ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತೇಜನ

Swachch Bharath
Published on
ಸ್ವಚ್ಛ ಭಾರತ ಅಭಿಯಾನವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಶಸ್ವಿ ಸರ್ಕಾರಿ ಉಪಕ್ರಮಗಳಲ್ಲಿ ಒಂದಾಗಿದೆ. ನಾಗರಿಕರನ್ನು ಈ ಅಭಿಯಾನದ ಅವಿಭಾಜ್ಯ ಭಾಗವನ್ನಾಗಿ ಮಾಡಿದುದು ಈ ಯಶಸ್ಸಿಗೆ ಪ್ರಮುಖ ಕಾರಣ. ಜನರನ್ನು ಪ್ರೇರೇಪಿಸಲು ‘ಮನ್ ಕೀ ಬಾತ್’ ನಂತಹ ವೇದಿಕೆಯನ್ನೂ ಪ್ರಧಾನಿ ಮೋದಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

ಪ್ರಾಚೀನ ಕಾಲದಲ್ಲಿ ಭಾರತವನ್ನು ಅದರ ಸಂಪತ್ತು ಮತ್ತು ಸಮೃದ್ಧಿಯಿಂದಾಗಿ ‘ಚಿನ್ನದ ಹಕ್ಕಿ’ (ಸೋನೆ ಕಿ ಚಿಡಿಯಾ) ಎಂದು ಕರೆಯಲಾಗುತ್ತಿತ್ತು. ಆದರೆ, ಜನರು ಸ್ವಚ್ಛತೆಯನ್ನು ಕಡೆಗಣಿಸಿದ್ದರು. ನಗರವಿರಲಿ, ಹಳ್ಳಿಯಾಗಲಿ ಜನರು ಸ್ವಚ್ಛತೆಯತ್ತ ಗಮನಹರಿಸುತ್ತಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಅಥವಾ ಕೊಳಚೆ ಸಾಮಾನ್ಯ ದೃಶ್ಯವಾಗಿತ್ತು. ಜತೆಗೆ, ಹೆಚ್ಚಿನ ಮನೆಗಳಲ್ಲಿ ಶೌಚಗೃಹ ಇಲ್ಲದ ಕಾರಣ ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದರು. ಮಹಿಳೆಯರು ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯಾಸ್ತದ ನಂತರ ಬಹಿರ್ದೆಸೆಗೆ ಹೋಗಬೇಕಾಗಿದ್ದ ಸವಾಲುಗಳನ್ನು ಎದುರಿಸಬೇಕಾಯಿತು. ಕೆಲವೊಮ್ಮೆ ಕತ್ತಲಲ್ಲಿ ಹೊರಟಾಗ ಹಾವು, ಚೇಳು ಇತ್ಯಾದಿಗಳು ಕಚ್ಚುತ್ತಿದ್ದವು. ಕೆಲವೊಮ್ಮೆ, ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಅಪರಾಧ ಕೃತ್ಯಗಳು ನಡೆಯುತ್ತಿದ್ದವು. ಕೆಲವು ಜನರು ಹಳ್ಳಿಗಳು ಮತ್ತು ನಗರಗಳಲ್ಲಿ ಪಾವತಿ-ಬಳಕೆ ಶೌಚಗೃಹಗಳನ್ನು ಬಳಸುತ್ತಿದ್ದರು. ಆ ಶೌಚಗೃಹಗಳನ್ನು ಸ್ವಚ್ಛಗೊಳಿಸುವವರು ಪ್ರಶಂಸೆಗೆ ಅರ್ಹರು. ಏಕೆಂದರೆ, ಅವರು ಸ್ವಚ್ಛಗೊಳಿಸದಿದ್ದರೆ, ಕಾಲರಾ, ಇತ್ಯಾದಿ ರೋಗಗಳು ಹರಡುತ್ತಿದ್ದವು ಮತ್ತು ಜನರು ಸಾಯುತ್ತಿದ್ದರು. ದುಃಖಕರವಾದ ವಿಷಯವೆಂದರೆ, ಮಲಗುಂಡಿಗಳನ್ನು ಸ್ವಚ್ಛ ಮಾಡುತ್ತಿದ್ದವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು ಮತ್ತು ಅವರು ಅಸ್ಪೃ್ಯತೆಯಂತಹ ಅವಹೇಳನಕಾರಿ ಮಾತುಗಳನ್ನು ಕೇಳಬೇಕಾಗಿತ್ತು.

