ಕಡಿತಗೊಂಡ ಪಠ್ಯಕ್ರಮಗಳ ಮಾಹಿತಿ ನೀಡಿ

Text Book
Published on

ಈ ಶೈಕ್ಷಣಿಕ ವರ್ಷದ ಬರೋಬ್ಬರಿ 3 ತಿಂಗಳು ಕರೊನಾದ ದಾಳಿಗೆ ನಲುಗಿ, ಮಕ್ಕಳು ಮನೆಯಲ್ಲಿಯೇ ಇರುವಂತಾಗಿದೆ. ಈ ನಡುವೆ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಯತ್ತ ತೊಡಗಿಸಿಕೊಳ್ಳಲು ಅನೇಕ ಮಾರ್ಗೇಪಾಯಗಳನ್ನು ಸರ್ಕಾರಿ ಮತ್ತು ಖಾಸಗಿ ಶಾಲೆಗಳವರು ಕಂಡುಕೊಳ್ಳುತ್ತಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ‘ವಿದ್ಯಾಗಮ’ ಯೋಜನೆಯಡಿಯಲ್ಲಿ ಮಕ್ಕಳನ್ನು ಕಲಿಕಾ ಕೇಂದ್ರಗಳಲ್ಲಿ ಸೇರಿಸಿ ನಿತ್ಯ ಪಾಠ ಹೇಳುತ್ತಿದ್ದರೆ, ಖಾಸಗಿ ಶಾಲೆಯವರು ಆನ್​ಲೈನ್ ತರಗತಿ ನಡೆಸುತ್ತಿದ್ದಾರೆ. ಆದರೆ,ಈ ಶೈಕ್ಷಣಿಕ ವರ್ಷ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲದ ಕಾರಣ, ಶಿಕ್ಷಣ ಇಲಾಖೆ ಪಠ್ಯಕ್ರಮವನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಅದು ಅನಿವಾರ್ಯವೂ ಹೌದು. ಆದರೆ, ಕಡಿತಗೊಂಡ ಪಠ್ಯಕ್ರಮದ ಪಟ್ಟಿ ಶಾಲಾಶಿಕ್ಷಕರಿಗೆ ಇನ್ನೂ ಅಧಿಕೃತವಾಗಿ ತಲುಪಿಲ್ಲ. ಇದರಿಂದಾಗಿ ಆನ್​ಲೈನ್ ಪಾಠ ಮತ್ತು ವಿದ್ಯಾಗಮ ಅವಧಿಯಲ್ಲಿ ಮಾಡಿದ ಪಾಠಗಳು ಕಡಿತಗೊಂಡರೆ, ಸಮಯ ಅಪವ್ಯಯವಾದಂತಾಗುತ್ತದೆ.

ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಂತೂ ಶಾಲೆ ಪುನರಾರಂಭವಾದಾಗ ಉಳಿದ ಪಾಠಗಳನ್ನು ಕಲಿತು, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಕಲಿಕೆಯ ಹಿತದೃಷ್ಟಿಯಿಂದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕಡಿತಗೊಂಡ ಪಠ್ಯಕ್ರಮದ ಮಾಹಿತಿಯನ್ನು ಶೀಘ್ರದಲ್ಲಿಯೇ ಶಾಲಾಶಿಕ್ಷಕರಿಗೆ ನೀಡಬೇಕಿದೆ. ಕಡಿತಗೊಂಡ ಪಠ್ಯಗಳನ್ನು ಹೊರತುಪಡಿಸಿ, ಈ ವರ್ಷ ಇರುವ ಪಾಠಗಳತ್ತ ಮಾತ್ರ ಗಮನ ಹರಿಸಿದರೆ, ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ ಮತ್ತು ಸಮಯದ ಸದುಪಯೋಗವಾಗುತ್ತದೆ ಎಂಬುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಶಯವಾಗಿದೆ.

| ಅನೀಶ್ ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net