

ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹಲವು ಮಹತ್ವದ ಸಂಗತಿಗಳನ್ನು ಸ್ಪಷ್ಟಪಡಿಸಿದ್ದು, ಪೌರತ್ವ ದಾಖಲೆ ಕುರಿತ ನಿಲುವನ್ನು ತೆಗೆದುಕೊಂಡಿದೆ.
ಪೌರತ್ವವನ್ನು ದೃಢೀಕರಿಸಲು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ನಿರ್ಣಾಯಕ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಚುನಾವಣಾ ಆಯೋಗದ ನಿಲುವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ. ಈ ಬಗ್ಗೆ ಸಾಕಷ್ಟು ಅವಧಿಯಿಂದ ದೇಶದಲ್ಲಿ ಚರ್ಚೆ ನಡೆಯುತ್ತಲೇ ಇತ್ತು. ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ (ಎಪಿಕ್) ಮತ್ತು ಪಡಿತರ ಚೀಟಿಗಳನ್ನು ಪೌರತ್ವ ದೃಢೀಕರಿಸಲು ನಿರ್ಣಾಯಕ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಈ ಹಿಂದೆ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಇದನ್ನು ಒಪ್ಪಿಕೊಂಡ ಪೀಠ ‘ಈ ದಾಖಲೆಗಳಿಗೆ ಬೆಂಬಲವಾಗಿ ಇತರ ದಾಖಲೆಗಳನ್ನೂ ನೀಡಬೇಕು’ ಎಂದಿದೆ.
‘ಆಧಾರ್ ಅನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳುವುದು ಸರಿಯಾಗಿಯೇ ಇದೆ. ಆಧಾರ್ ಅನ್ನೂ ಪರಿಶೀಲನೆಗೆ ಒಳಪಡಿಸಬೇಕು. ಆಧಾರ್ ಕಾಯ್ದೆಯ ಸೆಕ್ಷನ್ 9 ನಿರ್ದಿಷ್ಟವಾಗಿ ಅದನ್ನೇ ಹೇಳುತ್ತದೆ’ ಎಂದಿರುವ ಪೀಠ, ಕೆಲ ಮಹತ್ವದ ಸೂಚನೆಗಳನ್ನೂ ನೀಡಿದೆ. ಪೌರತ್ವವನ್ನು ನೀಡುವ ಅಥವಾ ಹಿಂತೆಗೆದುಕೊಳ್ಳುವ ಕಾನೂನನ್ನು ಸಂಸತ್ತು ಅಂಗೀಕರಿಸಬೇಕು.
ಆದರೆ, ಪೌರತ್ವ ಹೊಂದಿರುವವರು ಮತ್ತು ಹೊಂದಿಲ್ಲದಿರುವವರನ್ನು ಮತದಾರರ ಪಟ್ಟಿಗೆ ಸೇರಿಸುವ ಹಾಗೂ ಹೊರಗಿಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಆಧಾರ್ ಕಾರ್ಡ್, ಪಡಿತರ ಚೀಟಿ ಪೌರತ್ವದ ಪುರಾವೆಯಾಗಲು ಸಾಧ್ಯವಿಲ್ಲ ಎಂದಾದರೆ ಬೇರೆ ಯಾವ ನಿಟ್ಟಿನಲ್ಲಿ ಪೌರತ್ವ ದೃಢೀಕರಣಗೊಳಿಸಬಹುದು ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದೆ. ಅಲ್ಲದೆ, ಆಧಾರ್ ಯೋಜನೆಗೆ ಸಾವಿರಾರು ಕೋಟಿ ರೂ. ವ್ಯಯಿಸಿದ್ದು ವ್ಯರ್ಥವಾಯಿತೆ ಎಂಬ ಜಿಜ್ಞಾಸೆಯು ಈ ಸಂದರ್ಭದಲ್ಲಿ ವ್ಯಕ್ತವಾಗುತ್ತಿದೆ. ಈ ಪ್ರಶ್ನೆಗಳಿಗೆ ಶಾಶ್ವತ ಉತ್ತರ ಹುಡುಕುವ ಪ್ರಯತ್ನ ಆಗಬೇಕು. ಪ್ರತೀ ಬಾರಿ ಚುನಾವಣೆ ಬಂದಾಗಲೂ, ನಾಗರಿಕತ್ವ ಪ್ರಶ್ನೆ, ದಾಖಲೆಯ ಪ್ರಶ್ನೆ ಉದ್ಭವಗೊಳ್ಳುವುದು ಸಲ್ಲ.