ದೇಶಾದ್ಯಂತ ಎಲ್ಲೆಡೆ ಕೊಳಕು ಕಾಣಿಸುತ್ತಿದ್ದಾಗ, ಗಾಂಧೀಜಿ 1919ರಲ್ಲಿ ‘ಮೊದಲು ಸ್ವಚ್ಛ ಭಾರತ, ನಂತರ ಸ್ವಾತಂತ್ರ್ಯ’ ಎಂದು ಹೇಳಿದ್ದರು. ಸಾಮಾನ್ಯ ಜನರು ಮತ್ತು ವಿಶೇಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿರುವ ಸ್ವಯಂಸೇವಕರನ್ನು ದಕ್ಷಿಣ ಆಫ್ರಿಕಾದಲ್ಲಿ ತಾವು ಬಳಸಿದ ‘ಟ್ರೆಂಚ್ ಲ್ಯಾಟ್ರಿನ್’ಗಳನ್ನು ಬಳಸುವಂತೆ ಗಾಂಧಿ ಕರೆಕೊಟ್ಟರು. ಮನೆಗಳಲ್ಲಿ ಶೌಚಗೃಹ ನಿರ್ವಣವಾಗುವವರೆಗೆ ಬಯಲು ಶೌಚಕ್ಕೆ ಹೋಗುವ ಜನರು ಮಲಮೂತ್ರವನ್ನು ಮಣ್ಣಿನಿಂದ ಮುಚ್ಚಬೇಕು, ಇದರಿಂದ ಆರೋಗ್ಯಕ್ಕೆ ಅಪಾಯಕಾರಿಯಾದ ನೊಣಗಳು ಅದರ ಮೇಲೆ ಕುಳಿತುಕೊಳ್ಳುವುದಿಲ್ಲ ಎಂದು ಗಾಂಧೀಜಿ ಹೇಳಿದರು. ನೊಣಗಳು ತ್ಯಾಜ್ಯದಿಂದ ಬ್ಯಾಕ್ಟೀರಿಯಾ, ವೈರಾಣುಗಳು ಮತ್ತು ಪರಾವಲಂಬಿಗಳನ್ನು ನಮ್ಮ ಆಹಾರಕ್ಕೆ ಸಾಗಿಸಬಹುದು ಮತ್ತು ರೋಗಗಳನ್ನು ಉಂಟುಮಾಡಬಹುದು. ಕೈಯಿಂದ ಕೆಸರುಗುಂಡಿ ಸ್ವಚ್ಛ ಮಾಡುವ ಪದ್ಧತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಶೌಚಗೃಹಗಳ ವಿನ್ಯಾಸವನ್ನು ಬದಲಿಸಬೇಕು ಎಂದರು. ಅಸ್ಪೃ್ಯತೆ ತೊಡೆದುಹಾಕಬೇಕು ಮತ್ತು ಮಲಗುಂಡಿ ಸ್ವಚ್ಛತೆಯಲ್ಲಿ ತೊಡಗಿರುವ ಜನರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಂಡು ಸಮಾನವಾಗಿ ಕಾಣಬೇಕು ಎಂದು ಹೇಳಿದರು.

