ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಿ

Deficit rainfall leads to declining sugarcane acreage
Published on

ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು, ಹಲವಾರು ಕಾರ್ಖಾನೆಗಳಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಕೆಲವೊಂದಿಷ್ಟು ಕಾರ್ಖಾನೆಗಳು ಇನ್ನೂ ಕಬ್ಬಿನ ಬಾಕಿ ಬಿಲ್ ಪಾವತಿಸಿಲ್ಲ. ಬಾಕಿ ಬಿಲ್ ಉಳಿಸಿಕೊಂಡಿರುವ ಕಾರ್ಖಾನೆಗಳ ವಿರುದ್ಧ ರೈತರಿಂದ ಪ್ರತಿಭಟನೆಗಳು ನಡೆಯುತ್ತಿವೆ. ರೈತರೆಲ್ಲರೂ ಒಂದು ಗೂಡಿ ಅಧಿಕಾರಿಗಳಿಂದ ಹಿಡಿದು, ಮುಖ್ಯಮಂತ್ರಿಯವರೆಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದುಬಾರಿ ದುನಿಯಾದಲ್ಲಿ ಕಬ್ಬು ಬೆಳೆಯುವ ರೈತರು ಬದುಕುವುದೇ ಬಹು ದುಸ್ತರವಾಗಿದೆ. ರಸಗೊಬ್ಬರಗಳ ಬೆಲೆ ಗಗನಕ್ಕೇರಿದೆ. ಡೀಸೆಲ್ ಬೆಲೆಯೇರಿಕೆಯಿಂದ ಹೊಲದಲ್ಲಿ ಉಳುಮೆ ಮಾಡುವ ಯಂತ್ರೋಪಕರಣಗಳ ಬಾಡಿಗೆ ದರವೂ ಹೆಚ್ಚಿದೆ. ಹೀಗೆಲ್ಲ ಇರುವಾಗ ಸಾಲಸೋಲ ಮಾಡಿ ಕಬ್ಬು ಬೆಳೆದ ರೈತ ಕಾರ್ಖಾನೆಗಳಿಂದ ಸರಿಯಾದ ಸಮಯಕ್ಕೆ ಬಿಲ್ ಪಾವತಿಯಾಗದೆ ಪರದಾಡುತ್ತಿದ್ದಾನೆ. ರಾಜ್ಯದ ಕೆಲವು ಕಾರ್ಖಾನೆಗಳಂತೂ ನಯಾಪೈಸೆ ದುಡ್ಡು ಕೊಡದೆ ವಂಚಿಸುತ್ತಿವೆ.

ರಾಜ್ಯದ ಹಲವಾರು ಕಾರ್ಖಾನೆಗಳು ಶಾಸಕರು, ಸಚಿವರುಗಳಿಗೆ ಸಂಬಂಧ ಪಟ್ಟಿರುವುದರಿಂದ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ವಾದವೂ ಕೇಳಿ ಬರುತ್ತಿದೆ. ಕಬ್ಬು ಕಳುಹಿಸಿದ 14 ದಿನಗಳಲ್ಲಿ ರೈತರಿಗೆ ಹಣ ಪಾವತಿಸಬೇಕು ಎಂಬ ನಿಯಮವೇನೋ ಇದೆ. ಆದರೆ, ತಿಂಗಳುಗಳೇ ಕಳೆದರೂ ರೈತರಿಗೆ ಹಣ ಸಂದಾಯವಾಗುತ್ತಿಲ್ಲ. ಹಾಗಾಗಿ, 2021-22ನೇ ಸಾಲಿಗೆ ಕಬ್ಬಿನ ಎಫ್​ಆರ್​ಪಿ ದರ ನಿಗದಿ ಮಾಡಲು ರಾಜ್ಯ ಸರ್ಕಾರದ ಕಬ್ಬು ಖರೀದಿ ಸರಬರಾಜು ನಿಯಂತ್ರಣ ಕಾಯ್ದೆ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದ್ದು, ಒಂದು ವೇಳೆ ಬಾಕಿ ಬಿಲ್ ಪಾವತಿಸದಿದ್ದರೆ, ರೈತ ಸಂಘಟನೆಗಳು ಹೋರಾಟ ತೀವ್ರಗೊಳಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸರ್ಕಾರ ಈ ವಿಷಯದಲ್ಲಿ ಮೀನಮೇಷ ಮಾಡದೆ ರೈತರ ಹಿತ ಕಾಪಾಡುವಂತಾಗಲಿ.

| ರಾಕೇಶ ಆಲಬಾಳ ದರೂರ ಅಥಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net