ನಮ್ಮಲ್ಲಿ ಎಷ್ಟೇ ಒಳ್ಳೆಯ ನಿಯಮಗಳು ಬಂದರೂ, ಅದನ್ನು ಗಾಳಿಗೆ ತೂರಿ ಅಕ್ರಮ ಎಸಗುವ, ಅವ್ಯವಹಾರ ಮಾಡುವ ಸಮಾಜದ್ರೋಹಿ ಶಕ್ತಿಗಳು ಸಕ್ರಿಯವಾಗಿ ಇರುತ್ತವೆ ಎಂಬುದು ಕಹಿವಾಸ್ತವ. ಪಶ್ಚಿಮ ಬಂಗಾಳದಲ್ಲಿ ಮತ್ತು ಈಶಾನ್ಯದ ಕೆಲ ರಾಜ್ಯಗಳಲ್ಲಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಸುಲಭವಾಗಿ ಲಭ್ಯವಾಗಿದ್ದು, 500-1000 ರೂ. ಲಂಚ ನೀಡಿ, ಅವರು ಇಂಥ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಇದೇ ದಾಖಲೆಗಳನ್ನು ಮುಂದಿಟ್ಟುಕೊಂಡು ತಾವು ‘ಭಾರತದ ನಿವಾಸಿಗಳು, ಭಾರತದ ಪ್ರಜೆಗಳು’ ಎಂದು ಬಿಂಬಿಸುತ್ತಿದ್ದಾರೆ.
ಬಿಹಾರದಲ್ಲೂ ನಕಲಿ ಮತದಾರರನ್ನು ಪಟ್ಟಿಯಿಂದ ಹೊರತೆಗೆಯುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇದು ರಾಜಕೀಯ ಸ್ವರೂಪ ಪಡೆದುಕೊಂಡಿರುವುದು ದುರದೃಷ್ಟಕರ. ಈ ಬಗ್ಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಏನೇ ಇದ್ದರೂ, ಬೇರೆ ದೇಶದಿಂದ ಅಕ್ರಮವಾಗಿ ನುಸುಳಿ ಬಂದವರಿಗೆ ಪೌರತ್ವದ ಹಕ್ಕು ಸಿಗಬಾರದು. ಇಲ್ಲದಿದ್ದಲ್ಲಿ ‘ಭಾರತೀಯ ಪೌರತ್ವ’ದ ಘನತೆಗೆ ಚ್ಯುತಿ ಬಂದಂತಾಗುತ್ತದೆ.
ಇದು ತುಂಬ ಸೂಕ್ಷ್ಮ ವಿಷಯ. ಪೌರತ್ವ ದೃಢೀಕರಿಸಲು ಯಾವುದು ದಾಖಲೆಗಳಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟಗೊಳ್ಳುತ್ತಿದೆ. ಆದರೆ, ಪೌರತ್ವ ಸಾಬೀತಿಗೆ ಯಾವ ದಾಖಲೆ ಅರ್ಹ, ಅದನ್ನು ನಾಗರಿಕರು ಪಡೆಯುವುದು ಹೇಗೆ, ಈ ಪ್ರಕ್ರಿಯೆಯಲ್ಲಿ ಮತ್ತೆ ಅಕ್ರಮ ನಡೆಯದಂತೆ ತಡೆಯುವುದು ಹೇಗೆ ಎಂಬ ಬಗ್ಗೆಯೂ ಅರಿವು ತುಂಬುವ ಕೆಲಸ ನಡೆಯಬೇಕಿದೆ. ಪೌರತ್ವದ ಪುರಾವೆ ಗೊಂದಲದ ಗೂಡಾಗದೆ, 140 ಕೋಟಿಗೂ ಅಧಿಕ ಜನಸಂಖ್ಯೆ ಇರುವ ದೇಶಕ್ಕೆ ಸ್ಪಷ್ಟ ನೀತಿ ರೂಪುಗೊಳ್ಳಬೇಕಿದೆ.