2014ರ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನದೊಂದಿಗೆ ಬಯಲುಶೌಚವನ್ನು ಕೊನೆಗೊಳಿಸುವಂತೆ ಕರೆ ನೀಡಿದರು. 2014 ರ ಅಕ್ಟೋಬರ್ 2ರಂದು ಅಧಿಕೃತವಾಗಿ ಪ್ರಾರಂಭವಾದ ಸ್ವಚ್ಛ ಭಾರತ ಅಭಿಯಾನವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಸರ್ಕಾರಿ ಉಪಕ್ರಮಗಳಲ್ಲಿ ಒಂದಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಪ್ರಧಾನಮಂತ್ರಿಯವರು ನಾಗರಿಕರನ್ನು ಈ ಅಭಿಯಾನದ ಅವಿಭಾಜ್ಯ ಮತ್ತು ಪ್ರಮುಖ ಭಾಗವನ್ನಾಗಿ ಮಾಡಿದರು. ಅಭಿಯಾನವನ್ನು ಪ್ರಾರಂಭಿಸಿದ ಒಂದು ದಿನದ ನಂತರ, 2014ರ ಅಕ್ಟೋಬರ್ 3 ರಂದು ‘ಮನ್ ಕೀ ಬಾತ್’ ನ ಮೊದಲ ಸಂಚಿಕೆಯಲ್ಲಿ ಪ್ರಧಾನಮಂತ್ರಿಯವರು ಅದರ ಬಗ್ಗೆ ಬಹಳ ವಿವರವಾಗಿ ಮಾತನಾಡಿದರು. ‘ಮೊದಲು ಶೌಚಗೃಹ ನಂತರ ದೇವಸ್ಥಾನ’ ಎಂದು ಅವರು ಕರೆ ನೀಡಿದರು. ಒಂದು ವರ್ಷದೊಳಗೆ ಭಾರತದ 4.50 ಲಕ್ಷ ಶಾಲೆಗಳಲ್ಲಿ ಶೌಚಗೃಹಗಳನ್ನು ನಿರ್ವಿುಸಬೇಕು, ಇದರಿಂದ ಬಾಲಕಿಯರು ತರಗತಿಗಳನ್ನು ತಪ್ಪಿಸುವುದನ್ನು ಅಥವಾ ಶಾಲೆ ಬಿಡುವುದನ್ನು ತಡೆಯಬಹುದು. ಇದು ಶಾಲೆಗಳಲ್ಲಿ ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು. ಮಲವಿಸರ್ಜನೆಗೆ ತೆರಳುವಾಗ ತಾಯಂದಿರು ಮತ್ತು ಸಹೋದರಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಗಾಂಧೀಜಿಯವರ 150ನೇ ಜಯಂತಿಗೂ ಮೊದಲು ಎಲ್ಲ ಮನೆಗಳಲ್ಲಿ ಶೌಚಗೃಹಗಳನ್ನು ನಿರ್ವಿುಸುವ ಅಭಿಯಾನವನ್ನು ಪ್ರಾರಂಭಿಸಿದರು.ಈವರೆಗೆ ಭಾರತದ ಅಂದಾಜು11 ಕೋಟಿ ಮನೆಗಳಲ್ಲಿ ಶೌಚಗೃಹಗಳನ್ನು ನಿರ್ವಿುಸಲಾಗಿದೆ.

2014ರ ಆಗಸ್ಟ್ 15ರಂದು ಪ್ರಧಾನಿ ಮೋದಿಯವರು ದೆಹಲಿಯ ವಾಲ್ಮೀಕಿ ಕಾಲನಿಯನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ಕೊಳಕು ಕಂಡರೂ ಪೊರಕೆ ಹಿಡಿದು ಸ್ವಚ್ಛಗೊಳಿಸಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು. ವಾರಾಣಸಿಯ ಗಂಗಾನದಿಯ ದಡದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಹೂಳು ಸಂಗ್ರಹವಾಗಿದ್ದ ಅಸ್ಸಿಘಾಟ್ ಸ್ವಚ್ಛಗೊಳಿಸಲು ಅವರು ಗುದ್ದಲಿ ಹಿಡಿದರು. ಅಸ್ಸಿಘಾಟ್ ಈಗ ಸುಧಾರಿಸಿದ್ದು, ಸ್ಥಳೀಯ ಜನರು ಇಲ್ಲಿ ಪೂಜೆ ಪುನಸ್ಕಾರ ಮಾಡುವುದಲ್ಲದೆ, ಭಾರತ ಮತ್ತು ವಿದೇಶಗಳಿಂದ ಪ್ರವಾಸಿಗರು ಅಸ್ಸಿಘಾಟ್​ಗೆ ಆಗಮಿಸುತ್ತಾರೆ.

