಿಯ ಬ್ಯಾಂಕೊಂದರದ್ದಾಗಿದ್ದವು. ಬ್ಯಾಂಕನ್ನು ಸಂರ್ಪಸಿದಾಗ ಅವೆರಡೂ ಇಬ್ಬರು ಕೂಲಿ ಕಾರ್ವಿುಕರ ಹೆಸರಿನಲ್ಲಿದ್ದು ಅವನ್ನೂ ಮುಚ್ಚಲಾಗಿದೆಯೆಂದು ತಿಳಿಯಿತು. ಅಕೌಂಟುಗಳನ್ನು ತೆಗೆದವರನ್ನು ಪತ್ತೆ ಮಾಡಿದಾಗ, ಅಕೌಂಟ್ ತೆರೆಯಲು ಯಾರೋ ತಮಗೆ ತಲಾ 5000 ರೂಗಳನ್ನು ಕೊಟ್ಟರೆಂದು ತಿಳಿಸಿದ ಅವರು, ಅಕೌಂಟಿಗೆ ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಕೊಟ್ಟೆವೆಂದು ತಿಳಿಸಿದರು. ಎರಡೂ ಅಕೌಂಟುಗಳು ಮುಚ್ಚಲ್ಪಟ್ಟ ಕಾರಣ ಅವಕ್ಕೆ ತುಂಬಿದ ಹಣವನ್ನು ಸೀಜ್ ಮಾಡಲಾಗಲಿಲ್ಲ. ಕಡೆಗೂ ಪ್ರಕರಣ ನಾಪತ್ತೆಯಾಗಿಯೇ ಉಳಿಯಿತು. ಆನಂದ್ನಿಗೆ ಎರಡೂವರೆ ಲಕ್ಷರೂ ಕಳೆದುಕೊಂಡ ನೋವಿಗಿಂತ ಜಾಹ್ನವಿಯ ಮನಸ್ಸಿನ ಮೇಲಾದ ಆಘಾತವನ್ನು ತಿಳಿಗೊಳಿಸುವುದು ದೊಡ್ಡ ಸವಾಲಾಯಿತು.
ಪ್ರತಿ ತಂದೆ ತಾಯಿಗೂ ತಮ್ಮ ಮಕ್ಕಳ ಸಾಧನೆ ಎಲ್ಲರಿಗೂ ತಿಳಿಯಬೇಕು, ಮಕ್ಕಳು ನಾಲ್ಕು ಜನರಿಂದ ಹೊಗಳಿಕೆ ಗಳಿಸಬೇಕು ಎನ್ನುವ ಹಂಬಲ ಇರುತ್ತದೆ. ಈ ಕಾರಣದಿಂದಲೇ ಅವರು ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು, ಮಕ್ಕಳಿಗೆ ಟಿ.ವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವುದು ಮುಂತಾದುವುನ್ನು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಪಹರಣಕಾರರು, ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವವರು ಬಲೆಬೀಸಿ ಕುಳಿತಿರುತ್ತಾರೆ. ಕೆಲವರು ಮೋಸಮಾಡಿದರೆ ಇನ್ನು ಕೆಲವರು ಗುರುತರ ಅಪರಾಧಗಳನ್ನು ಮಾಡುತ್ತಾರೆ. ಹೀಗಾಗಿ ಎಚ್ಚರಿಕೆಯಿಂದಿರಬೇಕು.
ಇಂತಹ ಘಟನೆಗಳಿಂದ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಯೋಚಿಸಬೇಕು. ‘ಮಕ್ಕಳ ಭವಿಷ್ಯಕ್ಕೆ ಕಕ್ಕುಲತೆಗೊಳಬೇಡ, ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ, ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? ದಿಕ್ಕವರಿಗವರವರೆ ಮಂಕುತಿಮ್ಮ’ ಎನ್ನುವ ಮಾತು ನೆನಪಿನಲ್ಲಿರಲಿ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)