ಜನರು ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕದಿರುವಂತೆ ಪ್ರಧಾನಿ ಮೋದಿ ಮಾಡಿದ ಪ್ರಯತ್ನವನ್ನು ಶ್ಲಾಘಿಸಬೇಕು. ಈಗ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಕಸ ಹಾಕುವುದನ್ನು ಕಂಡರೆ ಜನರು ಆಕ್ಷೇಪಿಸುತ್ತಾರೆ. ಹಳ್ಳಿಗಳು, ನಗರಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮತ್ತು ರೈಲುಗಳು ಮತ್ತು ಬಸ್​ಗಳಲ್ಲಿ ಪ್ರಯಾಣಿಸುವಾಗಲೂ ಸ್ವಚ್ಛತಾ ಆಂದೋಲನದ ಪ್ರಯೋಜನಗಳ ಬಗ್ಗೆ ರ್ಚಚಿಸುತ್ತಿರುವ ಜನರ ಮನೋಭಾವದಲ್ಲಿ ಭಾರಿ ಬದಲಾವಣೆಯಾಗಿದೆ. ಇಡೀ ದೇಶ ಈಗ ಹೆಚ್ಚು ಸ್ವಚ್ಛವಾಗಿ ಕಾಣುತ್ತಿದೆ ಮತ್ತು ಇದರ ಎಲ್ಲ ಶ್ರೇಯಸ್ಸು ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಪ್ರಧಾನಿಯವರು ಜನರನ್ನು ಪ್ರೇರೇಪಿಸಲು ‘ಮನ್ ಕೀ ಬಾತ್’ ನಂತಹ ಪ್ರಮುಖ ವೇದಿಕೆಗಳಲ್ಲಿ ದೇಶದಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಮೈಲಿಗಲ್ಲು ಮತ್ತು ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿಯವರು ಭಾರತೀಯರಲ್ಲಿ ಸ್ವಚ್ಛತೆಯ ಹಣತೆ ಹಚ್ಚಿದ್ದಾರೆ. ಹರಪ್ಪ ನಾಗರಿಕತೆಯ ಕಾಲದಲ್ಲಿ ಪ್ರಚಲಿತದಲ್ಲಿದ್ದ ಸ್ವಚ್ಛತೆಯ ಸಂಸ್ಕೃತಿಯನ್ನು ಪುನರುಜ್ಜೀವಗೊಳಿಸುವಂತೆ ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮವು 100ನೇ ಸಂಚಿಕೆಯತ್ತ ಸಾಗುತ್ತಿರುವಾಗ, ದೇಶವು ಪ್ರಧಾನಿ ನೇತೃತ್ವದಲ್ಲಿ ಸ್ವಚ್ಛ ಭಾರತ ಅಭಿಯಾನದಂತಹ ಅನೇಕ ಕ್ರಾಂತಿಕಾರಿ ಜನಾಂದೋಲನಗಳಿಗೆ ಸಜ್ಜಾಗುತ್ತಿದೆ. ಭಾರತವನ್ನು ನಮಗಾಗಿ ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಉತ್ತಮ ತಾಣವನ್ನಾಗಿ ಮಾಡಲು ನಾವು ಒಟ್ಟಾಗಿ ಕೈಜೋಡಿಸೋಣ.

(ಲೇಖಕರು ಸುಲಭ್ ಇಂಟರ್​ನ್ಯಾಷನಲ್ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net